ಅರ್ಧಕ್ಕೇ ನಿಂತ ಪದ್ಯಗಳು

ಅರ್ಧಕ್ಕೇ ನಿಂತ ಪದ್ಯಗಳು

ಬರಹ

ಮುಂಜಾನೆಯಿಬ್ಬನಿಯಲ್ಲಿ ಕನಸರೂಪದಿ ಕಾಡುವ ಕವಿತೆ,

ಅಲರಾಂ ಸದ್ದಿಗೆ ಬೆದರಿ, ಹೊದ್ದ ಹೊದಿಕೆಯೊಳಗೇ ಅಡಗಿ ಬಿಡುತ್ತದೆ.

ತುಳಸಿ, ನೀರು, ರಂಗವಲ್ಲಿಗಳ ನಡುವೆ ಚಿತ್ತದಲಿ ಚಿತ್ತಾರ ಬಿಡಿಸುತ್ತಿದ್ದ ಕವಿತೆ

ಮಗಳ ನಿಲ್ಲದ ಅಳುವಿಗೆ ಹೆದರಿ ಎದೆಯೊಳಗೆಲ್ಲೋ ಮುದುಡಿ ನಿಲ್ಲುತ್ತದೆ.

ಕುಕ್ಕರಿನ ಸದ್ದು, ಒಗ್ಗರಣೆಯ ಘಾಟುಗಳ ನಡುವೆ ಗಡ್ಡಕ್ಕೆ ತಿಕ್ಕಿದ ಸೋಪಬುರುಜಿನಲ್ಲೂ ಕವಿತೆ ಸಾಲು

ಸಮಯದೊಟ್ಟಿಗೆ ಸ್ಪರ್ಧಿಸಲಾಗದೇ ಏದುಸಿರು ಬಿಡುತ್ತಿದೆ.

ಕೀಲಿಮಣೆ, ಮಾನಿಟರುಗಳಲ್ಲೇ ಮುಳುಗಿ, ಪ್ರಿಂಟರಿನ ಕಿರಿ ಕಿರಿ ಕಳೆದ ಫೈಲಿಂಗ್ ನಡುವೆ

ಮೆಲ್ಲನೆ ಕತ್ತು ತೂರಿಸುವ ಹಸಿವು ಕವಿತೆಯ ಜೊತೆಯಾಗುತ್ತದೆ.

ಹಸಿವು, ಕವಿತೆಗಳ ನಡುವೆ ಕವಿಮಿತ್ರ;

ಮಥನ, ಮೈಥುನಗಳೇ ನಿತ್ಯ ಚರ್ಚೆಯ ವಸ್ತು?

ಅರ್ಧಕ್ಕೇ ನಿಂತ ಲಹರಿಯ ಹರಿವಿಗೂ ಗೊತ್ತು,

ಈ ನಡುವೆ ಏಕೋ ಕವಿತೆಗೂ ಸ್ಖಲಿಸಿದಷ್ಟೇ ಸುಸ್ತು!