ಅದ್ಭುತ ಕಲಾಕಾರಿ...

ಅದ್ಭುತ ಕಲಾಕಾರಿ...

ನಾವು ಚಿಕ್ಕವರಿದ್ದಾಗ ನಾವು ಕೇಳಿ ನೆನಪುಳಿದ ಅಜ್ಜಿಯ ಕಥೆಗಳಿಗಿಂತಲೂ ನೆನಪಿನಲ್ಲಿ ಉಳಿದಿರುವುದೆಂದರೆ ತೊಗಲು ಗೊಂಬೆ ಆಟದ ಮೂಲಕ ನೋಡಿದ ಕಥೆಗಳು.. ಹೌದು ನಾವು ಕೇಳಿ ನೆನಪಿನಲ್ಲಿ ಉಳಿಯುವ ಪಾಠಗಳಿಗಿಂತ ನಾಟಕದ ರೀತಿ ನೋಡಿದ ಕಥೆಗಳು ಎಂದೂ ಅಚ್ಚಳಿಯದೆ ಉಳಿಯುತ್ತವೆ. ಅದಕ್ಕೆ ಅದರದ್ದೇ ಆದ ವೈಜ್ಞಾನಿಕ ಕಾರಣಗಳಿವೆ. ಆ ಕಾರಣಕ್ಕಾಗಿಯೇ ಈಗ ಚಟುವಟಿಕೆಯ ಮೂಲಕ ಕಲಿಕೆ ಎನ್ನುವ ಪದ್ಧತಿಯು ಬಂದಿದೆ. ಅವುಗಳ ಬಗೆಗಿನ ಹಲವಾರು ತರಬೇತಿಗಳನ್ನು ಸಹ ಈಗ ನೀಡಲಾಗಿತ್ತಿದೆ. 

