ಕಥೆ: ಪರಿಭ್ರಮಣ..(35)

ಕಥೆ: ಪರಿಭ್ರಮಣ..(35)

( ಪರಿಭ್ರಮಣ..34ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... )

'ವಾಟ್ ಫೋ'ಗೆ ಹೋಗಿ ಬಂದ ಘಟನೆ ಪಡೆದುಕೊಂಡ ಅನಿರೀಕ್ಷಿತ ತಿರುವಿನಿಂದಾಗಿ ಅದೇನು ನಿಜಕ್ಕೂ ನಡೆದಿತ್ತೊ, ಇಲ್ಲವೊ ಎಂದು ಶ್ರೀನಾಥನಿಗೆ ಅನುಮಾನ ಹುಟ್ಟಿಸಿದ್ದರಲ್ಲಿ ಅಚ್ಚರಿಯೇನೂ ಇರಲಿಲ್ಲ. ಇಡೀ ಪ್ರಕರಣವೆ ಒಂದು ರೀತಿಯ 'ಟ್ರಾನ್ಸ್'ನಲ್ಲಿದ್ದಾಗಿನ ಅನುಭವದಂತೆ ಭಾಸವಾಗಿ ಹೋಗಿತ್ತು. ತಾನು ಹೋಗಬೇಕೆಂದು ಉದ್ದೇಶಪೂರ್ವಕವಾಗಿ ಯೋಜನೆ ಹಾಕಿರದಿದ್ದರೂ, ಕುನ್. ಸೋವಿಯಿಂದ ಪ್ರೇರೇಪಿತನಾಗಿ ಅಲ್ಲಿಗೆ ಹೋಗುವಂತಾದದ್ದು; ಹೋಗಲೇಬೇಕೆಂಬ ಬಲವಾದ ಕಾರಣವಿರದಿದ್ದರೂ ಕುನ್. ಸು ಅಲ್ಲಿ ಸಿಗಬಹುದೆಂಬ ಪ್ರಲೋಭನೆ ಒಳಗೊಳಗಿನ ಆಸೆಯಾಗಿ ಪ್ರಚೋದಿಸಿದ್ದು ; ಏನೊ ಗೊಂದಲದಲ್ಲಿರುವ ಮನಸಿಗೆ ತುಸು ಮನಃಶಾಂತಿಯಾದರೂ ಸಿಕ್ಕಬಹುದೆಂಬ ದೂರದಾಸೆಯೂ ಹಿನ್ನಲೆಯಲ್ಲಿ ಪ್ರೋತ್ಸಾಹಿಸಿದ್ದು - ಇವೆಲ್ಲವು ಯೋಜನಾರಹಿತ ಕ್ಷಿಪ್ರ ಸಂಘಟನೆಗಳಾಗಿ ನಡೆದು, ಅದರ ಗುರುತ್ವವನ್ನು ಗ್ರಹಿಸಿ ಜೀರ್ಣಿಸಿಕೊಳ್ಳಲು ಬಿಡದಂತಹ ವೇಗದಲ್ಲಿ ಎಲ್ಲವು ನಡೆದು ಹೋಗಿತ್ತು. ಅದೂ ಹೋಗಲೆಂದರೆ 'ವಾಟ್ ಪೋ' ಮಾಮೂಲಿ ಭೇಟಿಯಾದರೂ ಅದರಲ್ಲೇನೂ ಅಷ್ಟೊಂದು ಮಹತ್ವವಿರುತ್ತಿರಲಿಲ್ಲ; ಆದರೆ ಅಲ್ಲಿ ಸಿಕ್ಕ ಆ ಬೌದ್ಧ ಗುರುವಿನ ಜತೆಯ ಮಾತುಕಥೆಯ ಸಂಘಟನೆ ಮಾತ್ರ ನಂಬಲಸಾಧ್ಯವಾದ ಅಸಾಧಾರಣ ಕಾಕತಾಳೀಯತೆಯಾಗಿ ಕಂಡಿತ್ತು. ಅದರಲ್ಲೂ ಆತನೆ ತಾನಾಗಿ ನೇರವಾಗಿ ಮಾತನಾಡಿಸಿದ ಬಗೆ, ಎಲ್ಲವನ್ನು ತಾನೇ ಕಣ್ಣಾರೆ ಕಂಡವನಂತೆ ಹೇಳುತ್ತಿದ್ದ ಆತ್ಮವಿಶ್ವಾಸದ ರೀತಿ, ಮುಂದೇನಾಗಲಿದೆ ಎನ್ನುವುದನ್ನು ಚೆನ್ನಾಗಿ ಬಲ್ಲವನಂತೆ ನುಡಿಯುತಿದ್ದ ಪಕ್ವತೆಯ ಅಧಿಕಾರಯುತ ದನಿಯಲಿದ್ದ ಕಾಂತೀಯ ಸೆಳೆತ - ಎಲ್ಲವು ಸೇರಿ ಅತನ ಮಾತು ಕೇವಲ ಡೊಂಗಿಯದಾಗಿರಲಾರದೆಂದು ಸಾರಲು ಹವಣಿಸುವಂತಿತ್ತು. ಜತೆಗೆ ಕೊನೆಯಲ್ಲಿ ಆತ ಕಾಣಿಕೆ ಹಣ ಪಡೆಯಲು ನಿರಾಕರಿಸಿದ ರೀತಿಯನ್ನು ನೆನೆದರೆ ಆತ ನಿಜವಾದ ಮಹಿಮಾನ್ವಿತ ಬೌದ್ಧ ಭಿಕ್ಷುವೆ ಇರಬಹುದೆಂಬ ನಂಬಿಕೆಯೂ ಬಲವಾಗುತ್ತಿತ್ತು. 

