ಈ ವಿಶಿಷ್ಟ ಬಾವಲಿಯ ಬಗ್ಗೆ ಗೊತ್ತೆ?

ಈ ವಿಶಿಷ್ಟ ಬಾವಲಿಯ ಬಗ್ಗೆ ಗೊತ್ತೆ?

ಬರಹ

ಬಾವಲಿಗಳಲ್ಲಿ ೯೦೦ ಪ್ರಜಾತಿಗಳು. ಅವುಗಳಲ್ಲಿ ಬಹುತೇಕ ೬೦೦ ಈಗಾಗಲೇ ನಾಶವಾಗಿವೆ. ೨೫೦ ಪ್ರಜಾತಿಯ ಬಾವಲಿಗಳು ವಿಲುಪ್ತಿಯ ಅಂಚಿನಲ್ಲಿವೆ. ಸುಮಾರು ೫೦ ಜಾತಿಯ ಬಾವಲಿಗಳು ಸದ್ಯ ಕ್ವಚಿತ್ತಾಗಿ ಅಲ್ಲಲ್ಲಿ ಕಂಡು ಬರುತ್ತವೆ. ವಿಲುಪ್ತಿಯ ಅಂಚಿನಲ್ಲಿರುವ ೨೫೦ರ ಪೈಕಿ ಹಾಗು ಬಹುತೇಕ ಸಂತತಿಯೇ ನಾಶಗೊಂಡಿದೆ ಎಂದು ಪ್ರಾಣಿ ಶಾಸ್ತ್ರಜ್ನರು ನಂಬಿದ್ದ ವಿಶ್ವದ ಅತ್ಯಂತ ಅಪರೂಪದ ಬಾವಲಿಯನ್ನು ಇತ್ತೀಚೆಗೆ (೨೦೦೬-೦೭) ಪತ್ತೆ ಹಚ್ಚಲಾಗಿದೆ. ಸದ್ಯ ಆ ಬಾವಲಿಯ ಆಹಾರ, ವಿಹಾರ, ಸಂತತಿ ಹಾಗು ಜೀವನ ಪದ್ಧತಿ ಕುರಿತು ಹೊಸ ಆಲೋಚನೆಗಳು, ಸಂಶೋಧನೆಗಳು ನಡೆದಿವೆ.

ರೋಟನ್ಸ್ ಫ್ರೀ ಟೇಲ್ಡ್ ಬ್ಯಾಟ್ (Wroughton's Free Tiled Bat) ಎಂಬ ಹೆಸರಿನ ಈ ಬಾವಲಿಯ ವೈಜ್ನಾನಿಕ ಹೆಸರು (Otomops Wroughtoni). ಬಾಲವಿಲ್ಲದ ಈ ತೊಗಲು ಬಾವಲಿಯು ಪಶ್ಚಿಮ ಘಟ್ಟದ ವಿವಿಧೆಡೆ ಚಾರಣಿಗರಿಗೆ ಕಾಣಸಿಕ್ಕಿರುವುದು ನಮ್ಮ ಭಾರತೀಯ ಪ್ರಾಣಿ ಶಾಸ್ತ್ರಜ್ನರಿಗೆ ಸಂಶೋಧನೆಯ ಹೊಸ ಅವಕಾಶಗಳನ್ನು ಹಾಗು ಹೊಸ ಓದಿನ ಅವಕಾಶ ಕಲ್ಪಿಸಿದೆ.

