ಸ್ವಾಮಿ ಚಿದ್ರೂಪಾನಂದ ಸರಸ್ವತಿ - ಕಿರುಪರಿಚಯ

ಸ್ವಾಮಿ ಚಿದ್ರೂಪಾನಂದ ಸರಸ್ವತಿ - ಕಿರುಪರಿಚಯ

     ಅದೊಂದು ಅಪೂರ್ವ ಸನ್ನಿವೇಶ. ಕೆ.ಆರ್. ನಗರ ತಾಲ್ಲೂಕಿನ ಹಂಪಾಪುರ ಗ್ರಾಮದ ಶ್ರೀ ಮಧುಸೂದನರಾವ್ ಮತ್ತು ಶ್ರೀಮತಿ ಸ್ವರೂಪರಾಣಿ ದಂಪತಿಗಳು ಕೆಲವು ವರ್ಷಗಳಿಂದ ನಡೆಸುತ್ತಿದ್ದ ಗೋಶಾಲೆಯಲ್ಲಿ ಸ್ಥಾಪಿಸಿದ್ದ ವೇಣುಗೋಪಾಲಸ್ವಾಮಿ ದೇವರ ವಿಗ್ರಹದ ವಿಧಿವತ್ ಪ್ರತಿಷ್ಟಾಪನೆ ಕಾರ್ಯ ಹುಬ್ಬಳ್ಳಿಯ ಪ.ಪೂ. ಶ್ರೀ ಸ್ವಾಮಿ ಚಿದ್ರೂಪಾನಂದ ಸರಸ್ವತಿಗಳವರ ಸಾನ್ನಿಧ್ಯದಲ್ಲಿ ೦೯-೦೬-೨೦೧೩ರಂದು ನೆರವೇರಿತ್ತು. ಆ ಗೋಶಾಲೆಗೂ ಒಂದು ಹಿನ್ನೆಲೆಯಿತ್ತು. ೨೦ ವರ್ಷದ ಬೆಳೆದ ಮಗ ಸುಭಾಷ್ ಅಕಾಲಿಕವಾಗಿ ತೀರಿಹೋದ ದುಃಖವನ್ನು ಅರಗಿಸಿಕೊಳ್ಳಲಾಗದ ಆ ದಂಪತಿಗಳು ಗೋಶಾಲೆಯನ್ನು ನಡೆಸುವ ಮೂಲಕ ಮರೆಯಲು ಪ್ರಯತ್ನಿಸಿದ್ದಾರೆ. ಆಹ್ವಾನವಿದ್ದದ್ದರಿಂದ ಹಾಸನದ ವೇದಭಾರತಿಯ ನಾವು ಹದಿನೈದು ವೇದಾಭ್ಯಾಸಿಗಳು ಆ ಸಮಾರಂಭಕ್ಕೆ ಹೋಗಿದ್ದೆವು. ನಮ್ಮ ತಂಡದಲ್ಲಿ ಮಹಿಳೆಯರೂ ಇದ್ದು ಸ್ವಾಮಿಗಳ ಸಮ್ಮುಖದಲ್ಲಿ ವೇದಘೋಷವನ್ನೂ ಮಾಡಿದೆವು. ಮಹಿಳೆಯರೂ ವೇದಮಂತ್ರಗಳನ್ನು ಹೇಳಿದ್ದನ್ನು ಕೇಳಿದ ಸ್ವಾಮಿಗಳು ಆನಂದಿತರಾಗಿ ವೇದಭಾರತಿಯ ಕುರಿತು ವಿಚಾರಿಸಿದರು. ಯಾವುದೇ ಜಾತಿ, ಮತ, ಪಂಥ, ಲಿಂಗ, ವಯಸ್ಸುಗಳ ತಾರತಮ್ಯವಿಲ್ಲದೆ ಕಳೆದ ಒಂದು ವರ್ಷದಿಂದ ವೇದಾಭ್ಯಾಸ ಮಾಡುತ್ತಿರುವ ಬಗ್ಗೆ, ಇದಕ್ಕೆ ಪೂರಕವಾದ ವೈಚಾರಿಕ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಬಗ್ಗೆ ತಿಳಿಸಿ, ಈ ಕಾರ್ಯಕ್ಕೆ ಅವರ ಆಶೀರ್ವಾದವನ್ನೂ ಕೋರಿದೆವು. ಆಗ ಅವರು ಉದ್ಗರಿಸಿದ್ದೇನೆಂದರೆ, "ಇದು ನಿಜವಾಗಿ ರಾಷ್ಟ್ರ ಕಟ್ಟುವ ಕೆಲಸ. ಆಗಬೇಕಾಗಿರುವುದೂ ಇದೇ. ಕೇವಲ ನನ್ನ ಆಶೀರ್ವಾದ ನಿಮಗೆ ಸಾಕೆ? ಐ ವಿಲ್ ಬಿ ವಿತ್ ಯು! " ಈ ಭೇಟಿಯ ಫಲಶ್ರುತಿಯಾಗಿ ಇದೀಗ ಸ್ವಾಮಿಗಳು ವೇದಭಾರತಿ ಮತ್ತು ಹುಬ್ಬಳ್ಳಿಯ ಆರ್ಷವಿದ್ಯಾಕೇಂದ್ರದ ಆಶ್ರಯದಲ್ಲಿ ಹಾಸನದ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಇದೇ ತಿಂಗಳು ೨೫ ರಿಂದ ೩೦ರವರೆಗೆ ಗೀತಾಜ್ಞಾನಯಜ್ಞ ನಡೆಸಿಕೊಡುತ್ತಿದ್ದಾರೆ. ಪ.ಪೂ. ಶ್ರೀ ಸ್ವಾಮಿ ಚಿದ್ರೂಪಾನಂದ ಸರಸ್ವತಿಗಳವರ ಕಿರುಪರಿಚಯ ಮಾಡಿಕೊಡುವುದು ಈ ಲೇಖನದ ಉದ್ದೇಶ.

