ಮನಸ್ಸಿನ ಗೊಂದಲ

ಮನಸ್ಸಿನ ಗೊಂದಲ

ಹಲವು ಮಜಲುಗಳನೊಳಗೊಂಡ ಕೆಲವರ ಬರಹ ಓದುವಾಗ ನಮಗರಿವಿಲ್ಲದಂತೆ ಇದ್ದಕ್ಕಿದ್ದಂತೆ ನಾನೂ ಏನಾದರೂ ಬರೆಯಬೇಕು ಅನ್ನುವ ತುಡಿತ ಗರಿಗೆದರುವುದು.  ಇದು ನನಗೊಬ್ಬಳಿಗೇ ಹೀಗೆ ಅನಿಸುತ್ತಾ?   ಅಥವಾ ಎಲ್ಲರ ಕಥೆ ಹೀಗೆಯೇ ಇರಬಹುದಾ? ಅನ್ನುವ ಜಿಜ್ಞಾಸೆ ನನ್ನಲ್ಲಿ. ಸದಾ ಕಾಡುವ ಪ್ರಶ್ನೆ.  ಆಗೆಲ್ಲ ನನಗೆ ಈ ಬಗ್ಗೆ ಬೇರೆಯವರನ್ನೂ ಕೇಳಬೇಕೆನ್ನುವ ಹಂಬಲ ಹುಟ್ಟಿಕೊಂಡರೂ, ಛೆ! ನನ್ನ ಮಾತು ಕೇಳಿ ನಕ್ಕಾರು.  ಇವಳಿಗೇನು ಸ್ವಂತ ಬುದ್ಧಿ ಇಲ್ವಾ?  ಏನಾದರೂ ಬರಿಬೇಕೆಂದರೆ ಇನ್ನೊಬ್ಬರ ಬರಹ ಓದಿನೇ ಹುಮ್ಮನಸ್ಸು ಹುಟ್ಟಬೇಕಾ?  ಬರಹ ಅನ್ನೋದು ಯಾರಿಂದಲೂ ಹೇಳಿಸಿಕೊಂಡು ಬರುವುದಲ್ಲಾ.  ಸ್ವತಃ ಅವರಲ್ಲಿ  ಹುಟ್ಟಬೇಕು.  ಜನ್ಮ ಜಾತವಾಗಿ ದೇವರು ಕೊಟ್ಟ ವರ ಎಂದು ನಂಬಿರುವ ನನಗೆ ಇದೊಂದು ಬಿಡಿಸಲಾಗದ ಒಗಟು.  
 
ಆದರೂ ವಾಸ್ತವದಲ್ಲಿ ಯೋಚಿಸಿದಾಗ ನಾವು ಬರೆಯುವ ಬರಹಕ್ಕೆ ಬೇರೆಯವರ ಬರಹಗಳೂ ಪ್ರಚೋದನೆ ನೀಡಬಲ್ಲವು ಎನ್ನುವುದು ಸತ್ಯವಾದ ಮಾತು.  ಇದು ಎಷ್ಟೋ ಬಾರಿ ನನ್ನನುಭವಕ್ಕೆ ಬಂದಿದೆ.  ಹಾಗೆ ಈ ಬರಹ ಬರೆಯುವುದರ ಕುರಿತು ಬೇರೆಯವರಿಂದ ಅಥವಾ ಓದುಗರಿಂದ ಸಿಕ್ಕುವ ಶಹಭಾಸ್ಗಿರಿ, ಆ ಒಂದು ಬರಹದ ಕುರಿತು ಬಂದ ಪ್ರತಿಕ್ರಿಯೆ ನಮ್ಮ ಮನಸ್ಸನ್ನು ಖುಷಿ ಗೊಳಿಸುವುದಲ್ಲದೆ ಇನ್ನೊಂದು ಬರಹ ಬರೆಯಲು ನಾಂದಿಯಾಗುವುದರಲ್ಲಿ ಸಂಶಯವಿಲ್ಲ.  ಹಾಗೆ ಪ್ರತಿಕ್ರಿಯೆಯಲ್ಲಿಯ ಟೀಕೆ ಟಿಪ್ಪಣೆಗಳು ಮತ್ತೆ ಮತ್ತೆ ನಮ್ಮ ಬರಹ ಓದಿ ಎಲ್ಲಿ ತಪ್ಪು ಮಾಡಿದೆ? ಹೇಗೆ ಸರಿಪಡಿಸಲಿ? ಅವರಿಂದ ಬಂದ ವ್ಯತಿರಿಕ್ತ ಪ್ರತಿಕ್ರಿಯೆ ನಿಜವಾಗಿಯೂ ನನ್ನ ಬರಹಕ್ಕೆ ಸಂಬಂಧಪಟ್ಟಿದೆಯಾ?  ಯಾಕೆ ಹೀಗೆ ಬರೆದೆ?  ಒಂದಾ ಎರಡಾ ನೂರೆಂಟು ಪ್ರಶ್ನೆಗಳು ಕಾಡುವ ಪರಿ ನಿಜಕ್ಕೂ ನಮ್ಮ ಮನಸ್ಸನ್ನು ತಿಕ್ಕಿ ತಿಕ್ಕಿ ಸಾಣೆ ಹಿಡಿಯುವಂತೆ ಮಾಡುತ್ತದೆ.  ತಪ್ಪಿನ ಅರಿವಾದಾಗ ಖೇದವಾದರೂ ಮನಸ್ಸಿಗಾಗುವ ಖುಷಿ ಅಷ್ಟಿಷ್ಟಲ್ಲ.  ಮನಸ್ಸಿನಲ್ಲೆ ಅವರಿಗೆ ಧನ್ಯವಾದ ಹೇಳಿಬಿಡುತ್ತೇವೆ.  
 
ಅಂದರೆ ಒಬ್ಬ ಬರಹಗಾರ ತನ್ನ ಬರಹವನ್ನು ಎಷ್ಟೇ ಪ್ರೀತಿಸಲಿ ಅದನ್ನು ಪ್ರಕಟಿಸಿದಾಗ ಬರುವ ಪ್ರತಿಕ್ರಿಯೆಯನ್ನು ಅಷ್ಟೇ ಪ್ರೀತಿಸುವ ಅಗತ್ಯವಿದೆ.  ಕೇವಲ ಹೊಗಳಿಕೆಯೊಂದನ್ನೆ ನಿರೀಕ್ಷಿಸದೆ ವ್ಯತಿರಿಕ್ತ ಪ್ರತಿಕ್ರಿಯೆಯನ್ನೂ ಒಮ್ಮನಸ್ಸಿನಿಂದ ಸ್ವೀಕರಿಸುವ ದೊಡ್ಡ ಮನಸ್ಸನ್ನು ಬೆಳೆಸಿಕೊಳ್ಳಬೇಕು.  ನಾನು ಅನೇಕರ ಬರಹ ಓದುವಾಗ ಓದುತ್ತ ಹೋದಂತೆ ನನ್ನ ಮನಸ್ಸಿನಲ್ಲಿ ಆಗಲೆ ಆ ಬರಹದ ಕುರಿತು ಕೆಲವೊಂದು ಭಿನ್ನ ಅಭಿಪ್ರಾಯಗಳು ಅಥವಾ ಒಮ್ಮತದ ಅಭಿಪ್ರಾಯಗಳು ಸುಳಿದಾಡಲು ಪ್ರಾರಂಭಿಸಿದಾಗ ನೇರವಾಗಿ ಪ್ರತಿಕ್ರಿಯೆ ಬರೆದು ಬಿಡಲೆ? ಅನ್ನುವಂತಾಗುತ್ತದೆ.  ಆದರೆ ಮನಸ್ಸಿನ ಮೂಲೆಯಲ್ಲಿ ಅದೆ sixth sense ಹೇಳುತ್ತದೆ ಬೇಡಾ ಕಣೆ, ಬರೆದವರಿಗೆ ನೋವಾಗಬಹುದು,  ಬರೆಯುವುದನ್ನೇ ಬಿಟ್ಟಾರು.  (ಹೀಗೆ ನಾನೂ ಹೊಸದರಲ್ಲಿ ಮಾಡಿದ್ದೆ ಕೀಳರಿಮೆಯಿಂದಾಗಿ.) ಸುಮ್ಮನಿರು ಎಂದು ಉಲಿದಾಗ ಸುಮ್ಮನಾಗಿ ಬಿಡುತ್ತೇನೆ.  ಆಗೆಲ್ಲ ಮನಸ್ಸು ಕಟ್ಟಿ ಹಾಕುವ ಪ್ರಕ್ರಿಯೆ ಸ್ವಲ್ಪ ಹೊತ್ತು ಕಷ್ಟ ಆಗುತ್ತದೆ.  
 
