ಸಂಬಂಧಗಳ ಸಾಯಿಸಿ, ಸತ್ತು ಹೋದೆನೇ ನಾನೂ?................

ಸಂಬಂಧಗಳ ಸಾಯಿಸಿ, ಸತ್ತು ಹೋದೆನೇ ನಾನೂ?................

ಟೇಬಲ್ ಮೇಲೆ ಟೀ ಇಟ್ಟು, ಪಕ್ಕದಲ್ಲಿ ಬಿಲ್ ಇಟ್ಟು ಮುಖ ನೋಡುತ್ತ ನಿಂತ ಆ ಹೋಟೆಲಿನ ವೇಟರ್. ನಾನು ಅವನಿಗೆ ಬಿಲ್ ಕೊಟ್ಟು ಟೀ ಹೀರತೊಡಗಿದೆ.
        ಸುತ್ತಲೂ ಎತ್ತ ನೋಡಿದರೂ ಜನಜಂಗುಳಿಯಿಂದ ತುಂಬಿದ್ದ ಊರಿನಲ್ಲಿ ನಾನೀವಾಗಲೂ ಒಂಟಿಯಾಗಿಯೇ ಇದಿನಿ ಎನ್ನುವ ಭಾವನೆ ನನ್ನ ತುಂಬಿ ಹೋಗಿದೆ. ಈಗ ತಾನೇ ಟೀ ಕೊಟ್ಟು ಹೋದ ಹುಡುಗ ಮಾಡಿದ ಕೆಲಸ ಕಾಸಿಗಾಗಿ. ನಾನು ಅವನಿಗೆ ಕಾಸು ಕೊಡುವವರೆಗೂ ಮಾತ್ರವೇ ನನ್ನ ಅವನ ಸಂಬಂಧ, ನಂತರ ಅವನ್ಯಾರೋ ನನಗೆ, ನಾನ್ಯಾರೋ ಅವನಿಗೆ.....
        ಹೀಗೆ ಒಂದೊಂದೆ ಗುಟುಕು ಟೀ ಹೀರುತ್ತ ಈ ಸಂಬಂಧದ ಸುರುಳಿ ನನ್ನ ಮನಸ್ಸಿನಲ್ಲಿ ಬಿಚ್ಚತೊಡಗಿತು. ಕೆಲವೇ ಕೆಲವು ವರ್ಷಗಳ ಹಿಂದೆ ಇದೇ ಟೀ ಕುಡಿಯಲು ನಾನು ಏನೇಲ್ಲ ನಾಟಕ ಮಾಡುತ್ತಿದ್ದೆ. “ಅಮ್ಮಾ, ತಲೆ ನೋವಮ್ಮ ಟೀ ಕೊಡು” ಎಂದೋ ಅಥವಾ “ಅಮ್ಮ ಓದ್ಕೋಬೇಕು ಟೀ ಕೊಡು” ಎಂದೋ ಅಮ್ಮನ ಹಿಂದೆನೇ ಅಲೆಯುತ್ತಿದ್ದೆ. ಆದರೆ ಈಗ ಟೀ ಕುಡಿಯೋಕೆ ನಮ್ಮವರು ಯಾರೂ ಬೇಕಾಗಿಲ್ಲ, ದುಡ್ಡು ಕೊಟ್ಟರೇ ಯಾರೂ ಬೇಕಾದರೂ ನಮ್ಮವರಾಗಿ ಟೀ ಕೊಟ್ಟು ಬಿಡುತ್ತಾರೆ ನೋಡಿ.
        ಈ ಸಂಬಂಧ ಬರಿ ಟೀಯೊಂದಿಗೆ ,ಮಾತ್ರ ಬೆಸೆದುಕೊಂಡಿಲ್ಲ. ಅದು ಬೆಳಗ್ಗೆ ಹಾಸಿಗೆಯಿಂದ ಅಮ್ಮ ನನ್ನನ್ನು ಎಬ್ಬಿಸುವುದರಿಂದ ಹಿಡಿದು, ರಾತ್ರಿ ಅಜ್ಜಿ ನನಗೆ ಕಥೆ ಹೇಳಿ ಮಲಗಿಸುವವರೆಗೆ ನನ್ನ ಸಂಗಂಡವೇ ಸುತ್ತಿಕೊಂಡಿತ್ತು, ಒಂದಾನೊಂದು ಕಾಲದಲ್ಲಿ. ಆದರೆ ಈಗ ಅದೇ ಅಮ್ಮನ ಜಾಗದಲ್ಲಿ ಅಲಾರಾಂ, ಅಜ್ಜಿಯ ಜಾಗದಲ್ಲಿ ವಾಟ್ಸ್ ಆ್ಯಪ್, ಫೇಸ್ ಬುಕ್.....
