ಏಳೇಳು ಸುತ್ತಿನ ಕೋಟೆಯೊಳಗಿನ ರಾಜಕುಮಾರಿ

ಏಳೇಳು ಸುತ್ತಿನ ಕೋಟೆಯೊಳಗಿನ ರಾಜಕುಮಾರಿ

ಬರಹ

ಈ ಕಂತಿನ ಜತೆಗೆ ಫಿನ್ಲೆಂಡ್ ಅನಿಲ್ ಕುಮಾರ್ ಅವರ ಫಿನ್ಲೆಂಡ್ ಪ್ರವಾಸ ಕಥನ ಅಧಿಕೃತವಾಗಿ ಕೊನೆಗೊಳ್ಳುತ್ತದೆ. ಇದು ಬೇರೆ ಬಗೆಯಲ್ಲಿ ಮುಂದುವರಿಯಬಹುದು ಎಂಬ ಭರವಸೆಯನ್ನು ಅವರೇ ನೀಡಿದ್ದಾರೆ.

-ಸಂಪದ ನಿರ್ವಾಹಕ ಬಳಕ

ಧ್ಯಾಹ್ನ ಸುಮಾರಿಗೆ ಸಾಮಿ ವ್ಯಾನಿಂಗನೊಂದಿಗೆ ಕಾರಿನಲ್ಲಿ ಹೊರಟೆ. ಎಲ್ಲಿಗೆ ಎಂಬುದನ್ನು ಆಮೇಲೆ ತಿಳಿಸಿದ. "ನನ್ನ ಅಮ್ಮನನ್ನು ಭೇಟಿ ಮಾಡುವ" ಎಂದ. ಆಕೆಯ ಅಮ್ಮ ನಮ್ಮಮ್ಮನ ವಯಸ್ಸಿನವರಿರಬೇಕು. ಏಕೆಂದರೆ ಸಾಮಿಗೆ ನನ್ನಷ್ಟೇ ವಯಸ್ಸು-ಸುಮಾರು ಮುವತ್ತೊಂಬತ್ತು. ಆತನಿಗೆ ನನ್ನಷ್ಟೇ ವಯಸ್ಸು ಎಂಬ ಕಾರಣಕ್ಕೆ ಆತನ ತಾಯಿಯ ವಯಸ್ಸೂ ನನ್ನಮ್ಮನಷ್ಟೇ ಇರಬೇಕೆಂದು ನಿಯಮವಿಲ್ಲ ಬಿಡಿ. ಆಕೆಯೇ ಆತನ ತಂದೆಯನ್ನು ಮೈಸೂರಿನಲ್ಲಿ ಪ್ರೀತಿಸಿ, ಸಾಮಿ ಹುಟ್ಟುವ ಮುನ್ನ ಮದುವೆಯಾಗಿ, ಸಾಮಿ ಮತ್ತು ಆತನ ಅಣ್ಣನ ಶಿಕ್ಷಣದ ಮೇಲಿನ ಪ್ರೀತಿಯಿಂದಾಗಿ ಗಂಡ ಹೆಂಡತಿ ಬೇರೆಯಾಗಿದ್ದರು.

ಸಾಮಿ ಕುಡಿಯುತ್ತಿರಲಿಲ್ಲ, ಸಿಗರೇಟು ಮತ್ತಿತ್ಯಾದಿ ಸೇದುತ್ತಿರಲಿಲ್ಲ, ಎಕೆಂದರೆ ಆತನಿಗೆ ಈಗಾಗಲೇ ಅರ್ಥ್ರಿಟಿಸ್ ಕಾಯಿಲೆಯಿತ್ತು. ಒಮ್ಮಿಂದೊಮ್ಮೆಲೆ ಮೈಕೈ ಕೀಲುಗಳ ನೋವಿನಿಂದ ಹಾಸಿಗೆ ಹಿಡಿದುಬಿಟ್ಟಾಗಲೆಲ್ಲ ಟ್ಯಾಕ್ಸಿಗೆ ಫೋನ್ ಮಾಡಿ ಎರಡು ವಾರ ಕಾಲ ಆಸ್ಪತ್ರೆ ಸೇರಿಬಿಡುತ್ತಿದ್ದ. ಒಂಟೊಂಟಿಯಾಗಿ ನೂರಾರು ಕಿಲೋಮೀಟರ್ ಅಂತರದಲ್ಲಿ ಮುದುಕ ಮುದುಕಿಯರು ವಾಸಿಸುತ್ತಿದ್ದರೂ ಫೋನ್-ಇನ್-ಟ್ಯಾಕ್ಸಿ ವ್ಯವಸ್ಥೆ ಇದ್ದುದ್ದರಿಂದ ಅವರೆಗೆಲ್ಲ ಒಬ್ಬೊಬ್ಬರೇ ಇರುವುದು ಸುಲಭವಾಗಿಬಿಟ್ಟಿತ್ತು. ಮೊಬೈಲ್ ಮೂಲಕ ಬೇಕಾದವರೊಂದಿಗೆ ಹಾಗೂ ರಾಂಗ್‌ ನಂಬರ್ ಆಗಿದ್ದಲ್ಲಿ ಬೇಡವಾದವರೊಂದಿಗೂ ಮಾತನಾಡುವ ಸೌಕರ್ಯದ ದೆಸೆಯಿಂದಾಗಿ ಅವರ ಒಬ್ಬಂಟಿ ಬದುಕು ಇನ್ನೂ ಹೆಚ್ಚು ಏಕಾಂಗಿಯಾಗುತ್ತ ಹೋಗಿತ್ತು.

