ಹೀಗೊಂದು ಹಂದಿ ಕಥೆ

ಹೀಗೊಂದು ಹಂದಿ ಕಥೆ

ಉತ್ತರ ಕರ್ನಾಟಕದ ಬಾಗಲಕೋಟೆ ಹೋಳಿಹುಣ್ಣಿವೆ ಆಚರಣೆಗೆ ಬಹಳ ಪ್ರಸಿದ್ಧಿ..ಊರಹೊರಗಿನ ಘಟಪ್ರಭಾ ನದಿ, ಸುತ್ತಮುತ್ತಲಿನ ಐತಿಹಾಸಿಕ ಸ್ಥಳಗಳು, ಊರೋಳಗೆ ಸಿಗುವ ಬಳ್ಳಾರಿ ಭಜಿ ಹಾಗೂ ಇನ್ನು ಬಹಳಷ್ಟು ಸಂಗತಿಗಳಿಗೆ ಪ್ರಸಿದ್ಧ.. ಹಾಗೇ ಹಂದಿಗಳಿಗೂ ಕೂಡ..ಊರ ತುಂಬ ಇರುವ ಗಲ್ಲಿ ಗಲ್ಲಿ ಗಳ ರಸ್ತೆಗಳ ಬದಿಯಲ್ಲೆಲ್ಲ ಗಟಾರು, ಅದರ ದಂಡೆಗುಂಟ ಹಂದಿಗಳು.. ಸುತ್ತಲೆಲ್ಲಾ ಅವಗಳಿಗೆ ಕಲ್ಲು ಒಗೆದು ಓಡಿಸುವ ಸಣ್ಣ ಹುಡುಗರ ಹಿಂಡು..

ಕಲ್ಪನೆಗೆ ಸಿಗುತ್ತಿಲ್ಲವಾ ? ಒಂದು ಸಾರಿ ಬನ್ನಿ ನೋಡ್ಲಿಕ್ಕೆ..

ಈಗ್ಗೆ ಸುಮಾರು ನೂರು ವರ್ಷಗಳ ಹಿಂದೆ..

ಕಿಲ್ಲಾ ಗಲ್ಲಿಯ, ನದಿ ರಸ್ತೆಯ, ಕೊನೆಯ ಮನಿಯೇ ವೆಂಕ್ಯಾಂದು.. ಆ ದಿನ ಇನ್ನು ಚುಮು ಚುಮು ಬೆಳಗು, ವೆಂಕ್ಯಾ ತಮ್ಮ ಮನೆಯ ಕಟ್ಟೆಯ ಮೇಲೆ, ತಂಬಾಕು ಜಗಿಯುತ್ತ ಕುಳಿತಿದ್ದ. ಒಂದೈದು ನಿಮಿಷ ಜಗಿದು ಪಿಚ್ಚೆಂದು ಕಟ್ಟೆಯ ಬದಿಯ ಗಟಾರಿನಲ್ಲಿ ಉಗುಳಿದ.. ಅಲ್ಲೇ ಪಕ್ಕದಲ್ಲಿ ಮಲಗಿದ್ದ ಹಂದಿ, ಮೆಲ್ಲನೆ ಒಂದು ಕಣ್ಣು ತೆಗೆದು ಶಬ್ದ ಬಂದ ಕಡೆ ನೋಡಿ, ಮತ್ತೆ ವಾಪಸ್ ಮಲಕೊಂಡಿತು..

ಒಳಗಿನಿಂದ ವೆಂಕ್ಯಾನ ಮಗ ಶೀನ ಜೋರಾಗಿ ಅರಚಿದ "ಅಪ್ಪಾಪ್ಪಾಪ್ಪಾಪ್ಪಾ... ಇಶೀಶೀಶೀಶೀಶೀಶೀ...".