ಕೆಲವೊಂದು ಸಂದರ್ಭದಲ್ಲಿ ಬೇರೆಯವರ ಬರಹ ಓದುತ್ತಿದ್ದಂತೆ ನಮ್ಮ ಜೀವನದಲ್ಲಿ ನಡೆದ ಕೆಲವೊಂದು ಘಟನೆಗೆ ಸಾಮ್ಯತೆ  ಹೊಂದಿರುತ್ತದೆ.  ಆಗಂತೂ ಬಿಡಿ ಕೂಡಲೇ ಪ್ರತಿಕ್ರಿಯೆ ಬರೆಯಲು ಕೈ ಮುಂದೋಡುತ್ತದೆ.  ಬರೆದಿದ್ದೂ ಇದೆ. ಮತ್ತೆ ಡಿಲೀಟ್ ಮಾಡಿ ಸುಮ್ಮನಾಗುತ್ತೇನೆ.  ಇದು ನನ್ನ ಮನಸ್ಸಿನ ಅಳುಕೊ?  ಅಥವಾ ಬೇರೆಯವರು ಏನಂದುಕೊಳ್ಳುತ್ತಾರೊ ಅನ್ನುವ ಹಿಂಜರಿಕೆಯೊ?  ಗೊತ್ತಾಗ್ತಿಲ್ಲ.  ಆದರೆ ಮನಸ್ಸಿನ ತಾಕಲಾಟ ಹೇಳಿಕೊಳ್ಳದಿದ್ದರೆ ಅಸಮಾಧಾನದ ಹಸಿವ ಹಿಂಗಿಸಿಕೊಳ್ಳಲು ಪರದಾಟ.  ಈ ಅವಸ್ಥೆ ಒಂದೆರಡು ದಿನಗಳದ್ದಲ್ಲ.  ಹಲವು ದಿನಗಳವರೆಗೆ ಮನಸ್ಸಿನಲ್ಲಿ ಕಾಡುತ್ತಲೇ ಇರುತ್ತದೆ.  ಇದಕ್ಕೂ ಒಂದು ಪರಿಹಾರ ಸಿಗಲಾರದೆ ನನ್ನಲ್ಲೇ ಅದುಮಿ ಅದುಮಿ ಹೈರಾಣಾಗುತ್ತೇನೆ.  
 
ಈ ಬರಹ ಓದುವುದರಲ್ಲಿ, ಇರುವ ಸ್ವಾತಂತ್ರ ಬರೆಯುವುದರಲ್ಲಿ ಖಂಡಿತಾ ಇಲ್ಲ.  ಹಾಗೇನಾದರೂ ಮಾಡಿದರೆ ಸಮಾಜದ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ.  ಆ ಧಾಡ್ಯ ಇರುವವರು ಬರೆದ ಬರಹಗಳನ್ನು ಓದಿದಾಗ ಇಷ್ಟವಾದಲ್ಲಿ ಮನದಲ್ಲಿ ಭೇಷ್ ಹೇಳಿಕೊಂಡು ಖುಷಿ ಪಡಬೇಕು.  ಅಲ್ಲಿ ಪ್ರತಿಕ್ರಿಯೆ ಬರೆಯಲು ಮನಸ್ಸು ಅಂಜುವುದು.  ಎದೆಗಾರಿಕೆ ಬೇಕು ಇದಕ್ಕೂ.  ಛೆ! ಏನಾರ ಬರ್ಕೊಳ್ಳಲಿ.  ನನಗ್ಯಾಕೆ ಇಲ್ಲದ ಉಸಾಪರಿ ಎಂದು ಅನಿಸಿಕೆಗಳನ್ನು ಅದುಮಿಟ್ಟುಕೊಳ್ಳುವವರೆ ಜಾಸ್ತಿ.  ಆದರೆ ಇಂಥ ಬರಹಗಾರರು ಇದ್ದಾರಲ್ಲಾ ಅಂತ ಬಹಳ ಬಹಳ ಸಂತೋಷವಾಗುತ್ತದೆ.  ಕೇವಲ ಹೊಗಳು ಭಟ್ಟರೆ ತುಂಬಿದ್ದರೆ ಸಾಹಿತ್ಯ ಲೋಕದಲ್ಲಿ ರುಚಿ ಇಲ್ಲ.  ಯಾವಾಗಲೂ ಬರೀ ಸಿಹಿ ತಿನ್ನುತ್ತಿದ್ದರೆ ಮನಸ್ಸಿಗೆ ಹಿಡಿಸದು.  ಸ್ವಲ್ಪ ಖಾರ ಕೂಡಾ ಇದ್ದಿದ್ದರೆ ಅಂತ ಮನಸ್ಸಿಗೆ ಅನಿಸುವಂತೆ ಈ ಸಾಹಿತ್ಯದಲ್ಲಿ ಕೂಡಾ ಇಂತಹ ಬರಹ ಇದ್ದರೆನೇ ಚಂದ. 
 
