ಸ್ಟೋರಿ ಆಫ್ ೧೦೦೦ ರುಪೀಸ್

ಸ್ಟೋರಿ ಆಫ್ ೧೦೦೦ ರುಪೀಸ್

 
 
ಮೊನ್ನೆ ನನ್ನ  ಸ್ನೇಹಿತರೊಬ್ಬರು  ಒಂದು ತಿಂಗಳ ನಂತರ ಭೇಟಿ ಮಾಡಿದರು. ಒಂದು ತಿಂಗಳು ಸ್ವಲ್ಪ ವಿಚಿತ್ರವಾಗಿ ವರ್ತಿಸುತ್ತಿದ್ದರು. ಕರಣ ಕೇಳಿದ್ದಕ್ಕೆ ಅವರು ಹೇಳಿದ್ದನ್ನು ಕೇಳಿ  ನಾನು ಸ್ವಲ್ಪ ಯೋಚನೆ ಮಾಡಬೇಕೆನ್ನಿಸಿತು. ಕೆಳಗೆ ಕೊಟ್ಟಿರುವುದು ಅವರೇ ಹೇಳಿದ ಮಾತು.

 

"ಅದೊಂದು ಸೋಮವಾರ ಬೆಳ್ಳಂಬೆಳಗ್ಗೆ ಐದುವರೆಯ ಹೊತ್ತಿಗೆ ಮಾಮೂಲಿನಂತೆ ನನಗೆ ಎಚ್ಚರವಾಯಿತು . ಎದ್ದು ನೋಡಿದರೆ ಅಪ್ಪ ನನ್ನ ರೂಮ್ ನಲ್ಲಿರುವ ಕಂಪ್ಯೂಟರ್ನಲ್ಲಿ ಏನೋ ಮಾಡುತ್ತಿದ್ದರು.  ಸರಿಯಾಗಿ  ನೋಡಿದಾಗ  ಸ್ವಲ್ಪ ಗೊಂದಲದಲ್ಲಿ ಏನನ್ನೋ ಹುಡುಕುತ್ತಿದ್ದಂತೆ ತೋರಿತು .  ಏನೆಂದು ವಿಚಾರಿಸಿದಾಗ ಹೇಳಿದರು "ನಾನು ಇನ್ನು ಒಂದು ತಿಂಗಳು ಮನೆಯಲ್ಲಿರುವುದಿಲ್ಲ, ನಾನು ಮತ್ತೆ ನನ್ನ ಫ್ರೆಂಡ್ಸ್ ಎಲ್ಲಾ  ಇಡೀ  ಕರ್ನಾಟಕ ಟೂರ್ಗೆ ಹೋಗ್ತಿದ್ದೀವಿ ಹಾಗೆ  ನಿನ್ನ ಬ್ಯಾಂಕ್ ಅಕೌಂಟ್ ಗೆ ಒಂದಷ್ಟು ದುಡ್ಡು ಹಾಕಿದ್ದೀನಿ,ಒಂದ್ ಹತ್ತು ನಿಮಿಷ ಹೊರಗಡೆ ಹೋಗಿ ಬರ್ತೀನಿ ರೆಡಿ ಆಗು  " ಅಂತ ಹೇಳಿ ಹೋದರು, ಅಪ್ಪನದೇನು ಇದು ಹೊಸದಲ್ಲ ಇದೆ ತರ ಸುಮಾರು ಟೂರ್ ಗಳನ್ನೂ ಮಾಡಿದ್ದಾರೆ. ನನಗೋ, ಅಷ್ಟೇ ಸಾಕಿತ್ತು ಸಂಪೂರ್ಣ ಖುಷಿಯಾಗಿತ್ತು. ದುಡ್ಡು ಬಂದರೆ ಯಾರಿಗೆ ತಾನೇ ಖುಷಿಯಾಗುವುದಿಲ್ಲ. ನಾನು ಕೇಳಿದ ಮಟ್ಟಿಗೆ ಪ್ರಪಂಚದಲ್ಲಿ ನಿವೃತ್ತಿ ಹೊಂದಿದವರು ಹಾಗೂ ಇನ್ನೂ ಮದುವೆ ಗೋಜಿಗೆ ಹೋಗಿಲ್ಲದ  ಹುಡುಗ ಹುಡುಗಿಯರು  , ಈ ಇಬ್ಬರೂ ಜೀವನವನ್ನು ತುಂಬಾ ಚೆನ್ನಾಗಿ ಆನಂದಿಸುತ್ತಿರುತ್ತಾರಂತೆ. ಹಾಗೆ ಆ ಇಬ್ಬರೂ ನಮ್ಮ ಮನೆಯಲ್ಲಿಯೇ ಇರುವುದು ಸಂತೋಷದ ಸಂಗತಿ. ವಾರದ ದಿನಗಳಲ್ಲಿ ನನ್ನ ತಂದೆ  ಮನೆಯಿಂದ ಹೊರಗಿದ್ದರೆ ವಾರಾಂತ್ಯದಲ್ಲಿ ನಾನು ಮನೆಯಿಂದ ಹೊರಗಿರುತ್ತೇನೆ. ಅದರಲ್ಲೂ ಕೈಗೆ ದುಡ್ಡು ಕೊಟ್ಟು ಹೋದರೆ ಅಷ್ಟೇ, ಕೈಗೆ ಸಿಗುವುದೇ ಇಲ್ಲ. ನನ್ನ ಎಲ್ಲಾ ಬಂದು ಮಿತ್ರರಿಗೆ ಒಂದು ತಿಂಗಳ ಕಾಲ ಯೋಜನೆಗಳನ್ನು ರೂಪಿಸುವಂತೆ ಮೆಸೇಜ್ ಮಾಡಿ ಮಹಡಿಯ ಮೇಲಿನಿಂದ ಕೆಳಗೆ ಬಂದೆ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಅಷ್ಟರಲ್ಲಿ ಅಪ್ಪ ಕೂಡ ಹೊರ ಹೋಗಿದ್ದವರು ವಾಪಾಸ್  ಬಂದಿದ್ದರು.

