ಒಬ್ಬ "ಸಾಮಾನ್ಯ" ಇನ್ ’ಮುಂಬೈ’ನಲ್ಲಿ "ಎ ವೆಡ್ ನಸ್ ಡೇ"

ಒಬ್ಬ "ಸಾಮಾನ್ಯ" ಇನ್ ’ಮುಂಬೈ’ನಲ್ಲಿ "ಎ ವೆಡ್ ನಸ್ ಡೇ"

ಬರಹ

ಈ ಸಿನಿಮಾವನ್ನು ನಾನು ಮುಂಬೈ ಘಟನೆಯ ಮುಂಚೆ ನೋಡಿದ್ದರೆ ನನ್ನ ಅಭಿಪ್ರಾಯ ಸಾಮಾನ್ಯ ಸಿನಿಮಾ ವೀಕ್ಷಕನದಾಗಿರುತ್ತಿತ್ತೇನೊ. ಆದರೆ ಮುಂಬೈ ಘಟನೆ ಇತರ ’ಭಾರತೀಯ’ರು ಮರೆತಂತೆ ನನಗೆ ಮರೆಯಲು ಸಾದ್ಯವಾಗುವ ಮೊದಲು ಈ ಸಿನಿಮಾ ನೋಡಿದೆ ನನ್ನ ದುರಾದ್ರುಷ್ಟ..!

ಮುಂಬೈ ರೀತಿಯ ಘಟನೆಗಳಿಗೆ ಭವಿಶ್ಯದಲ್ಲಿ ಸಾಮಾನ್ಯನ ಉತ್ತರ ಈ ಸಿನಿಮಾ ಅಂತ ನನ್ನ ಅಭಿಪ್ರಾಯ. (ಅದಾಗಲೇ ಸಿನಿಮಾದಲ್ಲಿ ನಿರ್ದೇಶಕರು ಈ ಅಭಿಪ್ರಾಯ ಹೇಳಿಯಾಗಿದೆ).
ಈ ಸಿನಿಮಾದ ನಾಯಕನನ್ನು ಸ್ವಲ್ಪ ಸಿನಿಮೀಕರಿಸಿದ್ದಾರೆ, ಎನ್ನುವುದನ್ನು ಹೊರತು ಪಡಿಸಿದರೆ ಇಡೀ ಸಿನಿಮಾದ ಕಥೆ ಭಾರತದ ಸಾಮಾನ್ಯನ ಮನಸ್ಸಿನ ಚಿತ್ರದ ಪ್ರತಿಬಿಂಬ.

ನನ್ನ ವಾಕ್ಯಗಳು ಬಿಎಂಟಿಸಿ ಪ್ರಯಾಣಿಕರಿಗೆ ಸ್ವಲ್ಪ ಉತ್ಪ್ರೇಕ್ಷೆ ಎನಿಸಬಹುದು.ಕಾರಣ ಅವರಿಗೆ ಯಾವತ್ತು ಬಸ್ಸು ಬಸ್ಸಿನ ಪ್ರಯಾಣಿಕರ ಬಗ್ಗೆ ಆಸಕ್ತಿಯೇ ಇರುವುದಿಲ್ಲ. ಅವರ ಮನಸ್ಸುಗಳು ನಗರ ಸಾರಿಗೆ ಬಸ್ಸಿನಷ್ಟೇ ಸಂಕುಚಿತವಾಗಿರುತ್ತದೆ.

ಆದರೆ ರೈಲಿನಲ್ಲಿ ಪ್ರತಿನಿತ್ಯ ಪ್ರಯಾಣಿಸುವ ಪ್ರಯಾಣಿಕರು, ಅಂತರ್ಜಾಲದ ಬ್ಲಾಗುಗಗಳಲ್ಲಿ ತಮ್ಮ ಅಂತರಂಗವನ್ನೇ ಬಿಚ್ಚಿಡುವ ಬ್ಲಾಗುದಾರರಿಗೆ ಅಂತರ್ಜಾಲದಷ್ಟೇ ವಿಶಾಲವಾದ,ರೈಲಿನಷ್ಟು ದೀರ್ಘವಾದ ಯೋಚನಾಲಹರಿ, ಮನಸ್ಸು ಇರುತ್ತದೆ ಎಂದು ನನ್ನ ಅನಿಸಿಕೆ. ಈ ಎರೆಡೂ ವರ್ಗಗಳಲ್ಲಿ ಪ್ರಪಂಚದ ಅಷ್ಟೂ ವಿಷಯಗಳ ಸುದೀರ್ಘ ಚರ್ಚೆಗಳು ಸದಾ ನಡೆಯುತ್ತಲೇ ಇರುತ್ತವೆ. ಇವರಿಗೆ ಜಗತ್ತಿನ ಪ್ರತಿಯೊಂದು ವಿಷಯವೂ ವಿಶೇಷವೆ. ಹಾಗಿರುವಾಗ ಮುಂಬೈನ ಘಟನೆ ನಾಲ್ಕರಿಂದ ಒಂದು ವಾರ ಚರ್ಚೆಗಾಗುವಷ್ಟು ರಸವತ್ತಾದ ಸರಕು.

