ಮಹಾಭಾರತ ಸೀರಿಯಲ್ಲು - ಕನ್ನಡ ಹಾಡುಗಳು!

ಮಹಾಭಾರತ ಸೀರಿಯಲ್ಲು - ಕನ್ನಡ ಹಾಡುಗಳು!

 

ಟಿ.ವಿ. ಸೀರಿಯಲ್ ಸ್ಟಾರ್ ನಿರ್ಮಾಪಕ ಚಿಟ್ಟೇಸ್ವಾಮಿಗೆ ಕನ್ನಡದಲ್ಲಿ ಮಹಾಭಾರತ ಸೀರಿಯಲ್ ಮಾಡಬೇಕು, ಅತ್ಯಂತ ಡಿಫೆರೆಂಟಾಗಿ ಮಾಡಬೇಕು ಅನ್ನೋ ಆಸೆ ಒದ್ಗೊಂಡ್ ಬಂದಿತ್ತು ... ತಪ್ಪೇನಿಲ್ಲ, ಆದರೆ ಈಗ ತಾನೇ ಸ್ಟಾರ್ ಟಿ.ವಿಯವರು ’ಮಹಾಭಾರತ’ದ ಮಹಾ ಎಪಿಸೋಡ್ ಶುರು ಮಾಡಿರಬೇಕಾದರೆ ವೃಥಾ ಪೈಪೋಟಿ ಆಗೋಲ್ವೇ? ಜಾಹೀರಾತುದಾರರು ಕಡಿಮೆಯಾದರೆ ತಮಗೇ ನುಕ್ಸಾನು ಅಂತ ’ಗೊಣಗರ್ಸ್ ಅಸೋಸಿಯೇಷನ್’ ಅವರು ಗೊಣಗುತ್ತಿದ್ದರು ... ಇದೆಲ್ಲಕ್ಕಿಂತಾ ದೊಡ್ ವಿಚಾರ ಅಂದರೆ "ಶಕುನಿ ನನ್ ಕನಸಿನಾಗೆ ಬಂದು ಹೇಳಿದ್ದಾನಪ್ಪ, ಧಾರಾವಾಹಿ ಮಾಡು ಅಂತ, ಅದಕ್ಕೇ ಮಾಡ್ತಿದ್ದೀನಿ. ನಿಮ್ ಸಹಾಯ ಬೇಕು. ಶಕುನಿ ಮಾತು ಕೇಳ್ದಿದ್ರೆ ಶನಿ ಕಾಟ ತಪ್ಪಿದ್ದಲ್ಲ, ಕುನ್ನಿ ಸ್ಥಿತಿ ಬರ್ತದೆ" ಅಂತ ದಿಗಿಲಿನ ಒಗ್ಗರಣೆ ಬೇರೆ ಇಟ್ಟಿದ್ದನಾ ಚಿಟ್ಟೇಸ್ವಾಮಿ ...

 

ನಮ್ ಚಿಟ್ಟೇಸ್ವಾಮಿ ಹೆಸರು ಟಿ.ವಿ ವಲಯದಲ್ಲಿ ದೊಡ್ಡದಾಗಿದ್ದರೂ ಅವನಿಗೆ ದುಡ್ಡು ಸಪ್ಲೈ ಮಾಡುತ್ತಿದ್ದವರೂ ಬೇರಾರೋ. ಅವರ ಹೆಸರು ಎಲ್ಲೂ ಯಾರೂ ಕೇಳಿಲ್ಲ ಬಿಡಿ. ಅವರೇ ’ಗೊಣಗರ್ಸ್ ಅಸೋಸಿಯೇಷನ್’ ಮಂದಿ! ಅದೂ ಅಲ್ಲದೇ ಚಿಟ್ಟೇಸ್ವಾಮಿ ನುಡಿಗೆ ನಾಲ್ಕು ಬಾರಿ ಡಿಫೆರೆಂಟಾಗಿ ಇರಬೇಕು ಅಂದಾಗ ಇವರಿಗೆ ಇನ್ನೂ ಯೋಚನೆ ಜಾಸ್ತಿಯಾಗುತ್ತೆ. ಅದರ ಜೊತೆ ತಮ್ಮ ಸೀರಿಯಲ್ಲು ಹೊಸ ಮೆಸೇಜ್ ಕೊಡಬೇಕು ಅಂದಾಗ ಸ್ವಲ್ಪ ಜಾಸ್ತೀನೇ ಯೋಚನೆ ಆಗುತ್ತೆ. ಶ್ರೀ ಕೃಷ್ಣ ಪರಮಾತ್ಮ ಕೊಟ್ಟಿರೋ ಮೆಸೇಜ್’ಗೆ ಅರ್ಥಾತ್ ಉಪದೇಶಕ್ಕೆ ಹೊಸ ಅರ್ಥ ಕೊಟ್ಟುಬಿಟ್ರೆ ಪಬ್ಲಿಕ್ ನಮ್ಮನ್ನ ಬಿಟ್ಟಾರೆಯೇ? ಮೊದಲೇ ಈ ನಡುವೆ ಏನು ಮಾಡಿದರೂ ಗಲಾಟೆ ನೆಡೀತಿದೆ ಅನ್ನೋ ಭಯ.

