ರನ್ನ ಸಿನಿಮಾ ‍ (ಚಿತ್ರ ವಿಮರ್ಷೆ ಅಲ್ಲ ! )

ರನ್ನ ಸಿನಿಮಾ ‍ (ಚಿತ್ರ ವಿಮರ್ಷೆ ಅಲ್ಲ ! )

ರನ್ನ ಸಿನಿಮಾ    

ರನ್ನ ಸಿನಿಮಾಗೆ ಬುಕ್ ಮಾಡುತ್ತೇನೆ ಹೋಗೋಣವೆ ?

ಮಗಳು ಕೇಳಿದಾಗ ಆಶ್ಚರ್ಯ ,
ಅಲ್ಲ ಕನ್ನಡ ಸಿನಿಮಾ ನೋಡಲು ಇವರೆಲ್ಲ ಪ್ರಾರಂಭಿಸಿದರಲ್ಲ, ನಿಜಕ್ಕೂ ಕನ್ನಡಕ್ಕೆ ’ಅಚ್ಚೆ ದಿನ್ ’ ಬಂದೇ ಬಿಟ್ಟಿತಾ!

ಖುಷಿಯಾಗಿ ’ ಆಗಲಿ ’ ಎಂದೆ.

ಬಾನುವಾರ ಮಧ್ಯಾನಃದ ನಂತರದ 3:50 ರ ಶೋ!

’ಗಂಟೆ ಎರಡಾಯಿತು ಬೇಗ ಊಟ ಮಾಡಿ ’ ಎಂದರೆ
’ಏನಪ್ಪ ನೀವು ಎಲ್ಲದಕ್ಕೂ ಟೆನ್ಷನ್ ಮಾಡಿಕೊಳ್ತೀರಿ, ಹೇಗೂ ಸಿನಿಮಾ ಟಿಕೆಟ್ ಬುಕ್ ಆಗಿದೆ, ಹತ್ತು ನಿಮಿಶ ಲೇಟ್ ಆಗಿ ಹೋದರೆ ಒಂದು ಲಕ್ಷಣ ’ ಎಂದಳು.
ಕಡೆಗೂ ನನ್ನ ಬಲವಂತಕ್ಕೆ ಅಮ್ಮ ಮಗಳು ಸಿದ್ದರಾಗಿ, ಮೈಸೂರು ರಸ್ತೆಯಿಂದ ಮಾಗಡಿ ರಸ್ತೆಗೆ ತಿರುಗುವಲ್ಲಿ ಮೆಟ್ರೋ ಪಕ್ಕ ಇರುವ ಮಾಲ್ ’ ETA ಮಾಲ್ ’ ನ ಮುಟ್ಟಿದಾಗ ಇನ್ನು ಸಾಕಷ್ಟು ಸಮಯವಿತ್ತು, ಅಲ್ಲಿರುವ ’ಸಿನಿಪಾಲೀಸ್ (ಸಿನಿಪೋಲಿಸ್ ?) ನಲ್ಲಿ ಸಿನಿಮ .

’ಇದೇನೆ’ ಎಂದರೆ
’ನೀವು ಮಾಲ್ ಎಂದು ನೋಡಿಲ್ಲವಲ್ಲ ಅದಕ್ಕೆ ಇಲ್ಲಿಗೆ ಕರೆತಂದೆ, ಅಷ್ಟಕ್ಕೂ ಇದು ಪೂರ್ಣಪ್ರಮಾಣದಲ್ಲಿ ಪ್ರಾರಂಭವಾಗಿಲ್ಲ, ಜನ ಕಡಿಮೆ ಎಂದು ನಿಮ್ಮನ್ನು ಕರೆತಂದೆ ಎಂದಳು !’

