ಕಡೂರಿನ ದಿನಗಳು - ಅಣ್ಣನ ಅಣಿಮುತ್ತುಗಳು!

ಕಡೂರಿನ ದಿನಗಳು - ಅಣ್ಣನ ಅಣಿಮುತ್ತುಗಳು!

- ಡಾ: ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.

ನಾವೆಲ್ಲ ಕನ್ನಡ ಕಲಿತಿದ್ದೇ ಅಣ್ಣನಿಂದ (ನಮ್ಮ ತಂದೆ). ಕನ್ನಡವನ್ನು ಭಾಷೆಯಾಗಿ ತಗೊಂಡೇ ಇಲ್ಲ. ಕನ್ನಡ ಮಾಧ್ಯಮದಲ್ಲಿ ಎಂಟನೇ ತರಗತಿವರೆಗೂ ಓದಿದ್ದರಿಂದ ಕನ್ನಡ ಸ್ವಲ್ಪ ಗೊತ್ತಿತ್ತು. ಮನೆಯಲ್ಲಿ ಕನ್ನಡವೇ ಮಾತೃ ಭಾಷೆ ಕೂಡ ಆಗಿದ್ದರಿಂದ (ಏಕೆಂದರೆ, ಬಹಳ ಕನ್ನಡದವರಿಗೆ ಆಡುವ ಭಾಷೆ ಬೇರೇ ಇರುತ್ತೆ ಮನೆಯಲ್ಲಿ. ಉದಾ, ಐಯಂಗಾರರಿಗೆ, ಐಯರಿಗೆ - ತಮಿಳು, ಮುಲುಕುನಾಡರಿಗೆ - ತೆಲುಗು,..ಹೀಗೆ) ಕನ್ನಡ ಕಲಿಯಲು ಯಾವ ಅಡಚಣೆಯೂ ಇರಲಿಲ್ಲ. ಅಣ್ಣ ಹೇಳಿ ಕೇಳಿ ಶಾನುಭೋಗರು, ಹಳೆಕನ್ನಡ, ಹೊಸಕನ್ನಡ, ಆಡು ಕನ್ನಡ, ಬರೆಯುವ ಕನ್ನಡ ಎಲ್ಲವೂ ಚೆನ್ನಾಗಿ ತಿಳಿದಿತ್ತು. ಅದೂ ಅಲ್ಲದೇ ಅಣ್ಣನಿಗೆ ಸುಮಾರು ಭಾಷೆಗಳು ಚೆನ್ನಾಗಿ ಬರುತ್ತಿತ್ತು, ಹಿಂದಿ, ತೆಲುಗು, ತಮಿಳು, ಮಲಯಾಳಮ್, ಮರಾಠಿ, ಸಂಸ್ಕೃತ, ಬೆಂಗಾಲಿ ಎಲ್ಲದರಲ್ಲೂ ಸರಾಗವಾಗಿ ಮಾತನಾಡುವರು. ಅವರ ಭಾಷಾ ಪ್ರೇಮ ಅದಕ್ಕೆ ಅನುವು ಮಾಡಿಕೊಟ್ಟಿತ್ತು. ನಮಗೂ ದಿನದಿಂದ ದಿನಕ್ಕೆ ಹೊಸ ಪದಗಳನ್ನು ಉಪಯೋಗಿಸುವುದರ ಮೂಲಕ ಕನ್ನಡ ಕಲಿಸಿದ್ದರು. ಕಲಿಕೆ ತಮಾಶೆಯಿಂದಲೇ ನಡೆಯುತ್ತಿದ್ದರಿಂದ ನಾವೆಲ್ಲ ಕಲಿಯುವುದರಲ್ಲಿ ಆಸಕ್ತಿ ಇಟ್ಟು ಕಲಿತೆವು. ಈಗ ನೆನಪಿಸಿಕೊಂಡರೂ ಅಷ್ಟೇ ನಗು ಅಥವಾ ಅದಕ್ಕಿಂತಲೂ ಹೆಚ್ಚಾಗಿ ನಗು ಬರುವುದರಲ್ಲಿ ಸಂಶಯವೇ ಇಲ್ಲ.

