ಕಡಲಿನೊಂದಿಗೆ ದುಸ್ಸಾಹಸ ಬೇಡ

ಕಡಲಿನೊಂದಿಗೆ ದುಸ್ಸಾಹಸ ಬೇಡ

ಶೈಕ್ಷಣಿಕ ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ ಹೋಗಿದ್ದ ಕೋಲಾರ ಜಿಲ್ಲೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನಾಲ್ವರು ಬಾಲಕಿಯರು ಸಮುದ್ರ ಪಾಲಾಗಿ ಮೃತಪಟ್ಟಿರುವುದು ಒಂದು ರೀತಿ ವ್ಯವಸ್ಥೆಯ ಲೋಪ ಎಂದು ಹೇಳಬಹುದು. ಪ್ರತಿ ವರ್ಷ ಹೀಗೆ ಶೈಕ್ಷಣಿಕ ಪ್ರವಾಸಕ್ಕೆ ಹೋದ ಮಕ್ಕಳು ಜೀವ ಕಳೆದುಕೊಳ್ಳುತ್ತಿರುವ ಘಟನೆಗಳು ರಾಜ್ಯದಲ್ಲಿ ನಡೆಯುತ್ತಲೇ ಇವೆ.

ಇತ್ತೀಚೆಗೆ ಕರಾವಳಿ ಪ್ರವಾಸ ಕೈಗೊಂಡಿದ್ದ ಮೈಸೂರಿನ ಎಂಜಿನಿಯರಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಸಮುದ್ರ ದಂಡೆಯ ಮೇಲಿದ್ದ ರೆಸಾರ್ಟ್ ನ ಈಜುಕೊಳದಲ್ಲಿ ಮುಳುಗಿ ಮೃತಪಟ್ಟರು. ಕುಮಟಾ ಕಡಲತೀರಕ್ಕೆ ಬಂದಿದ್ದ ಬೆಂಗಳೂರು ಇಂಜಿನಿಯರಿಂಗ್ ಕಾಲೇಜಿನ ಆರು ವಿದ್ಯಾರ್ಥಿಗಳು ಕೂಡ ಜೀವ ತೆತ್ತರು. ಈ ಎಲ್ಲವೂ ಸಮುದ್ರದ ಕುರಿತ ಅರಿವು ಹಾಗೂ ಮೂಲ ಸೌಕರ್ಯಗಳ ಕೊರತೆ ಎಂಬ ‘ವ್ಯವಸ್ಥೆ’ ಎಸಗಿದ ಸಾವುಗಳೇ ಸರಿ.

ಕೋವಿಡ್ ನಂತರ ಕಡಲತೀರಗಳಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಅದೇ ರೀತಿ, ಅಲೆಗಳೊಂದಿಗೆ ಆಡಲು ಹೋಗಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆಯೂ ಏರುತ್ತಿದೆ. ಹೀಗೆ ಸಾವಿಗೀಡಾಗುತ್ತಿರುವವರಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳೇ ಹೆಚ್ಚು ಎನ್ನುವುದು ಆತಂಕಕಾರಿ. ಮುರುಡೇಶ್ವರ ದುರಂತದ ಸಂದರ್ಭದಲ್ಲಂತೂ, ೬೦೦ ಕಿ ಮೀ ದೂರದಿಂದ ಮಕ್ಕಳನ್ನು ಕರೆದು ತಂದಿದ್ದ ಕೋಲಾರ ಶಿಕ್ಷಕರ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ. ಘಟನೆ ಹಿನ್ನಲೆಯಲ್ಲಿ ಶಾಲೆಯ ಪ್ರಾಂಶುಪಾಲರನ್ನು ಸರಕಾರ ಅಮಾನತು ಮಾಡಿ, ಮೃತ ಬಾಲಕಿಯರ ಕುಟುಂಬಕ್ಕೆ ಪರಿಹಾರ ಘೋಷಿಸಿದೆ. ಆದರೆ, ಇಷ್ಟೇ ಸಾಕೇ? ಪರಿಹಾರ ನೀಡುವುದರಿಂದ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಒದಗಿಸಿದಂತಾಯಿತೇ?

