ಅನುಬಂಧ

ಅನುಬಂಧ

ಬರಹ

"ಇಲ್ಲ, ಇನ್ನು ನನ್ನಿಂದ ಆಗುವುದಿಲ್ಲ, ತಾಳ್ಮೆಗು ಒಂದು ಮಿತಿ ಇದೆ, ಇವನ ಹಾವಭಾವ ನನ್ನನ್ನು ಕೊಲ್ಲುತಿದೆ. ಎಷ್ಟು ಅಂತ ಇವನ ವರ್ತನೆ ಸಹಿಸಲಿ" ಎಂದು ಸುಕೃತಿ ತನ್ನ ಮನಸ್ಸಿನಲ್ಲೆ ವೇದನೆಯನ್ನು ಅನುಭವಿಸುತ್ತಿರುವಾಗಲೇ ಸುಮಂತ ರೂಮಿಗೆ ಬರುವುದನ್ನು ಗಮನಿಸಿದಳು. ಈ ದಿನ ವಿಚ್ಛೇದನದ ಬಗ್ಗೆ ತೀರ್ಮಾನಿಸಲೇಬೇಕು ಎಂದು ದೃಢವಾಗಿ ನಿಶ್ಚಯ ಮಾಡಿದಳು. ಸುಮಂತನು ಎಂದಿನಂತೆ ಕಛೇರಿಯ ಕೆಲಸದಿಂದ ಮರಳಿ ತನ್ನ ಬ್ಯಾಗ್ ಅನ್ನು ರೂಮಿನಲ್ಲಿ ಇಟ್ಟು ಕುರ್ಚಿಯಲ್ಲಿ ವಿರಾಮಿಸಿಕೊಳ್ಳುತ್ತಿದ್ದನು. ಸುಕೃತಿ ಅವನ ಬಂದ ಕೂಡಲೆ ಹಜಾರದ ಕಡೆಗೆ ಬಂದು ಕಿಟಕಿಯ ಹತ್ತಿರ ನಿಂತು ಆಚೆ ಓಡಾಡುವ ಗಾಡಿಗಳನ್ನು ದೃಷ್ಟಿಸುತ್ತಿದ್ದಳು. ದೃಷ್ಟಿಸುವಾಗಲೆ ಇವರಿಬ್ಬರ ಪ್ರೀತಿಯ ಘಟನಾವಳಿಗಳ ಹಿಂದೆ ಶುರುವಾದ ಸಂದರ್ಭಗಳನ್ನು ಮೆಲುಕುಹಾಕಲು ಯತ್ನಿಸಿದಳು.

