ಆಕಸ್ಮಿಕ
ಎಂದಿನಂತಿಹ ಪ್ರಖರ ಬೆಳಕು ಹರಡಿದ ಬೆಳಗು
ಎಂದಿನುತ್ಸಾಹದಿ ನಾ ಹೊರಟೆ ಹೊರಗೆ|
ಬೆಚ್ಚಗಿನ ಗೂಡು ಬಿಟ್ಟು, ಜಗದ ಜನರೊಟ್ಟಿಗಿನ
ನಿತ್ಯ ಕಾಯಕ ಕರ್ಮ ಆಚರಿಸುವೆಡೆಗೆ||
ನಿತ್ಯ ಸಾಗುವ ಹಾದಿ ಎಂದಿನಂತಿರಲಿಲ್ಲ
ಅದೇಕೋ ವ್ಯಾಕುಲತೆ ಬಾಧಿಸುತಲಿತ್ತು|
ನಸುಕಿನ ಸೌಮ್ಯತೆಯ ಮಂದಾನಿಲ ಕೂಡ
ಮುದವ ನೀಡದೆ ತಾ ಬಾಡತೊಡಗಿತ್ತು||
ಚಿಂತೆಯ ಕತ್ತಲೆಯು ತಟ್ಟನೇ ಆವರಿಸಿ
ಖಿನ್ನತೆಯು ತಲೆಯೆತ್ತಿ ಸುತ್ತ ಶೋಧಿಸಿತು|
ಅಯ್ಯೋ ಎಂಬುದ್ಗಾರ ಖೇದದಿಂದಲೇ ಮೂಡಿ
ಎದುರಾದ ದೃಶ್ಯವದು ಮನವ ಕಲಕಿತ್ತು||
ಬೆಳೆದು ನಿಂತಿಹ ವೃಕ್ಷ ಉರುಳಿ ಬಿದ್ದಿದೆ ಎದುರು
ಅನೀರೀಕ್ಷಿತ ಘಟನೆಯದು ಮನವ ತಟ್ಟಿತ್ತು|
ನೆರಳ ನೀಡುವ ದಾತ, ತಂಪನೀಯುವ ವೃಕ್ಷ
ನಶಿಸಿಹುದದೇಕೆಂಬ ಪ್ರಶ್ನೆ ಮೂಡಿತ್ತು||
ಆಸರೆಯ ಗುಡಿಲೊಂದು ಕುಸಿದಂಥ ಅನುಭವ
ಮಹತ್ತಿನ ಭಾವವದು ಕಳೆದು ಕಾಡಿತ್ತು|
ಅನಾಥ ಪ್ರಜ್ಞೆಯದು ಮನದಲೆಲ್ಲೋ ಉದಿಸಿ
ಅಂತರಂಗದ ಅರ್ಥ ರಿಕ್ತವಾಗಿತ್ತು||
ಭಾರ ಹೃದಯದಿ ನಾನು ಭಾರಿ ಹೆಜ್ಜೆಯ ಹಾಕಿ
ಹೊಣೆಯ ನೊಗ ಎಳೆಯಲು ಮುಂದೆ ನಡೆದೆ|
ಶೂನ್ಯತೆಯ ಕಪ್ಪುಹೊಗೆ ಸುತ್ತ ಕವಿದಿದ್ದರೂ
ತಿಳಿಯಲಾರದ ಛಲದಿ ಧಾವಿಸುತಲಿರುವೆ||
Comments
ವಸಂತರವರೆ, ತುಂಬಾ ಸುಂದರವಾಗಿದೆ -
ವಸಂತರವರೆ, ತುಂಬಾ ಸುಂದರವಾಗಿದೆ - ವೃಕ್ಷದ ಪಾಡು ಮತ್ತು ನಮ್ಮ ಹೊಣೆಗಳ್ಹೊರಿಸುವ ಅಸಹಾಯಕತೆ!