ಅಮೆರಿಕದಲ್ಲಿನ ಸಾರ್ವಜನಿಕ ಸೇವಾಸಂಸ್ಥೆಗಳು-೨

ಅಮೆರಿಕದಲ್ಲಿನ ಸಾರ್ವಜನಿಕ ಸೇವಾಸಂಸ್ಥೆಗಳು-೨

ಬರಹ

ದಿನದಲ್ಲಿ ಹಿರಿಯರ ಯೋಗಕ್ಷೇಮ ವಿಚಾರಣೆ ! (Adult Day Connection) (Day care Home for the Old) ಹೇಗೆ ಪುಟ್ಟ ಮಕ್ಕಳಿಗೆ ಬೇಬಿಸಿಟಿಂಗ್ ಅನುಕೂಲಗಳು ದೊರೆಯುತ್ತಿವೆಯೋ, ಅದೇರೀತಿ ಹಿರಿಯನಾಗರಿಕರಿಗೂ ಒಂದು ಹಂತದಲ್ಲಿ ಹಲವಾರು ಸೌಲಭ್ಯಗಳ ಆವಶ್ಯಕತೆಗಳಿವೆ.

ಮನೆಯಲ್ಲಿ ಮಕ್ಕಳು ಸೊಸೆಯರು ದುಡಿಯಲು ಹೊರಗೆಹೋದಾಗ, ಅವರ ತಾಯಿ-ತಂದೆಯರು ಮನೆಯಲ್ಲಿ ಒಬ್ಬಂಟಿಗರಾಗುತ್ತಾರೆ. ಅವರಿಗೆ ಒಂದು ಲೋಟನೀರುಬೇಕಾದರೂ ಕೊಡಲು ಯಾರೂ ಇರುವುದಿಲ್ಲ. ಒಂಟಿತನ ಅವರನ್ನು ಕಾಡಿತಿನ್ನುತ್ತದೆ. ಭಾರತದಲ್ಲಿ ಮನೆಕೆಲಸದವರು ಸಿಗುತ್ತಾರೆ. ಆದರೆ ಅಮೆರಿಕದಲ್ಲಿ ಅಂತಹ ವ್ಯವಸ್ಥೆಗೆ ತಗಲುವ ವೆಚ್ಚ ಅಪಾರ ! ಪ್ರತಿಮನೆಯಲ್ಲೂ ವಯಸ್ಸಾದವರು ಇದ್ದೇಇರುತ್ತಾರೆ. ಇದು ಎಲ್ಲರೂ ತಮ್ಮ ಜೀವಿತದಲ್ಲಿ ಒಂದಲ್ಲಾ ಒಂದುಬಾರಿ ಅನುಭವಿಸಲೇ ಬೇಕಾದ ಒಂದು ವಿಧಿನಿಯಮ, ಹಾಗೂ ಸನ್ನಿವೇಷಗಳಲ್ಲೊಂದು. ಮುಂದುವರೆದು ಬೆಳೆಯುತ್ತಿರುವತ್ತಿರುವ ರಾಷ್ಟ್ರಗಳು ಈಗಾಗಲೇ ಇಂತಹ ಪರಿಸ್ಥಿತಿಯನ್ನು ತೀವ್ರವಾಗಿ ಅನುಭವಿಸುತ್ತಿವೆ.