ಅ: ಅನಾಹುತ, ಅಟಾಟೋಪು, ಅಚ್ಚೌಟ್ಲ ಕಾಯಿ,

ಅಣ್ಣ ಹೊರಗಡೆ ವರಾಂಡದಲ್ಲಿ ಜನರ ಮಧ್ಯದಲ್ಲಿ ಕುಳಿತು ತಮ್ಮ ಶಾನುಭೋಗಿಕೆ ಕೆಲಸಮಾಡುತ್ತಿದ್ದಾಗ, ಲೆಕ್ಕ, ಪತ್ರ, ಮತ್ತು ಛಾಪಾ ಕಾಗದದ ಮೇಲೆ ಬರೆಯುತ್ತಿದ್ದಾಗ, ಯಾವ ತರಹ ಗಲಾಟೆಯಾದರೂ ಇಷ್ಟ ಆಗುತ್ತಿರಲಿಲ್ಲ. ನಾವು ಒಳಗಡೆ ಅಡಿಗೆ ಮನೆಯಿಂದ ಊಟ, ತಿಂಡಿ ಮಾಡುವ ಗಲಾಟೆಯಲ್ಲಿ ತಟ್ಟೆಯನ್ನು ನೆಲದ ಮೇಲೆ ಬೀಳಿಸಿದಾಗ, ಅದು ಜೋರಾಗೇ ಶಬ್ಧ ಮಾಡಿ ಅವರ ಏಕಾಗ್ರತೆಗೆ ತೊಂದರೆಯಾಗುತ್ತಿತ್ತು. ಆಗ ಅಲ್ಲಿಂದಲೇ ನಮ್ಮನ್ನೆಲ್ಲ "ಏನ್ರೇ ಅದು ’ಅನಾಹುತ’ ಅಂತ ಬೈತಾ ಇದ್ರು. ನಮ್ಮ ಅಣ್ಣ (ಸಹೋದರ) ತಟ್ಟೆ ಬೀಳಿಸೋದಕ್ಕೆ ಅನಾಹುತ ಅಂತ ಅರ್ಥ ಮಾಡಿಕೊಂಡಿದ್ದ. ನಾವೆಲ್ಲ ಅವನಿಗಿಂತ ೩-೪ ವರುಷ ಸಣ್ಣವರಾಗಿದ್ವಿ. ಹೀಗೇ ಒಂದು ಸಲ ಇನ್ನೇನೋ ಗಲಾಟೆ ಮಾಡುತ್ತ ಶಬ್ಧ ಮಾಡಿದಾಗ, ಅಣ್ಣ ’ಅನಾಹುತ’ ಅಂತ ಬೈತಾರೆ ಅಂತ ನಾವೆಲ್ಲ ಅಂದುಕೊಂಡಾಗ, ಅವನು ಸೀರಿಯಸ್ ಆಗಿ "ತಟ್ಟೇ ಬೀಳಿಸೋದಕ್ಕೆ ಅನಾಹುತ ಅಂತ ಹೆಸರು" ಅಂದ. ನಮ್ಮಕ್ಕ ಅಲ್ಲೇ ಇದ್ದವಳು ನಕ್ಕು "ಅಯ್ಯೋ, ಪೆಕರ್ ಮುಂಡೇವಾ, ಏನಾದ್ರೂ ಗಡಿಬಿಡಿ, ಗಲಾಟೆಯಿಂದ ಮಾಡೊ ಅಘಾತಗಳೆಲ್ಲವೂ ಅನಾಹುತ ಅಂತ ತಿದ್ದಿದ್ದಳು. ಒಂದೆರಡು ಘಟನೆಗಳ ನಂತರ ಪದಗಳ ಅರ್ಥ ಸರಿಯಾಗಿ ತಿಳಿಯುತ್ತಿತ್ತು.



ಅಟಾಟೋಪು: ಅಂದರೆ, ಕೆಲಸಮಾಡದೇ ಕೆಲಸಮಾಡುವವರ ತರ ಆಟ ಆಡ್ತಾ ಇರ್ತಾರಲ್ಲ ಅದಕ್ಕೆ "ಅಟಾಟೋಪು" ಅಂತ ಹೇಳಬಹುದು. ಉದಾ: ಅವನೇನ್ ಕೆಲಸ ಕೇಳಬೇಡ, ಅವನದೆಲ್ಲಾ ಬರೀ "ಅಟಾಟೋಪು"!

