ಆಹಾರದಲ್ಲಿನ ಕಲಬೆರಕೆ ಮನೆಯಲ್ಲೇ ಪತ್ತೆ ಹಚ್ಚಿ !
ಹೌದು, ಇತ್ತೀಚೆಗೆ ನಾನು ತಿನ್ನುವ ಎಲ್ಲಾ ಆಹಾರದಲ್ಲೂ ಕಲಬೆರಕೆ ಪ್ರಾರಂಭವಾಗಿದೆ. ಅದು ರಾಸಾಯನಿಕವಾಗಿರಬಹುದು, ಪ್ಲಾಸ್ಟಿಕ್ ಆಗಿರಬಹುದು, ವಿವಿಧ ಬಗೆಯ ಹಾನಿಕಾರಕ ಬಣ್ಣಗಳಾಗಿರಬಹುದು ಎಲ್ಲವೂ ಸೇರಿ ಕಲಬೆರಕೆಯಾಗಿದೆ. ಗೋಬಿ ಮಂಚೂರಿ, ಬಾಂಬೇ ಕಾಟನ್ ಕ್ಯಾಂಡಿ, ತಿರುಪತಿಯ ಲಾಡು, ಕೋಳಿಯ ಕಬಾಬ್, ಸಿಹಿ ತಿಂಡಿಗಳು, ನ್ಯೂಡಲ್ಸ್, ಫ್ರೈಡ್ ರೈಸ್ ಎಲ್ಲದರಲ್ಲೂ ಹಾನಿಕಾರಕ ಅಂಶಗಳು ಪತ್ತೆಯಾಗುತ್ತಲೇ ಇವೆ. ಕಳೆದ ವಾರ ಕೇರಳ ರಾಜ್ಯದ ಗಡಿಭಾಗದಲ್ಲಿರುವ (ಕರ್ನಾಟಕಕ್ಕೆ ಸಮೀಪ) ತಿಂಡಿ ಮಳಿಗೆಗಳಿಗೆ ಆಹಾರ ಸುರಕ್ಷತೆಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಸುಮಾರು ೯೦ ಕ್ಕೂ ಅಧಿಕ ಕರಿದ ತಿಂಡಿ, ಸಿಹಿ ತಿಂಡಿಗಳನ್ನು ಪರಿಶೀಲಿಸಿದಾಗ ೩೦ಕ್ಕೂ ಅಧಿಕ ತಿಂಡಿಗಳು ಕಲಬೆರಕೆಯಾಗಿದ್ದವು. ಹೀಗೆ ಮುಂದುವರೆದರೆ ಮಾನವ ರೋಗರಹಿತ ಜೀವನ ಸಾಗಿಸುವುದಾದರೂ ಹೇಗೆ? ಜೀವನ ಪರ್ಯಂತ ವೈದ್ಯರ, ಆಸ್ಪತ್ರೆಯ ಸಹವಾಸ ಮಾಡುವುದೇ ಆತನ ದಿನಚರಿಯಾಗಬೇಕೇ?
