ಒ೦ದು ಮನೆಯ ಸೊಸೆಯ ಕಥೆ

ಒ೦ದು ಮನೆಯ ಸೊಸೆಯ ಕಥೆ

ಬರಹ

ಹೀಗೊಂದು ಶುಭದಿನ ಈ ಸಿರಿವಂತನ ಮನೆಗೆ ನನ್ನ ಪ್ರವೇಶ ಆಯಿತು. ಮನೆ ಮ೦ದಿಯೆಲ್ಲಾ ಹರುಷದಿ೦ದ ಸ್ವಾಗತಿಸಿದರು. ಮನೆಗೆ ಹೊಸಬಳಾದ್ದರಿ೦ದ ನನ್ನ ಯೋಗಕ್ಷೇಮ ನೋಡಿಕೊಳ್ಳಲು ಮನೆಯ ಜನ ಟೊ೦ಕಕಟ್ಟಿ ನಿ೦ತಿದ್ದರು. ನನ್ನ ಯಜಮಾನ ಮನೆಯಲ್ಲಿ ಇಲ್ಲದಿದ್ದಾಗ ಮನೆ ಜನ ನನ್ನನು ಮಾತನಾಡಿಸಲೂ ಹೆದರುತ್ತಿದ್ದರು. ಏನಾದರೂ ವ್ಯತ್ಯಾಸವಾದೀತೂ ಎಂದು. ಸಂಜೆ ನನ್ನ ಯಜಮಾನರು ಬಂದೊಡನೆ ಕಾಫ಼ಿ-ತಿಂಡಿಯಾದ ಮೇಲೆ ದಿನವೂ ಒಂದು ವಾಕಿಂಗ್. ಹಾದಿಯುದ್ದಕ್ಕೂ ನನ್ನದೇ ಮಾತು. ನಾವಿಬ್ಬರೂ ಹೋಗುತ್ತಿದ್ದರೆ ನನ್ನ ಯಜಮಾನರನ್ನು ಅಸೂಯೆಯಿಂದ ಕಂಡವರೇ ಬಹಳ.

ನನ್ನ ಮಾತು, ಹಾಡು, ಉಪಯುಕ್ತ ಸಲಹೆಗಳು, ಮಕ್ಕಳ ಕಥೆಗಳು ಎಲ್ಲವೂ ಬಹಳ ಇಷ್ಟಪಡುತ್ತಿದ್ದರು ಈ ಮನೆ ಜನ. ನಾನು ಮಾತಾಡಲು ಶುರು ಮಾಡಿದರೆ ಕಿವಿಗೊಟ್ಟು ಕೇಳುತ್ತಾರೆ. ಹಾಡಲು ಶುರು ಮಾಡಿದರಂತೂ ಸೂಜಿ ಕೆಳಗೆ ಬಿದ್ದರೂ ಸದ್ದಾಗುತ್ತಿತ್ತು. ನನ್ನ ಜ್ಝ್ನಾನ ಭಂಡಾರದಲ್ಲಿ ಅಖಂಡವಾದ ದೇವರನಾಮಗಳು, ಹರಿಕಥೆಗಳು, ವಚನಗಳ ಸಂಗ್ರಹವಿತ್ತು.

ಇದೆಲ್ಲ ಅಂದಿನ ಕಥೆ. ಕಾಲ ಒಂದೇ ರೀತಿ ಇರುತ್ತದೆಯೇ? ಹಳೇ ಎಲೆ ಉದುರಲೇ ಬೇಕು. ಹೊಸ ಚಿಗುರು ಬರಲೇ ಬೇಕು. ನಾನೇನು ಚಿರಂಜೀವಿಯೇ? ನನ್ನ ನೋವು ಅದಲ್ಲ. ನನ್ನನ್ನು ಮುಂಚೆ ಅಷ್ಟು ಪ್ರೀತಿಯಿಂದ ಕಂಡ ಇದೇ ಜನ ಈಗೇಕೆ ಹೀಗೆ ನನ್ನನ್ನು ಮೂಲೆಗುಂಪು ಮಾಡಿದ್ದಾರೆ?

ನನ್ನ ಮಾತನ್ನು ಬಿಟ್ಟಬಾಯಿ ಬಿಟ್ಟಂತೆ ಕೇಳುತ್ತಿದ್ದ ಈ ಜನ ಈಗ ಮಾತಾಡಲೇ ಅವಕಾಶ ಕೊಡುವುದಿಲ್ಲ. ಹಾಡಂತೂ ಬಿಡಿ, ದೂರದ ಮಾತು. ಹೊಸ ನೀರು ಬಂದಂತೆ ಹಳೇ ನೀರು ಕೊಚ್ಚಿ ಹೋದಂತೆ ಆಗಿದೆ ಈಗ ನನಗೆ.