ಆತನ ಮಾತಿನಲ್ಲಿ ಅಪನಂಬಿಕೆಯಿಡಬಹುದಾಗಿದ್ದ ಒಂದೆ ಒಂದು ಸಂಗತಿಯೆಂದರೆ ಕುನ್. ಸು ಅಲ್ಲಿಗೆ ಬರುತ್ತಿದ್ದಳೆಂಬ ಸಂಗತಿ. ಅವನಿದ್ದ ಆ ಗಳಿಗೆಯಲ್ಲಿ ಅವಳಲ್ಲಿ ಕಂಡಿರದಿದ್ದರೂ, ಅವಳು ಶ್ರೀನಾಥನಿಗೆ ಕಾಣಿಸದಂತೆ ಅಲ್ಲೆ ಹತ್ತಿರದಲ್ಲೆಲ್ಲಾದರೂ ಇದ್ದುಕೊಂಡಿದ್ದಿರಬಹುದಾದ ದೂರದ ಸಾಧ್ಯತೆಯಂತೂ ಇತ್ತು. ಆ ಮುಖೇನ ಆ ಬೌದ್ಧ ಸನ್ಯಾಸಿಗೂ  ಶ್ರೀನಾಥನ ಕುರಿತಾಗಿ ಮೊದಲೇ ಹೇಳಿರಬಹುದಾದ ಸಾಧ್ಯತೆಯನ್ನು ತಾರ್ಕಿಕವಾಗಿ ಅಲ್ಲಗಳೆಯಲಾಗದಿದ್ದರೂ, ನೈಜದಲಿ ಅದು ಅಸಂಭವನೀಯವೆಂದೆ ತೋರಿತ್ತು - ಅದರ ಪ್ರಾಯೋಗಿಕ ಸಾಧ್ಯತೆಯನ್ನು ಪರಿಗಣಿಸಿದರೆ. ಮೊದಲಿಗೆ ತಾನಲ್ಲಿ ಹೋಗುತ್ತಿರುವುದು ಕುನ್. ಸೋವಿಗಲ್ಲದೆ ಮತ್ತಾರಿಗೂ ಗೊತ್ತಿರಲಿಲ್ಲ. ಕಾಕತಾಳೀಯವಾಗಿ ತಾನಲ್ಲಿರುವಾಗಲೆ ಅವಳೂ ಅಲ್ಲಿದ್ದಳೆಂದು ವಾದಕ್ಕಾಗಿ ಒಪ್ಪಿಕೊಂಡರು, ಸರಿಯಾಗಿ ತಾನಿದ್ದ ಅದೇ ಸ್ವಲ್ಪವೆ ಅವಧಿಯಲ್ಲಿ ಅವಳಲ್ಲಿ ಇದ್ದು, ಅವನು ಬಂದಿದ್ದನು ಕಂಡು ಆ ಸನ್ಯಾಸಿಗೆ ತಮ್ಮ ಹಿನ್ನಲೆಯ ಮಾಹಿತಿಯನ್ನೆಲ್ಲ ವರದಿ ಒಪ್ಪಿಸಿ, ತನ್ನ ಜತೆ ಮಾತನಾಡಿಸುವಂತೆ ವ್ಯವಸ್ಥೆ ಮಾಡುವುದು ಬಹುತೇಕ ಅಸಾಧ್ಯವಾಗಿತ್ತು.  ಅಲ್ಲದೆ, ಹಾಗೆ ಮಾಡಲೆಬೇಕೆಂದರೆ ಅವಳೆ ನೇರ ಮಾತನಾಡಿಸಬಹುದಿತ್ತೆ ಹೊರತು, ಹೀಗೆ ಪರೋಕ್ಷವಾಗಿ ಮತ್ತೊಬ್ಬರ ಮುಖೇನ ಮಾತನಾಡಿಸಿ ಯಾವ ಪರಮೋದ್ದೇಶವನೂ ಸಾಧಿಸುವ ಅಗತ್ಯವೂ ಕಾಣಲಿಲ್ಲ. ಇದೆಲ್ಲಾ ಪರಿಗಣಿಸಿ ನೋಡಿದರೆ, ಇದೊಂದು ವಿಧಿ ತಂದೊದಗಿಸಿದ ಆಕಸ್ಮಿಕ ಸಂಘಟನೆಯಾಗಿಯೆ ತೋರಿತ್ತಲ್ಲದೆ ಪೂರ್ವ ನಿಯೋಜಿತ ಕಾರ್ಯವಾಗಿ ಕಾಣಿಸಲಿಲ್ಲ. ಅದೇನೆ ಇದ್ದರೂ ಇನ್ನು ಕೆಲವೆ ದಿನಗಳಲ್ಲಿ ಮತ್ತೇನೊ ಸಂಭವಿಸಲಿದೆಯೆಂದು ಆತನೇ ಹೇಳಿರುವ ಕಾರಣ, ಅದೇನು ಘಟಿಸುವುದೊ ನೋಡಿಕೊಂಡು ನಂತರ ತೀರ್ಮಾನಿಸಿದರಾಯ್ತು ಎಂದು ನಿರ್ಧರಿಸಿದ ಶ್ರೀನಾಥ ಪದೆ ಪದೆ ಕಾಡುತ್ತಿದ್ದ ಆ ವಿಷಯವನ್ನು ಪಕ್ಕಕ್ಕೆ ಸರಿಸಲು ಯತ್ನಿಸತೊಡಗಿದ. ಅದಕ್ಕೆ ಅನುಕೂಲಕರವಾಗಿ ಎಂಬಂತೆ ಪ್ರಾಜೆಕ್ಟಿನ ತಂಡದ ಯಶಸ್ಸಿನ ಸಂಭ್ರಮಾಚರಣೆಗೆ ಮೂರು ದಿನದ ಪ್ರವಾಸದ ಸಿದ್ದತೆಯನ್ನು ಮಾಡಬೇಕಾದ ಕಾರ್ಯಭಾರ ಅವನ ಹೆಗಲಿಗೆ ಒದಗಿ ಬಂದು, ಅದರ ಗಲಾಟೆಯಲ್ಲಿ ಪೂರ್ತಿ ಮುಳುಗಿಹೋದ ಶ್ರೀನಾಥನಿಗೆ ತಾತ್ಕಾಲಿಕವಾಗಿ ಆ ಭೇಟಿ ಮತ್ತದು ಉಂಟುಮಾಡಿದ ಸಮ್ಮೋಹಕತೆಯ ಪ್ರಭಾವಳಿಯನ್ನು ಮರೆತು ಆಗಬೇಕಿದ್ದ ಕೆಲಸದತ್ತ ಗಮನ ಹರಿಸಲು ನೆಪ ಸಿಕ್ಕಿದಂತಾಗಿತ್ತು. 

ಈ ವಿಜಯೋತ್ಸವ ಪ್ರವಾಸದ ಸಿದ್ದತೆಯಾಗುವ ಹೊತ್ತಲ್ಲೆ ಪ್ರಾಜೆಕ್ಟು ಬೋನಸ್ಸಿನ ಲೆಕ್ಕಾಚಾರಕ್ಕೊಂದು ಸೂತ್ರವನು ನಿರ್ಧರಿಸುವ ಹೊಣೆಯೂ ಶ್ರೀನಾಥನ ಮೇಲೆ ಬಿದ್ದಿತ್ತು. ಸಾಮಾನ್ಯವಾಗಿ ಬೋನಸ್ಸಿನ ನಿರ್ಧಾರದ ಮೇಲೆ ಪ್ರಭಾವ ಬೀರುವುದು ಸ್ಥಳೀಯ ಸಂಸ್ಥೆಯ ಆಯವ್ಯಯದ ತಾಕತ್ತು. ಅದರನುಸಾರವೆ ಮ್ಯಾನೇಜ್ಮೆಂಟು ನಿರ್ಧಾರ ಕೈಗೊಂಡು ವಿತರಣೆಯ ಉಸ್ತುವಾರಿ ನೋಡಿಕೊಳ್ಳುವುದು ಸಹಜ ಪ್ರಕ್ರಿಯೆ. ಆದರೆ, ಈ ಬಾರಿ ಮ್ಯಾನೇಜ್ಮೆಂಟಿನಿಂದಲೆ ಕೋರಿಕೆ ಬಂದಿತ್ತು - ಶ್ರೀನಾಥನೆ ತಂಡದ ಸದಸ್ಯರ ಕೊಡುಗೆ, ಸಾಧನೆಗಳನ್ನು ಪರಾಮರ್ಶಿಸಿ ಪ್ರತಿಯೊಬ್ಬರಿಗೂ ಕೊಡಬೇಕಾದ ಬೋನಸ್ ಪ್ರಮಾಣವನ್ನು ನಿಗದಿಪಡಿಸಬೇಕೆಂದು. ಶ್ರೀನಾಥನಿಗೆ ಇದೇಕೊ ಸ್ವಲ್ಪ ಮುಜುಗರ ತರುವ ವಿಷಯವಾಗಿತ್ತಲ್ಲದೆ, ಸ್ಥಳೀಯರ ಅನಿಸಿಕೆ ಭಾವನೆಗಳಿಗೆ ಧಕ್ಕೆ ಬಾರದಂತೆ ಈ ಕಾರ್ಯವನ್ನು ನಿರ್ವಹಿಸಬೇಕಿತ್ತು. ಪ್ರಾಜೆಕ್ಟಿನ ಕಡೆಯಿಂದ ತಾನೊಬ್ಬನೆ ವಿಮರ್ಶಿಸಿ ತೀರ್ಮಾನಿಸುವ  ಮಾಮೂಲಿ ವಿಧಾನವನ್ನು ಅನುಕರಿಸುವ ಬದಲು, ಕೊಂಚ ವಿನೂತನ ಮತ್ತು ವಿವಾದರಹಿತ ವಿಧಾನವನ್ನು ರೂಪಿಸಬೇಕೆಂದು ತೀರ್ಮಾನಿಸಿ ಅದರ ರೂಪು ರೇಷೆಯ ಹುಡುಕಾಟ ಚಿಂತನೆಯಲ್ಲಿ ತನ್ನನ್ನೇ ತೊಡಗಿಸಿಕೊಂಡಿದ್ದ ಶ್ರೀನಾಥ. ಕೊನೆಗೆ ಸುಮಾರು ಆಯ್ಕೆಗಳ ನಡುವೆ ಹೆಣಗಾಡಿದ ಮೇಲೆ ಸರ್ವ ಸಮ್ಮತವೆನಿಸಬಹುದಾದ ಯೋಜನೆಯ ರೂಪುರೇಷೆಯೊಂದು ಹೊಳೆದಿತ್ತು. ಅದರನುಸಾರ ಸಕ್ರಮವಾಗಿ ವಿಮರ್ಶಿಸಿ ನಿರ್ವಹಿಸಿದರೆ, ಲೆಕ್ಕಾಚಾರದಲ್ಲಿ ಬೋನಸ್ಸಿನ ಮೊತ್ತ ನಿರ್ಧರಿಸುವ ಅಗತ್ಯವಿರಲಿಲ್ಲ; ಬದಲು ಪ್ರತಿಯೊಬ್ಬರ ಕೊಡುಗೆ, ಸಾಧನೆ, ಪರಿಶ್ರಮದನುಸಾರ ಅಳತೆ ಮಾಡಿ ಅದರನುಸಾರ ಒಂದು ಸಾಧನಾ ಸೂಚಿ ಅಂಕಿಯನ್ನು  ನಿರ್ಧರಿಸಿಬಿಟ್ಟರೆ ಸಾಕಿತ್ತು. ಪ್ರತಿಯೊಬ್ಬರನ್ನು ಆ ಸಮಾನ ಸ್ತರದ ಅಳತೆಗೋಲಲ್ಲಿ ಹೋಲಿಸಿ ನೋಡಿ, ಅದರ ಅನುಪಾತದಲ್ಲಿ ಬೋನಸ್ಸಿನ ಮೊತ್ತವನ್ನು ಸ್ಥಳೀಯ ಮ್ಯಾನೇಜ್ಮೆಂಟೆ ನಿರ್ಧರಿಸಬಹುದಿತ್ತು. 