"ಥೋ... ಒದರಬ್ಯಾಡಲೇ.. ಬಂದೆ ತಡಿ.." ಅನಕೋತ ಓಡಕೋತ ಬಂದ.. "ಚಡ್ಯಾಗ ಮಾಡ್ಕೊತಾನಪ ಇವ"... ಒಳಗಿನಿಂದ ಮಗನನ್ನ ದರದರ ಎಳಕೋತ ಬಂದು, ಮನಿ ಬಾಜುಕಿನ ಗಟಾರ ದಂಡಿಗೆ ಕೂಡಿಸಿದ.

ಶೀನ್ಯಾ ಇನ "ಮಾಡಿದ್ದೆ ಇಲ್ಲ" .. ಅಲ್ಲೇ ಮಲಗಿದ್ದ ಹಂದಿ, ಓಡಕೊತ ಬಂದು ಬಾಯಿ ಹಾಕೇ ಬಿಡ್ತು.

"ಇವನವನ.... ಹುಷ್.. ಹುಷ್..” ಅನಕೋತ ಜೋರಗಿ ವೆಂಕ್ಯಾ ಬಾಯಿ ಮಾಡಿದ.. ಒಂದು ಸಣ್ಣ ಕಲ್ಲು ತೊಗೊಂಡು ಒಗದ..... ಪಾಪ ಓಡಿಹೋಯ್ತು ಹಂದಿ..

ಶೀನ್ಯಾ ಕುತ್ತಿದ್ದ ಇನ ಅಲ್ಲೇ ..

ಹಂದಿಗೆ ಜೀವ ತಡಿಲಿಲ್ಲ , ಮತ್ತೆ ಬಂದು ಬಾಯಿ ಹಾಕಿತು..

ವೆಂಕ್ಯಾ ಮಗನ್ನ ಎತ್ತಿ ಬ್ಯಾರೇಕಡೆ ಕೂಡಿಸಿದ..

ಹಂದಿನು ಬಿಡ್ಲಿಲ್ಲ ಮಗಂದು.. ಹೊಗುದು ಬರುದು ಮಾಡತಾ ಇತ್ತು.. ವೆಂಕ್ಯಾ ಬಾಯಿ ಮಾಡಕೋತನ ಇದ್ದ..

ಐದು ನಿಮಿಷ ಕುತ್ತಿದ್ದ ಶೀನ್ಯಾ.. "ಅಪ್ಪಾಪ್ಪಾಪ್ಪಾ.. ಆಆಆಆತು" ಅಂದ..ವೆಂಕ್ಯಾ ಮಗನ್ನ ಹೌರಗ ಎತ್ತಿ ಬಾಜುಕ ನಿಂದ್ರಿಸಿದ..

ಶೀನ್ಯಾ ಏಳುದ ನೋಡಿ, ಹಂದಿ ಓಡಿ ಹೋಗಿ ಗಟಾರದೊಳಗ ಜಿಗಿತು..

ಗಡಿಬಿಡಿಯೊಳಗ ತಿಂದು ಮುಗಿಸಿ ಮ್ಯಾಲೆ ನೋಡ್ತು, ವೆಂಕ್ಯಾ ಅಲ್ಲೇ ಇದರ ಕಡೆನೇ.. ಗುರ್.. ಅಂತ.. ನೋಡಕೋತ ನಿಂತಿದ್ದ ಇನ..

ಅದು ಗಾಬರಿ ಆಗಿ ಸ್ವಲ್ಪ ತಡಬಡಾಯಿಸ್ತು.. ‌‌‍‍‌‌‌ ಜಲ್ದೀನೆ ಓಡಿಹೋಗ್ಬೇಕು ಅಂದುಕೊಂಡು..ಹಿಂದಿನ ಎರಡೂ ಕಾಲು ಜೋರಾಗಿ ಊರಿ ಮ್ಯಾಲೆ ಜಿಗಿತು..ವೆಂಕ್ಯಾನ ಅಂಜಿಕೆ ಬ್ಯಾರೆ ಇತ್ತು ತಲ್ಯಾಗ, ಬ್ಯಾಲೆನ್ಸ ಆಗಲಾರದ ಕಂಟ್ರೋಲ ತಪ್ಪಿ  ವೆಂಕ್ಯಾನ ಮನಿ ಹೋಸ್ತಲದ ಹತ್ರ ಬಿದ್ದು ಬಿಡ್ತು..

