ಆ ಹುಡುಗ

ಆ ಹುಡುಗ

ಹೋಟೆಲ್'ಗೆ ಹೋಗಿ, ನಮಗೆ ಸೂಕ್ತವೆನಿಸಿದ ಸ್ವಚ್ಛವಾದ ಟೇಬಲ್ಲೊಂದನ್ನು ಆಯ್ಕೆಮಾಡಿಕೊಂಡು ಕುಳಿತಿದ್ದೆವು. ಅಲ್ಲಿ ಚುರುಕಾಗಿ ಓಡಾಡುತ್ತಾ ಕೆಲಸ ಮಾಡುತ್ತಿದ್ದ ಒಬ್ಬ ಹುಡುಗ ನನ್ನ ಗಮನವನ್ನು ಸೆಳೆದ. ಚಿಕ್ಕವಯಸ್ಸಿನ ಹುಡುಗ, ಪ್ರಾಮಾಣಿಕವಾಗಿ ಮತ್ತು ಅಚ್ಚುಕಟ್ಟಾಗಿ ತನ್ನ ಕೆಲಸ ಮಾಡುತ್ತಿದ್ದ. ಒಂದೆರಡು ಒಳ್ಳೆಯ ಮಾತುಗಳಿಗಾಗಿ ಹಾತೊರೆಯುತ್ತಿದ್ದ ಅವನನ್ನು ಮಾತನಾಡಿಸುತ್ತಾ ಕುಳಿತುಕೊಳ್ಳುವಷ್ಟು ತಾಳ್ಮೆ ಅಲ್ಲಿದ್ದವರಿಗೆ ಇರಲಿಲ್ಲ. ಎಲ್ಲರೂ ತಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಹರಟೆ ಹೊಡೆಯುವುದರಲ್ಲಿ BUSY ಆಗಿದ್ದರು. ಇವನ ಇರುವಿಕೆಯೇ ಅವರ ಲಕ್ಷ್ಯಕ್ಕೆ ಬಂದಂತಿರಲಿಲ್ಲ. ಆದರೂ ಈ ಹುಡುಗ ನಿರಾಶನಾಗದೆ ತನ್ನ ಪ್ರಯತ್ನವನ್ನು ಮುಂದುವರೆಸಿದ್ದ.

ಆ ಹೋಟೆಲ್'ನಲ್ಲಿ ಅವನದ್ದು ತಟ್ಟೆ ಲೋಟ ತೆಗದು table clean ಮಾಡುವ ಕೆಲಸ. ಅದು ತೀರ ಕೆಳಮಟ್ಟದ ಕೆಲಸವೆಂದು ಜನರು ಭಾವಿಸುತ್ತಾರೆ. ಅದು ಅವನಿಗೂ ಗೊತ್ತು. ಆ ಕೆಲಸಕ್ಕೆ ಸಿಗುವ ಕೂಲಿ ತುಂಬಾ ಕಡಿಮೆ. ಆದರೂ ದುಡಿಯುತ್ತಿದ್ದಾನೆ. ಬೇರೆ ಮಾರ್ಗವಿಲ್ಲ. ತಾನು ನಿಕೃಷ್ಟನೆಂಬ ಅಂಶ ಅವನ ತಲೆಯಲ್ಲಿ ಹೊಕ್ಕು ಕುಳಿತಿತ್ತು. ತನ್ನಿಂದ ಬೇರೆಯವರಿಗೆ ತೊಂದರೆಯಾದೀತೆಂಬ ಆತಂಕದಿಂದ ದೇಹವನ್ನು ಅದಷ್ಟು ಕುಗ್ಗಿಸಿಕೊಂಡು ಓಡಾಡುತ್ತಿದ್ದ. ಯಾರಿಗಾದರೂ ತನ್ನ ಕೈಕಾಲುಗಳು ತಗುಲಿದರೆ ಭಾರೀ ಅಪರಾಧವಾದೀತೆಂಬ ಭಯವೂ ಇತ್ತು. (ಹಿಂದಿನ ಕಾಲದಲ್ಲಿ ನಮ್ಮ ಕೆಳಜಾತಿಗಳ ಜನ ಹೀಗೇ ಓಡಾಡುತ್ತಿದ್ದರಂತೆ.)