ಈ ಸಾಮಾಜಿಕ ಸಮಸ್ಯೆಗಳಿಗೆ ಅಮೆರಿಕದೇಶ, ಕೆಲವು ಉಪಾಯ, ಹಾಗೂ ಸಮಾಧಾನಗಳನ್ನು ಹುಡುಕಿದೆ. ಮನೆಗೆ ಸಮೀಪದಲ್ಲಿರುವ ಅಂತಹ ಒಂದು ವಯಸ್ಸಾದವರ ಕಲ್ಯಾಣಕೇಂದ್ರಕ್ಕೆ ನಮ್ಮ ’ಆಂಟಿ’ ಹೋಗುತ್ತಿದ್ದರು. ಅವರಿಗೆ ಆ ಕೇಂದ್ರಕ್ಕೆ ಹೋಗಲು ಆತುರ, ಹಾಗೂ ಸಂಭ್ರಮ. ಬೆಳಿಗ್ಯೆ ೮-೩೦ ಕ್ಕೇ ಸ್ನಾನಮಾಡಿ, ಪೂಜೆಮುಗಿಸಿ, ಡ್ರೆಸ್ ಹಾಕಿಕೊಂಡು ರೆಡಿ ಇರುತ್ತಿದ್ದರು. ಯಾವುದೋ ಕಾರ್ಯಕ್ರಮಕ್ಕೆ ಹೋಗುವ ಸಡಗರದಂತಿತ್ತು- ಅವರ ಸಿದ್ಧತೆ, ಹಾಗೂ ತಯಾರಿ ! ಉದಾಹರಣೆಗೆ, ಮಿಸ್ಸೂರಿರಾಜ್ಯದ ಕೊಲಂಬಿಯ ಪಟ್ಟಣದ ನಾಗರಿಕರು ಇದನ್ನು ಹೇಗೆ ಎದುರಿಸಿ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ ಎನ್ನುವುದನ್ನು ಕಂಡರೆ ನಮಗೆ ಸ್ವಲ್ಪ ಮಾಹಿತಿಸಿಗಬಹುದು

ಈ ಸಾರ್ವಜನಿಕ ಸಂಸ್ಥೆ, ಅಮೆರಿಕದ ಮಿಸ್ಸೂರಿ ವಿಶ್ವವಿದ್ಯಾಲಯದ ಅಂಗವಾಗಿಕಾರ್ಯರಥವಾಗಿದೆ. ಇಲ್ಲಿ ವಯಸ್ಸಾದ ನಾಗರಿಕರಿಗೆ ಸಿಗುವ ಸೌಲಭ್ಯಗಳು ಹಾಗೂ ವ್ಯವಸ್ಥೆಗಳು : ಈ ಕೇಂದ್ರ ಬೆಳಿಗ್ಯೆ ೯ ಕ್ಕೆ ಆರಂಭಿಸಿ ಸಾಯಂಕಾಲ ೫ ಗಂಟೆಯವರೆ ಕೆಲಸಮಾಡುತ್ತಿರುತ್ತದೆ. ಒಬ್ಬ ಮಹಿಳೆ/ಪುರುಷನಿಗೆ ದಿನಕ್ಕೆ ತಗಲುವ ಸೇವಾಶುಲ್ಕ ೮೦ ಡಾಲರ್ ಗಳು. ೫-೩೦ ರ ನಂತರ ಕೇಂದ್ರವನ್ನು ಮುಚ್ಚಿಬಿಡುತ್ತಾರೆ. ಅಷ್ಟರಲ್ಲೇ ಅವರವರ ಮನೆಯವರುಗಳು ಸಕಾಲಕ್ಕೆ ಬಂದು ಸಂಬಂಧಪಟ್ಟ ವ್ಯಕ್ತಿಗಳನ್ನು ಭೇಟಿಮಾಡಿ, ತಮ್ಮ-ತಮ್ಮ ತಂದೆ-ತಾಯಿ, ಆಂಟ್-ಅಂಕಲ್ ಗಳನ್ನು ಕರೆದುಕೊಂಡುಹೋಗಬೇಕು.

ಪೂರ್ತಿದಿನ ಇಟ್ಟುಕೊಳ್ಳುವ ವ್ಯವಸ್ಥೆ, ವೃದ್ಧಾಶ್ರಮಗಳಲ್ಲಿಮಾತ್ರಾ ಇರುತ್ತದೆ. ಇಲ್ಲಿಲ್ಲ. ಅದೇ ಬೇರೆ ವಿಭಾಗ. ಅದರ ರಚನೆ, ಕಾರ್ಯವಿಧಾನಗಳು ಪ್ರತ್ಯೇಕ. ನಮ್ಮ ಆಂಟಿಯವರಿಗೆ ’ಮೆಡಿಕಲ್ ಇನ್ಷೂರೆನ್ಸ್’ ಇರುವುದರಿಂದ ಈ ವೆಚ್ಚವನ್ನು ಇನ್ಷೂರೆನ್ಸ್ ಕಂಪೆನಿಯವರು ವಹಿಸಿಕೊಳ್ಳುತ್ತಾರೆ. ಒಟ್ಟಿನಲ್ಲಿ ಮೆಡಿಕಲ್ ಸೌಲಭ್ಯ ಅಮೆರಿಕದಲ್ಲಿ ಅತಿದುಬಾರಿ. ಎಷ್ಟೋ ಜನ ಅದಕ್ಕಾಗಿ ಕೆನಡಾದೇಶಕ್ಕೆ [ಕೆಲವರು ಡ್ಯೂಎಲ್ ಪೌರತ್ವವನ್ನು ಹೊಂದಿದ್ದಾರೆ] ಹೋಗಿ ಪಡೆಯುತ್ತಾರೆ ಎನ್ನುವಮಾತು ಕೇಳಿದೆ. ಅದರ ವಿವರಗಳು ಗೊತ್ತಿಲ್ಲ.