ಸಾಮಿಯ ಅಮ್ಮನನ್ನು ಭೇಟಿ ಮಾಡಿದ ತಕ್ಷಣ ಒಳ್ಳೆಯ ಹಿಂದಿ 'ಬೇಟ'ನಂತ ಲತಾ ಮಂಗೇಶ್ಕರ್‌ಳ ಒಂದು ಭಜನ್ ಕ್ಯಾಸೆಟ್ ಕೊಟ್ಟೆ. ವಯಸ್ಸಾದ ಲತಾಳನ್ನೂ ಸುಧಾರಿಕೊಳ್ಳಲೂ ಅವಕಾಶ ಕೊಡದಂತೆ ಕೂಡಲೆ ಹಾಡಿಸಿ, ತಾಳಕ್ಕೆ ಕುಣಿಯತೊಡಗಿದಳು ಸಾ.ಅಮ್ಮ! ಪಂಡರಿಪುರದ ವಿಠ್ಠಲ ಆ ಸೀನ್ ನೋಡಬೇಕಿತ್ತು. ೭೦ರ ದಶಕದ ಹಿಪ್ಪಿಜನಾಂಗದವರು ೯೦ರ ದಶಕದಲ್ಲಿ ಮುದುಕರಾಗಿ, ಇಲ್ಲವಾದಲ್ಲಿ ಮುದುಕಿಯರಾಗಿ ಸವಿ ಸವಿ ನೆನಪಿನಲ್ಲಿ, ಕೇಳಿಬರುವ ಯಾವ ಹಾಡಿಗಾದರೂ ಅದೇ ಸ್ಟೆಪ್ಸ್ ಹಾಕಿದಂತಿತ್ತು ಆಕೆಯ ಕುಣಿತ. ಸಾಮಿ ಒಂದಷ್ಟು ತೆರಿಗೆಯ ಲೆಕ್ಕಪತ್ರ ನೋಡಿ ಕೊಟ್ಟ ಆಕೆಗೆ. ಇಬ್ಬರೂ ಇಬ್ಬರ ಬಗ್ಗೆ ಮಾತ್ರ ಮಾತನಾಡಲಿಲ್ಲ.

ಸಾ.ಅಮ್ಮ ಆಕೆಯ ಮಗನ ಬಗ್ಗೆ, ಆಕೆಯ ಮಗ ತನ್ನ ಅಣ್ಣನ ಬಗ್ಗೆ. ಆತ ಫಿನ್ಲೆಂಡಿನಲ್ಲೇ ಇರುವ ಕಲಾವಿದ. "ಚಿಕ್ಕ ವಯಸ್ಸಿನಲ್ಲಿ ಅಣ್ಣ ತಮ್ಮಂದಿರಾದವರು ಬೆಳೆಯುತ್ತ ಬೆಳೆಯುತ್ತ ದಾಯಾದಿಗಳಾಗುತ್ತಾರೆ ಸಾಮಿ" ಎಂದು, ಏನೂ ಕಾರಣವಿಲ್ಲದೆಯೂ ಆತನಿಗೆ ಹೇಳಿದೆ, ಹಿಂದಿರುಗಿ ಬರುವಾಗ. ಸಾಮಿಯ ಕೈ ಮಾತನಾಡಿತು. ಒಂದು ಕೈಯಲ್ಲಿ ಸ್ಟೀರಿಂಗ್ ಹಿಡಿದು, ಮತ್ತೊಂದನ್ನು ಗಾಳಿಯಲ್ಲಿ ಆಡಿಸಿದ, ಇಲ್ಲದ ಕ್ರಿಕೆಟ್ ಬಾಲನ್ನು ಸ್ಪಿನ್ ಮಾಡುವಂತೆ. "ಮುಚ್ಕೊಂಡಿರು ಗುರುವೆ" ಎಂದು ಅದನ್ನು ನಾನೇ ಕನ್ನಡಕ್ಕೆ ತರ್ಜುಮೆ ಮಾಡಿಕೊಂಡು ಅದನ್ನನುಸರಿಸಿದೆ.

