ಅಭಿಮನ್ಯು ದಿ ಗ್ರೇಟ್

ಅಭಿಮನ್ಯು ದಿ ಗ್ರೇಟ್

ಪುಸ್ತಕದ ಲೇಖಕ/ಕವಿಯ ಹೆಸರು
ಐತಿಚಂಡ ರಮೇಶ್ ಉತ್ತಪ್ಪ
ಪ್ರಕಾಶಕರು
ಅಕ್ಷರ ಮಂಟಪ, ಹಂಪಿನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೦೦.೦೦, ಮುದ್ರಣ: ೨೦೨೧

ಅಭಿಮನ್ಯು ದಿ ಗ್ರೇಟ್ ’ ಐತಿಚಂಡ ರಮೇಶ ಉತ್ತಪ್ಪ ಅವರ ಲೇಖನಗಳ ಸಂಕಲನ. ಈ ಕೃತಿಯಲ್ಲಿ ಒಂದು ಸಾಕಾನೆ ಜನರ ಮೇಲೆ ಇಷ್ಟೊಂದು ಪ್ರಭಾವ ಬೀರಲು ಸಾಧ್ಯವೇ ಅನ್ನುವಂತಹ ವಿಚಾರ ಪ್ರಸ್ತಾಪನೆ ಆಗುತ್ತದೆ. ಮಕ್ಕಳಿಂದ ಹಿರಿಯರ ತನಕ ಅಭಿಮನ್ಯುವಿನ ಮೇಲೆ ಇದ್ದಂತಹ ಪ್ರೀತಿಯನ್ನು ಇಲ್ಲಿ ಲೇಖಕರು ಪ್ರಸ್ತಾಪಿಸುತ್ತಾರೆ. ಹುಲಿ ಸೆರೆ ಕಾರ್ಯಚರಣೆಯಲ್ಲಿಯೂ ಈತನ ಧೈರ್ಯಕ್ಕೆ ಸರಿಸಾಟಿ ಇಲ್ಲ. ಕಾರ್ಯಾಚರಣೆಯ ವೇಳೆ ಇತರ ಆನೆಗಳು ಹುಲಿ ವಾಸನೆ ಬರುತ್ತಿದ್ದಂತೆ ಮುಂದೆ ಹೋಗಲು ಅಂಜುತ್ತವೆ. ಆದರೆ, ಅಭಿಮನ್ಯು, ಹುಲಿ ವಾಸನೆಯನ್ನು ಹುಡುಕಿಕೊಂಡು ಹೋಗುತ್ತದೆ. ಅಭಿಮನ್ಯು ತನ್ನ ಜೊತೆ ಇದ್ದ ಮಾವುತನನ್ನು ರಕ್ಷಿಸುವ ಘಟನೆಯು ಇಲ್ಲಿ ಬಿಂಬಿತವಾಗಿದೆ. ಆನೆಯ ವರ್ತನೆಗಳನ್ನು ಅಧ್ಯಯನ ಮಾಡಲು ಪೂರಕ ಸಾಮಗ್ರಿ ಈ ಕೃತಿಯಲ್ಲಿದೆ.

