ಕತ್ತೆ ಮತ್ತು ಕುದುರೆಯ ಓಟದ ಸ್ಪರ್ಧೆ

ಕತ್ತೆ ಮತ್ತು ಕುದುರೆಯ ಓಟದ ಸ್ಪರ್ಧೆ

ನೂರು ವರುಷಗಳ ಮುಂಚೆ ಗೋಪಿ ಎಂಬ ಹುಡುಗನಿದ್ದ. ಅವನು ಕಾಡಿಗೆ ಹೋಗಿ ಕಟ್ಟಿಗೆ ಕಡಿದು, ತನ್ನ ಕತ್ತೆಯ ಮೇಲೆ ಹೇರಿಕೊಂಡು ಹಳ್ಳಿಗೆ ತಂದು ಮಾರುತ್ತಿದ್ದ. ಅವನಿಗೊಬ್ಬ ಮಾಯಕನೆಂಬ ಹೆಸರಿನ ಯಕ್ಷಗೆಳೆಯನಿದ್ದ.

ಗೋಪಿಯ ಅಪ್ಪ-ಅಮ್ಮ ಬಹಳ ಬಡವರು. ಗೋಪಿ ಕಟ್ಟಿಗೆ ಮಾರಿ ಗಳಿಸಿದ ಹಣವನ್ನು ಅಪ್ಪ-ಅಮ್ಮನಿಗೆ ಕೊಡುತಿದ್ದ. ಅವರಿಗೆ ಇದರಿಂದ ಬಹಳ ಸಹಾಯವಾಗುತ್ತಿತ್ತು.

ಗೋಪಿಯ ಮನೆಯ ಪಕ್ಕದ ಬಂಗಲೆಯಲ್ಲಿ ಸಮಂತ ವಾಸ ಮಾಡುತ್ತಿದ್ದ. ಸಮಂತನ ಬಳಿ ಒಂದು ದೊಡ್ಡ ಕುದುರೆಯಿತ್ತು. ಅವನು ಗೋಪಿಗೆ ಯಾವಾಗಲೂ ಗೇಲಿ ಮಾಡುತ್ತಿದ್ದ: “ನಿನ್ನದು ಕುರೂಪಿ ಕತ್ತೆ, ನನ್ನದು ನಮ್ಮ ಹಳ್ಳಿಯ ಮಜಬೂತು ಕುದುರೆ.”

ಅದೊಂದು ದಿನ ಸಮಂತ ಗೋಪಿಗೆ ಸವಾಲು ಹಾಕಿದ: “ನಾವೊಂದು ಸ್ಪರ್ಧೆ ಮಾಡೋಣ. ನಿನ್ನ ಕತ್ತೆ ನನ್ನ ಕುದುರೆಯನ್ನು ಸ್ಪರ್ಧೆಯಲ್ಲಿ ಸೋಲಿಸುತ್ತದೆಯೋ ನೋಡೋಣ." ಗೋಪಿಗೆ ಬೇಸರವಾದರೂ ಅವನು ಏನೂ ಮಾತಾಡಲಿಲ್ಲ.

ಇದನ್ನು ಗೋಪಿ ಮಾಯಕನಿಗೆ ತಿಳಿಸಿದಾಗ ಆತ ಹೇಳಿದ, "ಆ ಸಮಂತನಿಗೊಂದು ಪಾಠ ಕಲಿಸೋಣ! ನೀನು ಸ್ಪರ್ಧೆಗೆ ಒಪ್ಪಿಕೋ.” “ಆದರೆ ನಾನು ಅವನನ್ನು ಯಾವತ್ತೂ ಸೋಲಿಸಲಾರೆ” ಎಂದ ಗೋಪಿ. “ಚಿಂತೆ ಮಾಡಬೇಡ. ನಾನು ಹೇಳಿದಂತೆ ಮಾಡು. ನನಗೊಂದು ಐಡಿಯಾ ಹೊಳೆದಿದೆ. ಕೇಳು” ಎಂದು ಮಾಯಕ ಅವನ ಕಿವಿಯಲ್ಲಿ ಗುಟ್ಟಾಗಿ ಐಡಿಯಾ ಉಸುರಿದ.