ಮೇಲೆ ಮೂರನೆ ಮಹಡಿ ಮುಟ್ಟುವಾಗ ಎಂತದೋ ಥ್ರಿಲ್, ಮೇಲೆ ಹತ್ತಲು ತಾವಾಗೆ ಚಲಿಸುವ ಮೆಟ್ಟಿಲುಗಳು (ಎಸ್ಕಿಲೇಟರ್) , ಇಂತಹುಗಳನ್ನೆಲ್ಲ ಕಾಣುವಾಗ ದೊಡ್ಡವರು ಚಿಕ್ಕಮಕ್ಕಳಾಗಿಬಿಡುತ್ತಾರೆ ಅನ್ನಿಸುತ್ತೆ!.

ಸಿನಿಮಾಗೆ ಇನ್ನು ಸ್ವಲ್ಪ ಸಮಯವಿತ್ತು, ಪಕ್ಕದಲ್ಲಿ ಒಂದು ಕಾಫ್ ಕೇಂದ್ರವಿತ್ತು, ಕಾಫಿ-ಟಿ ? ಅಲ್ಲಿಗೆ ಕರೆದೋಯ್ದಳು,
ಏನಾದರು ತಿನ್ನುತ್ತೀರಾ ?
’ಈಗಿನ್ನು ಊಟವಾಯಿತಲ್ಲ, ತಿನ್ನುವದೇನು, ಕಾಫಿ ಹೇಳಿಬಿಡು’ ಎಂದೆ.
’ನೀವು ಇಲ್ಲಿ ಕುಳಿತಿರಿ ’ ಎಂದು ನನ್ನನ್ನು , ಹಾಗ ಪತ್ನಿಯನ್ನು ಅಲ್ಲಿದ್ದ ಚಿಕ್ಕ ಚಿಕ್ಕ ಸ್ಟೂಲುಗಳ ಮೇಲೆ ಕೂಡಿಸಿ, ಅವಳು ಕಾಫಿ ತರಲು ಹೋದಳು,
ಸುತ್ತಲೂ ನೋಡಿದೆ, ಎಂತದೋ ಸಂಭ್ರಮ, ಕೃತಕತೆ ತುಂಬಿದ ವಾತವರಣ. ಸುತ್ತಲು ಕಾಫಿ ಹಾಲಿನಲ್ಲಿ ಕುಳಿತ ಜನರನ್ನು ನೋಡಿದೆ, ಹೆಂಗಸರು ಮಕ್ಕಳು ಹರಟುತ್ತ ನಗುತ್ತಿದ್ದರೆ, ಗಂಡಸರು ಮಾತ್ರ ಗಂಭೀರ ಮುಖ ಮಾಡಿ ಕುಳಿತಿದ್ದರು. ಅದೇನೊ ಈ ಹಾಳು ಗಂಡಸರು ಯಾವಾಗಲು ಹೀಗೆ ಸಿಡುಕುಮೋರೆ ! ಎಂದು ಕೊಂಡೆ (ನನ್ನನ್ನು ಸೇರಿಸಿಯೆ ! )

ಹತ್ತು ನಿಮಿಶ ಕಳೆಯುವಾಗ, ಮಗಳು ಟ್ರೇ ನಲ್ಲಿ ಎರಡು ಕಾಫಿ ಹಿಡಿದು ತಂದಳು,
’ಎರಡೇ ಇದೆ ನಿನಗೆ ?’ ಎಂದು ಕೇಳಿದೆ,
’ನನಗೆ ಕೂಲ್ಡ್ ಕಾಫಿ ಹೇಳಿರುವೆ, ಒಳಗೆ ಹೋಗುವಾಗ ತೆಗೆದುಕೊಳ್ಳುವೆ’ ಎಂದಳು

