ಹಳ್ಳಿಯ ಪರಂಪರೆಗಳು

ಹಳ್ಳಿಯ ಪರಂಪರೆಗಳು

ಪರಂಪರೆಯ ಜೀವಸೆಲೆಗಳಾಗಿರುವ ಹಳ್ಳಿಯ ಜನಪದ ಉತ್ಸವ ಆಚರಣೆಗಳು ಜನ ಮಾನಸದಲ್ಲಿ ಬಾಂಧವ್ಯವನ್ನು ಗಟ್ಟಿಗೊಳಿಸುವ ಸುಸಂದರ್ಭವನ್ನು ಒದಗಿಸುತ್ತವೆ. ಅಲ್ಲದೇ ಗ್ರಾಮೀಣ ಜೀವನದ ಕಲಾ ಸೊಬಗನ್ನು, ವೈವಿಧ್ಯತೆಯನ್ನು ಸಾರುತ್ತವೆ. ಅಂತಹ ಉತ್ಸವಾಚರಣೆಗಳಲ್ಲಿ ನನ್ನೂರಿನಲ್ಲಿ ಶ್ರಾವಣ ಮಾಸದಲ್ಲಿ ಬರುವ ಎರಡನೆಯ ಉತ್ಸವವೇ ಮಳೆ ಮಲ್ಲೇಶ್ವರ ಉತ್ಸವ.
ಹೌದು, ‘ನಮ್ಮೂರೇ ನಮಗೆ ಸವಿಬೆಲ್ಲ' ಎಂಬ ಕವಿವಾಣಿಯಂತೆ, ನನ್ನೂರು ಕೊಪ್ಪಳ ತಾಲೂಕಿನ ಬೆಟಗೇರಿ ಗ್ರಾಮದ ಕೆಲವು ಉತ್ಸವಗಳು ನಮ್ಮೂರಿನ ಪರಂಪರೆಯನ್ನು ಬಿಂಬಿಸುತ್ತವೆ. ಜನರ ಭಕ್ತಿ, ಶ್ರದ್ಧೆಯ, ಧಾರ್ಮಿಕ ನೆಲೆಗಟ್ಟನ್ನು ಗಟ್ಟಿಗೊಳಿಸುವ, ಶ್ರಾವಣ ಮಾಸದಲ್ಲಿ ಬರುವ ಎರಡನೆಯ ಉತ್ಸವವಾದ ಮಳೆಮಲ್ಲೇಶ್ವರ ಉತ್ಸವವು ‘ಮಳೆ ಮಲ್ಲಪ್ಪನ ಮಜಲು’ ಎಂದೇ ಗ್ರಾಮದಲ್ಲಿ ಜನಜನಿತವಾಗಿದೆ. ಅಂದರೆ ಉತ್ಸವದ ರಾತ್ರಿ ಭಾಜಾಭಜಂತ್ರಿಗಳೊಂದಿಗೆ ಐದ್ಹತ್ತು ಜೊತೆ ಎತ್ತುಗಳನ್ನು ಶೃಂಗರಿಸಿ ಹೂಡಿದ ಬಂಡಿ (ಹಳ್ಳಿಬಂಡಿಯೆಂದೇ ಗ್ರಾಮದಲ್ಲಿ ಜನಜನಿತವಾಗಿದೆ) ಯಲ್ಲಿ ಮಳೆಮಲ್ಲೇಶ್ವರನ ಉತ್ಸವ ಮೂರ್ತಿಯನ್ನು ಊರಿನ ಪ್ರಮುಖ ಬೀದಿಗಳಲ್ಲಿ ರಾತ್ರಿಯಿಡೀ ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಗುತ್ತದೆ. ಹಾಗಾಗಿಯೇ ‘ಮಳೆ ಮಲ್ಲಪ್ಪನ ಮಜಲು’ ಎಂದು ಊರಜನರ ವಾಡಿಕೆ.