"ಫಿನ್ಲೆಂಡಿನಲ್ಲಿ ನಿನಗೆ ತುಂಬ ಇಷ್ಟವಾದುದೇನು?" ಎಂದು ಸಾ.ಅಮ್ಮ ಕೇಳಿದ್ದಳು. ಕೂಡಲೆ ಉತ್ತರಿಸಿದ್ದೆ, ಪ್ರಶ್ನೆ ಕೇಳಿದರೆ ಸಾಕೆಂದು ಆ ಮೂರು ತಿಂಗಳಲ್ಲಿ ಯುಗಾಂತರದಿಂದ ಕಾದಿರುವಂತೆ.

"ಫಿನ್ಲೆಂಡಿನಲ್ಲಿ ಪ್ರಶ್ನೆಗಳೇ ಇಲ್ಲದಿರುವುದು. ಏಕೆಂದರೆ ಅದಕ್ಕೆ ಉತ್ತರವೂ ದೊರಕದು. ಇಷ್ಟು 'ಒಂಟಿತನವನ್ನು ಜೋಡಿ' ಮಾಡಿಕೊಂಡಿರುವ ಇಲ್ಲಿನ ಜನರ ಐರನಿ ನನಗಿಷ್ಟ.

ಜಪಾನೀಯರು ರೂಪಕದ ಭಾಷೆಯನ್ನು ಅರ್ಥಮಾಡಿಕೊಳ್ಳಲಾರರಂತೆ. ನೀನು ಬುದ್ಧನ ಅಪ್ಪನಂತಿದ್ದೀಯ ಅಂದರೆ ನನ್ನ ಮಗನ ಹೆಸರು ಬುದ್ಧನಲ್ಲ ಅನ್ನುವಂತಹ ಜನ ಅವರು. ಸೂರ್ಯನ ಬೆಳಕು ಇಷ್ಟು ಬೆಲೆಯುಳ್ಳದ್ದೆಂದು ಅದಿಲ್ಲದ ಈ ನಾಡಿಗೆ ಬಂದ ಮೇಲೇ ತಿಳೀದದ್ದು. ಅದೂ ಇಲ್ಲಿ ಅಪರೂಪವಾಗಿ ದರ್ಶನ ನೀಡಿದ ಸೂರ್ಯನೇ ಅದನ್ನು ಬಿಡಿಸಿ ಹೇಳಿದ್ದು. ಲತಾ ಹಾಡು, ಕಿಟಕಿಯಾಚೆಗಿನ ಆ ಬಿಸಿಲು, ಇಕ್ಕಟ್ಟಿನ ಕ್ವಾರ್ಟರ್ಸ್‌ನಂತಹ ಮನೆ, ಆಚೆ ಕಾಣುವ ವಿಫುಲ ಪೈನ್ ಮರಗಳು--ಇವಿಷ್ಟೂ ನನ್ನ ಊರನ್ನು ನೆನಪಿಸುವುದಿಲ್ಲ. ಬದಲಿಗೆ ನನ್ನ ಬಾಲ್ಯದಲ್ಲಿ ಆ ಊರು ಹೇಗಿತ್ತೋ ಅದನ್ನು ನೆನಪಿಸುತ್ತದೆ. ವಿಶೇಷವೆಂದರೆ ನಮ್ಮೂರಿನಲ್ಲಿ ಪೈನ್ ಮರಗಳಿಲ್ಲ, ನಾವೆಂದೂ ಕ್ವಾರ್ಟರ್ಸ್‌ಗಳಲ್ಲಿರಲಿಲ್ಲ. ನೆನಪಿಗೆ ಭ್ರಮೆಯ ಶಕ್ತಿ ಇರುತ್ತದೆ. ಆದ್ದರಿಂದಲೇ ವಾಸ್ತವ ಆಯ ತಪ್ಪುವುದನ್ನು ನೆನಪೆನ್ನುತ್ತೇವೆ. ಮರೆವಿನಲ್ಲಿ ಮಾತ್ರ ವಾಸ್ತವ ಗಟ್ಟಿಯಾಗಿ ಬಚ್ಚಿಟ್ಟುಕೊಂಡಿರುತ್ತದೆ. ಇಲ್ಲದ ವಾಸ್ತವದ ನೆನಪಿನ ಮರೆವನ್ನು ಫಿನ್ಲೆಂಡಿನಲ್ಲಿ ಕಂಡುಕೊಂಡೆ" ಎಂದೆ. "ಅಪ್ಪಿತಪ್ಪಿಯೂ ಕಥೆ ಕವನ ಬರೆಯುವ ಪ್ರಯತ್ನ ಮಾಡಬೇಡ" ಎಂದು ಆಶೀರ್ವದಿಸಿ ಸಾ.ಅಮ್ಮ ಕರಡಿ ಅಪ್ಪುಗೆಯೊಂದನ್ನು ನೀಡಿ ಹೇಳಿದಳು, "ನೀನೊಬ್ಬ ವಿಚಿತ್ರ ಭಾರತೀಯ".

