ಶಿಕ್ಷಕ ಎಂದರೆ ಯಾರು?

ಶಿಕ್ಷಕ ಎಂದರೆ ಯಾರು?

ಶಿಕ್ಷಕ ಎಂದರೆ ಯಾರು?
ಆದಿಗುರು ಶಂಕರಾಚಾರ್ಯರ ಪ್ರಶ್ನೋತ್ತರ ಮಾಲಿಕೆಯಲ್ಲಿ ಒಂದು ಪ್ರಶ್ನೆಯಿದೆ ಕೋ ಗುರು: ಗುರುವೆಂದರೆ ಯಾರು ಎಂದು, ಸದ್ವಿದ್ಯೆಯನ್ನು ಕಲಿಸಿದಾತನೆ ಗುರು ಸನ್ನಡತೆಯ ತೋರುವಾತನೆ ಗುರು. ಈ ಮೇಲಿನ ಉತ್ತರದಲ್ಲಿನ ಯಾವ ಅಂಶಗಳು ಆ ಶಿಕ್ಷಕನಲ್ಲಿದೆ (ಶಿಕ್ಷಕರೆಂದರೆ ಗುರು ಎನ್ನುವ ಅರ್ಥದಲ್ಲಿ ಬಳಸುತ್ತಿದ್ದೇನೆ). ಶಿಕ್ಷೆಯನ್ನು ಕೊಡುವಾತ ಗುರುವೇ? ಅಥವಾ ಶಿಕ್ಷಣವನ್ನು ಕೊಡುವಾತ ಗುರುವೇ? ಯಾರು ಗುರು? ಶಿಕ್ಷಣವನ್ನು ಕೊಡುವಾತ ಗುರುವಾಗುತ್ತಾನೆ. ಶಿಕ್ಷಣವೆಂದರೆ ...ಬೆಳಕಿನೆಡೆಗಿರುವ ದಾರಿ. ಯಾವುದು ಸತ್ಯ ಯಾವುದು ಮಿಥ್ಯ ಇವುಗಳ ತುಲನೆಯನ್ನು ಶಿಕ್ಷಣ ಕಲಿಸಿಕೊಡಬೇಕು, ಶಿಕ್ಷಣ ನಮ್ಮ ಬುದ್ಧಿಯನ್ನು ಚುರುಕುಗೊಳಿಸುವಂತಿರಬೇಕು, ತಪ್ಪುಗಳಾದಾಗ ತಿದ್ದಿಕೊಳ್ಳುವುದನ್ನು ಕಲಿಸುವಂತಿರಬೇಕು, ಅದೇ ರೀತಿ ತಪ್ಪುಗಳಾಗುತ್ತಿದೆ ಎಂದಾಗ ಅದರ ವಿರುದ್ಧ ತಾರ್ಕಿಕವಾಗಿ ವಾದಿಸಿ ಸರಿಯನ್ನು ಪ್ರಚುರಪಡಿಸುವಂತಿರಬೇಕು. ಇವೆಲ್ಲವನ್ನು ತಿಳಿಸುವವನಿಗೆ ಶಿಕ್ಷಕ ಎನ್ನಬಹುದು. ವಿದ್ಯೆಯನ್ನು ಅರ್ಥಿಸುವ ವಿದ್ಯಾರ್ಥಿಗೆ ಸರಿಯಾದ ದಾರಿಯನ್ನು ತೋರಿವವನೇ ಶಿಕ್ಷಕ.