     ಪೂಜ್ಯರ ಪೂರ್ವಾಶ್ರಮದ ಹೆಸರು ದತ್ತಾತ್ರೇಯ. ಸಾತ್ವಿಕ ದಂಪತಿಗಳಾದ ಕೃಷ್ಣಭಟ್ಟ-ಕಮಲಾಬಾಯಿಯವವರ ಮೂರನೆಯ ಮಗನಾಗಿ ೧೧-೧-೧೯೪೮ರಲ್ಲಿ ಜನಿಸಿದ ಇವರು ಚಿಕ್ಕಂದಿನಲ್ಲಿಯೇ ತಂದೆಯವರನ್ನು ಕಳೆದುಕೊಂಡು, ತಾಯಿ ಮತ್ತು ಸೋದರಮಾವನ ಆಶ್ರಯದಲ್ಲಿ ಸುಯೋಗ್ಯ ಶಿಕ್ಷಣ, ಸಂಸ್ಕಾರಗಳನ್ನು ಪಡೆದರು. ಬಾಲ್ಯದಿಂದಲೇ ಭಜನೆ, ಕೀರ್ತನೆ, ಸತ್ಸಂಗಗಳಲ್ಲಿ ಕಳೆಯುವ ಅವಕಾಶ ಮತ್ತು ಸಂಸ್ಕಾರ ಅವರಿಗೆ ಲಭ್ಯವಾಗಿತ್ತು. ತಬಲ ಮತ್ತು ಹಾರ್ಮೋನಿಯಮ್ ನುಡಿಸುವುದನ್ನು ಕಲಿತ ಅವರಿಗೆ ಸಂಗೀತದಲ್ಲೂ ಆಸಕ್ತಿಯಿತ್ತು. ಅವರ ತಾಯಿ ಹಸ್ತ ಸಾಮುದ್ರಿಕ, ಶರೀರ ಹಾಗೂ ಮುಖಲಕ್ಷಣ ಶಾಸ್ತ್ರಗಳನ್ನು ತಿಳಿದವರಾಗಿದ್ದು, ಮಗನಿಗೆ ಬಯ್ಯುವಾಗ ಆಗಾಗ್ಗೆ 'ನೀನು ಸನ್ಯಾಸಿ ಆಗು' ಅನ್ನುತ್ತಿದ್ದರಂತೆ. ಹುಬ್ಬಳ್ಳಿಯ ಭೂಮರೆಡ್ಡಿ ತಾಂತ್ರಿಕ ಕಾಲೇಜಿನಲ್ಲಿ ಸಿವಿಲ್ ಇಂಜನಿಯರಿಂಗ್ ಶಿಕ್ಷಣ ಪಡೆದು, ಕೆಲಕಾಲ ಅಣ್ಣಿಗೇರಿ, ನವಲಗುಂದಗಳಲ್ಲಿ ಖಾಸಗಿ ಸೇವೆಯನ್ನೂ ಸಲ್ಲಿಸಿದ್ದರು. ಸ್ವಾಮಿ ಚಿನ್ಮಯಾನಂದರ ಪ್ರಭಾವಕ್ಕೆ ಒಳಗಾದ ಅವರು ೧೯೭೯-೮೦ರಲ್ಲಿ ಸ್ವಾಮಿ ಚಿನ್ಮಯಾನಂದರ ಸಾಂದಿಪಿನಿ ಗುರುಕುಲದಲ್ಲಿ ಎರಡೂವರೆ ವರ್ಷಗಳ ಕಾಲ ವೇದಾಂತ ಸಾಧನಾ ತರಬೇತಿ ಪಡೆದರು. ನಂತರ ಸ್ವಾಮಿ ದಯಾನಂದ ಸರಸ್ವತಿಗಳವರ ಆಚಾರ್ಯತ್ವದಲ್ಲಿ ಹೃಷಿಕೇಶ, ಮುಂಬಯಿ, ಉತ್ತರಕಾಶಿಗಳಲ್ಲಿ ಶಾಸ್ತ್ರ ಅಧ್ಯಯನ ತರಬೇತಿ ಪಡೆದು, ನೈಷ್ಟಿಕ ಬ್ರಹ್ಮಚಾರಿ ದೀಕ್ಷೆ ಹೊಂದಿ ಮುಕ್ತಚೈತನ್ಯ ಎಂಬ ಹೆಸರು ಪಡೆದರು. ಮೂರು ವರ್ಷಗಳ ಕಾಲ ಬಳ್ಳಾರಿ ಜಿಲ್ಲೆಯ ಮಳಗಿಯಲ್ಲಿ ಆಶ್ರಮ ಹೊಂದಿ ಭಜನೆ, ಸತ್ಸಂಗ, ಉಪನ್ಯಾಸಗಳಲ್ಲಿ ತೊಡಗಿಸಿಕೊಂಡರು. ವೈಜ್ಞಾನಿಕವಾಗಿ, ವೈಚಾರಿಕವಾಗಿ ಶುದ್ಧ ಅದ್ವೈತ ವೇದಾಂತವನ್ನು ಮನಸ್ಸಿಗೆ ನಾಟುವಂತೆ ಹೇಳುವ ಕಲೆ ಅವರಿಗೆ ಕರಗತವಾಗಿತ್ತು. ಹೃಷಿಕೇಶದ ಗಂಗಾತಟದಲ್ಲಿ ಸ್ವಾಮಿ ದಯಾನಂದ ಸರಸ್ವತಿಗಳಿಂದ ಸಂನ್ಯಾಸ ದೀಕ್ಷೆ ಪಡೆದು ಸ್ವಾಮಿ ಚಿದ್ರೂಪಾನಂದ ಸರಸ್ವತಿ ಎಂಬ ನಾಮಧೇಯವನ್ನು ಸದ್ಗುರುವಿನಿಂದ ಪಡೆದರು.

