ಮಿತಿಮೀರಿದ ಪರೋಕ್ಷ ತೆರಿಗೆ ಹಾಗೂ ಸ್ಥಗಿತಗೊಂಡ ಮೊಬೈಲ್ ಇಂಟರ್ನೆಟ್ ರಂಗದ ಬೆಳವಣಿಗೆ

ಮಿತಿಮೀರಿದ ಪರೋಕ್ಷ ತೆರಿಗೆ ಹಾಗೂ ಸ್ಥಗಿತಗೊಂಡ ಮೊಬೈಲ್ ಇಂಟರ್ನೆಟ್ ರಂಗದ ಬೆಳವಣಿಗೆ

ಮೊಬೈಲ್ ಸೇವೆಗಳನ್ನು ನೀಡಲು ಟೆಲಿಕಾಂ ಕಂಪನಿಗಳು ದುಬಾರಿ ಹಣ ತೆತ್ತು ತರಂಗಾಂತರವನ್ನು ಉಪಯೋಗಿಸಲು ಪರವಾನಗಿ ಪಡೆಯಬೇಕಾದ ಸರಕಾರದ ನೀತಿಯಿಂದಾಗಿ ಭಾರತದಲ್ಲಿ ವೇಗದ ಮೊಬೈಲ್ ಇಂಟರ್ನೆಟ್ ಕ್ಷೇತ್ರದ ಬೆಳವಣಿಗೆ ಸ್ಥಗಿತವಾಗಿದೆ.  ೨೦೧೦ನೇ ಇಸವಿಯಲ್ಲಿಯೇ ೩ಜಿ ಸ್ಪೆಕ್ಟ್ರಮ್ ಅನ್ನು ಹರಾಜು ಹಾಕಿ ಸರಕಾರ ೧,೦೬,೨೦೦ ಕೋಟಿ ರೂಪಾಯಿ ಆದಾಯ ಗಳಿಸಿದೆ.  ದುಬಾರಿ ಹಣ ತೆತ್ತು ತರಂಗಾಂತರ ಉಪಯೋಗಿಸಲು ಪರವಾನಗಿ ಪಡೆದ ಟೆಲಿಕಾಂ ಕಂಪನಿಗಳು ೩ಜಿ ಮೊಬೈಲ್ ಇಂಟರ್ನೆಟ್ ಸೇವೆಯ ದರವನ್ನೂ ತುಂಬಾ ದುಬಾರಿಯಾಗಿಯೇ ಇಟ್ಟಿವೆ.  ಇದು ಭಾರತದ ಜನಸಾಮಾನ್ಯರಿಗೆ ಎಟಕುವ ಮಟ್ಟದಲ್ಲಿ ಇಲ್ಲ.  ಹೀಗಾಗಿ ಭಾರತದಲ್ಲಿ ನಿರೀಕ್ಷೆಯಂತೆ ೩ಜಿ ಮೊಬೈಲ್ ಇಂಟರ್ನೆಟ್ ಕ್ಷೇತ್ರ ಬೆಳವಣಿಗೆ ಕಾಣಲಿಲ್ಲ.  ೨೦೧೦ರಲ್ಲಿಯೇ ೩ಜಿ ಸ್ಪೆಕ್ಟ್ರಂ ಹರಾಜು ನಡೆದರೂ ನಾಲ್ಕು ವರ್ಷಗಳು ಕಳೆದರೂ ಒಂದೇ ಒಂದು ಟೆಲಿಕಾಂ ಕಂಪನಿ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ೩ಜಿ ಇಂಟರ್ನೆಟ್ ಸೇವೆಯನ್ನು ಆರಂಭಿಸಿಲ್ಲ.  ೩ಜಿ ಸ್ಪೆಕ್ಟ್ರಮ್ ಅನ್ನು ದುಬಾರಿ ದರದಲ್ಲಿ ಹರಾಜು  ಹಾಕುವ ಸರಕಾರದ ಕೆಟ್ಟ ಹಾಗೂ ದೂರದೃಷ್ಟಿಯಿಲ್ಲದ ನೀತಿಯ ಪರಿಣಾಮವಾಗಿ ಭಾರತದ ಗ್ರಾಮೀಣ ಭಾಗಗಳು ಬಲಿಪಶುಗಳಾಗಿವೆ.  ೩ಜಿ ಸ್ಪೆಕ್ಟ್ರಂ ಹರಾಜು ಹಾಕಿ ಸರಕಾರವೇನೋ ಹಣ ಗಳಿಸಿರಬಹುದು ಆದರೆ ಅದರ ದುಷ್ಪರಿಣಾಮವನ್ನು ಗ್ರಾಮೀಣ ಪ್ರದೇಶಗಳ ಜನ ಅನುಭವಿಸಬೇಕಾಗಿ ಬಂದಿದೆ.