ಸಾಮಾನ್ಯರಲ್ಲಿ ಅತೀ ಸಾಮಾನ್ಯಳಾಗಿ, ಬರೆಯುವ ಹಂಬಲ ಹೆಚ್ಚಾಗಿ ಇತ್ತೀಚಿನ ದಿನಗಳಲ್ಲಿ ಬರವಣಿಗೆ ಮುಂದುವರಿಸಿರುವ ನನಗೆ ಈ ರೀತಿಯ ಅನಿಸಿಕೆಗಳು ಪ್ರತಿದಿನ ಕಾಡುತ್ತಿವೆ.  ಓದಿದ ತಕ್ಷಣ ಅನಿಸಿಕೆಗಳನ್ನು ಪ್ರತಿಕ್ರಿಯಿಸುವ ಸ್ವಭಾವ ಎಷ್ಟು ಸರಿಯೊ ಗೊತ್ತಿಲ್ಲ. ಇದನ್ನು ಹಿಡಿದಿಡುವ ಪರಿ ಸರಿನಾ?  ಉತ್ತರ ಇಂತಹ ಅನುಭವವಾದವರೆ ಹೇಳಬೇಕು.  ಏಕೆಂದರೆ ಒಬ್ಬೊಬ್ಬ ಓದುಗನ  ಮನಸ್ಸು ಒಂದೊಂದು ರೀತಿ.  ಅದೇ ರೀತಿ ಒಬ್ಬೊಬ್ಬ ಬರಹಗಾರನ ಮನಸ್ಥಿತಿ ಒಂದೊಂದು ರೀತಿ ಇರುತ್ತದೆ ಅಲ್ಲವೆ?  ಕೆಲವರು ಕೇವಲ ಹೊಗಳಿಕೆಯೊಂದೇ ನಿರೀಕ್ಷಿಸುತ್ತಿರುವಾಗ ನಾವೇನಾದರೂ ವ್ಯತಿರಿಕ್ತವಾಗಿ ಪ್ರತಿಕ್ರಿಯಿಸಿದಲ್ಲಿ ಅವರ ಬರೆಯುವ ಉತ್ಸಾಹಕ್ಕೆ ತಣ್ಣೀರೆರೆಚಿದಂತಾಗಬಹುದೆ?ಅನ್ನುವ ಆತಂಕ.  ಅದರಲ್ಲೂ ಹೊಸ ಬರಹಗಾರರಲ್ಲಿ ನಿರೀಕ್ಷೆ ತುಂಬಾ ಇರುತ್ತದೆ.  
 
ಆದರೆ ಈ ಹೊಗಳಿಕೆಯ ನಶೆಯ ಪಿತ್ತ ಇಳಿಯುತ್ತಿದ್ದಂತೆ ಮನಸ್ಸಿನ ನಿಜವಾದ ನಿರೀಕ್ಷೆ ಹೊರ ಬರಲು ಪ್ರಾರಂಭವಾಗುತ್ತದೆ.  ನನ್ನ ಬರಹಗಳನ್ನು ಎಲ್ಲಿ ತಪ್ಪಿದೆ ಎಂದು ಹೇಳೋದೆ ಇಲ್ವಲ್ಲಾ ಯಾರೂ.  ಈ ರೂಢಿ Facebookಲ್ಲಿ ಧಾರಾಳವಾಗಿ ಕಾಣಬಹುದು.  ಅಲ್ಲಿ ಬರೀ ಓದುತ್ತಾರೆ ಲೈಕ್ ಹಾಕುತ್ತಾರೆ.  ಹೊಗಳಿಕೆಯ ಕಮೆಂಟ ಹಾಕುತ್ತಾರೆ.  ಅಲ್ಲಿ ಎಲ್ಲರೂ ಉತ್ತಮ ಕವಿಗಳೆ!   
 
ಇಷ್ಟು ದಿನದ ಬರವಣಿಗೆಯಲ್ಲಿ ನನಗೆ ಸದಾ ಅನಿಸುವುದು ನನ್ನ ಬರಹದ ಗುಣಮಟ್ಟ ನಿಜವಾಗಿ ಹೇಗಿದೆಯೆಂದು ಪ್ರಾಮಾಣಿಕವಾಗಿ ಹೇಳುವ ಒಬ್ಬರಾದರೂ ಸಿಕ್ಕಿದ್ದರೆ!  ಈ ಮನಸ್ಥಿತಿಯನ್ನು ತಲುಪಿದಾಗ ಅಳು ಬರುವಷ್ಟು ದುಃಖವಾಗುತ್ತದೆ.  ಆಗೆಲ್ಲ ಅವರವರ ಕೆಲಸ ಅವರವರಿಗೆ,ಇನ್ನು ನನ್ನಂತ ಬರಹಗಾರಳ ಬರಹವನ್ನು ವಿಮರ್ಶೆ ಮಾಡುವವರು ಯಾರು?  ಮನಸ್ಸು ಪೆಚ್ಚಾಗುತ್ತದೆ.  
 