 

ಸಣ್ಣ ಸಭೆಯೇನೋ ಸೇರಿತ್ತು. ಎಲ್ಲರಿಗೂ ಉಪ್ಪಿಟ್ಟು, ಕೇಸರೀಬಾತು, ಕಾಫಿ, ಟೀ ಅಂತೆಲ್ಲ ಸಮಾರಾಧನೆ ಇತ್ತು. ಊಟ ಕೊಡದೇ ಯಾರ್ರೀ ಬರ್ತಾರೆ ಮಾತುಕತೆಗೆ ! ಹತ್ತೂ ಬೆರಳಿಗೆ ಬಂಗಾರದ ಉಂಗುರ ತೊಟ್ಟ ಚಿಟ್ಟೇಸ್ವಾಮಿ ಅಲ್ಲಿ ವಿರಾಜಮಾನನಾಗಿದ್ದ ... ಬಂಗಾರ ಗಿಲೀಟು ಅನ್ನೋ ಮಾತು ಅಲ್ಲಲ್ಲೇ ಕೇಳುತ್ತಿದ್ದರೂ ಯಾರೂ ಜೋರಾಗಿ ಹೇಳುತ್ತಿರಲಿಲ್ಲ.

 

ಚಿಟ್ಟೇಸ್ವಾಮಿ ಶುರು ಹಚ್ಚಿಕೊಂಡ "ನೋಡ್ರಪ್ಪ ನಮ್ ಮಹಾಭಾರತ ಸೀರಿಯಲ್ಲು ಡಿಫೆರೆಂಟಾಗಿ ಇರಬೇಕು. ಯಾವ ತರಹ ಅಂದ್ರೇ ಮುಖ್ಯವಾದ ಸೀನ್’ಗಳಿಗೆ ಬ್ಯಾಕ್-ಗ್ರೌಂಡ್ ಹಾಡು." .. ಯಾರೋ ಕೊಸ್ ಅಂದರು "ಸೀರಿಯಲ್’ಗೆ ಹಾಡು ಬರೀಬೇಕು ಅಂದ್ರೆ ಸಾಹಿತಿಗಳು ಸ್ವಲ್ಪ ಹಿಂದೇಟು ಹಾಕ್ತಾರೆ ಸಾರ್. ಸೀರಿಯಲ್’ಗೆ ಬರೆಯೋಲ್ಲ, ಸಿನಿಮಾಕ್ಕೆ ಚಾನ್ಸ್ ಸಿಗೋಲ್ಲ. ಅಂಥಾ ಸ್ಥಿತಿ ಇವರದ್ದು. ಅದೂ ಅಲ್ದೇ ಈ ನಡುವೆ ಸಾಹಿತಿಗಳು ರಾಜಕೀಯದಲ್ಲಿ ಸ್ವಲ್ಪ ಬಿಜಿ ಇದ್ದಾರೆ ಕೂಡ"

 

ಚಿಟ್ಟೇಸ್ವಾಮಿ ಸಂದರ್ಭವನ್ನ ಗಬಕ್ಕನೆ ಹಿಡ್ಕೊಂಡ "ಅದೇ ನಾನು ಹೇಳಿದ್ದು... ನಮ್ ಸೀರಿಯಲ್ಲು ಇಲ್ಲೇ ಡಿಫೆರೆಂಟ್ ಆಗೋದು. ಕನ್ನಡ ಸಿನಿಮಾದ ಅದ್ಬುತ ಹಾಡುಗಳನ್ನು ಇಲ್ಲಿ ಒಂದೋ ಎರಡೋ ಲೈನ್ ಬಳಸಿಕೊಳ್ಳೋದು ಅಷ್ಟೇ" .... ಇಂಥಾ ಭಯಂಕರ ಡಿಫೆರೆಂಟ್ ಕಾನ್ಸೆಪ್ಟ್ ಕೇಳಿಯೇ ಎಲ್ಲರಿಗೂ ಶಾಕ್ ಹೊಡೀತು.

 

ಚಿಟ್ಟೇಸ್ವಾಮಿ ಮುಂದುವರೆಸಿದ "ನಾನೀಗ ಕೆಲವು ಸನ್ನಿವೇಶಗಳನ್ನ ನಿಮ್ಮ ಮುಂದೆ ಹೇಳ್ತೀನಿ. ಅದರ ಜೊತೆ ಯಾವ ಹಾಡು ಹಾಕಬೇಕೂ ಅಂತಾನೂ ಹೇಳ್ತೀನಿ. ಅದು ವರ್ಕ್-ಔಟ್ ಆಗುತ್ತಾ ಹೇಳಿ. ಬೇರೆ ಸನ್ನಿವೇಶಗಳಿಗೆ ಯಾವ ಹಾಡನ್ನು ಹಾಕಬಹುದು ಅನ್ನೋ ಆಲೋಚನೆ ನಿಮಗೆ ಬಿಡ್ತೀನಿ. ಈಗ್ಲೇ ಒಂದು ಮಾತು ನೆನಪಿಟ್ಕೊಳ್ಳಿ. ಯಾವುದೇ ಕಾರಣಕ್ಕೂ ಆ ಹಾಡುಗಳಲ್ಲಿ ಅಶ್ಲೀಲತೆ ಇರಂಗಿಲ್ಲ." ಅಂದ. ಅವನಂದದ್ದನ್ನ ನಿಮ್ಮ ಮುಂದೆ ’ಹೆಚ್ಚಾಗಿ ಡಿಫೆರೆಂಟ್’ ಅನ್ನೋ ಪದ ಬಳಸದೆ ಇಡ್ತೀನಿ. ಸೀರಿಯಲ್ ಗತಿ ಏನು ಅನ್ನೋದನ್ನು ನೀವೇ ಹೇಳಿ.