ಮುಂಬೈನ ಘಟನೆಯ ನಂತರದ ಒಂದೆರೆಡು ದಿನಗಳಲ್ಲಿ ಭಯೋತ್ಪಾದನೆಯ ಬಗ್ಗೆ ಇಡೀ ಭಾರತದ ಈ ಎರೆಡೂ ವರ್ಗಗಳಲ್ಲಿ ನಡೆದ ಚರ್ಚೆಗಳಿಗೆ ಸಾಮಾನ್ಯನ ಏಕಮೇವಾಭಿಪ್ರಾಯ ಈ "ಸಿನಿಮಾ" ಆ ಎರೆಡು ದಿನಗಳ ಸಾಮಾನ್ಯನೊಬ್ಬನ ಮನಸ್ಸಿನೊಳಗಿನ ಸಂಘರ್ಷದ ಉತ್ತರದ ಮೂರ್ತ ರೂಪ ಈ ಸಿನಿಮಾ.ಮುಂಬೈ ಭಯೊತ್ಪಾದನೆಗೆ ಸಾಮನ್ಯನೊಬ್ಬ ನೀಡಬಹುದಾದ ’ಸಾಮಾನ್ಯ’ ಉತ್ತರವನ್ನೇ ಘಟನೆಯು ನಡೆದ ಹತ್ತು ದಿನಗಳ ನಂತರವೂ ದೂರದ ಅಮೇರಿಕಾದ ಜಾರ್ಜ್ ಬುಷ್ ಸಹ ನೀಡುತ್ತಾನೆ.

ಆದರೆ ವಿಪರ್ಯಾಸವೆಂದರೆ ಭಾರತದ ನಾಯಕರಿಗೆ, ನಾಗರಿಕರಿಗೆ ಘಟನೆಯ ನಂತರ ವಾರ ಕಳೆಯುವುದರೊಳಗೆ ತಮ್ಮ ಜೀವನ ನಿರ್ವಹಣೆಯಲ್ಲಿ ಮುಳುಗಿ ಏನೂ ನಡೆದೇ ಇಲ್ಲವೆನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಇಂತಹವರಿಗೆ ಛಡಿ ಏಟಿನ ಉತ್ತರ ಈ ಸಿನಿಮಾದಲ್ಲಿದೆ.

ಈ ಸಿನಿಮಾದಲ್ಲಿ ಆ ’ಸಾಮಾನ್ಯ’ ವ್ಯಕ್ತಿ ಕಮೀಷನರ್ ಗೆ ಹೇಳ್ತಾನೆ..
" ಪ್ರತೀದಿನ ಮನೆ ಬಿಟ್ಟ ಪ್ರತೀ ಎರೆಡು ಘಂಟೆಗೆ ಒಮ್ಮೆ ನನ್ನ ಹೆಂಡತಿ ಫೋನ್ ಮಾಡಿ ಕಾಫಿ ಕುಡ್ದಿರಾ ಊಟಾ ಮಾಡ್ದ್ ರಾ ಅಂತಾ ಕೇಳ್ತಾಳೆ, ಆದರೆ ಅದರ ಹಿಂದಿರುವ ಉದ್ದೇಶ ನನಗೆ ಏನೂ ತೊಂದರೆಯಾಗದೆ ಜೀವಂತವಾಗಿದ್ದೀನ ಅಂತ ವಿಚಾರಿಸಿಕೊಳ್ಳೊದು" ಅಂತ.

ನನಗೆ ಈ ವಾಕ್ಯ ಕೇಳಿದ ತಕ್ಷಣ ನೆನಪಾಗಿದ್ದು ನಮ್ಮ ತಂದೆ. ಈ ಹಿಂದೆ ಬೆಂಗಳೂರಿನಲ್ಲಿ ಬಾಂಬ್ ಪ್ರಕರಣಕ್ಕೂ ಮೊದಲು ನಮ್ಮ ತಂದೆಯವರಿಗೆ ಹ್ರುದಯ ಶಸ್ತ್ರಚಿಕಿತ್ಸೆಯಾಗಿರುವುದರಿಂದ ಪ್ರತೀದಿನ ಬೆಳಗ್ಗೆ ಅಥವಾ ರಾತ್ರಿ ಒಮ್ಮೆ ಕರೆ ಮಾಡಿ ಮಾತಾಡುತ್ತಿದ್ದೆ. ಆದರೆ ಬಾಂಬ್ ನಡೆದ ಸ್ಥಳಗಳಲ್ಲಿ ಒಂದಾದ ನಾಯಂಡಹಳ್ಳಿ ಬಳಿ ಘಟನೆಗೆ ಸಾಕ್ಷಿಯಾಗಲು ಹತ್ತು ನಿಮಿಷಗಳಲ್ಲಿ ವಂಚಿತನಾದ ನನಗೆ ಅಂದಿನಿಂದ ನಮ್ಮ ತಂದೆ ದಿನಕ್ಕೆರೆಡು ಬಾರಿ ಕರೆ ಮಾಡಲು ಪ್ರಾಂಬಿಸಿದ್ದರು. ಈ ಮುಂಬೈ ಘಟನೆಯ ನಂತರ ಅದು ಮೂರಕ್ಕೇರಿದೆ.ಉದ್ದೇಶ ಸ್ಪಷ್ಟ.

ಇಡೀ ಭಾರತದ ವ್ಯವಸ್ಥೆ, ಜನತೆ, ಜನರ ಮನಸ್ಥಿತಿ, ಭಯೋತ್ಪಾದನೆಯ ಬಗ್ಗೆ ದಿನೇ ದಿನೇ "ಸಾಮಾನ್ಯ"ನಲ್ಲಿ ಬೆಳೆಯುತ್ತಿರುವ ಹತಾಷೆಯ ಕಿಡಿ ಸದ್ಯಕ್ಕೆ ಈ ಸಿನಿಮಾ ರೂಪದಲ್ಲಿ ಹೊಮ್ಮಿದೆಯೆಂದೇ ಹೇಳಬಹುದು(ಅದೂ ಘಟನೆಗೆ ಮೊದಲೇ). ಪ್ರತಿಯೊಬ್ಬರು ವೀಕ್ಷಿಸಲೇಬೇಕಾದ ಸಿನಿಮಾ " A Wednesday".