ಅಚ್ಚೌಟ್ಲ ಕಾಯಿ: ಅಂದರೆ "ಪರಂಗಿ ಕಾಯಿ" ಗೆ ಇನ್ನೊಂದು ಹೆಸರು. ಉದಾ: ಜೋರು ಗಾಳಿಗೆ ಅಚ್ಚೌಟ್ಲ ಕಾಯಿ ಮರದಿಂದ ಬಿತ್ತು.

ಆ: ಆವಾರಿ, ಆನಾಡಿ

ಆವಾರಿ: ಅಂದರೆ, ಸಾದುವಲ್ಲದ್ದು. ನಮ್ಮನೆಯಲ್ಲಿ ಒಂದು ಹಸು ಇತ್ತು ಅದಕ್ಕೆ "ಜಯಸಿಂಹ" ಅಂತ ಹೆಸರಿಟ್ಟಿದ್ವಿ. ಅದು ಸಿಂಹ ರೂಪದ ಹಸು. ತುಂಬಾ ಕೋಪ, ಎಲ್ಲರಿಗೂ ಹಾಯುತ್ತಿತ್ತು, ತಿವಿಯುತ್ತಿತ್ತು. ಮನೆಗೆ ಬರುತ್ತಾನೇ ಇರಲಿಲ್ಲ. ರಾತ್ರಿ ಹನ್ನೆರಡು ಘಂಟೆಗೆ ಮನೆಗೆ ಬರುತ್ತಿತ್ತು ಸಂತೇ ದಿನ ನಾವೆಲ್ಲ ಮಲಗಿದಾಗ "ಅಂಬಾ" ಅಂದು ಕೂಗುತ್ತಾ. ನಮ್ಮಣ್ಣ ಅದಕ್ಕೆ "ಬಲು ಆವಾರಿ" ಅಂತ ಕರೀತಿದ್ರು.

ಆನಾಡಿ: ಅಂದರೆ, ತುಂಬಾ, ಜಾಸ್ತಿ, ಬಹಳ ಅನ್ನೋ ಅರ್ಥ ಕೊಡುತ್ತೆ.

ಇ: ಇಬ್ಬಟ್, ಇಜ್ಜೋಡಿ,

ಇಬ್ಬಟ್: ಅಂದರೆ, ಇನ್ನುಮೇಲೆ ಅಂತ ಅರ್ಥ ಮಾಡಬಹುದು. ನಮ್ಮಜ್ಜಿ ತುಂಬಾ ಚೆನ್ನಾಗಿ ಒಬ್ಬಟ್ಟು ಮಾಡುತ್ತಿದ್ದರು. ನಾವೆಲ್ಲ ಒಬ್ಬಟ್ ಮಾಡುವಾಗ ಅಲ್ಲೇ ಅಡಿಗೆಮನೆಯಲ್ಲಿ ಸುತ್ತುಕೊಂಡು ಇರುತ್ತಿದ್ದೆವು. ಸ್ವಲ್ಪ ಒಬ್ಬಟ್ ಆದಮೇಲೆ ಅಜ್ಜಿ ಎಲ್ಲರಿಗೂ ಒಂದೊಂದು ಕೊಟ್ಟು : " ಇದನ್ನ ತಿಂದು, ಇಬ್ಬಟ್ ಆಡಿಕೊಳ್ಳಿ" ಅಂತ ಹೇಳುತ್ತಿದ್ದರು.

ಇಜ್ಜೋಡಿ: ಅಂದರೆ ಜೋಡಿ ಇಲ್ಲದೇ ಇರುವುದು, ಅಂದರೆ ಒಂದು ಕಾಲು ಚೀಲ ಕಳೆದು, ಒಂದೇ ಕಾಲು ಚೀಲ ಇದ್ದರೆ ಜೊತೆಯಲ್ಲಿ; ಅದಕ್ಕೆ "ಇಜ್ಜೋಡಿ" ಅನ್ನಬಹುದು.