ಶ್ರೋತ್ರಿಯೋ ವೃಜಿನೋಕಾಮಹತೋ ಯೋ ಬ್ರಹ್ಮವಿತ್ತಮಃ|
ಬ್ರಹ್ಮಣ್ಯುಪರತಃ ಶಾಂತೋ ನಿರಿಂಧನ ಇವಾನಲಃ|
ಅಹೇತುಕ ದಯಾಸಿಂಧುರ್ಬಂಧುರಾನಮತಾಂ ಸತಾಮ್
ತಮಾರಾಧ್ಯ ಗುರುಂ ಭಕ್ತ್ಯಾ ಪ್ರಹ್ವ-ಪ್ರಶ್ಯಯ-ಸೇವನೈಃ
ಪ್ರಸನ್ನಂ ತಮನುಪ್ರಾಪ್ಯ ಪೃಚ್ಛೇಜ್ಞಾತವೈಮಾತ್ಮನಃ
-ವಿವೇಕ ಚೂಡಾಮಣಿ
ಯಾವ ವ್ಯಕ್ತಿ ಶ್ರೋತ್ರಿಯನೊ ಪಾಪರಹಿತನೊ ಕಾಮವಿಲ್ಲದವನೊ ಬ್ರಹ್ಮವಿದರಲ್ಲಿ ಶ್ರೇಷ್ಠನೊ ಬ್ರಹ್ಮದಲ್ಲಿ ನೆಲೆಸಿರುವವನೊ, ಉರಿಯುವ ಶಾಂತ ಬೆಂಕಿಯಂಥವನೊ,ಯಾವ ಪ್ರತಿಫಲವನ್ನೂ ಬಯಸದೆ ದಯಾಸಿಂಧುವಾಗಿರುವವನೊ ನಮಿಸಿದ ಸಾಧುಗಳಿಗೆ ಬಂಧುವೊ ಅಂಥ ಗುರುವನ್ನು ಭಕ್ತಿಯಿಂದ ಆರಾಧಿಸಬೇಕು. ನಮ್ರತೆ ವಿನಯ ಸೇವೆ ಇವುಗಳಿಂದ ಪ್ರಸನ್ನನಾದ ಅವನ ಬಳಿಸಾರಿ ತಾನು ತಿಳಿಯಬೇಕು ಎಂದಿರುವುದನ್ನು ಕೇಳಿ ತಿಳಿದುಕೊಳ್ಳಬೇಕು. -
ಗುರುವಿನ ಲಕ್ಷಣಗಳು ಹೀಗಿವೆಯೆಂದಾದರೆ ಹೇಳಿರುವ ಆವ ಗುಣ ಆ ಶಿಕ್ಷಕನಲ್ಲಿ ಇದೆ. ಆತ ಶ್ರೋತ್ರಿಯನೇ (ಶ್ರೋತ್ರಿ ಎಂದರೆ ಆಸೆಗಳಿಲ್ಲದವನು ಪಾಪವಿಲ್ಲದವನು ಬ್ರಹ್ಮಜ್ಞಾನವನ್ನು ಅರಿತವನು ಎಂಬರ್ಥ) ಆಸೆಗಳಿಲ್ಲದವನೇ?, ತನ್ನ ಅಧಿಕಾರಕ್ಕಾಗೆ ಏನು ಬೇಕಾದರೂ ಮಾಡಲು ಸಿದ್ಧವಿರುವ ಆತನು ಪಾಪರಹಿತನಾ? ಶಾಂತಚಿತ್ತನೇ? (ಎಲ್ಲಿಯ ಶಾಂತತೆ ಇಡೀ ಸಮಾಜವನ್ನೇ ಅಶಾಂತಿಗೆ ದೂಡುವಾತ ಶಾಂತಿಪ್ರಿಯನಾಗಲು ಸಾಧ್ಯವಿಲ್ಲ), ಯಾವ ಪ್ರತಿಫಲವನ್ನೂ ಬಯಸದವನಾ? (ಇದು ಇನ್ನೂ ಅತ್ತತ್ತ, ಪ್ರತಿಫಲವಿಲ್ಲದೆ ಆತ ಏನನ್ನೂ ಮಾಡಲಾರ, ಮನ್ನಣೆಯ ದಾಹಕ್ಕೆ ಬಲಿಯಾದವನಲ್ಲಿ ಈ ಗುಣವಿರಲು ಸಾಧ್ಯವಿಲ್ಲ), ದಯಾಸಿಂಧುವೊ (ಇದನ್ನು ವಿಸ್ತರಿಸಬೇಕಿಲ್ಲ ಈಗಾಗಲೇ ಅವರ ದಯೆ ಗೊತ್ತಾಗಿದೆ) ನಮಿಸಿದ ಸಾಧುಗಳಿಗೆ ಬಂಧುವೊ (ಇದೂ ಅಲ್ಲ ಕ್ಷಮೆ ಕೇಳಿದರೂ (ಅದರ ಅವಶ್ಯಕತೆಯಿಲ್ಲದಿದ್ದರೂ) ಒಪ್ಪಿಕೊಳ್ಳದವ) ..... ಊಹೂ ಯಾವ ಕೋನದಿಂದಲೂ ಶಿಕ್ಷಕನಲ್ಲ .
