ಒಂದು ಒಳ್ಳೆಯ ನುಡಿ - 206
* ಸೋಮಾರಿತನ ಎಲ್ಲಿದೆಯೋ ಅಲ್ಲಿ ಸಮಯಕ್ಕೆ ಸರಿಯಾಗಿ ಯಾವ ಕೆಲಸವೂ ಆಗುವುದಿಲ್ಲ. ಮನುಷ್ಯನ ಬಹುದೊಡ್ಡ ಶತ್ರು ಎಂದರೆ ಸೋಮಾರಿತನ. ಆಲಸಿಗಳು ಎಷ್ಟು ಹೇಳಿದರೂ ಅರ್ಧಂಬರ್ಧ ಕೆಲಸ ಮಾಡುವವರು. ಬೇರೆಯವರ ಮಾತನ್ನಾಗಲಿ, ಬುದ್ಧಿವಾದವನ್ನಾಗಲಿ ಕಿವಿಮೇಲೆ ಹಾಕಿಕೊಳ್ಳುವುದಿಲ್ಲ. ಇವರಿಗೆಂದೇ ಒಂದು ಗಾದೆಯಿದೆ. 'ಕೋಣನೆದುರು ಕಿನ್ನರಿ ನುಡಿಸಿದಂತೆ'. ಕಿವಿಯಿದ್ದೂ ಕಿವುಡರಂತೆ ವರ್ತಿಸುವರು. ಭಾನುವಾರ ಎಂದರೆ ಹೆಚ್ಚಿನವರಿಗೂ ಆಲಸ್ಯ. ವಾರದ ಗಡಿಬಿಡಿಯಿಲ್ಲವೆಂದು. ಆದರೆ ಹೆಂಗಳೆಯರಿಗೆ ಎಲ್ಲಾ ದಿನಗಳೂ ಒಂದೇ. (ಕೆಲಸ ಮಾಡುವವರಿಗೆ ಮಾತ್ರ) ಸೋಮಾರಿತನವನ್ನು ದೂರ ಓಡಿಸಿ ಕೊಟ್ಟ ಕೆಲಸವನ್ನು ಜವಾಬ್ದಾರಿಯಿಂದ ನಿಭಾಯಿಸೋಣ.
* ಸಾವು ಎನ್ನುವುದು ಹಸಿವಿನಿಂದ ಬಳಲಿದ ವ್ಯಾಘ್ರವೊಂದು ತನ್ನ ಬೇಟೆಗಾಗಿ ಹೊಂಚು ಹಾಕಿ ಕುಳಿತಂತೆ. ಎಷ್ಟು ಹೊತ್ತಿಗೆ ಮೇಲೆರಗುವುದೆಂದು ಹೇಳಲಾಗದು. ಒಳ್ಳೆಯ ಕೆಲಸಕಾರ್ಯಗಳನ್ನು ನಾಳೆಗೆ ಮುಂದೂಡಬಾರದು. ಉತ್ತಮ ಕೆಲಸಗಳನ್ನು ಗ್ರಹಿಸಿದಾಗಲೇ ನೆರವೇರಿಸಿಬಿಡಬೇಕು. ನಾಳೆಗಿಟ್ಟರೆ ಕೆಲಸವೂ ಹಾಳು, ನಾವೂ ಇರಲಾರೆವು.
* ಅದೃಷ್ಟದಿಂದ ಅರಿವು ಬರಬಹುದೆಂದು ನಾವು ಗ್ರಹಿಸಿದ್ದರೆ ಅದು ತಪ್ಪು ತಿಳುವಳಿಕೆ. ಅರಿವಿನಿಂದ ಅದೃಷ್ಟ ಖಂಡಿತಾ ಸಿಗಬಹುದು, ಇದು ನಂಬಿಕೆ ಮತ್ತು ಆತ್ಮವಿಶ್ವಾಸ. ಸದಾಕಾಲ ಸತ್ ಚಿಂತನೆಗಳನ್ನೇ ಮೈಗೂಡಿಸಿಕೊಂಡರೆ ಬುದ್ಧಿವಂತನಾಗಬಹುದು. ಅರಿವು, ತಿಳಿವು, ಜ್ಞಾನ ನಮ್ಮಲ್ಲಿ ಮೂಡಲು ಹೆಚ್ಚು ಹೆಚ್ಚು ಓದುವ ಅಭ್ಯಾಸ, ಜ್ಞಾನಿಗಳ ಮಾತನ್ನು ಆಲಿಸುವ ವ್ಯವಧಾನ, ಯೋಗ ಧ್ಯಾನ, ಸತ್ಸಂಗ, ಬುದ್ಧಿವಂತರ ಸ್ನೇಹ, ಒಡನಾಟವಿರಬೇಕು.