------------

 

ಮೊದಲಿಗೆ ಮಹಾರಾಜ ಶಾಂತನು ನದೀ ತೀರದಲ್ಲಿ ಹಾಗೇ ವಿಹಾರ ಮಾಡುತ್ತಿರುತ್ತಾನೆ. ಆಗ ಆತನ ಕಣ್ಣಿಗೆ ಬೀಳೋದು ದೇವಲೋಕದ ಗಂಗೆ. ಆಕೆಯ ಸೌಂದರ್ಯಕ್ಕೆ ಮರುಳಾಗಿ ಮಾತೇ ಹೊರಡದೆ ನಿಂತಾಗ, ಮೂಡಿ ಬರುವ ಹಾಡು "ಆಕಾಶದಿಂದಾ ಧರೆಗಿಳಿದ ರಂಭೆ, ಇವಳೇ ಇವಳೇ ಚಂದನದ ಗೊಂಬೆ, ಚೆಲುವಾದ ಗೊಂಬೆ, ಚಂದನದಾ ಗೊಂಬೆ"

 

"ಮುಂದೆ ಭೀಷ್ಮ ಪ್ರತಿಜ್ಞ್ನೆ. ಶಾಂತನು ಮಹಾರಾಜ ಭೀಷ್ಮರನ್ನು ಸಿಂಹಾಸನದ ಮೇಲೆ ಕೂರಿಸಿ ಕುರುವಂಶಕ್ಕೆ ಒಳ್ಳೆಯ ರಾಜನನ್ನು ಕೊಡಬೇಕು ಎಂದು ಯೋಚಿಸುತ್ತಿದ್ದಾಗ, ಸತ್ಯವತಿ ಎಂಟ್ರಿಯಾಗಿ ಗೊಂದಲ. ಆಗ ಭೀಷ್ಮರು ’ತಮಗೆ ಮದುವೆಯೇ ಬೇಡ. ಆಜನ್ಮ ಬ್ರಹ್ಮಚಾರಿಯಾಗೇ ಇದ್ದು ಬಿಡುತ್ತೇನೆ’ ಎಂದು ಶಪಥ ಮಾಡಿ ಹೊರಡುತ್ತಾರೆ {ಸ್ಲೋ ಮೋಷನ್}. ಆಗ ಢಮ ಢಮ ಮ್ಯೂಸಿಕ್ ಬದಲು ತಿಳಿಯಾಗಿ ’ಕಥೆ ಮುಗಿಯಿತೇ? ಆರಂಭದಾ ಮುನ್ನ .. ಲತೆ ಬಾಡಿ ಹೋಯಿತೇ? ಹೂವಾಗುವಾ ಮುನ್ನ ... ಎಲ್ಲಿಗೇ ಪಯಣ, ಯಾವುದೋ ದಾರಿ, ಏಕಾಂಗೀ ಸಂಚಾರೀ ...’" ಅಂತ ಹಾಡು! ಏನಂತೀರಾ?

 

ಯಾರೋ ಮತ್ತೆ ಕೊಸ್ ಅಂದರು "ಸಾರ್, ಢಮ ಢಮ ಸದ್ದು ಬೇಕು. ಆಗ್ಲೇ ನಮ್ಮ ಸೀರಿಯಲ್’ನ ಟಿ.ಆರ್.ಪಿ ಏರೋದು. ಟಿ.ವಿ. ಮುಂದೆ ನಿದ್ದೆ ಮಾಡುವವರನ್ನು ಎಬ್ಬಿಸೋದೇ ಈ ಢಮ ಢಮ" .. "ಆಯ್ತು, ಅಯ್ತು ... ದುಡ್ಡಿನ ಪ್ರಭುಗಳು ಹೇಳಿದಂತೆ ಆಗಲಿ ... ಆದರೆ ಈ ಸನ್ನಿವೇಶಕ್ಕೆ ಬೇಡ ಅಂದೆ ಅಷ್ಟೇ"

 

ಮುಂದೆ ಏನೆಲ್ಲ ಘಟನೆಗಳು ನೆಡೆಯುತ್ತೆ. ಅವಕ್ಕೆಲ್ಲ ನೀವುಗಳು ಹಾಡುಗಳನ್ನ ಹುಡುಕಿ. ನಂತರ ಕರ್ಣನ ಜನನ ಘಟನೆ. ದೂರ್ವಾಸ ಮಹಾಮುನಿಗಳು ಕೊಟ್ಟ ವರವನ್ನು ಪರೀಕ್ಷೆ ಮಾಡುವ ಸಲುವಾಗಿ ಷೋಡಶಿ ಕುಂತಿ ಒಂದು ಮುಂಜಾನೆ ಸೂರ್ಯ ದೇವನೆಡೆ ಹೋಗುತ್ತಾಳೆ ... ಆಗ "ನಿಲ್ಲು ನಿಲ್ಲೇ ಪತಂಗ ... ಬೇಡ ಬೇಡ ಬೆಂಕಿಯ ಸಂಗ... ಪತಂಗಾ ಪತಂಗಾ" ಹಾಡು ... ನೋಟ್ ಮಾಡಿಕೊಳ್ತಿದ್ದೀರಾ?

 

ಮುಂದೆ ಪಾಂಡು ಮಹಾರಾಜನ ಜೊತೆ ಕುಂತೀದೇವಿಯ ಮದುವೆ ... ಆಮೇಲೆ ಪಾಂಡವರ ಜನನ ಸಮಯ. ಧರೆಗಿಳಿದ ಧರ್ಮರಾಯ ... ಆಗೊಂದು ಹಾಡು "ಧರ್ಮವೆ ಜಯವೆಂಬ ದಿವ್ಯ ಮಂತ್ರ, ಮರ್ಮವನರಿತು ಪಾಲಿಸಬೇಕು ತಂತ್ರ" ಅಂತ. ಎಲ್ಲ ಮಕ್ಕಳಿಗೂ ಹಾಡು ಅಂತ ಕೊಟ್ಟರೆ ನೂರೈದು ಹಾಡುಗಳು ಅತೀ ಆಗಬಹುದೇನೋ. ಏನಂತೀರಾ?

