ಅಮ್ಮಂದಿರ ಸುದ್ದಿ
[ಇಂಗ್ಲೆಂಡಿನ ರಾಜಕುಮಾರಿ ಡಯಾನಾ ಸತ್ತ ಸಮಯದಲ್ಲೇ, ಮದರ್ ತೆರೇಸಾ ಸತ್ತ ಸಮಯದಲ್ಲೇ, ಅಲ್ಜೀರಿಯಾದಲ್ಲಿ ನಡೆದ ಹಳ್ಳಿಯ ತಾಯಂದಿರು, ಅವರೊಡನಿದ್ದ ಹಸುಗೂಸುಗಳ ಹತ್ಯಾಕಾಂಡ ಸುದ್ದಿಯಾಗದೇ ತೇಲಿಹೋದಾಗ]
ಅಮ್ಮಂದಿರಾ, ನಿಮ್ಮ ಸುದ್ದಿಯೆಂದರೆ,
ಕ್ಷುಲ್ಲಕ ಸಾವಿಗೀಡಾದ ಚೆಲುವೆ ಬಿಳೀ ರಾಜಕುಮಾರಿ
ಅಮ್ಮನ ಸುದ್ದಿಯಲ್ಲ.
ವಾತ್ಸಲ್ಯಪೂರ್ಣ ದೇವತಾಸ್ವರೂಪಿ ಬಿಳೀ ಸೀರೆಯ ಅಜ್ಜಿ
ಅಮ್ಮನ ಸುದ್ದಿಯಲ್ಲ.
ಮುಂಜಾನೆ ಅರೆ ಹರಿದ ಬೆಳಕಿನಲ್ಲಿ,
ಆಲ್ಜೀರಿಯಾದ ಹಳ್ಳಿಗಾಡಿನ ಮುರುಕು ಮನೆಗಳಲ್ಲಿ,
ಕೊರಳು ಕೊಯ್ಯಲು ಬಂದ ಧೂರ್ತರೆದುರಿನಲ್ಲಿ,
ಹಸುಳೆ ಮಕ್ಕಳ ಎದೆಗವಚಿ, ಬಚ್ಚಿಟ್ಟು ಕಾಪಾಡಿ
"ಅಲ್ಲಾ ನಿಮ್ಮಲ್ಲಿ ದಯೆ ಕರುಣಿಸಲಿ" ಎಂದರಚುತ್ತಾ-
ದಯೆ ಇಟ್ಟು ಬಿಟ್ಟುಬಿಡಿರೆಂದು ಅಂಗಲಾಚುತ್ತಾ-
ಕತ್ತಿ-ಕೊರಳಿನ ಸೆಣಸಾಟದಲ್ಲಿ ಹೋರಾಡುತ್ತಾ-
ಅಸುನೀಗಿದ ಅಮ್ಮಂದಿರಾ-
ನಿಮ್ಮ ದೇಹ ನೆಲದಲ್ಲಿ ಹೊರಳಿ
ನಿಮ್ಮ ದನಿ ಕೊಯ್ದ ಕೊರಳಿನ ರಕ್ತದೊಳಗಿಂದ ಮರಳುಗಾಡಿನ ಮಣ್ಣಲ್ಲಿ ಬೆರೆತು
ಅಮ್ಮಂದಿರಾ-
ಬೆಳಗಿನ ಬಿಸಿಲಿಗೆ ಹರಳುಗಟ್ಟುತ್ತಿರುವಾಗ
ಮೂಲೋಕದೊಳಗೊಂದು ಲೋಕ
ಚೆಲುವೆ ರಾಜಕುಮಾರಿಯೊಬ್ಬಳು
ಎಲ್ಲೋ ಸತ್ತ ಸುದ್ದಿಗೆ ಎಚ್ಚೆತ್ತು ದಿಗ್ಭ್ರಮೆಪಟ್ಟಿತು.
ಆಲ್ಜೀರಿಯಾದ ಅಮ್ಮಂದಿರಾ-
ಚೆಲುವೆಯರಾದರೂ ರಾಜಕುಮಾರಿಯರಲ್ಲ ನೀವು
ವಾತ್ಸಲ್ಯಪೂರ್ಣರಾದರೂ ದೇವತಾಸ್ವರೂಪಿಗಳಲ್ಲ ನೀವು
ತಳವೊಡೆದ ಸುದ್ದಿ ದೋಣಿಗೆ ಬಿಳೀ ಹಾಯಿ ಪತಾಕೆಗಳಾದರೆ,
ಆಲ್ಜೀರಿಯಾದ ಅಮ್ಮಂದಿರಾ-
ನೀವದರ ತಳದ ತೂತಿಗೆ ತೇಪೆಗಳು.
- ಸೆಪ್ಟೆಂಬರ್ ೧೯೯೭