ಮುಂದುವರೆಯುವುದು....

Comments

Submitted by ಕೀರ್ತಿರಾಜ್ ಮಧ್ವ Fri, 04/12/2013 - 11:28

ನನಗೊಂದು ಸಂಶಯ, ಅಣ್ಣ ಎಂದರೆ ಸಹೋದರ ಎಂದಲ್ಲವೇ..? ನೀವು ತಂದೆಯನ್ನು ಅಣ್ಣ ಎಂದು ಬರೆದಿದ್ದೀರಿ. ಯಾರಾದರೂ ನನ್ನ ಸಂಶಯ ಪರಿಹರಿಸಿ.
Submitted by venkatb83 Fri, 04/12/2013 - 13:25

In reply to by ಕೀರ್ತಿರಾಜ್ ಮಧ್ವ

ಇಜ್ಜೋಡು ಎನ್ನುವ ಕನ್ನಡದ ಪ್ರಶಸ್ತಿ ವಿಜೇತ ಚಿತ್ರದ ಕುರಿತು ಓದಿದ್ದೆ... ಆಂಗ್ಲದಲ್ಲಿ ಇನ್ ಕಾಮ್ಪ್ಟಿಬಲ್ ಕನ್ನಡದಲ್ಲಿ ಸಾಮರಸ್ಯವಿಲ್ಲದ ಅಸಮರಸ (ಸ್ವಭಾವತಃ) ವಿರುದ್ಧವಾದ ಹೊಂದಿಕೊಳ್ಳದ ಮೇಳನವಿಲ್ಲದ ಈಗ ಇಜ್ಜೋಡಿ ಎಂದರೂ ಹೆಚ್ಚು ಕಡಿಮೆ ಅದೇ ಅರ್ಥ ಎಂದು ತಿಳಿಯಿತು ..! >>ನನಗೊಂದು ಸಂಶಯ, ಅಣ್ಣ ಎಂದರೆ +1 ನಮ್ಮ ಕಡೆ ನಮ್ಮ ಸ್ನೇಹಿತರ ಮನೆಯಲ್ಲಿ (ನಾ ನೋಡಿದ ಹಾಗೆ ಅವರ ಮನೆಯಲ್ಲಿ ಮಾತ್ರ ) ಅವರ ಅಪ್ಪನಿಗೆ ಅಣ್ಣ ಎಂದು ಅಮ್ಮನಿಗೆ ಅಕ್ಕ ಎಂದು ಕರೆಯುತ್ತಿದ್ದರು -ಯಾಕೆ ಹಾಗೆ ಎಂದು ಕೇಳಿದರೆ ಚಿಕ್ಕಂದಿನಿಂದ ನಾವ್ ಹಾಗೆ ಕರೆದದ್ದು ಎಂದರು -ಆದ್ರೆ ಅದು ನನ್ನ ಕುತೂಹಲವನ್ನು ತಣಿಸಲಿಲ್ಲ - ನಾವೆಲ ಮಾಮೂಲಾಗಿ ಅಪ್ಪನಿಗೆ ಅಪ್ಪ ಎಂದು ಅಮ್ಮನಿಗೆ ಅಮ್ಮ ಎಂದೇ ಕರೆಯೋದು ಕೆಲವರು ಮಾತ್ರ ಯಾಕೆ ಹಾಗೆ? ಅದು ಕೆಲವೊಮೆಮ್ ನಮ್ಮನ್ತವರಿಗೆ ಕಂಫ್ಯುಜ್ ಮಾಡುತ್ತೆ - ಹಾಗೆಯೇ ಅವರು ಅಕ್ಕನಿಗೆ ಅಕ್ಕ ಎಂದು ಅಣ್ಣಂಗೆ ಅಣ್ಣ ಎಂದೇ ಕರೆಯುತ್ತಿದ್ದರು -ಈಗ ಹೇಳಿ ಕನ್ಫುಜ್ ಆಗದೆ ಇದ್ದೀತೆ? ಈ ಬರಹದ ಲೇಖಕರೆ ಆ ಬಗ್ಗೆ ಏನಾರ ವಿವರಣೆ ನೀಡಬಹದು ಎನ್ಸುತ್ತೆ.. ನೋಡುವ . ಸರ್ವರಿಗೂ ವಿಜಯನಾಮ ಸಂವತ್ಸರದ ಹಾರ್ದಿಕ ಶುಭಾಶಯ ಗಳು ಶುಭವಾಗಲಿ.. \।/
Submitted by rasikathe Fri, 04/12/2013 - 23:04