"ನಮ್ಮೂರಿನವರೆಲ್ಲ ಹಾಗೆ. ಊರಿನಿಂದ ಹೊರಬಂದಾಗ ಮಾತ್ರ ಯದ್ವಾತದ್ವಾ ಕುಣಿಯುತ್ತಾರೆ. ಊರೊಳಗೆ ಜಂಟಲ್‌ಮನ್‌ಗಳು ನಾವ್ಗಳೆಲ್ಲ" ಎಂದೆ.

*

ಕಾರ್ ಮತ್ತೆ ಓಡತೊಡಗಿತು, ಲಂಗುಲಗಾಮಿಲ್ಲದಂತೆ. ಟಿ.ವಿಯಲ್ಲಿ ಹಾಲಿವುಡ್ ಸಿನೆಮಗಳಲ್ಲಿ ನೋಡುತ್ತೀರಲ್ಲ ಆ ಅದ್ಭುತ ಬೆಟ್ಟ, ಕಾಡು, ಮಂಜಿನ ದೃಶ್ಯಗಳು, ಅವೆಲ್ಲ ಸೆಟ್‌ಗಳಲ್ಲ. ಅವೆಲ್ಲವನ್ನೂ ನಿಜವಾಗಿ ದಾಟಿ ಹೋಗುತ್ತಿದ್ದೆವು. ಜನಾ ಅಂದರೆ ಜನ--ನನ್ನ ತಲೆಯ ತುಂಬ. ಏಕೆಂದರೆ ಅಲ್ಲಿ ಅವರ್ಯಾರೂ ಕಾಣುತ್ತಿಲ್ಲ. ಮತ್ತೆ ಸಾಮಿಯನ್ನು ವಿಚಾರಿಸುವ ಕ್ಲೀಷಾತ್ಮಕ ಕೆಲಸ ಮಾಡಲಿಲ್ಲ. ವಾಹನಗಳೂ ಆಲ್‌ಮೋಸ್ಟ್ ನಿಲ್. ಸ್ವಲ್ಪ ಹೊತ್ತಿನಲ್ಲಿಯೇ ಒಂದು ನೇರ ರಸ್ತೆ ಕಣ್ಣಿಗೆ ಬಿತ್ತು. ಅದರ ತುದಿಯೂ ಕಾಣುವಷ್ಟು ನೇರವಾಗಿತ್ತದು! ಅದರ ತುದಿಯಲ್ಲೊಂದು ದ್ವೀಪ. ಅಲ್ಲಿಗೆ ಹೋಗಿದ್ದ ನನ್ನ ಕಣ್ಣುಗಳು ವಾಪಸ್ ಬರಬೇಕೆಂದರೆ ನಮ್ಮ ಕಾರ್ ಅದಕ್ಕೆ ಅಡ್ಡಿ. ಅರ್ಥಾತ್ ನಾವು ನೇರ ಆ ದ್ವೀಪಕ್ಕೆ ಹೋಗುತ್ತಿದ್ದೆವು. ಅದರ ಸುತ್ತಲೂ ಪ್ರಶಾಂತವಾದ ನದಿ ಮತ್ತು ಅದಕ್ಕೆ ಹಸಿರು ಹೂಗಳಂತೆ ಕಾಣುವ ಅಂತಹ ಹೂಗಳುಳ್ಳ ಮರಗಳ ಗುಂಪಿನಿಂದಾವೃತ್ತವಾದ ದಟ್ಟ ಕಾಡು. ಕಾಲ ಅನ್ನುವುದು ನಿಂತುಬಿಡುವ ಕ್ಲೀಷೆಯೂ ಒಂದರೆಕ್ಷಣ ನಿಂತಂತಾಗಿತ್ತು ಆಗ. ಸಾಮಿಯ ಮುಖಭಾವವೂ ಅಷ್ಟೇ ಫ್ರೀಝ್ ಆದಂತೆಯೇ ಇತ್ತು. ಈತ ಇಂಡಿಯದಲ್ಲೂ ಹೀಗೇ ಇರಬಹುದಾದರೆ ಬಾಲಿವುಡ್‌ನ ಬುದ್ಧನ ಪಾತ್ರಕ್ಕೆ ಈತನೇ ಸೂಕ್ತ ಎಂದು ಗೊತ್ತಿರದ ನಿರ್ದೇಶಕ, ನಿರ್ಮಾಪಕರಿಗೆಲ್ಲ ಮನಸ್ಸಿನಲ್ಲೇ ಎಸ್.ಎಂ.ಎಸ್ ಕಳಿಸಿ ಫಿನ್ನಿಶ್ ಮಾಡಿದೆ.

