೪೦,೦೦೦ ಮಣ್ಣಿನ ಮಕ್ಕಳ ಮುಂಬೈ ಮುತ್ತಿಗೆ

೪೦,೦೦೦ ಮಣ್ಣಿನ ಮಕ್ಕಳ ಮುಂಬೈ ಮುತ್ತಿಗೆ

ಬಿಸಿಲಿಗೆ ಕಾದು ಕೆಂಡವಾದ ಟಾರ್ ರಸ್ತೆಯಲ್ಲಿ ನಡೆದು ಗುಳ್ಳೆಯೆದ್ದ ಅಂಗಾಲುಗಳು, ಏಳು ದಿನಗಳ ನಡಿಗೆಯಿಂದ ಬಾತುಹೋದ ಕಾಲಿನ ಮಣಿಗಂಟುಗಳು, ದಾರ ಕಟ್ಟಿ ಜೋಡಿಸಿದ ಹರಿದ ಚಪ್ಪಲಿಗಳು, ಬಿಸಿಲಿನ ಧಗೆಗೆ ಒಣಗಿ ಸುಟ್ಟಂತಾದ ಮುಖಗಳು – ೧೨ ಮಾರ್ಚ್ ೨೦೧೮ರಂದು ಮುಂಬೈಯ ಆಜಾದ್ ಮೈದಾನಿನಲ್ಲಿ ಕಿಕ್ಕಿರಿದು ಜಮಾಯಿಸಿದ್ದ ೪೦,೦೦೦ ಮಣ್ಣಿನ ಮಕ್ಕಳ ಚಾರಿತ್ರಿಕ ಪ್ರತಿಭಟನೆಯ ಪುರಾವೆಗಳು ಇವು.

೬ ಮಾರ್ಚ್ ೨೦೧೮ರಂದು ಮಹಾರಾಷ್ಟ್ರದ ನಾಸಿಕದಿಂದ ಹೊರಟ ೨೫,೦೦೦ ರೈತರ, ಕೃಷಿ ಕೆಲಸಗಾರರ ಮತ್ತು ಬುಡಕಟ್ಟು ಜನರ ಜಾಥಾ, ಏಳನೆಯ ದಿನ ಮಹಾನಗರ ಮುಂಬೈ ತಲಪಿದಾಗ ೪೦,೦೦೦ ಜನಸಾಗರವಾಗಿತ್ತು. ಅವರೆಲ್ಲರೂ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಸರಕಾರದಿಂದ ದಕ್ಕಿಸಿಕೊಳ್ಳಲೇ ಬೇಕೆಂಬ ಛಲದಿಂದ, ೧೮೦ ಕಿಮೀ ದೂರ ನಡೆದು ಬಂದಿದ್ದರು. ಮಾರ್ಚ್ ೧೨ರಂದು, ಆಜಾದ್ ಮೈದಾನಿನಲ್ಲಿ ಜಾಥಾದ ಮುಂದಾಳುಗಳು ಮಾತಾಡುತ್ತಿದ್ದಾಗ ಆ ಜನಸಾಗರ ಮೈಯೆಲ್ಲ ಕಿವಿಯಾಗಿ ಕೇಳಿತು. ಪ್ರತಿಯೊಂದು ಬೇಡಿಕೆಯನ್ನೂ ಸರಕಾರದ ಆಶ್ವಾಸನೆಯನ್ನೂ ಸರಿಯಾಗಿ ಕೇಳಿಸಿಕೊಳ್ಳುವುದು ಅಲ್ಲಿದ್ದ ಪ್ರತಿಯೊಬ್ಬರಿಗೂ ಮುಖ್ಯವಾಗಿತ್ತು. ಪತ್ರಿಕಾ ವರದಿಗಾರನೊಬ್ಬ ವೇದಿಕೆಯ ನೋಟಕ್ಕೆ ಅಡ್ಡವಾಗಿ ಎದ್ದು ನಿಂತಾಗ, ಪ್ರತಿಭಟನಾಕಾರನೊಬ್ಬ ಆತನ ಹೆಗಲು ತಟ್ಟಿ ಕೂರಲು ಹೇಳಿದ, “ಅಲ್ಲೇ ಕೂತುಕೋ, ಆರು ದಿನಗಳು ನಡೆದು ಬಂದಿದ್ದರೆ, ನಿನಗೂ (ನಮ್ಮ ಸಂಕಟ) ಅರ್ಥವಾಗುತ್ತಿತ್ತು”. ಆ ಸಾವಿರಾರು ಬಡಪಾಯಿಗಳು ನಡೆದು ಬಂದದ್ದೇ ಆಜಾದ್ ಮೈದಾನದಲ್ಲಿ ಝಂಡಾ ಊರಿ, ಮಹಾರಾಷ್ಟ್ರದ ಮುಖ್ಯಮಂತ್ರಿಗೆ ತಮ್ಮ ಅಹವಾಲು ಸಲ್ಲಿಸಲಿಕ್ಕಾಗಿ. ಅದಕ್ಕೆ ಯಾವುದೇ ಅಡ್ಡಿಯನ್ನು ಕ್ಷಣಕಾಲವೂ ಸಹಿಸಿಕೊಳ್ಳಲು ಅವರು ಸಿದ್ಧರಿರಲಿಲ್ಲ.