 

ಪಾಂಡು ಮಹಾರಾಜನಿಗೆ ಖಾಯಿಲೆ ಇರುತ್ತದೆ. ಉದ್ವೇಗ ತಡೆದುಕೊಳ್ಳಲಾಗದ ಖಾಯಿಲೆ. ಮನಸ್ಸಿಗೆ ನೆಮ್ಮದಿ ಇರಲೆಂದು ಸ್ವಲ್ಪ ಕಾಲ ವನಗಳಲ್ಲಿ ಪ್ರಶಾಂತವಾಗಿ ಇರಬೇಕು ಎಂದು ಬಯಸುತ್ತಾನೆ. ಆತ ಬೇಟೆಗೆ ಎಂದು ಹೋಗಿದ್ದಾಗ, ಅಲ್ಲೇ ಇದ್ದ ಸಣ್ಣ ಜಲಪಾತದಲ್ಲಿ ಆತನ ಎರಡನೇ ಪತ್ನಿ ಸ್ನಾನ ಮಾಡುತ್ತಿರುತ್ತಾಳೆ. ಆಗ ಪಾಂಡು ಮಹಾರಾಜನ ಆಗಮನ. ಮಾದ್ರಿಯ ಸೌಂದರ್ಯ ರಾಶಿ ಕಣ್ಣಿಗೆ ಬಿದ್ದಾಗ "ನಿನ್ನ ಕಂಡು ಬೆರಗಾದೆನೂ, ಏಕೋ ಕಾಣೆ ಮರುಳಾದೆನು, ಪ್ರೇಮದ ಕರೆಗೇ, ಪ್ರೀತಿಯ ನುಡಿಗೇ ಹೆಣ್ಣೆ ನನ್ನಾಣೆ ನಾ ಸೋತೆ" ಎಂಬ ಹಾಡು ... ಒಳ್ಳೇ ರಾಗ ... ಮಾದ್ರಿಗೂ ಮನದಲ್ಲಿ ಆಸೆಗಳು ಪುಟಿದೆದ್ದರೂ ಆತನ ಖಾಯಿಲೆ ಬಗ್ಗೆ ಯೋಚಿಸುವ ಸಮಯದಲ್ಲಿ "ದೂರ ದೂರ ಅಲ್ಲೇ ನಿಲ್ಲಿ ನನ್ನ ದೇವರೇ" ಎಂಬ ಹಾಡು.

 

ಈಗ ಪಾಂಡವರ ಅಜ್ಞ್ನಾತವಾಸದ ಕಥಾಭಾಗ ... ಏಕಚಕ್ರನಗರ ... ಬಕಾಸುರ ವಧ. ಬಂಡಿ ಅನ್ನ ತುಂಬಿಕೊಂಡು ಸಾವಧಾನವಾಗಿ ಊಟವನುಣ್ಣುತ್ತ ಸಾಗುತ್ತಾನೆ ಭೀಮಸೇನ. ಅಲ್ಲಿ ಬಕಾಸುರ ಹಸಿವು ಭುಗಿಲೆದ್ದಿರುತ್ತದೆ "ಹಸಿವೆ ದೂರಾ ನೀನಿರು ... ಬರುತ್ತಿರೋ ಅನ್ನ ಕೈ ಸೇರುವ ತನಕ, ದೂರಾ ನೀನಿರು ... ಹಸಿವೆ ದೂರಾ ನೀನಿರು" ... ಇಷ್ಟು ಹೊತ್ತೂ ಸುಮ್ಮನಿದ್ದ ಯಾರೋ ಹೇಳಿದರು "ಈ ಲಿರಿಕ್ಸ್ ಹೀಗಿಲ್ಲವಲ್ಲ?" ... ಚಿಟ್ಟೇಸ್ವಾಮಿ ನುಡಿದ "ಸಂದರ್ಭಕ್ಕೆ ತಕ್ಕ ಹಾಗೆ ಸ್ವಲ್ಪ ಬದಲಿಸಿಕೊಂಡರೆ ಅಡ್ಡಿಯಿಲ್ಲ ಬಿಡಿ".

 

ಇನ್ನೊಂದೆಡೆ ದ್ರುಪದ ರಾಜನ ಯಜ್ಞ. ಇಬ್ಬರ ಮಕ್ಕಳ ಜನನ. ಅದೂ ಏನು ಏಕ್ದಂ ಪೂರ್ಣವಾಗಿ ಇಬ್ಬರೂ ಮಕ್ಕಳು ಒಬ್ಬರ ಹಿಂದೆ ಒಬ್ಬರು ಅಗ್ನಿ ಕುಂಡದಿಂದ. ಅಗ್ನಿಕುಂಡದಿಂದ ಹೊರಬಂದ ದ್ರೌಪದಿಯ ಹಿಂದೇ ಹಾಡೂ ಅಲೆಅಲೆಯಾಗಿ "ಬೆಂಕಿಯಲ್ಲಿ ಅರಳಿದ ಹೂವೂ ನಾನಮ್ಮಾ ... ನನ್ನ ಅಂತರಂಗವನ್ನು ಬಲ್ಲವರಾರೂ ಇಲ್ಲಮ್ಮ" ಅಂತ.

