ಸೇವೆಯ ಹರಿಕಾರರು

ಸೇವೆಯ ಹರಿಕಾರರು

ನನ್ನ ಬಾಲ್ಯದ ದಿನಗಳಲ್ಲಿ ನಮ್ಮೂರಿಗೆ ಹೊಸದಾಗಿ ಬಂದವರು ಉದಯ ಪ್ರಿಂಟರಿಯ ಮಾಲಕರಾದ ಎಸ್. ನಾರಾಯಣರಾಯರು. ಅವರು ಪಾಯಸರಗುಡ್ಡೆಗೆ ಮುಖ್ಯದಾರಿಯಾಗಿದ್ದ ಇಂದಿನ ಪಾಯಸ್ ಹಿಲ್ ರಸ್ತೆ ಎಂಬಲ್ಲಿ ಮನೆ ಹಿತ್ತಿಲನ್ನು ಕೊಂಡುಕೊಂಡರು. ಅವರ ಮಕ್ಕಳು ನಮ್ಮ ಕಾಪಿಕಾಡು ಶಾಲೆಗೆ ಸೇರಿದರು. ಅವರ ಮಕ್ಕಳಲ್ಲಿ ಹಿರಿಯ ಮಗಳು ನನ್ನ ತಂಗಿಯ ಹಾಗೂ ಒಬ್ಬ ಕಿರಿಯ ಮಗ ನನ್ನ ತಮ್ಮನ ಸಹಪಾಠಿಗಳಾದರು. ಅವರ ಮಕ್ಕಳಂತೆ ಸುಂದರವಾದ ಹೂಗಳು ಅವರ ತೋಟದಲ್ಲಿಯೂ ಕಂಗೊಳಿಸುತ್ತಿತ್ತು. ತೋಟಗಾರಿಕೆಯಲ್ಲಿ ವಿಶೇಷವಾದ ಆಸಕ್ತಿಯಿದ್ದ ಅವರ ತೋಟದಲ್ಲಿ ಬಣ್ಣ ಬಣ್ಣದ ಗುಲಾಬಿಗಳು, ಅದುವರೆಗೆ ಕಾಣದೆ ಇದ್ದ ಹಲವು ಬಗೆಯ ಹೂಗಳು ರಸ್ತೆಯಲ್ಲಿ ಓಡಾಡುವವರಿಗೆಲ್ಲಾ ಕಾಣುವಂತೆಯೇ ಆ ಹಾದಿಯಲ್ಲಿ ನಡೆಯುತ್ತಿದ್ದರೆ ಹೂಗಳ ಪರಿಮಳವೂ ಮೂಗಿಗೆ ತಾಗಿ ಮನಸ್ಸು ಉಲ್ಲಾಸಗೊಳ್ಳುತ್ತಿತ್ತು. ನಾರಾಯಣರಾಯರು ನನ್ನ ಅಪ್ಪನಿಗೆ ಮೊದಲೇ ಪರಿಚಿತರು. ಒಳ್ಳೆಯ ಸಜ್ಜನಿಕೆಯ ಸರಳವ್ಯಕ್ತಿ. ಸಾಹಿತಿ ಕೋಟ ಶಿವರಾಮ ಕಾರಂತರಿಗೆ ಆತ್ಮೀಯರು ಎನ್ನುವ ಹಿನ್ನಲೆಯೂ ಇತ್ತು. ನಾವು ಶಾಲೆಗೆ ಹೋಗಿ ಬರುವ ವೇಳೆಯಲ್ಲಿ ಅವರ ಮಡದಿ ಮನೆಯೆದುರು ನಿಂತು ನಗುಮೊಗದಿಂದ ಮಾತನಾಡಿಸುತ್ತಿದ್ದರು. ಇವರಿಬ್ಬರ ಪ್ರೀತಿ ವಾತ್ಸಲ್ಯಗಳು ಹಾಗೆಯೇ ಅವರ ಮಕ್ಕಳ ಸ್ನೇಹದಿಂದ ಆ ಮನೆಯ ಆತ್ಮೀಯತೆ ಇಂದಿಗೂ ಉಳಿದಿದೆ. ಅದಕ್ಕೆ ಕಾರಣ ಅವರ ಗುಣವನ್ನು ಮೆಚ್ಚುವ ಸ್ವಭಾವ, ಒಳ್ಳೆಯದನ್ನು ಗೌರವಿಸುವ ಹೃದಯ ವಿಶಾಲತೆ. ನನ್ನ ಬಾಲ್ಯ ಕಾಲದ ಹಿರಿಯರಾಗಿದ್ದು ಇಂದಿಗೂ ಆ ದಾರಿಯಲ್ಲಿ ಸಾಗುವಾಗ ಕಣ್ಣು ಒಮ್ಮೆ ಆ ಕಡೆ ಹೊರಳುತ್ತದೆ. ಭೇಟಿಯಾಗಲು ಹೋದರೆ ಪ್ರೀತಿಯ ಆ ಹಿರಿಯ ದಂಪತಿಯ ಸೊಸೆಯೂ ಅಷ್ಟೇ ಆತ್ಮೀಯತೆಯಿಂದ  ಕಾಫಿ, ತಿಂಡಿ ಬಟ್ಟಲು ಹಿಡಿದು ಬರುತ್ತಾರೆ. ನಮ್ಮ ನೆನಪಾದರೆ ಆ ಹಿರಿಯ ಎಂಬತ್ತರ ಹರೆಯದ ನಾರಾಯಣ ರಾಯರು ಫೋನ್ ಮಾಡಿ ನಮ್ಮಲ್ಲಿಗೆ ಬರುವ ಸೌಜನ್ಯ ತೋರುತ್ತಾರೆ. ಕಷ್ಟಸುಖಗಳ ತನ್ನ ಬದುಕಿನ ನೆನಪುಗಳನ್ನು ಹಂಚಿಕೊಳ್ಳುತ್ತಲೇ ವೈವಿಧ್ಯಪೂರ್ಣವಾದ ಅವರ ಬದುಕಿನ ಅನುಭವಗಳನ್ನು ಕೇಳಿದರೆ ಅವರ ಸಂತೃಪ್ತ ನಗೆಯ ಹಿಂದಿರುವ ಶಕ್ತಿಯ ಅರಿವು ನನಗಾಗುತ್ತದೆ. ಹಿರಿಯರ ಬದುಕಿನ ಅನುಭವಗಳೇ ಕಿರಿಯರಿಗೆ ಪಾಠವಲ್ಲವೇ?
ಕಿರೋಡಿಯನರ ಮನೆಯ ರಸ್ತೆಯ ಕೊನೆಯಲ್ಲಿ ನಮ್ಮಜ್ಜ ಖರೀದಿಸಿದ ಹಿತ್ತಿಲಲ್ಲಿ ಕಟ್ಟಿಸಿದ ಮನೆ ಇತ್ತು ಎಂದು ಹೇಳಿದ್ದೆನಲ್ಲಾ. ಅದು ನಮ್ಮದಾಗಿ ಉಳಿಯದೆ, ಕುಟುಂಬದ ಕಷ್ಟದ ಕಾಲದಲ್ಲಿ ಮಾರಾಟ ಮಾಡಬೇಕಾಯ್ತು. ಆದರೆ ನನ್ನ ಪಾಲಿಗೆ ಆ ಮನೆ ಇಂದಿಗೂ ಹೋಗಿ ಬರುವ ಮನೆಯಾಗಿ ಉಳಿದಿದೆ ಎನ್ನುವುದು ನನಗೆ ಖುಷಿಯ ವಿಚಾರ. ಆ ಮನೆಯನ್ನು ಕೊಂಡುಕೊಂಡವರು ಕೂಡಾ ಅಪ್ಪನ ಸ್ನೇಹಿತರಾಗಿದ್ದುದೇ ಇದಕ್ಕೆ ಕಾರಣ. ಅವರೇ ಬ್ರಹ್ಮಾನಂದರು. ಹಂಪನಕಟ್ಟೆಯ ಮಾರ್ಕೆಟ್ ರಸ್ತೆಯಲ್ಲಿ ಆರು ದಶಕಗಳಿಗೂ ಮೀರಿ ಜವಳಿ ವ್ಯಾಪಾರದ `ಮೈಸೂರ್ ಫ್ಯಾಶನ್ ಹೌಸ್' ಎಂಬ ಅಂಗಡಿಯಲ್ಲಿ ಅವರ ಬಂಧು ಮೂಡಲಗಿರಿ ಮಾಸ್ಟ್ರ ಜತೆಗೆ ಇದ್ದವರು, ಮುಂದೆ ಆ ಅಂಗಡಿಯ ಮಾಲಕರಾಗಿದ್ದವರು. ಅವರು ಕಾಪಿಕಾಡಿಗೆ ಬರುವ ಮೊದಲಿನಿಂದಲೂ ನಮಗೆ ಅಂದರೆ ಅಮ್ಮನಿಗೆ ಮತ್ತು ಮಕ್ಕಳಿಗೆ ಬೇಕಾದ ಬಟ್ಟೆ ಬರೆಗಳನ್ನು ಅಲ್ಲಿಂದಲೇ ತರುತ್ತಿದ್ದೆವು. ಅಪ್ಪ ಪೂರ್ಣ ಖಾದಿಧಾರಿಯಾಗಿದ್ದುದರಿಂದ ಅವರ ಬಟ್ಟೆಯ ಖರೀದಿ ಖಾದಿಭಂಡಾರದಿಂದ. ಹೀಗೆ ನಮಗೆ ಪರಿಚತರಾಗಿದ್ದ ಬ್ರಹ್ಮಾನಂದರು ನಮ್ಮ ಅಜ್ಜನ ಮನೆಯನ್ನು ಕೊಂಡುಕೊಂಡದ್ದು ನಮಗೆ ಸಂತೋಷದ ವಿಷಯವೇ ಆಗಿತ್ತು. ಅವರು ಗೃಹ ಪ್ರವೇಶದ ಸಂದರ್ಭದಲ್ಲಿ ತಮ್ಮ ಇಷ್ಟಮಿತ್ರರನ್ನು, ಬಂಧುಗಳನ್ನು ಆಹ್ವಾನಿಸಿದ್ದರು. ನಾವು ಮಕ್ಕಳು ಅಪ್ಪನ ಜತೆಗೆ ಹೋಗಿದ್ದೆವು. ಅಮ್ಮ ಬಂದಿರಲಿಲ್ಲ. ಬ್ರಹ್ಮಾನಂದರು ನನ್ನನ್ನು ಮನೆಗೆ ಕಳುಹಿಸಿ ಅಮ್ಮನನ್ನು ಕರೆತರುವಂತೆ ಒತ್ತಾಯಿಸಿದರು. ನಾನು ಹಿಂದೆ ಬಂದು ಅಮ್ಮನನ್ನು ಕರೆದುಕೊಂಡು ಹೋದೆ. ಅಂದಿನಿಂದ ಅವರ ಮನೆಯೂ ನಾವು ಕುಟುಂಬ ಸಮೇತರಾಗಿ ಹೋಗಿ ಬರುವ ಮನೆಗಳಲ್ಲಿ ಸೇರಿತು. ಅವರ ಮಡದಿ ಕಮಲಾ ದೇವಿಯವರು ಕೂಡಾ ಸಜ್ಜನಿಕೆಯ ಮೆಲುಮಾತಿನವರು. ಬ್ರಹ್ಮಾನಂದರು ಹಿರಿಯರಾಗಿ ಮುಂದೆಯೂ ನನಗೆ ನೆರವಾದವರು. ನಮ್ಮ ಕುಟುಂಬದ ಮದುವೆಗಳ ಸಂದರ್ಭಗಳಲ್ಲಿ ಜವಳಿ ನೀಡಿ ಸಹಕರಿಸಿದ್ದು ಎಷ್ಟೋ ಬಾರಿ. ಬಾಲ್ಯದಲ್ಲಿ ಅವರ ವ್ಯಕ್ತಿತ್ವದ ಪರಿಚಯ ಪೂರ್ಣವಾಗಿ ಸಾಧ್ಯವಾಗದು ತಾನೇ? ಆದರೆ ಅವರು ತೋರುತ್ತಿದ್ದ ಪ್ರೀತಿ ವಾತ್ಸಲ್ಯಗಳ ಕಾರಣದಿಂದಲೇ ಅವರಲ್ಲಿ ನನಗೆ ಗೌರವ, ಆತ್ಮೀಯತೆಗಳ ಜತೆಗೆ ನೆರವು ಕೇಳಬಹುದಾದ ವಿಶ್ವಾಸವೂ ಬಂದಿತ್ತು. ಹಾಗೆಯೇ ಕಾಲಕಾಲಕ್ಕೆ ಸಾಹಿತ್ಯಾಸ್ತಕರಾದ ಅವರ ಪರಿಚಯ ಹೆಚ್ಚಾದಂತೆ ಅವರನ್ನು ತಿಳಿದುಕೊಳ್ಳುವ ಸಾಧ್ಯತೆ ಎಲ್ಲವೂ ಸೇರಿ ಅವರ ಜನ್ಮ ಶತಮಾನೋತ್ಸವದ ಆಚರಣೆಯ ವೇಳೆ `ಪದ್ಮಬ್ರಹ್ಮ' ಎಂಬ ಅವರ ವ್ಯಕ್ತಿತ್ವ ಪರಿಚಯದ ಹಾಗೂ ಅವರ ಕವಿತೆ, ಲೇಖನಗಳುಳ್ಳ ಕೃತಿಯ ಸಂಪಾದನೆ ಮಾಡಿ ಕೃತಕೃತ್ಯಳಾಗಿದ್ದೇನೆ ಎಂದು ಭಾವಿಸುತ್ತೇನೆ. ಅವರ ಮನೆಯ `ಸೇವಾಸದನ' ಎಂಬ ಹೆಸರಿಗೆ ಅನ್ವರ್ಥವಾಗಿ ಬದುಕಿದ ಅವರು ಇಂದು ಇಲ್ಲ. ಅವರಿಲ್ಲದಿದ್ದರೂ ಅವರ ಮಕ್ಕಳು, ಸೊಸೆಯಂದಿರು ಆತ್ಮೀಯವಾಗಿ ಇಂದಿಗೂ ಮನೆಬಾಗಿಲು ತೆರೆದು ಆತ್ಮೀಯತೆಯಿಂದ ಕರೆಸಿಕೊಳ್ಳುತ್ತಾರೆ ಎನ್ನುವುದು ನನ್ನ ಪಾಲಿನ ಸಂತಸ. ಅವರು ಮಂಗಳೂರು ಕನ್ನಡ ಸಂಘದ ಸ್ಥಾಪಕ ಸದಸ್ಯರೂ ಆಗಿದ್ದು, ಕನ್ನಡ ಸಂಘದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಜನತಾ ಸೇವೆಯೇ ಜನಾರ್ದನ ಸೇವೆ ಎಂದು ತಿಳಿದು ಬದುಕಿದ ಹಿರಿಯ ಚೇತನ ಅವರು.
