ಕಥೆ: ಪರಿಭ್ರಮಣ..(60)

ಕಥೆ: ಪರಿಭ್ರಮಣ..(60)

( ಪರಿಭ್ರಮಣ.. http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...)

ಎಲ್ಲೆಲ್ಲೊ ಮುಳುಗಿ ತೇಲಾಡಿ ದಿಗ್ಬ್ರಮಿಸಿ ಸಂಭ್ರಮಿಸುತ್ತಿದ್ದ ಶ್ರೀನಾಥನ ಮನಸಿಗೆ ಅಂದು ತನ್ನ ಅಂತರ್ಯಾನದ ಮೂರನೆಯ ಮತ್ತು ಕಡೆಯ ದಿನದ ಮುಕ್ತಾಯದ ಹೊಸ್ತಿಲಲ್ಲಿದ್ದ ಅರಿವು ಯಾಕೊ ಭೀತಿಯ ಪಲುಕೆಬ್ಬಿಸದೆ ಹೇಳಲಾಗದ ಆತ್ಮವಿಶ್ವಾಸ ಮತ್ತು ಧನ್ಯತೆಯ ಭಾವ ತುಂಬಿದ ಪ್ರಶಾಂತತೆಯನ್ನುಂಟುಮಾಡಿತ್ತು. ಇನ್ನು ಮುಂದಿನ ಎರಡು ದಿನ ಕೂತು ಚಿಂತನೆಯ ಧ್ಯಾನದಲ್ಲಿ ತೊಡಗದೆ ಭೌತಿಕ ಶ್ರಮದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕೆಂಬ ಆದೇಶ ಈಗಾಗಲೆ ಮಾಂಕ್ ಸಾಕೇತರಿಂದ ಇತ್ತಾಗಿ ಈ ಮೂರನೆಯ ದಿನದೊಳಗೆ ಎಲ್ಲಾ ಧ್ಯಾನಾವೃತ್ತ ಚಟುವಟಿಕೆಯನ್ನು ಮುಗಿಸಿಬಿಡಬೇಕಿತ್ತಾದರು ಅದು ಒತ್ತಡವಾಗಿ ಕಾಡುವ ಆತಂಕವಾಗದೆ, ಎಲ್ಲವು ತಂತಮ್ಮ ಪ್ರಕ್ಷೇಪಿತ ಹಾದಿಯಲ್ಲಿ ಭ್ರಮಣಿಸಿ, ಸಮಯಕ್ಕೆ ಸರಿಯಾಗಿ ಸನ್ನಿವೇಶಕ್ಕೆ ತಕ್ಕ ತಾರ್ಕಿಕ ಅಂತ್ಯವನ್ನು ಕಾಣುವುದೆಂಬ ಬಲವಾದ ನಂಬಿಕೆ ನಿರಾಳವಾಗಿರುವಂತೆ ಮಾಡಿತ್ತು. ಅಲ್ಲದೆ ಅವನಿಗದು ಮೂರನೆ ದಿನದಂತೆ ಕಾಣದೆ ವಾರಗಟ್ಟಲೆ, ತಿಂಗಳುಗಟ್ಟಲೆ ಅಲ್ಲಿದ್ದುಕೊಂಡೆ ಈ ಚಿಂತನಾಯೋಗದಲ್ಲಿ ತಲ್ಲೀನನಾಗಿರುವನೇನೊ ಎನ್ನುವ ಭ್ರಮೆಯನ್ನುಂಟು ಮಾಡುವಷ್ಟು ಪ್ರಬಲ ಪರ್ಯಾವರಣವನ್ನು ಸೃಷ್ಟಿಸಿಬಿಟ್ಟಿತ್ತು, ಅವನ ಸುತ್ತೆಲ್ಲ. ಅದರ ಜತೆಗೆ ಅವನು ಪ್ರಕಟವಾಗಿ ಗಮನಿಸದಿದ್ದರು, ಅಂತರಂಗಕ್ಕೆ ಅರಿವಾಗುತ್ತಿದ್ದ ಅನುಭೂತಿಯೊಂದು ತನ್ನರಿವಿನ ಪರಿಧಿಯ ಒಳಗೆಲ್ಲ ಏನೊ, ಯಾವುದೊ ಶುದ್ಧೀಕರಣದ ಕಾರ್ಯಾಗಾರ ನಡೆದು ಎಲ್ಲವು ಸ್ವಚ್ಛಗೊಳ್ಳುತ್ತಿರುವ ಹಾಗೆ, ಮೊದಲಿಂದ ಅಲ್ಲಿ ಮನೆ ಮಾಡಿಕೊಂಡಿದ್ದ ಆತಂಕ, ಅನುಮಾನ, ಉದ್ವೇಗಗಳ ಮೂಲ ಬೀಜಾಣುವನ್ನೆ ಕೋಶಕೋಶದಲ್ಲೂ ಗುಡಿಸಿ ಹೊರಗೆತ್ತಿ ಹಾಕಿದ ಹಾಗೆ ಅನಿಸತೊಡಗಿತ್ತು. ಆ ಧ್ಯಾನದ ನಡುವಲ್ಲೂ ಯಾವುದೊ ಕಾರಣಕ್ಕೆ ನೆನಪಾಗಿದ್ದ ಶ್ರೀನಿವಾಸ ಪ್ರಭುವಿನ ಮುಖ ಕೂಡ ಎಂದಿನಂತೆ ಕೋಪ, ಬೇಸರದ ಛಾಯೆಯನ್ನು ಹುಟ್ಟಿಸುವ ಬದಲು ಯಾವುದೊ ಅರಿಯಲಾಗದ ನಿರ್ಲಿಪ್ತ ಭಾವನೆಯನ್ನು ಪ್ರಕ್ಷೇಪಿಸಿದ್ದು ಅವನಿಗೇ ಅಚ್ಚರಿಯನ್ನು ತಂದುಬಿಟ್ಟಿತ್ತು. ಅದೇನು, ಅದಾವುದೆಂದು ನಿಖರವಾಗಿ, ಸ್ಪಷ್ಟವಾಗಿ ಹೇಳಲಾಗದಿದ್ದರು, ತಾತ್ಕಾಲಿಕವೊ-ಶಾಶ್ವತವೊ ಎಂಬರಿವಿರದಿದ್ದರು, ಒಳಗೆಲ್ಲ ಯಾವುದೊ ಮೂಲಭೂತ ಬದಲಾವಣೆಯಾಗುತ್ತಿರುವುದಂತು ಅಂತರಂಗದ ಅರಿವಿಗೆ ನಿಚ್ಛಳವಾಗಿ ತೋರಿಕೊಂಡಿತ್ತು. ಈ ಮನೋಯಜ್ಞದ ದೆಸೆಯಿಂದ ತಾನು ಚಿಂತಿಸುತ್ತಿರುವ ಹಾದಿಯಲ್ಲೆ ತನ್ನಲ್ಲೂ ಸಾತ್ವಿಕ - ತಾಮಸದ ಏರುಪೇರಾಗಲಿಕ್ಕೆ ಆರಂಭವಾಗಿದೆಯೆ ? ಎಂದು ಅನುಮಾನ ಪಡುವಂತಾದರು, ಅದಕ್ಕಾವ ಭೌತಿಕ ಪ್ರಕಟ-ಸಾಕ್ಷಿಗಳಿನ್ನು ನಿಸ್ಸಂಶಯ ಎನ್ನುವಂತೆ ತೋರಿಕೊಂಡಿರಲಿಲ್ಲ. ಆದರೆ ಅಂತಿಮವಾಗಿ ತನ್ನ ಗುರಿ ತನ್ನೆಲ್ಲ ಕಳವಳ-ಗೊಂದಲಕ್ಕೆ, ನಿರಂತರ ಸೋಲು-ಗೆಲುವಿನ ಏರುಪೇರಾಟಕ್ಕೆ ಕಾರಣವಾದ ಅಂಶವನ್ನು ಕೆದಕಿ ಅದನ್ನು ಸರಿದಾರಿಗೆ ಹಿಡಿಸುವುದೆ ಆದಕಾರಣ, ಈ ದಾರಿ ತನ್ನನ್ನು ಆ ಅಂತಿಮಕ್ಕೆ ಒಯ್ಯುತ್ತಿದೆಯೆಂಬ ಅತೀವ ವಿಶ್ವಾಸವಂತು ಗಾಢವಾಗಿ ಮೂಡಿ ಬಂದಿತ್ತು. ಜತೆಗೆ ತಾನೀ ಯಾತ್ರೆಯ ಅಂತಿಮ ಹಂತದ ಹೊಸಿಲಲ್ಲಿ ನಿಂತಿರುವೆನೆಂಬ, ಬಯಸಿದ ಉತ್ತರ ಪಡೆವ ಕಟ್ಟಕಡೆಯ ಗಳಿಗೆಯ ಮುಂಚಿನ  ಕ್ಷಣದ ಕದ ತಟ್ಟುತ್ತಿರುವೆನೆಂಬ ಬಲವಾದ ನಂಬಿಕೆಯೂ ತಂತಾನೆ ಮನದಲ್ಲಿ ಪ್ರಕಟವಾಗಿಹೋಗಿತ್ತು. ಅದೇನು ಧ್ಯಾನದ ಆತ್ಮವಿಶ್ವಾಸವೊ, ಅಥವಾ ಚಿಂತನೆಯ ಅಳದ ಉತ್ಪನನದಲ್ಲಿ ಮೇಲೆದ್ದು ಹೋದ ರಾಡಿಯಿಂದಾಗಿ ಸ್ವಚ್ಛವಾಗಿ ಅನಾವರಣಗೊಂಡು ಪ್ರಕಟಗೊಳ್ಳುತ್ತಿರುವ ಅಂತರಾಳದ ಜ್ಞಾನ ಪ್ರಕಾಶವೊ - ಒಟ್ಟಾರೆ ಆ ಅರಿವಿನ ಆತ್ಮವಿಶ್ವಾಸ ಮಾತ್ರ ನಂಬಿಕೆಗೂ ಮೀರಿದ ನಂಬಿಕೆಯಂತೆ ಬಲವಾಗಿ ವಿಕಸನ ಹೊಂದಿ, ಅವನ ಮನೋಕರಣಗಳ ಸುತ್ತ ತನ್ನನ್ನೆ ಲೇಪಿಸಿಕೊಂಡಂತೆ ಭದ್ರವಾಗಿ ನೆಲೆಯೂರಿಬಿಟ್ಟಿತ್ತು. ಅದೇನು ನಿಜಕ್ಕು ತನಗುಂಟಾಗುತ್ತಿದ್ದ ಅರಿವೊ, ಅಥವಾ ಹಾಗೆನಿಸುವಂತೆ ಮಾಡುವ ಮಾಯೆಯ ಭ್ರಮೆಯೊ? ಅಥವಾ ಅದು ಈ ರೀತಿಯ ಧ್ಯಾನದ ಸಹಜ ಪರಿಣಾಮ ಫಲವೊ ? - ಎಂಬ ದ್ವಂದ್ವವೂ ಆಗೀಗೊಮ್ಮೆ ಕಾಡಿದ್ದುಂಟು. ಬಹುಶಃ ಏಕಾಂತದಲ್ಲಿ ಹೀಗೆ ದಿನಗಟ್ಟಲೆ ಕೂತ ಯಾರಿಗಾದರು ಇದೇ ರೀತಿಯ ಅನುಭವ, ಅನುಭೂತಿಯಾಗುವುದೇನೊ ಅನಿಸಿ ಮತ್ತೆ ತನ್ನ ಮಿಕ್ಕುಳಿದ ಅಂತಿಮ ಚಿಂತನಾಲಹರಿಯತ್ತ ಗಮನ ಹರಿಸಿದ್ಧ ಶ್ರೀನಾಥ.  