’ಸರಿ’ ಎನ್ನುತ್ತ, ಕಾಪಿ ತೆಗೆದು ಬಾಯಿಗಿಟ್ಟರೆ, ಕಾಫಿ ತರವೆ ಇಲ್ಲ!
ಎಂತ ಕೆಟ್ಟ ಕಾಫಿಯಾದರು, ಅದಕ್ಕೆ ಇರಬೇಕಾದ ಪ್ರಥಮ ಗುಣ ಬಿಸಿ. ಅದೇ ಇಲ್ಲ, ಸರಿ ಹೇಗೋ ಕುಡಿಯೋಣವೆಂದರೆ, ಸಕ್ಕರೆಯೆ ಇಲ್ಲ, ಮಗಳು ಹೇಳಿದಳು.
’ನೋಡಿ ಇಲ್ಲಿ ಸಕ್ಕರೆಯ ಪ್ಯಾಕೆಟ್ ಇದೆ, ಶುಗರ್ ಫ್ರೀ ಇದನ್ನು ಹಾಕಿಕೊಳ್ಳಿ ’
ನಾನು ಎರಡು ಮೂರು ಪೊಟ್ಟಣ್ಣಗಳನ್ನು ಕತ್ತರಿಸಿ ಸುರುವಿಕೊಂಡೆ, ಕಾಫಿ ಕಡಿಮೆ ಎಂದರು 250 ml ಇತ್ತಲ್ಲ ಅದನ್ನು ಕುಡಿಯಲು. ಕಾಫಿ ಎಂಬ ಹೆಸರಿನ , ಕಾಫಿಯ ರೀತಿಯಲ್ಲಿ ಇಲ್ಲದ ಪೇಯವನ್ನು ನಾನು ಹಾಗು ನನ್ನ ಪತ್ನಿ ಗುಟುಕರಿಸುತ್ತಿರುವಂತೆ, ಮಗಳನ್ನು ಸುಮ್ಮನೆ ಕೇಳಿದೆ .
’ಇಲ್ಲಿ ಕಾಫಿ ಎಷ್ಟು ?"
’ಇದು ನೂರು ರುಪಾಯಿ, ಕೂಲ್ಡ್ ಇರುವುದು ನೂರಾ ಐವತ್ತು ರುಪಾಯಿ’ ತಣ್ಣಗೆ ಹೇಳಿದಳು,
ನನ್ನ ಪತ್ನಿಯ ಕೈಲಿದ್ದ ಲೋಟ ತುಳುಕಿ ಸ್ವಲ್ಪ ಕಾಫಿ ಕೆಳಗೆ ಚೆಲ್ಲಿತು,

ಅವಳು ತಕ್ಷಣ ನುಡಿದಳು. ’ಅಯ್ಯೋ , ಮುನ್ನೂರ ಐವತ್ತು ರುಪಾಯಿಯೆ ! ಹೆಚ್ಚು ಕಡಿಮೆ ನಮ್ಮ ಮನೆಯ ಒಂದು ತಿಂಗಳ ಕಾಫಿ ಖರ್ಚು ! ’

ನಾನು ಯಾರಾದರು ನಮ್ಮನ್ನು ನೋಡಿದರ ಎಂದು ಸುತ್ತಲೂ ನೋಡಿದೆ, ಅದೇ ಜನ, ಹೆಂಗಸರು ಮಕ್ಕಳು ಹರಟುತ್ತ ಇದ್ದರೆ , ಗಂಭೀರವಾಗಿದ್ದ ಗಂಡಸರು, ಬುದ್ದನಿಗೆ ಜ್ಞಾನೋದಯ ಆದಂತೆ ತಕ್ಷಣ ಹೊಳೆದುಬಿಟ್ಟಿತು, ಅಲ್ಲ ಈ ರೀತಿ ’ತಲೆ ಬೋಳಿಸುವ’ ಪರಿಯಲ್ಲಿ ’ಮನೆಹಾಳು’ ದರಗಳಿದ್ದರೆ, ಮಧ್ಯಮವರ್ಗದ ಯಾವ ಗಂಡಸಿನ ಮುಖದಲ್ಲಿ ತಾನೆ ನಗು ಇರುತ್ತೆ ಹೇಳಿ. ಅದನ್ನು ನೆನೆಯುವಾಗ ನನ್ನ ಮುಖದಲ್ಲಿ ನಗು ತೇಲಿತು
’ಅಪ್ಪನಿಗೆ ಮಾಲ್ ತುಂಬಾ ಹಿಡಿಸಿದಂತಿದೆ’ ಮಗಳ ಪ್ರತಿಕ್ರಿಯೆ.
ಸರಿ , ಅಲ್ಲಿಂದ ಸ್ಕ್ರೀನ್ ಒಂದನೆ ಥಿಯೇಟರಿಗೆ ಪ್ರವೇಶಿಸಿದೆವು, ಒಳಗೆ ಕುಳಿತರೆ, ತಣ್ಣಗೆ, ಅಹಾ ನಿದ್ದೆ ಮಾಡಲು ಎಂತ ಸುಖವಾದ ಜಾಗ.

