ಕಂಪ್ಯೂಟರ್ ಮೆಮೊರಿ: ಹಾಗೆಂದರೇನು?

ಕಂಪ್ಯೂಟರ್ ಮೆಮೊರಿ: ಹಾಗೆಂದರೇನು?

ಬರಹ

ಕಂಪ್ಯೂಟರ್ ಮೆಮೊರಿ, GB, MB ಇತ್ಯಾದಿ ಶಬ್ದಗಳನ್ನು ನೀವು ಕೇಳಿರಬಹುದು. ಹಾಗೆ ಎಂದರೇನು ಎಂದು ನಿಮಗೆ ಗೊತ್ತಿಲ್ಲದಿದ್ದರೆ, ಯಾರನ್ನು ಕೇಳಬೇಕೆಂದು ತಿಳಿಯದಿದ್ದರೆ (ಅಥವಾ ಕೇಳಲು ನಾಚಿಕೆ ಪಟ್ಟುಕೊಂಡಿದ್ದರೆ) ನಿಮಗಾಗಿ ಈ ಲೇಖನ.

ಕಂಪ್ಯೂಟರ್ ಬಹಳ ವೇಗವಾಗಿ ಸಂಖ್ಯೆಗಳನ್ನು ಕೂಡಿ, ಕಳೆದು ಮಾಡುತ್ತೆ ಆದರೆ ಅದರ 'ಮಿದುಳಿನ' ಒಳಗೆ ತುಂಬಾ ಸಂಖ್ಯೆಗಳನ್ನು ಇಟ್ಟುಕೊಳ್ಳುವುದಕ್ಕೆ ಜಾಗ ಇರೋಲ್ಲ. ಅದಕ್ಕೆ ನಾವು ಚಿಕ್ಕವರಿದ್ದಾಗ ಲೆಕ್ಕ ಮಾಡಲು ಕೈ ಬೆರಳುಗಳನ್ನು ಮಡಿಚಿ ಇಟ್ಟುಕೊಂಡಿರುತ್ತೀವಲ್ಲ (ದಶಕ / ಕೈಲಿ ನೆನಪು ಇಟ್ಟುಕೊಳ್ಳೋಕೆ ) ಅದೇ ರೀತಿ ಕಂಪ್ಯೂಟರ್ ಗೆ ಕೂಡ ಮಿದುಳು (processor) ಜೊತೆಗೆ ಮೆಮೊರಿ ಬೇಕು.

ನಾವು ಅಡಿಗೆ ಮಾಡುವಾಗ ಅಕ್ಕಿಯನ್ನು ಹೇಗೆ ಬಳಸುತ್ತೇವೆ ಹೇಳಿ? ಮನೆಯ ಮೂಲೆಯಲ್ಲಿ ಒಂದು ದೊಡ್ಡ ಮೂಟೆಯಲ್ಲಿ ಅಕ್ಕಿ ಇಟ್ಟಿರುತ್ತೇವೆ. ವಾರಕ್ಕೆ ಬೇಕಾದಷ್ಟು ಅಕ್ಕಿಯನ್ನು ಅಡುಗೆ ಮನೆಯ ಮೂಲೆಯಲ್ಲಿ ಒಂದು ಸಣ್ಣ ಡಬ್ಬದಲ್ಲೋ, ಚೀಲದಲ್ಲೋ ಇಟ್ಟಿರುತ್ತೇವೆ. ಇನ್ನು ಅಡಿಗೆ ಮಾಡುವಾಗ ಬೇಕಾದಷ್ಟು ಅಕ್ಕಿಯನ್ನು ಅನ್ನ ಮಾಡುವ ಪಾತ್ರೆಯಲ್ಲಿ ಹಾಕಿ ಮಾಡುತ್ತೇವೆ ಅಲ್ಲವೇ?