ಧಾರವಾಡದ ಪರಿಸರವಾದಿ, ಪಕ್ಷಿ ವೀಕ್ಷಕ ಪ್ರೊ.ಗಂಗಾಧರ ಕಲ್ಲೂರ ಹಾಗು ರಾಜ್ಯ ವಾರ್ತಾ ಇಲಾಖೆಯಲ್ಲಿ ವಾರ್ತಾ ಸಹಾಯಕರಾಗಿ ಸದ್ಯ ಬಿಜಾಪುರದಲ್ಲಿರುವ ಮಿತ್ರ ಮಂಜುನಾಥ ಸುಳ್ಳೋಳ್ಳಿ ನೇತೃತ್ವದ ಚಾರಣಿಗರ ತಂಡ ಹಾಗು ಸೆಂಟರ್ ಫಾರ್ ಗ್ರೀನ್ ಅರ್ಥ್ ಸಂಸ್ಥೆಯ ಹವ್ಯಾಸಿ ಚಾರಣಿಗರು ಉತ್ತರ ಕನ್ನಡ ಜಿಲ್ಲೆ ಹಾಗು ಗೋವಾ ಗಡಿ ಪ್ರದೇಶಗಳಲ್ಲಿ ಈ ಅಪರೂಪದ ಬಾವಲಿ ಪತ್ತೆ ಹಚ್ಚಿದ್ದಾರೆ. ನಮ್ಮ ಗಂಧದ ಬೀಡು ಕರ್ನಾಟಕದಲ್ಲಿ ಜೀವಿ ವೈವಿಧ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡವರಿಗೆ ಇದು ಭೂರಿ ಭೋಜನದಷ್ಟೇ ಸೊಗಸಾಗಿ ಪರಿಣಮಿಸಿದೆ.

ಈ ಬಾವಲಿಯ ಬಗ್ಗೆ ನನ್ನಲ್ಲಿ ಆಸಕ್ತಿ ಹಾಗು ಕುತೂಹಲ ಮೂಡಿಸುವಲ್ಲಿ ವಿಶೇಷ ಶ್ರಮಪಟ್ಟವರು ಚಾರಣಿಗರಾದ ಪ್ರೊ.ಗಂಗಾಧರ ಕಲ್ಲೂರ್ ಹಾಗು ಶ್ರೀ ಮಂಜುನಾಥ ಸುಳ್ಳೊಳ್ಳಿ. ಸಂಪದಿಗರಿಗಾಗಿ ಇಲ್ಲಿ ಈ ಲೇಖನ ಹೆಣೆಯುವಾಗ ಅವರನ್ನು ನಾನು ಕೃತಜ್ನತೆಯಿಂದ ನೆನೆಯಬೇಕು.

ವಿಚಿತ್ರ ರೂಪ (ವಿಕಾರ)ದ ಈ ಬಾವಲಿ ನಶಿಸಿದೆ ಎಂದೇ ನಂಬಲಾಗಿತ್ತು. ಇಡಿ ಏಷ್ಯಾ ಖಂಡದಲ್ಲಿಯೇ ಕರ್ನಾಟಕದ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ತಳೆವಾಡಿ ಸಮೀಪದ ಬಾರಾಪೇಡಿ ಗುಹೆಯಲ್ಲಿ ಮಾತ್ರ ಅದನ್ನು ಕಾಣಬಹುದು ಎಂದು ಸಂಶೋಧನೆಗಳ ಮೂಲಕ ತಿಳಿದು ಬಂದಿತ್ತು. ಆದರೆ ಇತ್ತೀಚೆಗೆ ಅಲ್ಲಿಯೂ ಇವುಗಳ ಸುಳಿವು ಸಿಗದೇ ಆಸಕ್ತರಲ್ಲಿ ತೀವ್ರ ನಿರಾಸೆ ಮೂಡಿಸಿತ್ತು. ಮಾಧ್ಯಮಗಳಲ್ಲಿ ಕಳೆದಾ ಹಲವು ದಶಕಗಳಲ್ಲಿ ಬಾವಲಿಗಳ ಕುರಿತು ಈ ರೀತಿಯ ಹಲವಾರು ವರದಿಗಳು ಪ್ರಕಟಗೊಂಡಿದ್ದರಿಂದ ಬಾರಾಪೇಡಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರಾಣಿ ಶಾಸ್ತ್ರಜ್ನರ ಗಮನ ಸೆಳೆಯುಲ್ಲಿ ಯಶಸ್ವಿಯಾಗಿತ್ತು.