ಹಿಂದೊಮ್ಮೆ ಇದೇ ಮಾತನ್ನು online ತಾಣಕ್ಕೆ ಬರೆದು ಹಾಕಿದ್ದೆ.  "ಇದು ಪ್ರಕಟಣೆಗೆ ಸರಿಯಾದ ಬರಹವಲ್ಲ.  ದಯವಿಟ್ಟು ಕ್ಷಮಿಸಿ.  ಗಂಟೆಗಟ್ಟಲೆ ಸಮಯ ವ್ಯರ್ಥ ಮಾಡಿ ಬರೆದ ಬರಹಕ್ಕೆ ಹೀಗೆ ಹೇಳಿದೆವೆಂದು ದಯವಿಟ್ಟು ಅನ್ಯಥಾ ಭಾವಿಸಬೇಡಿ."  ಅವರು ಹೀಗೆ ಹೇಳಲು ಕಾರಣ ನಮ್ಮ ರಾಜ್ಯದಲ್ಲಿ ನಡೆಯುತ್ತಿರುವ ಕಾವೇರಿ  ಗಲಭೆಯ ಕುರಿತು ಅತ್ಯಂತ ನೇರವಾಗಿ ಆಕ್ರೋಶದಲ್ಲಿ ಒಂದು ಲೇಖನ ಬರೆದು ಕಳಿಸಿದ್ದೆ. 
 
ಇದಕ್ಕೆ ಕಳಿಸಿದ ನನ್ನ ಪ್ರತ್ಯುತ್ತರ "ನೋಡಿ ಸರ್, ನನ್ನ ಮನಸ್ಸಿಗೆ ಅನಿಸಿದ್ದನ್ನು ಬರೆಯುತ್ತೇನೆ, ಕಳಿಸುತ್ತೇನೆ. ನಾನು ಬರೆದಿದ್ದು ಓದಿ ವಿಮರ್ಶೆ ಮಾಡುವವರು ಯಾರೂ ಇಲ್ಲ.  ಆದರೆ  ನನ್ನ ಬರಹ ಪ್ರಕಟಿಸೋದು ನಿಮ್ಮಿಷ್ಟ.  ನನಗೆ ಖಂಡಿತಾ ಬೇಜಾರಿಲ್ಲ.  ನನಗೆ ನಿಮ್ಮ ಮಾರ್ಗದರ್ಶನ ಅತೀ ಮುಖ್ಯ. "  
 
ಇದನ್ನು ಓದಿದ ಅವರು ಖುಷಿಯಿಂದ " ಬರೆದು ಕಳಿಸಿದ ಬರಹವನ್ನು ಪ್ರಕಟಿಸಲಾಗುವುದಿಲ್ಲ ಎಂದು ತಿಳಿಸಲು ನಮಗೂ ಆತಂಕವಿರುತ್ತದೆ.  ಆದರೆ ವಸ್ತುಸ್ಥಿತಿ ನೀವು ಒಮ್ಮನಸ್ಸಿನಿಂದ ಅರ್ಥ ಮಾಡಿಕೊಂಡಿರುವುದು ಸಮಾಧಾನ ತರಿಸಿತು.  ಧನ್ಯವಾದಗಳು".  ನಂತರದ ದಿನಗಳಲ್ಲಿ ನನ್ನ ಬರಹಕ್ಕೆ ಅವರಿಂದ ಅನೇಕ ರೀತಿಯ ಮಾರ್ಗದರ್ಶನ ದೊರೆಯಿತು.
 