 

ದ್ರೌಪದಿ ಸ್ವಯಂವರ. ದ್ರುಪದ ರಾಜನಿಟ್ಟಿದ ಬಿಲ್ಲಿಗೆ ಹೆದೆ ಏರಿಸಲು ಸೋತರೆಷ್ಟೋ ರಾಜರು. ಕೃಷ್ಣನ ಸೂಚನೆಯ ಮೇರೆಗೆ ಎದ್ದು ನಿಂತು ಧೀಮಂತ ಹೆಜ್ಜೆ ಇಡುತ್ತ ಸಾಗುತ್ತಾನೆ ಪಾರ್ಥ ... ಆಗ "ನಾನು ಯಾರು? ಯಾವ ಊರು? ಇಲ್ಲಿ ಯಾರೂ ಬಲ್ಲೋರಿಲ್ಲ ..." ಅಂತ ಹಾಡು. ಮುಂದೆ ದ್ರೌಪದಿಯನ್ನು ಅರ್ಜುನ ಗೆಲ್ಲುತ್ತಾನೆ. ಆದರೆ ಅಲ್ಲಿ ನೆರೆದ ರಾಜರಿಗೆ ಅದು ಸರಿ ಕಾಣೋಲ್ಲ. ಅರ್ಜುನ-ದ್ರೌಪದಿಯರನ್ನು ಅಡ್ಡಗಟ್ಟಿ ಹೋರಾಡಲು ತೊಡಗುತ್ತಿದ್ದಂತೆಯೇ ಭೀಮಸೇನ ಅಲ್ಲೇ ಇದ್ದ ಮಹಾವೃಕ್ಷವನ್ನು ಕಿತ್ತು ಅವರನ್ನು ರಕ್ಷಿಸುತ್ತಾನೆ ... ಆಗ "ಗಂಡು ಎಂದರೆ ಗಂಡೂ ಭೂಪತಿ ಗಂಡು, ಹಸ್ತಿನಾಪುರದಾ ಬೆಂಕಿ ಚೆಂಡು ಬಹದ್ದೂರು ಗಂಡು" ಅನ್ನೋ ವೀರಾವೇಷದ ಹಾಡು.

 

ಮುಂದೆ ವಿರಾಟ ಪರ್ವ. ಸೈರಂಧ್ರಿಯ ಸೌಂದರ್ಯಕ್ಕೆ ಮರುಳಾದ ಕೀಚಕ ಅವಳ ಹಿಂದೆ ಹಿಂದೆ ಓಡಾಡುತ್ತಿರುತ್ತಾನೆ "ಯಾರಿವಳು ಯಾರಿವಳು ಸೂಜಿಮೊಲ್ಲೆ ಕಣ್ಣವಳು" ಅಂತ ... ಈತನ ಕಾಟ ತಡೆಯಲಾರದೆ ಭೀಮಸೇನನಲ್ಲಿ ಹೋಗಿ ಅಲವತ್ತುಕೊಂಡಾಗ, ಕೀಚಕನನ್ನು ನೃತ್ಯಶಾಲೆಗೆ ಬರುವಂತೆ ಆಹ್ವಾನಿಸು ಎಂದು ಉಪಾಯ ಹೇಳಿಕೊಡುತ್ತಾನೆ. ಅತ್ಯಂತ ಖುಷಿಯಿಂದ ಸಾಗುವ ಕೀಚಕ ಜೊತೆಯಲ್ಲೇ ಹಾಡು "ಬೇಡ ನಂಬಬೇಡ ... ಜೀವ ಹೋದರೂ ಹೆಂಗಸರನ್ನು ಎಂದಿಗು ನೀನು ನಂಬಬೇಡ" ಅಂತ ... ಖುಷಿಯಲ್ಲೇ ಕೀಚಕ ಕೋಣೆಯೊಳಗೆ ಹೋಗುತ್ತಾನೆ. ಕತ್ತಲೆ ಕೋಣೆಯಲ್ಲಿ ನೆಡೆದದ್ದೇ ಬೇರೆ ... ಅಡುಗೆಭಟ್ಟ ಭೀಮಸೇನ ಕೀಚಕನನ್ನು ಅಟ್ಟಾಡಿಸಿಕೊಂಡು ಬಡಿಯುತ್ತಾನೆ "ಬಿಸಿ ಕಜ್ಜಾಯ ರುಚಿ ರುಚಿ ಕಜ್ಜಾಯ ಮಾಡಿಕೊಡಲೆ ನಾನು? ಹಿಂದೆ ಎಂದು ತಿಂದು ಇಲ್ಲ, ಮುಂದೆ ಎಲ್ಲೂ ಸಿಗೋದಿಲ್ಲ, ಜನುಮ ಜನುಮದಲು ನೆನಪಲಿ ಉಳಿಯುವ" ಹಾಡು ... ಫುಲ್ ಆಕ್ಷನ್ .... ಕೀಚಕನ ವಧೆ.

 