ಅವನನ್ನು ಮಾತನಾಡಿಸಬೇಕೆನ್ನಿಸಿತು. ಊಟ ಮುಗಿಸಿ ಹೊರಡುವಾಗ ಕೈಸನ್ನೆ ಮಾಡಿ ಕರೆದೆ. 'ತನ್ನಿಂದ ಏನೋ ತಪ್ಪಾಗಿರಬೇಕು' ಎಂದುಕೊಂಡು ಅಂಜಿಕೆಯಿಂದಲೇ‌ (ಬೈಸಿಕೊಳ್ಳಲು ಸಿದ್ಧನಾಗಿ) ಹತ್ತಿರ ಬಂದು ನಿಂತ. ಸುಮ್ಮನೇ ಮಾತಿಗೆಳೆದೆ. ತುಂಬಾ ಸಂತೋಷದಿಂದ ಮಾತನಾಡಿದ. ಹೊರಡುವಾಗ ಅನೈಚ್ಛಿಕವಾಗಿ ನೂರರ ನೋಟೊಂದನ್ನು ಅವನ ಕೈಗಿಟ್ಟು ಬೆನ್ನು ತಟ್ಟಿದೆ. ಅಷ್ಟಕ್ಕೇ ದೊಡ್ಡ ಮೊತ್ತದ ಲಾಟರಿ ಗೆದ್ದವನಂತೆ ಸಂಭ್ರಮಿಸಿಬಿಟ್ಟ. ಅವನ ಮುಖದಲ್ಲಿ ವ್ಯಕ್ತವಾದ ಅಪರಿಮಿತ ಆನಂದವನ್ನು ಮಾತುಗಳಲ್ಲಿ ವರ್ಣಿಸುವುದು ತುಂಬಾ ಕಷ್ಟದ ಕೆಲಸ. ಅದನ್ನು ನೀವು ನೋಡಿಯೇ ಸವಿಯಬೇಕು. ಕೃತಜ್ಞತೆ ತುಂಬಿದ ಅವನ ಆ ನೋಟವಂತೂ ನನ್ನ ಹೃದಯವನ್ನೇ ಕಲುಕಿಬಿಟ್ಟಿತು.

ಹೋಟೆಲ್‌'ಗಳಿಗೆ ಹೋದಾಗ waiter'ಗಳಿಗೆ tips ಕೊಡುತ್ತೇವೆ. (Bar'ಗಳಲ್ಲಂತೂ ಜನ ದಾನಶೂರ ಕರ್ಣರಾಗಿ ಬದಲಾಗಿರುತ್ತಾರೆ) ಆದರೆ table clean ಮಾಡಲು ಬರುವ ಬಡಪಾಯಿಗಳನ್ನು ಎಲ್ಲರೂ ಕಡೆಗಣಿಸಿ ಎದ್ದು ಬಿಡುತ್ತೇವೆ. ಸಾಧಾರಣವಾಗಿ ಆ ಕೆಲಸ ಮಾಡುವವರು ಚಿಕ್ಕ ಹುಡುಗರೋ, ವಯಸ್ಸಾದ ಮುದುಕರೋ ಅಥವಾ ಅಂಗವಿಕಲರೋ ಆಗಿರುತ್ತಾರೆ. ಹೆಚ್ಚುಕಡಿಮೆ ಬಹಿಷ್ಕೃತರಂತೆ ಬದುಕುವ ಇವರಿಗೆ 'ಐದೋ - ಹತ್ತೋ' ರೂಪಾಯಿಗಳನ್ನು ಕೊಟ್ಟು ಎದ್ದು ಬರಬಹುದಲ್ಲವೇ? ಇದರಿಂದಾಗಿ ಅವರ ಕಷ್ಟಗಳ ಭಾರ ಸ್ವಲ್ಪವಾದರೂ ಕಡಿಮೆಯಾಗುವುದಿಲ್ಲವೇ? ಯೋಚಿಸಿ ನೋಡಿ.

- ಬಿಎಸ್ಎ -