"ಉಚಿತವಾಗಿ ಕೊಡುವವರಿಗೆ ಬುದ್ದಿ ಇಲ್ಲ. ತೆಗೆದುಕೊಳ್ಳುವವರಿಗೆ ನಾಚಿಕೆ ಇಲ್ಲ......."
ಇದು ರಾಮಕೃಷ್ಣಾಶ್ರಮದ ನಿರ್ಭಯಾನಂದ ಸ್ವಾಮೀಜಿಯವರ ಹೇಳಿಕೆ. ರಾಮಕೃಷ್ಣ ಮಿಷನ್ ಸ್ಥಾಪಿಸಿದ ಭಾರತದ ಸಾಂಸ್ಕೃತಿಕ ರಾಯಭಾರಿ, ವಿಶ್ವಕ್ಕೆ ಭಾರತೀಯತೆಯ, ಹಿಂದು ಧರ್ಮದ ಮಹತ್ವ ಸಾರಿದ ಸ್ವಾಮಿ ವಿವೇಕಾನಂದರು ಒಮ್ಮೆ ಹೇಳಿದ ಮಾತು.
" The motto of this mission is "To reach Narayana we must serve the Daridra Narayana, the starving millions of the land. Feel for them, pray for them. Strive for the relief and uplift of the suffering and miserable brethren "....
ರಾಮಕೃಷ್ಣ ಆಶ್ರಮದ ಮುಖ್ಯ ಧ್ಯೇಯೋದ್ದೇಶವೇನೆಂದರೆ, "ನಾರಾಯಣನನ್ನು ತಲುಪಲು ನಾವು ದರಿದ್ರ ನಾರಾಯಣನ ಸೇವೆ ಮಾಡಬೇಕು, ಹಸಿವಿನಿಂದ ಬಳಲುತ್ತಿರುವ ಲಕ್ಷಾಂತರ ಜನರ ಭೂಮಿ ಇದು. ಅವರಿಗಾಗಿ ಮಿಡಿಯಿರಿ, ಅವರಿಗಾಗಿ ಪ್ರಾರ್ಥಿಸಿ, ದುಃಖ ಮತ್ತು ದುಃಖಿತ ಸಹೋದರರ ಪರಿಹಾರ ಮತ್ತು ಉನ್ನತಿಗಾಗಿ ಶ್ರಮಿಸಿ....." ಸುಮಾರು 125 ವರ್ಷಗಳ ನಂತರ ಭಾರತದ ಸಾಂಸ್ಕೃತಿಕ ದಿಕ್ಕು ಆಧುನಿಕತೆಯ ವೇಗದಲ್ಲಿ ಹೇಗೆ ಬದಲಾಗುತ್ತಿದೆ ಗಮನಿಸಿ. ಸ್ವಾಮಿ ವಿವೇಕಾನಂದರ ಮೂಲ ಆಶಯ ಮತ್ತು ಈಗಿನ ಸ್ವಾಮಿಗಳ ನಡುವಿನ ಭಾವ ವ್ಯತ್ಯಾಸ.
ಒಂದಷ್ಟು ಅಂಕಿಅಂಶಗಳು ಸ್ವಾಮಿ ನಿರ್ಭಾಯಾನಂದರ ಗಮನಕ್ಕಾಗಿ...
( ಈ ಅಂಕಿಅಂಶಗಳು ಅಧೀಕೃತವಲ್ಲ. ಹೆಸರುಗಳು ಸಹ ಸಾಂಕೇತಿಕ. ಈ ರೀತಿಯ ಅನೇಕ ಜನರಿದ್ದಾರೆ. ಒಟ್ಟು ಭಾವಾರ್ಥ ಮಾತ್ರ ಪರಿಗಣಿಸಬೇಕು.)
ಒಟ್ಟು ಆಸ್ತಿ...
ಡಿ ಕೆ ಶಿವಕುಮಾರ್ 1500 ಕೋಟಿ.....
ಎಂ ಟಿ ಬಿ ನಾಗರಾಜ್ 1500 ಕೋಟಿ....
ಆನಂದ್ ಸಿಂಗ್ 1200 ಕೋಟಿ.....
ಎಂ ಕೃಷ್ಣಪ್ಪ 1200 ಕೋಟಿ
ಕುಮಾರ ಸ್ವಾಮಿ 500 ಕೋಟಿ.....
ಶಾಮನೂರು ಶಿವಶಂಕರಪ್ಪ 500 ಕೋಟಿ.....
ಜಮೀರ್ ಅಹಮದ್ ಖಾನ್ 500 ಕೋಟಿ....
ಕೆ ಜೆ ಜಾರ್ಜ್ 500 ಕೋಟಿ....
ಯಡಿಯೂರಪ್ಪ 500 ಕೋಟಿ......