ಇದೆಲ್ಲ ಪೀಠಿಕೆಯ ಕಾರಣ ಏನೆಂದರೆ, ಮೊನ್ನೆ ಶಾಲೆಯಲ್ಲಿ ಕಥೆಯನ್ನು ಹೇಳಿಕೊಡುವ ತರಗತಿ ನನ್ನದಾಗಿತ್ತು. ನನ್ನದೇ ಒಂದು ಪುಟ್ಟ ತಯಾರಿ ಮಾಡಿಕೊಂಡು ತರಗತಿಗೆ ಹೋಗಿ ಕಥೆಯನ್ನೇನೋ ಚಂದ ಮಾಡಿ ಹೇಳಿ ಕೊಟ್ಟೆ, ಎನ್ನುವ ಭಾವ ನನ್ನದಾಗಿತ್ತು. ಆದರೆ ಆ 3 ವರ್ಷದ ಮಗುವಿನ ಮುಂದೆ ನಾವು ಕಲಿತದ್ದು ಏನೂ ಅಲ್ಲ ಎನಿಸುವಂತ ಘಟನೆ ನಡೆಯಿತು.. ಬರೀ ಪಾಠ ಎಂದರೆ ಮಕ್ಕಳಿಗೆ ಬೇಜಾರು, ಅದರ ಜೊತೆ ಸ್ವಲ್ಪ ಆಟವು ಬೇಕಲ್ಲವೇ ಅದಕ್ಕೆ ನಾನು ಪುಸ್ತಕದಲ್ಲಿರುವ ಚಿತ್ರಗಳನ್ನು ತೋರಿಸಿ ಅವುಗಳ ಪರಿಚಯವನ್ನು ಮಕ್ಕಳಿಗೆ ಹೇಳಿಕೊಡುತ್ತಿರುವಾಗ, ಹೀಗೆ ರಾಮಾಯಣ ಹಾಗೂ ಮಹಾಭಾರತದ ಪಾತ್ರಗಳ ಪರಿಚಯವನ್ನು ಮಾಡಿಕೊಡುವಾಗ, ಅಲ್ಲಿಯ ವರೆಗೂ ಸುಮ್ಮನೆ ಕುಳಿತು ಪಾಠ ಕೇಳುತ್ತಿದ್ದ ಮಗು ಥಟ್ಟನೆ ಓಡಿ ಹೋಗಿ ಆಟಿಕೆಗಳಲ್ಲಿ ಏನನ್ನೋ ಹುಡುಕಲು ಶುರು ಮಾಡಿತು. ನಾನು ಹೇಳಿದೆ "ಮಗು ಈಗ ಆಟದ ಸಮಯ ಅಲ್ಲ ಬಾ" ಎಂದೇ. ಆದರೂ ಅವಳು ಏನನ್ನೋ ಹುಡುಕುತ್ತಲೇ ಇದ್ದಳು... ಅದನ್ನು ಲೆಕ್ಕಿಸದೆ ನಾನು ಮುಂದುವರೆಸಿದೆ.. ಕೆಲವು ನಿಮಿಷಗಳ ನಂತರ ಹಲವಾರು ಆಟಿಕೆಗಳನ್ನು ಒಂದು ಬುಟ್ಟಿಯಲ್ಲಿ ತುಂಬಿಕೊಂಡು ಬಂದು, ನನ್ನ ಬಳಿ ಸನ್ನೆ ಮಾಡಿದಳು, ಕಾರಣ ಅವಳ ಮಾತೃಭಾಷೆ ಬೇರೆ. ಕನ್ನಡ ಅರ್ಥಮಾಡಿಕೊಳ್ಳಬಲ್ಲಳು, ಆದರೆ ಮಾತನಾಡಲು ಗೊತ್ತಿಲ್ಲ. ಆದ ಕಾರಣ ಅವಳು ನಮ್ಮ ಬಳಿ ಮಾತಿಗಿಂತ ನಟನೆಯಲ್ಲೆ ಸಂವಾದಿಸುತ್ತಿದ್ದಳು. ನಮಗೆ ಕೆಲವೊಂದು ತಿಳಿಯುತ್ತಿತ್ತು. ಹೀಗಿರುವಾಗ, ಅವಳು ನನ್ನ ಬಳಿ ಬಂದು, ನಾನು ಮೊದಲು ಹೇಳಿದ ಪೌರಾಣಿಕ ಪಾತ್ರಗಳ ಪರಿಚಯವನ್ನು ಮತ್ತೆ, ಕೇಳಲು ನನ್ನನ್ನು ಒತ್ತಾಯಿಸಿದಳು. ಮೊದಲಿಗೆ ನನಗೆ ಏನೂ ತಿಳಿಯದೆ ಹೋದರೂ, ನಂತರ ಅರ್ಥ ಮಾಡಿಕೊಂಡು, ಒಂದೊಂದೇ ಪಾತ್ರದ ಹೆಸರುಗಳನ್ನೂ ಹೇಳುತ್ತಾ ಹೋದೆ. 