ವೆಂಕ್ಯಾಗ ಈ ಸರ್ತಿ ಸಿಟ್ಟು ನೆತ್ತಿಗೆ ಏರಿ ಬಿಡ್ತು .. ಅಲ್ಲೇ ಕಟ್ಟಿಮ್ಯಾಲೆ ಅಡಿಕಿ ಕುಟ್ಟಿ ಇಟ್ಟಿದ್ದ ಮುಷ್ಠಿಗಾತ್ರದ ಕಲ್ಲು ತೋಗೋಂಡು .."ರಪ್ ಪ್ ಪ್ ಪ್"... ಅಂತಂದು ಹಂದಿ ಮುಖಕ್ಕ ಒಗದಬಿಟ್ಟ...

ಹಂದಿಗೆ ತಲಿ "ಧಿಂಂಂಂ" ಅಂತು.. ಒಂದ ಕ್ಷಣ ಏನ ಆಗ್ಲಿಕತ್ತದ ಅಂತ ಗೋತ್ತಆಗ್ಲಿಲ್ಲ ಅದಕ್ಕ...ಹಂಗೆ ಬಿದ್ದಕೊಂಡಿತ್ತು..

ವೆಂಕ್ಯಾ, ಶೀನ, "ಹೇ .. ಸತ್ತ ಹೋತನಪ" ಅಂತಂದು ನೋಡ್ಲಿಕತ್ರು..

ನಿಧಾನಕ...ಕಣ್ಣು ತಗಿತು.."ಹೂಂಂ" ಅಂತ ಸಣ್ಣಗಿ ಕುಂಯಗುಡಲಿಕತ್ತಿತ್ತು.. ಏನೋ ಹೇಳ್ಳಿಕ್ಕಾಗಲಾರದಂಗ ನೋವು..ಸ್ವಲ್ಪ ಸುಧಾರಿಸಿಕೊಂಡು ನೋಡ್ತು... ಮೂಗಿನಿಂದ ಜೋರಾಗಿ ರಕ್ತ ಸುರಿಲಿಕತ್ತದ..ಹಂದಿ ಕಣ್ಣಾಗ ದಳ..ದಳ..ದಳ.. ನೀರು ಬಂದು.. ಅದಕ್ಕ ಭಾಳ ಬೇಜಾರಾಯಿತು..

ತಲಿ ಎತ್ತಿ ನೋಡ್ತು.. ವೆಂಕ್ಯಾ, ಶೀನ.. ಅಲ್ಲೇ ನಿಂತಿದ್ರು... ಒಂದು ಕ್ಷಣ ಅವರನ್ನ ದಿಟ್ಟಿಸಿನೋಡ್ತು.. ಏನೋ ನಿರ್ಧಾರ ಮಾಡಿದಂಗ...ತಿರುಗಿ.. ನದಿ ದಾರಿ ಕಡೆ ಜೋರಾಗಿ ಓಡಲಿಕತ್ತು...

ಕಣ್ಣಾಗ ನೀರು ಹಂಗೇ ಸುರೀಲಿಕತ್ತಿತ್ತು....ಹಂದಿ ಬಿಕ್ಕಳಿಸಿ ಬಿಕ್ಕಳಿಸಿ ಅಳಲಿಕತ್ತಿತ್ತು..