ಇನ್ಫೋಸಿಸ್ ನಾರಾಯಣ ಮೂರ್ತಿ 10 ಸಾವಿರ ಕೋಟಿ..
ಅಜೀಂ ಪ್ರೇಮ್ ಜಿ 10 ಸಾವಿರ ಕೋಟಿ....
ನಂದನ್ ನಿಲೇಕಣಿ 10 ಸಾವಿರ ಕೋಟಿ.....
ಕಿರಣ್ ಮಜುಂದಾರ್ ಷಾ 10 ಸಾವಿರ ಕೋಟಿ.....
ಒಂದು ಸಿನಿಮಾಗೆ ಕನ್ನಡದ ಚಲನಚಿತ್ರ ನಟರು ಪಡೆಯುವ ಸಂಭಾವನೆ ಸುಮಾರು.......
ಯಶ್ 40 ಕೋಟಿ
ದರ್ಶನ್ 40 ಕೋಟಿ
ಸುದೀಪ್ 40 ಕೋಟಿ....
ರಾಜ್ಯದ ಐಎಎಸ್ ಐಎಫ್ಎಸ್ ಐಪಿಎಸ್ ಮುಂತಾದ ಅಧಿಕಾರಿಗಳು ಪಡೆಯುವ ತಿಂಗಳ ಸಂಬಳ 2 ಲಕ್ಷ ರೂಪಾಯಿಗಳು, ಇತರ ಎಲ್ಲಾ ಸರ್ಕಾರಿ ಅಧಿಕಾರಿಗಳ ತಿಂಗಳ ಸಂಬಳ ಸುಮಾರು 50 ಸಾವಿರ ರೂಪಾಯಿಗಳು.
ಪತ್ರಕರ್ತ ಎಚ್ ಆರ್ ರಂಗನಾಥ್ ಅವರು ಪಡೆಯಬಹುದಾದ ತಿಂಗಳ ಸಂಬಳ 5 ಲಕ್ಷ ಇರಬಹುದು.
ಅಜಿತ್ ಹನುಮಕ್ಕನವರ್ ಅವರ ಸಂಬಳ 3 ಲಕ್ಷ ಇರಬಹುದು...
ರಂಗನಾಥ್ ಭಾರದ್ವಾಜ್ ಅವರ ಸಂಬಳ 3 ಲಕ್ಷ ಇರಬಹುದು..
ರಾಧಾ ಹಿರೇಗೌಡರ್ ಅವರ ಸಂಬಳ 3 ಲಕ್ಷ ಇರಬಹುದು...
ಹರಿಪ್ರಕಾಶ್ ಕೋಣೆಮನೆ ಅವರ ಸಂಬಳ 3 ಲಕ್ಷ ಇರಬಹುದು....
ಉಡುಪಿ ಅಷ್ಟ ಮಠಗಳು, ಮೈಸೂರು ಜೆ ಎಸ್ ಎಸ್, ಶೃಂಗೇರಿ ಶಾರದಾಪೀಠ, ಚಿತ್ರದುರ್ಗದ ಮುರುಘಾಮಠ,
ಹುಬ್ಬಳ್ಳಿಯ ಮೂರು ಸಾವಿರ ಮಠ, ಹೀಗೆ ಅನೇಕ ಚರ್ಚುಗಳು, ಮಸೀದಿಗಳು ಅತ್ಯಂತ ಶ್ರೀಮಂತ ವ್ಯವಸ್ಥೆ ಹೊಂದಿವೆ.
ಬೆಂಗಳೂರಿನ ಶ್ರೀ ರವಿಶಂಕರ್ ಅವರ ಆರ್ಟ್ ಆಫ್ ಲೀವಿಂಗ್ ಆಶ್ರಮ, ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮ, ಚಿಕ್ಕಬಳ್ಳಾಪುರದ ಜಗ್ಗಿ ವಾಸುದೇವ್ ಅವರ ಈಶಾ ಫೌಂಡೇಶನ್ ಸಾಕಷ್ಟು ಶ್ರೀಮಂತ ಸಂಸ್ಥೆಗಳು. ಸಾಹಿತಿ ದೇವನೂರು ಮಹಾದೇವ, ಎಸ್ ಎಲ್ ಬೈರಪ್ಪ, ಚಂದ್ರಶೇಖರ ಕಂಬಾರ ಮುಂತಾದವರು ತಕ್ಕಮಟ್ಟಿಗೆ ಸಂತೃಪ್ತ ಜೀವನಮಟ್ಟ ಹೊಂದಿದ್ದಾರೆ.
