ಸೂರಿ ಸಂಪಿಗೆ ತೋಟದ ನೈಜ ಪರಿಮಳ..!

ಸೂರಿ ಸಂಪಿಗೆ ತೋಟದ ನೈಜ ಪರಿಮಳ..!

ಕೆಂಡ ಸಂಪಿಗೆ. ಚಿತ್ರ ನೋಡಿದೆ. ಚೆನ್ನಾಗಿದೆ. ಒಂದೇ ಕ್ಷಣ ಸಾಕು. ಚಿತ್ರದ ಓಟ ನಿಮನ್ನ ಹಿಡಿದಿಡುತ್ತದೆ. ಸೂರಿ ಮತ್ತು ಭಟ್ಟರ ಬರೆದ ಹಾಡುಗಳ ಮೂಲಕವೇ ಶುರುವಾಗೋ ಸೂರಿಯ ಈ ಸಿನಿಮಾ,ಕೆಂಡ ಮತ್ತು ಸಂಪಿಗೆ ತೋಟಕ್ಕೆ ಕರೆದೊಯುತ್ತದೆ.

ಸೂರಿ ಸಿನಿಮಾದಲ್ಲಿ ನೈಜತೆಯ ಚಿತ್ರಣ ಸ್ಪಷ್ಟವಾಗಿರುತ್ತದೆ. ಕಲಾತ್ಮಕ ಸ್ಪರ್ಶ ಅಲ್ಲಿ ಇರೋದು ಸೂರಿ ಕಲೆಯ ಜಾಣ್ಮೇನೆ.  ಕಡ್ಡಿಪುಡಿ ಕೂಡ ಉತ್ತಮ ಚಿತ್ರ. ಲಾಂಗು ಮಚ್ಚು ಜಾಸ್ತಿ ಆಯ್ತು ಅನ್ನೋದು ಬಿಟ್ಟರೆ, ಕತೆ ಹೇಳೊ ರೀತಿ, ನೈಜತೆಯ ಚಿತ್ರಣ ಪ್ರೇಕ್ಷಕರಿಗೆ ಹಿಡಿಸಿತ್ತು. ಬಾಕ್ಸ್ ಆಫೀಸ್​ ನಲ್ಲಿ ಸಿನಿಮಾ ಮುಗ್ಗರಿಸಿತ್ತು.

ಇಂತಿ ನಿನ್ನ ಪ್ರೀತಿಯ ಸಿನಿಮಾ ಕೂಡ ಅತ್ಯುತ್ತಮ ಚಿತ್ರವೇ. ಬದುಕಿಗೆ ಹತ್ತಿರ ಅನಿಸಿಬಿಡೋ ಪಾತ್ರಗಳೇ ಇಲ್ಲಿ ಮರು ಜೀವ ಪಡೆದಿದ್ದವು. ನಾಯಕ ಕಿಟ್ಟಿಯ ಕುಡಿತ ಹೆಚ್ಚಾಯ್ತು ಅನ್ನೋದು ಬಿಟ್ಟರೆ. ಕಥೆ ಸೂಪರೋ..ಸೂಪರ್..

ಕೆಂಡಸಂಪಿಗೆ ಸೂರಿ ನಿರ್ದೇಶನದ ದಿ ಬೆಸ್ಟ್ ಸಿನಿಮಾ. ಕಾರು ಮಾರಿಕೊಂಡು ಚಿತ್ರ ಮಾಡಿದಕ್ಕೂ ಸಾರ್ಥಕ ಅಂತ ಹೇಳಬಹುದು. ಅಷ್ಟು ಚೆನ್ನಾಗಿದೆ ಕಥೆ. ಕಥೆನೆ ಇಡೀ ಚಿತ್ರದ ಹೀರೋ. ನೈಜ ಬದುಕಿನಲ್ಲಿ ಬರೋ ಪಾತ್ರಗಳಂತೆ ಕಾಣಿಸುತ್ತವೆ ಸಿನಿಮಾದ, ಹೀರೋ ಹೀರೋಯಿನ್ ಪಾತ್ರಗಳು.