        ಕಾರಣ ಇಷ್ಟೇ, ನಾನು ಜೀವನದಲ್ಲಿ ಮಹತ್ತರವಾದುದೆನನ್ನಾದರೂ ಸಾಧಿಸೋಕೆ ಊರು ಬಿಟ್ಟು ಊರು ಬಂದು ಇಲ್ಲೆಲ್ಲೋ ನೆಲೆ ನಿಂತಿರುವೆ. ಇಲ್ಲಿ ಯಾರೂ ನನ್ನವರಲ್ಲಾ ಆದರೂ ಎಲ್ಲರೂ ನನ್ನವರೇ ಎಂಬ ಭಾವನೆಯಿಂದ ಬದುಕುತ್ತಿರುವೆ ನಾನು. ಏಕೆಂದರೆ ಮನೆಯಲ್ಲಿ ನನಗಿದ್ದ ವಾತಾವರಣ ಕಾರಣ.
        ಆಗ ಬೆಳಗ್ಗೆ ಎಣ್ಣೆ ಸ್ನಾನ, ತಿಂಡಿಗೆ ಅಕ್ಕ ಮಾಡಿದ ಉಪ್ಪಿಟ್ಟು. ಅಪ್ಪನ ಜೊತೆ ಹೊಲಕ್ಕೆ ಹೋದರೆ ಮಧ್ಯಾಹ್ನ ಅಮ್ಮ ಬುತ್ತಿ ಕಟ್ಟಿಕೊಂಡು ಬರೋಳು. ಸಂಜೆ ಅಮ್ಮನ ಜೊತೆ ಹರಟೆ ಹೊಡೆಯುತ್ತಾ ಟೀ ಕುಡಿಯುವುದರ ಮಜವೇ ಬೇರೆ. ರಾತ್ರಿ ಅಜ್ಜಿ ಹೇಳುವ ಕಥೆ ಕೇಳುತ್ತಾ ಬೆಳದಿಂಗಳಲ್ಲಿ ಮಲಗಿಕೊಂಡು ಬಿಟ್ಟರೆ ನಿದ್ದೆಯಲ್ಲಿ ನಾನೇ ರಾಜ........
        ಗೆಳೆಯರ ಜೊತೆ ಹೊರಗೆಲ್ಲೋ ಸುತ್ತಾಡಿ, ಸಂಬಂಧಿಕರ ಮನೆಯಲ್ಲಿ ಹಬ್ಬಕ್ಕೋ ಹರಿದಿನಕ್ಕೊ ಅಥವಾ ಇನ್ಯಾವುದೇ ವಿಶೇಷ ದಿನಗಳಲ್ಲಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಅಲ್ಲಾ ಅಲ್ಲಾ, ಕಾರ್ಯಕ್ರಮಗಳು ಸಾಗುತ್ತಿದ್ದುದ್ದೇ ನಮ್ಮಿಂದಾಗಿ. ಊರಲ್ಲಿಯ ಜಾತ್ರೆಯಲ್ಲಿ ತೇರನ್ನೆಳೆದು, “ಮಾವನ ಮಗಳ ಜೊತೆ ಮದುವೆ ಮಾಡ್ಲೇನೋ” ಎಂದು ಅಜ್ಜ ಆಗಾಗ ರೇಗಿಸುತ್ತಿದ್ದಾಗ ಇದ್ದ ಖುಷಿ, ಈಗೆಲ್ಲೋ ಕಳೆದೆ ಹೋಗಿ ಬಿಟ್ಟಿದೆ.
        ಸಾಧನೆ ಸಾಧನೆ ಅಂತಾ ಸಾಧನೆಯ ಹಿಂದೆ ಬಿದ್ದು ನಮ್ಮವರನ್ನೆಲ್ಲಾ ಬಿಟ್ಟು ಬಂದ ಮೇಲೆ, ಇಲ್ಲಿಯ ಜೀವನಕ್ಕೆ, ಇಲ್ಲಿಯ ಪರಿಸ್ಥಿತಿಗೆ ನಾನು ತಾನಾಗೇ ಹೊಂದಿಕೊಂಡು ಬಿಟ್ಟಿದಿನಿ. ಬೆಳಗ್ಗೆ ಎದ್ದು ವಾಕಿಂಗ್, ಆಮೇಲೆ ಆಫೀಸ್, ಸಂಜೆ ಒಂದಷ್ಟು ಹೊತ್ತು ರೂಮ್ ಮೇಟ್ ಜೊತೆ ಹರಟೆ, ರಾತ್ರಿ ವಾಟ್ಸ್ ಆ್ಯಪ್ ಸ್ನೇಹಿತರ ಜೊತೆ ಹರಟೆ, ನಂತರ ಆ ದಿನಕ್ಕೆ ಶುಭಂ.
        ಇಲ್ಲಿ ಬಂದಿದ್ದು ಏನಾದರೂ ಸಾಧನೆ ಮಾಡೋದಕ್ಕೆ ಅಂತಾ, ಆದರೆ ಇಲ್ಲಿ ಬಂದು ಜನರ ಬಗ್ಗೆ ತಿಳಿದುಕೊಂಡು ಅವರಿವರ ಜೊತೆ ಒಡನಾಟದಿಂದ ಗೊತ್ತಾಗಿದ್ದು ಈ ಭೂಮಿಯ ಮೇಲೆ ಮೊದಲು ಬದುಕು ನಡೆಸೋದೆ ಒಂದು ಸಾಧನೆ ಅಂತಾ. ನಂತರ ಈ ಬದುಕಿನಲ್ಲಿ ಬದುಕಿ ಆಮೇಲೆ ಏನಾದರೂ ಬದುಕಿದ್ದು ಸಾರ್ಥಕ ಅನ್ನಿಸುವಂತಾ ಕೆಲಸ ಮಾಡಬೇಕು ಎಂದುಕೊಂಡಾಗ, ಈಗಿರುವ ಕೆಲಸದ ಮಧ್ಯದಲ್ಲೇ ಅಲ್ಪ ಸ್ವಲ್ಪ ಬಿಡುವು ಮಾಡಿಕೊಂಡು ಬದುಕಿಗೊಂದಷ್ಟು ಖುಷಿ ಕೊಡುವ ಕೆಲಸ ಮಾಡಬೇಕಷ್ಟೇ.
        ಇಲ್ಲಿ ಬಂದ ಮೇಲೆ ಹಬ್ಬ ಹರಿದಿನಗಳಿಗೆ ಸಂಬಂಧಿಕರ ಮನೆಗೆ ಹೋಗುವುದಿರಲಿ, ಮೊದಲು ನಮ್ಮ ಮನೆಗೆ ಹೋಗಲಾಗುತ್ತಿಲ್ಲ. ಅಜ್ಜ ತೀರಿ ಹೋದ ಸುದ್ದಿ ನನಗೆ ತಿಳಿದಿದ್ದು ಮಾರನೇ ದಿನ, ಕಾರಣ ಅದ್ಯಾವುದೋ ನಕ್ಷತ್ರ ಇದ್ದಿದ್ದಕ್ಕೆ ಆವತ್ತೇ ಮಣ್ಣು ಮಾಡಬೇಕೆಂದರಂತೆ, ಇನ್ನೂ ನಾನು ಬಂರುವುದಕ್ಕೆ ಒಂದು ದಿನ ಬೇಕು. ಹೀಗಾಗಿ ತಿಥಿಗೆ ಹೇಳಿದರಾಯಿತು ಎಂದು ಹೇಳಲಿಲ್ಲ ಎಂದು ಅಪ್ಪ ನನಗೆ ಹೇಳಿದಾಗ, ನಿಜಕ್ಕೂ ಬೇಸರವಾಗಿ ಹೋಯಿತು.
        ಈಗ ನನಗೆ ನಿಜಕ್ಕೂ ಚಿಂತೆ ಕಾಡತೊಡಗಿದೆ..........