ಅದೇ ರೀತಿ ಕಂಪ್ಯೂಟರ್ ನ ಮಿದುಳು ಅಡಿಗೆ ಒಲೆ ಇದ್ದ ಹಾಗೆ. ಅದಕ್ಕೆ ಅನ್ನ ಮಾಡಲು ಬರುತ್ತದೆ ಆದರೂ ಎಲ್ಲ ಅಕ್ಕಿಯನ್ನೂ ಒಲೆಯ ಮೇಲೆಯೇ ಇಟ್ಟುಕೊಳ್ಳಲು ಆಗುವುದಿಲ್ಲ. ಅದಕ್ಕೆ ನಮಗೆ ಒಂದು ವರ್ಶಕ್ಕೆ ಆಗುವಷ್ಟು ಅಕ್ಕಿಯನ್ನು ಇಡಲು ಮೂಟೆ ಬೇಕು. ಕಂಪ್ಯೂಟರ್ ನ ಹಾರ್ಡ್ ಡಿಸ್ಕ್ ಈ ಮೂಟೆಗೆ ಸಮ. ಅಲ್ಲಿ ನೀವು ಸಿಕ್ಕಾಪಟ್ಟೆ ಮಾಹಿತಿಯನ್ನು ಇಡಬಹುದು. ಆದರೆ ಅದರಲ್ಲಿ ಇರುವ ಎಲ್ಲ ಮಾಹಿತಿಯೂ ದಿನಬಳಕೆಗೆ ಉಪಯುಕ್ತ ಅಲ್ಲ. ನಿಮಗೆ ಅವಶ್ಯಕತೆ ಇದ್ದಾಗ ಮಾತ್ರ ಅದರಿಂದ ಮಾಹಿತಿಯನ್ನು ತೆಗೆಯುವುದು.

ಆದರೆ ನೀವು ಅಕ್ಕಿ, ಬೇಳೆ ಇವನ್ನೆಲ್ಲಾ ಸ್ಟೋರ್ ರೂಮಿನಲ್ಲಿ ಮೂಟೆಯಲ್ಲಿ ಎಷ್ಟು ಬೇಕಾದರೂ ಇಡಬಹುದೇನೋ ಸರಿ, ಆದರೆ ಅಡುಗೆ ಮಾಡುವಾಗಲೆಲ್ಲ ಸ್ಟೋರ್ ರೂಮಿಗೆ ಹೋಗಿ ಅಕ್ಕಿ ಬೇಳೆ ತರುವದು ನಿಧಾನ ಮತ್ತು ಶ್ರಮದ ಕೆಲಸ ಅಲ್ಲವೇ? ಅದೇ ರೀತಿ ಮಾಹಿತಿ ಬೇಕಾದಾಗಲೆಲ್ಲ
ಹಾರ್ಡ್ ಡಿಸ್ಕ್ ನಿಂದ ತಂದು ಅದನ್ನು ಬಳಸುವುದು ನಿಧಾನದ ಕೆಲಸ. ಅದನ್ನು ತಪ್ಪಿಸಲೆಂದು ಇರುವುದೇ RAM ಎನ್ನೋ ಮೆಮೊರಿ.
RAM ನಲ್ಲಿ ಹಾರ್ಡ್ ಡಿಸ್ಕ್ ನಷ್ಟು ಜಾಗ ಇರುವುದಿಲ್ಲ ಆದರೆ ಇದು ಕಂಪ್ಯೂಟರ್ ನ ಮಿದುಳಿಗೆ (processor ಗೆ) ಹತ್ತಿರ ಇರುತ್ತದೆ. ನಿಮ್ಮ ಅಡಿಗೆ ಮನೆಯಲ್ಲಿ ಇರುವ ಸಣ್ಣ ಅಕ್ಕಿ, ಬೇಳೆ, ಸಕ್ಕರೆ ಡಬ್ಬಗಳಂತೆ ಈ RAM.