ಇರಲಿ

ದಾರಿಯೆಂದರೆ... ಮತ್ತೆ ಪ್ರಶ್ನೆ. ಗುರು ತಾನು ಕಂಡುಕೊಂಡ ದಾರಿಯೆಂದೇ? ಅಥವಾ ರೂಢಿಯಲ್ಲಿ ಪ್ರಕೃತಿಯಲ್ಲಿ ಸಮಾಜದಲ್ಲಿ ಅನುಸರಿಸುತ್ತಿರುವ ದಾರಿಯೆಂದೇ? ಗುರುವನ್ನು ಗುರುವಾಗಿ ಸ್ವೀಕರಿಸುವುದು ಒಂದುಭಾಗ ಆದರೆ ಗುರುವೇ ಪೂರ್ವಾಗ್ರಹಪೀಡಿತನಾಗಿದ್ದರೆ ಅಂತಹವರನ್ನು ಗುರುವೆಂದು ಕರೆಯಲಾಗದು. ಸಮಾಜಘಾತುಕನಾದವನನ್ನು ಗುರುವೆಂದು ಕರೆಯಲಾಗುವುದಿಲ್ಲ, ಹಾಗೊಂದು ವೇಳೆ ಆತ ಗುರುಸ್ಥಾನವನ್ನು ಅಲಂಕರಿಸಿದ್ದೇ ಆದರೆ ಆತನ ಶಿಷ್ಯಬಳಗ ಸಮಾಜಘಾತುಕವಾಗುತ್ತದೆ (ಈಗಾಗಲೇ ಅಂತಹ ಘಾತುಕರು ಬಂದಿದ್ದಾರೆ). ಗುರುವು ತಾನು ಶಿಷ್ಯನಾಗಿದ್ದಾಗ ತನ್ನ ಗುರುವು ಹೇಳಿದುದನ್ನು ಶ್ರದ್ದೆ ಕೇಳಿಸಿಕೊಳ್ಳುತ್ತಾನೆ ನಂತರ ಅದನ್ನು ಪಾಲಿಸಲು ಆರಂಭಿಸುತ್ತಾನೆ, ಅವನ ದಾರಿ ಅವನ ಗುರುವು ಹಾಕಿಕೊಟ್ಟ ದಾರಿಯಲ್ಲಿ ನಡೆಯುವುದಾಗಿರುತ್ತದೆ. ಈ ನಡುವೆ ದಾರಿಯಲ್ಲಿ ಅನೇಕ ತಿರುವುಗಳು ಕವಲು ಬರುವ ಸಾಧ್ಯತೆಗಳಿರುತ್ತವೆ. ಅವುಗಳನ್ನು ಅಷ್ಟೇ ಸಮರ್ಥವಾಗಿ, ತರ್ಕಬಧವಾಗಿ ನಿರ್ಧರಿಸುವ ಜ್ಞಾನವನ್ನು ಗುರುವು ಕೊಟ್ಟಿರುತ್ತಾನೆ ಆದರೆ ಯಾವ ಅಜ್ಞಾನಕ್ಕೆ ಸಿಲುಕಿಯೋ ಅಥವಾ ವಿಷಯಾಕಾಂಕ್ಷೆಗೆ ಒಳಗಾಗಿಯೋ ಇವನು ಹೊರಟನೆಂದರೆ ಗುರುವಿಗೆ ಮಾಡುವ ದ್ರೋಹವದಾಗುತ್ತದೆ. ಗುರುವಾದವನು ಸಮಾಜದ ನಂಬಿಕೆಗಳನ್ನು ಮತ್ತು ಆಚರಣೆಗಳನ್ನು ಗೌರವಿಸಬೇಕಾಗುತ್ತದೆ ಮತ್ತು ಅದನ್ನು ಒರೆಗೂ ಹಚ್ಚಬೇಕಾಗುತ್ತದೆ. ಹಾಗೆ ಹಚ್ಚುವಾಗ ಆಚರಿಸುವವರ ಮನಸ್ಸಿಗೆ ನೋವಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಅದರೊಳಗೆ ಮೌಢ್ಯವನ್ನು ಕಂಡಾಗ ಅದನ್ನು ಸಕಾರಣವಾಗಿ ಸಾತ್ವಿಕವಾಗಿ ಹೇಳಬೇಕಾಗುತ್ತದೆ, ವ್ಯಗ್ರವಾಗಲ್ಲ. ಅದರಲ್ಲಿ ಸತ್ಯವನ್ನು ಕಂಡವರು ಅದನ್ನು ಆಚರಿಸುತ್ತಾರೆ ಇಲ್ಲದವರು ವಿರೋಧಿಸುತ್ತಾರೆ, ಆ ವಿರೋಧಗಳಿಗೂ ಆತ ಸಾತ್ವಿಕವಾಗಿಯೇ ಉತ್ತರಿಸಬೇಕಾಗುತ್ತದೆ. ದಾರಿಯೆಂದರೆ....... ತಾನು ನೋಡುವ ಕಣ್ಣುಗಳಿಂದ ಕಂಡುಕೊಂಡ ದಾರಿಯಲ್ಲ ಸತ್ಯದ ಕಣ್ಣುಗಳಿಂದ ದರ್ಶಿಸಿದ್ದು ದಾರಿಯಾಗುತ್ತದೆ.
ಇಡೀ ಯುವಪೀಳಿಗೆಯನ್ನು ವಿದ್ಯಾರ್ಥಿಗಳೆಂದು ತಾನೊಬ್ಬ ಶಿಕ್ಷಕನೆಂದುಕೊಳ್ಳುವುದು ಅಹಮ್ಮಿನ ಮೆಟ್ಟೆಲು, ಗುರುವಾದವನು ಶಿಷ್ಯನನ್ನು ಆರಿಸಿಕೊಳ್ಳುವುದು ಹೇಗೋ ಅದೇ ರೀತಿ ಗುರುವನ್ನು ಕೂಡ ಪರೀಕ್ಷಿಸಿ ಆರಿಸಿಕೊಳ್ಳುವುದೂ ಶಿಷ್ಯ ಸಂಪ್ರದಾಯ. ಇದ್ಯಾವುದೂ ಇಲ್ಲದೆ ಅದು ಹೇಗೆ ಒಬ್ಬ ವ್ಯಕ್ತಿ ಶಿಕ್ಷಕನಾಗುತ್ತಾನೆ? ಮತ್ತೊಂದು ಅಂಶವೆಂದರೆ ’ಸಂಕಟ’ದ್ದು. ಅವಕಾಶವಾದದ ಸಂಕಟ ಮೊಸಳೆ ಕಣ್ಣೀರು. ಇದು ನಿಚ್ಚಳವಾಗಿ ಕಾಣುತ್ತಿದೆ. ಶಿಕ್ಷಣವೀಯುವವನು ಶಿಕ್ಷಕನಾಗುತ್ತಾನೆ. ತಪ್ಪಿದ್ದರೆ ತಿದ್ದುವವನು ಶಿಕ್ಷಕನಾಗುತ್ತಾನೆ, ರಕ್ಷಣೆಗರ್ಹನಾದವನನ್ನು ರಕ್ಷಿಸುವವನು ಶಿಕ್ಷಕನಾಗುತ್ತಾನೆ.ಇಲ್ಲದಿದ್ದವರು ..... ಭಯೋತ್ಪಾದಕರಾಗುತ್ತಾರೆ. ಈ ಸಂದರ್ಭದಲ್ಲಿ ಭತೃಹರಿ ನೆನಪಾಗುತ್ತಾನೆ.
