ಅದಾನಿ ಕಂಪೆನಿ ಲಂಚ ಆರೋಪ ಬಗ್ಗೆ ದೇಶದಲ್ಲೂ ತನಿಖೆಯಾಗಲಿ

ಅದಾನಿ ಕಂಪೆನಿ ಲಂಚ ಆರೋಪ ಬಗ್ಗೆ ದೇಶದಲ್ಲೂ ತನಿಖೆಯಾಗಲಿ

ಖಾದ್ಯ ತೈಲದಿಂದ ಬಂದರು ನಿರ್ವಹಣೆಯವರೆಗೆ ಹಲವು ಉದ್ದಿಮೆಗಳನ್ನು ನಡೆಸುತ್ತಿರುವ ದೇಶದ ಶೀಮಂತ ಉದ್ಯಮಿ ಗೌತಮ್ ಅದಾನಿ ಅವರಿಗೆ ೨೨ ತಿಂಗಳ ಅವಧಿಯಲ್ಲಿ ಮತ್ತೊಂದು ಸಂಕಷ್ಟ ಎದುರಾಗಿರುವುದು ಭಾರತೀಯ ಉದ್ಯಮ ವಲಯ ಹಾಗೂ ರಾಜಕೀಯ ರಂಗದಲ್ಲಿ ಸಹಜವಾಗಿಯೇ ಚರ್ಚೆಗೆ ಕಾರಣವಾಗಿದೆ. ಹಿಂಡನ್ ಬರ್ಗ್ ಸಂಕಷ್ಟದಿಂದ ಹೊರಬಂದ ಅದಾನಿ ಅವರು ದೇಶದ ಐದು ರಾಜ್ಯಗಳ ಸರ್ಕಾರಿ ಅಧಿಕಾರಿಗಳಿಗೆ ೨೧೦೦ ಕೋಟಿ ರೂ. ಲಂಚವನ್ನು ನೀಡಿದ್ದಾರೆ. ತಮ್ಮ ಕಂಪೆನಿಯಿಂದ ದುಬಾರಿ ದರಕ್ಕೆ ವಿದ್ಯುತ್ ಖರೀದಿಸುವುದಕ್ಕಾಗಿ ಅನುವು ಮಾಡಿಕೊಡಲು ಈ ಲಂಚ ಸಂದಾಯ ಮಾಡಿದ್ದಾರೆ ಎಂದು ಅಮೇರಿಕದ ಕಾನೂನು ಇಲಾಖೆ ಅಲ್ಲಿನ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ. ಅದರ ಬೆನ್ನಲ್ಲೇ ಅಮೇರಿಕದ ಕೋರ್ಟ್ ಅದಾನಿ ಹಾಗೂ ಇನ್ನಿತರರ ವಿರುದ್ಧ ಬಂಧನ ವಾರಂಟ್ ಹೊರಡಿಸಿದೆ. ಅದಾನಿ ಭಾರತೀಯ ಪ್ರಜೆ, ವಾರಂಟ್ ಹೊರಡಿಸಿರುವುದು ಅಮೇರಿಕ ನ್ಯಾಯಾಲಯವಾಗಿರುವ ಕಾರಣ ತಕ್ಷಣಕ್ಕೆ ಅದಾನಿ ಅವರಿಗೆ ಕಾನೂನಿನ ಸಂಕಷ್ಟ ಎದುರಾಗದೆ ಇರಬಹುದು. ಆದರೆ ಅವರ ಉದ್ಯಮ ವಲಯದ ಮೇಲಿನ ವಿಶ್ವಾಸಾರ್ಹತೆಗೆ ಅತಿದೊಡ್ಡ ಪೆಟ್ಟು ಬಿದ್ದಿರುವುದಂತೂ ಸತ್ಯ.