ಉದಾಹರಣೆಗೆ ಒಬ್ಬ ಪಡೆಯಬಹುದಾದ ಗರಿಷ್ಠ ಬೋನಸ್ಸು ಮೂರು ತಿಂಗಳ ಸಮಬಲ ಎಂದಿಟ್ಟುಕೊಂಡರೆ, ಆ ವ್ಯಕ್ತಿ ವಿಮರ್ಶೆಯಲ್ಲಿ ಪೂರ್ತಿ ಒಂದು ಅಂಕ ಪಡೆದರೆ, ಅವನಿಗೆ ಪೂರ್ತಿ ಮೂರು ತಿಂಗಳ ಬೋನಸ್ಸು; ಅವನ ಗಳಿಕೆ ಅರ್ಧ ಅಂಕವಾದರೆ ಅವನಿಗೆ ಒಂದೂವರೆ ತಿಂಗಳ ಬೋನಸ್ಸು. ಹೀಗಾದಲ್ಲಿ ತಾನು ಮೊತ್ತವನ್ನು ನಿರ್ಧರಿಸುವ ಕೆಲಸದಿಂದ ದೂರವಿದ್ದರೂ, ಅದರ ಆಧಾರವಾಗುವ ಅಳತೆಗೋಲಿನ ಮಾನಕದ ನಿರ್ಧಾರಕ್ಕೆ ಕಾಣಿಕೆ ನೀಡಬಹುದು. ಆ ಅಳತೆಗೋಲನ್ನು ಸಹ ತಾನೊಬ್ಬನೆ ವಿಮರ್ಶಿಸದೆ ಭಾಗಾಂಶವನ್ನು ತಾನು, ಮತ್ತೊಂದು ಭಾಗಾಂಶವನ್ನು ತಂಡದ ಸದಸ್ಯರ ಮೂಲ ವಿಭಾಗದ ಮುಖ್ಯಸ್ಥರಿಗು, ಇನ್ನೊಂದು ಭಾಗಾಂಶವನ್ನು ತಂಡದ ಸದಸ್ಯರೆ ಪರಸ್ಪರರನ್ನು ಅಳೆಯುವುದಕ್ಕು ಮತ್ತು ಕೊನೆಯದಾಗಿ ಒಂದು ಪುಟ್ಟ ಭಾಗಾಂಶವನ್ನು ಸ್ವಯಂವಿಮರ್ಶೆಯ ರೂಪದಲ್ಲಿ ಆಯಾ ಸದಸ್ಯರೆ ಅಳೆಯುವ ಹಾಗೆ ವಿಭಾಗಿಸಿ ಒಂದು ರೀತಿಯ 360 ಡಿಗ್ರಿ ಅಳೆಯುವಿಕೆಯ ವಿಧಾನವನ್ನು ಬಳಸಲು ನಿರ್ಧರಿಸಿದ. ಇದೆಲ್ಲಾ ಆಧಾರದ ಮೇಲೆ ವಿವರಣಾತ್ಮಕವಾದ ದಾಖಲೆ ತಯಾರಿಸಿದ ನಂತರ ಅಂತಿಮ ಬಳಕೆಗೆ ಸಿದ್ದವಾದ ರೂಪ ಪಡೆದಿತ್ತು ಈ ಸಾಧನಾ ಅಳತೆ ಮಾಪಕ. ಇದರ ನಂತರದ ಮುಖ್ಯ ಹಂತ ಅದನ್ನು ಬಳಸಿ ಫಲಿತಾಂಶಗಳನ್ನು ದಾಖಲಿಸುವುದೆ ಆದರೂ, ಅದಕ್ಕೆ ಮುನ್ನ ಮತ್ತೊಂದು ಮುಖ್ಯ ಪ್ರಕ್ರಿಯೆಯನ್ನು ಗಮನಿಸಬೇಕಿತ್ತು; ಇಡೀ ವಿಧಾನದ ಕುರಿತಾದ ಮಾಹಿತಿಯನ್ನು ತಂಡದೆಲ್ಲಾ ಸದಸ್ಯರಿಗೂ ಚೆನ್ನಾಗಿ ಅರ್ಥವಾಗುವಂತೆ ವಿವರಿಸಿ ಹೇಳುವುದು. ಇಡಿ ಪ್ರಕ್ರಿಯೆಯ ವಿವರಗಳು ಪಾರದರ್ಶಕವಾಗಿದ್ದಷ್ಟು ಜನರಿಗೆ ಅದರಲ್ಲಿನ ಅನುಮಾನ, ಸಂಶಯಗಳು ಕಡಿಮೆಯಾಗುವುದು ಸಹಜವಾದ ಕಾರಣ ಅದನ್ನು ಸರಿಯಾಗಿ ಮತ್ತು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಉದ್ದೇಶವಿತ್ತು ಶ್ರೀನಾಥನಲ್ಲಿ. 