International Union For Consrvation Of Natural Resources ಹಾಗು Natural History Society, Mumbai ಬಹಳ ವರ್ಷಗಳ ಹಿಂದೆಯೇ ಈ ಅಪರೂಪದ ಬಾವಲಿಗಳ ಬಗ್ಗೆ ದಾಖಲಿಸಿಕೊಂಡಿದ್ದು, ಅವುಗಳ ಸಂರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ವಿಶ್ವಸಂಸ್ಥೆಗೆ ಶಿಫಾರಸು ಮಾಡಿತ್ತು. ಬಾರಾಪೇಡಿ ಹಾಗು ಭೀಮಗಡ ಅರಣ್ಯ ಪ್ರದೇಶಗಳಲ್ಲಿ ಈ ಬಾವಲಿಗಳ ಅಸ್ತಿತ್ವಕ್ಕೆ ಧಕ್ಕೆ ಅಥವಾ ಪೀಳಿಗೆಗೆ ದೂರಗಾಮಿ ಪರಿಣಾಮ ಅನುಲಕ್ಷಿಸಿ ಈ ಪ್ರದೇಶಗಳಲ್ಲಿ ಅಭಿವೃದ್ಧಿ ಕೆಲಸಗಳಿಗೆ ಪರಿಸರ ಸಂರಕ್ಷಣಾ ಸಮಿತಿಗಳು, ಸಂಸ್ಥೆಗಳ ತಡೆಯೊಡ್ಡಿದವು. ಈ ಸಂಪೂರ್ಣ ಪ್ರದೇಶವನ್ನು ಸಂರಕ್ಷಿತ ಅಭಯಾರಣ್ಯವನ್ನಾಗಿಸಿ ಘೋಷಿಸುವಂತೆ ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದವು.

ಆದರೆ ಈ ಬಾವಲಿಗಳು ಈ ಪ್ರದೇಶದಾಚೆಗೆ ಸಹ ಹರಡಿಕೊಂಡಿವೆ. ಪಶ್ಚಿಮ ಘಟ್ಟಗಳ ಗೊಂಡಾರಣ್ಯದಲ್ಲಿ ಮಾನವರ ಸಂಪರ್ಕವಿರದ ಹಲವಾರು ಗುಹೆಗಳಲ್ಲಿ ಈ ಬಾವಲಿಯನ್ನು ಕಾಣಬಹುದು ಎಂದು ಅಭಿಪ್ರಾಯ ಪಡುತ್ತಾರೆ ಪ್ರೊ.ಗಂಗಧರ ಕಲ್ಲೂರ್. ಅರಣ್ಯ ಇಲಾಖೆ ಈ ನಿಟ್ಟಿನಲ್ಲಿ ಸಂಶೋಧನೆ ಕೈಗೊಳ್ಳುವುದು ಸೂಕ್ತ. ಹೊಸ ಹೊಸ ಅನ್ವೇಷಣೆಗಳಿಗೂ ಇದು ನಾಂದಿ ಹಾಡಬಹುದು ಎಂಬ ವಿಶ್ವಾಸ ಅವರದು.

ಸದ್ಯ ದಾಂಡೇಲಿಯ ಕುಳಗಿ ಸಂರಕ್ಷಿತ ಅರಣ್ಯ ಹಾಗು ಪರಿಸರ ತರಬೇತಿ ಕೇಂದ್ರದ ನಾಗಝರಿ ಕೊಳ್ಳ ಪ್ರದೇಶದಲ್ಲಿ ಈ ರೋಟನ್ಸ್ ಫ್ರೀ ಟೇಲ್ಡ್ ಬ್ಯಾಟ್ ಕಂಡಿದ್ದು, ನಾಲ್ಕು ವರ್ಷಗಳ ಹಿಂದೆ ಉಳವಿ, ಅನಮೋಡ ಘಾಟ್ ಹಾಗು ಕ್ಯಾಸಲರಾಕ್ ಅರಣ್ಯ ಪ್ರದೇಶದಲ್ಲಿ ಈ ಪ್ರಜಾತಿಯ ಬಾವಲಿಗಳು ಕಂಡಿವೆ. ನಿಶಾಚರಿಗಳಾದ ಈ ಬಾವಲಿಗಳು ಪಶ್ಚಿಮ ಘಟ್ಟಗಳಲ್ಲಿರುವ ಅಸಂಖ್ಯಾತ ವೃಕ್ಷಗಳ ಬೀಜಗಳನ್ನು ಸಾಗಿಸಿ ವೃಕ್ಷಗಳ ವಂಶಾಭಿವೃದ್ಧಿಗೆ ಉಪಕಾರಿಯಾಗಿವೆ.