ಇ-ಲೋಕ-೩

ಇ-ಲೋಕ-೩

ಬರಹ

ಕಂಪ್ಯೂಟರ್‍ ಬಳಸಿ ಸಹಭೋಜನ!
 ಕುಟುಂಬಿಕರ ಜತೆ ಸಹಭೋಜನ ಮಾಡುವುದು ವೃದ್ಧರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎನ್ನುವುದು ನಿಮಗೆ ತಿಳಿದಿರಬಹುದು.ಆದರೆ ಈಗಿನ ಕಾಲಘಟ್ಟದಲ್ಲಿ ಹೆತ್ತವರು ಮತ್ತು ಮಕ್ಕಳು ಬೇರೆ ಬೇರೆ ಕಡೆ ವಾಸವಾಗಿರಬೇಕಾದ ಪರಿಸ್ಥಿತಿಯಿರುವುದು ಸಾಮಾನ್ಯ. ಹೀಗಿದ್ದರೂ ಅವರುಗಳು ಸಹಭೋಜನದ ಅನುಭವ ಪಡೆಯಬಹುದು.ಅಕ್ಸೆಂಚುವರ್‍ ಎಂಬ ಕಂಪೆನಿ ಜನರಿಗೆ ಸಹಭೋಜನ ಅನುಭವ ಪಡೆಯುವ ಕಂಪ್ಯೂಟರ್‍ ಆಧಾರಿತ ವ್ಯವಸ್ಥೆಯನ್ನು ಸಿದ್ಧಗೊಳಿಸಿದೆ. ಟಿವಿ,ಕಂಪ್ಯೂಟರ್‍,ಬ್ರಾಡ್‌ಬ್ರಾಂಡ್ ಸಂಪರ್ಕ ಮತ್ತು ವೆಬ್‌ಕ್ಯಾಮರಾದಂತಹ ಸಾಧನ ಇದಕ್ಕೆ ಬೇಕು.ವೃದ್ಧರು ಅಡುಗೆ ಮಾಡಿ, ಊಟಕ್ಕೆ ಸಿದ್ಧತೆ ನಡೆಸುತ್ತಿರುವಂತೆ, ಊಟದ ಕೋಣೆಯಲ್ಲಿಟ್ಟಿರುವ ಕ್ಯಾಮರಾದಿಂದ ಇದನ್ನರಿಯುವ ಕಂಪ್ಯೂಟರ್‍ ತಂತ್ರಾಂಶವೊಂದು ಅಂತರ್ಜಾಲ ಮೂಲಕ, ವೃದ್ಧನ ಕುಟುಂಬಿಕರಿಗೆ ಸೂಚನೆ ನೀಡುತ್ತದೆ.ಟಿವಿ ಅಥವಾ ಕಂಪ್ಯೂಟರ್‍ ಮೂಲಕ ಇದನ್ನರಿಯುವ ಕೌಟುಂಬಿಕರು,ತಮ್ಮ ಟಿವಿ ಚಾನೆಲ್ ಒಂದರಲ್ಲಿ ತಮ್ಮ ಹೆತ್ತವರು ಊಟಕ್ಕೆ ಅಣಿಯಾಗುತ್ತಿರುವುದನ್ನು ಟಿವಿ ಪರದೆಯಲ್ಲಿ ವೀಕ್ಷಿಸುತ್ತಾ, ತಾವೂ ಊಟಕ್ಕೆ ತೊಡಗಬೇಕು. ಅವರ ಚಿತ್ರಗಳು ಹಿರಿಯರ ಟಿವಿ ತೆರೆಯಲ್ಲಿ ಮೂಡತೊಡಗುತ್ತದೆ. ಪರಸ್ಪರರ ಮಾತುಗಳೂ ಕೇಳಿಸುವ ಧ್ವನಿ ವ್ಯವಸ್ಥೆಯೂ ಇದೆ.ಮಾತನಾಡುತ್ತಾ ಊಟ ಮಾಡಬಹುದು. ಏಕಾಂಗಿಯಾಗಿ ಊಟ ಮಾಡುವುದಕ್ಕಿಂತ ಹೆಚ್ಚು ಊಟವನ್ನು ಹಿರಿಯರು ಮಾಡುವುದು ಬಹುತೇಕ ನಿಶ್ಚಿತ!
