ಈಗ... ಭಯೋತ್ಪಾದಕರೆಲ್ಲ ಮುಸ್ಲಿಮರಲ್ಲ....!

ಈಗ... ಭಯೋತ್ಪಾದಕರೆಲ್ಲ ಮುಸ್ಲಿಮರಲ್ಲ....!

ಬರಹ

ಈಗ... ಭಯೋತ್ಪಾದಕರೆಲ್ಲ ಮುಸ್ಲಿಮರಲ್ಲ....!

ಕಳೆದ ಎರಡು ಮೂರು ವರ್ಷಗಳ ಹಿಂದಿನಿಂದ ಹಿಂದೂವಾದಿಗಳು ಚಾಲ್ತಿಯಲ್ಲಿಟ್ಟಿದ್ದ 'ಎಲ್ಲ ಮುಸ್ಲಿಮರೂ ಭಯೋತ್ಪಾದಕರಲ್ಲ. ಆದರೆ ಭಯೋತ್ಪಾದಕರೆಲ್ಲರೂ ಮುಸ್ಲಿಮರು' ಎಂಬ ಸಂಚಾರಿ ಸಂದೇಶದ ವಿಶ್ವಾಸಾರ್ಹತೆಗೆ ಈಗ ಭಂಗ ಬಂದಿದೆ. ಹಿಂದೂವಾದಿ ಗುಂಪುಗಳೂ ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿರುವ ಸಂಗತಿ ಈಗ ನಿಧಾನವಾಗಿಯಾದರೂ ಬೆಳಕಿಗೆ ಬರುತ್ತಿದೆ. ಇದೇ ಸೆಪ್ಟಂಬರ್ 29ರಂದು ಮಹಾರಾಷ್ಟ್ರದ ಮುಸ್ಲಿಂ ಬಹುಸಂಖ್ಯಾತ ಪಟ್ಟಣವಾದ ಮಾಲೆಗಾಂವ್ನಲ್ಲಿ ನಡೆದ ಆಸ್ಫೋಟವಷ್ಟೇ ಅಲ್ಲ, ಈ ಹಿಂದಿನ ವರ್ಷಗಳಲ್ಲಿ ಅದೇ ರಾಜ್ಯದ ನಾಂದೇಡ್, ಜಲ್ನ, ಪರ್ಭಾಣಿ, ಪೂರ್ನ ಮತ್ತು ಗುಜರಾತ್ನ ಮೊಸಾದ್ ಇತ್ಯಾದಿ ಸ್ಥಳಗಳಲ್ಲಿ ನಡೆದ ಬಾಂಬ್ ಸ್ಫೋಟಗಳಲ್ಲೂ ಈ ಗುಂಪುಗಳ ಕೈವಾಡವಿದೆ ಎಂದು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ ಹೇಳುತ್ತಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಓಡಾಡುವ ರೈಲಾದ ಸಂಝೋತಾ ಎಕ್ಸ್ಪ್ರೆಸ್ನಲ್ಲಿ ಎರಡು ವರ್ಷಗಳ ಹಿಂದೆ ನಡೆದ ಅರವತ್ತೆಂಟು ಜನರ (ಹೆಚ್ಚಾಗಿ ಪಾಕಿಸ್ಥಾನಿ ಮುಸ್ಲಿಮರೇ) ಪ್ರಾಣವನ್ನು ಆಹುತಿ ತೆಗೆದುಕೊಂಡ ಮತ್ತು ನೂರಾರು ಜನರನ್ನು ಪ್ರಾಣಾಂತಿಕವಾಗಿ ಗಾಯಗೊಳಿಸಿದ ಬಾಂಬ್ ಸ್ಫೋಟದ ಹಿಂದೆಯೂ ಈ ಗುಂಪುಗಳ ಕೈವಾಡವೇ ಇದ್ದಂತೆ ಕಾಣುತ್ತಿದೆ ಎಂದು ಈ ದಳ ಹೇಳುತ್ತಿದೆ.

ಹಾಗೆ ನೋಡಿದರೆ ಭಯೋತ್ಪಾದಕರೆಲ್ಲರೂ ಮುಸ್ಲಿಮರೇ ಎಂಬುದು ಈ ಹಿಂದೆಯೂ ನಿಜವಾದ ಸಂಗತಿಯೇನಾಗಿರಲಿಲ್ಲ. ಏಕೆಂದರೆ, ಭಾರತದ ನಕ್ಸಲರು ಅಥವಾ ಮಾವೋವಾದಿಗಳು, ಶ್ರೀಲಂಕಾದ ಎಲ್ಟಿಟಿಯವರೂ ಮಾಡುತ್ತಿರುವುದೂ ಭಯೋತ್ಪಾದನೆಯೇ ಮತ್ತು ಅವರೆಲ್ಲರೂ ಬಹುತೇಕ ಹಿಂದೂಗಳೇ! ಆದರೆ ಭಯೋತ್ಪಾದನೆ ಎಂದರೆ ಕೋಮು ಭಯೋತ್ಪಾದನೆಯೇ ಎಂಬ ಅರ್ಥ ಸದ್ಯಕ್ಕೆ ಚಾಲ್ತಿಯಲ್ಲಿರುವುದರಿಂದ ಬೇರೆ ಕಾರಣಗಳ, ಉದ್ದೇಶಗಳ ಹಿಂಸಾಚಾರ ಭಯೋತ್ಪಾದನೆ ಎನ್ನಿಸಿಕೊಂಡಿಲ್ಲವಷ್ಟೆ. ಜನರ ಸಾಂವಿಧಾನಿಕ ಒಪ್ಪಿಗೆ ಇಲ್ಲದ ಉದ್ದೇಶಪೂರ್ವಕ ಮತ್ತು ವೈರಪೂರಿತವಾದ ಎಲ್ಲ ಹಿಂಸೆಯೂ ಭಯೋತ್ಪಾದನೆಯೇ ಅಲ್ಲವೆ? ಹಾಗಾಗಿ, ಈಗ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳದ ಕೈಗೆ ಸಿಕ್ಕಿ ಹಾಕಿಕೊಂಡಿರುವ ಅರ್ಧ ಡಝನ್ ಹಿಂದೂ ಭಯೋತ್ಪಾದಕರನ್ನು ರಕ್ಷಿಸಲು ಸಂಘ ಪರಿವಾರದ ಕೆಲವು ನಾಯಕರು 'ಹಿಂದೂ ಅಂದರೇನೇ ಆತ ಅಥವಾ ಆಕೆ ಭಯೋತ್ಪಾದಕ/ಕಿ ಆಗಿರಲು ಸಾಧ್ಯವಿಲ್ಲ' ಎಂದು ಅಮಾಯಕವಾಗಿ ಹೇಳತೊಡಗಿರುವುದು ನಗೆಯನ್ನಷ್ಟೇ ಉಕ್ಕಿಸಬಲ್ಲುದು!