ಹಿಂದೂಗಳ ಭಕ್ತಿ ಕೇಂದ್ರವಾದ ತಿರುಪತಿಯಲ್ಲಿ ದೊರೆಯುವ ಲಾಡು ಬಹಳ ಪ್ರಸಿದ್ಧ. ಆ ಲಾಡಿಗೆ ಬಳಸುವ ತುಪ್ಪ ಕಲಬೆರಕೆಯಾಗಿರುವುದು ಪತ್ತೆಯಾದ ಬಳಿಕ, ರಾಜ್ಯದಲ್ಲಿ ಗೋಬಿ ಮಂಚೂರಿ ಮತ್ತು ಕಾಟನ್ ಕ್ಯಾಂಡಿಗೆ ಬಳಸುವ ಹಾನಿಕಾರಕ ರಾಸಾಯನಿಕ ನಿಷೇಧವಾದ ಬಳಿಕ ಎಲ್ಲರಲ್ಲೂ ಆರೋಗ್ಯ ಪ್ರಜ್ಞೆ ಜಾಗೃತವಾಗಿದೆ. ನಮ್ಮ ಮನೆಯಲ್ಲಿ ಬಳಕೆಯಾಗುವ ಹಲವಾರು ವಸ್ತುಗಳಲ್ಲಿ ಉದಾಹರಣೆಗೆ ಹಾಲು, ಸಕ್ಕರೆ, ಜೇನುತುಪ್ಪ, ಚಹಾ ಹುಡಿ, ತರಕಾರಿಗಳಲ್ಲಿ ಬೆರಕೆಯಾಗಿರುವ ಹಾನಿಕಾರಕ ಅಂಶಗಳನ್ನು ನಾವೇ ಮನೆಯಲ್ಲಿ ಪತ್ತೆ ಹಚ್ಚಬಹುದಾಗಿದೆ. ಕೆಲವೊಂದು ಸರಳ ವಿಧಾನಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
ಸಕ್ಕರೆ: ಆಹಾರ ಸಿಹಿಯಾಗಲೆಂದು ಬಳಸುವ ಸಕ್ಕರೆ ನಿಮ್ಮ ಜೀವನವನ್ನು ಕಹಿ ಮಾಡಬಹುದು. ಅದರಲ್ಲಿ ಸುಣ್ಣದ ಹುಡಿ, ವಾಷಿಂಗ್ ಸೋಡಾ, ಯೂರಿಯಾ ಮೊದಲಾದುವುಗಳು ಬೆರಕೆಯಾಗಿರಬಹುದು. ಅವುಗಳನ್ನು ಪತ್ತೆ ಹಚ್ಚಲು ನೀವು ಮಾದಬೇಕಾದುದು ಇಷ್ಟೇ. ಒಂದು ಗ್ಲಾಸ್ ನೀರಿನಲ್ಲಿ ಸ್ವಲ್ಪ ಸಕ್ಕರೆಯನ್ನು ಹಾಕಿ, ಕರಗಲು ಬಿಡಿ. ಕರಗಿದ ಬಳಿಕ ಆ ನೀರಿನಲ್ಲಿ ಏನಾದರೂ ಉಳಿದಿದ್ದರೆ ಅದನ್ನು ಗಮನಿಸಿ. ಸೀಮೆ ಸುಣ್ಣ, ಬಿಳಿ ಮರಳು, ಕಲ್ಲಿನ ಹುಡಿ ಇತ್ಯಾದಿಗಳು ಕರಗದೇ ತಳದಲ್ಲೇ ಉಳಿದು ಬಿಡುತ್ತವೆ. ಅಮೋನಿಯಾದ ಘಾಟು ವಾಸನೆ ಬಂದರೆ ಯೂರಿಯಾ ಬಳಸಿದ್ದಾರೆ ಎಂದು ಅರ್ಥ.
ಪನೀರ್: ಈಗ ಎಲ್ಲಾ ಆಹಾರ ಪದಾರ್ಥಗಳಿಗೆ ಯಥೇಚ್ಛವಾಗಿ ಪನೀರ್ ಬಳಸುತ್ತಾರೆ. ಶುದ್ಧವಾದ ಪನೀರ್ ಆರೋಗ್ಯಕ್ಕೆ ಉತ್ತಮ. ಆದರೆ ಆ ಪನೀರ್ ನಲ್ಲಿ ಪಿಷ್ಟ ಮತ್ತು ಆಲೂಗಡ್ಡೆಯನ್ನು ಬಳಸಿ ತಯಾರಿಸಿದ್ದರೆ ಅದು ಕಲಬೆರಕೆಯಾಗಿರುತ್ತದೆ. ಅದನ್ನು ಪತ್ತೆ ಹಚ್ಚಲು ನೀವು ಎರಡರಿಂದ ಮೂರು ಚಿಕ್ಕ ತುಣುಕು ಪನೀರ್ ಅನ್ನು ಸಣ್ಣ ಪಾತ್ರೆಗೆ ಹಾಕಿ. ಅದಕ್ಕೆ ನೀರು ಹಾಕಿ ಕುದಿಸಿ. ನಂತರ ಕೋಣೆಯ ಉಷ್ಣಾಂಶದಲ್ಲೇ ಆರಿಸಿ ತಣ್ಣಗಾಗಿಸಿ. ಬಳಿಕ ಆ ಪಾತ್ರೆಗೆ ಒಂದೆರಡು ಹನಿ ಅಯೋಡಿನ್ ಸೇರಿಸಿ. ನೀರು ನೀಲಿ ಬಣ್ಣಕ್ಕೆ ತಿರುಗಿದರೆ ಆ ಪನೀರ್ ಕಲಬೆರಕೆ ಎಂದೇ ಅರ್ಥ.