ಅವನ ಅನಿಸಿಕೆ ನಿಜವೂ ಆಗಿತ್ತು - ಅವನದನ್ನು ತಂಡದ ಸದಸ್ಯರ ಜತೆ ಮೀಟಿಂಗೊಂದರಲ್ಲಿ ಹಂಚಿಕೊಂಡಾಗ ಎಲ್ಲರೂ ಹರ್ಷೋದ್ಗಾರದೊಂದಿಗೆ ಸ್ವಾಗತಿಸಿದ್ದರು. ನಿಜ ಹೇಳುವುದಾದರೆ ಇದರಲ್ಲಿ ಎಲ್ಲರಿಗಿಂತ ಹೆಚ್ಚು ಅಚ್ಚರಿಯಾಗಿದ್ದು ಶ್ರೀನಾಥನ ಸ್ವಂತ ಕಂಪನಿಯ ತಂಡಕ್ಕೆ.. ಇಂತಹ ಸನ್ನಿವೇಶಗಳಲ್ಲಿ ಸಾಧಾರಣವಾಗಿ ಬರಿಯ ಸ್ಥಳೀಯ ತಂಡವನ್ನು ಮಾತ್ರ ಪರಿಗಣಿಸುವುದರಿಂದ ಅವರಿಗೆ ಬೋನಸ್ ಕುರಿತಾದ ಯಾವ ದೂರದ ನಿರೀಕ್ಷೆಯೂ ಇರಲಿಲ್ಲ. ಆದರೆ ಶ್ರೀನಾಥನ ಬಾಯಿಂದ ಅವರು ಕೂಡ ಬೋನಸ್ ಪರಿಗಣನೆಯಲ್ಲಿ ಸೇರಿಸಲ್ಪಟ್ಟಿದ್ದಾರೆ ಎಂಬ ವಿಷಯ ಹೊರಬಿದ್ದ ತಕ್ಷಣ ಅವರೆಲ್ಲ ನಂಬಲಾಗದವರಂತೆ ಮುಖಾಮುಖ ನೋಡಿಕೊಂಡಿದ್ದರು. ಇಷ್ಟೂ ಸಾಲದೆಂಬಂತೆ ಶ್ರೀನಾಥ, ಪ್ರಾಜೆಕ್ಟನ್ನು ಯಶಸ್ವಿಯಾಗಿಸಿದ್ದಕ್ಕೆ ಕೃತಜ್ಞತೆಯ ಕುರುಹಾಗಿ ಕಂಪನಿಯ ವತಿಯಿಂದ ಮೂರು ದಿನದ ವಿಜಯೋತ್ಸವ ಪ್ರವಾಸವನ್ನು ಏರ್ಪಡಿಸಲಾಗಿದೆಯೆಂದು ಘೋಷಿಸಿದಾಗಲಂತೂ ಬಿಟ್ಟ ಬಾಯಿ ಬಿಟ್ಟ ಹಾಗೆ ಮಾತಿಲ್ಲದೆ ನಿಂತುಬಿಟ್ಟಿದ್ದರು - ಅದೇನು ನಿಜವೊ ಇಲ್ಲವೆ ತಮಾಷೆಗೆ ಹೇಳಿದ್ದೊ ಎನ್ನುವ ಸಂಶಯದಲ್ಲಿ. ಅಷ್ಟು ದೊಡ್ಡ ಪ್ರಾಜೆಕ್ಟಿನ ತಂಡಕ್ಕೆ ಮೂರು ದಿನದ ಪ್ರಯಾಣ, ವಸತಿ, ಊಟೋಪಚಾರದ ಖರ್ಚುಗಳೇನು ಕಡಿಮೆಯೆನ್ನುವಂತಿರಲಿಲ್ಲ. ಅದೆಲ್ಲಾ ತರದ ಖರ್ಚು ವೆಚ್ಚಗಳನ್ನು ಮೂರು ದಿನಗಳಿಗೂ, ಅಷ್ಟೊಂದು ಜನರಿಗೂ ಆಗುವಂತೆ ಭರಿಸಬೇಕೆಂದರೆ ಸಾಕಷ್ಟು ದೊಡ್ಡ ಮೊತ್ತವೆ ಆಗಿರುತ್ತಿತ್ತು. ಸಾಮಾನ್ಯವಾಗಿ ಪ್ರಾಜೆಕ್ಟಿನ ಯಶಸ್ಸಿಗೆ ದೊಡ್ಡದೊಂದು 'ಥ್ಯಾಂಕ್ಯೂ ಮೆಯಿಲ್' ಗಿಂತ ಹೆಚ್ಚೇನೂ ನೋಡಿ ಅನುಭವವಾಗಲಿ, ಅಭ್ಯಾಸವಾಗಲಿ ಇರದಿದ್ದ ಅವರಿಗೆಲ್ಲ ಈ ಬೋನಸ್ ಮತ್ತು ಪ್ರವಾಸಗಳ ಸುದ್ದಿ, ಅಕಾಲದಲ್ಲಿ ಸುಭೀಕ್ಷದ ಸುರಿಮಳೆಯಾದಷ್ಟು ಅಚ್ಚರಿ ತಂದಿತ್ತು. ಒಟ್ಟಾರೆ ಈ ಮೀಟಿಂಗಿನ ಅನೌನ್ಸಮೆಂಟಿನ ನಂತರ ಅಲ್ಲಿದ್ದವರೆಲ್ಲರ ಕಣ್ಣಿನಲ್ಲಿ ಶ್ರೀನಾಥನ ಕುರಿತಾದ ಗೌರವ ಒಂದು ಸ್ತರ ಹೆಚ್ಚಿನ ಮಟ್ಟಕ್ಕೆ ಏರಿದ್ದಂತೂ ನಿಜವಾಗಿತ್ತು - ಅವನನ್ನು ಪರೋಕ್ಷವಾಗಿ ಹೀಗಳೆಯುವ ರೀತಿಯಲ್ಲಿ ಪರಿಗಣಿಸುತ್ತಿದ್ದ ಅವನ ಸ್ವಂತ ಕಂಪನಿಯ ತಂಡದ ಕೆಲವು ಸದಸ್ಯರ ದೃಷ್ಟಿಯೂ ಸೇರಿದಂತೆ...!

ಈ ನಡುವೆ ಕುನ್. ಸು 'ವಾಟ್ ಪೋ' ನಲ್ಲೂ ಕಾಣ ಸಿಗದೆ ಉಂಟಾದ ನಿರಾಶೆ ಆಗೀಗ ಕಾಡುತ್ತಿದ್ದರೂ ಆ ಬೌದ್ಧ ಸನ್ಯಾಸಿಯ ಭೇಟಿಯ ತದನಂತರ ಉಂಟಾದ ಯಾವುದೊ ಒಂದು ರೀತಿಯ ವಿವರಣಾತೀತ ಆತ್ಮವಿಶ್ವಾಸವೊಂದು, ಅವಳ ಭೇಟಿ ಯಾವುದಾದರೊಂದು ರೀತಿಯಲ್ಲಿ ಮತ್ತೆ ಆಗಲಿದೆಯೆಂದು ಅಂತರಾತ್ಮದಲ್ಲಿ ಮಾರ್ನುಡಿಯುತ್ತಿತ್ತು. ಅದು ಹೇಗಾಗಬಹುದು, ಎಂದಾಗಬಹುದೆಂಬ ಕಿಂಚಿತ್ ಮುನ್ಸೂಚನೆ ಕೂಡ ಇರದಿದ್ದರೂ ಅದ್ಯಾವುದೊ ವಿಚಿತ್ರ ಅನಿಸಿಕೆ ಮತ್ತೆ ಮತ್ತೆ ಮರುಕಳಿಸಿ, ಅನತಿ ದೂರದಲ್ಲೆ ಖಂಡಿತ ಭೇಟಿಯಾಗಲಿದೆಯೆಂದು ಪದೆಪದೆ ನುಡಿಯುತ್ತಿತ್ತು; ಅದರ ಮರುಕ್ಷಣದಲ್ಲೆ ಆವರಿಸಿಕೊಳ್ಳುವ ವ್ಯತಿರಿಕ್ತ ವಾಸ್ತವ ಭಾವ ಅದರ ಸಾಧ್ಯತೆಯನ್ನು ಸಾರಾಸಗಟಾಗಿ ಅಲ್ಲಗಳೆಯುತ್ತ ನಿರಾಶೆಯ ಮುಸುಕನ್ನು ಹೊದಿಸಿದರು ಮತ್ತೊಮ್ಮೆ ಮೂಡುವ ಮತ್ತದೇ ಆಶಾಭಾವ ಆಸೆಯ ಹಕ್ಕಿಯ ಗರಿ ಬಿಚ್ಚಿಸುತ್ತಿತ್ತು. ಈ ಚಿಂತನೆಗಳಿಗೆಲ್ಲ ತಾತ್ಕಾಲಿಕ ವಿರಾಮ ಹಾಕುವಂತೆ ಸಂಭ್ರಮಾಚರಣೆಯ ಪ್ರವಾಸದ ಸಿದ್ದತೆಗಳು ಆರಂಭವಾದಾಗ, ಈ ಕುರಿತಾದ ಆಲೋಚನೆಯೆಲ್ಲವನ್ನು ಬದಿಗಿಟ್ಟು ಗಮನವನ್ನೆಲ್ಲ ಆ ಸಿದ್ದತೆಯತ್ತ ಹರಿಸಬೇಕಾಯ್ತು. ಈ ಸಂದರ್ಭದಲ್ಲಿ ಪ್ರಾಜೆಕ್ಟಿನ ತಂಡದ ಜತೆಗೆ ಆಯಾ ವಿಭಾಗಗಳ ಮುಖ್ಯಸ್ಥರು, ಮತ್ತಿತರ ಸಹೋದ್ಯೋಗಿಗಳು ಜತೆಯಾಗಿ ಬರುತ್ತಿದ್ದ ಕಾರಣ ಅದರ ಒಟ್ಟಾರೆ ನಿರ್ವಹಣೆಯ ಜವಾಬ್ದಾರಿಯನ್ನು ಇಂತಹ ಕಾರ್ಯಕ್ರಮ ನಿಯೋಜನೆಯಲ್ಲಿ ಚೆನ್ನಾಗಿ ಅನುಭವವಿದ್ದು, ನುರಿತಿದ್ದ ಮಾರ್ಕೆಟಿಂಗ್ ವಿಭಾಗದ ಸಿಬ್ಬಂದಿಗೆ ವಹಿಸಲಾಗಿತ್ತು. ಹೀಗಾಗಿ ಶ್ರೀನಾಥ ಆ ಸಿಬ್ಬಂದಿಯ ಜೊತೆ ಒಟ್ಟಾರೆ ವ್ಯವಸ್ಥೆಯ ನಿಭಾವಣೆಯನ್ನು ನಿರ್ವಹಿಸಿದರೆ ಸಾಕಾಗಿತ್ತು.