ಅದೇನೇ ಇರಲಿ, ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ಮಾಜಿ ಪದಾಧಿಕಾರಿಯೂ, ಸದ್ಯ ಇಂದೂರಿನಲ್ಲಿ ವಂದೇ ಮಾತರಂ ಜನಕಲ್ಯಾಣ ಸಮಿತಿ ಹಾಗೂ ರಾಷ್ಟ್ರೀಯ ಜಾಗರಣ ಮಂಚ್ನ ಸಂಚಾಲಕಿಯೂ ಆಗಿರುವ ಸಾಧ್ವಿ ಪ್ರಗ್ಯಾಸಿಂಗ್ ಠಾಕೂರ್ ಎಂಬ ಯುವತಿಯನ್ನೂ, ಅಭಯ್ ರಹೀರ್ಕರ್, ಸಮೀರ್ ಕುಲಕರ್ಣಿ, ಶ್ಯಾಮಲಾಲ್ ಸಾಹು, ಶಿವನಾರಾಯಣ ಸಿಂಗ್ ಕಲ್ಸಂಗ್ರ, ರಾಕೇಶ್ ದಾವಡೆ, ಮೇಜರ್ ಜನರಲ್ (ನಿ) ರಮೇಶ್ ಉಪಾಧ್ಯಾಯ ಎಂಬ ಆಕೆಯ ಆರು ಜನ ಸಹಚರರನ್ನೂ ಬಂಧಿಸಿ ವಿಚಾರಣೆ ನಡೆಸಿದೆ. ಇದರ ಫಲವಾಗಿ ಲೆ|| ಕ|| ಶ್ರೀಕಾಂತ್ ಪ್ರಸಾದ್ ಪುರೋಹಿತ್ ಎಂಬ ಓರ್ವ ಸೇನಾಧಿಕಾರಿಯನ್ನೂ, ನಂತರ ಈ ಇಡೀ ಜಾಲದ ಸ್ಫೂರ್ತಿ ಕೇಂದ್ರವಾಗಿದ್ದವನೆಂದು ಹೇಳಲಾಗುತ್ತಿರುವ ಉತ್ತರ ಪ್ರದೇಶದಲ್ಲೂ, ಜಮ್ಮುವಿನಲ್ಲೂ ಮಠಗಳನ್ನು ಹೊಂದಿರುವ ಸ್ವಾಮಿ ಅಮೃತಾನಂದ ಆಲಿಯಾಸ್ ದಯಾನಂದ ಪಾಂಡೆ ಆಲಿಯಾಸ್ ಸುಧಾಕರ ದ್ವಿವೇದಿ ಎಂಬ ಸ್ವಯಂಘೋಷಿತ ಶಂಕಾರಾಚಾರ್ಯನೊಬ್ಬನನ್ನೂ ಬಂಧಿಸಿರುವ ದಳ, ಇವರ ಮಂಪರು ಪರೀಕ್ಷೆಗೂ ಮುಂದಾಗಿದೆ. ಹೀಗೆ ಹಲವು ರಾಜ್ಯಗಳಲ್ಲಿ ತನ್ನ ಜಾಲ ಹರಡಿಕೊಂಡಿರುವ ಈ ಗುಂಪು, ಈವರೆಗೂ ಮುಸ್ಲಿಂ ಭಯೋತ್ಪಾದಕ ಗುಂಪುಗಳು ನಡೆಸಿದ್ದುವೆಂದು ನಂಬಲಾಗಿರುವ ಕೆಲವು ಸ್ಫೋಟಗಳಿಗಾದರೂ ಕಾರಣವಾಗಿದ್ದರೆ ಆಶ್ಚರ್ಯವಿಲ್ಲ ಎಂದು ಹೇಳಲಾಗುತ್ತಿದೆ.

ಈ ಜಾಲದ ಹಿಂದಿರುವ ಸ್ಫೂರ್ತಿ, ಪುಣೆಯಲ್ಲಿನ 'ಅಭಿನವ್ ಭಾರತ್' ಎಂಬ ಹಿಂದೂವಾದಿ ಸಂಸ್ಥೆ. ಹಿಂದೂ ಮಹಾ ಸಭಾದ ಸದ್ಯದ ಅಧ್ಯಕ್ಷರೂ, ನಾಥೂರಾಂ ಗೋಡ್ಸೆಯ ಸೋದರ ಗೋಪಾಲ ಗೋಡ್ಸೆಯ ಮಗಳೂ ಮತ್ತು ವೀರ ಸಾವರ್ಕರರ ಸೋದರ ಸೊಸೆಯೂ ಆದ ಹಿಮಾನಿ ಸಾವರ್ಕರ್ ಇದರ ಅಧ್ಯಕ್ಷರು. ಈಕೆಯ ಪ್ರಕಾರ ಪ್ರತಿ ಮುಸ್ಲಿಂ ಬಾಂಬ್ ಸ್ಫೋಟಕ್ಕೆ ಪ್ರತಿಯಾಗಿ ಹಿಂದೂ ಬಾಂಬ್ ಸ್ಫೋಟವೊಂದನ್ನು ಆಯೋಜಿಸಬೇಕಂತೆ! ಈಗ ಬಂಧನದಲ್ಲಿರುವ ರಮೇಶ್ ಉಪಾಧ್ಯಾಯ ಇದರ ಕಾರ್ಯಾಧ್ಯಕ್ಷ. ಈತನೇ ಈ ಸಂಸ್ಥೆಗೂ ನಮ್ಮ ಸೇನೆಯ ನಡುವೆ ಸೇತುವೆ ನಿರ್ಮಿಸಲು ಆಯೋಜಿತನಾಗಿದ್ದವನು. ತನ್ನ ಗುರಿ ರಾಷ್ಟ್ರೀಯ ಪುನರುತ್ಥಾನ ಎಂದು ಹೇಳಿಕೊಳ್ಳುವ ಈ ಸಂಸ್ಥೆ, ಮುಸ್ಲಿಮರನ್ನು 'ಧರ್ಮ ಶತ್ರು'ಗಳು ಎಂದು ಕರೆಯುತ್ತದೆ. ಇದರ ಒಂದು ಕರಪತ್ರ, ಶತ-ಶತಮಾನಗಳಿಂದ ಲಕ್ಷಾಂತರ ಹಿಂದೂಗಳನ್ನು ಕಗ್ಗೊಲೆ ಮಾಡಲಾಗಿದೆ ಎಂದು ಹೇಳುತ್ತಾ, ಅದರ ವಿರುದ್ಧ ಪ್ರತೀಕಾರಕ್ಕೆ ಕರೆ ಕೊಡುತ್ತದೆ. ನಮ್ಮ ರಕ್ಷಣಾ ಖಾತೆಯನ್ನು ಯುದ್ಧ ಖಾತೆಯೆಂದೂ, ನಮ್ಮ ಸೇನೆಯನ್ನು ಭಾರತೀಯ ಸಶಸ್ತ್ರ ದಳವೆಂದೂ ಪುರ್ನನಾಮಕರಣ ಮಾಡಬೇಕೆಂದು ಅದು ಆಗ್ರಹಿಸುತ್ತದೆ.

