ಆಮೆಗೊಂದು ಮಂದಿರ- ಶ್ರೀ ಕೂರ್ಮನಾಥ ಸ್ವಾಮಿ ದೇವಸ್ಥಾನ
ಮಹಾವಿಷ್ಣು ಲೋಕದ ಕಲ್ಯಾಣಾರ್ಥ ಹಾಗೂ ಧರ್ಮವನ್ನು ಪುನಃ ಸ್ಥಾಪಿಸಲು ಆಗಾಗ ಭಿನ್ನ ಭಿನ್ನ ಅವತಾರಗಳ ಮೂಲಕ ಅವತರಿಸಿರುವುದು ನಿಮಗೆಲ್ಲಾ ತಿಳಿದೇ ಇದೆ. ಇವುಗಳು ದಶಾವತಾರಗಳೆಂದೇ ಖ್ಯಾತಿ ಹೊಂದಿದೆ. ವಿಷ್ಣುವಿನ ಎರಡನೇ ಅವತಾರವಾದ ಕೂರ್ಮಾವತಾರ ಅಂದರೆ ಆಮೆಯ ಅವತಾರದ ಕತೆ ನಿಮಗೆಲ್ಲಾ ಗೊತ್ತಿರಬಹುದು. ದೇವ-ದಾನವರು ಸೇರಿ ಅಮೃತದ ಆಶೆಗೆ ಸಮುದ್ರವನ್ನು, ಮಂದಾರ ಪರ್ವತವನ್ನು ಕಡಗೋಲಾಗಿಯೂ, ವಾಸುಕಿ ಎಂಬ ನಾಗನನ್ನು ಹಗ್ಗವನ್ನಾಗಿಯೂ ಮಾಡಿ ಕಡೆಯುತ್ತಿರುವಾಗ ಪರ್ವತವು ನೀರಿನಲ್ಲಿ ಮುಳುಗಲು ಪ್ರಾರಂಭವಾದಾಗ ವಿಷ್ಣುವು ಆಮೆಯ ರೂಪದಲ್ಲಿ ಪರ್ವತವನ್ನು ಎತ್ತಿ ಹಿಡಿಯುತ್ತಾರೆ. ಇದರಿಂದ ಸಮುದ್ರವನ್ನು ಕಡೆಯಲು ಅನುಕೂಲವಾಗುತ್ತದೆ. ಈ ಅವತಾರವೇ ಕೂರ್ಮಾವತಾರ.
ನಿಮಗೆ ಗೊತ್ತೇ? ವಿಷ್ಣುವಿನ ಕೆಲವೊಂದು ಕಡೆ ಈ ಅವತಾರವನ್ನು ಮೂರ್ತಿಯಾಗಿ, ದೇವಾಲಯ ಕಟ್ಟಿ ಪೂಜಿಸುತ್ತಾರೆ. ಭಾರತ ದೇಶದ ಕೆಲವು ಕಡೆ ಈ ರೀತಿಯ ವಿಗ್ರಹಗಳಿವೆ. ಅದರಲ್ಲಿ ಪ್ರಸಿದ್ಧವಾದದ್ದು ಶ್ರೀ ಕೂರ್ಮನಾಥ ಸ್ವಾಮಿ ದೇವಸ್ಥಾನ. ಈ ದೇವಸ್ಥಾನವು ಆಂಧ್ರಪ್ರದೇಶದಲ್ಲಿನ ಶ್ರೀಕಾಕುಲಂ ಎಂಬ ಜಿಲ್ಲೆಯ ಬಳಿ ಇರುವ ಗಾರಮಂಡಲ ಊರಿನಲ್ಲಿದೆ. ಇದಕ್ಕೆ ಶ್ರೀಕೂರ್ಮಂ ಕ್ಷೇತ್ರವೆಂದೂ ಕರೆಯುತ್ತಾರೆ. ಈ ದೇವಾಲಯವನ್ನು ಕ್ರಿ.ಶ.೧೨೮೧ರಲ್ಲಿ ಕಟ್ಟಿದ್ದರೂ ನಂತರದ ದಿನಗಳಲ್ಲಿ ಶ್ರೀ ರಾಮಾನುಜಾಚಾರ್ಯರು ಪುನರ್ ಪ್ರತಿಸ್ಥಾಪಿಸಿದರೆಂದು ಇತಿಹಾಸದ ಪುಟಗಳು ಹೇಳುತ್ತವೆ. ಕೆಲವರು ಇದನ್ನು ಬ್ರಹ್ಮ ದೇವನು ಕೃತಯುಗದಲ್ಲೇ ಸ್ಥಾಪಿಸಿದನೆಂದು ಹೇಳುತ್ತಾರೆ. ಈ ದೇವಸ್ಥಾನದ ಮೂಲಸ್ಥಾನದಲ್ಲಿ ಯಾವುದೇ ವಿಗ್ರಹ ಅಥವಾ ದೇವರ ಚಿತ್ರಗಳು ಕಾಣಸಿಗುವುದಿಲ್ಲ. ಆದರೆ ಆ ಜಾಗದಲ್ಲಿ ಹಳೆಯ ಆಮೆಯೊಂದರ ಪಳೆಯುಳಿಕೆ ಕಾಣಸಿಗುತ್ತದೆ.