೧. ಯೋಗಕ್ಷೇಮ ಕೇಂದ್ರದ ಸಿಬ್ಬಂದಿಯವರು, ಪ್ರತಿದಿನವೂ ಸರಿಯಾದ ಸಮಯದಲ್ಲಿ ಆಗಮಿಸಿ, ಪ್ರತಿಯೊಬ್ಬ ಹಿರಿಯನಾಗರಿಕನನ್ನೂ/ಳನ್ನೂ ಸರಿಯಾಗಿ ನೋಡಿಕೊಂಡು ಅವನಿಗೆ ಅಥವಾ ಅವಳಿಗೆ ಅಗತ್ಯವಾದ ಸೌಲಭ್ಯಗಳನ್ನು ನಗುಮುಖದಿಂದ ಸ್ವಲ್ಪವೂ ಬೇಸರವಿಲ್ಲದೆ, ದೇವರಕಾರ್ಯವೆಂದು ಭಾವಿಸಿ ಮಾಡುತ್ತಿರುವುದನ್ನು ನಾವು ಅಲ್ಲಿ ಕಂಡೆವು. ದೇಶಭಾಷೆಗಳ ಅಂತರವಿಲ್ಲದೆ ಎಲ್ಲರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಾರೆ. ಅವರ ಅಗತ್ಯಗಳನ್ನು ಹೊಂದಿಸಿಕೊಡುವುದು, ಸಂಸ್ಥೆಯ ಆದ್ಯತೆಗಳಲ್ಲೊಂದು. ಇಲ್ಲಿ ಎಲ್ಲದೇಶದ ನಾಗರಿಕರೂ ಇದ್ದಾರೆ.

೨. ಅಲ್ಲಿಬರುವ ಪ್ರತಿ ೪ ಸೀನಿಯರ್ ಸಿಟಿಝನ್ ಗಳಿಗೆ ಒಬ್ಬ ಸಹಾಯಕರಿರುತ್ತಾರೆ. ಅತಿ ಹೆಚ್ಚು ಜನರನ್ನು ತೆಗೆದುಕೊಳ್ಳುವುದಿಲ್ಲ. ಏಕೆಂದರೆ ಎಲ್ಲರ ಯೋಗಕ್ಷೇಮ ನೋಡಿಕೊಳ್ಳಲು ಅಲ್ಲಿನ ಸಿಬ್ಬಂದಿವರ್ಗಕ್ಕೆ ಸಾಧ್ಯವಾಗುವಂತಿರಬೇಕು.

೩. ಅಲ್ಲಿನ ನರ್ಸ್ ಗಳು ತಮ್ಮ ಸೇವೆಯನ್ನು ಸಮರ್ಪಕವಾಗಿ ಸಲ್ಲಿಸುತ್ತಾರೆ.

೪. ಎಲ್ಲರಿಗೂ ಅಗತ್ಯವಾದ ವ್ಯಾಯಾಮವನ್ನು ನಿಗದಿಗೊಳಿಸಿ , ಅದನ್ನು ಅಭ್ಯಾಸಮಾಡಿಸುತ್ತಾರೆ.

೫. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸುವಲ್ಲಿ ಸಹಾಯ ಸಿಗುತ್ತದೆ.