ಇಂತಹ ಅಭಿನವ ಭಾರತ್ ಸಂಸ್ಥೆಯ ಪ್ರಚೋದನೆಯಲ್ಲಿ ನಡೆದಿರುವ ಈ ಭಯೋತ್ಪಾದನಾ ಕಾರ್ಯಾಚರಣೆಗಳು ನಿಜವಾಗಿಯೂ ಆಘಾತಕಾರಿ ಎನ್ನಿಸಿರುವುದು ಅವುಗಳ ವಿಚ್ಛಿದ್ರಕಾರಿ ಪರಿಣಾಮಗಳಿಂದಷ್ಟೇ ಅಲ್ಲ, ಈ ಕಾರ್ಯಾಚರಣೆಗಳ ಹಿಂದೆ ಭಾರತೀಯ ಸೇನಾಪಡೆಯ ಕೆಲವು ಅಧಿಕಾರಿಗಳ ಕೈವಾಡವಿದೆ ಎಂಬುದು ಸಾಬೀತಾಗುತ್ತಿದೆ ಎಂಬುದರಿಂದಾಗಿ. ಅಷ್ಟೇ ಅಲ್ಲ, ಬಾಂಬ್ ತಯಾರಿಕೆಗೆ ಬೇಕಾದ ಸ್ಫೋಟಕವಸ್ತುವನ್ನೂ, ತಂತ್ರಜ್ಞಾನವನ್ನೂ ಮತ್ತು ಹಣವನ್ನೂ ಸೇನೆಯ ಬಾಬ್ತುಗಳಿಂದಲೇ ಕಳ್ಳ ಸಾಗಿಸಲಾಗಿದೆ ಎಂಬುದೂ ಕೂಡ. ಇದನ್ನು ಸಂಘ ಪರಿವಾರದ ಕೆಲವು ನಾಯಕರು ಬಹಿರಂಗವಾಗಿ, ಸರ್ಕಾರ ಮುಸ್ಲಿಮರನ್ನು ಓಲೈಸುವ ಕಾರ್ಯಕ್ರಮವಾಗಿ ಮುಸ್ಲಿಂ ಗುಂಪುಗಳ ಭಯೋತ್ಪಾದನೆಯನ್ನು ಪರಿಣಾಮಕಾರಿಯಾಗಿ ತಡೆಯಲು ವಿಫಲವಾಗುತ್ತಿರುವಾಗ, ದೇಶಸೇವೆಗೆಂದೇ ತರಬೇತುಗೊಂಡಿರುವ ಸೈನ್ಯ ಅದರಿಂದ ಪ್ರಚೋದಿತವಾಗದಿರುತ್ತದೆಯೇ? - ಎಂದು ಸಮರ್ಥಿಸುತ್ತಿರುವ ರೀತಿಯಂತೂ, ದೇಶವನ್ನು ಅರಾಜಕತೆಗೆ ಸಿಲುಕಿಸುವ ಹುನ್ನಾರದಂತೆಯೇ ಕಾಣುತ್ತದೆ. ಈ ಸಂಘ ಪರಿವಾರದವರೇ ಅಧಿಕಾರದಲ್ಲಿದ್ದಾಗ ಮುಸ್ಲಿಂ ಗುಂಪುಗಳ ಭಯೋತ್ಪಾದನೆಯನ್ನು ಎಷ್ಟರ ಮಟ್ಟಿಗೆ ಅಡಗಿಸಲು ಸಮರ್ಥರಾಗಿದ್ದರು ಎಂಬುದನ್ನು ನಾವೆಲ್ಲ ನೋಡಿದ್ದೇವೆ. ಹಾಗಾಗಿ ಈ ಅವಿವೇಕಿಗಳು, ಇವರಷ್ಟೇ ಅವಿವೇಕಿಗಳಾದ ಪ್ರಗ್ಯಾಸಿಂಗ್ ಠಾಕೂರ್, ಲೆ||ಕ|| ಪುರೋಹಿತ್ ಮತ್ತು ಅವರ ಸಹಚರರನ್ನು ರಕ್ಷಿಸಲು ಮುಸ್ಲಿಮರ ಓಲೈಕೆ ಎಂಬ ತಮ್ಮ ಈಗಾಗಲೇ ಲಡಾಸೆದ್ದಿರುವ ರಾಜಕೀಯ ಅಸ್ತ್ರವನ್ನು ಬಳಸಿ, ಸೇನೆಯಲ್ಲಿ ಕೋಮುವಾದವನ್ನು ಪ್ರೋತ್ಸಾಹಿಸುವ ಮತ್ತು ಆ ಮೂಲಕ ರಾಷ್ಟ್ರದ ಸಂವಿಧಾನಾತ್ಮಕ ನಿರ್ವಹಣೆಯನ್ನು ಬುಡಮೇಲುಗೊಳಿಸುವಂತಹ ಮಾತಗಳನ್ನಾಡುತ್ತಿರುವುದನ್ನು ರಾಷ್ಟ್ರ ದ್ರೋಹವೆಂದೇ ಪರಿಗಣಿಸಬೇಕಿದೆ. ಸೇನಾ ಮುಖ್ಯಸ್ಥ ದೀಪಕ್ ಕಪೂರರೇನೋ, ಇದೊಂದು ವಿರಳ ಪ್ರಸಂಗ; ಇಂತಹ ಪ್ರಯತ್ನಗಳ ವಿರುದ್ಧ ಈಗ ಸೇನೆ ಮುನ್ನೆಚ್ಚೆರಿಕೆ ಕ್ರಮ ಕೈಗೊಂಡಿದೆ ಮತ್ತು ಸೇನೆಯ ಸಂವಿಧಾನ ಬದ್ಧತೆ ಎಂದೂ ಧಕ್ಕೆಗೊಳಗಾಗಲಾರದು ಎಂದು ಭರವಸೆ ನೀಡಿದ್ದಾರೆ. ಅದರೆ ಸೇನಾ ಮುಖ್ಯಸ್ಥರ ಈ ಭರವಸೆಯನ್ನು ಸುಲಭವಾಗಿ ನಂಬುವಷ್ಟು ಪರಿಸ್ಥಿತಿ ಹೊರಗೆ ಸರಳವಾಗಿಲ್ಲ ಎಂಬುದೇ ಇಂದಿನ ನಿಜವಾದ ಆತಂಕವಾಗಿದೆ.