"ಈ ದ್ವೀಪ ನನ್ನ ಅಜ್ಜಿ ಅಂದರೆ ಅಮ್ಮನ ಅಮ್ಮನದು" ಎಂದ ಸಾಮಿ. "ನೀನು ಲಕ್ಕಿ ಹಾಗಾದರೆ" ಎಂದೆ. "ಹಾಗಲ್ಲ. ಆಕೆ ಇನ್ನೂ ಇದ್ದಾಳೆ. ನನ್ನಜ್ಜಿಯದ್ದೇ ಅಲ್ಲಿ ಸರ್ಕಾರ. ಅವಳೇ ಅದಕ್ಕೆ ಗವರ್ನರ್" ಎಂದು ನಗತೊಡಗಿದ. ಮಲಂಡರ್ ಎಂಬ ಕಲಾವಿರ್ಮರ್ಶಕನ ಗೆಳತಿ ಈಗಾಗಲೇ ಮಂತ್ರಿಯಾಗಿರುವುದಾದರೆ ಜನರೇ ಇಲ್ಲದ ಈ ನಾಡನ್ನು ಆಳುವುದು ಅದೆಷ್ಟು ಸುಲಭ ಎಂಬುದನ್ನು ರಷ್ಯನ್ನರು ಹಾಗೂ ಸ್ವೀಡಿಷ್ ಜನ ತಿಳಿಸುತ್ತಾರೆ ಬಿಡು. ನಿನ್ನಜ್ಜಿಯದೇನು ಮಹಾ" ಎಂದೆ. ಸಾಮಿ ಸುಮ್ಮನೆ ತುಟಿಯ ತುದಿಗಳನ್ನು ತಲಾ ಎರಡೆರೆಡು ಎಂ.ಎಂ. ಹಿಗ್ಗಿಸಿದ.