ಆ ರೀತಿಯ ಸಂಚಾಲಕತೆಯಲ್ಲಿ ಅವರಿಗಿದ್ದ ಪರಿಣಿತಿಯ ಮುಂದೆ ಜತೆಯಾಗಿ ಇವನೇನೂ ಮಾಡುವ ಅಗತ್ಯವಿರಲಿಲ್ಲ. ಮಾಡಬಯಸಿದರೂ ಆ ಭಾಷಾ ಸೀಮಿತ ವಾತಾವರಣದಲ್ಲಿ ಇವನಿಂದ ಆಗುವ ನಿಭಾವಣೆ ಅಷ್ಟರಲ್ಲೆ ಇತ್ತು. ಹೀಗಾಗಿ ಅವರು ಒಂದಷ್ಟು ಸಾಧ್ಯತೆಗಳನ್ನು ಸಂಯೋಜಿಸಿದ್ದ ಪ್ಯಾಕೇಜುಗಳನ್ನು ತೋರಿಸಿ ಆಯ್ಕೆ ಮಾಡಲು ಹೇಳಿದಾಗ ಶ್ರೀನಾಥ ನೋಡಿದ್ದು ಪ್ರತಿಯೊಂದಕ್ಕು ಆಗುವ ವೆಚ್ಚ ಎಷ್ಟೆಂದು ಮಾತ್ರ. ಎಲ್ಲಾ ಆಯ್ಕೆಗಳು ಬಡ್ಜೆಟ್ಟಿನ ಮಿತಿಯಲ್ಲೆ ಇದ್ದ ಕಾರಣ ಎಲ್ಲ ಆಯ್ಕೆಗಳು ಅವನಿಗೆ ಸಮ್ಮತವೆ ಆಗಿದ್ದವು. ಹೀಗಾಗಿ ಸ್ಥಳೀಯ ತಂಡದ ಸದಸ್ಯರಿಗೆ ಆ ಆಯ್ಕೆಯಲ್ಲೊಂದನ್ನು ಆರಿಸಲು ತಿಳಿಸಿ ತನ್ನ ಕೈತೊಳೆದುಕೊಂಡುಬಿಟ್ಟಿದ್ದ ಶ್ರೀನಾಥ. ಅಲ್ಲಿನ ಜ್ಞಾನ ಹೆಚ್ಚಿರುವ ಸ್ಥಳೀಯರ ಆಯ್ಕೆ ಸಹಜವಾಗಿಯೆ ಉತ್ತಮವಿರುತ್ತದೆಂಬ ಸಾಮಾನ್ಯ ಜ್ಞಾನ ಒಂದೆಡೆಯಾದರೆ, ಅವರಿಗಾಗಿ ಆಯೋಜಿಸುತ್ತಿರುವ ಕಾರ್ಯಕ್ರಮದಲ್ಲಿ ಅವರಲ್ಲಿ ಬಹುತೇಖರು ನೋಡದ, ಮತ್ತು ಅವರಲ್ಲಿ ಬಹುತೇಖರಿಗೆ ಹೆಚ್ಚು ಪ್ರಿಯವೆನಿಸಬಹುದಾದ ಜಾಗಗಳನ್ನು ಆಯ್ದುಕೊಳ್ಳುವ ಸ್ವತಂತ್ರ ಅವಕಾಶವನ್ನೂ ನೀಡಿದಂತಾಗುತ್ತಿತ್ತು. ಅವನೂ ಸೇರಿದಂತೆ ಅವನ ತಂಡದ ಮಿಕ್ಕವರಿಗೆಲ್ಲ ಯಾವ ಜಾಗವಾದರೂ ಒಂದೆ - ಎಲ್ಲವೂ ನೋಡದ ಸ್ಥಳಗಳೆ. ಆ ಆಯ್ಕೆಗಳ ಸಾಧ್ಯತೆಯೆಲ್ಲ ಅವರವರಲ್ಲೆ ಹತ್ತಾರು ಬಾರಿ ಮೇಲೆ ಕೆಳಗೆ ಹರಿದಾಡಿ ಕೊನೆಗೊಂದು ಆಯ್ಕೆಯ ತೀರ್ಮಾನ ಬಂದಾಗ ಅದನ್ನೆ ಮಾರ್ಕೆಟಿಂಗ ವಿಭಾಗದ ಸಿಬ್ಬಂದಿಗೆ ಸಾಗ ಹಾಕಿ ತನ್ನ ಪಾಲಿನ ಕೆಲಸ ಮುಗಿಸಿಕೊಂಡಿದ್ದ. ಇನ್ನು ಮಿಕ್ಕೆಲ್ಲವು ಅವರ ಉಸ್ತುವಾರಿಯಲ್ಲಿ ನಡೆಯುವ ಕಾರಣ ವಿವರದ ಮಟ್ಟದಲ್ಲಿ ಇವನ ಸಹಯೋಗದ ಅವಶ್ಯಕತೆ ಇರಲಿಲ್ಲ - ಹೊಸ ಖರ್ಚು ವೆಚ್ಚದ ಅಂಶಗಳೆನಾದರು ಬಂದ ಹೊರತು..

