ಅಭಿಜ್ಞಾ ಗೌಡರ ಕವನಗಳ ಲೋಕ
ಸ್ವೀಕೃತಿ
ಜಗದ ವೇದಿಕೆಯಲಿ ಜನನ ಹೊಂದಿ
ಮೊಗದಿ ಕಿಲಕಲ ನಗುವ ಬಿತ್ತರಿಸಿ
ಹಗೆತನ ಬಿಡುತಲಿ ಕೂಡುತ ಸ್ನೇಹದಿ
ನಗು ನಗುತ ಎಲ್ಲರ ಒಂದಾಗಿಸಿ..
ಬಂದದೆಲ್ಲವ ಸ್ವೀಕರಿಸಿ ಮುನ್ನುಗ್ಗುತ
ಕಷ್ಟ ಸುಖದೊಳು ಬೆರೆತು ನಡೆದು
ನೋವು ನಲಿವಿನ ಭಾವ ಮೆರೆಯುತ
ಸಂಪ್ರೀತಿ ಕಡಲಲಿ ಮಿಂದು ನಲಿದು..
ಜೀವನದ ಚದುರಂಗದಿ ಪಾಲ್ಗೊಂಡು
ಸೋಲು ಗೆಲುವಿನ ರುಚಿಯ ಸವಿದು
ಅಂಜದೆ ಅಳುಕದೆ ಸಾಗಿ ಜೊತೆಗೊಂಡು
ಬಾಳ ಸ್ವೀಕರಿಸಿ ನಡೆಯುತ ಬಿರಿದು..
ಬಾಳ ಪಯಣದ ಏರಿಳಿತವ ಮೆಟ್ಟಿ
ಜೀವನದ ಸಾರವ ಅರಿತು ಸಾಗುತ
ಬಂಧ ಅನುಬಂಧಗಳ ಸಾಂಗತ್ಯ ಕಟ್ಟಿ
ಬದುಕ ಸ್ವೀಕರಿಸಿ ನಗುತಲಿ ಸಾಗುತ..
ಕಷ್ಟ ಬರಲಿ ಸುಖ ಬರಲಿ ಅಪ್ಪಿಕೊಂಡು
ಬಿಡದೆ ಆತ್ಮಸ್ಥೈರ್ಯದಿ ಮುನ್ನುಗುತ
ಸಾಗಿದರಷ್ಟೆ ಜೀವನಸಾರ ಇಲ್ಲವೆ ಬರಡು
ಸ್ವಾರಸ್ಯವಿಲ್ಲದ ಪೊಳ್ಳು ಜಂಜಾಟದ ಒಡೆತ..
ಸ್ನೇಹ ಪ್ರೀತಿಯ ಮಿಲನ ಬಾಳು ಬಂಗಾರ
ದ್ವೇಷ ಅಸೂಯೆಗಳ ಕೆಡಕು ಬಾಳು ಬಂಜರು
ಏನೆ ಬಂದರು ಸ್ವೀಕರಿಸಿ ನಡೆದರೆ ಅಂಬರ
ಹೆದರಿ ಹಿಂಜರಿದರೆ ಬಾಳೊಂದು ದುಸ್ಸರ..
ಬಾಳ ಸಾಂಗತ್ಯದಿ ಮನಸುಗಳ ಮಿಲನ
ಸ್ಪಷ್ಟ ಅರ್ಥೈಸುವಿಕೆಯ ದಾರಿಗದು ಸುಗಮ
ಏರುಪೇರಿನ ಪಯಣ ಬಾಳ ದುರಂತ ಯಾನ
ಒಬ್ಬರಿಗೊಬ್ಬರು ಅರಿತು ನಡೆದರೆ ಸಂಗಮ..
ಅಪ್ಪ ಅಮ್ಮನ ಪ್ರೀತಿಗೆ ಸಾಟಿಯಿಲ್ಲದ ಕೂಟ
ಮಡದಿಯ ಬಾಂಧವ್ಯದ ಆಪ್ತತೆಯ ಕನ್ನಡಿ
ಎರಡನು ಸಮಭಾವದೊಳು ಸ್ವೀಕರಿಸುವ ಆಟ
ಅದುವೆ ಬಾಳ ಚತುರತೆಗೆ ಬರೆದ ಮುನ್ನುಡಿ..