ಸಾಮಿಯಜ್ಜಿಯ ಆ ದ್ವೀಪದಲ್ಲಿ ಎರಡೇ ಮನೆ. ಎರಡನೆಯದು ಅಜ್ಜಿ ತನ್ನ ಮೊಮ್ಮೊಗನ ಅಮ್ಮನಿಗಾಗಿ ಕಟ್ಟಿಸಿಕೊಟ್ಟಿರುವುದು. ಅಮ್ಮನನ್ನು ನೋಡಲು ಮಗಳು ಬಂದಾಗ ತನ್ನ ಪ್ರೈವೆಸಿಗೆ ತೊಂದರೆ ಎಂದು ಭಾವಿಸಿ ಆ ೮೫ ವರ್ಷದ ಒಬ್ಬಂಟಿ ಅಜ್ಜಿ ಕಟ್ಟಿಸಿರುವ ಮನೆ! ಸ್ವಂತ ಮಗಳಿಂದಾಗಿ ಒಂಟಿಯಾಗಿರುವ ತನ್ನ ಪ್ರೈವೆಸಿಗೆ ತೊಡಕೆನ್ನಬಲ್ಲವರು ಬಹುಶ: ಫಿನ್ನಿಶ್‌ರು ಮಾತ್ರವಿರಬಹುದು. ಅಜ್ಜಿಯನ್ನು ನೋಡಿದ ತಕ್ಷಣ ಕಡಿಮೆಯೆಂದರೆ ಗಟ್ಟಿ ಹೆಚ್ಚೆಂದರೆ ಗಟಾಣಿ ಎಂದು ತಿಳಿದುಕೊಂಡೆ. "ಈಕೆ ಒಂದೆರೆಡು ವರ್ಷದಿಂದ ಸಸ್ಯಾಹಾರಿಯಾಗಿಬಿಟ್ಟಿರುವುದರಿಂದ ಜನ ಈಕೆಯನ್ನು ತಲೆಕೆಟ್ಟಿರಬೇಕೆಂದು ಭಾವಿಸುತ್ತಾರೆ" ಎಂದ ಸಾಮಿ. ಆಕೆ ಸ್ವತ: ತೋಟ ಬೆಳೆಸಿದ್ದಾಳೆ, ತುಡುಗು ದನಗಳ ಭಯವಿಲ್ಲದೆ. ಸ್ವಲ್ಪ ಕುಂಟುವುದರಿಂದ ಒಂದು ಮೊಟಾರು ತ್ರಿಚಕ್ರದ ಕುರ್ಚಿ ಇರಿಸಿಕೊಂಡಿದ್ದಾಳೆ. ಅದರಲ್ಲೇ ಇಪ್ಪತ್ತು ಮೂವತ್ತು ಕಿಲೋಮೀಟರು ಸಮೀಪದ ಫುಡ್‌ವರ್ಲ್ಡ್‌ಗೆ ತಿಂಗಳಿಗೊಮ್ಮೆ ಹೋಗಿಬರುತ್ತಾಳೆ.

ಮತ್ತು ಆಕೆಯ ಕಥೆಯು ಕಥೆ-ಕಾದಂಬರಿ-ಸಿನೆಮಗಳ ಎಲ್ಲ ನಾಯಕಿಯರದಂತೆಯೇ. ಗಂಡ ಎರಡನೇ ಪ್ರಪಂಚ ಯುದ್ಧದಲ್ಲಿ ಪೈಲಟ್ ಆಗಿದ್ದವ. 'ಫಿನ್ನಿಶ್ ಜನ ಜ್ಯೂ ಜನರನ್ನು ಜರ್ಮನರಿಗೆ ಹಿಡಿದುಕೊಡಲಿಲ್ಲ, ಅವರು ತಟಸ್ಥ ಸ್ವಸ್ ಜನರಂತೆ' ಎಂಬ ನಂಬಿಕೆ ಸುಳ್ಳು ಎಂದು ಗೆಳತಿ ಕಿರ್ಸಿ ವಾಕಿಪಾರ್ಥ ಒಮ್ಮೆ ಹೇಳಿದ್ದಳು. ಅದರ ಬಗ್ಗೆ ನಮಗೆ ನಾಚಿಕೆಯಾಗುತ್ತಿದೆ ಎಂದಳು. ಹಿಡಿದು ಕೊಟ್ಟಿದುದರ ಬಗ್ಗೆಯೋ ಅಥವ ಅದನ್ನು ಐವತ್ತು ವರ್ಷ ಬಹಿರಂಗಪಡಿಸಲಿಲ್ಲ ಎಂಬುದರ ಬಗ್ಗೆಯೋ ಎಂದು ನಿರುದ್ಧೇಶಪೂರ್ವಕವಾಗಿ ಕೇಳಿ, ಉದ್ದೇಶಪೂರ್ವಕವಾಗಿ ಆಕೆಯನ್ನು ಹರ್ಟ್ ಮಾಡಿದ್ದೆ, ಹೇಗಿದ್ದರೂ 'ಸಾರಿ' ಕೇಳಬಹುದಲ್ಲ ಮುಂದೆ, ಎಂದು. ಸಾ.ಅಜ್ಜಿಯ ಗಂಡನಿಗೆ ನಿರಂತರವಾಗಿ ಮಾರ್ಫಿನ್ ಮಾತ್ರೆಗಳನ್ನು ನುಂಗಿಸಲಾಗುತ್ತಿತ್ತು, ಎಚ್ಚರವಾಗಿರಲು. ಹಲವು ವರ್ಷಗಳ ಈ ಅಭ್ಯಾಸವು ಯುದ್ಧಾನಂತರವೂ ಮುಂದುವರೆಯಿತು. ಆತ ಮಾನಸಿಕವಲ್ಲದಿದ್ದರೂ ಬದುಕಿನ ಸಮತೋಲನ ಕಳೆದುಕೊಂಡ. ನರ್ಸ್ ಆಗಿದ್ದ ಈಕೆ ಆತನನ್ನು ತೊರೆದಳು. ಆತ ಮತ್ತೊಂದು ಮದುವೆಯಾದ. ಈಕೆ ಆ ಸಿಟ್ಟಲ್ಲಿ ಮದುವೆಯೇ ಆಗದೆ ಒಂಟಿಯಾಗಿ ಉಳಿದುಬಿಟ್ಟಳು, ತನ್ನ ದ್ವೀಪ ಹಾಗೂ ತನ್ನ ಮನೆಯೊಂದಿಗೆ. ಈ ಐರನಿಯನ್ನೇ ನನಗಿಷ್ಟವೆಂದು ಐರನಜ್ಜಿಯ ಮಗಳಿಗೆ ಕೆಲವು ಘಳಿಗೆಗಳ ಮುಂಚೆಯಷ್ಟೇ ತಿಳಿಸಿದ್ದೆ.