೬. ಮಾತಾಡಲು ಕಷ್ಟವಾದರೆ, ಕಿವಿ ಕೇಳಿಸದಿದ್ದರೆ ತೊಂದರೆಯಾದರೆ, ದೇಹದ ಯಾವುದೇಭಾಗದಲ್ಲಿ ನೋವಾದರೆ ಅದಕ್ಕೆ ಮದ್ದುಕೊಡುವ, ಹಾಗೂ, ಮೈಕೈ, ಕಾಲು, ಸೊಂಟ, ಬೆನ್ನಿಗೆ ಪ್ರಥಮ ಚಿಕಿತ್ಸೆಕೊಡುವ ಏರ್ಪಾಡಿದೆ. ಕಾಯಿಲೆ ಉಲ್ಬಣಿಸಿದರೆ ಹತ್ತಿರದಲ್ಲೇ ಇರುವ ಆಸ್ಪತ್ರೆಯಲ್ಲಿ ದಾಖಲುಮಾಡುತ್ತಾರೆ.

7. ದೇಹದ ಯಾವುದೇಭಾಗದ ಕಾರ್ಯಾಚರಣೆಯಲ್ಲಿ ತೊಡಕಾದರೂ ಅದನ್ನು ಸುಸ್ಥಿರಗೊಳಿಸಲು ಮೆಡಿಕಲ್ ಸಹಾಯವಿದೆ. ಇದಕ್ಕೆ ವಿಶ್ವವಿದ್ಯಾಲಯದ ಸಿಬ್ಬಂದಿವರ್ಗದ ಸಹಾಯ-ಹಸ್ತದ ನೆರವಿದೆ.

8. ಇಲ್ಲಿಗೆ ಸೇರಿಸಲ್ಪಟ್ಟ ಇಳಿವಯಸ್ಸಿನ ಗೆಳೆಯ-ಗೆಳತಿಯರಿಗೆ, ಸ್ನೇಹಮಯವಾತಾವರಣ ಲಭ್ಯ.

9. ಸುಲಭವಾದ, ಚಿಕ್ಕ-ಪುಟ್ಟ ಆಟಗಳು ಅವರಿಗಾಗಿ ತಯಾರಿಸಲ್ಪಟ್ಟಿವೆ.

10. ಹಾಡು, ಹಸೆಗಳಲ್ಲಿ ಆಸಕ್ತರಿಗೆ, ಅಡುಗೆಯಲ್ಲಿ ಪರಿಶ್ರಮವಿರುವವರಿಗೆ, ಕಸೂತಿಮುಂತಾದ ಕುಶಲ-ಕಲಾಸಕ್ತರಿಗೆ, ತೋಟಗಾರಿಕೆಯಲ್ಲಿ ಇಚ್ಛೆಉಳ್ಳವರಿಗೆ, ಮಾತಾಡುವಕಲೆ, ಸಾಕುಪ್ರಾಣಿಗಳಲ್ಲಿ ಆಸಕ್ತಿ, ಬೇರೆಬೇರೆಭಾಷೆಗಳನ್ನು ಕಲಿತು ಅಭ್ಯಾಸಮಾಡಲು ಆಸಕ್ತರಿಗೆ, ಸದವಕಾಶಗಳನ್ನು ಒದಗಿಸಲಾಗುವುದು.

11. ಈ ಸಂಸ್ಥೆಗೆ ಮಿಸ್ಸೂರಿ ವಿಶ್ವವಿದ್ಯಾಲಯದ ಆರೋಗ್ಯ ಇಲಾಖೆಯತಜ್ಞರು ಬಂದು ಎಲ್ಲರನ್ನೂ ವಿಚಾರಿಸಿಕೊಳ್ಳುವರು.

12. ಕೊಲಂಬಿಯಪಟ್ಟಣದ, ಬೂನ್ ಕೌಂಟಿಯ ಸ್ಥಳಗಳ ವಯಸ್ಸಾದವರಿಗೆ ಸಹಾಯ, ಮಂತಾದವುಗಳು, ದೊರೆಯುತ್ತವೆ.

೧೩. ಈ ಸಂಸ್ಥೆ ಕಾನೂನು ಪ್ರಕಾರ, ರಾಜ್ಯಸರಕಾರದಿಂದ ನೊಂದಣಿ ಪಡೆದಿದ್ದು, ’ adult day health care program ”, ಅಡಿಯಲ್ಲಿ ಸಹಾಯಹಸ್ತವನ್ನು ಒದಗಿಸುವುದು. ಮನೆಯಿಂದ ಹೊರಗೆ, ಮನೆಯಷ್ಟೇ ಸುವ್ಯವಸ್ಥಿತ ಸೇವೆಗಳ ಜೊತೆಗೆ, ಬೇಕಾದ ಎಲ್ಲಾಪ್ರೋತ್ಸಾಹ, ಸಹಾಯಗಳೂ ಲಭ್ಯ.