೧೮೦ ಕಿಮೀ ನಡೆದು ಬಂದ ಜನಸಾಗರದಲ್ಲಿ ಕಿರಿಯರು ಮತ್ತು ಹಿರಿಯರು, ಹೆಂಗಸರು ಮತ್ತು ಗಂಡಸರು ತುಂಬಿದ್ದರು. ಹಾದಿಯುದ್ದಕ್ಕೂ ಅವರು ಹಾಡುಗಳನ್ನು ಹಾಡಿದರು, ಸಂಗೀತ ಸಾಧನಗಳನ್ನು ನುಡಿಸಿದರು ಮತ್ತು ಘೋಷಣೆಗಳನ್ನು ಕೂಗಿದರು. ರಸ್ತೆಯ ಪಕ್ಕದಲ್ಲೇ ಅವರು ಅಡುಗೆ ಮಾಡಿ ತಿಂದರು ಮತ್ತು ಅಲ್ಲೇ ಮಲಗಿದರು. ಈ ಜಾಥಾಕ್ಕಾಗಿ ಧಾನ್ಯಗಳು, ಕಟ್ಟಿಗೆ ಎಲ್ಲವನ್ನೂ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಲ್ಲಿ ನೀರಿನ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಯಿತು. ಒಂದು ಅಂಬುಲೆನ್ಸ್ ಮತ್ತು ವೈದ್ಯರು ಆರು ದಿನಗಳೂ ಜಾಥಾದೊಂದಿಗೆ ಪ್ರಯಾಣಿಸಿದರು. ಜಾಥಾದ ಹಾದಿಯಲ್ಲಿದ್ದ ಕೆಲವು ಹಳ್ಳಿಗಳ ಜನರು ಜಾಥಾದವರಿಗೆ ಆಹಾರ ಮತ್ತು ನೀರು ನೀಡಿ ಉಪಚರಿಸಿದರು. “ಹಾದಿಯುದ್ದಕ್ಕೂ ಜನರು ನಮ್ಮನ್ನು ಅಂತಃಕರಣದಿಂದ ನೋಡಿಕೊಂಡರು. ಅದರಿಂದಾಗಿ ನಮ್ಮ ನಿರ್ಧಾರ ಇನ್ನಷ್ಟು ಗಟ್ಟಿಯಾಯಿತು. ಇಷ್ಟು ಜನರು ನಮ್ಮನ್ನು ಬೆಂಬಲಿಸುತ್ತಾರೆಂದು ನಾವು ಎಣಿಸಿಯೇ ಇರಲಿಲ್ಲ” ಎಂಬುದು ಸಾವಿತ್ರಿಭಾಯಿ ಅವರ ಉದ್ಗಾರ. ಜಾಥಾದಲ್ಲಿ ನಡೆದು ಬಂದ ಆ ವಯಸ್ಸಾದ ಮಹಿಳೆ, ಜನಸಾಗರದ ಅಗಾಧತೆಯಿಂದ ಬೆರಗುಪಟ್ಟು ನುಡಿದ ಮಾತು ಅದು.