ಓಡಿ..ಓಡಿ.. ನದಿ ದಂಡಿಗೇ ಬಂತು.. ಇನ್ನೇನು ನದಿಯೋಳಗ ಜಿಗದು ಸತ್ತುಹೋಗಬೇಕು....ಥಟ್ ಅಂತ ಮಿಂಚು ಹೊಡದಂಗ ಅಯ್ತು ಹಂದಿಗೆ…ಜಿಗದು ಸತ್ತುಹೋಗಿಬಿಡಬೇಕು ಅಂತ ಬಂದಿದ್ದ ಹಂದಿ, ಸುಮ್ಮನೇ ನಿಂತಕೊಂಡ್ತು ಒಂದೈದು ನಿಮಿಶ..

“ಹೇ ಎಂಥ ಕೆಲ್ಸ ಮಾಡ್ಲಿಕತ್ತಿನಿ ನಾ... ನಾ ಯಾಕ ಸಾಯಿಬೇಕು.. ನಾ ಯಾರಿಗು ಅನ್ಯಾಯ ಮಾಡಿಲ್ಲ..ಊರಾಗಿನ ಹೊಲಸು ತಿಂದು ನಾ ಇನ ನಾಲ್ಕು ಜನಕ್ಕ ಉಪಕಾರನೆ ಮಾಡ್ಲಿಕತ್ತಿನಿ.. ಈ ಮನಷ್ಯಾರೆ ಹೊಲಸ ಇದ್ದಾರ.. ಅವರ ಮನಸಿನ ತುಂಬ ಹೊಲಸನೇ ಅದ.. ಯಾವಗಲೂ ಮತ್ತೊಬ್ಬರಿಗೆ ಬಯ್ಯುದು, ಬಡಿಯುದು, ಮತ್ತೊಬ್ಬರಿಗೆ ಕೇಡು ಬಯಸುದು.. ಇದನ್ನೇ ಮಾಡತಿರತಾರ.. ಅವರೇ ಆರಾಮಾಗಿ ಇರುಮುಂದ ನಾ ಯಾಕ ಸಾಯಿಬೇಕು..” ಅಂತ ಅಂದುಕೊಂಡು.. ಹಂಗೇ ನದಿ ದಂಡೆಮ್ಯಾಲೆ ಕುತಗೊಂಡ್ತು..

ಎರಡು ನಿಮಿಶ ಆಗಿತ್ತು… ಸುಂಯ್ ಅಂತ ಗಾಳಿ ಬೀಸ್ತು.. ಒಮ್ಮೆಲೆ ಮುಗಿಲೆಲ್ಲ ಕಪ್ಪುಆಗಿ..ಚುಮು ಚುಮು ನಾಲ್ಕು ಹನಿ ಉದುರಿತು.. ಹಂದಿ ತಲಿ ಎತ್ತಿ ಮ್ಯಾಲೆ ನೊಡ್ತು.. ಮುಖದ ಮೇಲೆ ನಾಲ್ಕು ಹನಿ ಬಿದ್ದುವು.. ಮುಖದೊಳಗ ಮಂದಹಾಸ ಮೂಡಿ.. ಎನೋ ನಿರ್ಧಾರ ಮಾಡಿತು..

ಸರ ಸರ ನದಿಯೊಳಗ ಇಳಿದು, ಮೂರು ಮುಳುಗು ಹಾಕಿ ಎದ್ದುನಿಂತು.. ಮತ್ತೊಮ್ಮೆ ಮುಗಿಲ ಕಡೆ ನೊಡ್ತು..  ಇಲ್ಲಿತನಕ ಇದ್ದ ಬ್ಯಾನಿಯೆಲ್ಲ ಹೋಗಿ ವಜ್ರದ ಮೈ ಅನಸ್ತು ..