ಹಾಗೂ ಹೀಗು ಸಿನಿಮಾ ಮುಗಿಸಿ, ಕೆಳಗಡೆ ವಾಹನೆ ನಿಲುಗಡೆಗೆ ಬಂದರೆ ಇದೆಂತದು, ಒಳಗಡೆ ಬರುವಾಗ ಸುಖವಾಗಿ ಬಂದಿದ್ದೆವು, ಈಗ ಹೊರಗೆ ಹೋಗಲು ದೊಡ್ಡ ಕ್ಯೂ !!

ಗಂಟೆಯ ಲೆಕ್ಕದಲ್ಲಿ ಅಲ್ಲಿ ವಾಹನ ನಿಂತಿದ್ದಕ್ಕೆ ದಂಡ ಕಟ್ಟಬೇಕು !

ಮನೆಗೆ ಬಂದಾಗ ಮಗಳು ಕೇಳಿದಳು
’ಅಪ್ಪ ಹೇಗಿತ್ತು ಮಾಲ್ ಅನುಭವ’
’ಓಹೋ ..... ತೊಂದರೆಯಿಲ್ಲ , ಫಸ್ಟ್ ಕ್ಲಾಸ್ ’ ಎಂದೆ ,
’ಕಾಸೂ ಹಾಳು ತಲೇನೂ ಬೋಳು ’ ಎನ್ನುವ ಹಳೆಯ ಗಾದೆಯೊಂದು ನೆನಪಿಗೆ ಬಂದಿತು.

ಪತ್ನಿ ಇನ್ನು ಕಾಫಿಯನ್ನು ನೆನೆದು ಶಾಪ ಹಾಕುತ್ತಿದ್ದಳು, ’ಇಷ್ಟೊಂದು ಮೋಸ ಅವಳು ಉದ್ದಾರ ಆಗಲ್ಲ ಬಿಡಿ’
(ವಿ.ಸೂ.: ಕಾಫಿ ಕ್ಯಾಂಟಿನ್ ನಲ್ಲಿದ್ದ ಹೆಣ್ಣಿನ ಬಗ್ಗೆ )

.... ಮುಗಿಯಿತು.....

ಅಯ್ಯೋ ತಡೀರಿ ಮುಗಿದಿಲ್ಲ,
ಸಿನಿಮಾ ಬಗ್ಗೆ ಹೇಳಲೇ ಇಲ್ಲ ಅಲ್ಲವೆ ಈಗೆಲ್ಲ ಸಿನಿಮಾ ತೆಗೆಯಲು ಎಷ್ಟೊಂದು ಅನುಕೂಲಗಳಿವೆ, ಕಣ್ಣಿಗೆ ಹಿತವೆನಿಸುವ ದೃಷ್ಯ ವೈಭವಗಳು. ಹಲವು ’ಟ್ರಾಕ್ ’ ಗಳಲ್ಲಿ ಸಂಗ್ರಹಿಸಬಹುದಾದ ದ್ವನಿ ವ್ಯವಸ್ಥೆ. ರೀಲ್ ಸುತ್ತದೆಯೆ, ಸೆಟಲೈಟ್ ಮೂಲಕವೆ ಸಿನಿಮಾ ಬಿಡುಗಡೆ ಮಾಡಬಹುದಾದ ತಾಂತ್ರಿಕ ಜ್ಞಾನ . ಅತ್ಯುನ್ನತ ಎನ್ನಿಸಬಹುದಾದ ಸ್ಟುಡಿಯೋಗಳು. ಬೇಕೆಂದ ದೇಶಕ್ಕೆ ಹೋಗಿ ಸಿನಿಮಾ ಶೂಟ್ ಮಾಡಬಹುದಾದ ಅನುಕೂಲಕರ ವ್ಯವಸ್ಥೆ. ಉತ್ತಮ ಗುಣಮಟ್ಟದ ಥಿಯೇಟರ್ ಗಳು. ಎಲ್ಲವು ಎಲ್ಲವೂ .

