ಸಣ್ಣ ಕಥೆ: ಅನ್ವೇಷಣೆ

ಸಣ್ಣ ಕಥೆ: ಅನ್ವೇಷಣೆ

ಸ್ನೇಹಿತನ ಸಾವನ್ನು ಹತ್ತಿರದಿಂದ ನೋಡಿದ ನಂತರ ಮನಸ್ಸಿಗೆ ಯಾವುದೂ ರುಚಿಸದಂತಾಗಿತ್ತು. ಮನುಷ್ಯನ ಜೀವನ ನಿರರ್ಥಕ ಅನ್ನಿಸಲು ತೊಡಗಿತ್ತು. ಇದರ ಪ್ರಭಾವ ಎನ್ನುವಂತೆ ಸಾಮಾನ್ಯ ಜೀವನದಿಂದ ದೂರಾಗಿ ಅಲೆಯತೊಡಗಿದ್ದೆ. ಯಾವುದರ ಅನ್ವೇಷಣೆಯಲ್ಲಿದ್ದೆನೋ ನನಗೆ ತಿಳಿಯದಂತಾಗಿತ್ತು. ಗೊತ್ತು ಗುರಿಯಿಲ್ಲದ ಅಲೆದಾಟ ನನ್ನನ್ನು ಭಾರತದ ಉದ್ದಗಲಕ್ಕೂ ಕರೆದೊಯ್ದಿತು. ಕಾಶಿಯಲ್ಲಿನ ಧಾರ್ಮಿಕ ವಿಧಿ-ವಿಧಾನಗಳು ನನ್ನಲ್ಲಿ ಭಕ್ತಿ ಪರವಶತೆ ಮೂಡಿಸಲಿಲ್ಲ. ಗಂಗಾ ಸ್ನಾನ ಮೈಯನ್ನು ಹಗುರ ಮಾಡಿದರೂ ಮನಸ್ಸಿನ ಪ್ರಶ್ನೆಗಳು ಹಾಗೇ ಉಳಿದು ಹೋದವು. ಮುಂದಕ್ಕೆ ಹಿಮಾಲಯದ ತಪ್ಪಲಲ್ಲಿ ಕಲಿತ ಧ್ಯಾನ ಸ್ವಲ್ಪ ಸಹಾಯಕ ಅನ್ನಿಸಿತು. ದಣಿದ ಮನಕ್ಕೆ ವಿಶ್ರಾಂತಿ ಕೊಡುವ ಸಾಧನ ಎನ್ನಿಸಿತು.

ಅಲ್ಪ ಸ್ವಲ್ಪ ಕಲಿತ ಧ್ಯಾನದಲ್ಲಿ ಒಂದು ದಿನ ತೊಡಗಿದ್ದಾಗ ಮನಸ್ಸಿನ ಪರದೆಯ ಮೇಲೆ ಒಂದು ಚಿತ್ರ ಮೂಡತೊಡಗಿತು. ಒಬ್ಬರ ಹಿಂದೆ ಒಬ್ಬರಂತೆ ಸಾಲಾಗಿ ನಿಂತ ನಾಲ್ಕಾರು ವ್ಯಕ್ತಿಗಳ ಬಿಂಬ ಸ್ಪಷ್ಟವಾಗಿ ಗೋಚರಿಸಿತು. ಅವರ ಮುಖ ಚಹರೆ, ವೇಷ ಭೂಷಣ ಸ್ಪಷ್ಟವಾಗಿ ಕಂಡು ಅವರೆಲ್ಲ ಒಂದೇ ಕಾಲಕ್ಕೆ ಸೇರಿದವರಲ್ಲ ಎನ್ನುವ ಭಾವನೆ ಮೂಡಿತು. ಆದರೆ ಅವರೆಲ್ಲರ ನಡುವೆ ಒಂದು ಸಾಮ್ಯತೆ ವ್ಯಕ್ತ ಪಡಿಸದ ರೀತಿಯಲ್ಲಿ ಬೆಸೆದುಕೊಂಡಿತ್ತು. ಇವು ನನ್ನ ಹಿಂದಿನ ಜನ್ಮದ ರೂಪಗಳಾಗಿದ್ದಿರಬಹುದೇ ಎನ್ನುವ ಸಂದೇಹ ಮೂಡಿತು. ಹೀಗೆ ಅನುಮಾನ ಹುಟ್ಟಿದ ತಕ್ಷಣ ಆ ಬಿಂಬಗಳು ಒಂದೊಂದಾಗಿ ಸರಿದು ಹೋದವು. ಮನಸ್ಸು ಮತ್ತೆ ಕತ್ತಲಿನ ಪರದೆ ಆಯಿತು. ಸ್ವಲ್ಪ ಸಮಯದಲ್ಲಿ ಅದರಿಂದ ಹೊರ ಬಂದ ನನಗೆ ಇದು ಧ್ಯಾನದ ಪರಿಣಾಮವೋ ಅಥವಾ ಧ್ಯಾನದಿಂದ ನಿದ್ದೆಗೆ ಜಾರಿ ಕಂಡ ಕನಸೋ ತಿಳಿಯಲಿಲ್ಲ. ಪ್ರತಿಯೊಂದನ್ನು ವೈಚಾರಿಕತೆಯ ದೃಷ್ಟಿಯಿಂದ ನೋಡುತ್ತಿದ್ದ ನನಗೆ ಪುನರ್ಜನ್ಮ ಎನ್ನುವುದು ಒಂದು ಅಭಿಪ್ರಾಯ ಆಗಬಹುದಾಗಿತ್ತೆ ಹೊರತಾಗಿ ನಂಬಿಕೆಯಾಗಲು ಸಾಧ್ಯವಿರಲಿಲ್ಲ. ಆದರೆ ಈ ಅನುಭವ ನನ್ನ ಅಂತರಂಗದ ಬಾಗಿಲನ್ನು ತೆರೆಯಲು ಸಹಾಯವಾಯಿತು.