ಸಾಧಾರಣವಾಗಿ ಹಾರ್ಡ್ ಡಿಸ್ಕ್ ನಲ್ಲಿ ಹೆಚ್ಚು ಜಾಗ RAM ನಲ್ಲಿ ಕಮ್ಮಿ ಜಾಗ ಇರುತ್ತೆ ಅಂತ ಹೇಳಿದೆನಲ್ಲ, ಜಾಗ ಎಷ್ಟು ಅಂತ ಹೇಳೋದಕ್ಕೆ ನಾವು ಪಾತ್ರೆಗಳಿಗೆ ಲೀಟರು, ಕೆಜಿ ಎಲ್ಲ ಹೇಳಿದಹಾಗೆ ಮೆಮೊರಿಯನ್ನು ಅಳೆಯಲು byte ಅನ್ನೋ ಅಳತೆ ಬಳಸುತ್ತಾರೆ. ನಾವು ಗ್ರಾಮ್ ಅನ್ನು ತೂಕಕ್ಕೆ ಬಳಸಿ ಸಾವಿರ ಗ್ರಾಮ್ ಗಳಿಗೆ ಕಿಲೋಗ್ರಾಮ್ ಅಥವಾ kG ಎಂದು ಬರೆಯುವಹಾಗೆ ಮೆಮೊರಿಯನ್ನು ಸಾವಿರ ಬೈಟ್ (kilo byte ) kB, ಮಿಲಿಯನ್ ಬೈಟ್ (mega byte) MB ಮತ್ತು ಗಿಗಾ ಬೈಟ್ (giga byte) GB ಎಂಬ ಅಳತೆಗಳನ್ನು ಬಳಸಿ ಅಳೆಯುತ್ತೇವೆ. ಹಾಗಾಗಿ ಒಂದುGB ಎಂದರೆ ಸಾವಿರ MB ಗಳಿಗೆ ಸಮ.

ಇಷ್ಟು ಅರ್ಥವಾದರೆ ಆಯಿತು ನಿಮಗೆ ಕಂಪ್ಯೂಟರ್ ನಲ್ಲಿ ಮೆಮೊರಿ ಎಂದರೇನು, ಅದು ಯಾಕೆ ಅವಶ್ಯಕ ಮತ್ತು ಅದರಲ್ಲಿ ಇರುವ ಎರಡು ವಿಧ ಯಾವುವು, ಅದನ್ನು ಅಳೆಯುವುದು ಹೇಗೆ ಎಂದು ಅರ್ಥ ಆದಹಾಗಲ್ಲವೆ?

ಹಾಗಾದರೆ ಮುಂದಿನ ಪ್ರಶ್ನೆ ಈ ಹಾರ್ಡ್ ಡಿಸ್ಕ್ ಮತ್ತು RAM ಗಳು ಎಷ್ಟು ಇರಬೇಕು ಅನ್ನುವುದು.
ಸರಳ ಉತ್ತರ ಎಂದರೆ ಹೆಚ್ಚು ಇದ್ದಷ್ಟು ಒಳ್ಳೆಯದು ಅನ್ನಬಹುದು. ಆದರೆ ಹೆಚ್ಚು ಹೆಚ್ಚು ಮೆಮೊರಿ ಬೇಕು ಅಂದಷ್ಟೂ ನೀವು ಹೆಚ್ಚು ಹೆಚ್ಚು ಬೆಲೆಯನ್ನು ಕಂಪ್ಯೂಟರ್ ಗೆ ಕೊಡಬೇಕಾಗುತ್ತದೆ.
ಅದ್ದರಿಂದ ನಿಮ್ಮ ಕೆಲಸಕ್ಕೆ ಎಷ್ಟು ಅವಶ್ಯಕವೋ ಅಷ್ಟು (ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು) ಮೆಮೊರಿ ಇರುವ ಕಂಪ್ಯೂಟರ್ ಅನ್ನು ಕೊಂಡುಕೊಳ್ಳಬಹುದು. ಎಷ್ಟು ಮೆಮೊರಿ ಅವಶ್ಯಕ ಅನ್ನುವುದು ನೀವು ಯಾವರೀತಿಯ ಕೆಲಸಕ್ಕೆ ಕಂಪ್ಯೂಟರ್ ಅನ್ನು ಬಳಸುತ್ತೀರ ಅನ್ನುವುದರ ಮೇಲೆ ಹೋಗುತ್ತದೆ. ಮನೆಯಲ್ಲಿ ಅಡುಗೆ ಮಾಡುವಾಗ ಬಳಸುವ ಪಾತ್ರೆ/ಡಬ್ಬಗಳಿಗೂ ಮದುವೆ ಮನೆಯಲ್ಲಿ ಅಡಿಗೆ ಮಾಡಲು ಬಳಸುವುವಕ್ಕೂ ವ್ಯತ್ಯಾಸ ಇರುವುದಿಲ್ಲವೇ, ಹಾಗೆ ನಿಮ್ಮ ಉದ್ದೇಶಕ್ಕೆ ತಕ್ಕ ಅಳತೆಯ ಹಾರ್ಡ್ ಡಿಸ್ಕ್ ಮತ್ತು RAM ಕೊಂಡುಕೊಳ್ಳಬೇಕಾಗುತ್ತದೆ.