ದಂಡಿಮ್ಯಾಲೆ ಹತ್ತಿ..ನೀರೆಲ್ಲ ಒರಸ್ಕೊಂಡು.. ಸೀದಾ ಹೊಗಿ ಮುಂದಿದ್ದ ಆಲದಕಟ್ಟಿ ಮ್ಯಾಲೆ ಕುಳಿತು.. ಎರಡು ಕಣ್ಣುಮುಚ್ಚಿ ದೇವರ ಧ್ಯಾನ ಮಾಡ್ತು..ಎದ್ದು ಆಲದ ಗಿಡದ ಬುಡದ ಹತ್ತಿರ ಹೋಗಿ, ಪೂರ್ವಕ್ಕೆ ಮುಖಮಾಡಿ, ದೀರ್ಘದಂಡ ನಮಸ್ಕಾರ ಮಾಡಿ, ಒಂದೇ ಕಾಲುಮ್ಯಾಲೆ ನಿಂತು, ಭಕ್ತಿಯಿಂದ, ತಪಸ್ಸು ಮಾಡ್ಲಿಕ್ಕೆ ಶುರುಮಾಡ್ತು..

...

ಅಹೋರಾತ್ರಿ…

...

ಎಷ್ಟೋ ದಿನ.. ಎಷ್ಟೋ ರಾತ್ರಿಗಳು ಕಳದವು..

ನೂರ ಒಂದನೇ ದಿನ.. ಬೆಳಗು ಮುಂಜಾನೆ ನಾಲ್ಕು ಘಂಟೆಯಾಗಿತ್ತು, ಹಂದಿಯ ಕಣ್ಣ ಮುಂದೆ ವಿಚಿತ್ರವಾದ ಬೆಳಕು.. ಹಂದಿ ನಿಧಾನ ಕಣ್ಣು ತೆರದು ನೋಡ್ತು, ಮುಂದ ಪ್ರಸನ್ನವದನನಾಗಿ ದೇವರು ನಿಂತಿದ್ದ.

ಹಂದಿಯ ಕಣ್ಣುಗಳಲ್ಲಿ ಆನಂದಭಾಷ್ಪ..

ಹೋಗಿ ದೇವರ ಚರಣಾರವಿಂದಗಳಲ್ಲಿ ತಲಿಯಿಟ್ಟು ಸಾಷ್ಟಾಂಗ ನಮಸ್ಕಾರ ಮಾಡ್ತು.. ದೇವರು ಕರುಣಾಪೂರ್ವಕವಾಗಿ ಆಶೀರ್ವಾದ ಮಾಡಿದ..

ಅದನ್ನ ಎಬ್ಬಿಸಿ .. "ಯಾಕೆ ಇಂಥ ಉಗ್ರವಾದ ತಪಸ್ಸು?" ದೇವರು ಆಶ್ಚರ್ಯದಿಂದ ಕೆಳಿದ..

ಮತ್ತೆ ಹಂದಿಯ ಕಣ್ಣುಗಳಲ್ಲಿ ನೀರು ಜಿನುಗಿತು..

"ತಂದೆ.. ಯಾಕ ನನಗ ಇಂಥ ಜೇವನ ಕೊಟ್ಟಿ.. ನಾನು ಯಾವ ತಪ್ಪು ಮಾಡಿಲ್ಲ, ಯಾರಿಗು ಒಂದ್ ಸಣ್ಣ ನೋವು ಮಾಡಿಲ್ಲ.. ಯಾರಿಗು ಒಂದು ತುತ್ತು ಅನ್ನ ಕೆಳಿಲ್ಲ.. ಅಲ್ಲಿ ಇಲ್ಲಿ ಬಿದ್ದ ಹೊಲಸು ತಿಂದು ಜೀವನ ಮಾಡ್ತಿನಿ ಆದರೂ ಈ ಮನಷ್ಯಾರು ನನಗ ಯಾವಾಗ್ಲು ಬಯ್ಯಿತಾರ, ಒದಿತಾರ, ಕಲ್ಲು ತೊಗೊಂಡು ಹೋಡಿತಾರ.. ನನಗ ಬೇಜಾರಾಗಿದೆ ಪ್ರಭು.. ಯಾವ ತಪ್ಪಿಗೆ ನನಗ ಇಂಥ ಶಿಕ್ಷೆ..ಯಾವ ಕಾರಣಕ್ಕೆ ನನಗ ಈ ಜೀವನ”.. ಬಿಕ್ಕಳಿಸುತ್ತ ಹೇಳಿತು ಹಂದಿ..