 

ಇನ್ನೇನು ಮನೆ ಬಿಡಬೇಕು , ಅನ್ನುವಷ್ಟರಲ್ಲಿ ಅಪ್ಪ " ನಿಂಗ್ ಗೊತ್ತಿದೆಯಲ್ಲ ನನ್ನ ಡೆಬಿಟ್ ಕಾರ್ಡ್  ಕೆಲಸ ಮಾಡುತ್ತಿಲ್ಲ ಅಂತ ಅದಕ್ಕೆ ನಿನ್ನ ಡೆಬಿಟ್ ಕಾರ್ಡ್ ನ ತೊಗೊಂಡು ಹೋಗುತ್ತೀನಿ ಅದಕ್ಕೋಸ್ಕರ ಬೆಳಗ್ಗೆ ನಿನ್ನ ಅಕೌಂಟ್ಗೆ ದುಡ್ಡು ಹಾಕಿದ್ದೇನೆ , ಕೊಡು ನಿನ್ನ ಡೆಬಿಟ್ ಕಾರ್ಡ್ ಅನ್ನು.ಒಂದು ತಿಂಗಳ ನಂತರ  ವಾಪಾಸ್ ಮಾಡುತ್ತೇನೆ " ಎಂದರು. ನಾನು  ಒಂದು ನಿಮಿಷ ಧಿಗ್ಬ್ರಾಂತಿಗೊಂಡವನಂತೆ ಅವರನ್ನೇ ನೋಡುತ್ತಾ ಅಲ್ಲೇ ನಿಂತೆ. ಒಮ್ಮೆ ಇಂದ್ರ ಬ್ರಾಹ್ಮಣನ ವೇಷ ಧರಿಸಿ ಸೂರ್ಯಪುತ್ರನ ಹತ್ತಿರ ಕುಂಡಲಿಗಳನ್ನು ದಾನವಾಗಿ ಕೇಳಿದಾಗ, ಮಹಾಪರಾಕ್ರಮಿಯಾದ ಕರ್ಣನು ಕುಂಡಲಿಗಳಿಲ್ಲದೆ ತಾನು ಯುದ್ಧ ಮಾಡಿದರೆ ತನಗೆ  ಆಪತ್ತು ತಪ್ಪಿದ್ದಲ್ಲಾ ಎಂದು ಗೊತ್ತಿದ್ದರೂ ಸಹ  ಅದೆಷ್ಟು  ನೋವಿನಿಂದ ಆ ಬ್ರಾಹ್ಮಣನಿಗೆ  ತನ್ನ ಹುಟ್ಟಿನಿಂದ ಬಂದಿದ್ದ ಕವಚವನ್ನು ಕಳಚಿಕೊಟ್ಟನೋ ಅಷ್ಟೇ ನೋವಿನಿಂದ ನಾನು ನನ್ನ ಡೆಬಿಟ್ ಕಾರ್ಡನ್ನು ನನ್ನ ಅಪ್ಪನಿಗೆ ಕೊಟ್ಟೆ.