ಸದಾ ಶುಭ್ರವಾಗಿದ್ದು ರೇಷ್ಮೆ ವಸ್ತ್ರಧಾರಿಯಾಗಿದ್ದ ನಾನು ಇಂದು ಧೂಳು ತುಂಬಿದ ವಸ್ತ್ರ ಧರಿಸಿ ಮೂಲೆ ಹಿಡಿದು ಕುಳಿತಿದ್ದೇನೆ. ಮಾಡಲಿಕ್ಕೆ ಬೇರೆ ಕೆಲಸ ಇಲ್ಲ.

ನಿಕೃಷ್ಟವಾಗಿ ಕಂಡರು ಎಂದು, ಬಂದ ಮನೆಗೆ ವಾಪಸ್ಸು ಹೋಗಲೇ? ಇಲ್ಲ, ನಾಚಿಕೆ ಕೇಡು ಅಂದಾರು. ಎಷ್ಟೋ ಬಾರಿ ನನ್ನ ಬಗ್ಗೆ ನಾನೇ ಮನದಲ್ಲೇ ಗುನುಗುನಿಸಿದ್ದಿದ್ದೆ

ನೊಂದು ನುಡಿದಳು ಮಾತೆ
ಭಗವಂತಾ !
ಇನ್ನೂ ಏಕೆ ತೆರೆದಿಟ್ಟಿರುವೆ
ಎನ್ನ ಆಯಸ್ಸಿನ ಖಾತೆ?

ಎನ್ನ ಕೇಳುವವರಿಲ್ಲ
ಕಂಡು ಮರುಗುವವರಿಲ್ಲ
ಎನ್ನ ಇರುವು
ಯಾರಿಗೂ ಬೇಕಿಲ್ಲ

ಇರಲಿ ಬಿಡಿ. ನನ್ನ ಗೋಳು ಹೇಳಿಕೊಂಡು ನಿಮಗೆ ಏಕೆ ಬೇಜರು ಮಾಡಲಿ. ಹಳೆಯದಾದರೇನು? ಹೊಸದು ಆದರೇನು? ಎಲ್ಲರಿಗೂ ಒಂದು ಬೆಲೆ ಇದೆ. ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು.

ಅಲ್ಲಾ, ಒಂದು ಕಾಲಕ್ಕೆ ಅಷ್ಟು ಜೋರಿದ್ದ ನಾನು ಈಗ ಸುಮ್ಮನಿದ್ದರೆ ಸೋಲು ಒಪ್ಪಿಕೊಂಡಂತೆ ಅಲ್ಲವೇ? ಹೌದು ಸ್ವಲ್ಪ ಯೋಚನೆ ಮಾಡಬೇಕಾದ ವಿಚಾರವೇ ಸರಿ. ಅಂದಿಗೂ ಇಂದಿಗೂ ವಯಸ್ಸಾಗಿರುವುದು ಬಿಟ್ಟು ಏನು ಕಡಿಮೆ ಆಗಿದೆ ನನಗೆ? ಹೌದು ಈಗಿನವರ ಥಳುಕು ಬಳುಕು ನನ್ನಲ್ಲಿ ಇಲ್ಲ. ಆದರೆ ನನ್ನಲ್ಲಿದ್ದ ಆ ಶಕ್ತಿ ಇಂದಿಗೂ ಹಾಗೇ ಇದೆಯೆಲ್ಲಾ ! ಅದನ್ನು ಏಕೆ ಮರೆತರು ಇವರು? ಆದರೂ ಒಂದು ಮಾತು ನಿಜ. ನನ್ನ ಸ್ನೇಹಿತರೇ ಹಲವಾರು ಜನ ಹಳ್ಳಿಯ ಕಡೆ ಸೇರಿದರು. ಅವರು ಇಂದಿಗೂ ಚೆನ್ನಾಗಿಯೇ ಇದ್ದಾರಲ್ಲಾ?

ಹೌದು, ನಾನು ಹೇಳಿಕೊಂಡ ಗೋಳೆಲ್ಲಾ ಕೆಲವು ವರ್ಷಗಳ ಹಿಂದಿನ ಮಾತು ಮಾತ್ರ. ನನ್ನ ಶಕ್ತಿಯನ್ನು ನಾನು ಮತ್ತೊಮ್ಮೆ ತೋರ್ಪಡಿಸಿ ಇಂದು ನಾನು ಹೊಸರೂಪ ಪಡೆದು ಹೊಸ ಕಾರುಗಳಲ್ಲಿ ಓಡಾಡುತ್ತೇನೆ. ಕ್ಷಮಿಸಿ. ನಾನೇನೂ ಅಡ್ಡ ದಾರಿ ಹಿಡಿದಿಲ್ಲ.