ಉತ್ಸವದ ಹಿನ್ನೆಲೆ :– ಸುಮಾರು ಎಪ್ಪತ್ತರಿಂದ ಎಂಭತ್ತು ದಶಕಗಳ ಹಿಂದೆ ಈಗಿನ ಮಟ್ಟಿ ಸ್ಥಳ (ಮಟ್ಟಿ ದಿಬ್ಬವೆಂದು ರೂಢಿಗತವಾಗಿ ಕರೆಯುವ ಹೆಸರು) ಬರೀ ಕಲ್ಲುಗಳಿಂದ ತುಂಬಿದ ಪ್ರದೇಶವಾಗಿತ್ತಂತೆ. ಕಲ್ಲುಗಳನ್ನು ಎತ್ತಿ ತೆಗೆದರೆ ಎಲ್ಲೆಂದರಲ್ಲಿ ಚೇಳು-ಹಾವುಗಳೇ ತುಂಬಿಕೊಂಡಿದ್ದ ಪ್ರದೇಶವಾಗಿತ್ತಂತೆ. ಅದರ ದಿಬ್ಬದ, ಈಗ ದೇವಸ್ಥಾನವಿರುವ ಜಾಗೆಯಲ್ಲಿ ಭೂಮಿಯಲ್ಲಿ ಹುದುಗಿದ ಶಿವಲಿಂಗುವನ್ನು (ಈಗಲೂ ಅದು ಸ್ವಲ್ಪ ಮಟ್ಟಿಗೆ ಹಾಗೆಯೇ ಇದೆ) ನೋಡಿದ ಅಲ್ಲಿನ ಅಕ್ಕ ಪಕ್ಕದ ಜಮೀನುಗಳ ಜನ ಅದನ್ನು ಪೂಜಿಸುತ್ತಿದ್ದರಂತೆ. (ಡೊಳ್ಳಿನ್ ಹಾಗೂ ಎಡಹೂಟಿ ಮನೆಯವರು ಪೂಜಿಸುತ್ತಿದ್ದರೆಂದು ಗ್ರಾಮದ ಹಿರಿಯರಾದ ಶ್ರೀಯುತ ವಿರುಪಾಕ್ಷಪ್ಪ.ಮು.ಬಳ್ಳೊಳ್ಳಿ ಯವರು ಹೇಳುತ್ತಾರೆ.) ಕಾಲ ಗತಿಸಿದಂತೆ ಗ್ರಾಮದ ಹಿರಿಯರಾದ ದಿ|| ಶ್ರೀಯುತ ಗುರುಬಸಯ್ಯನವರು ಬನ್ನಿಮಠ ಸಹೋದರರು ನೆಲದಲ್ಲಿ ಹುದುಗಿದ್ದ ಮೂರ್ತಿಯನ್ನು ಮೇಲೆತ್ತಲು ಪ್ರಯತ್ನಿಸಲಾಗಿ, ದೊಡ್ಡ ಗಾತ್ರದ ಬಂಡೆಯಲ್ಲಿ ಕಡೆದ ಶಿವಲಿಂಗ ಅದಾಗಿದೆಯಂತೆ. ಏನಾದರಾಗಲಿ ಅದನ್ನು ಮೇಲೆತ್ತಿ ಪುನರ್ ಪ್ರತಿಷ್ಠಾಪಿಸಿ ದೇವಾಲಯ ಕಟ್ಟಿಸಬೇಕೆಂದು ದಿ||ಶ್ರೀಯುತ ಗುರುಬಸಯ್ಯ ಬನ್ನಿಮಠ ಸಹೋದರರು ಕೆಲಸ ಮುಂದುವರೆಸಲಾಗಿ; ಗ್ರಾಮದ ಜನರ ಅವಹೇಳನಕ್ಕೊಳಗಾಗಿ ಕೈಗೊಂಡ ಕಾರ್ಯ ಅಲ್ಲಿಗೇ ನಿಲ್ಲಿಸಿ ಮುಂದೆ ಗ್ರಾಮದ ಇನ್ನೂ ಕೆಲ ಹಿರಿಯರ ನಾಯಕತ್ವದಲ್ಲಿ ಕಾಡುಗಲ್ಲಿನ ಗೋಡೆ, ಬಂಡೆಗಲ್ಲುಗಳ ಮೇಲ್ಛಾವಣಿಯ ಹೊದಿಕೆಯುಳ್ಳ ಚಿಕ್ಕದಾದ ಬಾಗಿಲುಳ್ಳ ಕಟ್ಟಡ ನಿರ್ಮಿಸಿದರಂತೆ. (ಇತ್ತೀಚೆಗೆ ಪೂಜೆಗೆಂದು ಭಕ್ತರು ತೆರಳಿದ ಸಂದರ್ಭದಲ್ಲಿ ಕಲ್ಲುಗೋಡೆ ಬಿದ್ದು ಒಳಗೆ ಪೂಜಿಸುತ್ತಿದ್ದ ಜನ ಪವಾಡ ಸದೃಶ ರೀತಿಯಲ್ಲಿ ಪಾರಾದ ಘಟನೆಯನ್ನು ಸ್ವತಃ ಪೂಜೆ ಮಾಡಲು ಹೋದ ಭಕ್ತ ಜನರೇ ಹೇಳುತ್ತಾರೆ. ಅದಾದ ನಂತರ ಊರಲ್ಲಿ ದೇಣಿಗೆ ಸಂಗ್ರಹಿಸಿ ದಿ|| ಶ್ರೀಯುತ ಸಿದ್ದಪ್ಪನವರು ಮತ್ತೂರು ಮತ್ತು ಕೆಲ ಹಲವು ಗ್ರಾಮದ ಮುಖಂಡರ ನೇತೃತ್ವದಲ್ಲಿ ಈಗಿನ ದೇವಸ್ಥಾನ ನಿರ್ಮಿಸಲಾಗಿದೆ.)