ಮಾನ್ವಿತಾ ಮತ್ತು ವಿಕ್ಕಿ ನಿಜಕ್ಕೂ  ಗಿಣಿಮರಿ ಕೇಸ್​ನ ಜೀವಂತ ಪಾತ್ರಗಳೇ ಆಗಿದ್ದಾರೆ. ಗಿಣಿಮರಿ ಕೇಸ್ ಅಂತ ಯಾಕೆ ನಿರ್ದೇಶಕರು ಟ್ಯಾಗ್ ಲೈನ್ ಇಟ್ಟಿದ್ದರು ಅನ್ನೋದು ತಿಳಿಯುತ್ತದೆ. ಏನು ಅರಿಯದ, ಬದುಕನ್ನ ನೋಡದ ಯುವ ಪ್ರೇಮಿಗಳ ಕಥೆ ಇದು. ಪೋಲೀಸ್ ಭಾಷೆಯಲ್ಲಿ ಇಂತಹ ಓಡಿ ಹೋಗೋ ಪ್ರಕರಣವನ್ನ ಗಿಣಿಮರಿ ಕೇಸ್ ಅಂತ ಕರೀತಾರೆ.

ಸಿನಿಮ್ಯಾಟಿಕ್ ಆಗಿಯೂ ಈ ಕಥೆ ಸೂಪರ್. ಈಟಿವಿಯ ಸುರೇಂದ್ರನಾಥ್ ಬರೆದ ಕಥೆ ಇದು. ತುಂಬಾ ಹಿಂದೆ ಬರೆದ ಈ ಕಥೆಯನ್ನೇ ಸೂರಿ ರಿಸ್ಕ್ ತೆಗೆದುಕೊಂಡು ಸಿನಿಮಾ ಮಾಡಿದ್ದಾರೆ. ಕಥೆ ಸೂರಿ ಶ್ರಮಕ್ಕೆ ಪ್ರತಿಫಲಕೊಡ್ತಿದೆ. ಸಿನಿಮಾ ನೋಡಿದವರು ಸೂಪರ್ ಅಂತ ಹೇಳ್ತಿದ್ದಾರೆ. ಮೌಥ್ ಪಬ್ಲಿಸಿಟಿನೂ ಜೋರಾಗ್ತಿದೆ.

ಕೆಂಡಸಂಪಿಗೆ ಶುರುವಾಗೋ ಪರಿನೇ ಸೂಪರ್. ಮೊದಲೇ ಹೇಳಿಂತೆ, ಪೊಲೀಸರಿಬ್ಬರು ಹಾಡುಗಳನ್ನ ಕೇಳ್ತಾ ಪೊಲೀಸ್ ವ್ಯಾನ್​ ನಲ್ಲಿ ಹೋಗುತ್ತಿರುತ್ತಾರೆ. ಆ ದೃಶ್ಯ ಸಾಗಿದಂತೆ, ಚಿತ್ರಕ್ಕೋಸ್ಕರ ದುಡಿದವರ ಹೆಸರು ಬರುತ್ತವೆ. ಇತರ ಮಾಹಿತಿ ಲಭ್ಯವಾಗುತ್ತದೆ.

ಕೆಂಡಸಂಪಿಗೆಯಲ್ಲಿ ಸೂರಿ ಹೇಳಿದಂತೆ, ಕೆಂಡನೂ ಇದೆ. ಸಂಪಿಗೆನೂ ಇದೆ. ಸಂಪಿಗೆ ಆಗಿ ಇಲ್ಲಿ ನಮ್ಮನ್ನ ಕಾಡೋದು ಘಮಘಮಿಸೋದು ಯುವ ಪ್ರೇಮಿಗಳ ಮುಗ್ಧ ಪ್ರೇಮ. ಕೆಂಡವಾಗಿ ಸಿಟ್ಟಿಗೆಬ್ಬಿಸೋದು ಪೊಲೀಸರ ಕುತಂತ್ರಗಳು. ಆ ಕುತಂತ್ರಗಳೇ ಚಿತ್ರಕ್ಕೆ ಟರ್ನ್ ಅಂಡ್ ಟ್ವಿಸ್ಟ್​ಗಳು. ಪ್ರೇಮಿಗಳಿಬ್ಬರ ಹಿಂದೆ ಬೆನ್ನತ್ತೋ ಪೊಲೀಸ್​ ನವರ ಫೇಕ್ ಅನ್​ಕೌಂಟರ್​ಗಳು. ಓಡಿ ಹೋದ ಪ್ರೇಮಿಯನ್ನ ಇಲ್ಲ ಸಲ್ಲದ ಕೇಸ್​ ಗಳಲ್ಲಿ ಫಿಟ್ ಮಾಡಿ, ತಾವು ಪಾರೋಗೋದು. ಇದೆಲ್ಲ...