ಮೊದಲಾಗಿ, ಈ ರಾಷ್ಟ್ರದ ಮತ - ನಿರಪೇಕ್ಷ (ಸೆಕ್ಯುಲರ್) ಮತ್ತು ಸಂಸದೀಯ ಪ್ರಜಾಪ್ರಭುತ್ವವಾದಿ ಸಂವಿಧಾನದಲ್ಲಿ ನಂಬಿಕೆ ಇರದ ಈ ಹಿಂದೂವಾದಿಗಳಿಗೆ ಈಗಿರುವ ರಾಷ್ಟ್ರ ಬೇಕಿಲ್ಲ. ಹಾಗಾಗಿಯೇ ಇವರು ನಕ್ಸಲರಂತೆ, ಮುಸ್ಲಿಂ ಭಯೋತ್ಪಾದಕರಂತೆ ಈ ಸಾಂವಿಧಾನಿಕ ರಾಷ್ಟ್ರವನ್ನು ನಾಶ ಮಾಡಲು ಅವಕಾಶಗಳಿಗಾಗಿ ಕಾಯುತ್ತಿದ್ದಾರೆ. ಈ ಸಂಘ ಪರಿವಾರಕ್ಕೆ ರಾವಣನನ್ನೂ ಮೀರಿ ನೂರಾರು ತಲೆಗಳು! ಧರ್ಮ, ಶಿಕ್ಷಣ, ಆರೋಗ್ಯ, ಸಂಸ್ಕೃತಿ, ಹರಿಜನ - ಆದಿವಾಸಿ ಸೇವೆ, ರಾಜಕಾರಣ, ಪರಿಸರ ಸಂರಕ್ಷಣೆ, ಮಹಿಳೆ, ಯುವಜನ, ಮಕ್ಕಳು, ನಿವೃತ್ತ ಸೈನಿಕರು - ಹೀಗೆ 'ಸೇವೆ'ಗಾಗಿ ಇದು ತೊಡಗಿಸಿಕೊಳ್ಳದ ಕ್ಷೇತ್ರವೇ ಇಲ್ಲ. ಎಲ್ಲ ಕಡೆ ಈ ಸೇವೆಯ ತೆರೆಮರೆಯಲ್ಲಿ ನಡೆಯುತ್ತಿರುವುದು ಅಪಾರ ಹಣ ಸಂಗ್ರಹ, ಸೇನೀಕೃತ ಸಂಘಟನೆ ಮತ್ತು ಹಿಂದೂಕರಣವೆಂಬ ಹೆಸರಿನ ಪುರೋಹಿತೀಕರಣ. ಅತಿ ಸಂಪ್ರದಾಯವಾದದಿಂದ ಹಿಡಿದು ಅತಿಸುಧಾರಣಾವಾದದವರೆಗೆ ಹಲವು ನಾಲಿಗೆಗಳಲ್ಲಿ ಮಾತಾಡುತ್ತಾ ಎಲ್ಲ ತರದ ಜನರನ್ನು ಆಕರ್ಷಿಸುವ ತಂತ್ರವನ್ನು ಕರಗತ ಮಾಡಿಕೊಂಡಿರುವ ಈ ಪರಿವಾರ, ತನ್ನ ನಿಜ ಮುಖವನ್ನು ತೋರಿಸುವುದು ಅಧಿಕಾರಕ್ಕೆ ಬಂದಾಗ ಮಾತ್ರ! ಇದರ ಮಾದರಿಗಳನ್ನು ಇವರು ಸ್ವತಂತ್ರವಾಗಿ ಅಧಿಕಾರಕ್ಕೆ ಬರದಿದ್ದರೂ ನಡೆಸಿದ ಎನ್ಡಿಎ ಮತ್ತು ಈಗಿನ ನಮ್ಮ ಯಡಿಯೂರಪ್ಪ ಸರ್ಕಾರಗಳ ಅವಧಿಯಲ್ಲಿ ಈಗಾಗಲೇ ಕಂಡಿದ್ದೇವೆ ಮತ್ತು ಕಾಣುತ್ತಿದ್ದೇವೆ. ಸಂವಿಧಾನದ ಪರಿಷ್ಕರಣೆಯ ಪ್ರಯತ್ನ, ಇತಿಹಾಸ ಪುಸ್ತಕಗಳಲ್ಲಿ ನಿರ್ಣಾಯಕ ಬದಲಾವಣೆಗಳು, ದ್ವೇಷಪೂರಿತ ಪಠ್ಯಪುಸ್ತಕಗಳು, ವಿವಿಧ ಆಕರ್ಷಣೆ ಮತ್ತು ಆಮಿಷಗಳ ಮೂಲಕ ಸಮಾಜದ ಜಾತೀಕರಣ, ದೇವಸ್ಥಾನೀಕರಣ, ಪುರೋಹಿತರ ಮತ್ತು ಮಠಾಧಿಪತಿಗಳ ಮೇಲಾಟ ಇತ್ಯಾದಿ. ಇವೆಲ್ಲವೂ ಈವರೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಯೋಗದ ಮೂಲಕ ಎದ್ದೋ ಬಿದ್ದೋ, ಅಷ್ಟೋ ಇಷ್ಟೋ ಸಾಧಿಸಲಾಗಿರುವ ವೈಚಾರಿಕತೆ, ವೈಜ್ಞಾನಿಕತೆ ಮತ್ತು ಸಮಾನತೆಗಳ ಮಾರಣಹೋಮಕ್ಕೆ ದಾರಿ ಮಾಡಿಕೊಡಬಲ್ಲವಷ್ಟೆ.