ಪುರಾ ವಿದ್ವತ್ತಾಸೀದು ಪರಮವತಾಂ ಕ್ಲೇಶಹತಯೇ|
ಗತಾಕಾಲೇನಾಸೌ ವಿಷಯಸುಖಸಿದ್ಧೈ ವಿಷಯಿಣಾಂ|
ಇದಾನೀಂ ಸಂಪ್ರೇಕ್ಷ್ಯಕ್ಷಿತಿಭುಜಝ್ ಶಾಸ್ತ್ರೀವಿಮುಖಾ|
ನಹೋ ಕಷ್ಟಂ| ಸಾಪಿ ಪ್ರತಿದಿನೋಧೋಧಃ ಪ್ರವಿಶತಿ||
ಹಿಂದಿನ ಕಾಲದಲ್ಲಿ ವಿದ್ಯೆ ಜ್ಞಾನಗಳು ಪಂಡಿತರ (ವಿವೇಕಿಗಳ) ಕ್ಲೇಶ ಗಳನ್ನು ನಿವಾರಿಸಲು ಸಹಾಯವಾಗುತ್ತಿತ್ತು. ಕಾಲ ಪರಿವರ್ತನೆಯಾದಂತೆ ಸ್ವಾರ್ಥೀ ವಿಷಯಲೋಲುಪರ ವಿಷಯ(ದುರಾಸೆ ನೀಚತನ)ಸುಖಗಳಿಗೆ ಸಹಾಯವಾಗುತ್ತಿದೆ. ಈಗಂತೂ ರಾಜರೂ ಈ ಶಾಸ್ತ್ರ ಧರ್ಮಗಳಿಂದ ವಿಮುಖರಾಗುತ್ತಿರುವುದರಿಂದ ಅಯ್ಯೋ ಕಷ್ಟ ಕಷ್ಟ! ವಿದ್ಯೆಯು ದಿನದಿನವೂ ಪಾತಾಳಕ್ಕಿಳಿಯುತ್ತಿದೆಯಲ್ಲ. ಎನ್ನುತ್ತಾನೆ ಭರ್ತೃ ಹರಿ
ದುರ್ಜನಃ ಪರಿಹರ್ತವ್ಯೋ ವಿದ್ಯಯಾಲಂಕೃತೋಪಿ ಸನ್|
ಮಣಿನಾ ಭೂಷಿತಃ ಸರ್ಪ ಕಿಮಸೌನ ಭಯಂಕರಃ

Comments

Submitted by kavinagaraj Thu, 07/12/2018 - 21:47

ನಿಜಗುರುಗಳ ಅಗತ್ಯವಿದೆ; ಅಂತಹ ಗುರುಗಳನ್ನು ಬಯಸುವ ಶಿಕ್ಷಾರ್ಥಿಗಳೂ ಅಗತ್ಯವಿದ್ದಾರೆ! ಒಳ್ಳೆಯ ಲೇಖನ.
ಆಳವಿಹ ಸಾಗರವ ಹಡಗು ದಾಟಿಸಬಹುದು
ಭವಸಾಗರವ ದಾಟೆ ಅರಿವ ಜಹಜಿರಬೇಕು |
ದಾರಿ ತೋರುವ ಗುರುಕರುಣೆಯಿರಬೇಕು
ದಾಟಬೇಕೆಂಬ ಮನ ಬೇಕು ಮೂಢ ||