ಐಸ್ ಕ್ರೀಂ: ಮಕ್ಕಳು ಬಾಯಿಯನ್ನು ಚಪ್ಪರಿಸಿ ತಿನ್ನುವ ಐಸ್ ಕ್ರೀಂ ನಲ್ಲಿ ವಾಷಿಂಗ್ ಪೌಡರ್ ಬೆರಸಿರುವ ಸಾಧ್ಯತೆ ಇದೆ. ಅದನ್ನು ಪತ್ತೆ ಹಚ್ಚಲು ಐಸ್ ಕ್ರೀಮ್ ಮೇಲೆ ನಿಂಬೆ ರಸವನ್ನು ಸುರಿಯಿರಿ. ಆಗ ಗಾಳಿಯ ಗುಳ್ಳೆಗಳು ಉತ್ಪತ್ತಿಯಾದರೆ ಆ ಐಸ್ ಕ್ರೀಂ ಕಲಬೆರಕೆಯಾಗಿದೆ ಎಂದು ಅರ್ಥ.
ಕಾಫಿ: ಚಿಕೋರಿ ಬೆರಕೆ ಮಾಡದೇ ಕಾಫಿ ಹುಡಿ ಸಿಗುವುದೇ ಇಲ್ಲ ಎಂಬ ಪರಿಸ್ಥಿತಿ ಇದೆ. ಅದರಲ್ಲಿ ಚಿಕೋರಿ ಮಿಶ್ರವಾಗಿದೆಯೇ ಎಂಬುದನ್ನು ಪತ್ತೆ ಹಚ್ಚಲು ಒಂದು ಲೋಟ ನೀರಿನ ಮೇಲೆ ಕಾಫಿ ಹುಡಿಯನ್ನು ಹಾಕಿ. ಕಾಫಿ ಹುಡಿ ತೇಲಲಾರಂಭಿಸಿದರೆ ಚಿಕೋರಿ ತಕ್ಷಣ ಮುಳುಗಲಾರಂಭಿಸುತ್ತದೆ.
ಹಸಿರು ತರಕಾರಿ: ತರಕಾರಿಗಳನ್ನು ಹಸಿರು ಬಣ್ಣದೊಂದಿಗೆ ಫಳಫಳನೇ ಹೊಳೆಯಲು ಮಲಾಕೈಟ್ ಎನ್ನುವ ಬಣ್ಣವನ್ನು ಬಳಸುತ್ತಾರೆ. ಬಟಾಣಿ, ಪಾಲಕ್, ಬೀನ್ಸ್, ದೊಣ್ಣೆ ಮೆಣಸು ಮೊದಲಾದ ತರಕಾರಿಗಳಲ್ಲಿ ಇದರ ಬಳಕೆ ಹೆಚ್ಚು. ಇದನ್ನು ಪತ್ತೆ ಹಚ್ಚಲು ಬ್ಲಾಟಿಂಗ್ ಪೇಪರ್ ಮೇಲೆ ಸ್ವಲ್ಪ ನೀರು ಚಿಮುಕಿಸಿ ಅದರ ಮೇಲೆ ಈ ತರಕಾರಿಗಳನ್ನು ಇಡಿ. ಆಗ ಬಣ್ಣ ಹಾಕಿದ್ದರೆ ಅದು ಬ್ಲಾಟಿಂಗ್ ಪೇಪರ್ ಗೆ ಅಂಟಿಕೊಳ್ಳುತ್ತದೆ.