ಇವರಿಗೆ ಬಿಜೆಪಿ ಎಂಬ ರಾಜಕೀಯ ಪಕ್ಷವಿದ್ದರೂ, ತಮ್ಮ ಕೆಲಸಗಳಿಗಾಗಿ ಪಕ್ಷಬೇಧವಿಲ್ಲದೆ ಎಲ್ಲ ಕಡೆ ನುಸುಳಬಲ್ಲರು. ಬಿಜೆಪಿ ಅಧಿಕಾರವಿದ್ದಾಗಲಂತೂ ಸರ್ಕಾರಿ ಯಂತ್ರದ ಎಲ್ಲ ಭಾಗಗಳಲ್ಲೂ ನುಸುಳುವುದೇ ಇವರ ಪ್ರಮುಖ ಕೆಲಸ. ಇದನ್ನು ಅವರು ಧರ್ಮದ ಕೆಲಸವೆಂದೇ ಮಾಡುವುದರಿಂದ ಅವರಿಗೆ ಅಕ್ರಮ - ಸಕ್ರಮಗಳ ಪರಿವೆಯೇ ಇರುವುದಿಲ್ಲ! ಆದರೆ ಇದರ ದೊಡ್ಡ ಅಪಾಯವೆಂದರೆ, ಈ ಜನ ತಾವು ಹಿಂದೂ ತತ್ವವೆಂದು ನಂಬಿರುವ ಮೌಲ್ಯವೇ ಸಂವಿಧಾನಕ್ಕಿಂತ ದೊಡ್ಡದು ಮತ್ತು ಪವಿತ್ರ ಎಂದು ಭಾವಿಸಿವುದು! ಹಾಗೆ ನೋಡಿದರೆ ಇವರು ಮುಸ್ಲಿಂ ಮೂಲಭೂತವಾದದ ಇನ್ನೊಂದು ಮುಖವೇ ಹೌದು. ಮುಸ್ಲಿಂ ಮೂಲಭೂತವಾದಿಗಳ ಬಗೆಗೇ ಸದಾ ಚಿಂತಿಸುತ್ತಾ, ಸದಾ ಅವರನ್ನೇ ದಿಟ್ಟಿಸಿ ನೋಡುತ್ತಾ, ಅವರಂತೆಯೇ ಆದವರಿವರು! ಅವರಿಗೆ 'ಷರಿಯತ್' ಸಂವಿಧಾನವಾಗಬೇಕಿದ್ದರೆ, ಇವರಿಗೆ ಮನುಸ್ಮೃತಿಯೋ ಭಗವದ್ಗೀತೆಯೋ ಅಥವಾ ಇಂಥ 'ಪುಣ್ಯ' ಗ್ರಂಥಗಳನ್ನಾಧರಿಸಿ ಇವರ 'ಗುರೂಜಿ'ಗಳು ಬರೆದಿರುವ 'ಹಿಂದೂ ಸಂಹಿತೆ'ಯೋ ಸಂವಿಧಾನವಾಗಬೇಕು! ಇಂತಹ 'ಸಂಹಿತೆ'ಯ ತುಂಬಾ ತುಂಬಿರುವುದು ಅಸಹನೆ, ದ್ವೇಷ, ಹಿಂಸೆ, ಭಯಗಳನ್ನಾಧರಿಸಿದ ಶಿಸ್ತು ಹಾಗೂ ಸಾಮಾಜಿಕ ವ್ಯವಸ್ಥೆಯ ಕಲ್ಪನೆಗಳು ಮತ್ತು ಮಧ್ಯಯುಗೀನ ನಂಬಿಕೆ ಹಾಗೂ ಆಚರಣೆಗಳನ್ನು ಆಧರಿಸಿದ ಜನತೆಯ ಶ್ರೇಣೀಕರಣ.