ಅದಾದ ನಂತರ, ಸಮಂತನ ಬಳಿ ಹೋಗಿ ಗೋಪಿ ಹೇಳಿದ, "ಸರಿ, ನಾನು ಸ್ಪರ್ಧೆಗೆ ರೆಡಿ. ನಾಳೆಯೇ ಸ್ಪರ್ಧೆ ಮಾಡೋಣ. ಯಾರು ತೊರೆಯ ಆ ದಡದಲ್ಲಿರುವ ನೀಲಿ ಹೂವನ್ನು ಮೊದಲಾಗಿ ತರುತ್ತಾರೋ ಅವರೇ ಗೆಲ್ಲುತ್ತಾರೆ.”

ಗೋಪಿ ಮತ್ತು ಅವನ ಕತ್ತೆಯನ್ನು ತನ್ನ ಗೆಳೆಯರಿಗೆ ತೋರಿಸುತ್ತಾ “ಕೇಳಿ, ಕೇಳಿ. ಇವರು ನಾಳೆ ಸ್ಪರ್ಧೆಗೆ ತಯಾರಂತೆ” ಎಂದು ಸಮಂತ ಲೇವಡಿ ಮಾಡಿದ. "ಸರಿ ಹಾಗಾದರೆ, ನೀನೇನಾದರೂ ಗೆದ್ದರೆ ನಿನಗೆ ನನ್ನ ಕುದುರೆಯನ್ನು ಅದರ ಜೀನಿನ ಸಹಿತ ಬಹುಮಾನವಾಗಿ ಕೊಡುತ್ತೇನೆ” ಎಂದು ಘೋಷಿಸಿದ. ಆ ದಿನ ರಾತ್ರಿ, ಯಕ್ಷಗೆಳೆಯ ಮಾಯಕ ಮತ್ತು ಅವನ ಸಂಗಡಿಗರು, ತೊರೆಗೆ ಅಡ್ದ ಹಾಕಲಾಗಿದ್ದ ನಾಲ್ಕು ಮರದ ಹಲಗೆಗಳನ್ನು ತೆಗೆದು, ಅಲ್ಲಿ ಒಂದೇ ಒಂದು ಹಲಗೆಯನ್ನು ಇಟ್ಟರು.

ಮರುದಿನ ಬೆಳಗ್ಗೆ ಗೋಪಿ ಮತ್ತು ಸಮಂತನ ಗೆಳೆಯರೆಲ್ಲ ಹಳ್ಳಿಯ ಬಯಲಿನಲ್ಲಿ ಜಮಾಯಿಸಿದರು. ಸ್ಪರ್ಧೆ ಆರಂಭವಾಯಿತು. ಸಮಂತನ ದೊಡ್ಡ ಕುದುರೆ ನಾಗಾಲೋಟದಿಂದ ಓಡಿ ಕಣ್ಮರೆಯಾಯಿತು. ಗೋಪಿಯ ಕತ್ತೆಯೂ ಜೋರಾಗಿ ಓಡಿತು.

ಮುಂದೆ ಸಾಗಿದ ಸಮಂತನ ಕುದುರೆ ತೊರೆಯ ಸೇತುವೆಯ ಬುಡಕ್ಕೆ ಬಂದು ನಿಂತಿತು. ಅಲ್ಲಿ ಒಂದೇ ಹಲಗೆ ಇರೋದನ್ನು ನೋಡಿ ಸಮಂತ ತಲೆ ಕೆರೆದುಕೊಂಡ, “ಅರೆರೆ, ನಾವು ಒಂದೇ ಹಲಗೆಯ ಮೇಲೆ ಓಡಿ ತೊರೆ ದಾಟೋದು ಹೇಗೆ!”

ಆಗ ದೌಡಾಯಿಸುತ್ತಿದ್ದ ತನ್ನ ಕತ್ತೆಯ ಮೇಲೆ ಕುಳಿತು ಅಲ್ಲಿಗೆ ಬಂದ ಗೋಪಿ ಹೇಳಿದ, “ಅದು ನಿನ್ನ ಸಮಸ್ಯೆ. ನನಗೂ ನನ್ನ ಕತ್ತೆಗೂ ಏನೂ ಸಮಸ್ಯೆಯಿಲ್ಲ. ನಮ್ಮಿಬ್ಬರ ತೂಕವೂ ಕಡಿಮೆ. ನಾವು ಹೇಗೆ ತೊರೆ ದಾಟುತ್ತೇವೆ ನೋಡು.”