ನೋಡು ನೋಡುತ್ತಿದ್ದಂತೆ ಆ ದಿನವೂ ಬಂದೆಬಿಟ್ಟಿತ್ತು. ಮೂರು ದಿನದ ಹಗುರ ಪ್ರಯಾಣದ ಲಗೇಜಿನೊಡನೆ ಹೊರಟ ಶ್ರೀನಾಥನಿಗೆ ಅಚ್ಚರಿಯಾಗುವಂತೆ ಎರಡು ಲಗ್ಜುರಿ ಬಸ್ಸಿನಷ್ಟು ಜನ ಹೊರಟಿದ್ದರು ಪ್ರವಾಸಕ್ಕೆ! ಅರ್ಧಕ್ಕಿಂತ ಹೆಚ್ಚು ಮಹಿಳೆಯರೆ ಇದ್ದ ಕೆಲಸದ ವಾತಾವರಣ ಇಲ್ಲೂ ಪ್ರತಿಬಿಂಬಿತವಾಗಿತ್ತು - ಸುಮಾರು ಶೇಕಡ ಅರವತ್ತೈದರಿಂದ ಎಪತ್ತರಷ್ಟಿದ್ದ ಹೆಂಗಳೆಯರ ಸಂಖ್ಯೆಯಲ್ಲಿ. ಶ್ರೀನಾಥ ಇದೊಂದು ವಿಭಿನ್ನ ಅಂಶವನ್ನು ಈ ಆಗ್ನೇಯೇಷ್ಯ ದೇಶಗಳಲ್ಲಿ ಸಾಮಾನ್ಯವಾಗಿ ಗಮನಿಸಿದ್ದ - ಬ್ಯಾಂಕಾಕ್ ಸಹ ಸೇರಿದಂತೆ; ಪ್ರತಿ ವಿಭಾಗದ ಮುಖ್ಯಸ್ಥರಲ್ಲಿ ಬಹುತೇಕ ಪುರುಷರೆ ಇದ್ದು ಮಹಿಳೆಯರು ಸರಿ ಸುಮಾರು ಶೇಕಡ ಇಪ್ಪತ್ತೈದರಷ್ಟು ಅಥವ ಅದಕ್ಕಿಂತಲೂ ಕಡಿಮೆ ಇರುತ್ತಿದ್ದರೆ, ಮಿಕ್ಕೆಲ್ಲ ಆಫೀಸಿನ ಆಡಳಿತಕ್ಕೆ ಸಂಬಂಧಿಸಿದ ಮತ್ತು ವಾಣಿಜ್ಯ ಸಂಬಂಧಿ ವಿಭಾಗಗಳಲ್ಲಿ ಈ ಅನುಪಾತ ತಿರುವು ಮುರುವಾಗಿ ಬಿಟ್ಟಿರುತ್ತಿತ್ತು. ಫೀಲ್ಡ್ ಸೇಲ್ಸಿನಲ್ಲಿ ಮಾತ್ರ ಬಹುತೇಕ ನೂರಕ್ಕೆ ನೂರರಷ್ಟು ಪುರುಷರದೆ ಅಧಿಪತ್ಯ - ಹೆಚ್ಚಾಗಿ ಪ್ರಯಾಣ ಮಾಡುತ್ತ ಕಸ್ಟಮರುಗಳೊಡನೆ ನಿರಂತರ ಸಂಪರ್ಕವಿರಿಸಬೇಕಾದ ಅನಿವಾರ್ಯದಿಂದಲೊ ಏನೊ, ಮಹಿಳೆಯರಲ್ಲಿ ತುಂಬಾ ಕಡಿಮೆ ಜನ ಆ ಕ್ಷೇತ್ರವನ್ನು ಆಯ್ದುಕೊಳ್ಳುತ್ತಿದ್ದರು. ಆ ಫೀಲ್ಡ್ ಸೇಲ್ಸಿನ ವಿಭಾಗದವರು ಸದಾ ಪ್ರಯಾಣದಲ್ಲೆ ಇರುವರಾದ ಕಾರಣಕ್ಕೊ ಏನೊ, ಈ ಪ್ರವಾಸಿ ಯಾನದಲ್ಲಿ ಅಷ್ಟೇನು 'ಥ್ರಿಲ್' ಕಾಣಿಸದೆ ಜತೆಗೆ ಬರದೆ ಹಿಂದುಳಿದುಬಿಟ್ಟಿದ್ದರು. ಪ್ರವಾಸಿ ಬಸ್ಸಿನ ತುಂಬಾ ಬರಿಯ ಲಲನೆಯರ ತಲೆಗಳೆ ಹೆಚ್ಚು ಕಾಣುವುದಕ್ಕೆ ಇದೂ ಒಂದು ಕಾರಣವಾಗಿತ್ತು. ಇದರಿಂದಾಗಿ ಬಸ್ಸು ನಿಲ್ಲಿಸಿದ ಕಡೆಯೆಲ್ಲ, ಅವರನ್ನು ಇಳಿದ ಕಡೆಗಳಿಂದ ಹೊರಡಿಸಿ ಮತ್ತೆ ಬಸ್ಸು ಹತ್ತುವಂತೆ ಮಾಡುವುದರಲ್ಲೆ ಬಹಳ ಸಮಯ ಹಿಡಿಯುತ್ತಿದ್ದರೂ, ಥಾಯ್ ಜನಗಳಿಗೆ ಸ್ವಭಾವ ಸಿದ್ದವಾದ ಮುಗುಳ್ನಗೆ, ತಾಳ್ಮೆಯೊಂದಿಗೆ ನಗುನಗುತ್ತಲೇ ಆರಾಮವಾಗಿ ನಿಭಾಯಿಸುತ್ತಿದ್ದುದು ಅವರ ಸಂಸ್ಕೃತಿಯ ಕಿರು ಆಯಾಮಗಳ ಪರೋಕ್ಷ ಪರಿಚಯಕ್ಕೆ ದಾರಿ ಮಾಡಿಕೊಟ್ಟಿತ್ತು. 

ಅವರ ಜತೆಯಲ್ಲೆ ಅಡ್ಡಾಡುತ್ತಿದ್ದ ಒಂದೆರಡು ಪ್ಯಾಂಟ್ರಿಯ ಸಿಬ್ಬಂದಿಯೂ ಶ್ರೀನಾಥನ ಕಣ್ಣಿಗೆ ಬಿದ್ದಾಗ, ' ಛೆ! ಎಲ್ಲವೂ ಸರಿಯಾಗಿದ್ದಿದ್ದರೆ ಕುನ್. ಸು ಕೂಡ ಈ ಟ್ರಿಪ್ಪಿಗೆ ಬಂದಿರುತ್ತಿದ್ದಳಲ್ಲಾ.. ಎಂತಹ ಅಚಾತುರ್ಯವಾಯಿತು?' ಎಂದು ಪೇಚಾಡಿಕೊಳ್ಳುವಂತೆ ಮಾಡಿಬಿಟ್ಟಿತ್ತು; ಆದರೀಗ ಅದೆಲ್ಲ ಮುಗಿದ ಕಥೆಯಾಗಿದ್ದ ಕಾರಣ ಮತ್ತೇನು ಮಾಡುವಂತಿರಲಿಲ್ಲ. ಆ ಎತ್ತರಾಕಾರದ ರಂಗುರಂಗಿನ ಲಗ್ಜುರಿ ಬಸ್ಸುಗಳು ಎಲ್ಲರನ್ನು ಲಗೇಜಿನ ಸಮೇತ ತುಂಬಿಕೊಂಡು ಹೊರಟಾಗ ಇಲ್ಲಿನ ಬಸ್ಸುಗಳೂ ವೈಭವೋಪೇತವಾಗಿದೆಯಲ್ಲ ಎಂದುಕೊಳ್ಳುತ್ತಿರುವಾಗಲೆ, ಅದೇನು ಮಹಾ ಎನ್ನುವಂತೆ ತೆರೆದುಕೊಂಡಿದ್ದವು ಥಾಯ್ಲ್ಯಾಂಡಿನ ವಿಶಾಲ ರಸ್ತೆಯ ಅದ್ದೂರಿ ಹೆದ್ದಾರಿಗಳು. ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿಟ್ಟಂತಿದ್ದ ಆ ವಿಶಾಲ ಹೆದ್ದಾರಿ ಎಕ್ಸ್ ಪ್ರೆಸ್ ಹಾದಿಗಳನ್ನು ನೋಡಿದ ಮೇಲೆ, ನಮ್ಮಲ್ಲೂ ಇಂತಹ ರಸ್ತೆಗಳಿದ್ದರೆ, ನಮ್ಮ ಪ್ರವಾಸೋದ್ಯಮವೂ ಅದೆಷ್ಟು ಉನ್ನತ ಮಟ್ಟಕ್ಕೇರುತ್ತ ಪ್ರಗತಿ ಸಾಧಿಸಬಹುದೆಂದು ಅರೆಚಣವಾದರೂ ತುಲನೆ ಮಾಡದಿರಲಾಗಲಿಲ್ಲ ಶ್ರೀನಾಥನಿಗೆ. ಹೀಗೆ ಹೊರಟ ಬಸ್ಸು ಸುಮಾರು ಎರಡು ಗಂಟೆಗಳ ಕಾಲ ಪ್ರಯಾಣಿಸಿ ನಂತರ ದೊಡ್ಡದೊಂದು ಫ್ಯಾಕ್ಟರಿಯಂತೆ ಕಾಣುವ ಕಟ್ಟಡವೊಂದರ ಮುಂದೆ ನಿಂತಿತ್ತು. ಇದೇನಿದು ಯಾವುದೋ ಕಾರ್ಖಾನೆಯ ರೀತಿ ಇದೆಯಲ್ಲ ಎಂದು ವಿಸ್ಮಯ ಪಡುತ್ತಿರುವಾಗಲೆ ತುಸು ಹೊತ್ತಿನ ನಂತರ ಅರಿವಾಯ್ತು ಅದೊಂದು ದೊಡ್ಡ ಹೈನುಗಾರಿಕೆ ಮತ್ತು ಡೈರಿ ಫಾರಂ ಉದ್ಯಮಕ್ಕೆ ಸಂಬಂಧಿಸಿದ ಕಾರ್ಖಾನೆಯೆ ಎಂದು. ಅಲ್ಲಿ ನಡೆಸುವ ಕಾರ್ಯಾಚರಣೆ, ವಿಧಿ ವಿಧಾನ ಪ್ರಕ್ರಿಯೆಗಳನ್ನೆ 'ಡೈರಿ ಟೂರಿಸಂ' ರೀತಿ ಪರಿವರ್ತಿಸಿ ಡೈರಿ ಉತ್ಪಾದನೆಯ ಜತೆಗೆ ಡೈರಿ ಪ್ರವಾಸೋದ್ಯಮವನ್ನು ಸಾಕಿ ಸಲಹುವ ಕಾರ್ಯ ಯೋಜನೆಯನ್ನಾಗಿಸಿಕೊಂಡು ಬಿಟ್ಟಿದ್ದರೂ ಅಲ್ಲಿನ ಚಾಣಾಕ್ಷ ಪ್ರವಾಸೋದ್ಯಮ ಮಂತ್ರಾಲಯದವರು! 