        ನಾನು ಊರು ಬಿಟ್ಟು ಬಂದಿದ್ದು ಸಾಧನೆ ಮಾಡುವುದಕ್ಕೆ. ಆದರೆ ಸಾಧನೆಯ ಭರದಲ್ಲಿ, ನನ್ನ ಜೊತೆಗಿದ್ದ ಸಂಬಂಧಗಳ ಬಂಧವನ್ನೇ ಕಡೆದುಕೊಂಡು ಬಿಡುತ್ತಿದ್ದೆನಲ್ಲಾ ಎಂದು ಅನ್ನಿಸೋದಕ್ಕೆ ಶುರುವಾಗಿದೆ. ಅಮ್ಮನ ಅಕ್ಕರೆ, ಅಕ್ಕನ ಜಗಳ, ಅಪ್ಪನ ಬೈಗುಳ, ಅಜ್ಜಿಯ ಕಥೆಯಲ್ಲಿಣುಕುವ ನೀತಿ ತತ್ವ, ಗೆಳೆಯರ ಬಳಗ, ಸಂಬಂಧಿಕರ ಭಾಂಧವ್ಯಗಳೆಲ್ಲವನ್ನೂ ನಾನು ಕಳೆದುಕೊಂಡು ಬಿಟ್ಟೆನಲ್ಲವೇ? ಎಂದು ಎಷ್ಟೋ ಸಾರಿ, ನನಗೆ ನಾನೇ ಯೋಚನೆ ಮಾಡಿ ಉತ್ತರ ಸಿಗದೇ ಕುಗ್ಗಿ ಹೋಗಿದ್ದೇನೆ.
        ಸಾಧನೆ ಮಾಡುವುದು ಅಂದರೆ ಎಲ್ಲರನ್ನೂ ಬಿಟ್ಟು ದೂರ ಉಳಿಯುವುದೇ? ಅಥವಾ ಅವಕಾಶಗಳ ಅರಸಿ ಎಲ್ಲರನ್ನೂ ಮೆಚ್ಚಿಸಿ ಎಲ್ಲರಿಗೂ ಗೌರವ ತರುವ ಕೆಲಸ ಮಾಡುವುದೇ?. ಹೌದು ಇದೆಲ್ಲವನ್ನೂ ನನಗೆ ನಾನೇ ಪ್ರಶ್ನಿಸಿಕೊಳ್ಳುತ್ತಿದಿನಿ ನಿಜ, ಹಾಗಾದರೆ ನಾನು ನನ್ನೊಂದಿಗೆ ಯಾವಾಗಲಾದರೂ ಇದಿನಾ?.
        ಊರಲ್ಲಿರುವಾಗ? ಅಥವಾ ಈಗ?. ಆವಾಗ ನಾನು ನನ್ನೊಂದಿಗಿದ್ದೆ, ನಮ್ಮನರೊಂದಿಗೆ ಖುಷಿಯಾಗಿದ್ದೆ. ಹಾಗಾದರೆ ಈಗ ನಾನು ಸಾಧನೆಯ ಹಾದಿಯಲ್ಲಿದಿನಿ ನಮ್ಮವರೊಂದಿಗಿಲ್ಲ, ನನ್ನೊಂದಿಗಿಲ್ಲ ನನ್ನತನದಲ್ಲಿದಿನಿ ಅಷ್ಟೇ. ಹೀಗೆ ನನ್ನನ್ನು ನಾನೇ ವಿಮರ್ಷೆ ಮಾಡಿಕೊಂಡಾಗ ನನಗೆ ದೊರೆತ ಕೊನೆಯ ಪ್ರಶ್ನೆ “ಹಾಗಾದರೆ ನನ್ನ ಸಂಬಂಧಗಳ ಸಾಯಿಸಿ, ನಾನು ಸತ್ತು ಬಿಟ್ಟೇನೆ?”.
        ಇದಕ್ಕೆ ಉತ್ತರ ಹುಡುಕಲು ಹೊರಟಾಗ ಬಾಸ್ ಫೋನ್ ಮಾಡಿ ಕೂಡಲೇ ಆಫೀಸಿಗೆ ಬರಲು ಹೇಳಿದರು. ಹೀಗಾಗಿ ನಾನು ಟೀ ಬೇಗನೆ ಕುಡಿದು ಆಫಿಸ್ ಕಡೆಗೆ ಹೆಜ್ಜೆ ಹಾಕಿದೆ........
picture credits - 68019856f05d7b1dda6ada27b2a1942c.jpg ( (From Google........Thnk you)