ಉತ್ತರದಿಂದ ಮತ್ತೆ ದಕ್ಷಿಣ ಭಾರತಕ್ಕೆ ನನ್ನ ಅಲೆದಾಟ ಕರೆ ತಂತು. ಇಲ್ಲಿನ ಸುಂದರ ದೇಗುಲಗಳಲ್ಲಿ ದೇವರು ಇದ್ದಾನೋ ಇಲ್ಲವೋ ಆದರೆ ಅಲೌಕಿಕ ಅನ್ನಿಸುವ ಆಕರ್ಷಣೆ ಇತ್ತು. ಹೀಗೆ ಸುತ್ತುತ್ತಿರುವಾಗ ನನ್ನ ಹಾಗೆ ಇನ್ನು ಒಬ್ಬ ಅಲೆಮಾರಿ ನನ್ನ ಗುರುತು ಹಿಡಿದು ಮಾತನಾಡಿಸಿದ. ಆತನನ್ನು ಹಿಮಾಲಯದ ಆಶ್ರಮದಲ್ಲಿ ನೋಡಿದ ನೆನಪು ಮೂಡಿತು. ಆತ ಬರಿಗಾಲಲ್ಲಿ ಪುಣ್ಯ ಕ್ಷೇತ್ರ ದರ್ಶನಕ್ಕೆ ಹೊರಟಿದ್ದ. ಆತನಿಗೆ ಮಾರ್ಗ ಮಧ್ಯೆ ಯಾರಾದರೂ ನೀಡಿದರೆ ಊಟ, ಇಲ್ಲದ್ದಿದ್ದರೆ ಹಾಗೆ ಸಂತೃಪ್ತಿ. ಗುಡಿ, ಮಂಟಪಗಳಲ್ಲಿ ಇಲ್ಲದಿದ್ದರೆ ಯಾವುದಾದರು ಗಿಡದ ಕೆಳಗೆ ರಾತ್ರಿಯ ವಾಸ. ಆದರೂ ಆತನ ಮುಖದಲ್ಲಿ ನೆಮ್ಮದಿ ಕಾಣುತ್ತಿತ್ತು. ನಮ್ಮ ದಾರಿ ಬೇರೆಯಾಗುವದಕ್ಕೆ ಮುನ್ನ ಹತ್ತಿರದ ಊರಲ್ಲಿ ಇದ್ದ ಒಬ್ಬ ಯೋಗಿಯನ್ನು ಕಂಡರೆ ನನಗೆ ಉಪಯೋಗವಾಗಬಹುದು ಎಂದು ತಿಳಿಸಿದ.