ಕಾಲ ಗತಿಸಿದಂತೆ ಗ್ರಾಮದ ಮುಖಂಡರಾದ ದಿ|| ಶಿವಶರಣ ಶ್ರೀಯುತ ದೊಡ್ಡ ವೀರಭದ್ರಪ್ಪನವರು.ವೀ.ಲಕ್ಷಾಣಿ (ಮುನ್ಸೂಬ) ಹಾಗೂ ದಿ|| ಶ್ರೀಯುತ ಅಂದಾನಪ್ಪನವರು ಬಳ್ಳೊಳ್ಳಿಯವರ ಮುಖಂಡತ್ವದಲ್ಲಿ ಗ್ರಾಮದ ಜನರೊಟ್ಟುಗೂಡಿ ಉತ್ಸವ ಹಾಗೂ ಹಳ್ಳಿಬಂಡಿಯಲ್ಲಿ ಉತ್ಸವ ಮೂರ್ತಿಯ ಮೆರವಣಿಗೆಯನ್ನು ಪ್ರಾರಂಭಿಸಿದರಂತೆ. ಅವರೊಡಗೂಡಿ ದಿ|| ಶ್ರೀ ಬಾಲಪ್ಪನವರು ಕಂಬಳಿಯವರು ಇವರಿಗೆ ಸಾಥ್ ನೀಡಿ ಊರಲ್ಲಿನ ನೂರು ಹಾಗೂ ಮುಂಡರಗಿಯ ಜಗದ್ಗುರು ಅನ್ನದಾನೇಶ್ವರ ಮಠದ ಒಂದು ಎತ್ತನ್ನು ಹಳ್ಳಿ ಬಂಡಿಗೆ ಹೂಡಿ ಮೆರವಣಿಗೆ ಮಾಡಿ ದಾಖಲೆ ನಿರ್ಮಿಸಿದ್ದನ್ನು ಗ್ರಾಮಸ್ಥರು ಇಂದಿಗೂ ನೆನೆಯುತ್ತಾರೆ. ಉತ್ಸವದ ಮೆರವಣಿಗೆ ರಾತ್ರಿ ವಿಜೃಂಭಣೆಯಿಂದ ನಡೆಯುತ್ತಿದ್ದು, ಈಗಿನಂತೆ ಅಂದು ಸುಧಾರಿತ ವಿದ್ಯುದಲಂಕಾರದ ವ್ಯವಸ್ಥೆ ಇಲ್ಲದ ಕಾರಣ ಹಿಲಾಲುಗಳ ಬೆಳಕಿನಲ್ಲಿಯೇ ರಾತ್ರಿಯಿಡೀ ಉತ್ಸವ ಮೂರ್ತಿಯ ಮೆರವಣಿಗೆ ಮಾಡುತ್ತಿದ್ದರಂತೆ.
