ಒಂದು ಒಳ್ಳೆಯ ನುಡಿ (219) - ಪಶ್ಚಾತ್ತಾಪ

ಒಂದು ಒಳ್ಳೆಯ ನುಡಿ (219) - ಪಶ್ಚಾತ್ತಾಪ

ಕೆಲವೊಮ್ಮೆ ನಾನು ಗೊತ್ತಿದ್ದೂ ಅಥವಾ ಗೊತ್ತಿಲ್ಲದೆಯೋ ತುಂಬಾ ತಪ್ಪನ್ನು ಮಾಡುತ್ತೇವೆ. ಅದು ನಮ್ಮ ಗಮನಕ್ಕೆ ಬರದೇ ಇರಲೂ ಬಹುದು. ಆದರೆ ನಮ್ಮ ಗಮನಕ್ಕೆ ಬಂದಾಗ ಮಾತ್ರ ತುಂಬಾ ಪಶ್ಚಾತ್ತಾಪ ಪಡುತ್ತೇವೆ. ಈ ಪಶ್ಚಾತ್ತಾಪದಿಂದ ಉಂಟಾದ ನೋವು ತುಂಬಾ ಕಠಿಣವಾದುದು. ನಮ್ಮ ಕೈಯಿಂದಲೇ ಆದ ತಪ್ಪಿಂದ ಒಬ್ಬರಿಗೆ ನೋವಾಗಿದೆ ಎಂದು ಗೊತ್ತಾದರೆ ಅದಕ್ಕಿಂತ ದೊಡ್ದ ಪಶ್ಚಾತ್ತಾಪ ಬೇರೊಂದಿಲ್ಲ. ನಾವು ಜೀವನದಲ್ಲಿ ಹಲವಾರು ತಪ್ಪುಗಳನ್ನು ಮಾಡಿರುತ್ತೇವೆ. ಕೆಲವೊಮ್ಮೆ ಅದರಿಂದ ಕೆಟ್ಟದಾಗುತ್ತದೆ ಅಂತ ಗೊತ್ತಿದ್ದರೂ ಮಾಡುತ್ತೇವೆ. ಕಡೆಗೆ ಅದು ನಮ್ಮ ಕಾಲ ಕೆಳಗೆ ಬಂದಾಗ ನಮಗೆ ತೊಂದರೆ ಆದಾಗ ನಾವು ಮಾಡಿದ್ದು ತಪ್ಪು ಎಂದು ಅರಿವಾಗುತ್ತದೆ.

ಅಲ್ಲಿಯವರೆಗೂ ಯಾರು ಏನೇ ಹೇಳಿದರೂ ನಮಗೆ ಅರ್ಥವಾಗುವುದಿಲ್ಲ. ಹಿರಿಯರು ಹೇಳಿದ ಗಾದೆ ಮಾತೊಂದಿದೆ. ‘ಮಾತು ಆಡಿದರೆ ಹೋಯಿತು. ಮುತ್ತು ಒಡೆದರೆ ಹೋಯಿತು' ಅಂತ. ಅದು ಬರೀ ಮಾತಿಗೆ ಸಂಬಂಧ ಪಟ್ಟದ್ದಲ್ಲ. ನಾವು ಯಾವುದೇ ಕೆಲಸ ಮಾಡುವ ಮೊದಲು ನೂರು ಬಾರಿ ಯೋಚಿಸಬೇಕಾಗುತ್ತದೆ. ಅದಾದ ನಂತರ ಯೋಚಿಸಿದರೆ ಯಾವ ಪ್ರಯೋಜನವೂ ಇಲ್ಲ. ಕಾಲ ಮಿಂಚಿ ಹೋಗಿರುತ್ತದೆ. ನಾವು ಮಾಡಿದ್ದು ತಪ್ಪು ಅಂತ ಗೊತ್ತಾದಾಗ ನಮ್ಮ ಮೇಲೆ ನಮಗೆ ಅಸಹ್ಯ ಹುಟ್ಟುತ್ತದೆ. ಮಾಡಿದ ಕೆಲಸಕ್ಕೆ ಕಣ್ಣೀರು ಹಾಕುತ್ತೇವೆ. ಹಾಗಾಗಿ ಏನೂ ಮಾಡುವ ಮುಂಚೆ ಅದರ ಪರಿಣಾಮ ಏನಾಗಬಹುದೆಂದು ತಿಳಿದಿದ್ದರೆ ಅಲ್ಲಿ ಪಶ್ಚಾತ್ತಾಪ ಪಡುವ ಪ್ರಮೇಯವೇ ಬರುವುದಿಲ್ಲ.

-ಆಯುಷಿ ನಾಯಕ್

ಚಿತ್ರ ಕೃಪೆ: ಇಂಟರ್ನೆಟ್ ತಾಣ