ಇನ್ನೊಂದು ಕಡೆ, ತರಕಾರಿ ಮುನಿಯಮ್ಮನ ದಿನದ ಆದಾಯ 250 ರೂಪಾಯಿಗಳು, ಸೊಪ್ಪಿನ ಕಮಲಮ್ಮನ ಆದಾಯ 250 ರೂಪಾಯಿಗಳು, ಹಣ್ಣಿನ ಮೌಲಾನನ ಆದಾಯ 400 ರೂಪಾಯಿಗಳು, ಹಾಲಿನ ರಾಮಣ್ಣನ ಆದಾಯ 500 ರೂಪಾಯಿಗಳು, ಪೂಜಾರಿ ನರೇಂದ್ರ ಶಾಸ್ತ್ರಿಯ ಆದಾಯ 500 ರೂಪಾಯಿಗಳು, ಪೇಂಟರ್ ರಾಬರ್ಟನ ಆದಾಯ 500 ರೂಪಾಯಿಗಳು, ಭಿಕ್ಷುಕ ಕಾಳನ ಆದಾಯ 100 ರೂಪಾಯಿಗಳು, ರೈತ ಚನ್ನಬಸವಣ್ಣನ ಸಾಲ 12 ಲಕ್ಷ ರೂಪಾಯಿಗಳು, ವ್ಯಾಪಾರಿ ರಾಮಚಂದ್ರ ಶರ್ಮ ಅವರ ಸಾಲ 2 ಕೋಟಿ ರೂಪಾಯಿಗಳು, ಉದ್ಯಮಿ ಗೋವಿಂದ ಗೌಡರ ಸಾಲ 5 ಕೋಟಿ ರೂಪಾಯಿಗಳು, ಬಟ್ಟೆ ಅಂಗಡಿ ಇಮಾಮ್ ಸಾಬಿಯ ಸಾಲ 1.5 ಕೋಟಿ ರೂಪಾಯಿಗಳು, ಕಂಟ್ರಾಕ್ಟರ್ ವಿಕ್ಟರ್ ಅವರ ಸಾಲ 2.5 ಕೋಟಿ ರೂಪಾಯಿಗಳು.
ಮತ್ತೊಂದು ಕಡೆ..
ಕರ್ನಾಟಕದಲ್ಲಿ ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳ ಸಂಖ್ಯೆ ಲಕ್ಷಗಳಲ್ಲಿದೆ.
ಸಾಲದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಜನರ ಸಂಖ್ಯೆ ವರ್ಷಕ್ಕೆ ಸಾವಿರಗಳಲ್ಲಿದೆ.
ಗಾಳಿ ನೀರು ಆಹಾರಗಳ ಮಲಿನದಿಂದ ಸಾಯುತ್ತಿರುವವರ ಸಂಖ್ಯೆ ಲಕ್ಷಗಳಲ್ಲಿದೆ.
ಸರ್ಕಾರದ ಕಾರ್ಯನಿರ್ವಹಣೆಯ ದುಂದು ವೆಚ್ಚ ಸುಮಾರು 25% ಇದೆ.
ಸರ್ಕಾರದ ಭ್ರಷ್ಟಾಚಾರದ ಪ್ರಮಾಣ ಶೇಕಡಾ 20% ರಿಂದ 40% ವರೆಗೂ ಇದೆ ಎಂದು ಎಲ್ಲಾ ಪಕ್ಷಗಳ ಆರೋಪ, ಮಾಧ್ಯಮಗಳ ವರದಿಗಳು ಮತ್ತು ಜನಸಾಮಾನ್ಯರ ಅಭಿಪ್ರಾಯ. ಸ್ವಾಮಿ ನಿರ್ಭಯಾನಂದರೇ ದಯವಿಟ್ಟು ಅಂತರಂಗದ ಕಣ್ಣು ತೆರೆಯಿರಿ. ನೋಡಿ ಎಷ್ಟೊಂದು ವ್ಯತ್ಯಾಸವಿದೆ. ನಮ್ಮ ನೆರವು ಬೇಕಾಗಿರುವುದು ಅಸಹಾಯಕರಿಗೆ ಮಾತ್ರ. ಸ್ವಾಮಿ ವಿವೇಕಾನಂದರು ಅಂದು ಅಂತರಂಗದ ಕಣ್ಣು ತೆರದು ಜಗತ್ತಿಗೆ ಸಾರಿದ ಭಾರತದ ಸಂಸ್ಕೃತಿ - ಮಾನವೀಯತೆಯ ಮಹತ್ವ ಸಾರಿದರು. ಅದರ ಏಳಿಗೆಗಾಗಿ ರಾಮಕೃಷ್ಣ ಮಿಷನ್ ಸ್ಥಾಪಿಸಿದರು. ಕರ್ನಾಟಕ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳು ಅಂದು ಅಂತರಂಗದ ಕಣ್ಣು ತೆರೆದು ಸೇವೆ ಮಾಡಿ ಲಕ್ಷಾಂತರ ಅಸಹಾಯಕರ ಬದುಕಿಗೆ ಬೆಳಕಾದರು. ಉಚಿತ ಯೋಜನೆಗಳ ಬಗ್ಗೆ ಆರ್ಥಿಕ ತಜ್ಞರು ಮಾತನಾಡುತ್ತಾರೆ. ಅದರ ಸಾಧಕ ಭಾದಕಗಳ ಬಗ್ಗೆ ವ್ಯವಸ್ಥೆ ನಿರ್ಧಾರ ಕೈಗೊಳ್ಳುತ್ತದೆ. ಆದರೆ ಹೊಟ್ಟೆ ತುಂಬಿ ಉಪನ್ಯಾಸಗಳನ್ನು ಮಾಡುವ ನಾವು ಸ್ವಲ್ಪ ತ್ಯಾಗಿಗಳಾಗಿ ನಿಜವಾಗಿ ಅವಶ್ಯಕತೆ ಇಲ್ಲದಿದ್ದಲ್ಲಿ ಉಚಿತಗಳನ್ನು ತಿರಸ್ಕರಿಸೋಣ ಮತ್ತು ಅವಶ್ಯಕತೆ ಇರುವವರಿಗೆ ತಲುಪಿಸೋಣ.
