ಏಪ್ರಿಲ್ ಒಂದು- ಎಲ್ಲರ ದಿನ!

ಏಪ್ರಿಲ್ ಒಂದು- ಎಲ್ಲರ ದಿನ!

ಬರಹ

ಮತ್ತೊಂದು ಏಪ್ರಿಲ್ ಒಂದು ಬರುತ್ತಿದೆ. ಏಪ್ರಿಲ್ ಒಂದು ಬರುವುದು ವರ್ಷಕ್ಕೆ ಒಂದೇ
ಸಾರಿಯೇ ಆದರೂ ಆ ದಿನದ ಮಹತ್ವವನ್ನು ಅಲ್ಲಗಳೆಯಲಾಗದು. ಆ ದಿನವನ್ನು 'ಮೂರ್ಖ'ರಿಗಾಗಿ
ಮೀಸಲಿಟ್ಟಿರುವುದು ನಿಜಕ್ಕೂ ಅಭಿನಂದನಾರ್ಹವಾದ ಹಾಗೂ ಅತ್ಯಂತ ಸೂಕ್ತವಾದ ಸಂಗತಿ.
ಜಗತ್ತಿನಲ್ಲಿ ಎಂಥೆಂಥವರಿಗೋ ಒಂದಿಡೀ ದಿನವನ್ನು ಮೀಸಲಿಡುವ ಪರಿಪಾಠ ಇದೆ.
'ವ್ಯಾಲೆಂಟೈನ್ಸ್ ಡೇ' ಅಂತೆ, 'ಮದರ್ಸ್ ಡೇ' ಅಂತೆ, 'ಫಾದರ್ಸ್ ಡೇ' (ಇದನ್ನು
Father`s day ಎಂದು ಓದಿಕೊಳ್ಳಬೇಕಾಗಿ ವಿನಂತಿ, Fathers day ಎಂದು ಓದಿಕೊಂಡರೂ ಅದು
ತಾಂತ್ರಿಕವಾಗಿ, ತಾತ್ವಿಕವಾಗಿ, ವಾಸ್ತವಿಕವಾಗಿ, ಕಾಲ್ಪನಿಕವಾಗಿ ತಪ್ಪಿಲ್ಲವಾದರೂ
'ವ್ಯಾವಹಾರಿಕ'ವಾಗಿ ನಿಷಿದ್ಧ!), 'ವುಮನ್ಸ್ ಡೇ' ಇವೆಲ್ಲಾ ಇರಲಿ, ಅಂಥಾ ಮಹಾಮಾರಿ
ಏಡ್ಸ್‌ಗೂ ಸಹ ಒಂದು 'ಏಡ್ಸ್ ಡೇ' ಎಂಬುದಿದೆ. ಅದೂ ಹೋಗಲಿ ಎಂದುಕೊಳ್ಳೋಣ ಎಂದರೆ Every
dog has its day ಎನ್ನುತ್ತಾರೆ. ಹಂಗಾದರೆ ಪ್ರತಿಯೊಂದು ನಾಯಿಗೂ ಒಂದು ದಿನವಿದೆ,
ಗಂಡಂದಿರಿಗೂ ಇದೆ!