ಕೆಂಡಸಂಪಿಗೆ ಲವ್ಲಿ ಪಾರ್ಟ್ ಅಂದ್ರೆ, ಅದು ಹೀರೋಯಿನ್ ಮಾನ್ವಿತಾ. ಈಕೆಯ ತುಂಟ ನಗು. ತುಂಟ ಮಾತು. ಪ್ರೇಕ್ಷಕರಿಗೆ ಹಿಡಿಸುತ್ತವೆ. ನಟ ವಿಕ್ಕಿಯ ಮುಗ್ಧ ಅಭಿನಯ ನಮ್ಮಲ್ಲಿಯೇ ಇರೋ ಬಡ ಹುಡುಗನನ್ನ ನೆನಪಿಸುತ್ತದೆ. ಪ್ರೀತಿಯ ಸೆಳೆತಕ್ಕೆ ಸಿಕ್ಕಾಗ ಬಡವ-ಶ್ರೀಮಂತ ಎಂಬ ಬೇದವೆ ಬರೋದಿಲ್ಲ ಎಂಬ ಸತ್ಯವೂ, ಈ ಪ್ರೇಮಿಗಳ ಮೂಲಕ ವ್ಯಕ್ತವಾಗುತ್ತದೆ.

ಪ್ರೀತಿ ಪ್ರೇಮದ ಕಥೆಯಂತೆ ಈ ಸಿನಿಮಾ ನಿಮಗೆ ಎಲ್ಲೂ ಕಾಣಿಸೋದಿಲ್ಲ. ಕಾಣಿಸಿಕೊಂಡ್ರೂ ಅದು ಹಾಡುಗಳಲ್ಲಿ ರೋಮ್ಯಾನ್ಸ್ ಬಂದಾಗ ಮಾತ್ರ. ಅದರ ಹೊರತಾಗಿ ಇದೊಂದು ಬದುಕಿನ ನೈಜ ಘಟನೆ. ಅದನ್ನ ಸಿಲ್ವರ್ ಸ್ಕ್ರೀನ್ ಮೇಲೆ ತಂದಿದ್ದಾರೆಂಬ ಭಾವನೆ ಮೂಡುತ್ತದೆ. ಅದು ಚಿತ್ರದ ಕಥೆ ತಾಕತ್ತು ಮತ್ತು ಸೂರಿಯ ಚಿತ್ರಕಥೆಯ ಜಾಣ್ಮೆ...

ಕೆಂಡಸಂಪಿಗೆ ಕನ್ನಡದ ಮಟ್ಟಿಗೆ ಒಂದ್ ಒಳ್ಳೆ ಕ್ಯೂರಿಯೆಸ್ ಮತ್ತು ಇಂಟ್ರಸ್ಟಿಂಗ್ ಸಿನಿಮಾ. ದುಡ್ಡು ಕೊಟ್ಟ ನೊಡೋರಿಗೆ ಮೋಸ ಆಗೋದಿಲ್ಲ. ಒಮ್ಮೆ ನೋಡಬಹುದು. ಬೇರೆಯವರಿಗೂ ಹೇಳಿ, ಅವರು ನೋಡಿ ಬಂದ್ಮೇಲೆ ಒಂದು ಹಂತಕ್ಕೆ ಚರ್ಚಿಸಲೂ ಬಹುದು. ಹಂಗಿದೆ ಸಂಪಿಗೆಯ ಪರಿಮಳ. ವಿ.ಹರಿಕೃಷ್ಣರ ಸಂಗೀತ ಮತ್ತು ಜಯಂತ್ ಕಾಯ್ಕಿಣಿ ಹಾಗೂ ಯೋಗರಾಜ್ ಭಟ್ಟರ ಹಾಡುಗಳು ಸಿನಿಮಾ ನೋಡಿದ ನಂತರ ಮತ್ತಷ್ಟು ಹತ್ತಿರ ಅನಿಸುತ್ತವೆ. ಕಾರಣ ಇದು ಸೂರಿ ದುನಿಯಾದ ದಿ ಬೆಸ್ಟ್ ಸಂಪಿಗೆ.

-ರೇವನ್

 

Comments