ನನಗೆ ಆ ಯೋಗಿಯನ್ನು ಹುಡುಕುವುದು ಕಷ್ಟವಾಗಲಿಲ್ಲ. ಆ ಊರಿನ ಎಲ್ಲ ಜನರಿಗೂ ಆತನ ಬಗ್ಗೆ ತಿಳಿದಿತ್ತು. ಅಲ್ಲಿನ ಬೆಟ್ಟವೊಂದರ ಗುಹೆಯಲ್ಲಿ ವಾಸವಾಗಿದ್ದ ಆತನನ್ನು ಆ ಊರಿನ ಜನರೇ ವಿನಂತಿಸಿ ಊರ ಹೊರಗೆ ಬಯಲು ಜಾಗದಲ್ಲಿ ಒಂದು ಆಶ್ರಮ ಕಟ್ಟಿ ಅಲ್ಲಿಯೇ ಇರುವಂತೆ ಕೇಳಿಕೊಂಡಿದ್ದರು. ಆತನ ಶಾಂತ ಸ್ವಭಾವ, ನಿಸ್ವಾರ್ಥ ಗುಣ, ಸರಳ ಜೀವನ ಶೈಲಿಯನ್ನು ಕಂಡು ಆತನನ್ನು ಯೋಗಿಯೆಂದೇ ಸಂಭೋದಿಸಿತ್ತಿದ್ದರು. ತುಂಬ ಕಡಿಮೆ ಮಾತಿನ ಆತನ ವ್ಯಕ್ತಿತ್ವ ಅಲ್ಲಿನ ಜನರನ್ನು ಆಕರ್ಷಿಸಿತ್ತು. ನಾನು ಮಧ್ಯಾಹ್ನದ ವೇಳೆಗೆ ಆ ಆಶ್ರಮಕ್ಕೆ ತಲುಪಿದೆ. ಪ್ರಯಾಣದ ಆಯಾಸವೆಲ್ಲಾ ಆ ಯೋಗಿಯ ಮುಂದೆ ಕುಳಿತ ಕೆಲವೇ ನಿಮಿಷಗಳಲ್ಲಿ ಮರೆಯಾಯಿತು. ತುಂಬಾ ಹೊತ್ತು ಧ್ಯಾನಾಸಕ್ತನಾಗಿ ಕುಳಿತಿದ್ದ ಆತ ಕಣ್ತೆರೆದಾಗ ಅಲ್ಲಿಯೇ ಕುಳಿತಿದ್ದ ನನ್ನನ್ನು ನೋಡಿ ಪ್ರಶ್ನಿಸಿದ.

'ಯಾವ ಉದ್ದೇಶ ನಿನ್ನನ್ನು ಇಲ್ಲಿಗೆ ಕರೆ ತಂತು?'

ನಾನು ಗೊತ್ತು ಗುರಿಯಿಲ್ಲದೆ ಅಲೆಯುತ್ತಿರುವ ವಿಷಯ ತಿಳಿಸಿದೆ. ಆತ ತನ್ನ ಮೃದು ನುಡಿಯಲ್ಲಿ, ಅಪ್ಯಾಯಮಾನ ದೃಷ್ಟಿ ಬೀರುತ್ತ ಅಲ್ಲಿಯೇ ಉಳಿದುಕೊಳ್ಳಲು ತಿಳಿಸಿದ. ಮತ್ತೆ ತನ್ನ ಧ್ಯಾನಕ್ಕೆ ಮರಳಿದ. ಆ ಸ್ಥಿತಿಯಲ್ಲಿ ಆತನ ಮೈ ಬಿಗಿದುಕೊಂಡಿತ್ತು. ಮುಚ್ಚಿದ ಕಣ್ಣುಗಳು ಒಳ ನೋಟಕ್ಕೆ ತೆರೆದು ಕೊಂಡಿರಬಹುದು ಎನ್ನಿಸುತ್ತಿತ್ತು. ಆತನ ಇಂದ್ರಿಯಗಳು ಈ ಲೋಕದ ಪರಿವೆ ಇಲ್ಲದಂತೆ ಪ್ರಶಾಂತವಾಗಿದ್ದವು. ನಾನು ಯೋಗಿಯ ಸಲಹೆಯಂತೆ ಆ ಆಶ್ರಮದಲ್ಲೇ ಉಳಿದುಕೊಂಡೆ. ಹಾಗಾಗಿ ಆತನನ್ನು ಹತ್ತಿರದಿಂದ ಗಮನಿಸಲು ಸಾಧ್ಯವಾಯಿತು. ಯೋಗಿಯ ಭೋಧನೆಗಳು ತುಂಬ ಸರಳವಾಗಿದ್ದವು. ಸ್ವಾರ್ಥ ಬುದ್ದಿಯನ್ನು ದೂರ ಇಟ್ಟು, ಸದುದ್ದೇಶದಿಂದ ಮಾಡಿದ ಕೆಲಸಗಳು ಮನಸನ್ನು ಶುದ್ದಿಗೊಳಿಸಲು ಹೇಗೆ ಸಹಾಯಕವಾಗುತ್ತವೆ ಎನ್ನುವದನ್ನು ಆತ ಬಂದವರಿಗೆ ಮನದಟ್ಟು ಮಾಡಿ ಕೊಡುತ್ತಿದ್ದ. ಆಸೆಗಳನ್ನು ಹತ್ತಿಕ್ಕಿ, ದುರಾಸೆಗಳನ್ನು ದೂರಗೊಳಿಸಿ ಸಮ ಚಿತ್ತರಾಗಲು ಭೋಧಿಸುತ್ತಿದ್ದ. ಆ ಮಾತುಗಳು ಅವನನ್ನು ಕಾಣಲು ಬಂದವರಲ್ಲಿ ಶಾಂತಿ, ನೆಮ್ಮದಿಯನ್ನು ತುಂಬಿ ಹರ್ಷಚಿತ್ತರಾಗಿ ಮರಳುವಂತೆ ಮಾಡುತ್ತಿದ್ದವು.