 ಕಂಪ್ಯೂಟರ್‍ ಬಳಸಲು ಅಂಜುವವರಿಗೂ ಅನುಕೂಲಕರವಾದ ರೀತಿ ಈ ವ್ಯವಸ್ಥೆ ಇರುವುದು ಕಂಪ್ಯೂಟರ್‍ ಸಾಕ್ಷರರಲ್ಲದವರಿಗೂ ಅನುಕೂಲ ಒದಗಿಸಲಿದೆ. ಪ್ರತಿ ಮನೆಗೂ ಈ ವ್ಯವಸ್ಥೆ ಅಳವಡಿಸಲು ಒಂದು ಸಾವಿರ ಡಾಲರ್‍ ವರೆಗೆ ಖರ್ಚು ಬರಬಹುದು ಎಂಬ ಅಂದಾಜಿದೆ.
 

ಹೈಟೆಕ್ ಬಳಸಿ ಮೋಸದಾಟ!
 ಆಟವನ್ನು ಕ್ರೀಡಾ ಭಾವನೆಯಿಂದ ಆಡುವುದು ಬಿಟ್ಟು ಮೋಸದಾಟ ಆಡಿ ಆಟದ ಹೆಸರಿಗೆ ಮಸಿ ಬಳಿಯುವವರ ಬಗ್ಗೆ ಸಾಕಷ್ಟು ಕೇಳಿದ್ದೇವೆ. ಚದುರಂಗ ಪಟುವೋರ್ವ ಬ್ಲೂಟೂತ್ ಎಂಬ ನಿಸ್ತಂತು ತಂತ್ರಜ್ಞಾನ ಬಳಸಿ, ನಡೆಯ ಬಗ್ಗೆ ಇತರರ ಸಹಾಯ ಪಡೆದು ಹತ್ತು ವರ್ಷಾವಧಿಗೆ ಆಟದಿಂದ ಹೊರಬಿದ್ದಿದ್ದಾನೆ.ಉಮಾಕಾಂತ ಶರ್ಮಾ ಎಂಬ ಹೆಸರಿನ ಆಟಗಾರ ಕಳೆದ ಒಂದೂವರೆ ವರ್ಷದಿಂದ ಕ್ಷಿಪ್ರ ನಡೆಯ ಚೆಸ್‌ ಪಂದ್ಯಾಟದಲ್ಲಿ ಅದ್ಭುತ ಪ್ರದರ್ಶನ ನೀಡಿ, ರಾಷ್ಟ್ರೀಯ ಪಂದ್ಯಾಟಕ್ಕೂ ಅರ್ಹತೆ ಗಳಿಸಿದ್ದ. ಆತನ ದಿಢೀರ್‍ ಸಾಧನೆ ಹಲವರಿಗೆ ಅಚ್ಚರಿ ತಂದಿತ್ತು. ಟೋಪಿ ಧರಿಸಿ ಚದುರಂಗ ಆಡುವುದು ಆತನ ವೈಖರಿ. ಇತ್ತೀಚೆಗೆ ಕೂಟವೊಂದರಲ್ಲಿ ಆತನ ಹಾವಭಾವಗಳಿಂದ ಅನುಮಾನ ಬಂದು ತನಿಖೆ ನಡೆಸಿದಾಗ, ಆತನ ಟೋಪಿಯೊಳಗೆ ನಿಸ್ತಂತು ಸಾಧನ ಪತ್ತೆಯಾಯಿತು. ಅದರ ಮೂಲಕ ಆತ ತನ್ನ ಸ್ನೇಹಿತರಿಗೆ ಸಂದೇಶ ರವಾನಿಸುತ್ತಿದ್ದ. ಅವರು ಕಂಪ್ಯೂಟರ್‍ ಚೆಸ್ ಆಟದ ಸಹಾಯ ಪಡೆದು, ಅತನಿಗೆ ನಡೆಗಳ ಬಗ್ಗೆ ಸಲಹೆ ರವಾನಿಸುತ್ತಿದ್ದರು ಎನ್ನುವ ಅಂಶ ಬೆಳಕಿಗೆ ಬಂತು.