ಬೃಹತ್ ಜಾಥಾದ ಹಿನ್ನೆಲೆ
ಜೂನ್ ೨೦೧೭ರಲ್ಲಿ ಅಖಿಲ ಭಾರತ ಕಿಸಾನ್ ಸಭಾ ಮಹಾರಾಷ್ಟ್ರದ ರೈತರನ್ನು ಸಂಘಟಿಸಿ ಪ್ರತಿಭಟನೆ ನಡೆಸಿತ್ತು. ಕೃಷಿ ಸಾಲ ಮನ್ನಾ ಮತ್ತು ಎಂ.ಎಸ್. ಸ್ವಾಮಿನಾಥನ್ ಅವರ ರಾಷ್ಟ್ರೀಯ ಕೃಷಿಕರ ಆಯೋಗದ (೨೦೦೪-೦೬) ಶಿಫಾರಸಿನ ಅನುಸಾರ, ಬೆಳೆಗಳ ಫಸಲಿಗೆ ಉತ್ಪಾದನಾ ವೆಚ್ಚದ ಶೇಕಡಾ ೧೫೦ರಷ್ಟು (ಕನಿಷ್ಠ) ಅಧಿಕ ಬೆಲೆಯನ್ನು ಕನಿಷ್ಠ ಬೆಂಬಲ ಬೆಲೆಯಾಗಿ ನಿಗದಿ ಪಡಿಸುವುದು – ಇವು ಆ ಪ್ರತಿಭಟನಾಕಾರರ ಮುಖ್ಯ ಬೇಡಿಕೆಗಳಾಗಿದ್ದವು. ರಸ್ತೆತಡೆ ಸಹಿತ ಹಲವು ದಿನಗಳು ಪ್ರತಿಭಟನೆ ನಡೆಸಿದ ನಂತರ, ಮಹಾರಾಷ್ಟ್ರ ಸರಕಾರ ಆ ಮುಖ್ಯ ಬೇಡಿಕೆಗಳಲ್ಲಿ ಒಂದನ್ನು ಒಪ್ಪಿಕೊಂಡಿತು: ಅಂದರೆ, ಎರಡು ಹೆಕ್ಟೇರಿಗಿಂತ ಕಡಿಮೆ ಜಮೀನು ಹೊಂದಿರುವ ರೈತರ ಸಾಲ ಪೂರ್ತಿ ಮನ್ನಾ ಮಾಡಲು ಒಪ್ಪಿತು (ಕನಿಷ್ಠ ಬೆಂಬಲ ಬೆಲೆ ನಿಗದಿ ಪಡಿಸುವ ಬೇಡಿಕೆ ಇತ್ಯರ್ಥವಾಗಲಿಲ್ಲ.)