ಆದರೂ ....
ನಾವು 
ನೋಡುತ್ತಿರುವುದಾದರು ಏನು. ಸಿನಿಮಾ ತೆಗೆಯುವುದು ಎನ್ನುವ ಕಾಯಕ ಕೇವಲ ನಾಯಕ ನಟನನ್ನು ವೈಭವೀಕರಿಸುವ ಕೆಲಸವೆ ?.

ಸಂಭಾಷಣೆಗಳೆಲ್ಲ ನಾಯಕನನ್ನು ಉತ್ತಂಗಕ್ಕೆ ಏರಿಸುವ ರೀತಿಯದು. ಹೊಡೆದಾಟವಾಗಲಿ ಮತ್ತೆ ಯಾವ ದೃಷ್ಯಗಳು ಅಷ್ಟೆ ನಾಯಕ ನಟನನ್ನು ಅತಿಮಾನವನನ್ನಾಗಿ ತೋರಿಸುವುದು. ಇನ್ನು ಸಿನಿಮಾ ಸಾಹಿತ್ಯ, ಹಾಗು ಹಾಡುಗಳು ಇವು ಯಾರಿಗೆ ಹಿಡಿಸುತ್ತದೆ ನನಗಂತು ಗೊತ್ತಿಲ್ಲ

ಹಾಡುಗಳಲ್ಲಿ ಕಾಣಿಸುವ ಅಬ್ಬರದ ಸಂಗೀತ. ನೆಲ ಅದುರುವಂತೆ ಮಾಡುವ ನೃತ್ಯಗಳು ಕಿವಿಯ ತಮಟೆಯ ಬಗ್ಗೆ ಹೆದರಿಕೆ ಮೂಡಿಸುತ್ತದೆ. ಕೋರಿಯೋಗ್ರಫಿ ಹೆಸರಿನಲ್ಲಿ ಅಸಂಬದ್ಧ ದೃಷ್ಯ ವೈಭವಗಳು.

ಯಾವ ಕನ್ನಡ ಸಿನಿಮಾಗು ಕತೆಯ ಅವಶ್ಯಕತೆಯೆ ಇಲ್ಲ ಎಂದು ಅವರೇ ನಿರ್ಧರಿಸಿಕೊಂಡು ಬಿಟ್ಟಿದ್ದಾರೆ. ಒಂದು ದೃಶ್ಯಕ್ಕೂ ಮತ್ತೊಂದಕ್ಕು ತರ್ಕಬದ್ಧವಾಗಿ ಯಾವುದೇ ಸಂಬಂಧವಿರುವದಿಲ್ಲ. ಹಾಸ್ಯ ಎನ್ನುವ ಅಪಹಾಸ್ಯವನ್ನು , ಅಸಹ್ಯಭಾವಗಳನ್ನು , ವಿಕೃತ ರೀತಿಯ ಸಂಭಾಷಣೆಗಳನ್ನು ಹಾಸ್ಯ ಎಂದು ತೋರಿಸುತ್ತಾರೆ. ನಾಯಕ ನಟರು ತಮ್ಮ ವಯಸ್ಸಿಗೆ ತಕ್ಕ ಗಾಂಭೀರ್ಯವನ್ನು , ನಟನೆಯನ್ನು ಅಳವಡಿಸಿಕೊಳ್ಳುವುದು ಯಾವಾಗ ?.