ಉಚಿತಗಳನ್ನು ಪಡೆಯುವವರನ್ನು ನಾಚಿಕೆ ಇಲ್ಲದವರು, ಬಿಟ್ಟಿ ತಿನ್ನುವವರು ಎಂದು ಎಂದೂ ಕೀಳಾಗಿ ಕಾಣದಿರೋಣ. " ನೊಂದವರ ನೋವು ನೋಯದವರೆತ್ತ ಬಲ್ಲರೋ.. ನಾವು ನಮ್ಮ ಸ್ವಂತ ಹಣದಿಂದ ನೇರವಾಗಿ ಉಚಿತ ಕೊಡುವುದಿಲ್ಲ. ನಮ್ಮ ತೆರಿಗೆಯ ಹಣ ಸರ್ಕಾರ ನಿರ್ವಹಿಸುತ್ತದೆ ಮತ್ತು ಹಂಚುತ್ತದೆ. ಅದನ್ನು ಸರಿಯಾಗಿ ನಿಭಾಯಿಸುವವರಿಗೆ ಮತ ನೀಡೋಣ.
ಇದು ಉಚಿತ ಅಥವಾ ಬಿಟ್ಟಿ ಅಲ್ಲ. ಸಂಪತ್ತಿನ ಸಮಾನ ಹಂಚಿಕೆ ಮಾತ್ರ. ಆದರೆ ಇದು ಅತಿಯಾಗಬಾರದು ಮತ್ತು ದುರುಪಯೋಗವಾಗಬಾರದು, ಚುನಾವಣಾ ಗಿಮಿಕ್ ಆಗಬಾರದು. ಕೇವಲ ಇಲ್ಲದವರಿಗೆ ಮಾತ್ರ ತಲುಪಿಸುವ ಸಾಮಾಜಿಕ ವ್ಯವಸ್ಥೆ ಮಾತ್ರ ಆಗಬೇಕು. ಸಾಮಾನ್ಯ ಜನ ಉಚಿತ ಯೋಜನೆಗಳ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ವ್ಯಕ್ತಪಡಿಸಲು ಸ್ವತಂತ್ರರು. ಅವರವರ ಅನುಭವದ ಮಿತಿಯಲ್ಲಿ ಮಾತನಾಡುತ್ತಾರೆ. ಆದರೆ ಸ್ವಾಮೀಜಿಗಳಾದವರು ಸದಾ ಬಡವರ ಪರ ಅಸಹಾಯಕರ ಪರವಾಗಿ ನಿಲ್ಲಬೇಕು. ಭಾರತದ ಮಠ ಪರಂಪರೆ ವಿಶ್ವಕ್ಕೆ ಒಂದು ಮಾದರಿ. ಅದನ್ನು ಎತ್ತಿ ಹಿಡಿಯಬೇಕು. ದರಿದ್ರರಲ್ಲಿ ( ಬಡವರಲ್ಲಿ ) ನಾರಾಯಣರನ್ನು ಕಂಡ ಸ್ವಾಮಿ ವಿವೇಕಾನಂದರು ಹುಟ್ಟಿದ ನೆಲವಿದು ಎಂದು ನೆನಪಿಸುತ್ತಾ. ಇಲ್ಲದವರಿಗೆ ಸಹಾಯ ಮಾಡೋಣ, ಇರುವವರಿಂದ ಪಡೆದು. ಅದೇ ಮಾನವೀಯ ಧರ್ಮ. ಭಾರತೀಯ ಗುಣ, ಅದೇ ಅಭಿವೃದ್ಧಿ.
-ವಿವೇಕಾನಂದ ಎಚ್ ಕೆ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