     ಗುರುಗಳ ಮಾರ್ಗದರ್ಶನದಲ್ಲಿ ಸತತ ಏಳು ವರ್ಷಗಳ ಕಾಲ ಬ್ರಹ್ಮಸೂತ್ರ, ಉಪನಿಷತ್ತು, ಭಗವದ್ಗೀತೆ, ವೇದ, ಉಪದೇಶಸಾರ, ಇತ್ಯಾದಿಗಳನ್ನು ಆಳವಾಗಿ ಅಭ್ಯಸಿಸಿದ ಪೂಜ್ಯರು, ಗುರುಗಳ ಸೂಚನೆಯಂತೆ ತಾವು ಹೊಂದಿದ ಜ್ಞಾನಪ್ರಸಾರಕಾರ್ಯವನ್ನು ಮಾಡುತ್ತಾ ಎಲ್ಲೆಡೆ ಪ್ರವಾಸ ಮಾಡತೊಡಗಿದರು. ಹಲವು ಸಲ ವಿದೇಶಗಳಲ್ಲೂ ಸಂಚರಿಸಿ ಆಧ್ಯಾತ್ಮಿಕ ಪ್ರಚಾರ ಮಾಡಿದರು. ಇದೀಗ ಕರ್ನಾಟಕವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದಾರೆ. ಪೂರ್ವಾಶ್ರಮದಲ್ಲಿ ಸಿವಿಲ್ ಇಂಜನಿಯರ್ ಆಗಿ ಮನೆಗಳನ್ನು ಕಟ್ಟುತ್ತಿದ್ದ, ಮುರಿದ ಮನೆಗಳನ್ನು ಸರಿಪಡಿಸುತ್ತಿದ್ದ ಪೂಜ್ಯರು ಈಗಲೂ ಆಧ್ಯಾತ್ಮಿಕ ಇಂಜನಿಯರ್ ಆಗಿ ಮುರಿದ ಮನಗಳನ್ನು ಕಟ್ಟುವ ಕಾಯಕ ಮುಂದುವರೆಸಿದ್ದಾರೆ. ಜನರ ಆತ್ಮವಿಶ್ವಾಸವನ್ನು ಬಡಿದೆಬ್ಬಿಸುವ, ಧಾರ್ಮಿಕ ಭಾವನೆಗಳನ್ನು ಜಾಗೃತಗೊಳಿಸುವ ಈ ಕಾರ್ಯಕ್ಕೆ ಕ್ಲಿಷ್ಟ ವಿಷಯಗಳನ್ನು ಸರಳವಾಗಿಸಿ ಹೇಳಬಲ್ಲ ಅವರ ಪಾಂಡಿತ್ಯ, ಜನರೊಡನೆ ಬೆರೆಯುವ ರೀತಿಗಳು ಸಹಕರಿಸಿವೆ.