In reply to by venkatb83

ಧನ್ಯವಾದಗಳು ವೆಮ್ಕಟ್ ಅವರೆ, ಅಣ್ಣ‌ ಪದದ‌ ಅಭ್ಯಾಸ‌ ಭಲ‌ ಬರೆದಿದ್ದೆನೆ. ಅಭ್ಯಾಸ‌, ರೂಢಿ ಅಶ್ಹ್ಟೇ. ನಿಮ್ಮ‌ ಪ್ರತಿಕ್ರಿಯೆಗೆ ನನ್ನೀ ಮೀನಾ.
Submitted by rasikathe Fri, 04/12/2013 - 23:02

In reply to by ಕೀರ್ತಿರಾಜ್ ಮಧ್ವ

ನಿಮ್ಮ‌ ಪ್ರತಿಕ್ರಿಯೆಗೆ ಧನ್ಯವಾದಗಳು. ಕೀರ್ತಿರಾಜ್ ಅವರೆ. ನಮಗೆ ಅಪ್ಪನನ್ನು ಅಣ್ಣ‌ ಎಮ್ದೇ ಕರೆದು ಅಭ್ಯಾಸ‌. ಅಣ್ಣ‌ (ಸಹೋದರನಿಗೆ) ಅವನ‌ ಹೆಸರಿಟ್ಟೇ ಕರೆದೆವು. ಅಮ್ಮನಿಗೆ ಅಮ್ಮ‌ ಎಮ್ದೇ ಕರೆದೆವು. ಇದೂ ಅಭ್ಯಾಸದಿಮ್ದ‌. ನಾನು ಸುಮಾರು ಮನೆಗಳಲ್ಲಿ ಈ ರೂಡಿ ಇರುವುದು ಕಮ್ಡಿದ್ದೇನೆ. ನನ್ನೀ ಮೀನಾ
Submitted by nageshamysore Sat, 04/13/2013 - 04:41

In reply to by rasikathe

ನನಗೂ ಈ ರೀತಿ ಕರೆಯುವ ಮೂಲದ ಬಗ್ಗೆ ಹೆಚ್ಚಾಗಿ ತಿಳಿಯದಿದ್ದರೂ, ಸಾಕಷ್ಟು ಮನೆಗಳಲ್ಲಿ ಈ ಅಭ್ಯಾಸ ಇರುವುದು ನೋಡಿದ್ದೇನೆ. ಹಾಗೆಯೆ ತೆಲುಗಿನ ಕೆಲ ಕುಟುಂಬಗಳಲ್ಲೂ ಇದೇ ಪರಿಪಾಠವಿರುವುದನ್ನು ಗಮನಿಸಿದ್ದೇನೆ (ಅಲ್ಲಿ 'ಅಣ್ಣ' , 'ಅನ್ನ' ಆಗುತ್ತದೆ).
Submitted by ಗಣೇಶ Mon, 04/15/2013 - 00:37

In reply to by nageshamysore

ದೊಡ್ಡ ಕುಟುಂಬದಲ್ಲಿ ತಮ್ಮಂದಿರು ಮಗುವಿನ ತಂದೆಯನ್ನು "ಅಣ್ಣ" ಎಂದು ಕರೆಯುವುದನ್ನು ನೋಡಿ ನೋಡಿ ಮಗೂ ಸಹ ತಂದೆಯನ್ನು ಅಣ್ಣ ಎನ್ನುವುದು. ಹೀಗಿರಬಹುದೇ? ಮೀನಾ ಅವರೆ ಲೇಖನ ಚೆನ್ನಾಗಿದೆ.
Submitted by venkatesh Sat, 04/20/2013 - 17:19