ಇದನ್ನೇ ಇಲ್ಲಿ ದೇವರವೆಂದು ರೂಪವೆಂದು ಪೂಜಿಸಲಾಗುತ್ತದೆ. ತಲೆಯು ಆಮೆಯ ಆಕಾರದಲ್ಲಿರುವುದರಿಂದ ಹಾಗೂ ಆ ತಲೆಯಲ್ಲಿ ವಿಷ್ಣು ನಾಮವಿರುವುದರಿಂದ ಇದನ್ನು ಕೂರ್ಮನಾಥ ಸ್ವಾಮೀ ದೇವಾಲಯವೆಂದು ಕರೆಯಲಾಗಿದೆ. ಸುಮಾರು ಎಂಟನೇ ಶತಮಾನದಲ್ಲಿ ಶ್ರೀ ಆದಿ ಶಂಕರಾಚಾರ್ಯರು ಈ ದೇವಸ್ಥಾನದಲ್ಲಿ ಆಚರಣೆಗಳ ವಿಧಿ ವಿಧಾನವನ್ನು ಜಾರಿಗೆ ತಂದರೆಂದು ಪ್ರತೀತಿ ಇದೆ. ೧೧ನೇ ಶತಮಾನದಲ್ಲಿ ಶ್ರೀ ರಾಮಾನುಜಾಚಾರ್ಯರು ಈ ವಿಧಿವಿಧಾನಗಳನ್ನು ಮುಂದುವರೆಸಿಕೊಂಡು ಬಂದರು. ನಂತರ ೧೩ನೇ ಶತಮಾನದಲ್ಲಿ ಶ್ರೀ ನರಹರಿ ತೀರ್ಥ ಸ್ವಾಮಿಗಳೂ, ೧೫೧೨ರಲ್ಲಿ ಶ್ರೀ ಚೈತನ್ಯ ಮಹಾಪ್ರಭುಗಳೂ ಈ ದೇವಾಲಯದ ಆಚರಣೆಗಳನ್ನು ಮಾಡಿಕೊಂಡು ಬಂದರು.
ಶ್ರೀ ಕೂರ್ಮನಾಥ ಸ್ವಾಮಿ ದೇವಸ್ಥಾನದಲ್ಲಿನ ಶಿಲಾ ಕೆತ್ತನೆಗಳು ಅತ್ಯದ್ಭುತ ಶಿಲ್ಪಕಲೆಗೆ ಮಾದರಿಯಾಗಿವೆ. ಇಲ್ಲಿ ಅಪರೂಪದ ಶಿಲ್ಪಕೆತ್ತನೆಗಳು ನೋಡಲು ಸಿಗುತ್ತವೆ. ಸುಂದರವಾದ ಚಿತ್ರಕಲೆಯೂ ದೇವಸ್ಥಾನದ ಸೊಬಗನ್ನು ಇನ್ನಷ್ಟು ಹೆಚ್ಚಿಸಿದೆ. ಈ ದೇವಾಲಯ ಶೈವ-ವೈಷ್ಣವ ಸಮೈಕ್ಯ ವೇದಿಕೆಯಂತಿರುವುದು ಒಂದು ವೈಶಿಷ್ಟ್ಯ. ಸಾಕ್ಷಾತ್ ಮಹಾವಿಷ್ಣುವೇ ಕೂರ್ಮಾವತಾರದಲ್ಲಿ ಇಲ್ಲಿ ನೆಲೆಸಿ ದರ್ಶನ ನೀಡುತ್ತಿದ್ದಾರೆ ಎಂದೇ ಭಕ್ತಾದಿಗಳು ನಂಬುತ್ತಾರೆ.