ಕಳೆದ ವರುಷ ರೈತ ಮುಖಂಡರನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಭೇಟಿಯಾದಾಗ, ರೂ.೩೫,೦೦೦ ಕೋಟಿ ಕೃಷಿ ಸಾಲ ಮನ್ನಾ ಮಾಡಲು ಒಪ್ಪಿಕೊಂಡಿದ್ದರು. ಇದರಿಂದಾಗಿ, ಸುಮಾರು ೭೦ ಲಕ್ಷ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಪ್ರಯೋಜನ ಆಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಫೆಬ್ರವರಿ ೨೦೧೮ರಲ್ಲಿ ವಿತ್ತ ಸಚಿವ ಸುಧೀರ್ ಮುಂಗಂಟಿವಾರ್ ಬಜೆಟ್ ಮಂಡಿಸಿದಾಗ ವಾಸ್ತವ ತಿಳಿದು ಬಂತು: ಕೇವಲ ರೂ.೨೩,೧೦೨ ಕೋಟಿ ಸಾಲ ಮನ್ನಾ ಮಾಡಲು ಬ್ಯಾಂಕುಗಳಿಗೆ ಅನುಮತಿ ನೀಡಲಾಗಿತ್ತು. ಹಾಗಾಗಿ, ನಿರೀಕ್ಷಿತ ರೈತರಲ್ಲಿ ಶೇ.೫೦ ರೈತರ ಕೃಷಿಸಾಲ ಮನ್ನಾ ಆಗಿರಲಿಲ್ಲ. ಯಾಕೆಂದರೆ, ಸುಮಾರು ೩೫ ಲಕ್ಷ ರೈತರ ಸಾಲ ಮನ್ನಾಕ್ಕಾಗಿ ಬಿಡುಗಡೆ ಮಾಡಿದ್ದು ರೂ.೧೩,೦೦೦ ಕೋಟಿ. ರೈತರು ಹಾಗೂ ರೈತ ಮುಖಂಡರ ಆಕ್ರೋಶಕ್ಕೆ ಇದು ಮುಖ್ಯ ಕಾರಣ. ಅಷ್ಟೇ ಅಲ್ಲ, ಯವತ್ಮಾಲ್ ಮತ್ತು ಸುತ್ತಲಿನ ಜಿಲ್ಲೆಗಳಲ್ಲಿ ಹತ್ತಿ ಬೆಳೆಗೆ ಸಿಂಪಡಿಸಿದ ವಿಷರಾಸಾಯನಿಕಗಳಿಂದಾಗಿ ಸುಮಾರು ೫೦ ಜನರ ಸಾವು. ಭಾರೀ ಮಳೆ ಮತ್ತು ಆಲಿಕಲ್ಲಿನಿಂದಾಗಿ ಹಲವಾರು ಹತ್ತಿ ಬೆಳೆಗಾರರ ಬೆಳೆ ನಾಶ. ಅವರಿಗೆ ಹೆಕ್ಟೇರಿಗೆ ರೂ.೩೯,೦೦೦ ಪರಿಹಾರ ನೀಡುವ ಘೋಷಣೆ ಕಾರ್ಯಗತವಾಗದ್ದು. ಇದೆಲ್ಲದರಿಂದಾಗಿ ಅಸಮಾಧಾನ ಹೊಗೆಯಾಡುತ್ತಿದ್ದು, ರೈತರು ದೊಡ್ಡ ಸಂಖ್ಯೆಯಲ್ಲಿ ಪ್ರತಿಭಟನೆಗೆ ಸಜ್ಜಾದರು. ರೈತರೊಂದಿಗೆ ಬುಡಕಟ್ಟು ಜನರೂ ಪ್ರತಿಭಟಿಸಲು ಮುಂದಾದರು. ಕಾರಣ: ನಾಸಿಕ್ ಜಿಲ್ಲೆ ಬುಡಕಟ್ಟು ಜನರ ಪ್ರಧಾನ ಜಿಲ್ಲೆ; ಅರಣ್ಯ ಹಕ್ಕು ಕಾಯಿದೆ ಪ್ರಕಾರ ಅವರಿಗೆ ಅರಣ್ಯ ಜಮೀನು ಮಂಜೂರು ಮಾಡಬೇಕಾಗಿದೆ. ಆದರೆ ಇದು ಇನ್ನೂ ಜ್ಯಾರಿಯಾಗಿಲ್ಲ.

ಮಣಿದ ಮಹಾರಾಷ್ಟ್ರ ಸರಕಾರ
ಮಾರ್ಚ್ ೬ರಂದು ೨೫,೦೦೦ ಜನರು ಜಾಥಾ ಆರಂಭಿಸಿದಾಗ ಮಹಾರಾಷ್ಟ್ರ ಸರಕಾರ ಸ್ಪಂದಿಸಲಿಲ್ಲ. ಜಾಥಾ ಮುಂದುವರಿದಂತೆ, ಇತರ ಜಿಲ್ಲೆಗಳಿಂದ ಸಾವಿರಾರು ಜನರು ಜಾಥಾ ಸೇರಿಕೊಂಡರು. ಉರಿಬಿಸಿಲಿನಲ್ಲಿ ಮುಂಬೈಗೆ ಮುನ್ನುಗ್ಗುತ್ತಿದ್ದ ಬಡಪಾಯಿಗಳ ಪರವಾಗಿ ಪ್ರಬಲ ಜನಾಭಿಪ್ರಾಯ ರೂಪುಗೊಂಡಿತು. ಆಗ ಸರಕಾರಕ್ಕೆ ಬಿಸಿ ತಗಲಿತು. ಭಾನುವಾರ ರಾತ್ರಿ ಮುಂಬೈಯ ಹೊರವಲಯ ತಲಪಿತು ಜಾಥಾ. ಮರುದಿನ ಮಾರ್ಚ್ ೧೨ರಂದು ೧೦ನೇ ತರಗತಿಯ ಪರೀಕ್ಷೆಗೆ ಹಾಜರಾಗುವ ಸಾವಿರಾರು ವಿದ್ಯಾರ್ಥಿಗಳಿಗೆ ತಮ್ಮ ಜಾಥಾದಿಂದಾಗಿ ತೊಂದರೆ ಆಗಬಾರದೆಂದು ಪ್ರತಿಭಟನಾಕಾರರ ನಿರ್ಧಾರ. ಅದಕ್ಕಾಗಿ ರಾತ್ರಿಯೇ ಜಾಥಾ ಮುನ್ನಡೆದು, ಮುಂಜಾನೆಯ ಹೊತ್ತಿಗೆ ಆಜಾದ್ ಮೈದಾನ ತಲಪಿತು. ಇಡೀ ಮುಂಬೈ ಬೃಹತ್ ಜಾಥಾದ ನಡೆಗೆ ಸ್ಪಂದಿಸಿತು. ಹಾಗಾಗಿ, ಮಹಾರಾಷ್ಟ್ರ ಸರಕಾರ ಸ್ಪಂದಿಸಲೇ ಬೇಕಾಯಿತು.