ರಾಗಿ: ಹಿಂದೆ ರಾಗಿ ತಿಂದು ನಿರೋಗಿಯಾಗಿ ಎಂದು ಮಾತು ಇದ್ದರೆ ಈಗ ಕಲಬೆರಕೆ ರಾಗಿ ತಿಂದರೆ ರೋಗಿಯಾಗಿ ಆಸ್ಪತ್ರೆ ಸಹವಾಸ ಮಾಡಬೇಕಾದೀತು. ನೀರಿನಲ್ಲಿ ಒದ್ದೆ ಮಾಡಿದ ಹತ್ತಿಯನ್ನು ತೆಗೆದುಕೊಂಡು ರಾಗಿಯ ಮೇಲೆ ಉಜ್ಜಿ. ರಾಗಿಗೆ ಬಣ್ಣ ಮಿಶ್ರ ಆಗಿದ್ದರೆ ಹತ್ತಿಯು ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ಅದೇ ರೀತಿ ಕೃತಕ ಬಣ್ಣ ಬಳಸಿದ್ದರೆ, ಹತ್ತಿಯ ಉಂಡೆಯನ್ನು ವೆಜಿಟೇಬಲ್ ಆಯಿಲ್ ನಲ್ಲಿ ಅದ್ದಿದಾಗ ಅದರ ಬಣ್ಣದಲ್ಲಿ ಬದಲಾವಣೆಯಾದರೆ ರಾಗಿ ಕಲಬೆರಕೆಯಾಗಿದೆ ಎಂದು ಅರ್ಥ.
ಕಾಳು ಮೆಣಸು: ಬಂಗಾರದ ಬೆಲೆ ಇರುವ ಕಾಳು ಮೆಣಸಿಗೆ ಕಲಬೆರಕೆ ಮಾಡಲು ಬಳಕೆಯಾಗುವುದು ಏನು ಗೊತ್ತೇ? ಪಪ್ಪಾಯಿಯ ಬೀಜಗಳು. ನೋಡಲು ಒಂದೇ ಗಾತ್ರ ಮತ್ತು ಬಣ್ಣ ಇರುವುದರಿಂದ ಕೂಡಲೇ ಗೊತ್ತಾಗುವುದಿಲ್ಲ. ಇದನ್ನು ಪತ್ತೆ ಹಚ್ಚಲು ಆಲ್ಕೋಹಾಲ್ ನಲ್ಲಿ ಕಾಳುಮೆಣಸುಗಳನ್ನು ಹಾಕಿ ಕೂಡಲೇ ಅಸಲಿ ಕಾಳು ಮೆಣಸುಗಳು ಮುಳುಗುತ್ತವೆ. ಪಪಾಯ ಬೀಜ ತೇಲಲು ಪ್ರಾರಂಭಿಸುತ್ತವೆ. ಚೆನ್ನಾಗಿ ಬಲಿಯದ ಕಾಳು ಮೆಣಸು ಸಹಾ ಮುಳುಗುವುದಿಲ್ಲ.