ಇನ್ನು ಅಭಿನಯ ! ಆ ಬಗ್ಗೆ ಬೇಡ ಬಿಡಿ.

ಇವೆಲ್ಲ ರನ್ನ ಸಿನಿಮಾ ಬಗೆಗಿನ ವಿಮರ್ಷೆಯಲ್ಲ !

ಈಗಿನ ಕನ್ನಡ ಸಿನಿಮಾಗಳ ಪರಿಸ್ಥಿತಿ !!! :-(

ಹೋಗಲಿ ಬಿಡಿ. ರನ್ನನ ಬಗ್ಗೆ ಹೇಳುವದಾದರೆ
ಸಣ್ಣ ಡೌಟು.
ನಾಯಕನ ತಾತ ಪ್ರಕಾಶ್ ರೈ , ಒಮ್ಮೆಲೆ ತಂಗಿಯ ಮೇಲೆ ತಂಗಿಯ ಗಂಡನ ಮೇಲೆ , ಹಾಗು ಸೊಸೆಯ ಮೇಲೆ ಗುಂಡುಗಳನ್ನು ಹಾರಿಸುತ್ತಾರೆ ಹಾಗು ಸೊಸೆ ಸತ್ತು ಸಹ ಹೋಗುತ್ತಾಳೆ, ಆದರೆ ಕಾನೂನು ಯಾವ ಕೆಲಸವನ್ನು ಮಾಡುವದಿಲ್ಲ. ಕೋಟ್ಯಾದಿಪತಿ ಪ್ರಕಾಶ್ ರೈ, ಇಪ್ಪತೈದು ವರ್ಷಗಳ ಕಾಲ ಕುರ್ಚಿಯ ಮೇಲೆ ಹಾಯಾಗಿ ಕುಳಿತಿರುತ್ತಾರೆ. ಮನೆಯಲ್ಲಿ ಒಬ್ಬ ಲಾಯರ್ ಇರುವಾಗ! ಇದು ಯಾವ ಸಂದೇಶ ಬೀರುತ್ತದೆ ತಿಳಿಯಲಿಲ್ಲ.
ಇನ್ನೊಂದು ದೊಡ್ಡ ಡೌಟು
ಸಿನಿಮಾಗೆ ’ರನ್ನ’ ಅಂತ ಹೆಸರನ್ನ ಏತಕ್ಕೆ ಇಟ್ಟರು ತಿಳಿಯಲೇ ಇಲ್ಲ !

ಜೈ ಕನ್ನಡಾಂಭೆ !