ಕೀಚಕ ಸತ್ತ ಸುದ್ದಿ ಹಸ್ತಿನಾಪುರಕ್ಕೆ ತಲುಪುತ್ತದೆ. ದುರ್ಯೋಧನಾದಿಗಳಿಗೆ ಇದು ಭೀಮಸೇನನದೇ ಕೆಲಸ ಎಂದು ಗೊತ್ತಾಗಿಹೋಗುತ್ತದೆ. ಮತ್ಸ್ಯ ರಾಜ್ಯವನ್ನು ಮುತ್ತಿಕ್ಕಿ ಯುದ್ದಕ್ಕೆ ಆಹ್ವಾನಿಸುತ್ತಾರೆ. ಬ್ರುಹನ್ನಳೆಯ ಸಹಾಯದಿಂದ ಯುದ್ದ ಹೋದ ಉತ್ತರಕುಮಾರ, ಯುದ್ದಕ್ಕೆ ಬಂದಿದ್ದ ಅತಿರಥ, ಮಹಾರಥಿಗಳನ್ನು ಕಂಡು ನಡುಕಬಂದು ತನ್ನ ರಥವನ್ನು ಅಲ್ಲಿಯೇ ನಿಲ್ಲಸಲು ಹೇಳಿ, ರಣರಂಗವನ್ನು ಬಿಟ್ಟು ಎದ್ದೋಡುತ್ತಾನೆ. ಬ್ರುಹನ್ನಳೆ ಅವನ ಮನವೊಲಿಸಿ, ಆಯುಧಗಳನ್ನು ತೆಗೆದುಕೊಂಡು ತಾನೇ ಯುದ್ದಕ್ಕೆ ತೊಡಗುತ್ತಾನೆ ... ಆಗ ಅವನ ಪರಾಕ್ರಮಕ್ಕೆ ದಂಗಾದ ಉತ್ತರಕುಮಾರ ಅವನನ್ನು ನೋಡುತ್ತಿರಲು ಮೂಡಿಬರುವ ಹಾಡು "ಯಾರಿವನೂ ಈ ಮನ್ಮಥನೂ, ಧೀರರಲ್ಲಿ ಧೀರ, ಧೀರ ಧೀರ, ಶೂರರಲ್ಲಿ ಶೂರ, ಶೂರ ಶೂರ ಹಮ್ಮೀರಾ" ಎಂಬೋ ಹಾಡು.

 

ಮುಂದೆ ಕುರುಕ್ಷೇತ್ರ ಯುದ್ದ. ಕೃಷ್ಣ ಪರಮಾತ್ಮನನ್ನು ತಮ್ಮ ಪಕ್ಷಕ್ಕೆ ಬರುವಂತೆ ಒಲಿಸಲು ಇತ್ತ ದುರ್ಯೋಧನ ಅತ್ತ ಅರ್ಜುನ ಇಬ್ಬರೂ ಕೃಷ್ಣನ ಬಳಿ ಬರುತ್ತಾರೆ. ಇವರ ಬರುವಿಕೆಯನ್ನು ಅರಿತ ದೇವ, ಮಲಗಿದಂತೆ ನಟಿಸುತ್ತಾನೆ. ಮೊದಲಿಗೆ ಬಂದ ಅಹಂಕಾರಿ ದುರ್ಯೋಧನ, ತಾನೇಕೆ ಅವನ ಕಾಲ ಬಳಿ ಕುಳಿತುಕೊಳ್ಳಬೇಕು ಎಂದು ತಲೆಯ ಬಳಿ ಅಸೀನನಾಗುತ್ತಾನೆ. ನಂತರ ಬಂದ ಅರ್ಜುನ ಹಸ್ನಮುಖಿಯಾಗಿ ಮಲಗಿದ್ದ ಜಗದ್ದೋದ್ಧಾರನ ಕಾಣುತ್ತಾನೆ. ಆಗ "ಮಲಗಿರುವೆಯಾ ರಂಗನಾಥ, ನೀನು ಮಲಗಿರುವೆಯಾ ರಂಗನಾಥ, ಮಲಗಿರುವ ನಿನ್ನ ನೋಡಿ .." ಎಂಬ ಹಾಡು. ಭೂಲೋಕ-ದೇವಲೋಕಗಳನಳೆದ ಮಾಹಾಪಾದಗಳ ಬಳಿ ಆಸೀನನಾಗಿ ಧನ್ಯನಾಗುತ್ತಾನೆ ಅರ್ಜುನ.

 

ಹದಿಮೂರನೇ ದಿನ ... ಬಹುಶ: ಅದಕ್ಕೇ ಇರಬೇಕು ಹದಿಮೂರು ಅನ್ನೋ ಸಂಖ್ಯೆಯನ್ನ ಅಶುಭ ಅನ್ನೋದು ... ನಾವು ಈ ದೃಶ್ಯವನ್ನು ಸಾಂಕೇತಿಕವಾಗಿ ತೋರಿಸಬೇಕು ... ದಾರುಣವಾಗಿ ತೋರಿಸಬಾರದು ... ಅಭಿಮನ್ಯು ರಣರಂಗ ಹೊಕ್ಕಾಗ "ಚಕ್ರವ್ಯೂಹ ಇದು ಚಕ್ರವ್ಯೂಹ ... ನೆಲದಾ ಮೋಹ, ಅಧಿಕಾರದ ದಾಹ ... ಒಬ್ಬರ ಕೊಂದೇ ಒಬ್ಬರು ಬದುಕುವ ಚಕ್ರವ್ಯೂಹ" ...

 

ಹದಿನೈದನೆ ದಿನದ ಯುದ್ದ ... ದೃತರಾಷ್ಟ್ರನು ಆಡಿದ ಮಾತಿನಿಂದ ರೊಚ್ಚಿಗೆದ್ದು ಯುದ್ದ ಮಾಡುತ್ತಿದ್ದ ದ್ರೋಣಾಚಾರ್ಯರನ್ನು ತಡೆಗಟ್ಟುವುದೇ ಅತೀ ದೊಡ್ಡ ವಿಷಯವಾಗಿತ್ತು. ಕೃಷ್ಣ ಸಲಹೆಯ ಮೇರೆಗೆ "ಅಶ್ವತ್ತಾಮನು ಹತನಾದನೆಂದು" ಹೇಳುತ್ತಾನೆ. ಧರ್ಮಜ ಹೇಳಿದ ಮಾತು ಸುಳ್ಳಾಗದು ಎಂಬ ನಂಬಿಕೆಯಿಂದ ಶಸ್ತ್ರಾಸ್ತ್ರಗಳನ್ನು ಚೆಲ್ಲಿ, ಯುದ್ದ ನಿಲ್ಲಿಸುತ್ತಾನೆ. ಆಗ "ತಪ್ಪು ಮಾಡವರು ಯಾರವ್ರೇ, ತಪ್ಪೆ ಮಾಡವರು ಎಲ್ಲವ್ರೆ" ಎಂದು ಧರ್ಮರಾಯನ ಕುರಿತಾದ ಹಾಡು.

