ಒಂದು ಒಳ್ಳೆಯ ನುಡಿ - 265

ಒಂದು ಒಳ್ಳೆಯ ನುಡಿ - 265

ಕೋಪ, ಸಿಟ್ಟು, ದ್ವೇಷದಲ್ಲಿ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಿಲ್ಲ, ಮಾಡಲೂಬಾರದು. ಒಳ್ಳೆಯ ಕಾರ್ಯಗಳನ್ನು ಸಾಧಿಸಲು ಒಳ್ಳೆಯ ಮಾತು, ನಡತೆ, ವ್ಯವಹಾರ, ನಯ-ವಿನಯಗಳಿದ್ದರೆ ಚಂದ. ಸುಖಾಸುಮ್ಮನೆ ಬಂದಿಲ್ಲ 'ಒಲಿದರೆ ನಾರಿ ಮುನಿದರೆ ಮಾರಿ' ಎಂಬುದಾಗಿ. ಪ್ರೀತಿಯಿಂದ, ನಯವಾಗಿ ಒಲಿಸಿಕೊಂಡರೆ ಕ್ಷೇಮ. ಕೆರಳಿದರೆ 'ಸಿಂಹಿಣಿ'ಯಾಗಬಲ್ಲಳು. ಭೂಮಿತೂಕದ ಮಹಿಳೆಯನ್ನು ಕೆಣಕದೆ, ತಾತ್ಸಾರ ಮಾಡದೆ ಪ್ರೀತಿ ವಿಶ್ವಾಸಗಳಿಂದ ನೋಡಿಕೊಂಡರೆ ಆಕೆಗೂ ಸಮಾಧಾನ, ಆ ಮನೆಯೂ ನಂದಗೋಕುಲ.

'ಹೆಣ್ಣು ಮಗು' ಜನಿಸಿದಾಗ ಬೆಲ್ಲ ಹಂಚುವುದು, ಗಂಡುಮಗು ಜನಿಸಿದಾಗ ಸಕ್ಕರೆ ಹಂಚುವುದು ಹಿಂದೆ ಹಳ್ಳಿಕಡೆಯ ‌ಸಂಪ್ರದಾಯ. ಇತ್ತೀಚೆಗೆ ತುಂಬಾ ಕಡಿಮೆಯಾಗಿದೆ. ಆದರೂ ಇದು ತಾರತಮ್ಯವಲ್ಲವೇ? ಆ ಬೇನೆ ತಿನ್ನುವ, ಕಷ್ಟ ಸಹಿಸುವ ತಾಯಿಯ ನೋವು ಅವಳಿಗೇ ಗೊತ್ತು. ನೋವು, ಸಂಕಟ ಒಂದೇ ಅಲ್ಲವೇ? ಹೆಣ್ಣು ಮಗುವೆಂಬ ತಾತ್ಸಾರ ಬೇಡ, ಗಂಡು ಹುಟ್ಟಿತೆಂಬ ಅಹಂ ಬೇಡ, ಇಬ್ಬರಿಗೂ ಉತ್ತಮ ಸಂಸ್ಕಾರವನ್ನು ನೀಡಿ ಬೆಳೆಸುವ ಹೊಣೆಗಾರಿಕೆ ಹೆತ್ತವರದ್ದು.

-ರತ್ನಾ ಕೆ ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