ಈ ದೇವಸ್ಥಾನದ ಇನ್ನೊಂದು ವಿಶೇಷವೆಂದರೆ ಇಲ್ಲಿ ಎರಡು ಧ್ವಜಸ್ಥಂಭಗಳಿವೆ. ಒಂದು ದೇವಸ್ಥಾನದ ಮುಂದುಗಡೆ, ಮತ್ತೊಂದು ಹಿಂದುಗಡೆ. ಇಲ್ಲಿ ಒಳಗಿರುವ ದೇವರ ಮುಖವು ವಿಭಿನ್ನ ರೀತಿಯಲ್ಲಿ ನಿರ್ಮಿತವಾಗಿರುವುದರಿಂದ ಎರಡು ಧ್ವಜ ಸ್ಥಂಭಗಳನ್ನು ಸ್ಥಾಪಿಸಲಾಗಿದೆ. ಈ ದೇವಸ್ಥಾನದ ಎದುರುಗಡೆ ಶ್ರೀ ಯೋಗಾನಂದ ನರಸಿಂಹ ದೇವಸ್ಥಾನವಿದೆ. ದೇವಾಲಯದ ಆವರಣದಲ್ಲಿ ಒಂದು ‘ಆಮೆ ಪಾರ್ಕ್' ಕೂಡಾ ಇದೆ. ಇಲ್ಲಿ ವಿವಿಧ ಬಗೆಯ ಆಮೆಗಳನ್ನು ನೀವು ನೋಡಬಹುದು. ಇಲ್ಲಿ ಅಪರೂಪದ ತಳಿಯಾದ ನಕ್ಷತ್ರ ಆಮೆಗಳೂ ದಾಖಲೆಯ ಸಂಖ್ಯೆಯಲ್ಲಿವೆ. ಕೂರ್ಮನಾಥ ಸ್ವಾಮಿ ದೇಗುಲಕ್ಕೆ ಬರುವ ಭಕ್ತಾದಿಗಳು ಇಲ್ಲಿಯ ಆಮೆ ಉದ್ಯಾನವನಕ್ಕೆ ಭೇಟಿ ನೀಡುತ್ತಾರೆ.
ಮಹಾವಿಷ್ಣುವಿನ ಕೂರ್ಮಾವತಾರಕ್ಕೆ ಸಾಕ್ಷಿಯಾಗಿರುವ ಇನ್ನೆರಡು ದೇವಸ್ಥಾನಗಳಿವೆ. ಅದರಲ್ಲಿ ಒಂದು ನಮ್ಮ ಕರ್ನಾಟಕ ರಾಜ್ಯದಲ್ಲೇ ಇದೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿರುವ ಗವಿ ರಂಗಾಪುರ ಎಂಬ ಊರಿನಲ್ಲಿ ಗವಿ ರಂಗನಾಥ ಸ್ವಾಮಿ ದೇವಸ್ಥಾನವಿದೆ. ಇಲ್ಲಿ ಮಹಾವಿಷ್ಣು ಕೂರ್ಮಾವತಾರದಲ್ಲಿ ಇರುವ ಮುಖ್ಯ ವಿಗ್ರಹವಿದೆ. ಇದು ಒಂದು ಗುಹಾಂತರ ದೇವಸ್ಥಾನ. ಮತ್ತೊಂದು ಕೂರ್ಮ ದೇವಸ್ಥಾನವಿರುವುದು ಆಂಧ್ರಪ್ರದೇಶದ ಚಿತ್ತೂರ್ ಎಂಬ ಊರಿನಲ್ಲಿರುವ ಕೂರ್ಮ ವಾದಿರಾಜ ಸ್ವಾಮಿ ದೇವಸ್ಥಾನ. ಈ ಮೂರು ದೇವಸ್ಥಾನಗಳಲ್ಲಿ ಮಹಾವಿಷ್ಣುವಿನ ಎರಡನೇ ಅವತಾರವಾದ ಕೂರ್ಮಾವತಾರವನ್ನು ದೇವರ ರೂಪದಲ್ಲಿ ಪೂಜಿಸಲಾಗುತ್ತದೆ.
ಚಿತ್ರ: ಅಂತರ್ಜಾಲ ತಾಣ