ಆ ರಾಜಕುಮಾರ ಬುದ್ಧನಾದ; ಇವ ಪೆದ್ದನಾಗೇ ಉಳಿದ...!

ಆ ರಾಜಕುಮಾರ ಬುದ್ಧನಾದ; ಇವ ಪೆದ್ದನಾಗೇ ಉಳಿದ...!

                ಶುದ್ಧೋಧನ ಮಹಾರಾಜ, ತನ್ನ ರಾಜಕುಮಾರನಿಗೆ ಜಗತ್ತಿನ ಕಷ್ಟ-ಕೋಟಲೆಗಳ ಅರಿವೇ ಆಗಬಾರದೆಂದು ತೀವ್ರ ನಿಗಾ ವಹಿಸಿದ್ದನಂತೆ. ಅದು ಫಲಕಾರಿಯಾಗಲಿಲ್ಲ; ಅವನಿಗೆ ಹೇಗೋ ಮಾನವ ಜೀವನದ ಕಷ್ಟಗಳ ಅರಿವು ಆಗಿಯೇ ಆಯಿತು; ಅದರ ಪರಿಹರಕ್ಕಾಗಿ ಉತ್ಕಟ ತಪದಲ್ಲಿ ತೊಡಗಿ ಬುದ್ಧನೂ ಆದ; ಜಗತ್ತೇ ಒಪ್ಪಿಕೊಂಡ ಪ್ರಬುದ್ಧನೂ ಅಗಿಹೋದ! ಇದು ಇತಿಹಾಸದ ಕತೆ. ಅಕಸ್ಮಾತ್ ಶುದ್ಧೊಧನ ಮಹರಾಜ ತನ್ನ ಪ್ರಯತ್ನದಲ್ಲಿ ಯಶಸ್ವಿಯೇ ಆಗಿಬಿಟ್ಟಿದ್ದಿದ್ದರೆ ಏನಾಗುತ್ತಿತ್ತು? ಲೊಕಕ್ಕೆ ಬುದ್ಧ ಸಿಕ್ಕುತ್ತಿರಲಿಲ್ಲವೆನ್ನುವುದು ಹೋಗಲಿ, ಆ ಸಿದ್ಧಾರ್ಥ, ಮಹಾರಾಜನೂ ಆಗಿಬಿಟ್ಟಿದ್ದಿದ್ದರೆ ರಾಜ್ಯದ ಜನರ ಅವಸ್ಥೆ ಏನಾಗಿರುತ್ತಿತ್ತು?! ಈ ಕುತೂಹಲದ ಉತ್ತರಕ್ಕಾಗಿ ಇತಿಹಾಸದ ಭೂತವನ್ನು ಕೆದಕಿ ನೋಡುವ ಅಗತ್ಯವಿಲ್ಲ. ಅದು ನಮ್ಮ ವರ್ತಮಾನದಲ್ಲೇ ಇದೆಯಲ್ಲಾ, ಕಣ್ತೆರೆದು ಕಣ್ತುಂಬಾ ನೊಡಿ! ಈ ರಾಜಕುಮಾರ ಅಭಿಷಿಕ್ತನಾಗಿ ನಾಳೆ ನಮ್ಮನ್ನಾಳುವ ಸಾಧ್ಯತೆಯೂ ಇಲ್ಲದಿಲ್ಲ್ಲ!