ಈಗಿರುವ ವ್ಯವಸ್ಥೆ ಕೆಟ್ಟದು, ಬುದ್ಧನ 'ಕರುಣೆ'ಯ ಉಪದೇಶಗಳನ್ನು ಕೇಳಿ ಹೇಡಿಗಳಾದ ಹಿಂದೂಗಳು ಪರಕೀಯರ ದಾಳಿಗೀಡಾದ ಕಾರಣಗಳಿಂದಾಗಿ ಸೃಷ್ಟಿಯಾಗಿರುವ ಈ ಕೆಟ್ಟ ವ್ಯವಸ್ಥೆಗೆ, ಹಿಂದೂಗಳ ಸ್ವಾಭಿಮಾನ ಸ್ಫೋಟವೇ ಉತ್ತರ. ಇಂತಹ ಬಹು ಜಡ, ಸ್ಥೂಲ, ಸರಳೀಕೃತ ಮತ್ತು ದುರುದ್ದೇಶಪೂರಿತ ಪ್ರಚಾರ ಕಾರ್ಯಕ್ರಮ ಸಹಜವಾಗಿಯೇ ಅಮಾಯಕರನ್ನು, ಈ ವ್ಯವಸ್ಥೆಯಿಂದ ನೊಂದು ದಿಕ್ಕೇ ತೋಚದಾಗಿರುವವರನ್ನು ಸುಲಭವಾಗಿ ಸೆಳೆಯುತ್ತದೆ. ಸಂಘ ಪರಿವಾರ ತಾನು 'ಸೇವೆ' ಸಲ್ಲಿಸುತ್ತಿರುವ ಎಲ್ಲ ಕ್ಷೇತ್ರಗಳಲ್ಲಿ ಮಾಡುತ್ತಿರುವುದೇ ಈ ಪ್ರಚಾರ ಕಾರ್ಯಕ್ರಮವನ್ನು. ಸರ್ಕಾರಿ ಯಂತ್ರದೊಳಕ್ಕೆ ನುಸುಳಿ ಮಾಡುವುದೂ, ಇದೇ ಕೆಲಸವನ್ನು. ಇಂದು ನಮ್ಮ ಕಾರ್ಯಾಂಗ, ಶಾಸಕಾಂಗ ಮತ್ತು ಸ್ವಲ್ಪ ಮಟ್ಟಿಗೆ ನ್ಯಾಯಾಂಗವೂ ಇಂತಹ ಪ್ರಚಾರ ಕಾರ್ಯಕ್ರಮದ ಸುಳಿಗೆ ಸಿಕ್ಕಿ, ನಮ್ಮ ರಾಷ್ಟ್ರೀಯ ಧರ್ಮವೆನಿಸಿದ ಮತ - ನಿರಪೇಕ್ಷ ಕರ್ತವ್ಯ ಪಾಲನಾ ನೀತಿಗೆ ಚ್ಯುತಿ ತಂದುಕೊಂಡಿರುವುದನ್ನು ನಾವು ಹಲವಾರು ಬಾರಿ ಗಮನಿಸಿದ್ದೇವೆ. ಕೋಮು ಗಲಭೆಗಳನ್ನು ನಿರ್ವಹಿಸಲು ಕೆಲವು ವರ್ಷಗಳ ಹಿಂದೆಯೇ ಪೋಲೀಸರಿಗೆ ಬದಲಾಗಿ, ವಿಶೇಷ ದಳವನ್ನು ನಿರ್ಮಿಸಬೇಕಾದ ಪರಿಸ್ಥಿತಿ ಉಂಟಾದುದೂ ಇದೇ ಕಾರಣದಿಂದಲೇ. ಸಂಘ ಪರಿವಾರದ ಪ್ರಭಾವಕ್ಕೆ ಸಿಕ್ಕಿರುವ ರಾಜ್ಯಗಳ ಪೋಲೀಸ್ ದಳಗಳಂತೂ ಅಲ್ಪಸಂಖ್ಯಾತರ ಪಾಲಿಗೆ ಶತ್ರುಪಡೆಗಳೇ ಆಗಿಬಿಟ್ಟಿವೆ. ಮೊನ್ನೆ ಒರಿಸ್ಸಾದ ಕಂಧಮಹಲ್ನಲ್ಲಿ ಮತ್ತು ನಮ್ಮ ದಕ್ಷಿಣ ಕನ್ನಡದಲ್ಲಿ ನಡೆದ ಮತಾಂತರ ಗಲಭೆಗಳಲ್ಲಿ ಇದರ ಪರಿಣಾಮಗಳನ್ನು ಕಣ್ಣಾರೆ ನೋಡಿದ್ದೇವೆ.

ಇದು ನೇರವಾಗಿ ನಡೆಯುವ ಕೆಲಸವಲ್ಲ. ಒಂದು ವಾತಾವರಣವನ್ನು ನಿರ್ಮಿಸಿ ಅಮಾಯಕವಾಗಿ ಮಾಡಿಸಲಾಗುವ ಕೆಲಸ. ಇದನ್ನು ಆಗು ಮಾಡಿಸುವಲ್ಲಿ ನಮ್ಮ ಮತ - ನಿರಪೇಕ್ಷವೆಂದು ಹೇಳಿಕೊಳ್ಳುವ ಸಂಘಟನೆಗಳ ಮತ್ತು ರಾಜಕೀಯ ಪಕ್ಷಗಳ ಅಸ್ಥಿರ ಮತ್ತು ಅಪ್ರಾಮಾಣಿಕ ನೀತಿ - ನಿರ್ಧಾರಗಳೂ ದೊಡ್ಡ ಪಾತ್ರ ವಹಿಸಿವೆ ಎಂಬುದೂ ನಿಜ. ಉದಾಹರಣೆಗೆ 2006ರಲ್ಲಿ ನಾಂದೇಡ್ನಲ್ಲಿ ಆರ್.ಎಸ್.ಎಸ್. ಅಭಿಮಾನಿಯೊಬ್ಬನ ಮನೆಯಲ್ಲಿ ಸಂಭವಿಸಿದ ಅಕಾಲಿಕ ಬಾಂಬ್ ಸ್ಫೋಟದಲ್ಲಿ ಸಂಘ ಪರಿವಾರದ ಇಬ್ಬರು ಸದಸ್ಯರು ಸತ್ತು, ಸ್ಫೋಟದ ಸ್ಥಳದಲ್ಲಿ ಮುಸ್ಲಿಮರ ಕೃತಕ ಗಡ್ಡ, ಟೋಪಿಗಳು ಇತ್ಯಾದಿ ಸಿಕ್ಕಿದಾಗಲೇ ಅದರ ತನಿಖೆ ಆರಂಭಿಸಿದ್ದರೆ, ಈ ಹಿಂದೂ ಗುಂಪಿನ ಭಯೋತ್ಪಾದನೆಯನ್ನು ಆರಂಭದಲ್ಲೇ ಚಿವುಟಿ ಹಾಕಬಹುದಿತ್ತು. ಆದರೆ ಆಗ ವಿಚಾರಣೆಯನ್ನು ಅರ್ಧಕ್ಕೆ ಕೈಬಿಟ್ಟು, ಈಗ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಹೊತ್ತಿಗೆ ಇದ್ದಕ್ಕಿದ್ದಂತೆ ಈ ತನಿಖೆಯನ್ನು ಚುರುಕುಗೊಳಿಸುವುದರ ಅರ್ಥವಾದರೂ ಏನು? ಅಲ್ಲದೆ ನಾಶಿಕ್ ಮತ್ತು ಪುಣೆಗಳಲ್ಲಿ ಕೆಲವು ನಿವೃತ್ತ ಸೇನಾಧಿಕಾರಿಗಳು ಮತೀಯ ಪ್ರಚೋದನೆಗಳ ಆಧಾರದ ಮೇಲೆ ಖಾಸಗಿ ಮಿಲಿಟರಿ ತರಬೇತಿ ಶಾಲೆಗಳನ್ನು ನಡೆಸುತ್ತಿದ್ದುದನ್ನೂ ಈವರೆಗೆ ಏಕೆ ಗಮನಿಸಲಾಗಿರಲಿಲ್ಲ? ಈ ಶಾಲೆಗಳೇ ಇಂದು ಮಧ್ಯ ಭಾರತದಲ್ಲಿ ಭಯೋತ್ಪಾದನೆಯ ಹಿಂದೂ ಗುಂಪುಗಳು ಹುಟ್ಟಿಕೊಳ್ಳಲು ಭೂಮಿಯನ್ನು ಫಲವತ್ತಾಗಿಸುತ್ತಿರುವುದು.