* ಪ್ರತಿಯೊಬ್ಬ ಭಾರತೀಯನ ಪಾಲಿಗೆ ಜನವರಿ 26 ಹೆಮ್ಮೆಯ ಮಹತ್ವದ ದಿನ. ತನ್ನದೇ ಆದ ಸಂವಿಧಾನ ಭಾರತ ದೇಶ ಬೇಕೆಂದು, ತೀರ್ಮಾನಕ್ಕೆ ಬಂದು, ಅನುಷ್ಠಾನಗೈದ ದಿನ. ಅದುವರೆಗೂ ಅಂದರೆ 1947ರಿಂದ ಸ್ವಾತಂತ್ರ್ಯ ಪಡೆದಿದ್ದರೂ, ಹಿಂದೆ ಇದ್ದ ರಾಜಪ್ರಭುತ್ವವನ್ನು ತ್ಯಜಿಸಿ, ಪ್ರಜಾಪ್ರಭುತ್ವದಲ್ಲಿ ತನ್ನ ನಿಜ ಅಸ್ಥಿತ್ವನ್ನು ಸ್ಥಾಪಿಸಿ ಆರಂಭಿಸಿದ ದಿನ.ನಮ್ಮ ದೇಶದ ಬೃಹತ್ ಲಿಖಿತ ಸಂವಿಧಾನದ ಪ್ರತಿಯೊಂದು ನೀತಿ ಸಂಹಿತೆಗೂ ಮರ್ಯಾದೆ, ಗೌರವ ಕೊಡುವುದು ನಮ್ಮ ಆದ್ಯ ಕರ್ತವ್ಯ. ಸಂವಿಧಾನ ರಚನೆಯ ಎಲ್ಲಾ ಮಹನೀಯರನ್ನು ನೆನೆಯೋಣವಿಂದು.
* ಹಸಿದ ಉದರಕ್ಕೆ ಅನ್ನ ಅವಶ್ಯಕ. ಅನ್ನವನ್ನು ದುಡಿದು ಸಂಪಾದಿಸಿ ಉಂಡಾಗ, ಆಗುವ ಸಂತೃಪ್ತಿ ಬಹಳ ದೊಡ್ಡದು. ಆ ಅನ್ನ ಗಳಿಕೆ ಒಂದು ವ್ರತಕ್ಕೆ ಸಮ. ಸುಮ್ಮನೆ ಕುಳಿತರೆ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ. ಉಣ್ಣುವ ಆಹಾರವನ್ನು ಬಿಸಾಡಬಾರದು. ನಮ್ಮ ಮಕ್ಕಳಿಗೂ ಅದನ್ನು ತಿಳಿಸಿಕೊಡಬೇಕು. ಸಂಪಾದನೆಯ ಕಷ್ಟವನ್ನು ಮನೆಮಂದಿಯೆಲ್ಲ ಅರಿತಿರಬೇಕು. ಒಂದೊಂದು ಅಗುಳಿನಲ್ಲಿಯೂ ರೈತನ ಬೆವರ ಹನಿಯಿದೆ, ಮನೆಯಲ್ಲಿ ದುಡಿಮೆ ಮಾಡುವವರ ಪರಿಶ್ರಮವಿದೆ.
* ಜೋರಾಗಿ ಗಾಳಿ ಬೀಸಿದಾಗ ಸಣ್ಣ ಹುಲ್ಲುಕಡ್ಡಿ, ತರಗೆಲೆ ಬಹಳ ದೂರಕ್ಕೆ ಹಾರಿ ಹೋಗಬಹುದು. ಬೃಹತ್ ಗಾತ್ರದ ಮರಗಳು ಧರೆಗುರುಳಬಹುದು. ದೊಡ್ಡದಾಗಿ, ಎತ್ತರವಾಗಿ ಬೆಳೆದ ಮರಗಳು ಎಷ್ಟು ಗಟ್ಟಿಮುಟ್ಟಾಗಿರುವುದಲ್ಲವೇ? ಆದರೆ ಬಿರುಗಾಳಿ ನಿಂತಾಗ ಹುಲ್ಲುಕಡ್ಡಿ ಬಿದ್ದಲ್ಲೇ ಇರುತ್ತದೆ. ಮರ ಇಲ್ಲದಾಗುತ್ತದೆ. ಇದೇ ರೀತಿ ಅಹಂಕಾರಿಗಳ ಬದುಕು ಸಹ, ಆಯುಷ್ಯ ಕಡಿಮೆ ಅಥವಾ ನೆಲಕಚ್ಚುತ್ತಾರೆ. ಸಜ್ಜನರು, ನಿಶ್ಯಕ್ತರು ವಿನಯ, ವಿಧೇಯತೆ, ಸದ್ಗುಣಗಳಿಂದ ವ್ಯವಹರಿಸಿ, ಸಮಾಜದ ಕಣ್ಣುಗಳಾಗುತ್ತಾರೆ. ಸುತ್ತಮುತ್ತಲಿನವರಿಗೆ ಮಾದರಿಯಾಗುತ್ತಾರೆ. ಅವರ ಕೆಲಸಕಾರ್ಯಗಳಿಗೆ ಅವರಿಲ್ಲದಿದ್ದರೂ ಆಯುಷ್ಯ ಹೆಚ್ಚು.