“ಹಾಗಾದರೆ, ನನ್ನ ಕುದುರೆ ತೊರೆಯ ಮೇಲೆ ಜಿಗಿಯುತ್ತದೆ ನೋಡು” ಎನ್ನುತ್ತಾ ಸಮಂತ ತನ್ನ ಕುದುರೆಯನ್ನು ಹಿಂದಕ್ಕೆ ಒಯ್ದ. ಅದನ್ನು ವೇಗವಾಗಿ ಓಡಿಸುತ್ತಾ ತೊರೆಯ ಬುಡಕ್ಕೆ ಬಂದು ಜಿಗಿಯಲು ಸಂಜ್ನೆ ಮಾಡಿದ. ಆದರೆ ತೊರೆಯ ನೀರು ಕಂಡೊಡನೆ ಕುದುರೆ ಗಕ್ಕನೆ ನಿಂತಿತು. ಆ ರಭಸಕ್ಕೆ ಸಮಂತ ಅದರ ತಲೆಯ ಮೇಲಿನಿಂದ ಜಾರಿ, ತೊರೆಯ ನೀರಿಗೆ ಚಿಲ್ಲನೆ ಬಿದ್ದ.

ಅಷ್ಟರಲ್ಲಿ ಗೋಪಿ ತೊರೆಯ ಆ ಬದಿಯಿಂದ ನೀಲಿ ಹೂವನ್ನು ಕಿತ್ತು, ಪುನಃ ತೊರೆ ದಾಟಿ ಹಳ್ಳಿಯ ಬಯಲಿಗೆ ಮರಳಿದ. ಅಲ್ಲಿದ್ದ ಎಲ್ಲರೂ, “ಗೋಪಿ ಗೆದ್ದ, ಗೋಪಿ ಗೆದ್ದ” ಎಂದು ಜಯಘೋಷ ಕೂಗಿದರು.
ಅನಂತರ, ಒದ್ದೆಮುದ್ದೆಯಾಗಿದ್ದ ಸಮಂತ ನಿಧಾನವಾಗಿ ನಡೆಯುತ್ತ ಅಲ್ಲಿಗೆ ಬಂದ. ಗೋಪಿಗೆ ಹೇಳಿದ, “ಗೋಪಿ, ನೀನೇ ಗೆದ್ದೆ. ಈಗ ನನ್ನ ಕುದುರೆ ನಿನ್ನದು, ತಗೋ." ಗೋಪಿ ಮುಗುಳ್ನಗುತ್ತಾ ಹೇಳಿದ, "ಬೇಡ, ಬೇಡ. ನನಗೆ ನನ್ನ ಕತ್ತೆಯೇ ಸಾಕು. ಅದೀಗ ಚಾಂಪಿಯನ್.”

ಮಾಯಕ ಮತ್ತು ಅವನ ಸಂಗಡಿಗರು ತೊರೆಗೆ ಅಡ್ಡವಾಗಿ ಮರದ ಹಲಗೆಗಳನ್ನು ಪುನಃ ಜೋಡಿಸಿ, ಸೇತುವೆಯನ್ನು ಗಟ್ಟಿಮುಟ್ಟಾಗಿ ಕಟ್ಟಿದರು. ಅನಂತರ ಯಾವತ್ತೂ ಸಮಂತ ಗೋಪಿಗೆ ಗೇಲಿ ಮಾಡಲಿಲ್ಲ. “ಅವನೀಗ ಪಾಠ ಕಲಿತಿದ್ದಾನೆ. ಕೆಲವೊಮ್ಮೆ ದುರ್ಬಲರೂ ಶಕ್ತಿವಂತರನ್ನು ಸೋಲಿಸಬಹುದು ಎಂದು ಅವನಿಗೆ ಅರ್ಥವಾಗಿದೆ” ಎಂದ ಯಕ್ಷಗೆಳೆಯ.