ದೇವರ ಕಣ್ಣುಗಳೂ ಒದ್ದೆಯಾದವು…

"ನಿಜ.. ಈ ಮಾನವರು ದುಷ್ಟರು, ಕೃತಘ್ನರು.. ನೀನು ಅವರ ಕೇರಿಗಳನ್ನೆಲ್ಲ ಸ್ವಚ್ಛಮಾಡಿ ಇಟ್ಟರೂ, ಅವರಿಗೆ ಉಪಕಾರ ಸ್ಮರಣೆಯಿಲ್ಲ. ನಿನ್ನ ಹೆಸರಿನಿಂದ ಬೇರೆ ಮನುಷ್ಯರಿಗೆ ಬೈದು ನಿಮ್ಮ ಕುಲಕ್ಕೆ ಅಪಮಾನ ಮಾಡುತ್ತರೆ.. ಕರುಣೆಯಿಲ್ಲದ ಜನ..,” ದೇವರು ಹಂದಿಯನ್ನು ಸಮಾಧಾನಪಡಿಸುತ್ತ ಹೇಳಿದ..

"ನಾನು ನಿನ್ನ ನಿಷ್ಕಳಂಕ ಭಕ್ತಿ, ತಪಸ್ಸಿಗೆ ಸಂಪೂರ್ಣವಾಗಿ ಮೆಚ್ಚಿದ್ದೇನೆ.. ಏನು ವರ ಬೇಕು ಕೇಳು"

"ಸ್ವಾಮೀ.. ಈ ಮನುಷ್ಯರು, ನನಗೆ ನನ್ನ ಕುಲಕ್ಕೆ ಅಪಮಾನ ಮಾಡಿದ್ದಾರೆ.. ಅನಾದರ ತೋರಿದ್ದಾರೆ. ಅದೇ ಮನುಷ್ಯರು ನನ್ನ, ನನ್ನ ಕುಲದವರನ್ನ ಗೌರವ, ಪ್ರೀತಿ, ಆದರಗಳಿಂದ ನೋಡುವಂತೆ ಅನುಗ್ರಹಿಸು..ತಂದೆ"

...

ದೇವರ ತುಟಿಯ ಮೇಲೆ ಮುಗುಳ್ನಗು ಮಿಂಚಿತು..

...

“ಯಾವ ಮಾನವರು ನಿನ್ನ ಒದೆಯುವದು, ಹೊಡೆಯುವದು ಮಾಡಿ ನಿನಗೆ ನೊವುಂಟು ಮಾಡಿದರೋ, ಅವರೆ ನಿನ್ನ ಹೊತ್ತು ತಿರುಗುತ್ತಾರೆ. ಯಾರು ನಿನ್ನ ಮೈಲಿಗೆ ಅಂತ ದೂರವಿಟ್ಟರೋ, ಅವರೆ ಬೆಳಿಗ್ಗೆ ನಿನ್ನ ಮುಖದರ್ಶನದಿಂದ ತಮ್ಮ ದಿನ ಆರಂಭಿಸುತ್ತಾರೆ.. ಊಟ ನಿದ್ರಾದಿ ಅವರ ಎಲ್ಲ ಕಾರ್ಯಗಳಲ್ಲೂ ನೀನು ಅವರ ಜೊತೆಗಿರುವಿ.. ನಿನ್ನ ಸಾನಿಧ್ಯವೇ ಈ ಮಾನವರಿಗೆ ಪರಮಸುಖವಾಗುವುದು.. ಇಹಲೋಕದ ಸಮಸ್ತಸುಖಗಳನ್ನು ಅನುಭವಿಸುವಿ.."