* ಚುಚ್ಚು ಮಾತುಗಳು, ವ್ಯಂಗ್ಯ ವಿಡಂಬನೆಗಳು ಮನಸ್ಸನ್ನು ಘಾಸಿಗೊಳಿಸುವುದು ಸಹಜ. ಇದು ಒಂದು ರೀತಿಯ ಹಿಂಸೆ ಎಂದೇ ಹೇಳಬಹುದು. ಕೆಲವರಿಗೆ ಈ ರೀತಿ ಹಿಂಸಿಸುವುದೆಂದರೆ ತಾವೇನೋ ಸಾಧಿಸಿದ್ದೇವೆಂಬ ಅಹಂ. ಇದೆಲ್ಲ ಅಲ್ಪಾಯುಷಿ ಮಾತ್ರ. ತಿಳಿವು ಮೂಡಿದಾಗ ನೆಲಕಚ್ಚಿಯಾರು. ಇತರರನ್ನು ಮೇಲೆ ಬಾರದಂತೆ ಮಾಡಲು, ಕುಗ್ಗಿಸಲು ಮಾಡುವ ಪ್ರಯತ್ನಗಳಷ್ಟೆ. ಹಿಂಸೆಯಿಂದ ಜನರ ಬಾಯಿ ಕಟ್ಟಬಹುದೇ ಹೊರತು ಅವರ ಆತ್ಮಶಕ್ತಿ ಕುಗ್ಗಿಸಲು ಸಾಧ್ಯವಿಲ್ಲ.
* ಒಂದು ಮಾತಿದೆ, ಹಳದಿ ಕಾಯಿಲೆ ಬಂದವಗೆ ಕಣ್ಣಿಗೆ ಕಾಣಿಸುವುದೆಲ್ಲ ಹಳದಿಯಂತೆ. ಹಾಗೆಯೇ ನಮ್ಮ ಮನಸ್ಸಿನಲ್ಲಿ ಯಾರ ಬಗ್ಗೆಯಾದರೂ ಒಂದು ವಿಷಯ ಅಚ್ಚೊತ್ತಿದರೆ, ನಾವು ಅವರ ಗುಣ ಎಷ್ಟು ಬದಲಾವಣೆಯಾದರೂ ಒಪ್ಪಿಕೊಳ್ಳಲು ತಯಾರಿಲ್ಲ. ಮನಸ್ಸನ್ನು ಹಿಡಿದಿಟ್ಟುಕೊಳ್ಳುವುದೆಂದರೆ ಬಹಳ ಸಾಹಸ ಪಡಬೇಕು. ನಮ್ಮ ನಿಯಂತ್ರಣದಲ್ಲಿರಲು ಮೊದಲು ಮನಸ್ಸನ್ನು ಗೆದ್ದರೆ ಇಂದ್ರಿಯಗಳನ್ನು ಗೆಲ್ಲಲು ಬಹಳ ಸುಲಭ. ಯಾರನ್ನಾದರೂ ಪರಾಮರ್ಶನವೆಂಬ ತಕ್ಕಡಿಯಲ್ಲಿ ಹಾಕಿ, ಅನಂತರ ತೀರ್ಮಾನ ಮಾಡುವುದು ಸಜ್ಜನ ಬಂಧುಗಳ ಸ್ವಭಾವ. ನಾವು ಸಹ ಅದೇ ಸಾಲಿಗೆ ಸೇರೋಣ ಸ್ನೇಹಿತರೇ. ಗೊತ್ತಿದ್ದೂ ಇತರರಿಗೆ ನೋವು ಕೊಡದಿರೋಣ. ಕೆಲವು ಸಂದರ್ಭದಲ್ಲಿ ಮೌನವೇ ಆಭರಣ.
-ರತ್ನಾ ಕೆ. ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