ಸಂಘ ಪರಿವಾರ ಎಲ್ಲ ಕಡೆ ಮತ್ತು ಎಲ್ಲ ನೆಲೆಗಳಲ್ಲಿ ನಿರ್ಮಿಸಿರುವ ಹಿಂದೂವಾದಿ ವಾತಾವರಣ ಇಂದು ಎಲ್ಲ ಪಕ್ಷಗಳನ್ನೂ ಧೃತಿಗೆಡಿಸಿದೆ. ಅವುಗಳ ಮತ - ನಿರಪೇಕ್ಷ ನೀತಿ ಬದ್ಧತೆಯನ್ನು ಬುಡಮಟ್ಟ ಅಲ್ಲಾಡಿಸಿವೆ. ತಮ್ಮ ತಳ ಮುಟ್ಟಿದ ಭ್ರಷ್ಟತೆಯಿಂದಾಗಿ ವೈಚಾರಿಕವಾಗಿ ದಿವಾಳಿಯೆದ್ದು ಹೋಗಿರುವ ಈ ಪಕ್ಷಗಳು, ಈಗ ತಾವೂ ಸ್ವಲ್ಪ ಹಿಂದೂವಾದವನ್ನು ಬಳಸಿ ರಾಜಕೀಯ ಉಸಿರು ಗಳಿಸುವ ದುಃಸ್ಥಿತಿಗೆ ಈಡಾಗಿವೆ. ಹಾಗಾಗಿಯೇ, ಕೆಲವು ದಿನಗಳ ಹಿಂದೆ ದೆಹಲಿ ವಿಶ್ವವಿದ್ಯಾಲಯದಲ್ಲಿ ನಡೆದ ವಿಚಾರ ಸಂಕಿರಣವೊಂದರ ಸಂದರ್ಭದಲ್ಲಿ ಎಬಿವಿಪಿಯ ಕಾರ್ಯಕರ್ತನೊಬ್ಬ ಸಂಸತ್ ಮೇಲಿನ ದಾಳಿ ಪ್ರಕರಣದಲ್ಲಿ ನಮ್ಮ ಸರ್ವೋಚ್ಛ ನ್ಯಾಯಾಲಯದಿಂದಲೇ ನಿರಪರಾಧಿ ಎಂದು ಘೋಷಿತರಾಗಿರುವ ಪ್ರೊ|| ಎಸ್.ಆರ್. ಗಿಲಾನಿ ಅವರ ಮುಖದ ಮೇಲೆ ಉಗುಳಿದ ಅಸಭ್ಯ ಮತ್ತು ಧಾಷ್ಟ್ರ್ಯದ ವರ್ತನೆ ನಮ್ಮ ಯಾವ ರಾಜಕೀಯ ಪಕ್ಷಗಳಲ್ಲೂ ಆತಂಕ ಮತ್ತು ಪ್ರತಿಭಟನೆಯನ್ನು ಹುಟ್ಟಿಸದಂತಾಗಿದೆ! ಇದೇ ಸಂಘ ಪರಿವಾರದ ಅತಿ ದೊಡ್ಡ ರಾಜಕೀಯ ಸಾಧನೆ ಮತ್ತು ರಾಷ್ಟ್ರದ ಮುಂದೆ ಒಡ್ಡಿರುವ ಅತಿ ದೊಡ್ಡ ಅಪಾಯ. ಹಿಂದೂ ಗುಂಪಿನ ಭಯೋತ್ಪಾದನೆಯ ಆರೋಪ ಇನ್ನೂ ಸಾಬೀತಾಗಿಲ್ಲದಿರುವಾಗ ಈ ಆತಂಕ ಅನಗತ್ಯ ಎಂದು ಕೆಲವರು ವಾದಿಸಬಹುದು. ಆದರೆ ಮುಸ್ಲಿಂ ಭಯೋತ್ಪಾದನೆಯ ಬಹಳಷ್ಟು ಪ್ರಕರಣಗಳು ಸಾಬೀತಾಗಿಲ್ಲ ಎಂದು ಇವರಿಗೆ ಹೇಳಬೇಕಾಗಿದೆ. ಮುಸ್ಲಿಂ ಭಯೋತ್ಪಾದನೆಗೆ ಹೊಣೆ ಘೋಷಿಸಿಕೊಳ್ಳುವ ಗುಂಪುಗಳಾದರೂ ಇವೆ. ಆದರೆ ಈ ಹಿಂದೂ ಭಯೋತ್ಪಾದಕ ಗುಂಪುಗಳು ಆ ಹೊಣೆಯನ್ನೂ ಘೋಷಿಸಿಕೊಳ್ಳದಷ್ಟು ಹೇಡಿಗಳಾಗಿವೆ. ಆದರೂ ಅವುಗಳ ವಕ್ತಾರರ ವೀರಾವೇಶ ಹೇಳತೀರದು!