ನನ್ನ ಬಿಜೈ ಮನೆಯ ಗುಡ್ಡದ ಕೊನೆಯಲ್ಲಿ ಬೇಲಿಯಂತೆ ಮಣ್ಣಿನ ದರೆ ಇತ್ತು. ಅದರ ಆ ಕಡೆಗೆ ಇದ್ದುದು ಪಾಯಸರಗುಡ್ಡೆ ಎಂಬುದು ಪ್ರತೀತಿ. ಅದು ಗುಡ್ಡೆ ಎಂದರೆ ಮುರಕಲ್ಲಿನ ಗುಡ್ಡ. ಅಲ್ಲಲ್ಲಿ ಕಪ್ಪು ಬಂಡೆಗಳು ಇದ್ದುವು. ನಮ್ಮ ಗುಡ್ಡೆಯ ಬದಿಗೆ ತಾಗಿದಂತೆ ಒಂದು ಸಣ್ಣ ಗುಡಿಸಲು ಇತ್ತು. ತೆಂಗಿನ ಮರದ ಸೋಗೆಯನ್ನು ಹೆಣೆದು ಮಾಡಿದ ಗೋಡೆ, ಹುಲ್ಲಿನ ಮಾಡು, ಅದರಲ್ಲಿ ವಾಸವಿದ್ದವರು ಕೊರಗರು. ಅವರು ಅಸ್ಪೃಶ್ಯರೆಂಬುದಾಗಲೀ, ಇಂದಿನಂತೆ ಪರಿಶಿಷ್ಟ ಪಂಗಡದವರೆನ್ನುವುದಾಗಲೀ ಅಂದು ನನಗೆ ತಿಳಿದಿರಲಿಲ್ಲ. ಆ ಮನೆಯಲ್ಲಿ ಮಧ್ಯ ವಯಸ್ಸಿನ ಮಹಿಳೆ ಹಾಗೂ ಅವರ ಮೂರು ಮಂದಿ ಮಕ್ಕಳು ಇದ್ದರು. ದೊಡ್ಡವರು ಇಬ್ಬರು ಯುವತಿಯರು. ಅವರ ತಮ್ಮನೂ ಯುವಕನೇ. ಇವರೆಲ್ಲಾ ಕಾಪಿಕಾಡು ರಸ್ತೆಗೆ ಬರಬೇಕಾದರೆ ನಮ್ಮ ಗುಡ್ಡದಿಂದ ಕೆಳಗಿಳಿದು ನಮ್ಮ ಮನೆಯ ಅಂಗಳವಾಗಿಯೇ ಇನ್ನುಳಿದ  ಹಿತ್ತಲು, ಅಂಗಳಗಳನ್ನು ದಾಟಿ ಹೋಗುತ್ತಿದ್ದರು. ಹಾಗೆ ಹೋಗುವಾಗ ಅವರ ಕೈಯಲ್ಲಿ ವಿವಿಧ ರೀತಿಯ ಬೆತ್ತದಿಂದ, ಬಳ್ಳಿಯಿಂದ ತಯಾರಿಸಿದ ಬುಟ್ಟಿಗಳು ಇರುತ್ತಿದ್ದುವು. ಅಕ್ಕಿಗೇರುವ ಮೊರ, ಅನ್ನ ಬಸಿಯುವ ತಟ್ಟೆಯಂತಹ ಬುಟ್ಟಿ, ತರಕಾರಿ ಹಾಕಿಡಬಹುದಾದ ತರಹೇವಾರಿ ವಿನ್ಯಾಸದ ಬುಟ್ಟಿಗಳು. ಅಕ್ಕಿ ಪಾಯಸ ಮಾಡಲು ಬೇಕಾಗುವ ಬುಟ್ಟಿ, ಹೂ ಕೊಯ್ದು ಹಾಕಲು ಸಣ್ಣ ಸಣ್ಣದಾದ ಚಂದದ ಬುಟ್ಟಿಗಳು, ಬಟ್ಟೆ ಹಾಕಿಡುವ  ಮುಚ್ಚಳದ ಬುಟ್ಟಿಗಳು. ಇವುಗಳನ್ನು ಮಾರಿ ಹಣ ಪಡೆಯುತ್ತಿದ್ದರು. ನನಗೆ ನೀಡುವ ಹೂ ಕೊಯ್ದು ಹಾಕುವ ಬುಟ್ಟಿಗೆ ಹಣ ಪಡೆಯುತ್ತಿರಲಿಲ್ಲ. ಅವು `ಬಾಲೆಗ್' ಎಂದು ಹೇಳುತ್ತಿದ್ದರು. ಈ ಬುಟ್ಟಿಯು ಶಕುಂತಲೆಯ ಚಿತ್ರದಲ್ಲಿ ಅವಳ ಕೈಯಲ್ಲಿನ ಬುಟ್ಟಿಯಂತಿತ್ತು. ಇಂದು ಆ ವಿನ್ಯಾಸದಲ್ಲಿ ಲೋಹದ ಬುಟ್ಟಿಗಳಲ್ಲಿ ದೇವಸ್ಥಾನಕ್ಕೆ ಹಣ್ಣು ಕಾಯಿ ಒಯ್ಯುತ್ತಾರೆ. ಬುಟ್ಟಿ ತಯಾರು ಮಾಡುವುದೇ ಇವರ ಕುಲ ಕಸುಬು ಆಗಿತ್ತು. ಅವರು ಇದಕ್ಕೆ ಬೇಕಾದ ಬಿದಿರು, ಬೆತ್ತ, ಬಳ್ಳಿಗಳಿಗಾಗಿ ಬೇರೆ ಬೇರೆ ಗುಡ್ಡಕಾಡುಗಳಲ್ಲಿ ಅಲೆದಾಡಿ ತರುತ್ತಿದ್ದರು. ನಮ್ಮ ಗುಡ್ಡದಲ್ಲಿಯೂ ಕೆಲವೊಂದು ಬಳ್ಳಿಗಳು ಇತ್ತು. ಈ ಇಬ್ಬರು ಯುವತಿಯರನ್ನು ನೋಡಿದಾಗ ನನಗೆ ಹರಿಶ್ಚಂದ್ರ ಕಾವ್ಯದ ವಿಶ್ವಾಮಿತ್ರನ ಮಕ್ಕಳಾದ ಅನಾಮಿಕೆಯರ ನೆನಪಾಗುತ್ತಿತ್ತು. ನಿಜವಾಗಿಯೂ ಸುಂದರಿಯರು. ಉದ್ದವಾದ ದಷ್ಟ ಪುಷ್ಟ ದುಂಡಗಿನ ಶರೀರ ಎಣ್ಣೆಗಪ್ಪು ಬಣ್ಣ. ಅವರು ಜಡೆ ಹಾಕುತ್ತ್ತಿರಲಿಲ್ಲ. ಕೂದಲು ಸುತ್ತಿ ಸೂಡಿ (ಮುಡಿ) ಕಟ್ಟುತ್ತಿದ್ದರು. ಅದು ಅವರ ಮುಖಕ್ಕಿಂತಲೂ ದೊಡ್ಡದಾಗಿತ್ತು ಎಂದು ಅನಿಸುತ್ತಿತ್ತು. ಅವರು ನಮ್ಮ ಮನೆಗೆ ಬಂದಾಗ ನನ್ನನ್ನು ಪ್ರೀತಿಯಿಂದ ಎತ್ತಿಕೊಳ್ಳುತ್ತಿದ್ದರು. ಅದೇ ಸಲುಗೆಯಿಂದ ಸ್ವಲ್ಪ ದೊಡ್ಡವಳಾದ ಬಳಿಕ ನಾನು ಅವರ ಸೂಡಿ ಬಿಚ್ಚಿ ಕೂದಲು ತೋರಿಸುವಂತೆ ಕೇಳುತ್ತಿದ್ದೆ. ಅವರು ನನ್ನ ಹಟಕ್ಕೆ ಹಾಗೂ ನನ್ನ ಮೇಲಿನ ಪ್ರೀತಿಯಿಂದ ಕೂದಲು ಬಿಚ್ಚಿ ತೋರಿಸುತ್ತಿದ್ದರು. ಅಬ್ಬಾ, ಎಷ್ಟು ಉದ್ದ! ಅವರ ಬೆನ್ನ ಹಿಂದೆ ಕಾಲಿನ ಪಾದದ ವರೆಗೂ ಇಳಿಯುತ್ತಿತ್ತು. ಅವರು ತಲೆಗೆ ಸಿಕ್ಕಿದ ಹೂಗಳನ್ನು ಮುಡಿಯುತ್ತಿದ್ದರು. ಅವರ ಮನೆಯ ಸುತ್ತ ಗೊಂಡೆ, ದಾಸವಾಳದ ಗಿಡಗಳಿದ್ದುವು. ಅವರು ಯಾವಾಗಲೂ ಮತ್ತು ಹೆಚ್ಚಾಗಿ ಮುಡಿಯುತ್ತಿದ್ದದ್ದು ಹಲವು ರೀತಿಯ ದಾಸವಾಳ ಹೂವುಗಳನ್ನು. ನಾವು ಯಾರೂ ಅಂದರೆ ನನ್ನ ಶಾಲೆಯ ಸಹಪಾಠಿಗಳು ಕೂಡಾ ದಾಸವಾಳ ಮುಡಿಯುತ್ತಿರಲಿಲ್ಲ. ದಾಸವಾಳ ಹೂವುಗಳು ಅವರಿಗೆ ಪ್ರಿಯವಾದುದಂತೆ. ಅವರನ್ನು ನಾವು ಹೆಸರು ಹಿಡಿದು ಹೇಳುತ್ತಿರಲಿಲ್ಲ. ನಾವು ಮನೆಯಲ್ಲಿ ಅವರು ಬಂದಾಗ ಅಮ್ಮ ಗುಡ್ಡದವರು ಬಂದರು ಎನ್ನುತ್ತಿದ್ದೆವು. `ಕೊರಗರು' ಎಂದು ಹೇಳಬಾರದು ಎಂದು ಅಪ್ಪ ಅಮ್ಮ ಮಾತ್ರವಲ್ಲ ಶಾಲೆಯ ಸಹಪಾಠಿಗಳೂ ಹೇಳುತ್ತಿದ್ದರು. ಅದೂ ಸಂಜೆಯ ಹೊತ್ತು ಹೇಳಲೇಬಾರದಂತೆ. `ಕಾಡಿನವರು' ಎಂದು ಶಾಲಾ ಸಹಪಾಠಿಗಳು ಹೇಳುತ್ತಿದ್ದರು.
ಅಧ್ಯಾಪಕರಾದ ನನ್ನ ಅಪ್ಪ ಉರ್ವ ಚರ್ಚ್ ಶಾಲೆ, ಮುಂದೆ ಲೇಡಿಹಿಲ್ ಗರ್-ಲ್ಸ್ (ಬಾಲಕಿಯರ) ಹೈಸ್ಕೂಲ್‍ಗೆ ಹೋಗುತ್ತಿದ್ದಾಗ ನಮ್ಮ ಗುಡ್ಡೆ ದಾಟಿ ಅವರ ಮನೆಯ ಬದಿಯಿಂದಲೇ ಹೋಗುತ್ತಿದ್ದು ಅವರ ಬಗ್ಗೆ ಹೇಳುವಾಗ ಅವರು ಮನೆಯನ್ನು ಚೊಕ್ಕಟವಾಗಿಡುತ್ತಿದ್ದರೆಂದು ಹೇಳುತ್ತಿದ್ದರು. ನನ್ನ ಅಪ್ಪ ಅಮ್ಮನೆಂದರೆ ಅವರಿಗೆ ಬಹಳ ಗೌರವ ಹಾಗೂ ವಿಶ್ವಾಸ. ನಾವು ಕೂಡಾ ಆ ದಾರಿಯಲ್ಲಿ ಹೋಗುತ್ತಿದ್ದುದೂ ಉಂಟು. ಆಗಲೂ ಅವರು ಮನೆಯಲ್ಲಿದ್ದರೆ ಹೊರಗೆ ಬಂದು ಮಾತಾಡಿಸುತ್ತಿದ್ದರು. ನಮ್ಮ ಮನೆಯ ಹಬ್ಬದ ದಿನಗಳಲ್ಲಿ ಅವರು ಬಂದು ಊಟ ಮಾಡಿ ಹೋಗುತ್ತಿದ್ದರು. ಮನೆಯೊಳಗೆ ಬರುತ್ತಿರಲಿಲ್ಲ. ಅಂಗಳದಲ್ಲಿ ಕುಳಿತು ಬಾಳೆಯೆಲೆಯಲ್ಲಿ ಊಟ ಮಾಡುತ್ತಿದ್ದರು. ಕಡುಬು, ಪಾಯಸ ಗಳನ್ನೆಲ್ಲ ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು. ಅವರು ಬೆಳದಿಂಗಳು ಇರುವ ರಾತ್ರಿಗಳಲ್ಲಿ ಸಂಜೆಯಾಗುತ್ತಲೇ ಡೋಲು ಬಾರಿಸುವ, ಕೊಳಲು ಊದುವ ಜತೆಗೆ ಹಾಡುವುದು ಕೇಳುತ್ತಿತ್ತು. ಕೊಳಲಂತೂ ಚೆನ್ನಾಗಿ ನುಡಿಸುತ್ತಿದ್ದರು. ದಸರಾ ಹಬ್ಬದ ದಿನಗಳಲ್ಲಿ ಇತರ ವೇಷಗಳಂತೆಯೇ ಇವರು ಕೂಡ ತಮ್ಮ ಸಂಬಂಧಿಗಳ ಜತೆಯಲ್ಲಿ ಗಂಡಸರು, ಹೆಂಗಸರು ಮನೆ ಮನೆಗೆ ಬಂದು ಕುಣಿಯುತ್ತಿದ್ದರು. ಆ ಕುಣಿತಕ್ಕೆ ಡೋಲು ಮತ್ತು ಕೊಳಲಿನ ಹಿಮ್ಮೇಳವಿರುತ್ತಿತ್ತು. ಅವರ ಕುಣಿತದ ಹೆಜ್ಜೆಗಳು, ಕೈಕಾಲುಗಳ ಮಣಿತ ಇವೆಲ್ಲವೂ ಅಂದು ಏನು ಎಂದು ತಿಳಿಯದಿದ್ದರೂ ಅವು ಅಶ್ಲೀಲವಾಗಿರಲಿಲ್ಲ. ಹಾಗೆಯೇ ಉಳಿದವರ ಕೃತಕ ಕುಣಿತಕ್ಕಿಂತ ಇವರದು ಸಹಜ ಎಂದೆನಿಸುತ್ತಿತ್ತು. ಅಂದು ಕುಣಿತದ ವೇಷಗಳೆಂದರೆ ಇವರ ವೇಷವಲ್ಲದೆ ಬರುತ್ತಿದ್ದುದು ಹುಲಿವೇಷ ಮತ್ತೊಂದು ಸಿದ್ಧಿವೇಷ ಎನ್ನುವ ಹೆಸರಲ್ಲಿ ಉತ್ತರ ಭಾರತದ ವೇಷಭೂಷಣಗಳುಳ್ಳ ವೇಷ. ಈ ಕುಣಿತದಲ್ಲಿ ನಾವು ಕಲಿತುಕೊಳ್ಳುವಂತಹುದು ಏನೂ ಇರುತ್ತಿರಲಿಲ್ಲ. ಆದರೆ ಇವರ ಕುಣಿತದಲ್ಲಿ ಹೆಂಗಸರು ಹಾಕುವ ಹೆಜ್ಜೆ, ಕೈಗಳನ್ನು ಆಡಿಸುವ ರೀತಿ ನಮಗೆ ಶಾಲೆಯಲ್ಲಿ ಕಲಿಸುವ ಕುಮ್ಮಿಯಂತೆಯೇ ಸ್ವಲ್ಪ ಭಿನ್ನವಾಗಿರುತ್ತಿತ್ತು. ಬಹುಶಃ ನಾವು ನಾವೇ ಕುಣಿಯಬೇಕಾದಾಗ ಈ ಹೆಜ್ಜೆಗಳನ್ನು ಅಭಿನಯಗಳನ್ನು ಸೇರಿಸಿ ಕೊಳ್ಳುತ್ತಿದ್ದೆವು ಎಂದು ನೆನಪು. ನಾನು ಮೊದಲು ನೋಡಿದ ನೃತ್ಯ ಇವರದ್ದೇ ಅಂದರೆ ತಪ್ಪಲ್ಲ. ಬಹುಶಃ ಜನಪದ ಕುಣಿತ ಅಂದರೆ ಇದೇ ಎಂದು ತಿಳಿದಿದ್ದೇನೆ. ಹೀಗೆ ರಾತ್ರಿ ಅವರಲ್ಲಿ ಈ ಡೋಲು, ಕೊಳಲಿನ, ಹಾಡಿನ ಸದ್ದು ಕೇಳಿದರೆ ಅಲ್ಲಿಗೆ ಹೋಗಬೇಕು ಎಂದು ಒತ್ತಾಯಿಸುತ್ತಿದ್ದ ನನ್ನನ್ನು ಬೆಳಗ್ಗೆ ನಮ್ಮ ಮನೆಯ ಆಚೆ ಬದಿಯ ಹಿತ್ತಲಿನ ಪೊಲೀಸ್ ಮಾವ ತಾನು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿ ರಮಿಸುತ್ತಿದ್ದರು.
