ಇದಕ್ಕೇನು ಮಾಡೋದು?

ಇದಕ್ಕೇನು ಮಾಡೋದು?

ಬರಹ

ನೋಡಲಿಕ್ಕೆ ಅವರೂ ಎಲ್ಲರಂತೆಯೇ, ಬಡತನ ಅವರನ್ನು ಈ ಸ್ಥಿತಿಗೆ ದೂಡಿದೆಯೋ ಅಥವಾ ಇದು ಅವರೇ ಆರಿಸಿದ ದಾರಿಯೋ ಅವರೇ ಹೇಳಬೇಕು , ನಿಮಗೆ ಈಗಾಗಲೇ ಗೊತ್ತಾಗ್ತಿರಬೇಕು ನಾನು ಯಾರ ಬಗ್ಗೆ ಹೇಳ್ತಿದ್ದೀನಿ ಅಂತ,

ಒಮ್ಮೆ ಬೆಂಗಳೂರಿನ ಮೆಜೆಸ್ಟಿಕ್ ಹತ್ತಿರದ ಅಭಿನಯ್, ಸಾಗರ್ ಥಿಯೇಟರ್ (ಇನ್ನೂ ಹಲವು ಇಂಥದ್ದೇ ಸ್ಥಳಗಳಿರಬಹುದು!) ಹತ್ತಿರ ಸಂಜೆ ಸುಮಾರು ೭-೮ ಕ್ಕೆ ಹೋಗಿ ನೋಡಿ, ಹದಿನಾರರಿಂದ ಮೂವತ್ತು ವಯಸ್ಸಿನ ಹುಡುಗಿಯರ ಗುಂಪು ಸ್ವಲ್ಪ ಅತಿ ಎಂಬಂತೆ ಸಿಂಗರಿಸಿಕೊಂಡು ’ಯಾರನ್ನೋ’ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ, ಸಭ್ಯತೆಯ ಎಲ್ಲೆ ಮೀರಿದ ಮಾತುಗಳನ್ನ ಆಡ್ತಾ, ವಿಚಿತ್ರ ನೋಟ ಬೀರುತ್ತಾ ದಾರಿಹೋಕರ ಗಮನ ಸೆಳೆಯುತ್ತಾ ಇರ್ತಾರೆ. ಮುಜುಗರ ತರುವಂತಹ ಇವರ ವರ್ತನೆ, ಇವರ ಬಳಿ ’ವ್ಯವಹಾರ ಕುದುರಿಸುತ್ತಾ’ (ಈ ಪದಪುಂಜದ ಬಳಕೆಗೆ ಎಲ್ಲರ ಕ್ಷಮೆ ಇರಲಿ) ಇರುವ ಕೆಲವು 'ಗಂಡಸರು', ನಗುನಗುತ್ತಾ ಮಾತಾಡ್ತಿದ್ದವರ ಜೊತೆ ಇದ್ದಕ್ಕಿದ್ದಂತೆ ಶುರುವಾಗುವ ಜಗಳ, “ಬೇಲಿಯೇ ಎದ್ದು ಹೊಲ ಮೇಯ್ವಂತೆ” ಇವರ ಬಳಿ ಹಣ ವಸೂಲಿಗೆ ನಿಂತ ಪೇದೆ, ಇಂಥಾ ಒಂದು ಗುಂಪನ್ನ ನೋಡಿದಾಗ, ತಮಗೆ ಸಂಬಂಧಿಸಿದ್ದೇ ಅಲ್ಲ ಅನ್ನೋ ಹಾಗೆ ಹೋಗೋ ಜನ, ಕೀಳು ದೃಷ್ಟಿಯಿಂದ ಅವರನ್ನ ನೋಡ್ತಾ, ಗೇಲಿ ಮಾಡುವ ಪಡ್ಡೆಗಳು ಒಂದು ಕಡೆ, ಕನಿಕರದಿಂದ ಅವರೆಡೆಗೆ ದೃಷ್ಟಿ ಹಾಯಿಸುವ ಹಲವರು, ಎಷ್ಟು ಬೇಗ ಅಲ್ಲಿಂದ ಪಾರಾದರೆ ಅಷ್ಟೂ ತಮಗೆ ಒಳ್ಳೆಯದು ಎಂದು ಲಗುಬಗೆಯಿಂದ ಹೆಜ್ಜೆ ಹಾಕುವ ಮತ್ತೂ ಕೆಲವು ಮಡಿವಂತರು ಅಯಾಚಿತವಾಗಿ ಕಣ್ಣಿಗೆ ಬೀಳುತ್ತಾರೆ.