ಟೆಲಿಕಾಂ ಸೇವೆಗಳನ್ನು ನೀಡಲು ಕಂಪನಿಗಳು ಭಾರೀ ಬಂಡವಾಳ ಹಾಕಬೇಕಾಗುತ್ತದೆ.  ಈ ಬಂಡವಾಳದ ಮೇಲೆ ಮತ್ತೊಂದು ದುಬಾರಿ ಹೊರೆಯಾಗಿ ಸ್ಪೆಕ್ಟ್ರಂ ಪರವಾನಗಿ ಪಡೆಯಲು ಸಾವಿರಾರು ಕೋಟಿ ರೂಪಾಯಿಗಳನ್ನು ನೀಡಬೇಕಾಗಿ ಬಂದಿರುವುದು ಭಾರತದ ಟೆಲಿಕಾಂ ಕ್ಷೇತ್ರದ ಬೆಳವಣಿಗೆಗೆ ಕಂಟಕಪ್ರಾಯವಾಗಿ ಪರಿಣಮಿಸಿದೆ.  ಇದು ಕಂಪನಿಗಳ ಮೇಲೆ ಹೊರಲಾರದ ಹೊರೆಯಾಗಿ ಪರಿಣಮಿಸಿದ ಪರಿಣಾಮವಾಗಿ ಗ್ರಾಮೀಣ ಕ್ಷೇತ್ರಗಳಲ್ಲಿ ೩ಜಿ ಮೊಬೈಲ್ ಇಂಟರ್ನೆಟ್ ಸೇವೆಯನ್ನು ನೀಡಲು ಯಾವ ಕಂಪನಿಗಳೂ ಮುಂದಾಗದಂಥ ಪರಿಸ್ಥಿತಿಯನ್ನು ನಿರ್ಮಿಸಿದೆ.  ಸದ್ಯದ ಪರಿಸ್ಥಿತಿಯನ್ನು ಗಮನಿಸುವಾಗ ಯಾವುದೇ ಖಾಸಗಿ ಟೆಲಿಕಾಂ ಕಂಪನಿಗಳು ಇನ್ನೂ ಇಪ್ಪತ್ತೈದು ವರ್ಷಗಳಾದರೂ ಗ್ರಾಮೀಣ ಭಾಗಗಳಿಗೆ ೩ಜಿ ಅಥವಾ ೪ಜಿ ಮೊಬೈಲ್ ಇಂಟರ್ನೆಟ್ ಸೇವೆಯನ್ನು ವಿಸ್ತರಿಸುವ ಸಂಭವ ಇಲ್ಲ.

ಭಾರತದ ಜನಸಾಮಾನ್ಯರು ಬಳಸಲು ಅಸಾಧ್ಯವಾದ ದುಬಾರಿ ದರಗಳನ್ನು ವಿಧಿಸಿದರೆ ದೇಶದಲ್ಲಿ ವೇಗದ ಮೊಬೈಲ್ ಇಂಟರ್ನೆಟ್ ಕ್ಷೇತ್ರದ ಬೆಳವಣಿಗೆ ನಿಂತ ನೀರಾಗಿಯೇ ಪರಿಣಮಿಸಲರಿವುದು ಖಚಿತ.  ಪಾಶ್ಚಾತ್ಯ ಅಥವಾ ಅಭಿವೃದ್ಧಿ ಹೊಂದಿದ ದೇಶಗಳು ಅನುಸರಿಸುವ ಸ್ಪೆಕ್ಟ್ರಮ್ ಹರಾಜು ನೀತಿಯನ್ನು ಕುರುಡಾಗಿ ನಮ್ಮಂಥ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಅನುಸರಿಸುವುದು ತಪ್ಪು.  ನಮ್ಮ ದೇಶದಲ್ಲಿ ಜನಸಾಮಾನ್ಯರ ತಲಾ ಆದಾಯ ಬಹಳ ಕಡಿಮೆ ಇದೆ.  ಹೀಗಾಗಿ ದುಬಾರಿ ಮೊಬೈಲ್ ಇಂಟರ್ನೆಟ್ ದರವನ್ನು ವಿಧಿಸಿದರೆ ಅದನ್ನು ಜನಸಾಮಾನ್ಯರು ಬಳಸುವುದು ಅಸಂಭವ.  ಇಂಥ ಸರಳ ವಿಷಯಗಳೂ ನಮ್ಮನ್ನಾಳುವ ರಾಜಕಾರಣಿಗಳಿಗೆ ಅರಿವಾಗದಿರುವುದು ನಮ್ಮ ದೇಶದ ದುರಂತ.