ಸಾ.ಅಜ್ಜಿಗೆ ಸ್ಪಷ್ಟ ಇಂಗ್ಲಿಷ್ ಬರುತ್ತಿತ್ತು. ಕೆಲವು ಫೋಟೋಗಳನ್ನು ಕ್ಲಿಕ್ಕಿಸಿದೆ. ನನ್ನ ಅಜ್ಜಿ ಬಗ್ಗೆ ಹೇಳಿದೆ. ಅವರಿನ್ನೂ ಬದುಕಿದ್ದಾರೆ ಹಾಗೂ ಅವರಿಗೆ ಮೊಮ್ಮೊಗಳ ಮೊಮ್ಮೊಗಳು ಇದ್ದಾಳೆ ಎಂದು ತಿಳಿಸಿದೆ. ಅಜ್ಜಿ ಒಂದು ಅಸಲಿ ದಂತದ ಸ್ಮೈಲ್ ನೀಡಿತು. ನಲ್ವತ್ತು ವರ್ಷದ ಹಿಂದೆ ಮೈಸೂರಿಗೊಮ್ಮೆ ಬಂದಿದ್ದಾಗ ಕೊಂಡಿದ್ದ ಒಂದು ಪಾರದರ್ಶಕ ರೇಶ್ಮೆ ಸೀರೆ ತೋರಿಸಿತು ಅಜ್ಜಿ. ದೇಶ ಬಿಟ್ಟು ಎರಡೂವರೆ ತಿಂಗಳಾಗಿದ್ದುದ್ದರಿಂದ ಅದರ ವಿವರವಿವರವನ್ನೂ ಕುರುಡನಂತೆ ಸ್ಪರ್ಶದಿಂದಲೇ ನೋಡತೊಡಗಿದೆ. ಅದೇ 'ಕಾಲನು ನಿಂತ' ಭಾವ, ನಿರಂತರವಾಗಿ, ಆ ಮನೆಯ ಒಳಹೊರಗೆಲ್ಲ. "ಇಡೀ ದೇಶವೇ ಒಂದು ಸುಂದರ ಸೆರಮನೆ" ಎಂದೆ. ಜನರನ್ನೇ ಹಾಸಿಕೊಂಡು ಹೊದೆಯುವವರು ನಾವು, ನೀವುಗಳೆಲ್ಲ ಹಾಸಿ ಹೊದೆಯುವಷ್ಟಿದ್ದರೂ ಜನರಿಲ್ಲವಲ್ಲ ಎಂದು ಮುಂತಾಗಿ ಏನೇನೋ ಮಾತನಾಡತೊಡಗಿದ್ದೆ. ಅಪರೂಪಕ್ಕೆ ಕಾಣುವ ಬಿಸಿಲು ಸೆರಮನೆಯ ವಾತಾವರಣವನ್ನು ಸ್ವಲ್ಪ ಲಘುಗೊಳಿಸುತ್ತದೆ, ಸೆಲ್ಲಾರ್‌ನಿಂದ ಹೊರಾಂಗಣಕ್ಕೆ ಬಂದಂತೆ.