     ಹುಬ್ಬಳ್ಳಿಯಲ್ಲಿ ಆರ್ಷವಿದ್ಯಾಪೀಠದ ಹೆಸರಿನಲ್ಲಿ ಆಶ್ರಮ ಹೊಂದಿರುವ ಇವರು ಹಾವೇರಿ ಜಿಲ್ಲೆಯ ಹಾನಗಲ್ಲ ತಾಲ್ಲೂಕಿನ ಮಲಗುಂದದಲ್ಲಿ ಗುರುಕುಲವೊಂದನ್ನೂ ಸ್ಥಾಪಿಸಿದ್ದಾರೆ. ಆಶ್ರಮ ಮತ್ತು ಗುರುಕುಲದಲ್ಲಿ ಅನೇಕ ವ್ಯಕ್ತಿತ್ವ ವಿಕಸನ ಶಿಬಿರಗಳು, ಆಧ್ಯಾತ್ಮ ಶಿಬಿರಗಳು, ಸೇವಾಕಾರ್ಯದ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿಗಳನ್ನು ಆಗಾಗ್ಗೆ ನಡೆಸುತ್ತಾ ಬಂದಿರುವುದಲ್ಲದೆ, ಅನೇಕ ಮಾರ್ಗದರ್ಶಿ ಉಪನ್ಯಾಸಗಳನ್ನು ನೀಡುತ್ತಿರುತ್ತಾರೆ. ಸ್ವಾಮಿ ದಯಾನಂದ ಸರಸ್ವತಿಯವರು ೨೦೦೦ದಲ್ಲಿ ಪ್ರಾರಂಭಿಸಿದ ಅಖಿಲ ಭಾರತ ಸೇವಾ ಅಭಿಯಾನದ ಅಡಿಯಲ್ಲಿ ದೇಶಾದ್ಯಂತ ಬಡ ಮಕ್ಕಳಿಗೆ ಅನುಕೂಲವಾಗುವಂತೆ ಶಾಲೆಗಳ ಸಮೀಪದಲ್ಲಿಯೇ ಛಾತ್ರಾಲಯ(ಹಾಸ್ಟೆಲ್)ಗಳನ್ನು ಸ್ಥಾಪಿಸಿ ಅವರುಗಳಿಗೆ ಉಚಿತವಾಗಿ ಊಟ, ವಸತಿಗಳನ್ನು ಒದಗಿಸುವುದಲ್ಲದೆ ಶಿಕ್ಷಣಕ್ಕೆ ಪೂರಕವಾದ ಆವಶ್ಯಕತೆಗಳನ್ನು ಒದಗಿಸುವುದು, ಆಟೋಟಗಳು, ಕುಶಲಕಲೆಗಳು, ಸಾಂಸ್ಕೃತಿಕ ಚಟುವಟಿಕೆಗಳು ಮುಂತಾದವುಗಳಲ್ಲಿ ತರಬೇತಿ ನೀಡುವುದರ ಜೊತೆಗೆ ಅವರನ್ನು ಸದ್ವಿಚಾರಗಳನ್ನು ಹೊಂದುವ ಸುಯೋಗ್ಯ ಮಾನವರನ್ನಾಗಿ ರೂಪಿಸಿ ಭವಿಷ್ಯ ಭಾರತದ ಸತ್ಪ್ರಜೆಗಳನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ. ಈಗಾಗಲೇ ದೇಶದ ೧೧ ರಾಜ್ಯಗಳಲ್ಲಿ ೪೦ ಛಾತ್ರಾಲಯಗಳನ್ನು ನಡೆಸಲಾಗುತ್ತಿದೆ. ಕರ್ನಾಟಕದಲ್ಲಿ ಸೇವಾ ಅಭಿಯಾನದ ಪ್ರಮುಖರಾಗಿರುವ ಪೂಜ್ಯ ಸ್ವಾಮಿ ಚಿದ್ರೂಪಾನಂದರ ಮುಂದಾಳತ್ವದಲ್ಲಿ ೧೭ ಛಾತ್ರಾಲಯಗಳಲ್ಲಿ ೫೦೦ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳು ಪ್ರಯೋಜನ ಪಡೆಯುತ್ತಿದ್ದಾರೆ. ೧೨೦ ಸಂಧ್ಯಾ ಗುರುಕುಲಗಳು ೪೦೦೦ಕ್ಕೂ ಹೆಚ್ಚು ಶಾಲೆಗೆ ಹೋಗುವ ಮಕ್ಕಳಿಗೆ ಉಪಯೋಗಿಯಾಗಿವೆ. ಹೊನ್ನಾವರದಲ್ಲಿ ಒಂದು ಪ್ರಾಥಮಿಕ ಶಾಲೆ, ಕಲಭಾವಿಯಲ್ಲಿ ಪ್ರೌಢಶಾಲೆ, ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ವೇದ ಪಾಠಶಾಲೆಗಳು ಇವರ ಮಾರ್ಗದರ್ಶನದಲ್ಲಿ ನಡೆಯುತ್ತಿವೆ. ೧೭೦ ಸ್ವಸಹಾಯ ಸಂಘಗಳು ಕಾರ್ಯನಿರತವಾಗಿವೆ. ೧೯೯೮ರಲ್ಲಿ ಪೂಜ್ಯರಿಂದ ಪ್ರಾರಂಭವಾದ ಅಕ್ಷಯ ಟ್ರಸ್ಟ್ ಸಹಾಯ ಅಗತ್ಯವಿರುವ ಎಲ್ಲರಿಗೆ ಜಾತಿ,ಮತ, ರಾಷ್ಟ್ರೀಯತೆಗಳ ಭೇದವಿಲ್ಲದೆ ಶಿಕ್ಷಣ ನೀಡುವ ಗುರಿ ಹೊಂದಿದ್ದು ೬ ಶಾಲೆಗಳು, ಪಿಯು ವಿಜ್ಞಾನ ಕಾಲೇಜು ಮತ್ತು ವೇದಪಾಠಶಾಲೆ ನಡೆಸುತ್ತಿದ್ದು ಸುಮರು ೫೦೦೦ ಮಕ್ಕಳು ಪ್ರಯೋಜನ ಹೊಂದಿದ್ದಾರೆ. 'ಸ್ವಾಸ್ಥ್ಯ' ಎಂಬ ಕನಸಿನ ಯೋಜನೆ ರೂಪಿಸಿರುವ ಇವರು, ಅಕ್ಷಯ ಟ್ರಸ್ಟ್ ವತಿಯಂದ ಇದರ ಅಡಿಯಲ್ಲಿ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಸುಸಜ್ಜಿತ ಭವನದಲ್ಲಿ ನಿಯಮಿತವಾಗಿ ಧಾರ್ಮಿಕ ಪ್ರವಚನಗಳು, ಧ್ಯಾನ, ಪ್ರಾರ್ಥನೆ ಮತ್ತು ಯೋಗ ಮಾಡಲು ಅವಕಾಶ, ಸಾತ್ವಿಕ ಆಹಾರ, ವ್ಯಾಯಾಮಶಾಲೆ, ಈಜುವಕೊಳ, ಇತ್ಯಾದಿಗಳನ್ನು ಒದಗಿಸಿ ಸ್ವಾಸ್ಥ್ಯ ಜೀವನ ನಡೆಸಬಯಸುವವರಿಗೆ ಅವಕಾಶ ಕಲ್ಪಿಸಬಯಸಿದ್ದಾರೆ. 