In reply to by ಕೀರ್ತಿರಾಜ್ ಮಧ್ವ

'ಅಣ್ಣಾ' ಎಂದರೆ ಒಡಹುಟ್ಟಿದ ಅಣ್ಣ ಎನ್ನುವುದು ಸರ್ವೇ ಸಾಮಾನ್ಯ. ಆದರೆ ಕೆಲವು ಮನೆಗಳಲ್ಲಿ ತಂದೆಯನ್ನು 'ಅಣ್ಣಾ 'ಎಂದು ಕರೆಯುವವಾಡಿಕೆ ಇದೆ. ಮತ್ತೊಂದು ವಿಚಾರ. ನಮ್ಮ ದೊಡ್ಡ ಕುಟುಂಬದ ಮನೆಯಲ್ಲಿ ನಮ್ಮ ಅಕ್ಕನವರನ್ನು ಎಲ್ಲರೂ ಅಕ್ಕ ಎಂದೇ ಸರಿಯಾಗಿ ಕರೆದರು. ಆದರೆ, ಮನೆಯ ಬೇರೆಯವರು (ಮನೆಗೆ ಬಂದ ಅತಿಥಿಗಳು, ಸಹಿತ ಅಕ್ಕ ಎಂದು, ಆಕೆಯ ಗಂಡನನ್ನು ಭಾವ ಎಂದು ಕರೆಯುವ ಸಂಧರ್ಭ ಬಹಳ ವರ್ಷ ಜಾರಿಯಲ್ಲಿತ್ತು. ಅದಲ್ಲದೆ, ಅಕ್ಕನ ಮಗಳು ಸಹಿತ, ಅಕ್ಕ ಎಂದು ತಾಯಿಯನ್ನು ಕರೆಯುತ್ತಿದ್ದದ್ದು ನೆನಪಿಗೆ ಬರುತ್ತಿದೆ.)
Submitted by tthimmappa Sat, 04/13/2013 - 19:41

ನಮ್ಮ‌ ಮನೆಯಲ್ಲಿ ನಾವೂ ಕೂಡ‌ ಚಿಕ್ಕ೦ದಿನಿ೦ದಲೂ ಮತ್ತು ಈಗಲೂ ನಮ್ಮ‌ ತ೦ದೆಯವರನ್ನು ಅಣ್ಣ‌ ಎ೦ದೂ ತಾಯಿಯನ್ನು ಅಮ್ಮ‌ ಎ೦ದೇ ಕರೆಯುವುದು.. ಅದು ಸುಮಾರು ಕುಟು೦ಬಗಳಲ್ಲಿ ರೂಢಿಯಾಗಿ ಬ೦ದಿದೆ. ಸರಣಿ ಚೆನ್ನಾಗಿ ಮೂಡಿ ಬರುತ್ತಿದೆ. ಧನ್ಯವಾದಗಳು
Submitted by venkatesh Sat, 04/20/2013 - 11:21

In reply to by rasikathe

ನಮಸ್ಕಾರ, ಡಾ. ಮೀನಾ ಸುಬ್ಬರಾವ್ ರವರಿಗೆ, ಬಹುಶಃ ನೀವೊಬ್ಬ ವೈದ್ಯರು ಅಂದ್ಕೊಂಡಿದೀನಿ. (ವಿಜ್ಞಾನದ ಪಿ.ಎಚ್.ಡಿ ನಾ ?) ನೀವೇನಾದರೂ 'ಸುಲೇಖಾ ಭ್ಳಾಗ್' ನಲ್ಲಿ ಬರೆಯುತ್ತಿದ್ದೀರಾ ? ಇನ್ನು, ಆಟಾಟೋಪಾ ಎನ್ನುವ ಅರ್ಥ ನನಗೆ ತಿಳಿದಂತೆ, ಅಹಂಕಾರದಿಂದ ಮೆರೆಯುವ ಸ್ವಭಾವ. ಚಿಕ್ಕ ಕೆಲಸವನ್ನು ಏನೋ ಕಡಿದು ಕಟ್ಟೆಹಾಕಿರುವವವ ತರಹ ತೋರಿಸುವ ರೀತಿ, ಎಂದು ನನ್ನ ಅನಿಸಿಕೆ. ಪರಂಗಿ ಹಣ್ಣಿಗೆ, ನಮ್ಮ ದಾವಣಗೆರೆಯಲ್ಲಿ, ( ಅತ್ಪಟ್ಲೆಕಾಯಿ ಇಲ್ಲವೆ ಹಣ್ಣು) ಎನ್ನುವ ವಾಡಿಕೆ. ಲೇಖನ ಚೆನ್ನಾಗಿದೆ. ಯುಗಾದಿಯ ಶುಭಾಶಯಗಳು, ತಮಗೆ ಮತ್ತು ತಮ್ಮ ಪರಿವಾರಕ್ಕೆ !
Submitted by rasikathe Sun, 04/21/2013 - 23:12