ಇಂತಹ ಸಮಯದಲ್ಲಿ, ನಮ್ಮ ಅತಿ ದೊಡ್ಡ ಮತ - ನಿರಪೇಕ್ಷ ರಾಜಕೀಯ ಪಕ್ಷವೆಂದೂ, ನಮ್ಮ ರಾಷ್ಟ್ರೀಯ ಹೋರಾಟದ ಪರಂಪರೆಯ ವಾರಸುದಾರನೂ ಎಂದು ಹೇಳಲಾಗುವ ಕಾಂಗ್ರೆಸ್ ಇಂದು ಮನಮೋಹನ ಸಿಂಗ್ ಎಂಬ ಸಂಪೂರ್ಣ ಅರಾಜಕೀಯ ವ್ಯಕ್ತಿಯ ಮತ್ತು ಸೋನಿಯಾ ಗಾಂಧಿ ಎಂಬ ರಾಷ್ಟ್ರೀಯ ಪರಂಪರೆಯ ಸ್ಮೃತಿಯಾಗಲೀ, ರಾಜಕೀಯ ಪ್ರಬುದ್ಧತೆಯಾಗಲೀ ಇಲ್ಲದ ವಿದೇಶಿ ಮಹಿಳೆಯ ನಾಯಕತ್ವಕ್ಕೆ ಸಿಕ್ಕಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಆತಂಕಕಾರಿಗೊಳಿಸಿದೆ. ಆದರೂ, ಸೇನೆಯೊಳಕ್ಕೆ ತನ್ನ ವಿಚ್ಛಿಧ್ರಕಾರಿ ಸಿದ್ಧಾಂತವನ್ನು ನುಸುಳಿಸಲು ಹಿಂದೂ ಮೂಲಭೂತವಾದಿಗಳು ಪ್ರಯತ್ನಗಳನ್ನು ನಡೆಸುತ್ತಿರುವ ಈ ಹೊತ್ತಿನಲ್ಲಿ ಬಿಜೆಪಿಯ ಉನ್ನತ ನಾಯಕತ್ವವೂ ಸೇರಿದಂತೆ ರಾಷ್ಟ್ರದ ಎಲ್ಲ ರಾಜಕೀಯ ಪಕ್ಷಗಳೂ ಈ ಸಂಬಂಧ ಎಲ್ಲ ರಾಜಕೀಯ ಭಿನ್ನಾಭಿಪ್ರಾಯಗಳನ್ನು ತೊರೆದು, ಇಂತಹ ಪ್ರಯತ್ನಗಳನ್ನು; ಮತ್ತೂ ಮುಖ್ಯವಾಗಿ, ಅದರ ಸಮರ್ಥನೆಯನ್ನು ರಾಷ್ಟ್ರಘಾತುಕ ಎಂದು ಸ್ಪಷ್ಟ ಶಬ್ದಗಳಲ್ಲಿ ಖಂಡಿಸಬೇಕಿದೆ.

ಮುಸ್ಲಿಂ ಭಯೋತ್ಪಾದನೆಯೂ ಸೇರಿದಂತೆ ಹಲವು ರೀತಿಯ ಹಿಂಸಾಚಾರಗಳಿಗೆ ಸಿಕ್ಕಿ ತತ್ತರಿಸುತ್ತಿರುವ ನಮ್ಮ ರಾಷ್ಟ್ರ, ಇನ್ನು ಪ್ರತೀಕಾರದ ಹಿಂದೂ ಭಯೋತ್ಪಾದನೆಗೆ ಸಿಕ್ಕರೆ ಮುಗಿದಂತೆಯೇ. ಹೀಗೆಯೇ ಹಲವು ರೀತಿಯ ಹಿಂಸಾಚಾರಗಳಿಗೆ ಸಿಕ್ಕ ಪಾಕಿಸ್ಥಾನವನ್ನು ವಿಫಲ ರಾಷ್ಟ್ರ (Failed State) ಎಂದು ಕರೆಯತೊಡಗಿದ್ದ ನಾವು ಈಗ ಹಿಂದೂ ಭಯೋತ್ಪಾದನೆಯನ್ನು ಸಮರ್ಥಿಸತೊಡಗಿದರೆ ಮುಟ್ಟುವುದಾದರೂ ಎಲ್ಲಿಗೆ? ತಮ್ಮನ್ನು ಮತ - ನಿರಪೇಕ್ಷವೆಂದು ಕರೆದುಕೊಳ್ಳುವ ರಾಜಕೀಯ ಪಕ್ಷಗಳು ತಮ್ಮ ಈವರೆಗಿನ ಪಾಪಗಳ ಪರಿಹಾರಾರ್ಥವಾಗಿಯಾದರೂ; ತಾತ್ಕಾಲಿಕ ಚುನಾವಣಾ ಸೋಲುಗಳನ್ನು ಅನುಭವಿಸಿದರೂ ಸರಿ, ದೀರ್ಘಕಾಲಿಕ ರಾಷ್ಟ್ರ ಹಿತದ ದೃಷ್ಟಿಯಿಂದ ತಮ್ಮ ಮತ - ನಿರಪೇಕ್ಷ ನೀತಿಯನ್ನು ದಿಟ್ಟವಾಗಿ, ಸ್ಪಷ್ಟವಾಗಿ, ಅಸಂದಿಗ್ಧವಾಗಿ ಎತ್ತಿ ಹಿಡಿಯುವುದು ಅತ್ಯಗತ್ಯವಾಗಿದೆ. ಅವುಗಳಿಗೆ ತಮ್ಮನ್ನು ತಾತ್ವಿಕವಾಗಿ ಶುದ್ಧೀಕರಿಸಿಕೊಳ್ಳಲೇಬೇಕಾದ ಕಾಲವೀಗ ಬಂದಿದೆ.

ನಿಜವಾಗಿಯೂ ಇದು ನಮ್ಮ ಎಲ್ಲ ರಾಜಕೀಯ ಪಕ್ಷಗಳ ಅಗ್ನಿ ಪರೀಕ್ಷೆಯ ಕಾಲ. ಹಾಗೆ ನೋಡಿದರೆ ಇದು ರಾಷ್ಟ್ರಕ್ಕೇ ಅಗ್ನಿ ಪರೀಕ್ಷೆಯ ಕಾಲ