ಅಲ್ಲೇನು ದೊಡ್ಡ ಅಪರೂಪದ ವಿಶೇಷವಿತ್ತೆಂದೇನೂ ಇರಲಿಲ್ಲ. ಸೌರಭ್ ಶರ್ಮ ಅದನ್ನು ನೋಡಲು ಒಳಗೆ ಹೊರಡುತ್ತಿದ್ದಂತೆ 'ಪ್ಲೀಸ್ ಬೀ ರೆಡಿ ಟು ವಿಟ್ನೆಸ್ ಎ ಸೊಫಿಸ್ಟಿಕಟೆಡ್ ಇಂಡಿಯನ್ "ಕವ್ ಶೆಡ್ (ಕೊಟ್ಟಿಗೆ) " ' ಎಂದು ಹಾಸ್ಯ ಮಾಡುತ್ತಲೆ ಒಳಗೆ ನಡೆದಿದ್ದ. ಕೊಟ್ಟಿಗೆಯೆನ್ನುವಷ್ಟರ ಮಟ್ಟಿಗೆ ಕೆಳಮಟ್ಟದಲ್ಲಿರದಿದ್ದರೂ ಅದೊಂದು ರೀತಿಯ 'ಗ್ಲೋರಿಫೈಡ್ ಕೊಟ್ಟಿಗೆ' ಯೆನ್ನಲು ಯಾವ ಅಡ್ಡಿ, ಆತಂಕವೂ ಇರಲಿಲ್ಲ. ಎಕರೆಗಟ್ಟಲೆ ಮೈದಾನದ ಜಾಗದಲ್ಲಿ, ಮೇವಿಗೆ ಆಲ್ಲೆ ಬೆಳೆಯುವ ಹುಲ್ಲು, ಸೊಪ್ಪು, ಸದೆಗಳ ಜಾಗವನ್ನು ಹೊರತಾಗಿಸಿದರೆ ಮಿಕ್ಕೆಲ್ಲಾ ಕಡೆ ವಿಶಾಲ ವಿಸ್ತೀರ್ಣದ ಎತ್ತರವಾಗಿದ್ದ ದೊಡ್ಡ ದೊಡ್ಡ ಷೆಡ್ಡುಗಳೆ ತುಂಬಿಕೊಂಡಿದ್ದವು. ಆ ಷೆಡ್ಡುಗಳ ತುಂಬೆಲ್ಲ ಪುಟ್ಟಪುಟ್ಟ ಘನಾಕಾರದ ಕಂಬಿಗಳ ತೆರೆಗಳಿಂದ ಬೇರ್ಪಡಿಸಿದ್ದ ಕೊಠಡಿಗಳಲ್ಲಿ ಸಾಲುಸಾಲಾಗಿ ರಾಸುಗಳನ್ನು ಕಟ್ಟಿದ್ದ ಜಾಗ. ಒಂದೆಡೆ ಅವುಗಳ ಮುಂದೆಯೆ ಮೇವಿಡುವ ತೊಟ್ಟಿಗಳಾದರೆ ಮತ್ತೊಂದೆಡೆ ನೂರಾರು ಸ್ಟೀಲಿನ ಜೋತುಬಿದ್ದ ಪೈಪುಗಳು. ಆ ಪೈಪುಗಳನ್ನು ನೇತುಹಾಕಿದ್ದ ಜಾಗ ನಡುವಿನಲಿದ್ದು ಅದರ ಎರಡು ಬದಿಗು ಸಾಲಾಗಿ ರಾಸುಗಳನ್ನು ಕಟ್ಟಿದ್ದ ಕೊಠಡಿಗಳು ಬರುವ ಹಾಗೆ ವ್ಯವಸ್ಥೆ ಮಾಡಲಾಗಿತ್ತು. ಆ ಪೈಪುಗಳ ಜಾಲವನ್ನು ಹಾಗೇಕೆ ಇಟ್ಟಿದ್ದಾರೆಂದು ಮೊದಲು ಅರಿವಾಗದಿದ್ದರೂ, ಕಾರ್ಯಕ್ರಮದ ಭಾಗವಾಗಿ 'ಡೆಮೊ' ಕೊಡುವವನೊಬ್ಬ ಬಂದಾಗ, ಅದೇಕೆಂದು ಪ್ರಾತ್ಯಕ್ಷಿಕೆಯ ಮುಖಾಂತರ ಅರ್ಥವಾಗಿತ್ತು. ಅಲ್ಲಿ ಹಸುವಿನ ಹಾಲು ಕರೆಯಲು ಸಾಂಪ್ರದಾಯಿಕವಾಗಿ ರೂಢಿಯಲ್ಲಿರುವ 'ಮಾನವ ಹಸ್ತ'  ಬಳಸುವ ಬದಲು, ಯಾಂತ್ರೀಕೃತ ವಿಧಾನವನ್ನು ಬಳಸುತ್ತಿದ್ದರು. ಆ ಪೈಪುಗಳೆಲ್ಲ ದೊಡ್ಡ ಯಾಂತ್ರೀಕೃತ ಪಂಪಿನ ವಿಸ್ತೃತ ಭಾಗಗಳಾಗಿದ್ದು ಪೈಪಿನ ಬಾಹ್ಯದೆಡೆ ಚಾಚಿದ ತುದಿಯನ್ನು ಹಸುವಿನ ಕೆಚ್ಚಲಿಗೆ ಜೋಡಿಸಿ ಪಂಪ್ ಆನ್ ಮಾಡಿದರೆ, ಅದು ಹೊರಡಿಸುವ ಹಿತವಾದ ಮೃದುಕಂಪನದ ಒತ್ತಡದಿಂದ ಹಾಲು ಕರೆಯಲ್ಪಟ್ಟು, ಅದು ಕೆಚ್ಚಲಿಗೆ ಸೇರಿಸಿದ ಸಣ್ಣ ಸಣ್ಣ ಪೈಪುಗಳ ಮುಖೇನ ಸಂಗ್ರಹದ ತೊಟ್ಟಿಯನ್ನು ಸೇರುತ್ತಿತ್ತು. ಹೆಚ್ಚು ಕಡಿಮೆ ಆ ಷೆಡ್ಡಿನ ತುಂಬಾ ಈ ರೀತಿಯ ಹಸುಗಳೆ ತುಂಬಿಕೊಂಡು, ಅಲ್ಲಿನ ಮಟ್ಟಿಗೆ ಅದೆ 'ಉತ್ಪಾದನ ಕೇಂದ್ರ (ಮ್ಯಾನುಫಾಕ್ಚರಿಂಗ್ ಸೆಂಟರ್)'ದಂತೆ ಕಾರ್ಯ ನಿರ್ವಹಿಸುತ್ತಿತ್ತು. ಅಲ್ಲಿಂದಾಚೆಗೆ ಬಂದರೆ ಮಿಕ್ಕೆಲ್ಲ ಆಧುನಿಕ ಕಟ್ಟಡಗಳು. ಷೆಡ್ಡಿನಲ್ಲಿ ಸಂಗ್ರಹಿಸಿದ ಹಾಲು ರವಾನಿಸಲ್ಪಟ್ಟು, ನಂತರ ಈ ಕಟ್ಟಡಗಳಲ್ಲಿ ಸಂಸ್ಕರಿಸಲ್ಪಟ್ಟು ಅಂತಿಮವಾಗಿ ಪ್ಯಾಕಿಂಗಿಗೆ ಹೋಗುವ ತನಕದ ವಿವಿಧ ಹಂತಗಳು ಈ ಮಿಕ್ಕ ಕಟ್ಟಡಗಳಲ್ಲೆ ನಡೆಯುತ್ತಿದ್ದುದು. 