ನಮಸ್ಕಾರ‌ , ನಿಮ್ಮ‌ ಪ್ರತಿಕ್ರಿಯೆಗೆ ಧನ್ಯವಾದಗಳು! ಕುಟ್ಟುಮ್ಡೆ ಅಲ್ಲೆಲ್ಲಾ ಫೇಮಸ್. ಪರಣ್ಗಿ ಕಾಯಿ ಗೆ ಅತೊಉಟ್ಲ‌ ಕಾಯಿ ..ಅದೂ ಬೇರೆ ಪ್ರದೇಷ‌ ದಲ್ಲಿ ಹೇಳೋವಾಗ‌ ಸ್ವಲ್ಪ‌ ವ್ಯತ್ಯಾಸ‌ ಆಗುವುದು ಸಾಮಾನ್ಯ‌ ಅಲ್ಲವೇ? ಮೀನಾ
Submitted by Ranjana Madival Wed, 04/24/2013 - 16:37

ಮೀನಾ ರವರೆ ನಿಮ್ಮ ಲೇಖನ ತುಂಬಾ ಚೆನ್ನಾಗಿದೆ,ತುಂಬಾ ಇಷ್ಟ ಆಯಿತು.ಹೊಸ ಹೊಸ ಕನ್ನಡ ಪದಗಳು ಸಿಕ್ಕವು.ಉದಾಹರಣೆ ಕೊಟ್ಟಿದ್ದರಿಂದ ಆ ಪದಗಳ ಅರ್ಥ ಸಮರ್ಪಕವಾಗಿ ಅರ್ಥ ಆಯಿತು ಇಜ್ಜೋಡಿ: ಅಂದರೆ ಜೋಡಿ ಇಲ್ಲದೇ ಇರುವುದು,ಅಂತ ಹೇಳಿದರಲ್ಲ ನಮ್ಮ ಕಡೆ ಅದನ್ನ ಸ್ವಲ್ಪ ಬದಲಾಯಿಸಿ ಇಡ್ಜೋಡಿ ಅಂತಾರೆ ಇದರ ಅರ್ಥ ಅಂದೆ ಸಮವಾದ ಅಂತ.
Submitted by Ranjana Madival Wed, 04/24/2013 - 16:37

ಮೀನಾ ರವರೆ ನಿಮ್ಮ ಲೇಖನ ತುಂಬಾ ಚೆನ್ನಾಗಿದೆ,ತುಂಬಾ ಇಷ್ಟ ಆಯಿತು.ಹೊಸ ಹೊಸ ಕನ್ನಡ ಪದಗಳು ಸಿಕ್ಕವು.ಉದಾಹರಣೆ ಕೊಟ್ಟಿದ್ದರಿಂದ ಆ ಪದಗಳ ಅರ್ಥ ಸಮರ್ಪಕವಾಗಿ ಅರ್ಥ ಆಯಿತು ಇಜ್ಜೋಡಿ: ಅಂದರೆ ಜೋಡಿ ಇಲ್ಲದೇ ಇರುವುದು,ಅಂತ ಹೇಳಿದರಲ್ಲ ನಮ್ಮ ಕಡೆ ಅದನ್ನ ಸ್ವಲ್ಪ ಬದಲಾಯಿಸಿ ಇಡ್ಜೋಡಿ ಅಂತಾರೆ ಇದರ ಅರ್ಥ ಅಂದೆ ಸಮವಾದ ಅಂತ.