ಹೀಗೆ ಜಗತ್ತಿನ ಸಣ್ಣ ಸಣ್ಣ ಗುಂಪುಗಳಿಗಾಗಿ ಎಂದೇ ಒಂದೊಂದು ದಿನವಿರುವಾಗ ಜಗತ್ತಿನ
ಬಹುಸಂಖ್ಯಾತರ, majority ಜನರ ಹೆಸರಿನಲ್ಲಿ ವರ್ಷಕ್ಕೆ ಒಂದೇ ಒಂದು ದಿನವಾದರೂ ಬೇಡವೇ?
ಜಗತ್ತಿನಲ್ಲಿ ಪ್ರಜಾಪ್ರಭುತ್ವವೇ ಅತ್ಯಂತ ಶ್ರೇಷ್ಠವಾದ ಪ್ರಭುತ್ವ ಎಂದು ನಮ್ಮನ್ನು
ಮುನ್ನೂರು ಚಿಲ್ಲರೆ ವರ್ಷ ಆಳಿದ ಬ್ರಿಟೀಷರು ಹೇಳಿಕೊಟ್ಟದ್ದನ್ನು ಅವರಿಗಿಂತ ಚೆನ್ನಾಗಿ
ನಂಬಿರುವ ಹಾಗೂ ಅದರ ಫಲವಾಗಿ ಪ್ರಸ್ತುತ ರಾಜಕಾರಣಿಗಳನ್ನು ಆರಿಸಿ ನಮ್ಮದು
ಪ್ರಜಾಪ್ರಭುತ್ವ, ಪ್ರಭುತ್ವದಲ್ಲಿರುವವರ ಹಾಗೆಯೇ ನಮ್ಮ ದೇಶದ ಪ್ರಜೆಗಳೂ ಇರುವುದು
ಎಂಬುದನ್ನು ಸಾರುತ್ತಿದ್ದೇವೆ. ಈ ಪ್ರಜಾಪ್ರಭುತ್ವದಲ್ಲಿ ಬಹುಸಂಖ್ಯಾತರಿಗೇ ಮೊದಲ ಮಣೆ.
ನೂರು ಮಂದಿಯಲ್ಲಿ ತೊಂಭತ್ತು ಮಂದಿ ಸೂರ್ಯ ಪಶ್ಚಿಮದಲ್ಲಿ ಹುಟ್ಟುತ್ತಾನೆ ಎಂದರೆ ಅದೇ
ಸತ್ಯ. ಹೀಗಿರುವಾಗ ಇಡೀ ಜಗತ್ತಿನಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿರುವ
ಮೂರ್ಖರಿಗಾಗಿ ಮುನ್ನೂರ ಅರವತ್ತೈದು ಕಾಲು ದಿನಗಳಲ್ಲಿ ಅಟ್‌ಲೀಸ್ಟ್ ಒಂದು ದಿನವಾದರೂ
ಬೇಡವೇ?