ಸುಮಂತನ ಭೇಟಿಯಾದದ್ದೆ ಆಕಸ್ಮಿಕ. ಇಬ್ಬರು ಸ್ನೇಹಿತರಾಗಿ, ಸ್ನೇಹದಿಂದ ಪ್ರೇಮಕ್ಕೆ ತಿರುಗಿ ಹಿರಿಯರ ಆಶೀರ್ವಾದ ಪಡೆದು ಅವರ ಸಮ್ಮುಖದಲ್ಲಿಯೆ ವಿವಾಹವಾಯಿತು. ಸ್ನೇಹದಿಂದ ಪ್ರೇಮಕ್ಕೆ ತಿರುಗುವಾಗಲೆ ಮೂರು ವರುಷ ಕಳೆದಿತ್ತು. ಈ ಮೂರು ವರುಷದಲ್ಲಿ ಸುಮಂತನ ವಿಚಿತ್ರ ಹಾವಭಾವವನ್ನು ಗಮನಿಸಿದ್ದಳು. ಅವಳಿಗೆ ಅವನ ನಡವಳಿಕೆಯು ಆಶ್ಚರ್ಯವನ್ನುಂಟುಮಾಡಿತ್ತು. ಇವಳು ಪ್ರೀತಿಯನ್ನು ಅತಿಯಾಗಿಯೆ ಧಾರೆಯೆರೆಯುತ್ತಿದ್ದರೆ ಅವನು ತಕ್ಕ ಮಟ್ಟಿಗೆ ಇರುತ್ತಿದ್ದ. ಸದಾ ಅಂತರ್ಮುಖಿ ತಾನಾಯಿತು ತನ್ನ ಕೆಲಸವಾಯಿತು. ಇದನ್ನರಿತ ಸುಕೃತಿ ಕಾಲಕ್ರಮೇಣ ಸರಿಹೋಗಬಹುದೆಂದು ಅರಿತು ಇನ್ನಷ್ಟು ಸುಮಂತನಿಗೆ ಹತ್ತಿರಳಾಗುತ್ತಿದ್ದಳು. ಈ ವಿಷಯವಾಗಿ ಇಬ್ಬರಲ್ಲಿ ಸಣ್ಣ ಪುಟ್ಟ ಜಗಳಗಳಾಗಿದ್ದವು, ಆದರೆ ಸುಮಂತನು ಅದನ್ನು ಬಹಳ ಯೋಚಿಸಲು ಹೋಗುತ್ತಿರಲಿಲ್ಲ ಇದೇ ಪ್ರಸಂಗವು ಸುಕೃತಿಗೆ ಹಿಡಿಸದಿದ್ದರು ಆಗಾಗ ತಾಳ್ಮೆ ಕಳೆದುಕೊಳ್ಳುತ್ತಿದ್ದಳು. ಅವನಿಗಿದ್ದ ಪ್ರೀತಿಯ ಭಾವನೆಯೇ ಬೇರೆ ಇವಳಿಗಿದ್ದ ಭಾವನೆಯೇ ಬೇರೆ, ಇಬ್ಬರಿಗು ತಾಳೆಯಾಗುತ್ತಿರಲಿಲ್ಲ.

ಒಬ್ಬರಿಗೊಬ್ಬರು ಈ ಭಾವನೆಗಳನ್ನು ಹೇಳಿಕೊಳ್ಳದೆ ಇವರಿಬ್ಬರ ಸಂಬಂಧ ದಿನವು ಹದಗೆಡುತ್ತಿತ್ತು.

ಎಂದಿನಂತೆ, ಅವರಿಬ್ಬರು ಅಷ್ಟು ಮಾತಿಲ್ಲದೆ ಊಟ ಮುಗಿಸಿ ತಮ್ಮ ಪಾಡಿಗೆ ನಿದ್ರಿಸಲು ಅನುವುಮಾಡಿಕೊಳ್ಳುತ್ತಿದ್ದರು. ಅವನು ನಿದ್ರಿಸುವುದಕ್ಕಿಂತ ಮುಂಚೆಯೇ ತಿಳಿಸಬೇಕೆಂದು ನಿಶ್ಚಯಿಸಿ ಹೇಳಲಾರಂಭಿಸಿದಳು. "ಸುಮಂತ್, ನಾಳೆ ನಾನು ಡಿವೋರ್ಸ್ ಪೇಪರ್ಸ್ ಗೆ ರೆಡಿ ಮಾಡ್ತಿದ್ದೇನೆ ನಿನ್ನ ಆಂತರ್ಯದ ಭಾವನೆಗಳು ನನಗೆ ಅರ್ಥ ಆಗುತ್ತಿಲ್ಲ, ನನ್ನ ಭಾವನೆಗಳು ನಿನಗೆ ಅರ್ಥ ಆಗುತ್ತಿಲ್ಲ. ನಮ್ಮಿಬ್ಬರಿಗೆ ಇದೇ ಸರಿಯಾದ ದಾರಿ ಹಾಗು ನೆಮ್ಮದಿಯು ಕೂಡ" ಎಂದು ಸುಕೃತಿ ಹೇಳುತ್ತಿರುವಾಗಲೆ ಸುಮಂತನಿಗೆ ಕೇಳಲಾಗಲಿಲ್ಲ ಹೇಗೋ ಸಮಾಧಾನ ಮಾಡೋಣವೆಂದುಕೊಂಡರೆ ಮಾತುಗಳೇ ಹೊರಡುತ್ತಿಲ್ಲ. "ಇದೇ ನಿನ್ನ ಕೊನೆಯ ತೀರ್ಮಾನವೆ? ದುಡುಕಬೇಡ ಸ್ವಲ್ಪ ಯೋಚಿಸು" ಎಂದ. "ಇಲ್ಲ, ತೀರ್ಮಾನಿಸಿದ್ದೇನೆ ಇಬ್ಬರಿಗೆ ಇದೇ ಸೂಕ್ತ" ಎಂದು ಹೇಳಿ ಹೊದ್ದುಕೊಂಡು ಮಲಗಿದಳು. ತಾನಾಗಿಯೆ ಏನಾದರು ಮಾತಾಡಿಯಾಳು ಎಂದು ಕಾಯುತ್ತಿದ್ದನು ಆದರೆ ವ್ಯರ್ಥ ಆದಾಗಲೇ ಅವಳಿಗೆ ನಿದ್ರೆ ಹತ್ತಿತ್ತು. ಇವನು ತನ್ನ ಲೋಕದಲ್ಲಿಯೇ ಮುಳುಗಿ ಆಲೋಚಿಸತೊಡಗಿದನು.