 

ಕೊಟ್ಟು ಅವರು ಹೋದ ನಂತರ  ನನ್ನ ಹತ್ತಿರ ಎಷ್ಟು ದುಡ್ಡು ಇದೆ ಎಂದು ನೋಡಿಕೊಂಡರೆ ಬರೀ ೧೦೦೦ ರೂಪಾಯಿಗಳು. ಒಂದು ಕ್ಷಣ ಪ್ರಪಂಚವೆಲ್ಲಾ ಅಲ್ಲೋಲ ಕಲ್ಲೋಲವಾದಂತೆ ಅನ್ನಿಸಿತು. ಮನೆಯಲ್ಲಿ ದುಡ್ಡನ್ನು ಹೇಗೆ ಕೇಳುವುದು? ಸ್ನೇಹಿತರ ಹತ್ತಿರ ಕೇಳಿದರೆ ಸಾಲ ಕೇಳಬೇಕು. ನಾನು ತಲೆಹೋಗುವಂತಹ ಯಾವುದೇ ಖರ್ಚು ಮಾಡದಿರುವುದರಿಂದ ನನಗೆ ಅದು ಅನಾವಶ್ಯಕ ಎಂದೆನಿಸಿ ಸುಮ್ಮನಾದೆ. ಸರಿ ಮೊದಲು ದಿನಕ್ಕೆ ಮೂರು ಬರಿ ಚಹಾ ಕುಡಿಯುತ್ತಿದ್ದೆ ಹೋಟೆಲ್ನಲ್ಲಿ.  ಗುಂಪು ಗುಂಪಾಗಿ ಎಲ್ಲರೂ ಬಹಳಷ್ಟು ತಿನ್ನುತ್ತಿದ್ದೆವು. ಕಚೇರಿಯಲ್ಲಿ ತಡವಾದರೆ ಅದೆಷ್ಟೇ ದುಡ್ಡು ಖರ್ಚು ಆದರೂ  ಮನೆಗೆ ಓಲಾ ಟ್ಯಾಕ್ಸಿಯಲ್ಲಿ ಬರುತ್ತಿದ್ದೆ. ವಾರಾಂತ್ಯದಲ್ಲಿ ಕನಿಷ್ಠ ಪಕ್ಷ ಒಂದಾದರೂ ಹೊಸ ಸಿನಿಮಾ ನೋಡದಿದ್ದರೆ ನಿದ್ದೆಯೇ ಬರುತ್ತಿರಲಿಲ್ಲ ಹಾಗೆಯೇ ಗೆಳೆಯರೆಲ್ಲಾ ಸೇರಿಕೊಂಡು  ಫುಲ್ ಟ್ಯಾಂಕ್ ಪೆಟ್ರೋಲ್ ತುಂಬಿಸಿ ಊರು ತುಂಬಾ  ಸುತ್ತುತ್ತಿದ್ದೆವು. ಇದಕ್ಕೆಲ್ಲಾ ನಾನು ಡೆಬಿಟ್ ಕಾರ್ಡನ್ನೇ ಬಳಸುತ್ತಿದ್ದೆ ಯಾಕೆಂದರೆ ದುಡ್ಡು ಇಟ್ಟುಕೊಂಡು ಓಡಾಡುವುದು ಅಷ್ಟೊಂದು ಸುರಕ್ಷತೆಯಲ್ಲಾ ಎಂದು ನನ್ನ ನಂಬಿಕೆ . ಹಾಗು ಪೆಟಿಎಂ ಇನ್ನೂ ಪೂರ್ತಿಯಾಗಿ ಬೆಂಗಳೂರಲ್ಲಿ ಉಪಯೋಗಿಸುತ್ತಿರಲಿಲ್ಲಾ . ಈಗ ಅಂತಹ ಕಾರ್ಡ್ ಅನ್ನು ಕೊಟ್ಟು. ಯಾರಾದರೂ ದುಡ್ಡು ಇದಿಯಾ ಎಂದು ಕೇಳಿದರೆ ಇದೆ, ಆದರೆ ಉಪಯೋಗಿಸುವುದಕ್ಕೆ ಆಗುವುದಿಲ್ಲಾ ಎಂದು ಹೇಗೆ ಹೇಳುವುದು, ಅವರು ನಂಬುತ್ತಾರೆಯೇ?. ಅದು ಎಂತಹ  ಅವಮಾನ ಅಂದರೆ ಮಹಾಬಲಶಾಲಿಯಾದ  ಭೀಮನು ವಲ್ಲಭನೆಂಬ ಹೆಸರಿನಿಂದ ವಿರಾಟನಗರದಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿರಬೇಕಾದರೆ ಅವನಿಗೆ ಹೇಗೆ ಅನಿಸುತ್ತಿತ್ತೋ ನನಗೂ  ಹತ್ ಹತ್ತಿರ ಹಾಗೆ ಅನ್ನಿಸುತ್ತಿತ್ತು.