ಯೋಗಿಯ ಸಂಗ ನನಗೆ ಪ್ರಿಯವೆನಿಸಿದರೂ, ನಾನು ಎಲ್ಲ ಸಮಯವನ್ನು ಆಶ್ರಮದಲ್ಲಿ ಕಳೆಯುತ್ತಿರಲಿಲ್ಲ. ಆಶ್ರಮಕ್ಕೆ ಬಂದ ಯಾತ್ರಾರ್ಥಿಗಳಲ್ಲಿ ಒಬ್ಬರ ಜೊತೆಗಿನ ನನ್ನ ಪರಿಚಯ ಸ್ನೇಹಕ್ಕೆ ತಿರುಗಿತ್ತು. ಅರಣ್ಯ ಇಲಾಖೆಯ ಕೆಲಸದಲ್ಲಿ ಇದ್ದ ಅವರ ಜೊತೆ ಕಾಡು ಸುತ್ತಲು ಹೋಗುತ್ತಿದ್ದೆ. ಅವರ ಸಹಾಯದಿಂದ ನನಗೆ ಕಾಡಿನ ಮಧ್ಯೆ ಇರುವ ಒಂಟಿ ಬಂಗಲೆಗಳಲ್ಲಿ ರಾತ್ರಿ ತಂಗುವ ಅವಕಾಶ ದೊರೆಯಿತು. ಅಲ್ಲಿ ಒಬ್ಬಂಟಿಯಾಗಿ ಕಾಲ ಕಳೆಯುತ್ತಿದ್ದೆ. ಅಲ್ಲಿನ ಸಾಯಂಕಾಲದ ತಂಗಾಳಿ ಹಿತ ತರುತ್ತಿತ್ತು. ರಾತ್ರಿ ಬೆಂಕಿ ಹೊತ್ತಿಸಿ ಚಳಿ ಕಾಯಿಸಿ ಕೊಳ್ಳುವುದು ನನಗೆ ಪ್ರಿಯವಾದ ಅಭ್ಯಾಸವಾಗಿತ್ತು. ಸುತ್ತ ಮುತ್ತ ಕಣ್ಣು ಹಾಯಿಸುವಷ್ಟು ದೂರ ಯಾವುದೇ ಮನುಷ್ಯ ಜೀವಿ ಇರದೇ ಇರುವುದು ನೆನಪಿಸಿ ಕೊಂಡರೆ ಭಯ ಮತ್ತು ರೋಮಾಂಚನ ಒಟ್ಟಿಗೆ ಆಗುತ್ತಿತ್ತು. ಮಧ್ಯ ರಾತ್ರಿ ಕಾಡು ಪ್ರಾಣಿಗಳ ಘರ್ಜನೆ ಹತ್ತಿರದಿಂದಲೇ ಕೇಳಿಸುತ್ತಿದ್ದವು.