ನೀವು ಸಾಧಾರಣವಾಗಿ ಕಂಪ್ಯೂಟರ್ ಅನ್ನು ಬರವಣಿಗೆಗೆ, ಇಂಟರ್ ನೆಟ್ ಗಾಗಿ ಅಥವಾ ಸಣ್ಣ ಪುಟ್ಟ ಕೆಲಸಗಳಿಗಾಗಿ ಬಳಸುತ್ತೀರಾ ಎಂದರೆ ಸುಮಾರು 1GB RAM ಸಾಕಾಗುತ್ತದೆ.  ನೀವು ಕಂಪ್ಯೂಟರ್ ಅನ್ನು ಗೇಮ್ಸ್ ಗಾಗಿ ಅಥವ ಹಾಡು/ವಿಡಿಯೋಗಳನ್ನು ಎಡಿಟ್ ಮಾಡಲು ಬಳಸುತ್ತೀರ
ಎಂದರೆ 2 ರಿಂದ 4 GB RAM ಬೇಕಾಗುತ್ತದೆ.
(ನೀವು ವಿಂಡೋಸ್ ಬಳಸುತ್ತೀರಾದರೆ ಮೇಲೆ ಹೇಳಿದ್ದಕ್ಕಿಂತ ಇನ್ನೂ ಸ್ವಲ್ಪ ಹೆಚ್ಚು ಮೆಮೊರಿ ಬೇಕಾಗಬಹುದು, ಲಿನಕ್ಸ್ ಗೆ ಸಾಧಾರಣವಾಗಿ ಕಮ್ಮಿ ಮೆಮೊರಿ ಸಾಕಾಗುತ್ತದೆ).
ಇನ್ನು ಹಾರ್ಡ ಡಿಸ್ಕ್ ಕೂಡ ನೀವು ಎಷ್ಟು ಮಾಹಿತಿಯನ್ನು ಹಾರ್ಡ್ ಡಿಸ್ಕ್ ನಲ್ಲಿ ಶೇಖರಿಸುತ್ತೀರ ಎನ್ನುವುದರ ಮೇಲೆ ಅವಲಂಬಿತ. ಲೇಖನಗಳು, ಬರಹಗಳು, ಚಿತ್ರಗಳು ಇತ್ಯಾದಿಗಳಿಗೆ ಬಹಳ ಕಮ್ಮಿ (ಕೆಲವು MB) ಮೆಮೊರಿ ಸಾಕಾಗುತ್ತದೆ. ಹಾಗಾಗಿ ನೀವು ಪ್ರತಿ GB ಹಾರ್ಡ್ ಡಿಸ್ಕ್ ಜಾಗದಲ್ಲಿ ಸುಮಾರು ೫೦-೫೦೦ ಲೇಖನ/ಚಿತ್ರಗಳನ್ನು ಶೇಖರಿಸಬಹುದು. ಹಾಡುಗಳಿಗೆ ಇನ್ನು ಸ್ವಲ್ಪ ಹೆಚ್ಚು ಜಾಗ ಬೇಕು. ಪ್ರತಿ GB ಜಾಗದಲ್ಲಿ ಸುಮಾರು ೧೦೦
ಹಾಡುಗಳು ಹಿಡಿಯುತ್ತವೆ. ವಿಡಿಯೋಗಳಿಗೆ ಅತ್ಯಂತ ಹೆಚ್ಚು ಜಾಗ ಬೇಕು. ಸುಮಾರು ಒಂದು ಗಂಟೆ ವೀಡಿಯೋಗೆ ಒಂದು GB ಜಾಗ ಬೇಕಾಗುತ್ತದೆ.
ಇದನ್ನು ಬಳಸಿ ನಿಮಗೆ ಬೇಕಾಗುವ ಹಾರ್ಡ್ ಡಿಸ್ಕ್ ಅಳತೆಯ ಅಂದಾಜು ಮಾಡಿಕೊಂಡು, ಅದರ ಎರಡುಪಟ್ಟು  ದೊಡ್ಡ ಹಾರ್ಡ್ ಡಿಸ್ಕ್ ತೆಗೆದುಕೊಳ್ಳುವುದು ಉತ್ತಮ. (ಇತರ ಫೈಲ್ ಗಳು, ಪ್ರೊಗ್ರಾಮ್ ಗಳು ಮತ್ತು ಭವಿಶ್ಯದ ಬಳಕೆಗಾಗಿ ಜಾಗ ಬೇಕಲ್ಲ?).

[ ಕನ್ನಡದಲ್ಲಿ ಕಂಪ್ಯೂಟರ್ ಕಲಿಕೆಯ ಬಗ್ಗೆ ಲೇಖನಗಳನ್ನ ಬರೆಯೋಣ ಅಂತ ಓಂ ಶಿವಪ್ರಕಾಶ್ ಅವರು ಒಂದು initiative ತೊಗೊಂಡಿದ್ದಾರೆ . ಅಲ್ಲಿ ಬಂದ ಪ್ರಶ್ನೆಗಳಿಗೆ ಲೇಖನಗಳ  ಮತ್ತು ವಿಕಿಯ ರೂಪದಲ್ಲಿ ಉತ್ತರ ಬರೆಯೋಣ ಅಂತ ಅವರ ಅನಿಸಿಕೆ.
ಇಂಚರ ಅವರು ಸೂಚಿಸಿರೋ ಪ್ರಶ್ನೆ ಮೆಮೊರಿ ಆದರೆ ಏನು? MB GB ಅಂದರೆ ಏನು ಮತ್ತು ಎಷ್ಟು ಮೆಮೊರಿ ಬೇಕು? ಅದಕ್ಕೆ ಉತ್ತರವಾಗಿ ಈ ಲೇಖನ.

ನಿಮಗೆ ಕಂಪ್ಯೂಟರ್ ಬಗ್ಗೆ ಮಾಹಿತಿ ಇಲ್ಲದೆ, ಈ ಲೇಖನ ಓದಿ ನಿಮಗೆ ಅನ್ನಿಸಿದ್ದನ್ನು ಹೇಳಿದರೆ ಮುಂದಿನ ಲೇಖನಗಳಿಗೆ ಉಪಯುಕ್ತವಾಗುತ್ತದೆ. ಇನ್ನೂ ಉದಾಹರಣೆಗಳು ಬೇಕೆ, ಯಾವ ಭಾಗ ಸರಿಯಾಗಿ ಅರ್ಥವಾಗಲಿಲ್ಲ, ಯಾವ ಉದಾಹರಣೆಗಳು ವಿಶಯವನ್ನು ಮನಮುಟ್ಟುವಂತೆ 
ತಿಳಿಸಿದವು ಇತ್ಯಾದಿಗಳನ್ನು ಕಮೆಂಟ್ ಮೂಲಕ ತಿಳಿಸಿದರೆ ಸಹಾಯವಾಗುತ್ತದೆ.

ನಿಮಗೆ ಕಂಪ್ಯೂಟರ್ ಬಗ್ಗೆ ಮಾಹಿತಿ ಇದ್ದು ಈ ಲೇಖನದಲ್ಲಿ ಬರೆದಿರುವ ವಿಶಯಗಳು ಆಗಲೇ ತಿಳಿದಿದ್ದರೆ ಈ ಲೇಖನದ ಶೈಲಿ, ಉದಾಹರಣೆಗಳು, ಸರಳೀಕರಣಗಳು (ಉದಾ 1 GB = 1000 MB) ಸರಿಯೇ ತಪ್ಪೇ, ವಿಶಯಗಳು ಇನ್ನೂ ಸುಲಭವಾಗಿ ಹೇಗೆ ಹೇಳಬಹುದು ಇವೆಲ್ಲವನ್ನು ದಯವಿಟ್ಟು
ತಿಳಿಸಿ. ]

ಚಿತ್ರ : ವಿಕಿಪೀಡಿಯಾದಿಂದ.