ಆಗು-ಹೋಗುಗಳು !!!
"ಏ! ಏ! ಏ! ದೂರ ದೂರ ... ಆ ಕಡೆ ಹೋಗಿ ಆಟ ಆಡ್ಕೋ ... ನನ್ ಕೈಲಿ ಬಿಸೀ ಕಾಫಿ ಇದೆ ... ಸುಮಾ, ಇವನನ್ನ ಸ್ವಲ್ಪ ಆ ಕಡೆ ಮಲಗಿಸು ... ಅಂಬೇಗಾಲಿಟ್ಕೊಂಡು ಬಂದುಬಿಟ್ಟ ಸುಂದರ .. ನಡಿ, ತರಳೇ ಸುಬ್ಬ ... "
"ಲೋ! ನಾನು ಇಲ್ಲಿ ಲ್ಯಾಪ್ಟಾಪ್ ಹರಡ್ಕೊಂಡ್ ಕೂತಿದ್ದೀನಿ ... ಆ ಕಡೆ ಹೋಗು ... ಸುಮಾ, ಇವನನ್ನು ಹಾಲ್’ನಲ್ಲಿ ಬಿಡು, ಆಡ್ಕೊಳ್ಳಿ ... ಪುಟ್ ಪುಟ್ ಹೆಜ್ಜೆ ಇಟ್ಕೊಂಡು ನನ್ ಲ್ಯಾಪ್ಟಾಪ್ ಮೇಲೆ ಕಾಲಿಡ್ತಿದ್ದಾನೆ ... "
"ಲೋ! ಸುಬ್ಬಾ ... ಹೊರಗೆ ಹೋಗಿ ಆಡ್ಕೋ ... ಅದೇನು ಮನೇಲೇ ಆಡೋದು? ಮೊನ್ನೆ ಬಾಲ್ ಹೊಡೆದು ಗಾಜು ಒಡೆದಿದ್ದೀಯ ... ಹೋಗು ಹೊರಗೆ"
"ನೀ ಇಲ್ಲಿ ಕೂತಿದ್ರೆ ಟಿವಿ ನೋಡ್ತಾ ಕೂತಿರ್ತೀಯಾ ... ನಿನ್ ರೂಮಿಗೆ ಹೋಗು ಓದ್ಕೋ ... ನಿನಗೇ ಅಂತ ರೂಮು ಇದೆಯಲ್ಲ .. ಹೊರಡು"
"ದೂರ ಆದರೆ ಏನಂತೆ ... ಆ ಹೈಸ್ಕೂಲು ತುಂಬಾ ಚೆನ್ನಾಗಿದೆ. ಬರೀ ಓಡಾಟಕ್ಕೆ ಟೈಮ್ ವೇಸ್ಟ್ ಆಗೋದು ಬೇಡ. ಅಜ್ಜಿ ಮನೇಲಿ ಇದ್ದು ಓದ್ಕೋ ಪರವಾಗಿಲ್ಲ. ಹೋಗು. ನಾವು ಪ್ರತಿ ವಾರ ಬರ್ತೀವಿ"
"ಈ ಇಂಜಿನೀರಿಂಗ್ ಕಾಲೇಜು ದಿ ಬೆಸ್ಟು. ಬೇರೆ ಊರಾದ್ರೆ ಏನು? ನೀನೇನು ಚಿಕ್ ಮಗೂನೇ? ನಿನ್ ಭವಿಷ್ಯ ಮುಖ್ಯ! ಹೋಗು"
"ಇನ್ನೂ ಓದು ಮುಗಿದೇ ಇಲ್ಲ ಆಗ್ಲೇ ವಿದೇಶದ ಕೆಲಸ ಅಂತಾಯ್ತು .. ಪುಣ್ಯ ಮಾಡಿದ್ದೀ ... ಹೊರಡು ಮೊದಲು. ನಿನ್ ಭವಿಷ್ಯ ರೂಪಿಸ್ಕೋ ..."
. . .
. . . .
"ಹ್ಮ್ಮ್ಮ್ ... ನನಗೆ ಅರ್ಥ ಆಗುತ್ತೆ ... ಟೈಮ್ ಮಾಡಿಕೊಂಡು ಬಂದು ಹೋಗು ... ಆಗ್ಲೇ ಮೂರು ವರ್ಷ ಆಯ್ತು ನಿನ್ನ ನೋಡಿ"
"ಹ್ಮ್ಮ್ ... ಸರಿ ... ಆಯ್ತು ... ನಾನೇನು ಹೇಳಲಿ? ನಿನ್ನಿಷ್ಟ ಕಣಪ್ಪ. ನೀನು ಇಲ್ಲಿ ಬರೋದೇ ಇಲ್ವಾ? ಬಾರೋ ಮಗನೇ ... ನನಗೆ ಅಲ್ಲೀ ತನಕ ಬಂದು ನಿನ್ನ ನೋಡಲಿಕ್ಕೆ ಚೈತನ್ಯ ಇಲ್ಲ ... ಬಾರೋ ... ಪ್ಲೀಸ್ ಬಾಪ್ಪಾ ... "
ಹೋಗು ಹೋಗೆಂಬ ಬಣ್ಣ ಬಣ್ಣದ ಬದುಕು ಸದಾ ಕೊನೆಗೊಳ್ಳುವುದು ಒಂದಾಗಿ ಬಿಳುಪಾದಾಗಲೇ ಅಲ್ಲವೇ?
Comments
ಉ: ಆಗು-ಹೋಗುಗಳು !!!
ನಮಸ್ಕಾರಗಳು ಸರ್,
ಮನಸ್ಸಿಗೆ ನೋವೆನಿಸಿದರು ಸತ್ಯವಾದ ಮಾತು ಸರ್,
ಧನ್ಯವಾದಗಳು
In reply to ಉ: ಆಗು-ಹೋಗುಗಳು !!! by ravindra n angadi
ಉ: ಆಗು-ಹೋಗುಗಳು !!!
ಧನ್ಯವಾದಗಳು ರವೀಂದ್ರ .. ನಿಜ, ನಮ್ಮ ಯೌವ್ವನದಲ್ಲಿ ನಾವು ನೆಡೆದುಕೊಳ್ಳುವ ರೀತಿ ಹೇಗೆ ಎಂದರೆ ಮುಂದಿನ ಜೀವನವೆಲ್ಲ ನಮ್ಮ ಕೈಲೇ ಇದೆ ಎಂಬಂತೆ ... ಮಕ್ಕಳನ್ನು ಬೆಳೆಸುವ ರೀತಿ ಹೀಗೆ ಎಂದು ಹೇಳುವ ಕೈಪಿಡಿ ಎಲ್ಲೂ ಇಲ್ಲ :-(