ಅಲ್ಲಿ ಒಂದು ಸ್ಥಳದಿಂದ ಕಾಣುವ ದೃಶ್ಯ ನಯನ ಮನೋಹರವಾಗಿತ್ತು. ಬೆಟ್ಟ ಗುಡ್ಡಗಳ ಸಾಲು, ನಾನಾ ಜಾತಿಯ ಗಿಡಗಳಿಂದ ತುಂಬಿದ ದಟ್ಟವಾದ ಕಾಡು, ಕಣಿವೆಯಲ್ಲಿ ಹರಿಯುತ್ತಿರುವ ತೊರೆ ಮತ್ತು ಅಲ್ಲಿಗೆ ನೀರು ಕುಡಿಯಲು ಬರುವ ವನ್ಯ ಮೃಗಗಳು ಹೀಗೆ ಪ್ರಕೃತಿ ಮಡಿಲಿನ ಸೌಂದರ್ಯ ಅಲ್ಲಿ ತುಂಬು ತುಳುಕುತಿತ್ತು. ಆ ಸುಂದರ ಜಾಗದಲ್ಲಿ ಸೂರ್ಯೋದಯದ ಸೊಬಗು ಕಾಣುವದಕ್ಕೆ ಒಂದು ಬೆಳಗಿನ ಜಾವ ಇನ್ನು ಕತ್ತಲಿರುವಾಗಲೇ ಹೊರಟೆ. ಆ ದಾರಿ ನನಗೆ ಅಂಗೈನ ಗೆರೆಯಷ್ಟು ಚಿರ ಪರಿಚಿತವಾಗಿತ್ತು. ಅಲ್ಲಿಗೆ ಮುಟ್ಟಿದ ನಂತರವೂ ಇನ್ನು ಕತ್ತಲು ಕರಗಿರಲಿಲ್ಲ. ಆಕಾಶದಲ್ಲಿ ಇನ್ನು ನಕ್ಷತ್ರಗಳು ಮಿನುಗುತ್ತಿದ್ದವು. ನನ್ನ ಊಹೆಗೂ ಮೀರಿದ ಯಾವುದೊ ವಿಷಯ ಅಂದು ಕಾದಿದೆ ಎಂದೆನಿಸತೊಡಗಿ ನನ್ನ ಹೃದಯದ ಬಡಿತ ಜೋರಾಗತೊಡಗಿತು. ಬೆಟ್ಟದ ಆ ಕಡೆಗೆ ಬೆಳಕಿನ ಕಿರಣಗಳು ಕಾಣ ತೊಡಗಿದವು. ಮರದ ಮೇಲಿನ ಮಂಜು ಕರಗಲಾರಂಬಿಸಿತು. ತೊರೆಯ ನೀರು ಹೊಂಬಣ್ಣ ಪ್ರತಿಫಲಿಸಿ ದಿನದ ಆಗಮನಕ್ಕೆ ಸಜ್ಜಾಯಿತು. ನೋಡುತ್ತಿದ್ದಂತೆ ಸೂರ್ಯ ಮೇಲೇರಿ ಬಂದ. ಆಗ ಕಂಡ ಪ್ರಕೃತಿಯ ಸೌಂದರ್ಯ ವರ್ಣಿಸಲು ಅಸಾಧ್ಯ. ಸೂರ್ಯನ ಕಿರಣಗಳು ನನ್ನಲ್ಲಿ ಹೊಸ ಶಕ್ತಿಯನ್ನು ತುಂಬುತ್ತ ಎಂದು ಕಾಣದಂತ ಹರುಷ ಮೂಡಿಸಿದವು. ಮೈ ಮನಸ್ಸು ಪುಳಕಿತವಾಯಿತು. ಕಾಲಲ್ಲಿ ಶುರುವಾದ ಕಂಪನ ಮೈಯೆಲ್ಲಾ ಸಂಪೂರ್ಣವಾಗಿ ಆವರಿಸಿತು. ಉಕ್ಕಿ ಹರೆವ ಉನ್ಮಾದ ಹಾಗೆಯೇ ಮುಂದುವರೆದಿದ್ದರೆ ನನ್ನ ಆತ್ಮ ಪ್ರಕೃತಿಯಲ್ಲಿ ಲೀನವಾಗುತಿತ್ತೋ ಏನೋ ಆದರೆ ಹಾಗಾಗದೇ ದೇಹದಲ್ಲಿನ ಚೈತನ್ಯ ಹಾಗೆ ಉಳಿದುಕೊಂಡಿತು. ಕೆಲವು ಗಂಟೆಗಳ ಕಾಲ ಅಲ್ಲಿಯೇ ಕುಳಿತಿದ್ದೆ. ವಾಪಸು ಬರುವಾಗ ನನ್ನ ದೇಹ ಹಗುರ ಎನ್ನಿಸಿತು. ನಡೆಯುವಾಗ ನೆಲಕ್ಕೆ ಕಾಲು ತಾಕದೆ ಗಾಳಿಯಲ್ಲಿ ತೇಲಿದ ಹಾಗೆ ಎನ್ನಿಸುವಷ್ಟು ದೇಹ ಹಗುರವಾಗಿತ್ತು. ಅದರ ಜೊತೆಗೆ ನನ್ನ ಕಾಡುತ್ತಿದ್ದ ಚಿಂತೆ ಸಂಪೂರ್ಣವಾಗಿ ದೂರ ಆಗಿತ್ತು. ಗೊತ್ತು ಗುರಿಯಿಲ್ಲದ ಅನ್ವೇಷಣೆಯಿಂದ ನಾನು ಬಿಡುಗಡೆಗೊಂಡಿದ್ದೆ.