ತರಗತಿಯಿಲ್ಲದೆ ಪದವಿ ಕೋರ್ಸು
 ಹೊಸ ಮೀಸಲಾತಿ ನೀತಿಯಿಂದಾಗಿ ಕಾಲೇಜುಗಳಲ್ಲಿ ಅಧಿಕ ಪ್ರವೇಶಾವಕಾಶ ಒದಗಿಸುವುದು ವಿಶ್ವವಿದ್ಯಾಲಯ ದತ್ತಿ ಆಯೋಗ(ಯುಜಿಸಿ)ಕ್ಕೆ ಅನಿವಾರ್ಯವಾಗಿ ಬಿಟ್ಟಿದೆ. ಮೂಲಸೌಕರ್ಯಗಳಿಲ್ಲದೆ ದಿಢೀರ್‍ ಅಧಿಕ ಪ್ರವೇಶಾವಕಾಶ ಒದಗಿಸಲಸಾಧ್ಯ ಎನ್ನುವುದು ಪ್ರಾಯೋಗಿಕ ಸಮಸ್ಯೆ. ಹಾಗಾಗಿ ಯುಜಿಸಿ ತನ್ನ ಶೈಕ್ಷಣಿಕ ಚಾನೆಲ್ ಎಜುಸಾಟನ್ನು ಬಳಸುವ ಯೋಚನೆಯಲ್ಲಿದೆ. ಎಜುಸಾಟ್ ಎನ್ನುವುದು ಉಪಗ್ರಹ ಆಧಾರಿತ ಶೈಕ್ಷಣಿಕ ಟಿವಿ ಕಾರ್ಯಕ್ರಮಗಳನ್ನು ಕಾಲೇಜಿನಲ್ಲಿನ ಟಿವಿಯಲ್ಲಿ ಪ್ರಸಾರ ಮಾಡುವ ವ್ಯವಸ್ಥೆ.ಇದರ ಮೂಲಕ ತಜ್ಞರು ನೀಡುವ ಪಾಠವನ್ನು ಟಿವಿ ಮುಂದೆ ಆಸೀನರಾಗಿರುವ ವಿದ್ಯಾರ್ಥಿಗಳಿಗೆ ತಲುಪಿಸಲು ಸಾಧ್ಯ. ಇಂತಹ ಮಿಥ್ಯಾ ತರಗತಿಗಳ ಮೂಲಕ ವಿದ್ಯಾರ್ಥಿಗಳಿಗೆ ಕಲಿಸಿ, ಅವರಿಗೆ ಶಿಕ್ಷಣ ನೀಡುವುದು ಯುಜಿಸಿಯ ಯೋಜನೆ. ಪರೀಕ್ಷೆಗಳನ್ನೂ ಕಂಪ್ಯೂಟರ್‍ ಮೂಲಕ ಆನ್‌ಲೈನ್‌ನಲ್ಲಿ ನಡೆಸಿದರೆ ಹೇಗೆ ಎನ್ನುವುದು ಇನ್ನೊಂದು ಚಿಂತನೆ. ಈಶಾನ್ಯ ರಾಜ್ಯಗಳ ಎಪ್ಪತ್ತು ಕಾಲೇಜುಗಳು ಎಜುಸಾಟ್ ಸೌಲಭ್ಯ ಹೊಂದಿವೆ. ಯುಜಿಸಿಯು ಒಂದೂವರೆ ಸಾವಿರ ಕೋರ್ಸುಗಳಿಗೆ ಈ ರೀತಿಯ ತರಬೇತಿ ನೀಡಲು ಸಂಪನ್ಮೂಲ ಹೊಂದಿದೆ.

ಕದ್ದರೆ ಕಿರುಚುವ ಫೋನ್!
 ಸೆಲ್‌ಫೋನ್‌ನ್ನು ಯಾರಾದರೂ ಕದ್ದರೆ ನಿಮ್ಮ ಪರಿಸ್ಥಿತಿಯನ್ನು ಊಹಿಸಿಕೊಳ್ಳಿ. ಫೋನ್‌ನ ದುಬಾರಿ ಬೆಲೆ ನಿಮ್ಮನ್ನು ಕಂಗೆಡಿಸದಿರಬಹುದು. ಆದರೆ ಅದರಲ್ಲಿರುವ ದೂರವಾಣಿ ಸಂಖ್ಯೆಗಳು,ಕಾರ್ಯಕ್ರಮಗಳು,ಕ್ರೆಡಿಟ್‌ಕಾರ್ಡ್‌ನಂತಹ ವಿವರಗಳು ನಿಮ್ಮ ಕೈಬಿಟ್ಟು ಹೋಗುವುದು ನಿಮ್ಮ ಎದೆಬಡಿತ ಏರಿಸಲು ಸಾಕು.ಕಳೆದುಹೋದ ಸೆಲ್‌ಫೋನ್ ಪತ್ತೆ ಹಚ್ಚಲು ಅಥವಾ ಅದನ್ನು ನಿಷ್ಕ್ರಿಯಗೊಳಿಸುವಲ್ಲಿ ನೆರವಾಗುವ ವಿಧಾನಗಳ ಬಗ್ಗೆ ಸಂಶೋಧನೆ ನಡೆಯುತ್ತಿದೆ.
