ಉಪಕಾರ ಸ್ಮರಣೆ
ಕವನ
ಹಸಿರಿನ ಹೊದಿಕೆ ಭೂಮಿಗೆ ಹೊದೆಸುವ
ಕಸುವಿನ ಕೆಲಸ ಮಾಡೋಣ/
ಹಸೆಯನು ಹಾಸುವ ತೆರದಲಿ ದುಡಿಯುತ
ಸಸಿಯನು ನೆಡುತ ಬೆಳೆಸೋಣ//
ನೀರನು ಎರೆಯುತ ಗೊಬ್ಬರ ಹರಡುತ
ಪರಿಪರಿಯಾಗಿ ಹಾಡೋಣ/
ಮರಗಿಡ ಜೀವಿಯ ಉಸಿರು ಎನ್ನುತ
ಅರಿವಿನ ಸೆಲೆಯ ಬಿತ್ತೋಣ//
ಭೂಮಿಗು ಬಾನಿಗು ನಂಟಿನ ಗಂಟು
ಕಾಮಿತ ಫಲವಿದೆ ಎನ್ನೋಣ/
ತಮವನು ಕಳೆಯುತ ತಪದ ರೂಪದಿ
ಮಮತೆಯನಿಂದು ಬಡಿಸೋಣ//
ಮಾಲಿನ್ಯಗಳ ನಾಶ ಮಾಡುವ
ಗುರಿಯೆಡೆ ಇಂದು ಸಾಗೋಣ/
ನೀರು ನೆರಳು ನೀಡುವ ಮರದ
ಉಪಕಾರ ಸ್ಮರಣೆ ಗೈಯೋಣ//
ಪರಿಸರ ಸ್ವಚ್ಛತೆ ನಮ್ಮ ಧ್ಯೇಯ
ಹರುಷದಿ ಹೇಳುತ ನಡೆಯೋಣ/
ತರುಲತೆ ಸುಮಗಳ ಅಂದವ ಹೀರುತ
ಚೆಲುವಿನ ತೋರಣ ಕಟ್ಟೋಣ
-ರತ್ನಾ ಕೆ ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