Comments

Submitted by venkatb83 Wed, 06/24/2015 - 19:59

In reply to by bhalle

ಮೊದಲಿಗೆ-ನೀವು ಇದ್ನ ಅಮೇರಿಕದಲ್ಲಿ ನೋಡಿದೀರಾ ಅನ್ಕನ್ದಿದ್ದೆ ..!! ಯಾಕೆಂದ್ರೆ ಇವ್ರು ಇಲ್ಲಿ ಹೇಳ್ತಾರೆ - ಅಮೆರಿಕ ಇಂಗ್ಲೆಂಡು ನಲ್ಲೂ ನಂ ಚಿತ್ರ ರಿಲೀಜ್ ಆಗಿದೆ ಅಂತಾರೇದ್ಕೆ ಹಾಗ್ ಅಂದ್ ಕಂಡೆ
ಅದ್ನ ನೀವು ನಮ್ಮ ಕರುನಾಡಲ್ಲಿ ನೋಡಿ ..
ಮಾಲು ದೋಖಾ ವ್ಯಾಪಾರ ಅನುಭವ ಕೇಳಿ ಬೇಜಾರಾಯ್ತು..
ಮಾಲುಗಳಲ್ಲಿ ನಾವ್ -ಮಾಡೋದು ಬರೀ ವಿಂಡೋ ಶಾಪಿಂಗೂ...!! ಮೊನ್ನೆ ಮಾತ್ರ ಮಂತ್ರಿ ಮಾಲಲ್ಲಿ ಶಾಪಿಂಗ್ ಮಾಡಿದೆ ಅದ್ಕೆ ಆಗಿದ್ದು 3 ಸಾವಿರ-ಅದು ಗುಣಮಟ್ಟದ ಬಟ್ಟೆಗಳಿಗೆ.. ಇನ್ನೂ ಈ
ಚಿತ್ರದ ಬಗ್ಗೆ ಇದು ತೆಲುಗು ರೀಮೇಕ್ ಚಿತ್ರಾನ್ನ..!!
ಅಲ್ಲಿನ ವಾತಾವರಣಕ್ಕೆ ಒಗ್ಗುತ್ತೆ-ಅಲ್ಲಿ ಟಾಪ್ ಸ್ಟಾರ್ ಇದ್ರೂ ಓವರ್ ಯಾಕ್ಷನ್ ಬಿಲ್ದಪ್ ಇಲ್ಲ-
ಇಲ್ಲಿ ಮಾತ್ರ ಅದ್ಯಾಕ್ ಹಾಗ್ ಮಾಡಿದರೋ..!
ಅಲ್ಲಿ ಆ ಚಿತ್ರ ನೂರಾರು ಕೋಟಿ ಗಳಿಸಿದೆ.
ಇಲ್ಲಿಯೂ ಹಿಟ್ ಅಂತಿದಾರೆ- ಅದು ಕನ್ನಡದ ಹಿಟ್ಟೋ ?
ಆಂಗ್ಲ ಭಾಷಾ ಹಿಟ್ ಓ ಗೊತ್ತಿಲ್ಲ..!! ಬಹು ದಿನಗಳ ನಂತರ ಸಿನೆಮಾ ನೋಡೋಕ್ ಹೋದ ನಿಮಗೆ ಈ ಅನುಭವ ಕಹಿ ಆಯ್ತೇನೋ..!! ಅದ್ಕೆ ಇಟ್ಟ ಹೆಸರು ಅಡ್ಕೆಗೆ ಒಪ್ಪುತ್ಟ್ತೆ ಅವ್ರೆ ಹೇಳ್ಬೇಕು..ನಮ್ಮವರೇ ನಮ್ಮ ಮಹಾನ್ ಸಾಹಿತಿಗಳಿಗೆ ಹೀಗೆ ಅಪಚಾರ ಮಾಡೋದ? ಶುಭವಾಗಲಿ

\||||/

Submitted by mnsrao Thu, 06/25/2015 - 12:58

ಹತ್ತು-ಹದಿನೈದು ವರ್ಷಗಳ ಹಿಂದೆ ಅಮೇರಿಕದಲ್ಲಿ ಐ.ಟಿ.ಕೆಲಸದಲ್ಲಿದ್ದ ಮಕ್ಕಳು ವಯಸ್ಸಾದ ತಂದೆ ತಾಯಿಯರಿಗೆ ಅಮೇರಿಕಕ್ಕೆ ಕರೆಸಿಕೊಂಡಾಗ ಈ ಕೌತುಕವನ್ನು ತೋರಿಸಲು ಪ್ರಯತ್ನಪಡುತ್ತಿದ್ದರು. ಈಗ ನಿಮ್ಮ ಊರಲ್ಲೇ ತೋರಿಸುತ್ತಿದ್ದಾರೆ. ನೀವೇ ನೀವಾಗಿ ಇದನ್ನು ಅನುಭವಿಸಲು ಹಿಂಜರಿಯುತ್ತೀರಲ್ಲವೇ? ಓಂದು ಏನಪ್ಪಾ ಅಂದರೆ ನೀವು ನಿಮ್ಮ ಗೂಡಿನಲ್ಲೇ ಇದ್ದೀರ, ಅವರು ಗಗನದಲ್ಲಿ ಹಾರಾಡುತ್ತಿದ್ದಾರೆ, ಅಷ್ಟೇ!