********
ನೊಂದ ಜೀವ
ಕತ್ತಲೆಯ ದುನಿಯದಲಿ ಬೆತ್ತಲೆ ಕೈಚಳಕ
ಕಣ್ಕಟ್ಟಿ ಕೈಕಟ್ಟಿ ಕುಳಿತ ಆಳುವ ಕೈಗಳು
ಮೂಕಪ್ರೇಕರಂತೆ ನೊಂದ ಜೀವದ ಪಾಡು?
ಉಳಿದ ಹೆಣ್ಮಕ್ಕಳ ವರ್ತಮಾನದ ಗತಿಯೇನು
ಸ್ವತಂತ್ರವಿಂದು ಸ್ವೇಚ್ಛಾಚಾರವಾಗುತಿದೆ...
ಕಾಮಾಂದರ ಅಗ್ನಿ ಕುಂಡದಲಿ
ಧಗಧಗಿಸಿ ನೊಂದ ಹೆಣ್ಮನದ ನರಳಾಟ
ಇನ್ನೆಷ್ಟು ಬಲಿಯಾಗ ಬೇಕೊ ನಾ ಕಾಣೆ.?
ಸ್ವತಂತ್ರ ಬಂದರು ಹೆಣ್ಮಕ್ಕಳಿಗಿಲ್ಲ ಭದ್ರತೆ
ನೆಮ್ಮದಿಯ ಓಡಾಟವೆಲ್ಲಿ ಈ ನಾಡಲಿ.?
ಕಾಮತೃಷೆಗಾಗಿ ಪೈಶಾಚಿಕ ಕೃತ್ಯವೆಸಗಿ
ಬೀಗುವ ದುಷ್ಠ ದುರುಳರಿಗಿಲ್ಲವೆ ಶಿಕ್ಷೆ.?
ಇನ್ನೆಷ್ಟು ಜೀವಗಳು ನರಳಿ ಸಾಯ ಬೇಕೋ?
ಪಾಪ! ಅರಳುತಿಹ ಮುಗ್ದ ಮೊಗ್ಗನು
ಹಿಚುಕಿ ಚಂಡಾಡಿದರಲ್ಲ ಪಾಪಿ ಮನುಜರೆ.!
ಎಲ್ಹೋಯ್ತು ವೇದಮಂತ್ರಗಳ ಸಾರವದು
ಹೆಣ್ಮಕ್ಕಳ ಗೌರವಿಸುವ ನಾಡಿನಲಿ ಸದಾ
ದೇವತೆಗಳು ಪೂಜಿಸಲ್ಪಡುತವೆ ಎಂಬೀಸಾರ.!
ದೇವತೆಗಳನ್ನೆ ಕಡೆಗಣಿಸಿ ನಡೆವ ನಾಡಲಿ
ಹೆಣ್ಮಕ್ಕಳ ಮಾನರಕ್ಷಣೆಗಿಲ್ಲಿದೆ ಕಾನೂನು.?
ನಿರ್ಭೀತ ನೀರ್ಮುಕ್ತದಡಿಯಲ್ಲೆ ದುಷ್ಕೃತ್ಯ
ನೀಲಾಜಾಲದಿ ನಿರ್ಭಯವಿಲ್ಲದೆ ನಡೆದಿವೆ
ಅತ್ಯಾಚಾರ ಅನಾಚಾರದ ದೌರ್ಜನ್ಯ ಶೋಷಣೆ
ಮನುಕುಲಕೆ ಅವಮಾನವಲ್ಲವೇ.? ಮನುಜ
ನಿಮ್ಮ ತಾಯಿ ಹೆಣ್ಣಲ್ಲವೆ ಕಾಮಾಂದರೆ?
ಹಣದ ಮದ ಅಧಿಕಾರದ ಅಟ್ಟಹಾಸ
ಮುಗ್ದ ಹೆಣ್ಮನಗಳ ಮೇಲೆ ಕಾಮದಾಹವು
ರಾಡಿಗಿಂತ ಕೀಳು ದುಷ್ಕರ್ಮಿಗಳ ಬಾಳು
ರುಂಡ ಚಂಡಾಡಬೇಕು ಮರ್ಮಾಂಗ ಸೀಳಬೇಕು
ಆಗಲಾದರು ನಿಲ್ಲುವುದೆ ಇಂತ ಅತ್ಯಾಚಾರ.?
-ಅಭಿಜ್ಞಾ ಪಿ ಎಮ್ ಗೌಡ