ನಿಜ ಅವರೇಳಿದ್ದರಲ್ಲಿ ಯಾವ ತಪ್ಪೂ ಇರಲಿಲ್ಲ.  ಕೆರಳಿದ ಮನಸ್ಥಿತಿಯಲ್ಲಿ ಬರೆದ ಲೇಖನ ಮನಸ್ಸು ಶಾಂತ ಸ್ಥಿತಿಗೆ ಬಂದಾಗ ಓದಿ ನಾನೇ ಧಂಗಾಗಿದ್ದೆ.  ಛೆ! ಈ ಬರಹ ದೇವರೆ ಪ್ರಕಟಣೆ ಮಾಡದಿದ್ದರೆ ಸಾಕು ಅಂತ.  ಒಳಗೊಳಗೆ ಗಾಭರಿ, ಅಳುಕಿತ್ತು. ಹಾಗೇ ಆಯಿತು.  ಇನ್ನು ಮುಂದೆ ಬರೆದ ಬರಹ ಕಳಿಸುವಾಗ ಸ್ವಲ್ಪ ಯೋಚಿಸಿ ನಿಧಾನವಾಗಿ ಕಳಿಸಬೇಕೆಂಬ ಅರಿವು ಮನಕಾಯಿತು.
ಅವಸರ ಸಲ್ಲದು.  ಕೆಲವೊಮ್ಮೆ ಈ ಅವಸರದ ಅವಾಂತರದಲ್ಲಿ ಕಳಿಸಿದ ಬರಹಗಳು ಮತ್ತೊಮ್ಮೆ ಓದಿದಾಗ ಛೆ! ಇದನ್ನು ಇನ್ನೂ ಸ್ವಲ್ಪ ಸರಿಪಡಿಸಬೇಕಿತ್ತು.  ಇಲ್ಲೇನೊ ತಪ್ಪಾಗಿದೆ.  ಪುನಃ ಸರಿಪಡಿಸಿ ಮತ್ತೆ ಮತ್ತೆ ಕಳಿಸುವ ಪ್ರಮೇಯ ಎದುರಾಗುವುದಿದೆ.  ಅಥವಾ ಉದ್ವೇಗದ ಕ್ಷಣದಲ್ಲಿ ಬರೆದ ಬರಹಗಳು ಪ್ರಕಟಣೆಗೆ ಕಳಿಸಲು ಯೋಗ್ಯವಾಗಿಲ್ಲದಿದ್ದರೂ ಕಳಿಸಿಬಿಟ್ಟಿರುತ್ತೇವೆ. ಇದು ನಮ್ಮ ಅಭಿಮತವಾಗಿರುತ್ತದೆ.  ಆದರೆ ಅವು ಪ್ರಕಟಗೊಂಡು ಓದುಗರ ಮೆಚ್ಚುಗೆ ದೊರೆತಾಗ ನಾವಂದುಕೊಂಡದ್ದು ಎಷ್ಟು ತಪ್ಪು ಅನ್ನುವುದು ಮನಕರಿವಾಗುತ್ತದೆ.  ಇದರಿಂದ ಒಂದು ಅಂಶ ನಾನು ತಿಳಿದುಕೊಂಡಿದ್ದು ಏನೆಂದರೆ ನಮ್ಮ ಬರಹದ ಸತ್ಯಾಸತ್ಯತೆಯನ್ನು ಓದುಗರಿಂದ ಮಾತ್ರ ತಿಳಿಯಲು ಸಾಧ್ಯ.  ಯಾವುದು ಉತ್ತಮ ಬರಹವೆಂದು ನಮ್ಮಷ್ಟಕ್ಕೇ ನಾವು ಅಂದುಕೊಳ್ಳುತ್ತೇವೊ ಅದು ಕೆಲವೊಮ್ಮೆ ಓದುಗ ತಿರಸ್ಕರಿಸಿರುತ್ತಾನೆ.  ಅದಕ್ಕೆ ಲೈಕು ಕಮೆಂಟುಗಳು ಬಂದಿರೋದೇ ಇಲ್ಲ.  ಅಥವಾ ಪ್ರಕಟಗೊಳ್ಳುವುದೇ ಇಲ್ಲ.  ಇನ್ನು ಏನೊ ಬರೆದಿದ್ದೇನೆ.  ಕಳಿಸಿ ನೋಡುವಾ.  ಪ್ರಕಟಗೊಳ್ಳುತ್ತೊ ಇಲ್ಲವೊ ಎನ್ನುವ ಅನುಮಾನದಲ್ಲಿ ಕಳಿಸಿದ ಬರಹ ಪ್ರಕಟಗೊಂಡು ಅತ್ಯುತ್ತಮ ಪ್ರತಿಕ್ರಿಯೆ ಬಂದಿರುತ್ತದೆ.  ಆಗಂತೂ ಎಷ್ಟು ಸಂತೋಷ ಆಶ್ಚರ್ಯ ಮನಕಾನಂದ ವರ್ಣನಾತೀತ.
 
ಇನ್ನು ನಾವು ಬರೆದ  ಕೆಲವು ಬರಹಗಳು ನಮಗೆ ಅತ್ಯಂತ ಪ್ರೀತಿ ಬರಹಗಳಾಗಿರುತ್ತವೆ.  ಆಗಾಗ ಓದಿ ಖುಷಿ ಪಡುತ್ತೇವೆ.  ಕೆಲವೊಮ್ಮೆ ಯಾವತ್ತೊ ಬರೆದ ಬರಹ ಒಮ್ಮೆ ಹಳೆಯದನ್ನೆಲ್ಲ ತಡಕಾಡಿ ಓದುವಾ ಎಂದು ಕುಳಿತರೆ ಓದುತ್ತ ಹೋದಂತೆ ಇದು ನಾನೇ ಬರೆದಿದ್ದಾ?  ಹೇಗೆ ಇಷ್ಟೆಲ್ಲಾ ಬರೆದೆ?  ಈಗ್ಯಾಕೆ ಈ ರೀತಿ ಬರೆಯಲು ಸಾಧ್ಯ ಆಗುತ್ತಿಲ್ಲ?  ಬರೆಯುವ ಗತಿಯಲ್ಲಿ ಸೋಲುತ್ತಿರುವೆನೆಂಬ ಭಾವ ಮನದಲ್ಲಿ.   ಕಳಿಸಿದ ಬರಹ ಪ್ರಕಟವಾಗದಿದ್ದಲ್ಲಿ ತಕ್ಷಣ ಒಮ್ಮೆಮನಸ್ಸಿಗೆ ಬೇಸರ ಆಗುವುದಂತೂ ಖಂಡಿತ.  ಆಗೆಲ್ಲ ಇಡೀ ದಿನ ತಲೆ ಕೆಡಿಸಿಕೊಳ್ಳುವ ಪರಿಸ್ಥಿತಿ ನಮ್ಮದು.  ಆದರೆ ಹೀಗಾಗಲು ಕಾರಣ ಕರ್ತರು ನಾವೇ ಅಲ್ಲವೆ? ಕಳಪೆ ಬರಹವಾಗಿದ್ದಲ್ಲಿ ಯಾರು ಪ್ರಕಟಿಸುತ್ತಾರೆ?  
 