     ಇವರ ವಿಚಾರಧಾರೆಯ ಕೆಲವು ಅಂಶಗಳು ಹೀಗಿವೆ:

* ಸಮಾಜದಲ್ಲಿ ಕೆಲವು ಪರಿವರ್ತನೆಗಳು ಆಗಬೇಕಿದೆ. ಜನರು ಧರ್ಮಭೀರುಗಳಾಗಬೇಕು.

* ಸಂನ್ಯಾಸಿಗಳ ಅವಶ್ಯಕತೆ ಸಮಾಜಕ್ಕೆ ಇಲ್ಲ. ಬದಲಾಗಿ ಸುಸಂಘಟಿತವಾದ ಸಮಾಜವನ್ನು ಕಟ್ಟುವಂತಹ, ಜಾತಿರಹಿತ ಸಮಾಜವನ್ನು ಕಟ್ಟಬಲ್ಲ ಉತ್ಸಾಹಿ ತರುಣರ ಅವಶ್ಯಕತೆ ಇದೆ. ಅವರನ್ನೇ ಸಂನ್ಯಾಸಿಗಳೆಂದು ಕರೆದರೂ ತಪ್ಪಿಲ್ಲ.

* ಜಾತಿಯ, ರಾಜಕಾರಣಿಗಳ ಅಥವ ಸರಕಾರದ, ಅಧಿಕಾರಿಗಳ ಮುಲಾಜಿಗೆ ಒಳಪಟ್ಟು ಉತ್ಸಾಹ ತೋರುವ ಸಂನ್ಯಾಸಿಗಳಿಂದ ಸಮಾಜದಲ್ಲಿ ಸುಸಂಘಟನೆ ತರಲಾಗದು. ಯಾವ ಮತ್ತು ಯಾರ ಮುಲಾಜಿಗೂ ಒಳಗಾಗದ ಸಂನ್ಯಾಸಿಗಳು ಇರಬೇಕು. ಇಂತಹ ಉತ್ಕಟ ಅನಿಸಿಕೆಯನ್ನು ಸಾಕಾರಗೊಳಿಸಲು ಸಾಕಷ್ಟು ಬಾರಿ ಪ್ರಯತ್ನಿಸಿರುವೆ. ಆಗುತ್ತಾ ಇಲ್ಲ. ಆದರೂ ಸಂಕಲ್ಪ ದೂರವಾಗಿಲ್ಲ.

* ಸಂನ್ಯಾಸಿಗಳಲ್ಲಿ ಎರಡು ವಿಧ - ಸಾಧಕ ಸಂನ್ಯಾಸಿ, ಜ್ಞಾನಿ ಸಂನ್ಯಾಸಿ. ಜ್ಞಾನಿ ಸಂನ್ಯಾಸಿಗಳಿಗೆ ಯಾವುದೇ ಕಟ್ಟುಪಾಡುಗಳಿಲ್ಲ. ಸಾಧಕ ಸಂನ್ಯಾಸಿಗಳಿಗೆ ರಾಷ್ಟ್ರಹಿತ, ಸಮಾಜಹಿತ, ಧರ್ಮರಕ್ಷಣೆ ಮತ್ತು ಆತ್ಮವಿಕಾಸಗಳೆಂಬ ನಾಲ್ಕು ಕರ್ತವ್ಯಗಳಿವೆ. ಸಮಾಜಹಿತವೆಂದರೆ ಸಮಸ್ತ ಮಾನವಕುಲಹಿತ. ಸಮಾಜವೆಂದರೆ ಲಿಂಗಾಯತ ಸಮಾಜ, ಬ್ರಾಹ್ಮಣ ಸಮಾಜ, ಕ್ಷತ್ರಿಯ ಸಮಾಜ, ಇತ್ಯಾದಿ ಪರಿಗಣಿಸುವುದಲ್ಲ. ಸದ್ಯದ ಸಂನ್ಯಾಸಿಗಳು ಜಾತಿ ಆಧಾರಿತ ಸಮಾಜದ ಸುಸಂಘಟನೆಗಾಗಿ ದುಡಿಯುವಂತಹವರಾದರೆ ಆದಷ್ಟು ಬೇಗ ತಮ್ಮ ವಿಚಾರಧಾರೆಯಲ್ಲಿ ಪರಿವರ್ತನೆ ಮಾಡಿಕೊಳ್ಳುವುದು ಒಳ್ಳೆಯದು.