ಮಧ್ಯದಲ್ಲಿ ಕೆಲವು ವರ್ಷಗಳು ನನ್ನನ್ನು ಕೀಳಾಗಿ ಕಂಡಿದ್ದು ನಿಜ. ಮಗು ತೊಡೆಯ ಮೇಲೆ ಮಲಗಿದ್ದಾಗ ಮಲ ಮಾಡಿತೆಂದು ತೊಡೆಯನ್ನೇ ಕತ್ತರಿಸಿ ಕೊಳ್ಳುತ್ತಾರೆಯೇ? ಕಾಲ ಸರಿದಂತೆ ನಾನೂ ಕಾಲಕ್ಕೆ ತಕ್ಕಂತೆ ನಮ್ಮ ಜೀವನದ ರೂಪುರೇಖೆಗಳನ್ನು ಬದಲಿಸಿಕೊಳ್ಳಬೇಕಾಗುತ್ತದೆ.

ಕಷ್ಟಗಳು ಎಲ್ಲರಿಗೂ ಇದ್ದಿದ್ದೇ. ಆ ಭಗವಂತನೇ ಭೂಮಿಗೆ ಬಂದಾಗ ಕಷ್ಟ ಅನುಭವಿಸಲಿಲ್ಲವೇ ? ಕಷ್ಟ ಎಂದು ಕಣ್ಣೀರು ಹಾಕುತ್ತಾ ಕೂತರೆ ಕಷ್ಟ ಪರಿಹಾರವಾಗುತ್ತದೆಯೇ? ನನಗೋ ಕಣ್ಣೀರೂ ಬರೋದಿಲ್ಲಾ. ಪರಿಹಾರಕ್ಕೆ ನಾವೇ ಹಾದಿ ಹುಡುಕಿಕೊಳ್ಳಬೇಕು. ನಾವು ಬದಲಾಗುವುದರಿಂದ ಕಷ್ಟ ಪರಿಹಾರ ಆಗುವುದಾದರೆ ಬದಲಾಗೋಣ. ತಪ್ಪೇನಿಲ್ಲ.

ನಾನು ಅಂದು ಹಾಗಿದ್ದೆ. ಈಗಲೂ ಹಾಗೇ ಇರುತ್ತೇನೆ ಎಂದರೆ ಆಗುತ್ತದೆಯೇ? ಹಾಡು ಕೇಳಿಲ್ಲವೇ? "ನಾವು ಕಾಲಕ್ಕೆ ತಕ್ಕಂತೆ ನೆಡೆಯಬೇಕೂ ಎಂದೂ ಕಾಲಕ್ಕೆ ತಕ್ಕಂತೆ ಕುಣಿಯಬೇಕು" ಎಂದು ?

ನನ್ನ ಸುತ್ತಲೂ ಹಲವಾರು ಬದಲಾವಣೆ ಆಗಿವೆ. ನಾನೂ ಬದಲಾಗಿದ್ದೇನೆ. ನನಗೀಗ ತೌರಿಲ್ಲ. ಮನೆಗೆ ತಂದವನಿಲ್ಲ. ಮನೆಯ ಜನ ಬಹಳ ಬದಲಾಗಿದ್ದಾರೆ. ನನ್ನ ರೂಪವೂ ಬದಲಾಗಿದೆ. ನಾನೀಗ ಮೂಲೆಯಲ್ಲಿಲ್ಲ. ಮೂಲೆಯ ಬಂಧನವನ್ನು ಹರಿದು ಹೊರಬಂದು ನನ್ನದೇ ನೆಲೆಯನ್ನು ಸ್ಥಾಪಿಸಿಕೊಂಡಿದ್ದೇನೆ.

ನನ್ನ ನೋವಿನ ಕಥೆ ಮತ್ತು ಅದು ಬಗೆ ಹರಿದ ಪರಿ ನಿಮಗೂ ಮಾರ್ಗದರ್ಶನವಾಗುವುದು ಎಂಬ ಆಶಯದೊಂದಿಗೆ, ನಾನಿನ್ನು ಹೊರಡುತ್ತೇನೆ. ನಿಮಗೆ ನನ್ನ ಅನಂತ ವಂದನೆಗಳು.

ಹಾ ! ಮರೆತಿದ್ದೆ. ಬರೀ ನನ್ನನ್ನು ’ನಾನು’ ಎಂದೇ ಹೇಳುತ್ತಿದ್ದೆ.

ನನ್ನ ಹೆಸರು ’ಬಾನುಲಿ’ ಆಂಗ್ಲ ಭಾಷೆಯಲ್ಲಿ ’RADIO’ ಎಂದು.