ಇನ್ನೊಂದು ಮಾತು ಮತ್ತೊಬ್ಬರಿಂದ ಮೇಲಲ್ಲಿ ಬಂತು ಒಕ್ಕಣೆ.  "ನೀವ್ಯಾಕೆ ಹವ್ಯಕ ಭಾಷೆಯಲ್ಲಿ ಬರೆಯಬಾರದು? ಪ್ರಯತ್ನಿಸಿ"  ಓ! ಹೌದಲ್ಲಾ.  ಈ ಪ್ರಯತ್ನ ಮಾಡೇ ಇಲ್ಲ.  ಇದೇ ಗುಂಗು ದಿನವಿಡಿ.  ನೋಡಿ ಈ ಯೋಚನೆಯೆಂಬ ಭೂತ ತಲೆ ಹೊಕ್ಕಿದ್ದೇ ತಡ ಒಂದು ಕವನ ಬರೆದು ಕಳಿಸಿದೆ.  ಕೂಡಲೆ ಅವರಿಂದ ಮೆಚ್ಚುಗೆಯ ನುಡಿಯೊಂದಿಗೆ ಮಾರನೆ ದಿನ ಅವರ ತಾಣದಲ್ಲಿ ಪ್ರಕಟವೂ ಆಯಿತು.  ಉತ್ತಮ ಪ್ರತಿಕ್ರಿಯೆ ಕೂಡಾ ಬಂತು.  
 
ಹಾಗೆ ಮುಖತಃ ಭೇಟಿಯಾದಾಗ ಕೇಳ್ಪಟ್ಟೆ.  ಅವರಂದ ಮಾತು ನನಗೆ ಖುಷಿ ಮತ್ತು ಸಂತೋಷ ತರಿಸಿತು.  ಇನ್ನಷ್ಟು ಬರಹ ಬರೆಯಲು ನಾಂದಿಯಾಯಿತು. " ಐದು ನಿಮಿಷದಲ್ಲಿ ನೀವೇನೊ ಕವನ ಬರೆದು ಕಳಿಸಿಬಿಡುತ್ತೀರಾ.  ನಾವೂ ಓದುತ್ತೇವೆ.  ಆದರೆ ಸಾವಿರಾರು ಕವನಗಳು ಬರುತ್ತವೆ.  ಪ್ರಕಟಿಸೋದೆ ಕಷ್ಟವಾಗಿದೆ.  ಬೇರೆ ಲೇಖನ ಬರೆಯುವತ್ತ ಗಮನ ಹರಿಸಿ."  ಮನಸ್ಸಿನಲ್ಲೇ ನಕ್ಕೆ.  ಅಂತೂ ನನ್ನೊಳಗಿನ ಬರಹ ಹೊರಗೆಳೆಯುವ ಹಿಕ್ಮತ್ತು ಇಂತಹ ಹಿತೈಷಿಗಳಿಗೆ ಮಾತ್ರ ಸಾಧ್ಯ.  ಅವರ ಅಭಿಮಾನಕ್ಕೆ ಅಲ್ಲೇ ವಂದಿಸಿದೆ.  ಕಾರಣ ಎಷ್ಟು  ಬರೆದರೂ ತೃಪ್ತಿ ಇಲ್ಲ ನನಗೆ.  ಓದುಗರ ಪರಿಚಿತರ  ಹಿತ ನುಡಿ, ಪ್ರೋತ್ಸಾಹ ಸಿಕ್ಕರೆ ಮತ್ತಷ್ಟು ಬರೆಯಬೇಕೆನ್ನುವ ತುಡಿತ.  ಹೀಗೆ ಎಲ್ಲರಿಗೂ ಅನಿಸುತ್ತಾ?  ಅದೂ ಗೊತ್ತಿಲ್ಲ.
 