ಪ್ರವಾಸಿ ಕಾರ್ಯಕ್ರಮದಡಿ ಎಲ್ಲ ಹಂತಗಳಿಗು ಅದರದೆ ಅನುಕ್ರಮದಲ್ಲಿ ಕರೆದೊಯ್ದು ತೋರಿಸಿ, ಸಂಪೂರ್ಣ ಪ್ರಕ್ರಿಯೆಯ ಸಮಗ್ರ ಚಿತ್ರಣವನ್ನು ಕಟ್ಟಿಕೊಡುವ ಪ್ರಯತ್ನವಲ್ಲಿ ಅಡಕವಾಗಿತ್ತು. ಅದರ ಜತೆಯಲ್ಲೆ 'ಸಂಶೋಧನಾ ಕೆಂದ್ರದ ಕಟ್ಟಡ', ಆ ಕಾರ್ಖಾನೆ ಬೆಳೆದು ಬಂದ ರೀತಿಯನ್ನು ಕಟ್ಟಿಕೊಡುವ 'ಮ್ಯೂಸಿಯಮ್ ಕಟ್ಟಡ' ಗಳು ಸೇರಿದ್ದವು ಪ್ರವಾಸಿ ಯಾತ್ರೆಯ ಭಾಗವಾಗಿ. ಸಾಲದೆಂಬಂತೆ ಹಸುವಿನ ಕರೆದ ಹಾಲಿನಿಂದ ಉತ್ಪಾದಿಸುವ ಉಪ ಉತ್ಪನ್ನಗಳ ಮತ್ತೊಂದು ವಿಭಾಗವೂ ಈ ಯಾತ್ರೆಯ ಗುಂಪಿಗೆ ಸೇರಿಕೊಂಡಿತ್ತು. ಎಲ್ಲಾ ಸುತ್ತಿ ಮುಗಿಸಿಕೊಂಡು ಬಂದ ಮೇಲೆ ಕಡೆಯಲ್ಲಿ ಒಂದು ಕೌಂಟರಿನಲ್ಲಿ ಭೇಟಿಯಿತ್ತವರೆಲ್ಲರಿಗು ಒಂದು ಕಿರುಬೆರಳುದ್ದದ ಪುಟಾಣಿ ಲೋಟಗಳಲ್ಲಿ ರುಚಿ ನೋಡಲೆಂದು 'ಪುಕ್ಕಟೆ ರೋಸ್ ಮಿಲ್ಕ್' ಕೊಡುತ್ತಿದ್ದರು. ಅದರ ನಂತರದ್ದೆ ಕೊನೆಯ ಘಟ್ಟ - ಬೇಕೆಂದವರು ಅಲ್ಲಿನ ಉತ್ಪನ್ನಗಳನ್ನು ಕೊಳ್ಳಲು, ನೆನಪಿನ ಕಾಣಿಕೆ ಖರೀದಿಸಲು ಮತ್ತು ಜೀವಂತ ಅಥವಾ ಕಲ್ಲು ಹಸುವಿನ ಜತೆಗೆ ಛಾಯಚಿತ್ರ ಕ್ಲಿಕ್ಕಿಸಿಕೊಳ್ಳಲು ಅವಕಾಶ. ಒಟ್ಟಾರೆ ಆ ಜಾಗಕ್ಕೆ ತಂಡೋಪತಂಡವಾಗಿ ಬರುತ್ತಿದ್ದ ಶಾಲಾ ಮಕ್ಕಳ ತಂಡವನ್ನು ಗಮನಿಸಿದ ಮತ್ತೊಬ್ಬ ಭಾರತೀಯ ಸಹೋದ್ಯೋಗಿ, 'ನಮ್ಮ ಭಾರತದ ಮಕ್ಕಳೆ ಪುಣ್ಯವಂತರು. ಬೀದಿಬೀದಿಗಳಲ್ಲೆ ಹಸುವನ್ನು ನೋಡಬಹುದು, ಹಾಲು ಕರೆಯುವುದನ್ನು 'ಲೈವಾಗಿ' ಪ್ರತಿದಿನವೂ ಕಾಣಬಹುದು' ಎಂದು ತಮಾಷೆ ಮಾಡಿ ನಗೆಯಾಡಿದ್ದ. ಅದನ್ನು ಕೇಳುತ್ತಿದ್ದ ರಾಮಮೂರ್ತಿ, 'ಹಾಗಾದರೆ ನಾವುಗಳೆ ಪಾಪಿಗಳೆಂದು ಕಾಣುತ್ತದೆ.. ಸ್ಕೂಲು ಮಕ್ಕಳಿಗೆ ತೋರಿಸುವ ಹಸುಗಳನ್ನು ನಮಗೆಲ್ಲಾ ತೊರಿಸಿ ಕಾಸು ವಸೂಲು ಮಾಡುತ್ತಿದ್ದಾರೆ' ಎಂದಾಗ ಮಿಕ್ಕವರೆಲ್ಲರೂ ಮತ್ತೆ ನಗೆಯಾಡಿದ್ದರು ಅವನ ಜತೆಯಲ್ಲೆ. ಕೊನೆಗೆಲ್ಲರೂ ಎಲ್ಲಾ ಮುಗಿಸಿ, ಎಲ್ಲರನ್ನು ಹೊರಡಿಸಿಕೊಂಡು ಮತ್ತೆ ಬಸ್ಸೇರಿದಾಗ ಒಟ್ಟು ಎರಡು ತಾಸುಗಳೆ ಕಳೆದು ಊಟದ ಹೊತ್ತಾಗಿಹೋಗಿತ್ತು. ಚುರುಗುಡುತ್ತಿದ್ದ ಹೊಟ್ಟೆಗೆ ಶಾಂತಿ ನೀಡಲು ಊಟಕ್ಕೆ ಹೋಗುವ ಜಾಗವೂ ಅಲ್ಲೆ ಹತ್ತಿರದಲ್ಲೆ ಇದ್ದ ಕಾರಣ ಮತ್ತೆ ಹತ್ತೆ ನಿಮಿಷದಲ್ಲಿ ಎಲ್ಲರೂ ಮತ್ತೆ ಹತ್ತಿಳಿಯುವ ಸರ್ಕಸ್ ಮಾಡಬೇಕಾಗಿ ಬಂದಿತ್ತು! ಎಲ್ಲಾ ಚೆನ್ನಾಗಿ ಹಸಿದಿದ್ದರಿಂದ ಹತ್ತಿಳಿಯುವ ಶ್ರಮವಾದರೂ, ಅದನ್ಯಾರೂ ದೂರದೆ ಕೆಳಗಿಳಿದು ಬಂದು ತನ್ಮಯತೆಯಿಂದ ಊಟ ಮಾಡಿದ್ದರು ಎರಡು ಬಸ್ಸಿನ ಜನರು..!

(ಇನ್ನೂ ಇದೆ )
 

Comments

Submitted by nageshamysore Thu, 07/17/2014 - 18:34

In reply to by kavinagaraj

ಕವಿಗಳೆ ನಮಸ್ಕಾರ. ಕುಟಿಲ ಯೋಜನೆಯೆಲ್ಲ ಬುಡಮೇಲಾದ ಮೇಲೆ ಪ್ರಭು ಸದ್ಯಕ್ಕೆ ಮತ್ತೆ ಸಿಂಗಾಪುರಕ್ಕೆ ರವಾನೆ - ಸುಧಾರಿಸಿಕೊಳ್ಳುತ್ತ, ಮುಂದಿನ ಯೋಜನೆಗೆ ಹವಣಿಸುತ್ತ. ಕಥೆಯ ಅಂತಿಮ ಹಂತದಲ್ಲಿ ಅವನ ಪಾತ್ರ ಮತ್ತೆ ರೀ ಎಂಟ್ರಿ ಆಗಲಿದೆ, ಅಲ್ಲಿಯತನಕ ಅವನ ಪಾತ್ರಕ್ಕೆ ಅಲ್ಪ ವಿರಾಮ :-)