ಮೆಣಸಿನ ಹುಡಿ: ಕೆಂಪಗೆ ಕಣ್ಣಿಗೆ ಆಕರ್ಷಕವಾಗಿ ಕಾಣಲು ಮೆಣಸಿನ ಹುಡಿಗೆ ಇಟ್ಟಿಗೆ ಹುಡಿ, ಕೃತಕ ಬಣ್ಣವನ್ನು ಮಿಶ್ರಣ ಮಾಡುತ್ತಾರೆ. ಇದನ್ನು ಪತ್ತೆ ಹಚ್ಚಲು ಒಂದು ಲೋಟ ನೀರಿಗೆ ಮೆಣಸಿನ ಹುಡಿಯನ್ನು ಹಾಕಿ. ಶುದ್ಧ ಮೆಣಸಿನ ಹುಡಿಯಾದರೆ ನಿಧಾನವಾಗಿ ತಳ ಸೇರುತ್ತದೆ. ಇಟ್ಟಿಗೆ ಹುಡಿ ಮಿಶ್ರವಾಗಿದ್ದರೆ ವೇಗವಾಗಿ ತಳ ಸೇರುತ್ತದೆ. ಗಾಜಿನ ಲೋಟದ ನೀರಿನ ಮೇಲೆ ಮೆಣಸಿನ ಹುಡಿಯನ್ನು ಹಾಕಿದಾಗ ಅದು ಗೆರೆ ಗೆರೆಯಂತೆ ಕಂಡು ಬಂದರೆ ಕೃತಕ ಬಣ್ಣ ಮಿಶ್ರ ಮಾಡಿದ್ದಾರೆ ಎಂದು ಅರ್ಥ.
ಚಹಾ ಹುಡಿ: ಚಹಾ ಹುಡಿಗೆ ಕಲಬೆರಕೆ ಮಾಡುವ ಕಬ್ಬಿಣದ ಚೂರು, ಗೆರಟೆ ಚೂರು, ಬೇರೆ ಬಣ್ಣದ ಎಲೆಗಳು ಇವುಗಳನ್ನು ಪತ್ತೆ ಹಚ್ಚಲು ಬಿಳಿ ಕಾಗದದ ಮೇಲೆ ಚಹಾ ಹುಡಿಯನ್ನು ತಿಕ್ಕ ಬೇಕು. ಕೃತಕ ಬಣ್ಣ ಬಳಕೆಯಾಗಿದ್ದರೆ ಅದು ಆ ಕಾಗದಕ್ಕೆ ಅಂಟಿಕೊಳ್ಳುತ್ತದೆ. ಒಮ್ಮೆ ಬಳಸಿದ ಹಳೆಯ ಚಹಾ ಹುಡಿಯನ್ನು ಪತ್ತೆ ಹಚ್ಚಲು ತೇವಾಂಶ ಹೊಂದಿರುವ ಫಿಲ್ಟರ್ ಕಾಗದದ ಮೇಲೆ ಚಹಾ ಹುಡಿಯನ್ನು ಚಿಮುಕಿಸಿ. ಕಲಬೆರಕೆಯಾಗಿದ್ದರೆ ಗುಲಾಬಿ ಅಥವಾ ಕೆಂಪು ಕಲೆಗಳು ಕಾಣಿಸುತ್ತವೆ. ಕಬ್ಬಿಣದ ಹುಡಿ ಮಿಶ್ರಣವನ್ನು ಪತ್ತೆ ಹಚ್ಚಲು ಆ ಹುಡಿಯ ಮೇಲೆ ಅಯಸ್ಕಾಂತ (ಮೆಗ್ನೇಟ್) ವನ್ನು ಹೊರಳಾಡಿಸಿದರೆ ಕಬ್ಬಿಣದ ಹುಡಿ ಅದಕ್ಕೆ ಅಂಟಿಕೊಳ್ಳುತ್ತದೆ.