ಶೈಕ್ಷಣಿಕ ಪ್ರವಾಸ ಸಂದರ್ಭದಲ್ಲಿ ಶಿಕ್ಷಕರ ಜವಾಬ್ದಾರಿ ಎಷ್ಟು ಮುಖ್ಯವೋ, ಪ್ರವಾಸಿ ಸ್ಥಳಗಳಲ್ಲಿನ ಸೌಕರ್ಯಗಳೂ ಸುರಕ್ಷಿತವಾಗಿರಬೇಕು ಹಾಗೂ ಸುಸಜ್ಜಿತವಾಗಿರಬೇಕು ಎಂಬುದು ಕೂಡಾ ಅಷ್ಟೇ ಮುಖ್ಯ. ಮುರುಡೇಶ್ವರ ಘಟನೆಯಲ್ಲಿ ತೇಲಿ ಹೋಗುತ್ತಿದ್ದ ಬಾಲಕಿಯರನ್ನು ದಡಕ್ಕೆ ಎಳೆದು ತರಲು ಲೈಫ್ ಗಾರ್ಡ್ ಗಳ ಬಳಿ ಯಾವ ಸಲಕರಣೆಯೂ ಇರಲಿಲ್ಲ. ಅಲ್ಲಿ ನಡೆಯುತ್ತಿದ್ದ ಜಲಸಾಹಸ ಕ್ರೀಡೆಗಳನ್ನು ತಾಂತ್ರಿಕ ನೆಪವೊಡ್ಡಿ ಬಂದ್ ಮಾಡಲಾಗಿದೆ. ಇವು ಚಾಲ್ತಿಯಲ್ಲಿ ಇರುತ್ತಿದ್ದರೆ ತೇಲಿಹೋಗುತ್ತಿದ್ದ ಮಕ್ಕಳನ್ನು ರಕ್ಷಿಸಲು ತಕ್ಷಣ ಬೋಟ್, ಜಾಕೆಟ್ ಗಳಾದರೂ ಸಿಗುತ್ತಿತ್ತೋ ಏನೋ? ಈ ಎಲ್ಲ ಸಾವುಗಳ ಹಿಂದೆಯೂ ಇಂಥಾ ಕೊರತೆಗಳ ದ್ರೋಹವಿರುತ್ತದೆ.

ಇನ್ನು, ನಮ್ಮಲ್ಲಿನ ಬಹುತೇಕ ಶಿಕ್ಷಕರಿಗೆ ಕಡಲ ತೀರಗಳ ಬಗ್ಗೆ ಮಾಹಿತಿ ಕೊರತೆಯೂ ಇದೆ. ಕೆರೆ, ಈಜುಕೊಳದಲ್ಲಿ ಈಜುವುದಕ್ಕೂ ಸಮುದ್ರದಲ್ಲಿ ಈಜುವುದಕ್ಕೂ ವ್ಯತ್ಯಾಸವಿದೆ. ಸಮುದ್ರದಲ್ಲಿ ಉಬ್ಬರ, ಇಳಿತ, ಅಲೆಗಳ ಚಲನೆ ಬಗ್ಗೆ ನಿಗಾ ಇಡಬೇಕು. ಅಡಿ ತಪ್ಪಿದರೆ ಆನೆ ಕೂಡಾ ಉರುಳುತ್ತದೆ ಎಂಬ ಮಾತಿನಂತೆ, ಕಡಲ ತೀರದಲ್ಲಿ ಅಲೆ ಅಪ್ಪಳಿಸಿದಾಗ ಪಾದಡಿಯ ಮರಳು ಕೂಡಾ ಆಯ ತಪ್ಪಿಸುತ್ತದೆ. ಸಮುದ್ರದ ಇಂಥಾ ‘ವರ್ತನೆ’ಗಳ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ನೀಡುವ ಕೆಲಸವಾಗಬೇಕು. ಕಡಲ ಕಿನಾರೆಗಳಿಗೆ ಶೈಕ್ಷಣಿಕ ಪ್ರವಾಸ ಬರುವ ಶಾಲಾ, ಕಾಲೇಜುಗಳು ಸ್ಥಳೀಯ ಪೋಲೀಸ್ ಠಾಣೆಗೆ ಕಡ್ಡಾಯ ಮಾಹಿತಿ ನೀಡಿ ಅನುಮತಿ ಪಡೆಯುವ ವ್ಯವಸ್ಥೆಯೂ ಜಾರಿಯಾಗಬೇಕು. ಪ್ರವಾಸಿಗರ ದಟ್ಟಣೆ ಇರುವ ಕಡಲ ತೀರಗಳಲ್ಲಿ ಜೀವರಕ್ಷಕ ಸಿಬ್ಬಂದಿಗೆ ಅಗತ್ಯ ಸಲಕರಣೆ ಒದಗಿಸಬೇಕು.

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೧೨-೧೨-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