ಭಾರತದ ಗ್ರಾಮೀಣ ಭಾಗಗಳಿಗೆ ಸಂಪರ್ಕ ಸೇವೆಯನ್ನು ಒದಗಿಸಲು 'ಯುನಿವರ್ಸಲ್ ಸರ್ವಿಸಸ್  ಒಬ್ಲಿಗೇಶನ್ ಫಂಡ್' (ಯು.ಎಸ್.ಒ. ನಿಧಿ )ಎಂಬ ವ್ಯವಸ್ಥೆ ಇದೆ.  ಈ ನಿಧಿಗೆ ಖಾಸಗಿ ದೂರಸಂಪರ್ಕ ಕಂಪನಿಗಳ ಲಾಭಾಂಶದ ಒಂದಂಶವನ್ನು ಪಡೆಯಲಾಗುತ್ತದೆ.   ಭಾರತದ ಯು.ಎಸ್.ಒ. ನಿಧಿಯಲ್ಲಿ ೨೫,೦೦೦ ಕೋಟಿ ಉಪಯೋಗವವಾಗದೆ ಹಾಗೆಯೇ ವರ್ಷಗಳಿಂದ ಬಿದ್ದುಕೊಂಡಿದೆ.  ಇದನ್ನು ಉಪಯೋಗಿಸಿ ಗ್ರಾಮೀಣ ಭಾಗಗಳಿಗೆ ಸರಕಾರವು ವೇಗದ ೩ಜಿ ಅಥವಾ ೪ಜಿ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಒದಗಿಸಲು ಸಾಧ್ಯವಿತ್ತು.  ಅದನ್ನು ಕೂಡ ಸರಕಾರವು ಮಾಡುತ್ತಿಲ್ಲ.  ಭಾರತದ ಗ್ರಾಮೀಣ ಭಾಗಗಳಿಗೆ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸೇವೆ ಒದಗಿಸುವ ಉದ್ಧೇಶದ ಭಾರತ್ ಬ್ರಾಡ್ಬ್ಯಾಂಡ್ ನೆಟ್ವರ್ಕ್ ಎಂಬ ಕಂಪನಿಯನ್ನು ೨೦೧೦ರಲ್ಲಿಯೇ ಆರಂಭಿಸಲಾಗಿದ್ದರೂ ಇದು ಒಂದು ಬಿಳಿಯಾನೆಯಂತೆ ಯಾವುದೇ  ಕೆಲಸ ಆರಂಭಿಸದೆ  ಬಿದ್ದುಕೊಂಡಿದೆ.  ಇದು  ಇನ್ನು ಹತ್ತು ವರ್ಷಗಳಾದರೂ ಕೆಲಸ ಆರಂಭಿಸುವುದು ಸಂಶಯ.  ದೇಶದ ಗ್ರಾಮೀಣ ಜನತೆಗೆ ಈ ರೀತಿ ಸರಕಾರವು ಬಗೆಯುತ್ತಿರುವ ನಿಧಾನ ದ್ರೋಹದ ಬಗ್ಗೆ ನಮ್ಮ ಮಾಧ್ಯಮಗಳು ಚಕಾರವೆತ್ತುತ್ತಿಲ್ಲ.  ನಮ್ಮ ಮುಖ್ಯವಾಹಿನಿಯ ಮಾಧ್ಯಮಗಳ ಉದಾಸೀನ ಪ್ರವೃತ್ತಿಯಿಂದಾಗಿ ಗ್ರಾಮೀಣ ಪ್ರದೇಶಗಳು ಪಡೆಯಬೇಕಾದ ಸೌಲಭ್ಯವನ್ನು ಪಡೆಯಲಾಗದೆ ನಿರಂತರ ಸೊರಗುತ್ತಿವೆ.

ಚಿತ್ರ:  ಅಂತರ್ಜಾಲದಿಂದ.