...

“ತಥಾಸ್ತು….” ದೇವರು ಅಂತರ್ಧಾನನಾದ..

...

ನೂರು ವರ್ಷಗಳ ನ೦ತರ…

...

ನಿಧಾನವಾಗಿ ಕಣ್ಣು ತೆಗೀತು.. ಗುಜು.ಗ಼ುಜು.ಗ಼ುಜು.. ಗದ್ದಲ.. ಗಲಾಟೆಯಲ್ಲಿ ಏನೋ ಶಬ್ದಗಳು ಕೇಳಿಸ್ತಾ ಇವೆ "ಆ ಮಾಡೆಲ್ ತೋರಸೀ.." ... "ಡಿಸ್ಪ್ಲೇ ಏನ್ ಸೈಜು"... "ಫ಼ೋರ್ ಜೀಬಿ ನಾ".. ಅಸ್ಪಷ್ಟವಾದ ಮಾತುಗಳು... ಎಲ್ಲಾ ಕಡೆ ಬಣ್ಣ ಬಣ್ಣದ ಲೈಟುಗಳು..

ಮತ್ತೊಮ್ಮೆ ಕಣ್ಣು ತೆಗೆದು ನೋಡಿತು.. ಮೈಯೆಲ್ಲಾ ಕಪ್ಪಗಾಗೇ ಇದೆ ಮೊದಲಿನ ತರ.. ಆದರೆ ಬಲು ನುಣುಪು..

ಹಣೆಯ ಮೇಲೆ "NOKIA 1100” ಅಂತ ಬರೆದಿದೆ.. ಕೆಳಗೆ ನೋಡಿಕೊಂಡಿತು..ಬಾಲವಿಲ್ಲ..

ಮುಂದಿನಿಂದ ಗಮ್ಮೆನಿಸುವ ಸುವಾಸನೆ ಬಂತು.. ನೋಡಿತು .. ಎದುರಿಗೆ ಗುಳಿಕೆನ್ನೆಯ, ಗೋದಿ ಬಣ್ಣದ, ಹದಿನೆಂಟರ ಮುದ್ದಾದ ಚೆಲುವೆ.. ಇದನ್ನೇ ದಿಟ್ಟಿಸಿ ನೋಡತಾಇದ್ದಾಳೆ.. ಹಾಗೇ ಬಂದು, ತನ್ನ ಮೃದುವಾದ ಕೈಗಳಿಂದ ಇದನ್ನ ಎತ್ತಿಕೊಂಡಳು..

ಇದಕ್ಕೆ ರೋಮಾಂಚನ.. ಮೈಯಲ್ಲೆಲ್ಲ ಪುಳಕ..

ಹಿಂಬದಿಗೆ ತಿರುಗಿಸಿ ..ಬೆನ್ನಿನ ಹತ್ತಿರ ಎನೋ ತುರುಕಿದಳು.. ತಲೆಯ ಮೇಲೆ ಜೋರಾಗಿ ಅಮುಕಿದಳು.. ಇದಕ್ಕೆ ಸ್ವಲ್ಪ ನೋವಾಗಿ.. ಎಲ್ಲ ಕಡೆ ಕರೆಂಟು ಹರಿದಾಗಾಯಿತು..

ಹೊಟ್ಟೆಯ ಮೇಲೆಲ್ಲ ತನ್ನ ಬೆರಳಿನಿಂದ ಒತ್ತಿದಳು.. "ಕಚಗುಳಿ ಇಟ್ಟಹಾಗಾಯಿತು.."