 

ಇದಾದ ನಂತರ ನಾನು ಯಾರಹತ್ತಿರವೂ ಅಷ್ಟು ಮಾತನಾಡದೆ ಎಷ್ಟು ಬೇಕೋ ಅಷ್ಟರಲ್ಲಿ ಇದ್ದೆನು. ಮೊದಲು ದೊಡ್ಡ ಹೋಟಲ್ಗೆ ಹೋಗುತ್ತಿದ್ದವನು ಈಗ ಒಳ್ಳೆಯ ಹೋಟೆಲ್ಗೆ, ಅದು ಹೋಗಲೇಬೇಕಾದ ಸಂದರ್ಭ ಬಂದಿದ್ದರೆ ಮಾತ್ರ ಹೋಗಲು ಶುರು ಮಾಡಿದೆನು  ಕೇಳಿದರೆ ಜೆ ಯಸ್  ಟಿ  ಎಂಬ ಕಾರಣ  ಮುಂದಿಡುತ್ತಿದ್ದೆನು. ಚಹಾ ಹಾಗು ಕಾಫಿ ಎಲ್ಲವನ್ನೂ ನಿಲ್ಲಿಸಿಬಿಟ್ಟೆನು.ಎಷ್ಟೇ ಕೆಲಸ ಇದ್ದರೂ ಸಮಯಕ್ಕೆ ಸರಿಯಾಗಿ ಮುಗಿಸಿ ಬಿಎಂಟಿಸಿ ನಲ್ಲೇ  ಮನೆಗೆ ಬರುತ್ತಿದ್ದೆನು. ವಾರಾಂತ್ಯದಲ್ಲಿ ಫೋನ್ ಸ್ವಿಚ್ ಆಫ್ ಮಾಡಿ ಮನೆಯಲ್ಲಿಯೇ ಉಳಿದು ಮನೆ ಕೆಲಸಗಳು, ಅಂದರೆ ಗಿಡಗಳಿಗೆ ನೀರು ಹಾಕುವುದು ಅಥವಾ ಮನೆಯನ್ನು ಸ್ವಚ್ಛಗೊಳಿಸುವುದು ಹಾಗು ಅಮ್ಮನಿಗೆ ಏನಾದರು ಸಹಾಯ ಮಾಡಬೇಕಿದ್ದರೆ ನಾನೇ ಕೇಳಿ ಮಾಡುತ್ತಿದ್ದೆನು. ಮೊದಲು ನನ್ನ ಅಮ್ಮನಿಗೆ ಈ ನಡವಳಿಕೆಯಿಂದ ಸ್ವಲ್ಪ ಹೆದರಿಕೆಯಾದರು ನಂತರ ನನಗೆ ಒಳ್ಳೆ ಬುದ್ದಿ ಬಂದಿದೆ ಎಂದೆನಿಸಿ ಸುಮ್ಮನಾದರು. ಸಿನಿಮಾ ಬದಲು ಪ್ರಾಣೇಶ್ ಅವರದೋ ಅಥವಾ ಚಕ್ರವರ್ತಿ ಸೂಲಿಬೆಲೆಯವರದೋ ಭಾಷಣ ಕೇಳುತ್ತಿದ್ದೆನು.  ನಿಜ ಹೇಳಬೇಕೆಂದರೆ ಇವುಗಳು ಸಿನಿಮಾಗಳಿಗಿಂತ ತುಂಬಾ ಚೆನ್ನಾಗಿರುತ್ತಿದ್ದವು ಹಾಗು ಪುಸ್ತಕಗಳನ್ನೂ ಓದಲು ಶುರು ಮಾಡಿದೆನು . ಮನೆಯ ಸುತ್ತ ಮುತ್ತ ಓಡಾಡಲು ದೇವರುಕೊಟ್ಟ ಕಾಲುಗಳನ್ನೇ ಉಪಯೋಗಿಸುತ್ತಿದ್ದೆನು ಕೇಳಿದರೆ ವಾಕಿಂಗ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳುತ್ತಿದ್ದೆನು. ನನ್ನ ಸ್ನೇಹಿತರೆಲ್ಲಾ ನನಗೆ ಏನೋ ಆಗಿದೆ ಎಂದು ಅಂದುಕೊಂಡಿದ್ದರು.

 