ಅಂತೂ ಮೂರು ಗಂಟೆಗಳ ಅವಧಿ ಹತ್ತಿರದ ಮಂತ್ರಾಲಯದಲ್ಲಿ ಸಂಧಾನ ನಡೆಯಿತು. ಒಂದು ಕಡೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಆರು ಸಚಿವರು; ಇನ್ನೊಂದು ಕಡೆ ಅಖಿಲ ಭಾರತ ಕಿಸಾನ್ ಸಭಾದ ರಾಷ್ಟ್ರೀಯ ಅಧ್ಯಕ್ಷ ಡಾ. ಅಶೋಕ್ ಧಾವಲೆ; ವಿಧಾನ ಸಭಾ ಸದಸ್ಯ ಜೆ.ಪಿ. ಗಾವಿಟ್; ಭಾರತೀಯ ಕಮ್ಯುನಿಸ್ಟ್ ಪಕ್ಷ(ಎಂ)ದ ರಾಜ್ಯ ಕಾರ್ಯದರ್ಶಿ ನರಸಯ್ಯ ಆದಮ್; ಕಿಸಾನ್ ಸಭಾದ ರಾಜ್ಯ ಮಂಡಲಿಯ ಅಧ್ಯಕ್ಷ ಕಿಶನ್ ಗುಜಾರ್; ಕಿಸಾನ್ ಸಭಾದ ರಾಜ್ಯ ಕಾರ್ಯದರ್ಶಿ ಅಜಿತ್ ನವಲೆ ಮತ್ತು ಇತರರು.

ಅರಣ್ಯ ಹಕ್ಕು ಕಾಯಿದೆ ಜ್ಯಾರಿ; ನಾಸಿಕ್, ಪಾಲ್ಗಾರ್ ಮತ್ತು ಥಾನೆ ಜಿಲ್ಲೆಗಳ ಬುಡಕಟ್ಟು ಜನರನ್ನು ಸಂಕಷ್ಟಕ್ಕೆ ಗುರಿ ಮಾಡುವ ನದಿ-ಜೋಡಣೆ ಯೋಜನೆ; ಕೃಷಿ ಸಾಲಗಳ ಮನ್ನಾ; ಫಸಲಿಗೆ ಲಾಭದಾಯಕ ಬೆಲೆ ನಿಗದಿ; ದೇವಸ್ಥಾನಗಳ ಜಮೀನು; ಗೋಮಾಳ; ವೃದ್ಧರಿಗೆ ಪೆನ್-ಷನ್; ಪಡಿತರ ವ್ಯವಸ್ಥೆ; ಗುಲಾಲಿ ಕಾಯಿಕೊರಕ ಮತ್ತು ಆಲಿಕಲ್ಲಿನಿಂದಾಗಿ ಹತ್ತಿ ಬೆಳೆ ನಷ್ಟವಾದ ವಿದರ್ಭ ಮತ್ತು ಮರಾಠವಾಡಾದ ಲಕ್ಷಗಟ್ಟಲೆ ರೈತರಿಗೆ ಪರಿಹಾರ – ಈ ಎಲ್ಲ ವಿಷಯಗಳಿಗೆ ಸಂಬಂಧಿಸಿದ ಅಖಿಲ ಭಾರತ ಕಿಸಾನ್ ಸಭಾದ ಬೇಡಿಕೆಗಳನ್ನು ೨ರಿಂದ ೬ ತಿಂಗಳೊಳಗೆ ಈಡೇರಿಸುವುದಾಗಿ ಮುಖ್ಯಮಂತ್ರಿ ಲಿಖಿತ ಆಶ್ವಾಸನೆ ನೀಡಿದರು. ಇದನ್ನೆಲ್ಲ ಮುಖಂಡರು ಆಜಾದ್ ಮೈದಾನಿನ ಜನಸಾಗರಕ್ಕೆ ಘೋಷಿಸಿದ ನಂತರವೇ ಜಾಥಾದಲ್ಲಿ ಬಂದಿದ್ದ ಪ್ರತಿಭಟನಾಕಾರರು ತಮ್ಮತಮ್ಮ ಊರಿಗೆ ಹೊರಟರು.