ಅವಳು ಇದನ್ನ ತನ್ನ ಕೆನ್ನೆಯ ಹತ್ತಿರಕ್ಕೆ ಹಿಡಿದು.. "ಹೆಲ್ಲೋ.. ಐ..ಲವ್..ಯೂ" ಎಂದಳು.., ಮೂತಿಗೆ ತುಟಿಯಿಂದ ಮೆತ್ತನೆ ಮುತ್ತು ಕೊಟ್ಟಳು..

ಇದಕ್ಕೆ ಸ್ವರ್ಗಕ್ಕೆ ಮೂರೇ ಗೇಣು.. ಮನಸ್ಸಿನಲ್ಲಿಯೇ ದೇವರಿಗೆ ಧನ್ಯವಾದ ಹೇಳಿತು..

ದೇವಲೋಕದಲ್ಲಿ ದೇವರು ತನ್ನ ಸಖಿಯರೊಡನೆ ಖೊಳ್ಳೆಂದು ನಕ್ಕ..

...

ಅದಕ್ಕೇ ಬಹಳಷ್ಟು ಮೊಬೈಲುಗಳು ಕರಿ ಬಣ್ಣದ್ದು!!!!!!!.. ನಿಮ್ಮ ಮೊಬೈಲು ಕರಿ ಬಣ್ಣದ್ದಿದ್ದರೆ, ಅದು ಬಾಗಲಕೋಟೆ, ಬಿಜಾಪುರ, ಹುಬ್ಬಳ್ಳಿ ಅಥವ ಧಾರವಾಡದ್ದೇ.. ಪೂರ್ತಿ ಕಡುಗಪ್ಪು ಬಣ್ಣದ್ದಾಗಿದ್ದರೆ, ಅದು ಗ್ಯಾರಂಟಿ ಬಿಜಾಪುರದ್ದೆ.. ಬಿಳಿ, ಕೆಂಚು ಬಣ್ಣದ್ದಾಗಿದ್ದರೆ, ಅದು ಫ಼ಾರಿನ್ ದು.. ಬ್ರೆಜಿಲ್, ಡೆನ್ಮಾರ್ಕ್, ಚಿಲಿ ದೇಶಗಳಲ್ಲಿ ಹಳದಿ, ನೀಲಿ, ಚೊಕಲೇಟ್ ಬಣ್ಣದ ಹಂದಿಗಳಿವೆಯಂತೆ..

Comments

Submitted by Nagaraj Bhadra Sat, 09/19/2015 - 00:14

ನಿಮ್ಮ ಬರಹ ತುಂಬಾ ಚೆನ್ನಾಗಿ ಮುಡಿಬಂದಿದೆ ಸರ್.ನಿಮ್ಮ ಕಲ್ಪನೆ ಸ್ವಾರಸ್ಯಕರವಾಗಿದೆ.

Submitted by Huddar Shriniv… Tue, 09/22/2015 - 13:53

ಕ್ರಮೇಣ‌ ಎಲ್ಲ‌ ಹಂದಿಗಳೂ ಮೊಬ್ಯೆಲಗಳಾಗಲಿ. ಮೊಬ್ಯಲ್ ಹಿಡಿದವರೆಲ್ಲ‌ ಹಂದಿ ಹಿಡಿಯುವವರಾಗಲಿ. ಲೇಕನ ಚೆನ್ನಾಗಿದೆ.

Submitted by vidyavilas Thu, 10/01/2015 - 15:12

ಹ್ಹ ಹ್ಹ ಹ್ಹ...!! ನಿಮ್ಮ ಪ್ರಕಾರ ಜೀವಿಯೊಂದು ದೇವರ ಕೃಪೆಯಿಂದ ಜಡವಾದರೂ ಮನುಷ್ಯರಲ್ಲಿ ಚೈತನ್ಯ ತುಂಬುವ ವಸ್ತುವಾಗಿದೆ...,
ಬೈ ದ ವೇ ನನ್ನ ಮೊಬೈಲ್ ಬಣ್ಣ ಕಪ್ಪು....!! :) :)