ಏಪ್ರಿಲ್ ಒಂದು ನಿಜಕ್ಕೂ ಮಹತ್ವದ ದಿನ. ಜಗತ್ತಿನಲ್ಲಿರುವ ಬಹುತೇಕರ ಪ್ರತಿಭೆಯನ್ನು
ಗುರುತಿಸುವ ದಿನ. ತನ್ನ ಮೈಯಲ್ಲೇ ಕಸ್ತೂರಿಯಿದ್ದರೂ ಅದರ ಪರಿಮಳವನ್ನು ಹುಡುಕಿಕೊಂಡು
ಕಸ್ತೂರಿ ಮೃಗ ಕಾಡೆಲ್ಲಾ ಸುತ್ತಿ ಕಂಗಾಲಾಗುತ್ತ, ಈ ಪರಿಮಳ ಅಗೋಚರವಾದದ್ದು
ಸರ್ವವ್ಯಾಪಿಯಾದದ್ದು ಎಂಬ ನಿರ್ಧಾರಕ್ಕೆ ಬಂದಂತೆ ಜಗತ್ತಿನ ಜನರು ತಮ್ಮ ಕಿವಿಗಳೆರಡರ
ಮಧ್ಯದೊಳಗೇ ಅಡಗಿರುವ ಮೂರ್ಖತನವನ್ನು ಕಾಣಲಾರದೆ ಹೊರಜಗತ್ತಿನಲ್ಲಿ ಮೂರ್ಖತನದ
ಕೆಲಸಗಳನ್ನು ಗುರುತಿಸುತ್ತಾ, ಮೂರ್ಖರು ಯಾರು, ಮೂರ್ಖತನ ಎಲ್ಲಿದೆ ಅಂತ ಹುಡುಕುತ್ತಾ
ಜಗತ್ತಿನೆಲ್ಲೆಡೆ ಅಲೆಯುತ್ತಿದ್ದಾನೆ. ತನ್ನೊಳಗಂತೂ ಇಲ್ಲ ಎಂದು
ನೆಮ್ಮದಿಯಾಗಿರುತ್ತಾನೆ. ಕೆಲವೊಮ್ಮೆ ಅಪರೂಪಕ್ಕೆ ಜ್ಞಾನೋದಯವಾಗಿ ನನ್ನೊಳಗೇ ಅದು
ಇದ್ದಿರಬಹುದಲ್ಲವಾ ಎಂಬ ಸಂಶಯ ನುಸುಳಿದರೂ ಕೂಡಲೇ ಆತನ 'ಅಹಂ' ಎಂಬ ಕಾವಲುಗಾರ ಅದನ್ನು
ಹೊರಗಟ್ಟಿಬಿಡುತ್ತಾನೆ. ''ಮಗು ನೀನು ಮೂರ್ಖನಲ್ಲ. ನೀನು ಇಡೀ ಜಗತ್ತಿನಲ್ಲೇ ಅತ್ಯಂತ
ಬುದ್ಧಿವಂತ. ಇಡೀ ಜಗತ್ತು ಹಗಲು ರಾತ್ರಿಯೆನ್ನದೆ ಕಾಯುತ್ತಿರುವ ಶ್ರೇಷ್ಠ ವ್ಯಕ್ತಿ
ನೀನು. ನೀನು ಮೂರ್ಖನಾಗಲಿಕ್ಕೆ ಹೇಗೆ ಸಾಧ್ಯ? ಅದೋ ನೋಡು ಅಲ್ಲಿ ಕಾಣಿಸ್ತಾ ಇದ್ದಾನಲ್ಲ
ಅವನು ಮೂರ್ಖ." ಎನ್ನುತ್ತಾ ನೆತ್ತಿ ಸವರುತ್ತಾನೆ.