* ಯುವಕರ ವಿಚಾರದಲ್ಲಿ ಧಾರ್ಮಿಕ ಜವಾಬ್ದಾರಿ ಹೊತ್ತ ಗುರುಗಳು, ಆಚಾರ್ಯರು, ಸಂನ್ಯಾಸಿಗಳು ಅವರನ್ನು ಅರ್ಥ ಮಾಡಿಕೊಂಡು, ಅವರಿಗೆ ಅರ್ಥವಾಗುವ ರೀತಿಯಲ್ಲಿ ಮಾರ್ಗದರ್ಶನ ಮಾಡಬೇಕು. ಧಾರ್ಮಿಕ ವಿಚಾರಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ ಯುವಪೀಳಿಗೆಗೆ ಕೊಟ್ಟರೆ ಅವರಿಗೂ ಆಸಕ್ತಿ ಬರುತ್ತದೆ.

* ದೀನ ದಲಿತ, ಕಡುಬಡವ ಮಕ್ಕಳಿಗೆ ಸಂಸ್ಕಾರ, ಶಿಕ್ಷಣಗಳನ್ನು ಉಚಿತವಾಗಿ ನೀಡುವ ಪ್ರಯತ್ನವನ್ನು ಪ್ರತಿ ಯುವಕ-ಯುವತಿಯರು, ಸಂನ್ಯಾಸಿಗಳು ಯಾವುದೇ ರೀತಿಯಲ್ಲಿ ಮಾಡಬೇಕು.

* ಮೌಲ್ಯಗಳ ಅಧಃಪತನದಿಂದಾಗಿ ಜನರಲ್ಲಿ ಸುಳ್ಳು, ವಂಚನೆ. ಮೋಸಗಳು ಇವೆ, ಇದರಿಂದಾಗಿ ಅಸತ್ಯದ ಅನುಸರಣೆ ಮಾಡುತ್ತಾರೆ, ಸತ್ಯವನ್ನು ದೂರ ಮಾಡುತ್ತಾರೆ. ಸತ್ಯಕ್ಕೆ ಕುಂದಿಲ್ಲ. ಶಾಸ್ತ್ರಾಧ್ಯಯನ, ಶಾಸ್ತ್ರ ಪರಂಪರೆ ಇದು ಒಬ್ಬಿಬ್ಬರ ಕೊಡುಗೆಯಲ್ಲ. ಸಹಸ್ರಾರು ವರ್ಷಗಳ, ಸಹಸ್ರಾರು ಜನರ ಶ್ರಮಕ್ಕೆ ವೈಜ್ಞಾನಿಕತೆಯಿದೆ, ವಿಶ್ಲೇಷಣೆ ಇದೆ, ಕರ್ತವ್ಯವೂ ಇದೆ. ಪ್ರಮಾಣರಹಿತವಾದ ಇತರ ಮಾರ್ಗಗಳನ್ನು ಜನರು ಅನುಸರಿಸುತ್ತಾರೆಂದರೆ ಇದಕ್ಕೆ ಮೌಲ್ಯದ ಅಧಃಪತನವೇ ಕಾರಣ. ಕ್ರಮೇಣ ಇದರಲ್ಲಿ ಕೊರತೆ ಕಾಣುವ ಜನರು ಇದರಿಂದ ದೂರ ಸರಿಯುತ್ತಾರೆ. ಸತ್ಯ ತಲೆಯೆತ್ತುತ್ತದೆ. 

     ಹಾಸನದ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಇದೇ ೨೫ರಿಂದ ೩೦ರವರೆಗೆ ಇವರು ಭಗವದ್ಗೀತೆಯ ಮತ್ತು ಉಪನಿಷತ್ ಕುರಿತು ನಡೆಸಿಕೊಡಲಿರುವ ಪ್ರವಚನಗಳು ಆಸಕ್ತರಿಗೆ ಮಾರ್ಗದರ್ಶಿಯಾಗಲಿರುವುದರಲ್ಲಿ ಅನುಮಾನವಿಲ್ಲ.

-ಕ.ವೆಂ.ನಾಗರಾಜ್.

(ಆಧಾರ: ಸ್ವಾಮಿ ಸುವ್ರತಾನಂದ ಸರಸ್ವತಿಯವರ 'ಚಿದ್ರೂಪ ದರ್ಶನ')