ಒಂದು ತಿಂಗಳು ಸಾಕ್ಷಾತ್ ಗಲ್ಲು ಶಿಕ್ಷೆಗೆ ತನ್ನ ತಲೆಕೊಡಬೇಕಾಗಿರುವ ಕೈದಿ ಎಷ್ಟು ಮೌನದಿಂದ ಇರುವನೋ ಅಷ್ಟೇ ಮೌನದಲ್ಲಿ ಇದ್ದೆನು. ಒಂದು ತಿಂಗಳ ನಂತರ ತಂದೆ ಮನೆಗೆ ಬಂದರು. ಸ್ವಲ್ಪ ನಿರಾಳವಾಯಿತು. ಕುಶಲೋಪರಿಗಳು ಹಾಗು ಊಟೋಪಚಾರಗಳು ಮುಗಿದ ನಂತರ ಅವರೇ ತೊಗೋ ನಿನ್ನ ಕಾರ್ಡನ್ನು ಎಂದು ಕೊಟ್ಟರು. ನಾನು ಒಂದು ನಿಮಿಷ ಯೋಚನೆ ಮಾಡಿದೆ. ಅಲ್ಲಾ, ನಾನು ಅದಕ್ಕೆ ಇಷ್ಟೊಂದು ಅವಲಂಬಿತನಾಗಿದ್ದೆನಲ್ಲ. ಅನವಶ್ಯಕ ಖರ್ಚನ್ನು ನಿಲ್ಲಿಸಿದರೆ ಅದೆಷ್ಟು  ದುಡ್ಡು ನಾನು ಉಳಿಸ ಮನೆಗೆ ಕೊಟ್ಟು ಮನೆಯ ಸಹಾಯಕ್ಕೆ ನೆರವಾಗಬಹುದಿತ್ತು . ದುಡ್ಡು ಮಿತವಾಗಿ ಬಳಸಿಯೂ  ಎಷ್ಟು  ಸುಂದರವಾಗಿ ಬದುಕಬಹುದು.ಅಥವಾ ಅದು ನನ್ನನ್ನು ಹಾಳುಮಾಡುತ್ತಿದೆಯೇ ? ಮಿತವಾದ ಖರ್ಚನ್ನು ಮಾಡಿದರೆ ನಾನು ಬದುಕಲಾರೆನೇ ? ಎಂತೆಲ್ಲಾ ಪ್ರಶ್ನೆಗಳು ನನ್ನ ಮನದಲ್ಲಿ ಉದ್ಭವಿಸಿ ನಾನು ಆ ಕಾರ್ಡ್ಅನ್ನೇ  ದಿಟ್ಟಿಸಿ ನೋಡತೊಡಗಿದೆನು".

 

ಇದನ್ನು ಕೇಳಿ ನನಗೂ ಸ್ವಲ್ಪ ನನ್ನ ಬಗ್ಗೆಯೂ ಆಲೋಚನೆ  ಮಾಡಬೇಕೆನ್ನಿಸಿತು.ಅತಿಯಾದ ಖರ್ಚು ಅಥವಾ ದುಂದು ವ್ಯಚ್ಛ ಮನುಷ್ಯನನ್ನು ಹೇಗೆಲ್ಲಾ ಆಡಿಸುತ್ತದೆ ಹಾಗೆ ಮಿತವಾದ ಹಾಗು ಬುದ್ದಿವಂತ ಖರ್ಚು ಮನುಷ್ಯನನ್ನು ಹೇಗೆ ಉದ್ಧಾರ  ಮಾಡುತ್ತದೆ ಎಂಬುದಕ್ಕೆ ಇದು ಒಳ್ಳೆಯ ಉದಾಹರಣೆಯಾಗಿತ್ತು . ಮುಂದೇನು ಮಾಡಿದರು ಎಂಬ ಕುತೂಹಲ ಕೆರಳಿ ಮುಂದೆ ಏನು ಮಾಡಿದರು , ಕಾರ್ಡನ್ನು ಯಾರಿಗೆ ಕೊಟ್ಟರು  ಅಥವಾ ಬೇರೆ ಯಾವನಿರ್ಧಾರ ತೆಗೆದುಕೊಂಡರು ಎಂದು ಕೇಳಿದಾಗ ಅವರು ಹೇಳಿದ ಮಾತು ಇದು."ಛೆ ಇಷ್ಟು ದಿನ ನಾನೆಂತಹ ತಪ್ಪು ಮಾಡುತ್ತಿದ್ದೆನು ಎಂದು ನನ್ನ ತಪ್ಪಿನ ಅರಿವಾಗಿತ್ತು  . ಆದರೆ  ಕೊಟ್ಟ ಕಾರ್ಡನ್ನು  ತೆಗೆದುಕೊಂಡು ಮೊದಲಿನಂತೆಯೇ  ಊರು ಸುತ್ತುವುದಕ್ಕೆ ಮನೆಯಿಂದ ಹೊರ ಹೋದೆನು."

 
 
 

----ಭರತ್