ಕ್ರಮೇಣವಾಗಿ ಅರ್ಥವಾಗುತ್ತ ಹೋಯಿತು. ಆ ದಿನದ ಸೂರ್ಯೋದಯ ನೆಪ ಮಾತ್ರವಾಗಿತ್ತು. ಅಷ್ಟರಲ್ಲಿ ನನ್ನ ಸುಪ್ತ ಮನಸ್ಸು ತನ್ನ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಂಡಿತ್ತು. ಅದಕ್ಕೆ ಪೂರಕವಾಗಿ ನೈಸರ್ಗಿಕ ಸೌಂದರ್ಯ ನನ್ನ ಮನಸನ್ನು ಉಲ್ಲಾಸಗೊಳಿಸಿತ್ತು. ಸಾಮಾನ್ಯ ಜೀವನದ ಕಟ್ಟು ಪಾಡುಗಳಿಂದ ಹೊರ ಬಂದ ಮನುಷ್ಯ ಸುಖ-ದುಖಗಳನ್ನು ಸಮಾನವಾಗಿ ಸ್ವೀಕರಿಸುವ ಸ್ಥಿತ ಪ್ರಜ್ನನಾಗುತ್ತಾನೆ. ಅದೇ ವ್ಯಕ್ತಿ ಅಹಂಕಾರ, ಕಾಮನೆ ಮೆಟ್ಟಿ ನಿಂತಾಗ ಯಾವ ನೋವು ಆತನನ್ನು ಭಾಧಿಸಿತು? ಆತನಿಗೆ ತನ್ನನ್ನು ಸಮರ್ಥಿಸಿ ಕೊಳ್ಳುವ ಯಾವುದೇ ಅವಶ್ಯಕತೆ ಕಾಣುವುದಿಲ್ಲ. ಸಾವು ಕೂಡ ಬಿಡುಗಡೆಯ ಒಂದು ಹಾದಿ ಎಂದು ತೋರುತ್ತದೆ. ಅಲ್ಲದೆ ಬಂಧ ಮುಕ್ತನಾಗಲು ಸಾವಿನವರೆಗೂ ಕಾಯ ಬೇಕಿಲ್ಲ. ಆಸೆ, ಅಹಂನಿಂದ ಹೊರ ಬಂದ ಮರು ಕ್ಷಣವೇ ಮುಕ್ತಿ ಪಥದ ಆರಂಭ. ಇದು ವೈರಾಗ್ಯವೋ, ವೇದಾಂತವೋ ಎನ್ನುವ ವಿಮರ್ಶೆಯೇ ಅರ್ಥ ಹೀನ. ಬಂಧ ಮುಕ್ತನಾಗಲು ಸಾಧ್ಯವಾಗುವುದೇ ಬದುಕಿನ ಸಾರ್ಥಕತೆ ಎನ್ನುವ ಸತ್ಯದ ಅರಿವಾಗಿ ನಾನು ಆಶ್ರಮಕ್ಕೆ ಮರಳಿದೆ.

ಯೋಗಿಗಳನ್ನು ಕಂಡು ಅಲೆದಾಟ ನಿಲ್ಲಿಸಿ ಮತ್ತೆ ನನ್ನ ಹಿಂದಿನ ಬದುಕಿಗೆ ಮರಳುವ ವಿಚಾರ ತಿಳಿಸಿದೆ. ಆದರೆ ನಾನು ಜೀವನವನ್ನು ನೋಡುವ ದೃಷ್ಟಿ ಬದಲಾಗಿದ್ದು ಅವರ ಗಮನಕ್ಕೆ ಬಂದಿದೆ ಎನ್ನುವಂತೆ ಮುಗುಳ್ನಕ್ಕು ಸಮ್ಮತಿ ಸೂಚಿಸಿದರು.

Comments