ಈ ವಿಷಯವನ್ನು ಮುಂದಿಟ್ಟುಕೊಂಡು ರಾಜಕೀಯ ಪಕ್ಷಗಳು ಈಗಾಗಲೇ ಅದಾನಿ ವಿರುದ್ಧ ಹೇಳಿಕೆಗಳ ಸಮರ ಆರಂಭಿಸಿರುವುದು ನಿರೀಕ್ಷಿತ ರಾಜಕೀಯ ಬೆಳವಣಿಗೆ, ಅದಾನಿ ಉದ್ಯಮ ಸಾಮ್ರಾಜ್ಯ ಭಾರತಕ್ಕೆ ಸೀಮಿತವಾಗಿಲ್ಲ. ಇದು ವಿಶ್ವದ ಹಲವು ದೇಶಫಗಳಲ್ಲಿ ಕಾರ್ಯಾಚರಣೆ ಮಾಡುತ್ತಿದೆ. ಭಾರತೀಯ ಕಂಪೆನಿಯೊಂದು ವಿಶ್ವಮಟ್ಟದಲ್ಲಿ ಬೆಳೆಯುವುದನ್ನು ಎಲ್ಲ ಭಾರತೀಯರೂ ಪ್ರಶಂಸಿಸುತ್ತಾರೆ. ಆದರೆ ಈ ಕಾರ್ಯಕ್ಕಾಗಿ ಭ್ರಷ್ಟಾಚಾರದಂತಹ ಹಾದಿ ಹಿಡಿಯುವುದನ್ನು ಒಪ್ಪಲಾಗದು. ಅದು ಪಾರದರ್ಶಕ ಉದ್ದಿಮೆ ವ್ಯವಹಾರಕ್ಕೆ ತದ್ವಿರುದ್ಧ ಸಂಗತಿ. ಅದಾನಿ ಕಂಪೆನಿ ತಪ್ಪು ಮಾಡಿದೆ ಎಂದು ಅಮೇರಿಕದ ವರದಿಯೊಂದನ್ನೇ ಆಧರಿಸಿ ತೀರ್ಮಾನಕ್ಕೆ ಬರಲು ಆಗುವುದಿಲ್ಲ. ಪ್ರಕರಣ ನಡೆದಿರುವುದು ಭಾರತದ ಐದು ರಾಜ್ಯಗಳ ವಿದ್ಯುತ್ ಖರೀದಿ ಒಪ್ಪಂದದ ವೇಳೆ. ಹೀಗಾಗಿ ಇಲ್ಲೂ ತನಿಖೆಯಾಗಬೇಕು. ಅದಾನಿ ಲಂಚ ನೀಡಿದ್ದಾರೆಂದು ಅಮೇರಿಕ ವರದಿ ಸಲ್ಲಿಸಿದೆ ನಿಜ. ಲಂಚ ಪಡೆದ ಅಧಿಕಾರಿಗಳ ಬಗ್ಗೆ ಅಲ್ಲಿ ಪ್ರಸ್ತಾಪವಿಲ್ಲ. ಆದ ಕಾರಣ, ಈ ಪ್ರಕರಣದ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರಕಾರಗಳ ಮಟ್ಟದಲ್ಲಿ ತನಿಖೆ ನಡೆಸಿ, ಎದ್ದಿರುವ ಅನುಮಾನವನ್ನು ಬಗೆಹರಿಸಬೇಕು. ಒಂದು ವೇಳೆ ಲಂಚದ ಹಗರಣ ನಡೆದದ್ದೇ ಆದಲ್ಲಿ, ಯಾರೇ ತಪ್ಪು ಮಾಡಿದ್ದರೂ ಶಿಕ್ಷೆಯಾಗಬೇಕು. ಭವಿಷ್ಯದಲ್ಲಿ ಇಂತಹ ವ್ಯವಹಾರ ನಡೆಸುವವರಿಗೆ ಇದು ಎಚ್ಚರಿಕೆಯ ಪಾಠವಾಗಬೇಕು.

ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೨೩-೧೧-೨೦೨೪ 

ಚಿತ್ರ ಕೃಪೆ: ಅಂತರ್ಜಾಲ ತಾಣ