 

ಕೊನೆಗೆ ದುರ್ಯೋಧನ ಯಾರ ಕೈಗೂ ಸಿಗದಂತೆ ತಪ್ಪಿಸಿಕೊಂಡು, ಸರೋವರವೊಂದರಲ್ಲಿ ಬಚ್ಚಿಟ್ಟುಕೊಳ್ಳುತ್ತಾನೆ ... ಭೀಮಸೇನ ಇತರ ಪಾಂಡವರೊಡನೆ ಎಲ್ಲೆಲ್ಲೂ ಹುಡುಕುವಾಗ "ಸಿಗಿವೆಮ್ ಕ್ಷಣದಲಿ ನಿನ್ನ ನಾ, ಎಲ್ಲಿ ಹೋದರೇನು ನಿನ್ನ" ಎಂಬೋ ಹಾಡು ಮೂಡುತ್ತದೆ.

 

ಸರಿ, ಕೌರವರೆಲ್ಲ ಕಥೆ ಮುಗಿಯಿತು ... ಎಲ್ಲರನ್ನೂ ಕಳೆದುಕೊಂಡು ಹತಾಶನಾಗಿ ನಿಂತಿಹನು ದೃತರಾಷ್ಟ್ರ ... "ನೂರೊಂದು ನೆನಪು ಎದೆಯಾಳದಿಂದ ಹಾಡಾಗಿ ಬಂತು ಬಲು ದು:ಖದಿಂದ " ...

 

ಬಂದವರೆಲ್ಲ ಹೋಗಲೇಬೇಕಲ್ಲ? ಕೊನೆಗೊಂದು ದಿನ ದ್ರೌಪದಿ ಸಹಿತ ಎಲ್ಲ ಪಾಂಡವರೂ ರಾಜ್ಯಾದಿ ಭೋಗಗಳನ್ನು ಬಿಟ್ಟು ಹೊರಡುತ್ತಾರೆ ... ಮಾರ್ಗದಲ್ಲಿ ಒಬ್ಬೊಬ್ಬರೇ ಸಾವನ್ನಪ್ಪುತ್ತಾರೆ ... ಆಗ "ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದಾ .. ಸೂತ್ರವ ಹರಿದಾ ಬೊಂಬೆಯ ಮುರಿದಾ, ಮಣ್ಣಾಗಿಸಿದಾ" ಎಂಬಲ್ಲಿ ಧಾರಾವಾಹಿ ಮುಗಿಯುತ್ತದೆ.

 

------------

ಈಗ ಹೇಳ್ರಪ್ಪ ... ನಮ್ ಧಾರಾವಾಹಿ ಚೆನ್ನಾಗಿದೆಯೋ ಇಲ್ವೋ ಅಂತ? ಡಿಫರೆಂಟಾಗಿ ಇದೆ ತಾನೇ?

 

Comments

Submitted by sathishnasa Mon, 09/30/2013 - 20:41

ಭಲ್ಲೆಯವರೆ ಸೂಪರ್, ಬಹಳ ದಿನಗಳ ನಂತರ ನಿಮ್ಮ ಹಾಸ್ಯ ಬರಹ ಮನಕ್ಕೆ ಮುದ ನೀಡಿತು. ಈ ರೀತಿ ಸೀರಿಯಲ್ " ಚಿಟ್ಟೆಸ್ವಾಮಿ " ತೆಗೆದರೆ ನಮ್ಮ " ಅಂ ಭಂ ಸ್ವಾಮಿ " ಗಳು ಸುಮ್ಮನೆ ಇರ್ತಾರ ಅಂತ....!! ....ಸತೀಶ್
Submitted by bhalle Mon, 09/30/2013 - 23:12

In reply to by sathishnasa

ಸತೀಶ'ರಿಗೆ ನಮಸ್ಕಾರಗಳು ನನಗೂ ಅದೇ ಡೌಟು. ಹಾಗಾಗಿ ಸಾಧ್ಯವಾದಷ್ಟು ಡಿಸ್ಕ್ಲೈಮರ್ ಹಾಕಿದ್ದೀನಿ. ಮುಂದಿನ ಸಾರಿ ಭಾರತಕ್ಕೆ ಬಂದಾಗ ನನ್ನ ವಿರುದ್ದ ಕೂಗು ಹಾಕಿ ಹಾಗೆಯೇ ವಾಪಸ್ ಹೋಗುವಂತೆ ಹೇಳ್ತಾರೇನೋ ಅನ್ನಿಸುತ್ತೆ:-))))
Submitted by ಗಣೇಶ Mon, 09/30/2013 - 23:29