ವೈಲ್ಡ್ ಲೈಫ್ ಕನ್ಸರ್ವೇಷನ್ ಫೌಂಡೇಶನ್ ಇದರ ರಾಜ್ ಕುಮಾರ್ ದೇವರಾಜೆ ಅರಸ್ ಅವರು ತಮ್ಮ ಮುನ್ನುಡಿಯಲ್ಲಿ ಅಭಿಮನ್ಯು ಎಂಬ ಆನೆಯ ಕುರಿತು ಓದಿ ಅಚ್ಚರಿಯಾಯಿತು ಎಂದು ಬರೆಯುತ್ತಾರೆ. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಸಾಲುಗಳು ಹೀಗಿವೆ… “ಪ್ರತಿ ಆನೆಯೂ ಮನುಷ್ಯರಂತೆ ತಮ್ಮದೇ ಆದ ವಿಭಿನ್ನ, ವಿಶೇಷ ಗುಣ, ನಡತೆಯನ್ನು ಹೊಂದಿರುತ್ತವೆ. ಕೆಲವು ಆನೆಗಳಿಗೆ ತುಂಟತನವಿರುತ್ತದೆ. ಕೆಲವು ಗಾಂಭೀರ್ಯದಿಂದ ಇರುತ್ತವೆ. ಅಭಿಮನ್ಯು ಇದಕ್ಕೆ ಹೊರತಾಗಿಲ್ಲ. ತಮ್ಮ ಧೈರ್ಯ, ಶಕ್ತಿ, ಸಾಮರ್ಥ್ಯ, ಮುನ್ನುಗ್ಗುವ ಛಲಕ್ಕೆ ಹೆಸರುವಾಸಿ. ಹಾಗಾಗಿ ಅಭಿಮನ್ಯುವಿನ ಈ ಗುಣ ನಡತೆಯ ಸೂಕ್ಷ್ಮತೆಯನ್ನು ಅರಿತು ಸಕಾಲದಲ್ಲಿ ಆತನಿಗೆ ಸರಿಯಾದ ಆದೇಶ ನೀಡಿ ಮುನ್ನುಗ್ಗಿಸುವುದರಲ್ಲಿ ಮಾವುತ ವಸಂತನೂ ಕೂಡ ವಿಶೇಷತೆಯನ್ನು ಹೊಂದಿದ್ದಾನೆ. ಆನೆಗಳನ್ನು ಪಳಗಿಸುವ, ಆದೇಶಿಸುವ ಗುಣ ಮಾವುತನಿಗೆ ರಕ್ತಗತವಾಗಿ ಬರಬೇಕಾಗಿರುತ್ತದೆ. ಹಾಗಾಗಿ ಚಿಕ್ಕಂದಿನಿಂದಲೇ ಆನೆಯೊಡನೆ ಒಡನಾಡುತ್ತಾ, ಆನೆಯ ಜೊತೆ ಬಾಂಧವ್ಯ ಬೆಳೆಸಿಕೊಂಡಾಗ ಮಾತ್ರ ಅದು ಸಾಧ್ಯ. ವಸಂತ ಕೂಡ ತನ್ನ ತಂದೆ ಸಣ್ಣಪ್ಪ ಜೊತೆಯಲ್ಲಿದ್ದುಕೊಂಡು ಅಭಿಮನ್ಯುವನ್ನು ಅರಿತುಕೊಂಡದ್ದರ ಫಲವಾರಿ ಇಂದು ಅವರಿಬ್ಬರ ಉತ್ತಮ ಬಾಂಧವ್ಯವನ್ನು ನಾವುಗಳು ಹುಲಿ, ಆನೆ ಸೆರೆ ಕಾರ್ಯಾಚರಣೆಯಲ್ಲಿ ಕಾಣಬಹುದು.

ಐತಿಚಂಡ ರಮೇಶ್ ಉತ್ತಪ್ಪ ಅವರು ತಮ್ಮ ಕೃತಿಯಲ್ಲಿ ವಿವಿಧ ಹುಲಿ, ಆನೆ ಸೆರೆ ಕಾರ್ಯಾಚರಣೆಯಲ್ಲಿ ಅಭಿಮನ್ಯುವಿನ ಪಾತ್ರ ಕುರಿತಂತೆ ಬಹಳ ಸೊಗಸಾಗಿ ಚಿತ್ರಿಸಿದ್ದಾರೆ. ಈ ಕೃತಿ ಒಟ್ಟಾರೆ ಆನೆಗಳ ಅದರಲ್ಲೂ ವಿಶೇಷವಾಗಿ ಅಭಿಮನ್ಯುವಿನ ಧೈರ್ಯ, ಸಾಹಸ, ಛಲ, ಸಮಯ ಸೂಕ್ಸ್ಮತೆ, ಮಾವುತ ವಸಂತನ ಬದ್ಧತೆ, ಅಭಿಮನ್ಯುವನ್ನು ನಿಯಂತ್ರಿಸುವ ಚಾಣಾಕ್ಷತೆ ಎಲ್ಲವನ್ನೂ ಕಟ್ಟಿಕೊಡುತ್ತದೆ. ಈ ಕೃತಿ ಅಭಿಮನ್ಯು ಆನೆಯ ಕುರಿತು ಎಲ್ಲರಲ್ಲೂ ಇರುವ ಕುತೂಹಲವನ್ನು ತಣಿಸುತ್ತಲೇ ಆನೆಗಳ ವಿಶೇಷತೆಗಳನ್ನೂ ತೆರೆದಿಡುತ್ತದೆ. ಎಲ್ಲರೂ ಓದಬೇಕಾದ ಕೃತಿ ಇದಾಗಿದೆ. ಐತಿಚಂಡ ರಮೇಶ್ ಉತ್ತಪ್ಪ ಅವರ ಶ್ರಮ ಸಾರ್ಥಕ ಆಗಿದೆ ಎಂದುಕೊಂಡಿದ್ದೇನೆ.” 