                ದೇಶದ ಬಹುಸಂಖ್ಯಾತರ ‘ಭಯೋತ್ಪಾದಕತೆ’ ಅಲ್ಪಸಂಖ್ಯಾತರ ‘ಕಿರುಕುಳ’ಕ್ಕಿಂತಾ ಹೆಚ್ಚು ಅಪಾಯಕಾರಿ ಎಂಬ ‘ದಿವ್ಯ ದರ್ಶನದ ಸಿದ್ಧಾಂತ’ವನ್ನು ನಮ್ಮನ್ನಾಳಲಿರುವ ಈ ರಾಜಕುಮಾರ, ವಿಶ್ವದ ಮಹಾಶಕ್ತಿಗೆ ಉಪದೇಶಿಸಿದ್ದರಂತೆ. ಇದೊಂದು ‘ರಾಜತಾಂತ್ರಿಕ ಗುಟ್ಟು’ ಆಗಿತ್ತು. ಆದರೂ ತಾಂತ್ರಿಕ ಪ್ರಗತಿಯ ‘ಕಾಲಮಹಿಮೆ’ಯಿಂದ ಈಗ ರಟ್ಟಾಗಿಹೋಯಿತು! ಯಾರದೋ ಮುಖೋಲ್ಲಾಸಕ್ಕೆಂದು ಹೇಳಿದ ಮಾತೋ, ಏನೊ ಇದು! ಹುಡುಕಿದರೆ ಇದರಲ್ಲಿ ಯಾವ ಮೇಧಾವೀ ಮುತ್ಸದ್ದಿತನವೂ ಕಾಣಬರುವುದಿಲ್ಲ! ಜನತೆಯ ಮುಖ್ಯವಾಹಿನಿಯಿಂದ ಸಿಡಿದು ಹೋಗುವ ಯಾವ ಪುಂಡರ ಗುಂಪೂ ಸಮುದಾಯದ ನೆಮ್ಮದಿಗೆ ಅಪಾಯಕಾರಿಯೇ; ದೋಚುವ-ಬಾಚುವ ಪ್ರವೃತ್ತಿಯ ಈ ಠಕ್ಕರು ಜನರ ಜೀವ ತೆಗೆಯಲೂ ಹೆಸುವವರಲ್ಲ ಎನ್ನುವುದು ಲ್ಲರೂ ಬಲ್ಲ ಸಂಗತಿ. ಸಂಘಟನೆ ಯಾವ ಅಬ್ಬರದ ಹೆಸರೇ ಇಟ್ಟುಕೊಂಡರೂ ಇದು ಹಿಂದು, ಮುಸಲ್ಮಾನ್ ಅಥವಾ ಇನ್ನಾವುದೋ ಕೋಮಿನ ತತ್ವ-ಸಿದ್ಧಾಂತವಂತೂ ಆಗಿರುವ ಸಂಭವವಿಲ್ಲ್ಲ. ತತ್‌ಕ್ಷಣದ ರಾಜಕೀಯ ಬೇಳೆ ಬೇಸಿಕೊಳ್ಳುವುದಕ್ಕಾಗಿ, ಅಂಥವಕ್ಕೆ ಪ್ರತ್ಯಕ್ಷವಾಗಿಯೋ, ಪ್ರತಿಕ್ರಿಯಾತ್ಮಕವಾಗಿಯೋ ಕುಮ್ಮಕ್ಕು ನೀಡಿದ ಭ್ರಮಾನಾಯಕರು, ಕ್ಷುದ್ರಶಕ್ತಿಗಳಿಗೆ ತಾವೇ ಬಲಿಯಾಗಿಹೋದ ಉದಹರಣೆಗಳು ದಾರುಣವಾಗಿಯೇ ಕಣ್ಮುಂದಿವೆ. ಅದನ್ನಾದರೂ ಅರಿತು ಅಂಜಿಕೊಳ್ಳಲಾರದೆ ನಾಲಗೆ ಹರಿಬಿಡುವ ಮಾತುಗಾರ ಮುಖಂಡರನ್ನು ಧೀರರೆನ್ನುವುದಕ್ಕಿಂತಾ ಮೂಢರೆನ್ನುವುದೇ ಹೆಚ್ಚು ಸಮಂಜಸವಾದೀತೇನೋ!


                ಒಂದು ದೇಶದಲ್ಲಿ ನಿಜವಾಗಿ ಬಹುಸಂಖ್ಯಾತರಾದವರಿಗೆ ಭಯೋತ್ಪಾದಕರಾಗುವ ಅಗತ್ಯವಾದರೂ ಏನಿರುತ್ತದೆ? ಹಾಗೆಯೇ ವಿದ್ಯೆಗೆಟ್ಟು, ಬುದ್ಧಿಗೆಟ್ಟು ಸ್ವಾರ‍್ಥದ ದುರಾಸೆಗೆ ಲೂಟಿಕೋರೂ, ದಂಗೆಕೋರರೂ ಆಗುವ ಪಾಪಿಗಳ ಗುಂಪನ್ನು ಎಂದಿಗಾದರೂ ‘ಬಹುಸಂಖ್ಯಾತರ ಪೈಕಿ’ ಎಂದು ಗುರ್ತಿಸುವುದು ಸಮಂಜವಾದಾದೀತೇ?! ಇಂತಹ ಸಂಘಟನೆಗಳು ಹುಟ್ಟಿ ಹರಡಿಕೊಳ್ಳುತ್ತಿರುವುದಕ್ಕೆ, ಮೂಲಕಾರಣ, ರಾಷ್ಟ್ರ ಸಮುದಾಯವನ್ನು ಓಟಿನ ಓಲೈಕೆಗಾಗಿ ಕೋಮುವಾರು ಅಲ್ಪಸಂಖ್ಯಾತವಾಗಿ ವಿಂಗಡಿಸಿಟ್ಟ ದುರ್ಬುದ್ಧಿವಂತ ಮತ್ತು  ಅದೇ ಉದ್ದೇಶಕ್ಕಾಗಿ ಬಹುಸಂಖ್ಯತರನ್ನು ಜಾತ್ಯುಪಜಾತಿಗಳಲ್ಲಿ ಸೀಳಿ ಬೇಲಿಹಾಕಿಟ್ಟುಕೊಳ್ಳುತ್ತಿರುವ ಧೂರ್ತ ಬುದ್ಧಿವಂತ ರಾಜಕಾರಣಿಗಳು! ಇವರು ಈಗಲೂ ತೆರೆಮರೆಯಲ್ಲಿ ಎಂದಿನ ಕ್ರಿಯಾಶೀಲತೆಯಲ್ಲೇ ಇದ್ದಾರೆ. ಬುದ್ದಿಯಿರುವವರು ಇನ್ನಾದರೂ ಎಚ್ಚೆತ್ತುಕೊಳ್ಳಬಾರದೇ?!

Comments