In reply to by sathishnasa

-ನಮ್ಮ " ಅಂ ಭಂ ಸ್ವಾಮಿ " ಗಳು ಸುಮ್ಮನೆ ಇರ್ತಾರ ಅಂತ....!! . ಹೇಗೆ ಸುಮ್ಮನಿರಲು ಸಾಧ್ಯ? ಅಲ್ರೀ ಚಿಟ್ಟೆಸ್ವಾಮಿಗಳೇ, "ಗೊಣಗರ್ಸ್ ಅಸೋಸಿಯೇಶನ್"ಗೆ ಅನಧಿಕೃತ ಓನರ್ ಯಾರು ಗೊತ್ತೇನ್ರೀ ನಿಮಗೆ? ಹಣ ಸುರಿಯೋನು ಯಾರು ಅಂದುಕೊಂಡಿರಿ? ಇದೆಲ್ಲಾ ಕನ್ನಡ ಹಾಡೇನ್ರೀ? ಕನ್ನಡ ನಿಮಗೆ ಕಲಿಸಿ ಕೊಟ್ಟೋರು ಯಾರ್ರೀ..? "ಸಿಂಗಿ ಲಾಂಗು ಸಿಂಗಿ ಲಾಂಗು ಸಿಂಗಿ ಲಾ..ಏನೇ ಆದ್ರೂ ಡೋಂಟ್ ವರಿ ಯಾರೇ ಸಿಕ್ರೂ ಹಲ್ಲು ಕಿರಿ..." ಆಹಾ..ಕನ್ನಡ ಹಾಡು ಅಂದ್ರ ಇದು! ಒಂದಾದರೂ ಸೇರಿಸಿದ್ರಾ? "ಖಾಲಿ ಕ್ವಾರ್ಟರ್ ಬಾಟ್ಲಿ ಹಂಗೆ ಲೈಫ್.." "ಗೂಗ್ಲಿ ಗಂಡಸರೇ ಕೇಳಿ ಗೂಗ್ಲಿ.. ಪೆ ಪೆಪೆಪೇಪೆ ಗೂಗ್ಲಿ" ಎಲ್ಲಿ? ಇದನ್ನೆಲ್ಲಾ ಸೇರ್ಸಿ ಬೇರೆ ಬರ್ಕೊಂಡು ಬನ್ನಿ..ರಾವಣ ಹಾಡುವಾಗ ಕೌರವರು ಕುಣಿಯುವುದು ನೋಡಿ ಜನ ಮಹಾಭಾರತ ನೋಡಲು ಕಾದು ಕುಳಿತಿರುವರು. ಹಾಂ..ಅಂದಾಗೆ ಅಲ್ಲಿ ಉಳಿದಿರೋ ಉಪ್ಪಿಟ್ಟು ಕೇಸರಿಬಾತ್ ಎಲ್ಲಾ ತನ್ರೋ.........:) ಅಂ.ಭಂ.ಸ್ವಾಮಿ ****************** ಭಲ್ಲೇಜಿ, ಸೂಪರ್ ಹಿಟ್ ಸೀರಿಯಲ್..ಹಂಡ್ರೆಡ್ ಡೇಸ್ ಗ್ಯಾರಂಟೀ :)-ಗಣೇಶ.
Submitted by bhalle Tue, 10/01/2013 - 16:33

In reply to by ಗಣೇಶ

ಗಣೇಶ್’ಜಿ ಅನಂತಾನಂತ ಧನ್ಯವಾದಗಳು ಮೊದಲಿಗೆ ಭಯಂಕರ ಭಯ ಆಯ್ತು ... ಆಮೇಲೆ ಖುಷಿಯಾಯ್ತು ... ಮತ್ತೆ ಬ್ಯಾಸರ ಆಯ್ತು, ನೀವು ಲಿಸ್ಟ್ ಮಾಡಿದ ಹಾಡುಗಳು ನನಗೆ ಗೊತ್ತೇ ಇಲ್ಲ ಅಂತ ... ಸಾಮಧಾನ ಅಯ್ತು, ಸದ್ಯ ಆ ಹಾಡುಗಳು ಇಲ್ಲಿ ಸೇರಿಸಿಲ್ಲ ಅಂತ :-))))
Submitted by venkatb83 Tue, 10/01/2013 - 18:26

ಭಲ್ಲೆ ಅವ್ರೇ ಸೂಪಾರ್ರೋ ರಂಗ ...! ಬರಹ ಓದಿ ನಕ್ಕಿದ್ದೇ ನಕ್ಕಿದ್ದು.... ಮುಸ್ಸಂಜೇಲಿ ಮನ ಹಗುರಾಯ್ತು ... ಇದರಲ್ಲಿನ ೨- ೩ ಹಾಡುಗಳ ಸಂದರ್ಭ ನೆನೆದು ಇನ್ನೂ ನಗೆ ಉಕ್ಕುತ್ತಿದೆ .. >>> "ಬೇಡ ನಂಬಬೇಡ ... ಜೀವ ಹೋದರೂ ಹೆಂಗಸರನ್ನು ಎಂದಿಗು ನೀನು ನಂಬಬೇಡ" ಅಂತ ... ..!! ;())) >>>>ಬಿಸಿ ಕಜ್ಜಾಯ ರುಚಿ ರುಚಿ ಕಜ್ಜಾಯ ಮಾಡಿಕೊಡಲೆ ನಾನು? ಹಿಂದೆ ಎಂದು ತಿಂದು ಇಲ್ಲ, ಮುಂದೆ ಎಲ್ಲೂ ಸಿಗೋದಿಲ್ಲ, ಜನುಮ ಜನುಮದಲು ನೆನಪಲಿ ಉಳಿಯುವ" ಹಾಡು ... ಫುಲ್ ಆಕ್ಷನ್ .... ಕೀಚಕನ ವಧೆ. :())) ಗೊಣಗರ್ಸ್ ಪದ ಪ್ರಯೋಗ ಸೂಪರ್ ಸಾ ....!! ಶುಭವಾಗಲಿ \।
Submitted by bhalle Wed, 10/02/2013 - 05:50

In reply to by venkatb83

ಧನ್ಯವಾದಗಳು ಸಪ್ತಗಿರಿವಾಸಿಗಳೇ ಈಗ ನಿಮ್ಮಿಂದ ಮಹಾಭಾರತದ ಒಂದು ಸನ್ನಿವೇಶಕ್ಕೆ ಒಂದು ಹಾಡು ಬರಲಿ ...