ರಮೇಶ್ ಉತ್ತಪ್ಪನವರು ಈ ಕೃತಿಯನ್ನು ಬರೆಯಲು ಹೊರಟಾಗ ಎಲ್ಲರೂ ಆನೆಯ ಕುರಿತಾದ ಪುಸ್ತಕನಾ? ಇದು ಸಾಧ್ಯಾನಾ…? ಎಂದು ಹೇಳಿದರಂತೆ. ಆದರೆ ಹೇಳಿದವರೆಲ್ಲಾ ಅಚ್ಚರಿಯಲ್ಲಿ ಮುಳುಗುವಂತೆ ಅವರು ಕೃತಿಯನ್ನು ಬರೆದಿದ್ದಾರೆ. ಪುಟ ಪುಟಗಳಲ್ಲಿ ಅಭಿಮನ್ಯುವಿನ ಚಿತ್ರಗಳಿವೆ. ೮೦ ಪುಟಗಳ ಈ ಪುಟ್ಟ ಪುಸ್ತಕ ಒಂದೇ ಗುಟುಕಿಗೆ ಓದಿ ಮುಗಿಸಬಹುದಾದ ಸರಕು. ಈ ಕೃತಿಯನ್ನು ರಮೇಶ್ ಉತ್ತಪ್ಪ ಅವರು ‘ಅಭಿಮನ್ಯುವನ್ನು ಪಳಗಿಸಿ ಜಾಣನನ್ನಾಗಿ ಪರಿವರ್ತಿಸಿದ ಸಣ್ಣಪ್ಪ ಅವರಿಗೆ’ ಅರ್ಪಣೆ ಮಾಡಿದ್ದಾರೆ.

“ಇದಂತೂ ಅಚ್ಚರಿ. ಒಂದು ಸಾಕಾನೆ ಜನರ ಮೇಲೆ ಇಷ್ಟೊಂದು ಪರಿಣಾಮ ಬೀರಲು ಸಾಧ್ಯವೇ? ನಾವು ಅಂಬಾರಿ ಹೊರುವ ಅನೇಕ ಆನೆಗಳನ್ನು ನೋಡಿದ್ದೇವೆ. ಅವುಗಳನ್ನು ಕೂಡ ಜನರು ಪ್ರೀತಿಸಿದ್ದಾರೆ. ಅಕ್ಕರೆ ತೋರಿದ್ದಾರೆ. ಆದರೆ, ಅಭಿಮನ್ಯುವಷ್ಟು ಮನೆ ಮಾತಾಗಿರಲಿಲ್ಲ. ಮಕ್ಕಳಿಂದ ಹಿರಿಯರ ತನಕ ಅಪ್ಯಾಯಮಾನವಾಗಿರಲಿಲ್ಲ. ಎಷ್ಟೆಂದರೆ, ಭಾರತದಿಂದ ವಿದೇಶಕ್ಕೆ ತೆರಳಿದವರನ್ನು ಪ್ರಾಣಿಪ್ರಿಯರು ‘ಅಭಿಮನ್ಯು ಗೊತ್ತೇ?’ ಎಂದು ಕೇಳುತ್ತಾರೆ. ಗೊತ್ತು ಎಂದರೆ ‘ಆತನನ್ನು ನೋಡಿದ್ದೀರಾ?’ ಎಂದು ಅಚ್ಚರಿಯಿಂದ ಕೇಳುತ್ತಾರೆ. ಮಹಾನ್ ವ್ಯಕ್ತಿಯೊಬ್ಬನ ಊರಿನಿಂದ ಬಂದಂತೆ ಇಷ್ಟಪಡುತ್ತಾರೆ. ಇದು ಅಭಿಮನ್ಯುವಿನ ಖ್ಯಾತಿ.” ಇದು ಪುಸ್ತಕದ ಬೆನ್ನುಡಿಯಲ್ಲಿ ಕಂಡು ಬಂದ ಸಾಲುಗಳು.