ಕಗ್ಗ ದರ್ಶನ – 50 (2)
ನಿನಗೊದಗಿದ ಪ್ರಶ್ನೆಗಳ ನೀನೆ ಹರಿಸಿಕೊಳೊ
ಎನಿತು ದಿನವವರಿವರನವಲಂಬಿಸಿರುವೆ?
ಹೆಣ ಹೊರೆಯವರವರಿಗವರವರೆ ಹೊರುವನಿತು
ನಿನಗೆ ನೀನೇ ಗತಿಯೋ – ಮರುಳ ಮುನಿಯ
ಪ್ರತಿಯೊಬ್ಬರಿಗೂ ಬದುಕಿನಲ್ಲಿ ಸಾಲುಸಾಲು ಪ್ರಶ್ನೆಗಳು. ಬಹುಪಾಲು ಜನರು, ಒಮ್ಮೆ ಒಬ್ಬರ ಬಳಿ, ಇನ್ನೊಮ್ಮೆ ಇನ್ನೊಬ್ಬರ ಬಳಿ ಹೋಗಿ, ತಮ್ಮ ಪ್ರಶ್ನೆಗಳಿಗೆ ಉತ್ತರ ಬಯಸುತ್ತಾರೆ; ಉತ್ತರಕ್ಕಾಗಿ ಪೀಡಿಸುತ್ತಾರೆ. ಕೊನೆಗೆ ಉತ್ತರ ಸಿಗದೆ ಅಥವಾ ಸಿಕ್ಕ ಉತ್ತರದಿಂದ ಸಮಾಧಾನವಾಗದೆ ಮತ್ತೊಬ್ಬರ ಬಳಿ ಹೋಗಿ ತಮ್ಮ ಪ್ರಶ್ನೆಯ ಉತ್ತರದ ಹುಡುಕಾಟ ಮುಂದುವರಿಸುತ್ತಾರೆ. ಅದಕ್ಕಾಗಿಯೇ ಈ ಮುಕ್ತಕದಲ್ಲಿ ಮಾನ್ಯ ಡಿವಿಜಿಯವರು ಮಾರ್ಮಿಕ ಸಂದೇಶ ನೀಡುತ್ತಾರೆ: ನಿನಗೆ ಎದುರಾದ ಪ್ರಶ್ನೆಗಳನ್ನು ನೀನೇ ಪರಿಹರಿಸಿಕೊ. ಇನ್ನು ಎಷ್ಟು ದಿನ ನಿನ್ನ ಪ್ರಶ್ನೆಗಳ ಉತ್ತರಕ್ಕಾಗಿ ಇತರರನ್ನು ಅವಲಂಬಿಸಿ ಇರುತ್ತಿ? ಈ ಭೂಮಿಯಲ್ಲಿರುವ ಪ್ರತಿಯೊಬ್ಬರಿಗೂ ಅವರವರು ಹೊರುವಷ್ಟು ಹೆಣಹೊರೆ (ಅವರದೇ ಜಂಜಡಗಳು, ಸಂಕಟಗಳು, ಸಮಸ್ಯೆಗಳು) ಇರುತ್ತವೆ. ನಿನ್ನ ಪ್ರಶ್ನೆಗಳ ಬಗ್ಗೆ ಚಿಂತಿಸಲು, ಉತ್ತರಕ್ಕಾಗಿ ಹುಡುಕಾಡಲು ಅವರಿಗೆಲ್ಲಿ ಬಿಡುವಿದೆ? ಆದ್ದರಿಂದ ನಿನಗೆ ನೀನೇ ಗತಿ.
ಬದುಕಿನ ಅರ್ಥವೇನು? ನಾನು ಯಾಕಾಗಿ ಬದುಕಿದ್ದೇನೆ? (ಆ ಜಗನ್ನಿಯಾಮಕ ನನ್ನನ್ನು ಇನ್ನೂ ಯಾಕೆ ಬದುಕಿಸಿದ್ದಾನೆ?) ನಾನು ಯಾರಿಗಾಗಿ ಬದುಕಿದ್ದೇನೆ? (ನಾನು ಎಂದಾದರೂ ನನಗಾಗಿ ಬದುಕಿದ್ದೇನೆಯೇ?) – ಇಂತಹ ಮೂಲಭೂತ ಪ್ರಶ್ನೆಗಳನ್ನು ಎಂದಾದರೂ ಕೇಳಿಕೊಂಡಿದ್ದೀರಾ? ಈ ಭೂಮಿಯ ಎಲ್ಲ ಜೀವಿಗಳಿಗೂ ಇರುವ ಒಂದೇ ಒಂದು ಬದುಕಿನ ಗುರಿ: ಈ ಭೂಮಿಯಲ್ಲಿ ತಮ್ಮ ಸಂತಾನದ ಮುಂದುವರಿಕೆ. ಆ ಗುರಿಸಾಧನೆಗೆ ಬೇಕಾದ ಎಲ್ಲ ಸಾಮರ್ಥ್ಯಗಳನ್ನು ಅವು ಬೆಳೆಸಿಕೊಂಡಿವೆ. (ಸರ್ವನಾಶವಾದ ದೈತ್ಯಪ್ರಾಣಿ ಡೈನೊಸಾರ್ ಇತ್ಯಾದಿ ವಿನಾಯ್ತಿಗಳಿವೆ.) ಆದರೆ, ಮಾನವರ ಸಂಗತಿ ಹಾಗಲ್ಲ. ಪ್ರತಿಯೊಬ್ಬ ಮಾನವನ ಬದುಕಿಗೂ, ಉನ್ನತ ಗುರಿಯೊಂದು ಇದೆ. ಅದನ್ನು ಕಂಡುಕೊಳ್ಳುವುದೇ ಗುರಿಸಾಧನೆಯ ಮೊದಲ ಹೆಜ್ಜೆ. ಉದಾಹರಣೆಗೆ, ಎಂ.ಎಸ್. ಸುಬ್ಬುಲಕ್ಷ್ಮಿಯವರು ಜನಪ್ರಿಯ ಸಿನಿಮಾ ನಟಿ ಆಗಬಹುದಿತ್ತು. ಆದರೆ, ಅವರು ಆಯ್ಕೆ ಮಾಡಿದ್ದು ಸಂಗೀತದಲ್ಲಿ ಉತ್ತುಂಗಕ್ಕೆ ಏರುವ ಹಾದಿಯನ್ನು. ಹಾಗಾದರೆ, ಅವರ ಬದುಕಿನ ಗುರಿ ಏನಾಗಿತ್ತು? “ಮನುಕುಲದ ಸೇವೆಯೇ” ಅವರ ಬದುಕಿನ ಗುರಿ ಆಗಿತ್ತು. ಹೀಗೆ, ನಮ್ಮ ಬದುಕಿನ ಪ್ರಶ್ನೆಗಳಿಗೆ ನಾವೇ ಉತ್ತರ ಕಂಡುಕೊಳ್ಳಬೇಕು. ನಿನಗೆ ನೀನೇ ಗತಿ ಎಂಬುದೇ ಸತ್ಯ, ಅಲ್ಲವೇ?