ಈ ನಮ್ಮ ನೆಮ್ಮೆಲ್ಲರ ಹೆಮ್ಮೆಯ 'ಮೂರ್ಖರ ದಿನ' ಆಗಮಿಸುತ್ತಿರುವ ಶುಭ
ಮುಹೂರ್ತದಲ್ಲಿ ಜಗತ್ತಿನಲ್ಲಿ ನಮ್ಮ ನಿಮ್ಮೆಲ್ಲರ ಸಹೋದರ ಸಹೋದರಿಯರ ಬಗ್ಗೆ ಸ್ವಲ್ಪ
ವಿಶ್ಲೇಷಿಸೋಣ. ಇಡೀ ಭೂಮಿಯ ಏಳುನೂರು ಕೋಟಿ ಜನ ಸಂಖ್ಯೆಯಲ್ಲಿ ಮೂರ್ಖರು ಎಷ್ಟು ಮಂದಿ
ಎಂಬುದನ್ನು ಮೊದಲು ಪತ್ತೆ ಹಚ್ಚೋಣ. ಮನೆಯೇ ಮೊದಲ ಪಾಠ ಶಾಲೆ ಅಲ್ಲವೇ ಹಾಗಾಗಿ ನಮ್ಮ
ಪತ್ತೇದಾರಿಕೆಯನ್ನು ಮನೆಯಿಂದಲೇ ಪ್ರಾರಂಭಿಸೋಣ. ಪ್ರೀತಿಯಿಂದ ಸಾಕಿ ಬೆಳೆಸಿದ ತಂದೆ
ಮಗನನ್ನು "ಕತ್ತೆ ಮಗನೇ" ಎನ್ನುತ್ತಾನೆ. ಮನುಷ್ಯ ಎಸಗುತ್ತಿರುವ ಕ್ಷಮೆ ಇಲ್ಲದ
ಅಪರಾಧಗಳಲ್ಲಿ ಇದೂ ಒಂದು. ತನ್ನಲ್ಲಿರುವ ಮೂರ್ಖತನವನ್ನು ಮರೆ ಮಾಚಲಿಕ್ಕೆ ಪ್ರಕೃತಿ
ವಹಿಸಿದ ಪಾತ್ರವನ್ನು ಅನೂಚಾನವಾಗಿ ನಿರ್ವಹಿಸುತ್ತಿರುವ ಗಾರ್ಧಭ ಮಹಾಶಯನನ್ನು ಮೂರ್ಖ
ಎಂದು ಬಿಂಬಿಸುತ್ತಿರುವುದು ಹಾಗೂ ಅಪರೂಪಕ್ಕೆ ಒಮ್ಮೆ ತನ್ನಂಥವನೇ ಆದ ಮಾನವನಲ್ಲಿ
ಗೋಚರಿಸುವ ಮೂರ್ಖತನವನ್ನು ಹೆಸರಿಸಲಿಕ್ಕೆ ಗಾರ್ಧಭ ಮಹಾಶಯನ ಹೆಸರನ್ನೇ
ಬಳಸುತ್ತಿರುವುದು ಅಕ್ಷಮ್ಯ ಅಪರಾಧ. ಇರಲಿ, ಅಪ್ಪ ತನ್ನ ಮಗನನ್ನು "ಕತ್ತೆ ಮಗನೇ" ಎಂದು
ಸಂಬೋಧಿಸುತ್ತಾನೆ. ಅಂದರೆ ಆತನ ಮಗ ಮೂರ್ಖನ ಮಗ ಎಂದಾಯಿತು. ಆ ಮಗನಿಗೆ ತಾನೇ ನಿಜವಾದ
ಅಪ್ಪ ಎಂಬ ನಂಬಿಕೆ ಇದ್ದರೆ, ಅಪ್ಪ ತನ್ನನ್ನೇ ಕತ್ತೆ ಎಂದು ಕರೆದುಕೊಂಡಂತಾಯಿತು. ಆ
ಮೂಲಕ ತನ್ನ ಹೆಂಡತಿಯೂ ಕತ್ತೆ ಎಂದು ಸಾಬೀತು ಪಡಿಸಿದಂತಾಯಿತು. ಈ 'ಕತ್ತೆಗಳಿಬ್ಬರ' ಮಗ
ಅಥವಾ ಮಗಳು ಮುಂದೆ ತಂದೆ ಅಥವಾ ತಾಯಿಯ ಪಾತ್ರವನ್ನು ಅಲಂಕರಿಸಿದಾಗ ಇದೇ ರೀತಿಯಾಗಿ
ತಮ್ಮ ಮಕ್ಕಳನ್ನು ಸಂಬೋಧಿಸುವುದರಿಂದ ಅವರೂ ಮೂರ್ಖ ಮಹಾಸಭೆಯ ಸದಸ್ಯರಾಗುತ್ತಾರೆ.

ಇನ್ನು ಮನೆಯೆಂಬ ಮೊದಲ ಪಾಠ ಶಾಲೆಯಿಂದ ನಂತರದ ಪಾಠಶಾಲೆಯೆಂಬ ಮನೆಗೆ ಬರೋಣ. ತಿಂಗಳ
ಮುವ್ವತ್ತು ದಿನಗಳಲ್ಲಿ ನಾಲ್ಕು ಭಾನುವಾರಗಳು, ನಾಲ್ಕು ಹಾಫ್ ಡೇ ಶನಿವಾರಗಳನ್ನು
ಬಿಟ್ಟರೆ ಸಿಕ್ಕುವ ೨೨ ದಿನಗಳಲ್ಲಿ ಎರಡು ಸರಕಾರಿ ರಜೆಗಳು, ಒಂದು ರೀಜನಲ್ ರಜಾ ಸೇರಿಸಿ
ಉಳಿದ ೧೯ ದಿನಗಳಲ್ಲಿ ಮೂರು ದಿನ ಟೆಸ್ಟು, ನಾಲ್ಕೈದು ದಿನ ಸ್ವಯಂ ಘೋಷಿತ ರಜೆಗಳನ್ನು
ಕಳೆದರೆ ಮಿಕ್ಕುವ ಹನ್ನೊಂದು ದಿನಗಳಲ್ಲಿ ಒಂದು ತಾಸಿನ ಪಿರಿಯಡ್ ನಲ್ಲಿ ಕಾಲುಘಂಟೆ
ಹಾಜರಾತಿಗಾಗಿ, ಇನ್ನರ್ಧ ಘಂಟೆ ಶಿಸ್ತಿನ ಬಗೆಗಿನ, ಸಮಯ ಪಾಲನೆ ಬಗೆಗಿನ ಭಾಷಣಕ್ಕಾಗಿ
ವ್ಯಯವಾಗಿ ಇನ್ನುಳಿದ ಕಾಲುಘಂಟೆಯಲ್ಲಿ ಮಾಡಿದ ಪಾಠವನ್ನು ಮಕ್ಕಳು ತಪ್ಪಾಗಿ
ಒಪ್ಪಿಸಿದರೆ ಶಿಕ್ಷಕರು ಮಕ್ಕಳನ್ನು ಬೈಯುತ್ತಾರೆ, "ಯಾವ ಕತ್ತೆ ನಿನಗೆ ಹೇಳಿ
ಕೊಟ್ಟನೋ". ಈ ಸ್ವಯಂ ಸಂಬೋಧನೆಯಿಂದಾಗಿ ಶಿಕ್ಷಕರು ಹಾಗೂ ಅವರ ಶಿಷ್ಯ ಶಿರೋಮಣಿಗಳಿಗೆ
ಮೂರ್ಖ ಸಂಘದ ಸದಸ್ಯತ್ವ ನೀಡಲು ಅಡ್ಡಿಯಿಲ್ಲ.

ಹೀಗೇ ಸಾಗುತ್ತಾ, ಆಫೀಸಿಗೆ ಬನ್ನಿ... "ನಿನ್ನಂಥ ಮೂರ್ಖನನ್ನ ಕೆಲಸಕ್ಕೆ
ಇಟ್ಟುಕೊಂಡಿದ್ದೀನಲ್ಲಾ, ನನಗೆ ಬುದ್ಧಿಯಿಲ್ಲ" ಎಂದು ಬಾಸೂ, "ನಿನ್ನ ಹತ್ರ ಕೆಲ್ಸ
ಮಾಡ್ತಿದ್ದೀನಲ್ಲಾ, ನನ್ನಂಥ ಮೂರ್ಖ ಬೇರೊಬ್ಬನಿಲ್ಲ" ಅಂತ ಕೆಲಸಗಾರರೂ ಹೇಳುವುದರಿಂದ
ಅವರೂ ಗಾಂಪರ ಗುಂಪಿನ ಹೆಮ್ಮೆಯ ಪ್ರಜೆಗಳಾಗುತ್ತಾರೆ. "ಈ ನಾಡಿನಲ್ಲಿ ಹುಟ್ಟಿದೆನಲ್ಲಾ,
ನನಗೆ ಬುದ್ಧಿಯಿಲ್ಲ" ಎನ್ನುವ ಜನನಾಯಕರು, "ನಿಮ್ಮ ಮುಂದೆ ಅರಚುತ್ತಿದ್ದೇನಲ್ಲಾ,
ಕತ್ತೆ ಮುಂದೆ ಕಿಂದರಿ ಬಾರಿಸಿದ ಹಾಗೆ" ಎನ್ನುವ ಸ್ವಯಂ ಘೋಷಿತ ಸಂಗೀತಗಾರ,
"ಕತ್ತೇಗೇನು ಗೊತ್ತು ಕಸ್ತೂರಿ ಪರಿಮಳ" ಎನ್ನುವ ಕವಿಗಳು ಸಂಬೋಧಿಸುವ ಜನಸಮೂಹವೆಲ್ಲಾ
ಮೂರ್ಖರ ಗಣತಿಯ ಲೆಕ್ಕದಲ್ಲಿ ಸೇರುತ್ತಾರೆ.