ಮರುದಿನ ಬೆಳಿಗ್ಗೆ ಸುಕೃತಿ ತಡವಾಗಿಯೆ ಎದ್ದಳು ನೋಡಿದರೆ ಸುಮಂತ ಆಗಲೇ ಎದ್ದು ಆಫೀಸಿಗೆ ಹೋಗಿರಬಹುದು ಎಂದು ಊಹೆ ಮಾಡಿಕೊಂಡು "ನಾನು ವಿಚ್ಛೇದನದ ವಿಷಯವನ್ನು ಹೇಳಿದರು ಕಲ್ಲಿನಂತೆ ಕೂತಿದ್ದನಲ್ಲ, ಎಂತಹ ಸ್ವಾರ್ಥಿ" ಎಂದು ಎಡಮಗ್ಗುಲಿಗೆ ತಿರುಗಿಕೊಂಡಾಗ ದಿಂಬಿನ ಕೆಳಗೆ ಪತ್ರದ ಲಕೋಟೆ ಕಾಣಿಸಿತು. ಅರೇ, ಇದೇನಿದು ಎಂದು ಪತ್ರದ ಲಕೋಟೆಯನ್ನು ಬಿಡಿಸಿ ಓದಲಾರಂಭಿಸಿದಳು.

" ಪ್ರೀತಿಯ ಸುಕೃತಿ,

ಈ ಕಾಗದ ಕಂಡ ಕೂಡಲೇ ಗಾಭರಿಯಾಗಬೇಡ ನನ್ನ ಆಂತರ್ಯದ ಭಾವನೆಗಳನ್ನು ಪದಗಳಲ್ಲಿ ಜೋಡಿಸಿ ಬರೆದಿರುವೆನು ದಯವಿಟ್ಟು ವಕೀಲರ ಹತ್ತಿರ ಹೋಗುವ ಮುಂಚೆ ತಾಳ್ಮೆಯಿಂದ ಈ ಪತ್ರವನ್ನು ಓದು. ಓದಿದ ನಂತರ ನಾನು ಬಿಚ್ಚಿಟಿರುವ ವಿಷಯಗಳು ನಿನಗೆ ಸಣ್ಣತನ ಅನ್ನಿಸಬಹುದು ನನಗೆ ದೊಡ್ಡದಲ್ಲದಿರಬಹುದು, ಆದರೆ ಈ ವಿಷಯಗಳು ನಮ್ಮಿಬ್ಬರ ಭಾವನೆಗಳಲ್ಲಿ ಮಿಳಿತವಾಗಿತ್ತು. ನಿನಗೆ ತಿಳಿದಂತೆ ಇಬ್ಬರೂ ಆಫೀಸಿಗೆ ಹೋಗುವ ಭರಾಟೆಯಲ್ಲಿ ನೀನು ಆತುರದಿಂದ ಹೊರಡುವ ಗಳಿಗೆಯಲ್ಲಿ ನಾನು ಬೆಳಗಿನ ಉಪಾಹಾರಕ್ಕೆ ತಯಾರು ಮಾಡಿ ನಿನಗು ಬಡಿಸಿ ನಂತರ ನಾನು ಸೇವಿಸಿ ಹೊರಡುತ್ತಿದ್ದೆ. ಇದೇ ಆತುರಾತುರದಿಂದ ನಿನ್ನ ಆಫೀಸಿನ ಬೀಗದ ಕೈಗಳು ನೀನು ಮರೆತುಕೊಂಡು ನಾನು ನನ್ನ ಕೆಲಸಗಳನ್ನು ಬಿಟ್ಟು ಸಂಯಮದಿಂದಲೇ ನಿನ್ನ ಆಫೀಸಿಗೆ ಬಂದು ನಿನಗೆ ತಲುಪಿಸುತ್ತಿದ್ದೆ. ಇದು ಒಂದೆರೆಡು ಬಾರಿ ನಡೆದಿದೆಯೇ, ಲೆಕ್ಕವಿಲ್ಲದಷ್ಟು. ನಿನಗೆ ಲೆಕ್ಕವನ್ನು ಹೇಳಿದಾಗಲೆಲ್ಲ ತಿರುಗಿ ಬೀಳುತ್ತಿದ್ದೆ, ಸರಿ ನಿನ್ನ ತಾಳ್ಮೆಯನ್ನು