ಒಂದು ಚಿತ್ರ - ಎರಡು ಗಝಲ್ ಗಳು
ಗಝಲ್ ೧
ಬಡತನದ ಕೌಶಲ್ಯದೊಳಗೆ
ಅರಳಿಸುತಿದೆ ಪ್ರತಿಮೆ
ಕುಸುರಿಯ ಚಿತ್ತಾರವನು
ಮೆರಸುತಿದೆ ಪ್ರತಿಮೆ||
ಕಲಾವಿದನ ಕೈಚಳಕ
ಗುಡಿಸಲಲಿ ಅವಿರ್ಭವಿಸಿದೆ
ಕಲಾಸಕ್ತರನ್ನು ಕೈಬೀಸಿ
ಕರೆಸುತಿದೆ ಪ್ರತಿಮೆ||
ಮಣ್ಣಿನ ಮುದ್ದೆಯನು
ಹದಮಾಡಿ ರೂಪಿಸುತಿಹನು
ಚೋಟುಗೇಣಿನ ಹೊಟ್ಟೆಗಾಗಿ
ಬರೆಸುತಿದೆ ಪ್ರತಿಮೆ||
ದೇವರ ಸ್ಮರಣೆಯಲಿ
ಕುಂಚವ ಬಣ್ಣದಲ್ಲದ್ದಿದನು
ವಿಸ್ಮಯದಲ್ಲಿ ಭಾವವನು
ಹರಿಸುತಿದೆ ಪ್ರತಿಮೆ||
ಅಭಿನವನ ಕರಗಳು
ಜೋಡಿಸಿವೆ ಬೆನಕನಿಗೆ
ಕಷ್ಟವನು ಸುಲಭದಲಿ
ಸರಿಸುತಿದೆ ಪ್ರತಿಮೆ||
-ಶಂಕರಾನಂದ ಹೆಬ್ಬಾಳ
********
ಗಝಲ್ ೨
ಅರಳುತಿದೆ ಕಲೆಗಾರರನ
ಕುಂಚದೊಳಗೆ ಗಣೇಶ
ಬೆರೆಯುತಿದೆ ಬಡತನದ
ಬೆವರಿನೊಳಗೆ ಗಣೇಶ||
ಕಮರುತಿಹ ಬದುಕೊಂದರ
ಚಿತ್ತಾರವಿದು ಉಜ್ವಲಿಸಿದೆ
ಕಮಲದಳದಂತೆ ಹೊಳೆದಿಹ
ಪ್ರತಿಭೆಯೊಳಗೆ ಗಣೇಶ||
ಕೈಚಳಕದ ವಿನ್ಯಾಸವಿದು
ಅಂಕುರಿಸಿದೆ ಬಡತನದಲಿ
ಮೈಪುಳಕದಿ ರಂಗೇರಿದ
ಆಂತರ್ಯದೊಳಗೆ ಗಣೇಶ
ಕನಸುಗಳ ಮೆರವಣಿಗೆ
ಸಾಲುಸಾಲು ರೂಪದಲಿದೆ
ಮನಸಿನಲಿ ಬೆಸೆಯುತಿಹೆ
ವಾತ್ಸಲ್ಯದೊಳಗೆ ಗಣೇಶ
ಅಭಿಜ್ಞಾಳ ಮಂದಿರದಲಿ
ರಾರಾಜಿಸಿದ ಮಹಾಮಹಿಮ
ಸ್ವೋಪಜ್ಞತೆ ಹಾದಿಯದು
ಪ್ರಥಮದೊಳಗೆ ಗಣೇಶ||
-ಅಭಿಜ್ಞಾ ಪಿ ಎಮ್ ಗೌಡ