ಇನ್ನು, "ಪ್ರೀತಿ ಕುರುಡು. ಪ್ರೀತಿಗೆ ಕಣ್ಣಿಲ್ಲ... ಪ್ರೀತಿಸುವವರನ್ನು ಹೀಗಳೆಯುವ
ಜಗತ್ತು ಮೂರ್ಖ" ಎನ್ನುವ ಅಮರ ಪ್ರೇಮಿಯ ಪ್ರಕಾರ ತಮ್ಮ ಜೋಡಿಯನ್ನು ಬಿಟ್ಟು ಉಳಿದ
ಜಗತ್ತೆಲ್ಲಾ 'ಮೂರ್ಖ' ಲೇಬಲ್ಲಿಗೆ ಅರ್ಹ. "ಪ್ರೀತಿಗೆ ಕಣ್ಣು ಮಾತ್ರವಲ್ಲ ಅದಕ್ಕೆ
ಮೂಗೂ ಇಲ್ಲ, ಕಿವಿಯೂ ಇಲ್ಲ, ಮೆದುಳಂತೂ ಮೊದಲೇ ಇಲ್ಲ, ಅದಕ್ಕಿರುವುದು ಬರೀ ಬಾಯಿ,
ಹೊಟ್ಟೆ ಹಾಗೂ ಅವೆರಡರೊಳಗಿರುವ ಅಗಾಧ ಹಸಿವು ಮಾತ್ರ. ಈ ಪ್ರೇಮಿಗಳು ಭ್ರಾಂತುಗಳು"
ಎನ್ನುವವರ ಪ್ರಕಾರ ಪ್ರೇಮದಲ್ಲಿ ಬಿದ್ದಿರುವವರು, ಎದ್ದಿರುವವರು ಎಲ್ಲರೂ ಮೂರ್ಖರು.

ಅವರನ್ನು ಮೊದಲಿಗೆ ಇಡೀ ಜಗತ್ತೇ ಹುಚ್ಚರು ಅಂತ ಕರೆದಿತ್ತು. ಲಿಯನಾರ್ಡೋ ಡವಿಂಚಿ,
ಗೆಲಿಲಿಯೋ, ಐನ್ ಸ್ಟೈನ್ ಮುಂತಾದ ಕನಸುಗಾರ ಜೀನಿಯಸ್ಸುಗಳನ್ನು ಜಗತ್ತು ಮೂರ್ಖರು
ಎಂದಿತ್ತು. ಗೆಲಿಲಿಯೋನನ್ನು ಕತ್ತೆ ಮೇಲೆ ಕೂರಿಸಿ ಮೆರವಣಿಗೆ ಮಾಡಿಸಿತು ಚರ್ಚು.
ಜಗತ್ತೇ ಅಂತಹ ಜೀನಿಯಸ್ಸುಗಳನ್ನು ಹುಚ್ಚರು ಅಂತ ಕರೆದಿತು. ಅನಂತರ ಇಡೀ ಜಗತ್ತಿನ
ಕಣ್ಣು ತೆರೆದ ಮೇಲೆ ಅವರನ್ನು ಮಹಾನ್ ಬುದ್ಧಿವಂತರು ಎಂದು ಕರೆದು ಪ್ರಾಯಶ್ಚಿತ
ಮಾಡಿಕೊಂಡಿತು. ಆ ಮೂಲಕ ಹುಚ್ಚರು ಅವರಲ್ಲ, ಜಗತ್ತು ಎಂದು ಒಪ್ಪಿಕೊಂಡಿತು. ತಾವು
ಮೂರ್ಖರು ಅವರು ಜೀನಿಯಸ್ಸುಗಳು ಎಂದು ಜಗತ್ತೇ ಹೆಮ್ಮೆಯಿಂದ ಹೇಳಿಕೊಂಡಿತು.