ಪರೀಕ್ಷಿಸಬಾರದು ಎಂದು ಸುಮ್ಮನಿರುತ್ತಿದ್ದೆ. ಭಾನುವಾರವು ನಿನ್ನ ಪ್ರಾಜೆಕ್ಟ್ಗ್ಗ್ ಗಳಿಗೆ ನಿನಗೆ ಕೈ ಜೋಡಿಸುತ್ತಿದ್ದೆ. ಈ ಎಲ್ಲಾ ಸಹಾಯಗಳಿಗೂ ನನ್ನ ತಾಳ್ಮೆ ಮಿತಿ ಮೀರಲಿಲ್ಲ. ಸಹಾಯಗಳು ಕಡಿಮೆಯೇ ಆದರು ನನ್ನ ಇರುವಿಕೆಯು ನಿನಗೆ ಸಹಾಯವಾಯಿತಲ್ಲವೆ? ಇವೆಲ್ಲ ಸಂದರ್ಭಗಳು ಪ್ರೀತಿಯ ಮತ್ತೊಂದು ಮುಖವಲ್ಲವೆ? ನನ್ನ ಮಟ್ಟಿಗೆ ಇವೆಲ್ಲ ಸಂದರ್ಭಗಳು ಪ್ರೀತಿಯ ಮತ್ತೊಂದು ಮುಖವೆ, ಇವು ನಿನಗೆ ಅಲ್ಲದಿರಬಹುದು.ನೀನು ನನ್ನಿಂದ ಬಯಸುತ್ತಿರುವ ವಿಚ್ಛೇದನವನ್ನು ಕೊಡಲು ನನ್ನಿಂದೇನು ತಕರಾರಿಲ್ಲ ಆದರೆ ನನ್ನ ಚಿಂತೆ ಏನೆಂದರೆ ನನ್ನ ತೊರೆದ ನಂತರ ನಿನಗೆ ಕೈ ಜೋಡಿಸಲಿಕ್ಕೆ ಯಾರು ಬಂದು ನಿಲ್ಲುವರೋ? ಹೇಗೆ ಸಹಾಯ ಮಾಡುವರೋ? ಎಂದು. ನನಗಿಂತ ಹೆಚ್ಚಿನ ತಾಳ್ಮೆವಹಿಸಿ ನಿನ್ನ ಕೆಲಸಗಳಿಗೆ ಬೆನ್ನೆಲುಬಾಗಿ ನಿಂತು ಸಕಲ ಕೆಲಸಗಳಿಗೆ ನಿನಗೆ ಕೈ ಜೋಡಿಸುವ ವ್ಯಕ್ತಿಯು ನಿನಗೆ ದೊರಕಿದರೆ ಅದು ನಿನ್ನ ಪುಣ್ಯವೆ ಸರಿ.
ಇನ್ನೊಮ್ಮೆ ಪ್ರಶಾಂತ ಚಿತ್ತದಿಂದ ಯೋಚಿಸು ನಿನ್ನ ಮುಂದಿನ ಧ್ಯೇಯಗಳು ಏನೆಂದು ಎಂದು. ನಾನು ಈ ಪತ್ರದ ಮುಖೇನ ನಿನ್ನ ಮನಸಿಗೆ ನೋವು ಮಾಡಿದ್ದಲ್ಲಿ ನನ್ನನ್ನು ಕ್ಷಮಿಸು. ನನ್ನಲ್ಲಿ ಸ್ವಲ್ಪವಾದರು ಪ್ರೀತಿ ಉಳಿದಲ್ಲಿ ಅದನ್ನು ಇನ್ನಷ್ಟು ನಿಭಾಯಿಸಿ ಪ್ರೀತಿಯ ಸಮುದ್ರದಲ್ಲಿ ಮುಳುಗಲು ಪ್ರಯತ್ನಪಡುವೆ, ಇಲ್ಲದಿದ್ದಲ್ಲಿ ನೀನು ತೆಗೆದುಕೊಂಡ ನಿನಗೆ ಸಮರ್ಥನೀಯವೆನಿಸಿದ್ದಲ್ಲಿ ನಿನಗೆ ಎಲ್ಲ ಹಕ್ಕುಗಳು ಇವೆ, ಮುಂದಿನ ದಾಖಲೆಗಳಿಗೆ ತಯಾರಿಮಾಡಿಕೊಳ್ಳಬಹುದು.

ಇತೀ

ಸುಮಂತ"

ಪತ್ರ ಓದಿ ಮುಗಿಸಿದ ನಂತರ ಅವಳ ತಪ್ಪು ಅವಳಿಗೆ ಅರಿವಾಗಿ ದುಃಖಿಸಿ ಅಳುತ್ತಿದ್ದಳು, ಮಂಚದಿಂದ ಎದ್ದು ಕಿಟಕಿಗೆ ಆತುಕೊಂಡು ನಿಲ್ಲುವ ಹೊತ್ತಿಗೆ ಲಕೋಟೆಯಿಂದ ಮತ್ತೊಂದು ಸಣ್ಣ ಚೀಟಿಯೊಂದು ಗಮನಿಸಿ ಓದಲಾರಂಭಿಸಿದಳು.

"ಬೆಳಗಿನ ಕಾಫಿಗಾಗಿ ಹಾಲನ್ನು ತೆಗೆದುಕೊಂಡು ಹೊರಗಡೆಯೇ ನಿಂತಿರುವೆ, ಬೇಗ ಬಂದು ಬಾಗಿಲನು ತೆಗೆ"

ದುಃಖವು ನೀಗಿ ಹರ್ಷೋಲ್ಲಾಸದಿಂದ ಓಡಿ ಹೋಗಿ ಬಾಗಿಲನು ತೆಗೆದು ಸುಮಂತನನ್ನು ಆಲಂಗಿಸಿ "ನನ್ನನ್ನು ಕ್ಷಮಿಸು ಸುಮಂತ್, ತಿಳಿಯದೆ ದೊಡ್ದ ತಪ್ಪು ಮಾಡುತ್ತಿದ್ದೆ ನನ್ನನ್ನು ಕ್ಷಮಿಸು" ಎಂದು ಕೇಳಿಕೊಂಡಳು.

ಎರಡು ಕವರಿನ ಹಾಲನ್ನು ಹಿಡಿದುಕೊಂಡೆ ಅವಳನ್ನು ಆಲಂಗಿಸಿ ತನ್ನ ಎಂದಿನ ನಗುಮೊಗವನ್ನು ಬೀರಿದ.

--------

ಸಂದೀಪ್ ಶರ್ಮ