Submitted by ಗಣೇಶ Mon, 07/20/2015 - 00:17

ಪಾರ್ಥರೆ,
ಬೆಂಗಳೂರಿಗೆ ನಾನು ಬಂದ ಹೊಸತು. ಇಲ್ಲಿನ ನೂರಕ್ಕೂ ಮೀರಿದ ಚಿತ್ರಮಂದಿರಗಳು. ತಂದೆಯವರು ಊರಿಂದ ಬಂದಾಗ ಎಮ್.ಜಿ. ರೋಡ್‌ನ ದೊಡ್ಡ ಥಿಯೇಟರ್‌ನಲ್ಲಿ ಸೂಪರ್ ಹಿಟ್ ಇಂಗ್ಲೀಶ್ ಸಿನೆಮಾ ತೋರಿಸಲು ಕರಕೊಂಡು ಹೋಗಿದ್ದೆ. ಅವರಿಗೆ ಸ್ವಲ್ಪವೂ ಇಷ್ಟವಾಗಲಿಲ್ಲ...ದಾರಿಯುದ್ದಕ್ಕೂ ದುಡ್ಡು ದಂಡ...ಇತ್ಯಾದಿ ಬೈಗಳು. ಹೋಟಲ್‌ಗೆ ಹೋದಾಗಲೂ ಇದೇ ಕತೆ.
ಮಗಳು ಹೆಂಡತಿಯೊಂದಿಗೆ ಮಾಲ್‌ನಲ್ಲಿ ಈಗ ಸಿನೆಮಾ ನೋಡುವಾಗ... ಅಪ್ಪನ ಸ್ಥಾನದಲ್ಲಿ ನಾನು- ಅವರು ಬಾಯಿಬಿಟ್ಟು ಹೇಳಿದ್ದು, ನಾನು ಮನದೊಳಗೇ ಅಂದುಕೊಂಡೆ..
**********
ಪಾರ್ಥರೆ, ಕನ್ನಡ ಸಿನೆಮಾದ ಬಗ್ಗೆ ನೀವು ಹೇಳಿದ್ದರಲ್ಲಿ ಸ್ವಲ್ಪ ತಪ್ಪಿದೆ->>ಹಾಡುಗಳಲ್ಲಿ ಕಾಣಿಸುವ ಅಬ್ಬರದ ಸಂಗೀತ.....
ಎಲ್ಲಿದೆ ಸಂಗೀತ...ಒಂದೇ ರಾಗ ಡುಂ ಡುಮ್..ಡಂಕಣಕರ...ಒಂದೇ ತರಹ, ಲಿರಿಕ್ಸ್ ಮಾತ್ರ ಬೇರೆ.
ಉಳಿದ ಎಲ್ಲಾ ವಿಷಯಕ್ಕೂ ನನ್ನ ಪೂರ್ಣ ಬೆಂಬಲ.
***********
ಬ್ಲಾಕ್ ಟಿಕೆಟ್ ಮಾರುವವರಿಗೆ ೨೦ರೂ ಜಾಸ್ತಿ ಕೊಡಲು ಒಪ್ಪದೇ ಹಿಂದೆ ಬರುತ್ತಿದ್ದ ಕಾಲವಿತ್ತು. ಈಗ ಆನ್ಲೈನ್ ಬುಕಿಂಗ್‌ಗೆ ಎಕ್ಸ್ಟ್ರಾ, ಕಾರ್ ಪಾರ್ಕಿಂಗ್, ತಿನಿಸುಗಳು... ಸಾಮಾನ್ಯನ ಒಂದು ತಿಂಗಳ ಸಂಬಳ ಒಂದು ಫ್ಯಾಮಿಲಿ ಮಾಲಲ್ಲಿ ಸಿನೆಮಾ ನೋಡಲು ಖರ್ಚಾಗುವುದು:(
ಅದಕ್ಕೇ ಸಿಲೆಕ್ಟ್ ಮಾಡಿ ಸಿನೆಮಾ ಹೋಗುವುದು- ಭಜರಂಗಿ ಭಾಯಿಜಾನ್‌ನಲ್ಲಿ ಸಿಗೋಣ. :)