ಎಲ್ಲಕ್ಕಿಂತ ಮಿಗಿಲಾಗಿ ಸೇವೆಯನ್ನು ಮಾಡಲು ಮುಂದುಬರುವರಲ್ಲಿ ಮಧ್ಯವಯಸ್ಸಿನ ಯುವತಿಯರು, ಯುವತಿಯರು ಹಾಗೂ ತಮ್ಮ ಸ್ವಾಸ್ಥ್ಯವನ್ನು ಚೆನ್ನಾಗಿಟ್ಟುಕೊಂಡು, ತಮಗಿಂತ ಹೆಚ್ಚಿನ ವಯಸ್ಸಿನ ಜನರ ಸೇವೆಯಲ್ಲಿ ಧನ್ಯತೆಯನ್ನು ಕಾಣುವ ಆ ’ಪುಣ್ಯಮಯಿ ’ ಗಳನ್ನು ಮನಸ್ಸಿನಲ್ಲೇ ವಂದಿಸಿದೆವು.

ನಮ್ಮದೇಶದಲ್ಲೂ ’ಮದರ್ ತೆರೇಸಾ,” ಇದ್ದರಲ್ಲಾ. ಅವರು ಹಾಕಿಕೊಟ್ಟ ಆದರ್ಶಗಳು, ಅವರು ಮಾಡಿದ ಸೇವೆ, ಈಗಲೂ ಎಲ್ಲವರ್ಗದ ಜನರನ್ನು ಸೇವಾವೃತ್ತಿಗೆ ಆಹ್ವಾನಕೊಡುತ್ತಿವೆ. ಅವರಸೇವಾಮನೋಭಾವದಿಂದ ಉಪಕೃತರಾದ ಮಂದಿ ಎಷ್ಟೋ ! ಈ ಕೇಂದ್ರದ ಹೊಸ ನಿರ್‍ದೇಶಕಿ, ಆಮಿಬೈಗೋ, ಸಹಾಯಕಿ, ಎಸ್. ಎಚ್.ಪಿ. ವಿದ್ಯಾರ್ಥಿನಿ, ಹಾಗೂ ಜ್ಯೂಡಿ ಬೇಕರ್, ಮಿಸ್ಸೂರಿ ರಾಜ್ಯದ ರಾಜಧಾನಿಯ ಪ್ರತಿನಿಧಿ, ಉತ್ಸಾಹದ ಬುಗ್ಗೆಗಳಂತೆ ವರ್ತಿಸಿ, ಅಲ್ಲಿನ ಕೇಂದ್ರದ ಎಲ್ಲಾ ಅಭ್ಯರ್ಥಿಗಳನ್ನು ಮಕ್ಕಳಿಗಿಂತಾ ಚೆನ್ನಾಗಿ ನೋಡಿಕೊಳ್ಳುತ್ತಿರುವುದನ್ನು ಕಂಡಾಗ, ಆಗುವ ರೋಮಾಂಚನದ ಅನುಭವ, ಅನನ್ಯ !

’ತಾಯಿತಂದೆ, ಹಿರಿಯರ ಸೇವೆ ದೇವರಸೇವೆ’, ಎಂದು ಬರೀ ಹೇಳಿದರೆ ಸಾಲದು. ಒಮ್ಮೆ ಮಿಸ್ಸೂರಿಯ, ’ಡೇ ಕೇರ್ ಸೆಂಟರ್” ಗೆ ಬಂದು ನೋಡಿ. ಅದೊಂದು ದೇವಾಲಯ ! ನಾವೆಲ್ಲಾ ಹಿರಿಯರ ಸೇವೆಯನ್ನು ಒಮ್ಮನಸ್ಸಿನಿಂದ ಮಾಡಿ ಧನ್ಯರಾಗೋಣ.

ಅವರ ಕೇಂದ್ರದಿಂದ ಹೊರಡಿಸುತ್ತಿರುವ ಪತ್ರಿಕೆ : MU Adult Day Connection -Excellence in Adult Day Services~ 137, Clark Hall, Columbia, MO 65211 USA