ಎರಡು ಗಝಲ್ ಗಳು.....

ಎರಡು ಗಝಲ್ ಗಳು.....

೧. 

ಪ್ರೀತಿಯಿರದ ಬಾಳಿಗಿಂದು ಪ್ರೇಮಿಯಾಗಲಿ ಹೇಗೆ

ನೀತಿಯಿರದ ಹೃದಯಕಿಂದು ಸ್ನೇಹಿಯಾಗಲಿ ಹೇಗೆ

 

ಕಡಲ ತೀರಕೆ ಹೊಡೆವ ನೀರಿಗಿಂದು ಪೆಟ್ಟಾಗದೆ ಹೇಳು

ತಡೆಯೊ ಹೇಳುವ ಮಿಲನಕಿಂದು ಜೊತೆಯಾಗಲಿ ಹೇಗೆ

 

ಮಿಡಿವ ಮನಸ್ಸಿಲ್ಲದಲ್ಲಿ ಬದುಕಿಂದು ಹುಟ್ಟಬಹುದೆ ಕೇಳು

ಕಾರಣವಿಲ್ಲದೆ ಸಿಡುಕುವಳಿಗಿಂದು ಏಣಿಯಾಗಲಿ ಹೇಗೆ

 

ಸ್ವರ್ಗ ನರಕಗಳಿಂದು ಬುವಿಯಲ್ಲಿಯೇ ಇದೆಯಂತೆ ಹೌದೆ

ಮೆಟ್ಟಿಲುಗಳ ಏರುತ್ತಲೇ ಕನಸನಿಂದು ಭೇಟಿಯಾಗಲಿ ಹೇಗೆ

 

ನನಸುಗಳ  ಹಂಬಲಿಸುವುದಿಂದು ತಪ್ಪೆನುವಿಯೊ ಈಶಾ

ಮೋಸ ಮಾಡುತ್ತಲೆ ಸಾಗುವಳಿಂದು ಜೊತೆಯಾಗಲಿ ಹೇಗೆ

***

೨.

ಬಾನು ಬೆಳಗಿದ ನೋಟವೆ ನೀನಾಗಿರುವೆಯಾ ಚೆಲುವೆಯೆ

ತನುವ ರಾಗದ ಮಾಟಕೆ ಸ್ನೇಹಿಯಾಗಿರುವೆಯಾ ಚೆಲುವೆಯೆ

 

ಒಲವಿರುವ ಮನದೊಳಗೆ ಹುಸಿ ಕೋಪ ಇಹುದೇನು

ಭಾವನೆಯ ತೀರದ ಆಚೆಯಲಿ ಖುಷಿಯಾಗಿರುವೆಯಾ ಚೆಲುವೆಯೆ

 

ಕೆಂಪನೆಯ ಆಗಸದಿಂದ ಸುತ್ತಲು ರಂಗೇರಿದೆ ಶರಧಿಯು

ಮಾಧುರ್ಯ ನನಸಿನ ಸೆರೆಗೆ ಬಿಸಿಲಾಗಿರುವೆಯಾ ಚೆಲುವೆಯೆ

 

ಹಿಡಿದಿರುವ ಕೈಯನು ಬಿಡಿಸಿ ಕ್ಷಣದಲ್ಲಿ ಹತ್ತಿರವಾದೆ ಏಕೆ

ಬಾಳ ಬುತ್ತಿಯೊಳಗಿನ ಜೀವಕೆ ಉಸಿರಾಗಿರುವೆಯಾ ಚೆಲುವೆಯೆ

 

ನನಸಿರದ ದಾರಿಯಲಿ  ನಡೆಯುತ್ತಲೆ ಇಹನು ಈಶಾ

ತಲ್ಲಣದ ಜೊತೆಗೆ ಬದುಕಿನಲಿ ಸವಿಯಾಗಿರುವೆಯಾ ಚೆಲುವೆಯೆ

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