ಇನ್ನು ನಿಮ್ಹಾನ್ಸ್ ನಿವಾಸಿಗಳನ್ನು ಹುಚ್ಚರು, ಮೂರ್ಖರು ಅನ್ನುತ್ತದೆ ಜಗತ್ತು.
ಅಲ್ಲಿರುವ ಯಾರಿಗೂ ಬುದ್ಧಿ ಸರಿಯಿಲ್ಲ ಎನ್ನುತ್ತದೆ ಹೊರಗಿರುವ ಜನ ಸಮೂಹ. ಹೊರಗೆ
ನಿಂತು ನೋಡುವವರಿಗೆ ಹುಚ್ಚಾಸ್ಪತ್ರೆಯ ಒಳಗಿರುವವರೆಲ್ಲರೂ ಮೂರ್ಖರಾಗಿ ಕಾಣುತ್ತಾರೆ,
ಅದೃಷ್ಟವಶಾತ್ ಡಾಕ್ಟರ್, ನರ್ಸುಗಳನ್ನು ಹೊರತು ಪಡಿಸಿ. ಆದರೆ ಆಸ್ಪತ್ರೆಯ ಒಳಗಿರುವ so
called ಮೂರ್ಖರು ಹೇಳುವ ಪ್ರಕಾರ ತಾವು ಸಾಚಾಗಳು, ತಮ್ಮನ್ನು ಇಲ್ಲಿ ಕೂಡಿ ಹಾಕಿರುವ
ಜಗತ್ತೇ ಹುಚ್ಚು. ಈ ಆಸ್ಪತ್ರೆಯ ಹೊರಗಿರುವವರೆಲ್ಲರೂ ಹುಚ್ಚರು. ಐನ್ ಸ್ಟೀನ್‍ನ
ರಿಲೇಟಿವಿಟಿ ಸಿದ್ಧಾಂತದ ಪ್ರಕಾರ ಬೇರೆ ಬೇರೆ ನೆಲೆಗಳಲ್ಲಿ ನೋಡುವಾಗ ಸತ್ಯ ಬೇರೆ ಬೇರೆ
ರೀತಿಯಾಗಿ ಕಾಣಿಸುತ್ತದೆ. ಹಾಗಾದರೆ ಎಲ್ಲವೂ ಸತ್ಯವೇ!

ಈ ಎಲ್ಲಾ ವಿಶೇಷ ಸಂಶ್ಲೇಷಣೆ-ವಿಶ್ಲೇಷಣೆಗಳನ್ನು ಪರಿಶೀಲಿಸಿದಾಗ ಏಪ್ರಿಲ್ ಒಂದು
ಎಷ್ಟು ಮಹತ್ವದ ದಿನ ಎಂಬುದರ ಅರಿವಾಗದಿರದು. ಇದು ಎಲ್ಲರ ದಿನ ಆದರೂ ಯಾರ ದಿನವೂ ಅಲ್ಲ.
ಎಲ್ಲರಿಗೂ ಏಪ್ರಿಲ್ ಒಂದು ಅಂದರೆ ಒಳಗೊಳಗೇ ಖುಶಿ ಆದರೆ ಯಾರೂ ತಮ್ಮನ್ನು ತಾವು ವಿಶ್
ಮಾಡಿಕೊಳ್ಳಲಾರರು. ಆದರೆ ನಗೆ ಸಾಮ್ರಾಟರಿಗೆ ಆ ಚಿಂತೆ ಇಲ್ಲ, ಅವರು ಸಂತೋಷವಾಗಿ,
ಹೆಮ್ಮೆಯಿಂದೊಡಗೂಡಿ ವಿಶ್ ಮಾಡಿಕೊಳ್ಳುತ್ತಿದ್ದಾರೆ, 'happy April First'!

-ನಗೆ ಸಾಮ್ರಾಟ್