 ಹೊಸ ವಿಧಾನದಲ್ಲಿ ಸೆಲ್‌ಫೋನ್ ಕಳವಾದ ಕೂಡಲೇ ನೀವು ಮೊದಲೇ ನೋಂದಾಯಿಸಿದ ಸಂಖ್ಯೆಗೆ ದೂರವಾಣಿ ಕರೆ ಮಾಡಬೇಕು. ತಕ್ಷಣ ಕಳವಾದ ಮೊಬೈಲ್ ಹ್ಯಾಂಡ್‌ಸೆಟ್‌ಗೆ ಸೂಚನೆ ಹೋಗಿ,ಅದು ಕಿರುಚುವ ಸದ್ದನ್ನು ಹೊರಹೊಮ್ಮಿಸುತ್ತದೆ.ಜತೆಗೆ ಹ್ಯಾಂಡ್‌ಸೆಟ್ ನಿಷ್ಕ್ರಿಯವಾಗಿಬಿಡುತ್ತದೆ.
 ಫಿನ್ಲೆಂಡಿನಲ್ಲಿ ವಿಜ್ಞಾನಿಗಳು ಸಂವೇದಕವೊಂದನ್ನು ತಯಾರಿಸಲು ಪ್ರಯತ್ನಿಸುತ್ತಿದ್ದಾರೆ. ಅದು ಧ್ವನಿಯನ್ನು ಗುರುತಿಸಬಲ್ಲುದು ಮತ್ತು ನಡಿಗೆಯ ಶೈಲಿಯನ್ನೂ ಗುರುತಿಸಬಲ್ಲುದು. ಸೆಲ್‌ಫೋನಿಗೆ ಇದನ್ನು ಅಳವಡಿಸಿ, ಬಳಸುವವನ ನಡಿಗೆ ಮತ್ತು ಧ್ವನಿಯನ್ನು ಸೆಟ್ ಗುರುತಿಸುವಂತೆ ಮಾಡುವುದು ಸಂಶೋಧಕರ ಆಲೋಚನೆ. ಬೇರೆ ಯಾರಾದರೂ ಉಪಯೋಗಿಸಲು ಪ್ರಯತ್ನಿಸಿದರೆ, ಅದು ಪಾಸ್‌ವರ್ಡ್ ಕೇಳುತ್ತದೆ.
 ಕೆನಡಾದ ಸಂಶೋಧಕರು ಸೆಟ್ ಮತ್ತದನ್ನಿರಿಸುವ ಚೀಲದ ಮಧ್ಯೆ ನಿಸ್ತಂತು ಸಂಪರ್ಕ ಏರ್ಪಡಿಸಿ, ಅವುಗಳು ಬೇರ್ಪಟ್ಟಾಗ ಹ್ಯಾಂಡ್‌ಸೆಟ್ ಪಾಸ್‌ವರ್ಡ್ ವಿನಃ ಕೆಲಸ ಮಾಡದಂತೆ ಮಾಡುವ ಪ್ರಯತ್ನದಲ್ಲಿದ್ದಾರೆ.
 ಜಪಾನಿಯರು ಜಿಪಿಎಸ್ ಅಳವಡಿಸಿದ ಸೆಟ್‌ನ್ನು ಬಳಸಿ, ಅದಿರುವ ಸ್ಥಳ ಪತ್ತೆ ಹಚ್ಚಲು ಸಾಧ್ಯವಾಗುವಂತೆ ಮಾಡುತ್ತಿದ್ದಾರೆ.
*ಅಶೋಕ್‌ಕುಮಾರ್‍ ಎ