ಸ್ಲೋ ಮೂವಿಂಗ್ ಟ್ರಾಫಿಕ್ ಅಥವಾ ಸಿಗ್ನಲ್ ದೆಸೆಯಿಂದ ಅಲ್ಲಿ ಹಾದು ಹೋಗುವ ಗಾಡಿಗಳು ನಿಧಾನಿಸಲೇಬೇಕಾದಂಥ ಸಂದರ್ಭ. ಅಂಥಾ ದಾರಿಹೋಕರಲ್ಲಿ ನಾನೂ ಸೇರಿಹೋದರೂ, ದುಃಖ ಮಿಶ್ರಿತ ಕೋಪದಿಂದ ಮುಂದಿನ ಕೆಲವು ದಿನಗಳು ಮನಸ್ಸು ಅದೇ ಗುಂಗಿನಲ್ಲಿದ್ದು, ಆ ಹುಡುಗಿಯರ ಮುಖವೇ ಕಣ್ಮುಂದೆ ಬರಲಾರಂಭಿಸುತ್ತದೆ. ಪ್ರಕ್ಷುಬ್ಧ ಮನಸ್ಸು ಸಹಜ ಸ್ಥಿತಿಗೆ ಮರಳಲು ಕೊಂಚ ದಿನಗಳೇ ಬೇಕಾಗತ್ತೆ.

ಇವೆಲ್ಲಾ ಪರಿಹಾರಗಳಿಲ್ಲದ ಸಮಸ್ಯೆಗಳು ನಿಜ, ಆದರೆ ಕೊಂಚ ಮಟ್ಟಿಗಾದರೂ ಇವಕ್ಕೆ ಕಡಿವಾಣ ಬೀಳಬಾರದೇ? ಸಮಾಜ ಸುಧಾರಣೆಗಾಗಿ ಪಣ ತೊಟ್ಟ ಸಂಸ್ಥೆಗಳು ಏನು ಮಾಡ್ತಿವೆ? ಮನಸ್ಸಿಲ್ಲದ ಮನಸ್ಸಿನಿಂದ ಈ ವೇಶ್ಯಾವೃತ್ತಿ ಎಂಬ ವಿಷಕೂಪಕ್ಕೆ ಬಿದ್ದವರನ್ನ ರಕ್ಷಿಸಲಾಗದೇ? ರಾಜ ಮಹಾರಾಜರ ಕಾಲದಿಂದ ಇದು ನಡೆದು ಬಂದಿದೆ, ಕೆಲವು ಮೊಂಡ ಜನಗಳು ಸ್ವ-ಇಚ್ಚೆಯಿಂದ ಈ ವೃತ್ತಿಯನ್ನ ಆರಿಸಿಕೊಂಡಿರುತ್ತಾರೆ ಅಂತ ತಳ್ಳಿಹಾಕಿದರೂ, ಇದು ಸರಿಯೇ? ಹೊಟ್ಟೆಪಾಡಿಗೆ ಇವರಿಗೆ ಬೇರೆ ಕೆಲಸವೇ ಸಿಗದೇ? ನಾಗರೀಕರಾಗಿ ನಮ್ಮ ಜವಾಬ್ದಾರಿ ಇದರಲ್ಲಿ ಎಷ್ಟಿದೆ? ಇಂಥ ಪ್ರಶ್ನೆಗಳು ಮನಸ್ಸಿನಲ್ಲಿ ವಿಕಾರವಾಗಿ ನರ್ತಿಸಲಾರಂಭಿಸುತ್ತದೆ.

'Be Practical', 'ಇದು ಮನುಷ್ಯ ಸಮಾಜದ ಒಂದು ಕರಾಳ ಮುಖ, ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬಾರದು, ಇದ್ದದ್ದನ್ನ ಇದ್ದ ಹಾಗೇ ಒಪ್ಪಿಕೊಳ್ಳಬೇಕು', 'Be a thick skinned person', 'ಪ್ರಪಂಚದಲ್ಲಿ ಒಳ್ಳೆಯದು ಕೆಟ್ಟದ್ದು ಎರಡೂ ಇರತ್ತೆ, ಹಂಸಕ್ಷೀರ ನ್ಯಾಯದಂತೆ ಒಳ್ಳೆಯದನ್ನೇ ನೋಡು', 'ಜಗತ್ತಿನಲ್ಲಿ ಇವೆಲ್ಲಾ ಅತಿ ಸಾಮಾನ್ಯ' ಅಂತ ಕೆಲವೊಮ್ಮೆ ಮನದೊಳಗಿನಿಂದ ಕೆಲವೊಮ್ಮೆ ಹೊರಗಿನಿಂದ ಬಂದ ಬುದ್ದಿವಾದ ಕೇಳಿ ದಂಗಾಗುತ್ತೇನೆ! ಗೊಂದಲಕ್ಕೊಳಗಾಗುತ್ತೇನೆ! ಅರಿವಿಲ್ಲದೇ ತಂತಾನೇ ಒಂದು ನಿಟ್ಟುಸಿರು ಬರುತ್ತದೆ.

ಮರೆಯಬೇಕೆಂದರೂ ಮರೆಯಲಾಗದ ವಿಷಯಗಳ ಪಟ್ಟಿಯಲ್ಲಿ ಇದೂ ದಾಖಲಾಗುತ್ತದೆ.