ಅಂದಿನಿಂದ ಪ್ರಾರಂಭಗೊಂಡ ಈ ಆಚರಣೆ ಇಂದಿಗೂ ವರುಷಕ್ಕಿಂತ ಮರುವರುಷ ಹೆಚ್ಚಿನ ಮೆರಗು ಪಡೆಯುತ್ತಲೇ ಬಂದಿದೆ. ಉತ್ಸವದ ಜೊತೆ ಜೊತೆಗೇ ಜನಪದ ಕಲಾ ಪ್ರಕಾರಗಳಾದ ಡೊಳ್ಳು ಬಡಿತ, ಶಹನಾಯಿ ಮೇಳ, ಭಜನೆ, ಕೋಲಾಟ ಮುಂತಾದವುಗಳೂ ಸಮ್ಮಿಲನಗೊಂಡು ಜನರ ಮನ ರಂಜಿಸುತ್ತವೆ. ಇತ್ತೀಚೆಗೆ ಇವುಗಳ ಜೊತೆ ದೊಡ್ಡ ಗಾತ್ರದ ಗೊಂಬೆ ಕುಣಿತ, ಆರ್ಕೆಷ್ಟ್ರಾವೂ ಸೇರ್ಪಡೆಗೊಂಡಿವೆ.
ಶ್ರಾವಣ ಬಹುಳದ ನಂತರದಲ್ಲಿ ಬರುವ ವಾರದ ಮೊದಲ ಗುರುವಾರ, (ನೂಲ ಹುಣ್ಣಿಮೆಯ ನಂತರ) ಗದಗ ಜಿಲ್ಲೆಯ ಕಪ್ಪತ್ತಗಿರಿಯ ಮಲ್ಲಯ್ಯನ ಉತ್ಸವ. (ಜಾತ್ರೆ). ನಮ್ಮೂರ ಮಳೆ ಮಲ್ಲೇಶ್ವರನೂ (ಮಟ್ಟಿ ಮಲ್ಲೇಶ್ವರ) ಕಪ್ಪತ್ತ ಮಲ್ಲಯ್ಯನ ಅಪರಾವತಾರವೆಂದೇ ನಮ್ಮೂರಿನ ಹಿರಿ ತಲೆಮಾರಿನವರಿಂದಲೂ ನಂಬಿಕೆ ಬೆಳೆದು ಬಂದಿದೆ. ಹಾಗಾಗಿಯೇ ಕಪ್ಪತ್ತ ಮಲ್ಲಯ್ಯನ ಜಾತ್ರೆ ನಡೆಯುವ ದಿನವೇ ನಮ್ಮೂರಲ್ಲಿ ಈ ಉತ್ಸವವನ್ನು ಬಹಳ ಹಿಂದಿನ ಕಾಲದಿಂದಲೂ ಆಚರಿಸಿಕೊಂಡು ಬಂದಿದ್ದಾರೆ.
ಇಷ್ಟಲ್ಲದೇ, ಬಹಳ ವರ್ಷಗಳ ಹಿಂದೆ ಊರಲ್ಲಿ ಮಳೆ ಬಾರದಿದ್ದಾಗ ಗ್ರಾಮದಿಂದ ಎತ್ತರದ ಪ್ರದೇಶದಲ್ಲಿರುವ ಈ ಪ್ರದೇಶಕ್ಕೆ ಕುರುಬ ವಂಶಸ್ತರು ಬಂದು ಮಳೆದೇವರನ್ನು ಪ್ರಾರ್ಥಿಸಿ ಕಂಬಳಿ ಬೀಸುತ್ತಿದ್ದರಂತೆ. ಆಗ ಮೋಡಗಳು ದಟ್ಟೈಸಿ ಮಳೆಯಾಗಿಯೇತೀರುತ್ತಿತ್ತೆಂದು ಕಂಡರಿದ ಗ್ರಾಮದ ಜನರು ಹೇಳುತ್ತಾರೆ. ( ಇದುವರೆಗೆ ಮರೆತುಹೋಗಿದ್ದ ಈ ಆಚರಣೆಗೆ ಈ ವರ್ಷ ನಮ್ಮ ಗ್ರಾಮದವರು ಪುನಃ ಚಾಲನೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು). ಇದರಿಂದಲೇ ಮಳೆ ತರಿಸುವ ಧಾರ್ಮಿಕ ನಂಬಿಕೆಗೆ ಕಾಕತಾಳೀಯವೆಂಬಂತೆ ಇಂಬುಕೊಡುತ್ತಿದ್ದ ಘಟನೆಗಳು ಪವಾಡ ಸದೃಶ ರೀತಿಯಲ್ಲಿ ನಡೆಯುತ್ತಿದ್ದುದರಿಂದ ಇಲ್ಲಿನ ಉದ್ಭವ ಯಾ ಭೂಗತ ಶಿವಲಿಂಗಕ್ಕೆ ಮಳೆ ಮಲ್ಲೇಶ್ವರನೆಂಬ ಹೆಸರು ಬಂದಿರಬೇಕು. ಹಾಗೆಯೇ ಕಲ್ಲುಗಳ ರಾಶಿಯಿಂದಲೇ ಕೂಡಿದ ಮಟ್ಟಿಯ ದಿಬ್ಬ ಇರುವುದರಿಂದ ಸ್ಥಳನಾಮದೊಂದಿಗೆ ಬೆರೆತು ಮಟ್ಟಿ ಮಲ್ಲಪ್ಪ / ಮಲ್ಲೇಶ್ವರನೆಂಬ ಹೆಸರು ರೂಢಿಯಲ್ಲಿ ಬಂದಿರಬೇಕು. ಈ ದೇವರು ಗ್ರಾಮದಿಂದ ದೂರವಿದ್ದರೂ ಸದಾ ಕಾಲವೂ ಅಮವಾಸ್ಯೆ ಹುಣ್ಣಿಮೆ, ರೈತರ ಬಿತ್ತನೆ, ಸುಗ್ಗಿಯ ಕಾಲದಲ್ಲಿ ರೈತರಿಂದ ಹಾಗೂ ಗ್ರಾಮದ ಹಿರೇಮಠ ಸಂಪ್ರದಾಯದ ಜಂಗಮರಿಂದ ಶ್ರೀ ಮಳೆ ಮಲ್ಲೇಶ್ವರ ಯಾ ಮಟ್ಟಿ ಮಲ್ಲಪ್ಪ ದೇವರಿಗೆ ಪೂಜಾ ಸೇವೆ ಸಾಂಗವಾಗಿ ನೆರವೇರುತ್ತದೆ.
ಇತಿಹಾಸದ ಕಾಲ ಗರ್ಭದಲ್ಲಡಗಿ ಮರೆಯಾಗಿ ಹೋಗುತ್ತಿದ್ದ ನಮ್ಮ ಹಳ್ಳಿ ಪರಂಪರೆಯೊಂದು ಹಲವು ತಲೆ ಮಾರಿನಿಂದ ನಿರಂತರವಾಗಿ ಸಾಂಗವಾಗಿ, ವಿಜೃಂಭಣೆಯಿಂದ ನಡೆದುಕೊಂಡು ಬರುತ್ತಿರುವುದು ಗ್ರಾಮದ ಧಾರ್ಮಿಕ ನಂಬಿಕೆಯ ಪ್ರಾಧಾನ್ಯತೆಯನ್ನು ಎತ್ತಿ ತೋರಿಸುತ್ತದೆ. ಸದಾ ಕಾಲವೂ ಶ್ರೀ ಮಳೆ ಮಲ್ಲೇಶ್ವರ ನಂಬಿದ ಭಕ್ತರಿಂದ ಉಪಾಸನೆಗೊಂಡು, ಭಕ್ತರ ಅಭೀಷ್ಠೆಗಳನ್ನು ಈಡೇರಿಸುತ್ತಾ ಸಕಲ ಸನ್ಮಂಗಲವನ್ನುಂಟುಮಾಡಿ ಸದಾ ಕಾಲವು ರಕ್ಷಿಸಿ ಪೊರೆಯಲೆಂದು ಬೇಡುವೆ. ಸಕಲ ಸನ್ಮಂಗಲಾನಿಭವಂತು.
ಲೇಖನ ಮಾಲಿಕೆ – ವೀರೇಶ.ಅ.ಲಕ್ಷಾಣಿ.(ಶಿಕ್ಷಕರು)
ಮಾಹಿತಿ ಕೃಪೆ - ಶ್ರೀಯುತ ವಿರುಪಾಕ್ಷಪ್ಪನವರು.ಮು.ಬಳ್ಳೊಳ್ಳಿ. (ಬಳ್ಳೊಳ್ಳಿ ವಿರುಪಣ್ಣನವರು)