"ಇದೊಂದು ಚಂದಮಾಮದ ಕಥೆಯಂತಾಯ್ತು" ಎಂದೆ ಸಾಮಿಗೆ ಹಿಂದಿರುಗಿ ಬರುವಾಗ.
"ಯಾವುದು ನನ್ನಮ್ಮ ಅಜ್ಜಿಯರನ್ನು ಒಬ್ಬರಾದ ಮೇಲೆ ಒಬ್ಬರಂತೆ ಭೇಟಿ ಮಾಡಿದ್ದೆ?" ಎಂದ.
"ಅಲ್ಲ. ಅದೊಂದು ಉಪಕಥೆ. ಫಿನ್ಲೆಂಡಿಗೆ ಬಂದದ್ದೇ ಸಪ್ತಸಮುದ್ರ ದಾಟಿ ಉತ್ತರ ಧ್ರುವಕ್ಕೆ ಬಂದಂತಾಯ್ತು. ಅದರಲ್ಲಿ ರಾಕ್ಷಸರಲ್ಲದರರೊಂದಿಗೆ ಮೌನವೆಂಬ ಬಲಾಡ್ಯ ಅಸ್ತ್ರ ಬಳಸಿ ಹೋರಾಡಿದ್ದಾಯಿತು. ಕೊನೆಗೂ ಉತ್ತರ ಧ್ರುವದ ರಾಜಕುಮಾರಿಯನ್ನು ಅಂದರೆ ನಿನ್ನಜ್ಜಿಯನ್ನು ಆಕೆಯ ಕೋಟೆಯೊಳಗೇ ಭೇಟಿ ಮಾಡಿದ್ದು ಒಂದು ತಾನಾಗಿ ರೂಪುಗೊಂಡ ಸ್ಕ್ರಿಪ್ಟ್‌ನಂತಾಯ್ತು. ಇದೊಂದು ಪಕ್ಕ ಭಾರತೀಯ ಸ್ಕ್ರಿಪ್ಟು. ಸಿನೆಮ ಶೂಟಿಂಗ್ ಪೂರ್ಣವಾದ ದಿನ ಕೈಗೆ ಸಿಗುವ ಸ್ಕ್ರಿಪ್ಟ್" ಎಂದೆ.

ಹಿಂದಿರುಗಿ ನೋಡಿದಾಗ ದ್ವೀಪವಾಗಿದ್ದಿದ್ದು ಒಂದು ಭೂನಕ್ಷೆಯಾಗಿ ಮಾರ್ಪಾಡಾಗುತ್ತಿತ್ತು.

ಈ ಪ್ರವಾಸ ಕಥನದ ಇತರ ಭಾಗಗಳು

1. ಸಾವಿನ ಚೇತೋಹಾರಿ ಆರಂಭ 2. ಮೊಬೈಲ್ ಮೌನಿಗಳು
3. ಏಕಾಂಗಿತನದ ವಿರಾಟ್ ರೂಪ 4. ಸಾಮಿ ಎಂಬ ಕಂಪೆನಿಕೊಡುವ ವಾನ್ ಇಂಜನ್
5. 'ಸಾನ' ಮಾಡಿದರೆ ಫಿನ್ನಿಶ್ 6. ಒಬ್ಬಂಟಿಯೊಳಗೊಬ್ಬಂಟಿತನದ ಗ್ಯಾರಂಟಿ
7. ಫಿನ್ಲೆಂಡಿನಲ್ಲಿ 'ಭಾರ'ತದ ಅಡುಗೆ 8. ಇಲ್ಲದೆಯೂ ಇರುವವನ ಕಥೆ
9. ಫಿನ್ನಿಶ್ ನಾಲಗೆ ಹೊರಳಿದರೆ ಕನ್ನಡ! 10.ಎಲ್ಲೆಲ್ಲಿಯೂ ಎದುರು ಸಿಗುವವರು
11.ಏಳೇಳು ಸುತ್ತಿನ ಕೋಟೆಯೊಳಗಿನ ರಾಜಕುಮಾರಿ