ಎಂಜಲೆಲೆಯ ಊಟಕ್ಕೆ ನಿಷೇಧ ಬರುವವರೆಗೆ ಅವರು ದೇವಸ್ಥಾನಗಳಲ್ಲಿ ಮದುವೆ ಮುಂಜಿ ಇರುವಲ್ಲಿ ಹೋಗಿ ಬಿಸಾಡಿದುದನ್ನು ತರುತ್ತಿದ್ದರು ಎಂದು ಹೇಳುವುದನ್ನು ಕೇಳಿದ್ದೆ. ನೋಡಿಲ್ಲ. ನಮ್ಮ ಮನೆಯಲ್ಲಿ ಎಂದೂ ಅವರಿಗೆ ಎಂಜಲು ನೀಡುತ್ತಿರಲಿಲ್ಲ. ಹಾಗೆಯೇ ಅವರಿಗೆ ಕಾಫಿ ಗೆರಟೆಯಲ್ಲೂ ಕೊಡುತ್ತಿರಲಿಲ್ಲ. ಇಬ್ಬರು ಯುವತಿಯರ ತಮ್ಮ ಮುಂದೆ ಮುನ್ಸಿಪಾಲಿಟಿಯಲ್ಲಿ ಡಿ.ಡಿ.ಟಿ. ಹಾಕುವ ಕೆಲಸಕ್ಕೆ ಸೇರಿದ. ಬಳಿಕ ಆತನಿಗೆ ಮದುವೆ ಆಯ್ತು. ಆತನ ಹೆಂಡತಿ ಅವನಂತೆ ಗಿಡ್ಡವಾಗಿದ್ದು ಚಂದದ ಯುವತಿ ಯಾಗಿದ್ದಳು. ಆಕೆಯ ಗುಂಗುರು ಗಿಡ್ಡ ಕೂದಲು ಕೂಡಾ ಆಕರ್ಷಣೀಯವಾಗಿತ್ತು. ಪಾಯಸರ ಗುಡ್ಡೆಯಲ್ಲಿ ಮೈಕ್ರೋವೇವ್ ಸ್ಟೇಶನ್ ಬಂದ ಮೇಲೆ ನಾವು ಗುಡ್ಡೆಯ ದಾರಿಯಿಂದ ಉರ್ವ, ಲಾಲ್‍ಬಾಗ್‍ಗಳಿಗೆ ಹೋಗುವುದು ತಪ್ಪಿಹೋಯಿತು. ಆ ದಿನಗಳಲ್ಲಿ ಅಲ್ಲಿ ಇನ್ನೂ ಕೆಲವು ಅವರ ಸಮುದಾಯದ ಮನೆಗಳು ಹುಟ್ಟಿಕೊಂಡವು. ಅವುಗಳಲ್ಲಿ ಒಂದು ನಮ್ಮ ಕಾಪಿಕಾಡು ಶಾಲೆಯಲ್ಲಿ ಜವಾನೆಯಾಗಿದ್ದ ಗುಬ್ಬಿ ಎನ್ನುವವರ ಮನೆ. ಇನ್ನೊಂದು ಪೋಸ್ಟ್ ಮಾಸ್ಟರ್ ಆಗಿದ್ದ ಗೋಕುಲ್‍ದಾಸರ ಮನೆ. ಗೋಕುಲ್ ದಾಸರು ಮುಂದೆ ನನ್ನ ಪರಿಚಿತರಲ್ಲಿ ಆತ್ಮೀಯರಲ್ಲಿ ಒಬ್ಬರಾದರು. ಕೊರಗರ ಅಭಿವೃದ್ಧಿ, ಅವರ ಸಮುದಾಯದ ಸಂಘಟನೆಗಳ ಜತೆಗೆ ನನ್ನ ಇಂದಿನ ನಿಕಟ ಸಂಪರ್ಕಕ್ಕೆ ಅಂದು ಬಾಲ್ಯದಲ್ಲಿ ಕೊರಗರ ಸಮುದಾಯದ ಕುರಿತಾದ ಪ್ರೀತಿ, ವಿಶ್ವಾಸ, ಆತ್ಮೀಯತೆಗಳೇ ಕಾರಣ ಎಂದು ತಿಳಿದಿದ್ದೇನೆ. ನಮ್ಮ ಸಾಮಾಜಿಕ ಬದುಕಿಗೆ ಹೆತ್ತವರ ನಡೆನುಡಿ ಸ್ವಭಾವಗಳೂ ಕಾರಣ ಆಗಿರುತ್ತವೆ ಎನ್ನುವುದಕ್ಕೆ ನನ್ನ ಬದುಕು ಸಾಕ್ಷಿ.