ಅದೇನಿದ್ದರೂ, ಕೃಷಿರಂಗದ ಬಿಕ್ಕಟ್ಟುಗಳ ಪರಿಹಾರಕ್ಕೆ ದೂರಗಾಮಿ ಯೋಜನೆಗಳ ಜ್ಯಾರಿ ಅಗತ್ಯ. ಕೃಷಿಸಾಲ ಮನ್ನಾ ಕೇವಲ ತಾತ್ಕಾಲಿಕ ಪರಿಹಾರ ಎಂಬುದು ಈ ಮುಂಚಿನ ಸಾಲಮನ್ನಾಗಳಿಂದ ಸ್ಪಷ್ಟವಾಗಿದೆ. ಕೃಷಿಕರ ಅಸಮರ್ಪಕ ಬೆಳೆ ಯೋಜನೆ, ಏರುತ್ತಿರುವ ಒಳಸುರಿಗಳ (ಬೀಜ, ಗೊಬ್ಬರ ಇತ್ಯಾದಿ) ವೆಚ್ಚ, ಲೇವಾದೇವಿದಾರರಿಂದ ದುಬಾರಿ ಬಡ್ಡಿಗೆ ಸಾಲ, ಕೃಷಿಯೇತರ ಉದ್ದೇಶಗಳಿಗಾಗಿ (ಮದುವೆ ಇತ್ಯಾದಿ) ಅತಿರೇಕದ ಖರ್ಚಿಗಾಗಿ ಸಾಲ ಮಾಡುವುದು – ಇವು ರೈತರನ್ನು ಸಾಲದ ಸುಳಿಗೆ ಸಿಲುಕಿಸುತ್ತಿವೆ. ಜೊತೆಗೆ, ಕೃಷಿರಂಗದಲ್ಲಿ ಸರಕಾರದ ಹೂಡಿಕೆ ಕಡಿಮೆಯಾಗುತ್ತಿದ್ದು ಇದು ರೈತರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡುತ್ತಿದೆ.

೨೦೨೨ರ ಹೊತ್ತಿಗೆ ನಮ್ಮ ದೇಶದ ರೈತರ ಆದಾಯ ಇಮ್ಮಡಿಗೊಳಿಸುವ ಮಹತ್ವಾಕಾಂಕ್ಷಿ ಗುರಿಯ ಬಗ್ಗೆ ಪ್ರಧಾನಮಂತ್ರಿಯವರು ಮತ್ತೆಮತ್ತೆ ಘೋಷಿಸುತ್ತಲೇ ಇದ್ದಾರೆ. ಆ ಗುರಿಸಾಧಾನೆಗಾಗಿ, ಸ್ಪಷ್ಟವಾದ ಹಾಗೂ ಪಾರದರ್ಶಕವಾದ ಕಾರ್ಯಕ್ರಮಗಳನ್ನು ೨೦೧೯ರ ಲೋಕಸಭಾ ಚುನಾವಣೆಯ ಮುನ್ನ ಜ್ಯಾರಿಗೊಳಿಸಬೇಕಾಗಿದೆ. ಇಲ್ಲವಾದರೆ, ಮಣ್ಣಿನ ಮಕ್ಕಳ ಆಕ್ರೋಶ ಮುಗಿಲು ಮುಟ್ಟಲಿದೆ ಎಂಬುದಕ್ಕೆ ಮಹಾರಾಷ್ಟ್ರದ ೪೦,೦೦೦ ಮಣ್ಣಿನ ಮಕ್ಕಳು ರಾಜಧಾನಿ ಮುಂಬೈಗೆ ಮುತ್ತಿಗೆ ಹಾಕಿದ್ದೇ ಪುರಾವೆ.