ಕೃಷ್ಣ ಎಂದೊಡನೆ ಅವಳು ಅಲ್ಲಿದ್ದ ಕಟ್ಟಿಗೆಯ ರೂಪದ ಆಟಿಕೆ ಹಿಡಿದು ಕೃಷ್ಣನಂತೆ ನಿಂತಳು. ರಾಮ ಎಂದಾಕ್ಷಣ, ಅಲ್ಲೇ ಇದ್ದ ಆಟಿಕೆಗಳನ್ನು ಹೊಂದಿಸಿ ಬಿಲ್ಲು ಬಾಣ ತಯಾರಿಸಿ ರಾಮನ ನಟನೆ. ಹೀಗೆ ಹಲವಾರು ಪಾತ್ರಗಳ ಪರಿಚಯವನ್ನು ಅವಳು ನಟನೆಯ ಮೂಲಕ, ಅವರ ಗುರುತಿನ ವಸ್ತುಗಳ ಮೂಲಕ ತೋರಿಸಿದಳು. ಮೊದಮೊದಲು ಏನೂ ತಿಳಿಯದೆ ಹೋದರೂ ನಂತರ ನನಗೆ ರೋಮಾಂಚನ ಅನಿಸತೊಡಗಿತ್ತು. ಕಡೆಗೆ ಭಕ್ತ ಪ್ರಹ್ಲಾದ ನ ಹೆಸರು ಹೇಳಿದ ಕೂಡಲೇ ಒಂದು ಕ್ಷಣ ಅವಳ ಮುಖದಲ್ಲಿ ಏನೂ ಭಾವವಿರಲಿಲ್ಲ. "ಏನಾಯಿತು ಪುಟ್ಟ ಅವನ ಪರಿಚಯ ನಿನಗಿಲ್ಲವೇ? ತೊಂದರೆ ಇಲ್ಲ ಬಿಡು" ಎಂದು ಸಮಾಧಾನ ಹೇಳುವಷ್ಟರಲ್ಲಿ ತನ್ನ ಸ್ಕೂಲ್ ಬ್ಯಾಗ್ ನ್ನು ಹೊತ್ತು ತಂದು, ಅದನ್ನು ಅಡಿ ಹಾಕಿ ಅದರ ಮೇಲೆ ಕುಳಿತಳು... "ಅಯ್ಯೋ ಪುಟ್ಟ ಮೇಲೆ ಕೂರಬಾರದು ಎದ್ದೇಳು ಎಂದು ನಾನು ಅವಳನ್ನು ತಡೆಯುತ್ತಿದ್ದರೂ ಅವಳು ಏಳಲು ತಯಾರಿಲ್ಲ... ಮುಖ ಕೆಂಪಗೆ ಮಾಡಿಕೊಂಡಿ ಚೀಲದ ಜಿಪ್ ನ್ನು ತೆರೆದು ಅದರೊಳಗಿನ ಒಂದೊಂದೇ ವಸ್ತುಗಳನ್ನು ಹೊರ ಹಾಕಲಾರಂಭಿಸಿದಳು. ದೂರ ನಿಂತು ಸುಮ್ಮನೆ ನೋಡತೊಡಗಿದೆ, ಎಲ್ಲವನ್ನು ಹೊರಹಾಕಿ ನಂತರ ತನ್ನ ID ಕಾರ್ಡ್ ನ್ನು ಕುತ್ತಿಗೆಗೆ ಹಾಕಿ ನಾಲಿಗೆ ಹೊರಗೆ ಹಾಕಿ ಘರ್ಜಿಸಿದಳು... ಆಗ ನನಗೆ ತಿಳಿಯಿತು... ಓ...... ಇದು ಭಕ್ತ ಪ್ರಹ್ಲಾದನ ಪರಿಚಯವೆಂದು... 

ಆ ಮಗುವಿನ ನಟನೆ ನನ್ನ ಬಾಯಿ ಮುಚ್ಚಿಸಿತ್ತು.. ಪ್ರತಿಯೊಂದು ವಸ್ತುವಿನ ಪರಿಚಯಕ್ಕೂ ಅವಳ ಬಳಿ ನಟನೆಯ ವ್ಯಾಖ್ಯಾನ ಉಂಟು... ಆ ದಿನ ನನಗಾದ ಖುಷಿ ಅಪಾರ... ನಂತರ ಆ ಖುಷಿಯನ್ನೆಲ್ಲ ಅವಳ ತಾಯಿಯ ಬಳಿ ಹಂಚಿಕೊಂಡಾಗ, ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ... "ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು" ಎಂಬ ನಾಣ್ನುಡಿಯಂತೆ ಅವಳ ಆ ಕೌಶಲ್ಯದಿಂದ ಅವಳ ಕುಟುಂಬದ ಸಂಸ್ಕಾರ ತಿಳಿಯುತ್ತದೆ. ಪ್ರತಿಯೊಂದು ಮಗುವು ಒಂದೊಂದು ಹೊಸ ಪಾಠಗಳನ್ನು ಕಲಿಸುವ ಪುಸ್ತಕವಿದ್ದಂತೆ.. ಅದನ್ನು ಓದಲು ನಮಗೆ ಆಸಕ್ತಿ ಇರಬೇಕಷ್ಟೆ.

-ರಮ್ಯಾ ಆರ್ ಭಟ್, ಕುಂದಾಪುರ

ಚಿತ್ರ ಕೃಪೆ: ಇಂಟರ್ನೆಟ್ ತಾಣ