ಅವರಂದ ಆತ್ಮೀಯ ಮಾತು ಎಷ್ಟು ನಿಜವಾದ ಮಾತು!  ನಿಜಕ್ಕೂ ತುಂಬಾ ತುಂಬಾ ಉತ್ತೇಜನ ಸಿಕ್ಕಿತು  ಬರೆಯಲು. ಈಗಾಗಲೇ ಅನೇಕ ಲೇಖನ, ಕಥೆ,ಕವನಗಳನ್ನು ಬರೆದಿರುವ ನನಗೆ ಇನ್ನಷ್ಟು ಮತ್ತಷ್ಟು ಬರೆಯಬೇಕು ನನ್ನ ಸಾಮರ್ಥ್ಯ ಈ ನಿಟ್ಟಿನಲ್ಲಿ ಮುಂದುವರಿಸಬೇಕು ನನ್ನ ಬರೆಯುವ ಶೈಲಿ ಈಗಾಗಲೇ ಬೆಳಕಿಗೆ ತಂದು ಪ್ರೋತ್ಸಾಹಿಸಿ ನನ್ನನ್ನು ನನಗೆ ಪರಿಚಯಿಸಿದ ಇಂತಹ ಮಹನೀಯರ ಮಾತುಗಳನ್ನು ಒಮ್ಮೆ ಶಾಂತ ಮನಸ್ಸಿನಿಂದ ನೆನಪಿಸಿಕೊಂಡು ಮೌನವಾಗಿ ಮನದಲ್ಲೇ ಕೃತಜ್ಞತೆ ಸಲ್ಲಿಸುತ್ತ    ನಂತರದ ದಿನದಲ್ಲಿ  ಹಲವು  ಲೇಖನ ಬರೆದಿದ್ದು ಪ್ರಕಟವೂ ಆಯಿತು.  ಇದು ನಡೆದು ಹಲವು  ತಿಂಗಳಾದರೂ ದೊಡ್ಡವರು ಅಂದ ಮಾತು ಇಂದಿಗೂ ಗುಣಗುಣಿಸುತ್ತಿದೆ ಮನ.  ಇಂತಹ ಮಾರ್ಗದರ್ಶನ ನನ್ನಂಥ ನವ್ಯ ಬರಹಗಾರರಿಗೆ ಅತೀ ಮುಖ್ಯ.  ಹಾಗೆ ಅವರ  ಒಂದು ಬರಹ ಓದಿ ಪ್ರತಿಕ್ರಿಯೆ ಬರೆಯಲು ಹಾತೊರೆದ ಮನಸ್ಸು ಎಲ್ಲಿ ಪ್ರತಿಕ್ರಿಯೆ ನಾನು ಬರೆದರೆ ತಪ್ಪಾಗುವುದೊ ಅನ್ನುವ ನನ್ನಲ್ಲಿರುವ ಅಂಜಿಕೆ ಈ ಲೇಖನ ಬರೆಯಲು ಕಾರಣವಾಯಿತು.  ಆದರೆ ಅವರಿಂದ ನನ್ನ ಬರಹಕ್ಕೆ ಸಿಕ್ಕ ಪ್ರೋತ್ಸಾಹ ನಾನೆಂದಿಗೂ ಮರೆಯಲಾರೆ.
 
ನನ್ನ ದೃಷ್ಟಿಯಲ್ಲಿ ಸಾಹಿತ್ಯ ಲೋಕವೆಂದರೆ ಗಣಿತದಷ್ಟೇ ಕಬ್ಬಿಣದ ಕಡಲೆ.  ಕೂಡಿ ಕಳೆದು ಗುಣಾಕಾರ ಭಾಗಾಕಾರ ಹಾಕಿ ಕೊನೆಯಲ್ಲಿ ಬರುವ ಶೇಷವನ್ನು ಓದುಗರ ಮುಂದೆ ಇಟ್ಟು ಅವರ ಪ್ರತಿಕ್ರಿಯೆಗಾಗಿ ಜಾತಕ ಪಕ್ಷಿಯಂತೆ ಕಾಯುವುದು.  ಸಿಗುವ ಪ್ರತಿಕ್ರಿಯೆಯೇ ಬರೆದ ಶೇಷ ಸರಿಯಾಗಿದೆಯೊ ಇಲ್ಲವೊ ಎಂಬುದನ್ನು ತೋರಿಸುತ್ತದೆ.  ಸಾಹಿತ್ಯ ಲೋಕವೇ ಒಂದು ಪಾಠ ಶಾಲೆ.  ಇಲ್ಲಿ ಪಾಸು ಫೇಲು ಪೃಕ್ರಿಯೆ ನಡೆಯುತ್ತಲೇ ಇರುತ್ತದೆ.  ಪಾಸಾದವರು ಮುಂದೆ ಮುಂದೆ ಹೋಗುತ್ತಾರೆ.  ಮಿಕ್ಕವರು ಇದ್ದಲ್ಲೆ ತೆವಳುವ ಪರಿಸ್ಥಿತಿ.  ಇದೇ ಅಲ್ಲವೆ ನಮ್ಮ ಬರಹಕ್ಕೆ ಹಿಡಿವ ಕನ್ನಡಿ!
 
11-8-2017. 9.51pm