ತುಪ್ಪ: ಶುದ್ಧ ತುಪ್ಪ, ಕಲಬೆರಕೆ ತುಪ್ಪ ಇದು ಇತ್ತೀಚೆಗೆ ಚಾಲ್ತಿಯಲ್ಲಿರುವ ಬಹು ಚರ್ಚಿತ ವಿಷಯ. ತುಪ್ಪಕ್ಕೆ ದನದ ಕೊಬ್ಬು, ಅಡುಗೆ ಎಣ್ಣೆ, ವನಸ್ಪತಿಯನ್ನು ಕಲಬೆರಕೆ ಮಾಡುವ ಸಾಧ್ಯತೆ ಇದೆ. ಇದನ್ನು ಪತ್ತೆ ಹಚ್ಚಲು ನೀವು ಒಂದು ಚಮಚ ತುಪ್ಪವನ್ನು ಶುದ್ಧ ನೀರಿನಲ್ಲಿ ಹಾಕಿ. ತುಪ್ಪ ಶುದ್ಧವಾಗಿದ್ದಲ್ಲಿ ಅದು ತೇಲುತ್ತದೆ. ಇಲ್ಲವಾದಲ್ಲಿ ಅದು ನೀರಿನೊಂದಿಗೆ ಕರಗಿ ಮಿಶ್ರವಾಗುತ್ತದೆ.
ಇವುಗಳು ಕೆಲವೇ ಕೆಲವು ಕಲಬೆರಕೆ ಪತ್ತೆ ಹಚ್ಚುವ ವಿಧಾನಗಳು. ನಾವು ಯಾವುದೇ ಆಹಾರ ವಸ್ತುಗಳನ್ನು ಖರೀದಿಸುವಾಗ ಸೀಲ್ ಮಾಡಲಾದ ಪೊಟ್ಟಣವನ್ನೇ ಖರೀದಿಸಬೇಕು. ಸಾಧ್ಯವಾದಷ್ಟೂ ಖ್ಯಾತ ಬ್ರ್ಯಾಂಡ್ ಗಳ ಉತ್ಪನ್ನಗಳನ್ನೇ ಖರೀದಿಸಿ. ಒಂದೇ ಪದಾರ್ಥವನ್ನು ಈಗ ಹತ್ತಾರು ಕಂಪೆನಿಗಳು ತಯಾರಿಸುತ್ತವೆ. ಇದರಿಂದ ಆ ವಸ್ತುಗಳು ನಿಗದಿತ ಸಮಯಕ್ಕೆ ಮಾರಾಟವಾಗದೇ ಉಳಿದಿರುವ ಸಾಧ್ಯತೆಗಳೂ ಇವೆ. ಅದಕ್ಕಾಗಿ ಖರೀದಿಸುವ ಮುನ್ನ ಬಳಸುವ ಅಂತಿಮ ದಿನಾಂಕವನ್ನು ಗಮನಿಸಿ.
ಸಾಧ್ಯವಾದಷ್ಟು ಹೊರಗಿನ ಆಹಾರವನ್ನು ತಿನ್ನದಿರಿ. ಮನೆಗೆ ತರುವ ಹಣ್ಣು, ತರಕಾರಿಗಳನ್ನು ಚೆನ್ನಾಗಿ ತೊಳೆದು ಬಳಸಿ. ಕಾಳು, ಧಾನ್ಯ ಮೊದಲಾದ ಆಹಾರ ವಸ್ತುಗಳಲ್ಲಿ ಏನಾದರೂ ಕಸಕಡ್ಡಿಗಳು ಮಿಶ್ರವಾಗಿದೆಯೇ ಎನ್ನುವುದನ್ನು ಗಮನಿಸಿ. ಆಹಾರ ವಸ್ತುಗಳನ್ನು ಖರೀದಿಸುವಾಗ ಅದಕ್ಕೆ ಆಹಾರ ಗುಣಮಟ್ಟದ ಖಾತ್ರಿ ಇದೆಯೇ (ಎಫ್ ಎಸ್ ಎಸ್ ಎ ಐ FSSAI) ಎನ್ನುವುದನ್ನು ಗಮನಿಸಿ ಖರೀದಿಸಿ. ಕೊಳ್ಳುವಾಗ ನಾವು ತೆಗೆದುಕೊಳ್ಳುವ ಜಾಗೃತೆಯೇ ನಮ್ಮ ಆರೋಗ್ಯಕ್ಕೆ ಶ್ರೀರಕ್ಷೆ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