ಬಾಹ್ಯದಿಂದ್ರೀಯಗಳ ಮೂಲಕ ಗ್ರಹಿಸಲು ಸಾಧ್ಯವಿರುವ ಜ್ಞಾನಶಕ್ತಿಯೆ, ಒಳಗೆ ನೆಲೆಸಿರುವ ಮಿಕ್ಕೆಲ್ಲ ಶಕ್ತಿಗಳನ್ನು ಮತ್ತು ಅದರ ಗುಣಾವಗುಣಗಳನ್ನು ಗುದ್ದಿ ಪ್ರಭಾವ ಬೀರಿ ಅವನ್ನು ಸರಿದಾರಿ ಅಥವಾ ತಪ್ಪುದಾರಿ ಹಿಡಿಸಬಲ್ಲುದೆಂಬ ಅರಿವಿನ ಪ್ರಜ್ಞೆಯುಂಟಾಗಿದ್ದರು, ಜತೆಗೆ ಈ ಒಳ-ಹೊರಗಿನ ಜಗದ ಸಂವಹನಕ್ಕೆ ಜ್ಞಾನವೆ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸುವ ಶಕ್ತಿಯಾಗುವುದೆಂದು ತಿಳಿವುಂಟಾಗಿದ್ದರು, ಜ್ಞಾನದ ಈ ಅಮೂರ್ತ 'ಮಾಹಿತಿ' ಹೇಗೆ ತನ್ನನ್ನೆ ಅಂತರಂಗದ ಶಕ್ತಿಯ ತುಣುಕಾಗಿಸಿಕೊಂಡು ಕೋಶಕೋಶದೆಲ್ಲೆಡೆಗು ಸಂಚರಿಸಿ ಸಂವಹಿಸಿ ಅಂತರ್ಗತವಾಗಿಸುವ ಪ್ರಕ್ರಿಯೆಯನ್ನು ನಿಭಾಯಿಸುತ್ತದೆಯೆನ್ನುವುದು ಇನ್ನು ಮಸುಕುಮಸುಕಾಗಿಯಷ್ಟೆ ತೋರಿಬಂದಿತ್ತು. ಕೆಲವೆಡೆ ನೇರ ಭೌತಿಕ ಸಂವಹನವಿರುವೆಡೆ ಯಾವುದೆ ತೊಡಕಿರಲಿಲ್ಲ - ಶಬ್ದದ ತರಂಗ ಕಿವಿಗೆ ಬಿದ್ದು ಮೆದುಳನ್ನು ತಲುಪಲು ಕಿವಿಯ ರಚನೆ ಮತ್ತು ಅದರ ವ್ಯೂಹ ಶ್ರವಣದ ವ್ಯಾಪ್ತಿ, ಮಿತಿ, ಗತಿಗಳನ್ನು ನಿಯಂತ್ರಿಸಿ, ನಿಭಾಯಿಸುವ ಹಾಗೆ. ಆದರೆ ನಿಜಕ್ಕೂ ಇನ್ನು ಮಸುಕು ಮಸುಕಾಗಿದ್ದುದ್ದು ಈ ಸಂವಹನ ಹೇಗೆ ಭೌತಿಕ ಮತ್ತು ಅಭೌತಿಕದ ನಡುವೆ ನಡೆಯುತ್ತದೆನ್ನುವುದೆ. ಮೆದುಳನ್ನು ಸೇರಿದ ಮಾಹಿತಿಯನ್ನು ಗ್ರಹಿಸಿ ಅದರ ಸಂಸ್ಕರಣೆ, ವಿಸ್ತರಣೆ ಮತ್ತು ಪ್ರತಿಕ್ರಿಯಿಸುವ, ಅಂತಃಕರಣಗಳ ಸ್ತರದಲ್ಲಿ ಪ್ರಭಾವ ಬೀರುವ ಮನಸಾಗಲಿ, ಚಿತ್ತವಾಗಲಿ, ಬುದ್ಧಿಯಾಗಲಿ, ಅಹಂಕಾರವಾಗಲಿ ಅಮೂರ್ತವಿರುವ ರೀತಿಯಿಂದಾಗಿ, ಅದನ್ನು ನಿಖರವಾಗಿ ಸ್ಪಷ್ಟಗೊಳಿಸಿಕೊಳ್ಳುವ ಅಗತ್ಯವಿತ್ತು. ಮತ್ತವೆ ಅಂತಃಕರಣಗಳು ಒಳಗಿನ ಮಿಕ್ಕೆಲ್ಲ ಭಾಗಗಳಿಗು ಸಂವಹಿಸುವ ಪ್ರಕ್ರಿಯೆಗು ಅದೆ ವಿಧಾನ ಬಳಸುತ್ತವೆಯೆ ಎಂಬುದನ್ನು ಸ್ಪಷ್ಟಗೊಳಿಸಿಕೊಳ್ಳಬೇಕಿತ್ತು... ಯಾಕಿಲ್ಲಿ ಈ ಸಂವಹನ ಅಷ್ಟು ಮುಖ್ಯವೆಂದು ನಡುವಲೊಮ್ಮೆ ಶ್ರೀನಾಥನ ಮನವೂ ಪ್ರಶ್ನಿಸಿಕೊಂಡಿತ್ತು.. ಇದೆಲ್ಲವನ್ನು ಅನಗತ್ಯ ವಿಶ್ಲೇಷಿಸುವ, ಗ್ರಹಿಕೆಯ ವ್ಯಾಪ್ತಿಯಳತೆಗೆ ಮೀರಿದ ವಿಷಯಗಳಾಳಕ್ಕೆ ಹೊಕ್ಕು ನೋಡುವ ಅಗತ್ಯವಿದೆಯೆ? ಎಂದು. ಅದರ ಹಿಂದೆಯೆ ತಟ್ಟನೆ ಉತ್ತರವೂ ಹೊಳೆದಿತ್ತು... ಹೊರಗಿಂದ ಗಳಿಸಬಲ್ಲ ಅಮೂರ್ತ ಜ್ಞಾನಶಕ್ತಿಯೊಂದರ ಬಲದಿಂದಲೆ ಒಳಗಿನ ಭೌತಿಕ ಮತ್ತು ಅಭೌತಿಕವೆಲ್ಲವನ್ನು - ಅಂತಃಕರಣಗಳಿಂದ ಹಿಡಿದು ಜೀವಕೋಶಗಳವರೆಗೆ ಎಲ್ಲವನ್ನು - ನಿಯಂತ್ರಿಸಬಹುದೆಂಬ ಥಿಯರಿಗೆ, ಸಿದ್ದಾಂತಕ್ಕೆ ಬಲು ಮುಖ್ಯವಾದ ಕೊಂಡಿಯೆ ಈ ಸಂವಹನದ ಅಂಶವಾಗಿತ್ತು. ಭೌತಿಕಾಭೌತಿಕದ ನಡುವಿನ ಸಂವಹನ ಸಾಧ್ಯವಿದ್ದರೆ ಮಾತ್ರ ತಾನೆ, ಜ್ಞಾನದಂತಹ ಬಾಹ್ಯ ಪ್ರಚೋದನೆ ತನ್ನ ಪ್ರಭಾವ ಬೀರಿ ಆಂತರ್ಯದ ಭೌತಿಕಾಭೌತಿಕ ನಡುವಳಿಕೆಯನ್ನು ನಿಯಂತ್ರಿಸಿ, ನಿಭಾಯಿಸಲು ಸಾಧ್ಯ ? ಅದು ಪ್ರತ್ಯಕ್ಷವೊ, ಪರೋಕ್ಷವೊ ಅನ್ನುವುದು ಬೇರೆ ವಿಷಯ. ಆದರೆ ಸಂವಹನ ಸಾಧ್ಯವೆನ್ನುವುದನ್ನು ಖಚಿತಪಡಿಸಿಕೊಂಡರೆ ಮತ್ತು ನಿರೂಪಿಸಲು ಸಾಧ್ಯವಾಗುವುದಾದರೆ ಆಗ ಹೊರಗಿಂದ ಗ್ರಹಿಸಿದ ಜ್ಞಾನದಿಂದ ಒಳಗನ್ನು ಮುಟ್ಟಿ ಪ್ರಭಾವಿಸಲು ಸಾಧ್ಯ, ಅದನ್ನು ಪ್ರಚೋದಿಸಿ ನಮಗೆ ಬೇಕಾದ ದಿಕ್ಕಿನತ್ತ ನಡೆಸಲು ಸಾಧ್ಯ ಎನ್ನುವ ವಾದಕ್ಕೆ ಬಲ ಸಿಕ್ಕಿದಂತಾಗುತ್ತಿತ್ತು. ಅದಕ್ಕು ಮುಖ್ಯವಾಗಿ - ಅದು ಸಾಧ್ಯವೆಂದರಿತ ಮೇಲೂ, ಈಗಾಗಲೆ ನಿಕ್ಷೇಪದಂತೆ ಪ್ರಕ್ಷೇಪವಾಗಿ ಹೂತು ಕುಳಿತಿರುವ ಹಳತಿನ ರಾಡಿಯನ್ನು ಇದೆ ವಿಧಾನದಲ್ಲಿ 'ಕ್ಷಿಪ್ರ ಗತಿಯಲ್ಲಿ' ರಿಪೇರಿ ಮಾಡಿ ಶುದ್ಧಿಗೊಳಿಸಲು ಸಾಧ್ಯವೆ ? ಎನ್ನುವುದು ಅವನಿಗೆ ಮುಖ್ಯ ಅಂಶವಾಗಿತ್ತು. ಜತೆಗೆ ಇದೆಲ್ಲಾ ವೈಯಕ್ತಿಕ ಸ್ತರದ ಅನ್ವೇಷಣೆಯ ಸಂಗತಿಗಳಾಗಿದ್ದರು, ಇದು ನಿಜವಾದ ತಾತ್ವಿಕ ವಾದವೆ ಆಗಿದ್ದಲ್ಲಿ ನಾವು ತಲತಲಾಂತರದಿಂದ ಮಾಡಿಕೊಂಡು ಬಂದಿರುವ ಪೂಜೆ, ಪುನಸ್ಕಾರ, ವ್ರತಾಚರಣೆ, ನೀತಿ, ನಿಯಮ, ನೈತಿಕತೆ, ಸದ್ವರ್ತನೆಗಳಿಗೆಲ್ಲ ಒಂದು ಅರ್ಥಪೂರ್ಣ ತಾತ್ವಿಕ ಹಾಗು ವೈಜ್ಞಾನಿಕ ನೆಲೆಗಟ್ಟು ದೊರಕಿದಂತೆ ಆಗುತ್ತಿತ್ತು - ಅವೆಲ್ಲ ಕೇವಲ ಕಂದಾಚಾರ, ಮೂಢನಂಬಿಕೆಗಳ ಕಂತೆಯಲ್ಲವೆಂದು ನಿರೂಪಿಸುತ್ತ. ಅವೆಲ್ಲ ಕಾರಣಗಳ ಸಮಗ್ರ, ಸಮಷ್ಟಿಯ ಮೊತ್ತವೆ ಶ್ರೀನಾಥನನ್ನು ಆ ಸಂವಹನದ ಅಗೋಚರವನ್ನು ತಡಕಾಡಿಸುವತ್ತ ದೂಡುತ್ತಿತ್ತು - ಮನನದಿಂದ ಗಹನದತ್ತ, ಸಂವಹನದಿಂದ ಸಂಭವನೀಯ ಸಂಭಾವ್ಯದತ್ತ ಕಣ್ಣು ಕಟ್ಟಿಯೆ ನಡೆಸುತ್ತ. ಆ ಸಂವಹನದ ವಿಚಾರಲಹರಿ ಮೂಡುತ್ತಿದ್ದಂತೆಯೆ ತಟ್ಟನೆ ಶ್ರೀನಾಥನ ಕಣ್ಮುಂದೆ ಸುಳಿದಿತ್ತು ಮಾನವ ದೇಹದೊಳಗಿನ ನರ - ನಾಡಿ ಪರಿಚಲನಾ ವ್ಯೂಹದ ಚಿತ್ರಣ. ಅವೇ ಅಲ್ಲವೆ ದೇಹದೊಳಗಿನ 'ಕಮ್ಯೂನಿಕೇಶನ್ ಅಂಡ್ ಕಮ್ಯೂಟಿಂಗಿನ - ಸಂವಹನ ಮತ್ತು ಸಾಗಾಣಿಕೆಯ' ಪ್ರಮುಖ ಮಾಧ್ಯಮಗಳು ? ಎಂಬ ಸರಳ ಸಾಮಾನ್ಯ ಅಂಶವನ್ನು ಎತ್ತಿ ತೋರಿಸುತ್ತ.

ಹಾಗೆ ನೋಡಿದರೆ ನಮ್ಮ ದೇಹದೊಳಗೂ ಸಂವಹನೆ, ಚಲನೆಗಳೆಲ್ಲವು ಭೌತಿಕಾಭೌತಿಕ ಸ್ತರದಲ್ಲೆ ನಡೆಯುವ ಸಹಜ ಪ್ರಕ್ರಿಯೆಯಲ್ಲವೆ ? ನಮ್ಮ ದೇಹದ ರಕ್ತ-ಪರಿಚಲನಾ ವ್ಯೂಹದ ಪರಿಗಣನೆಗಿಳಿದರೆ ಅಲ್ಲೆಲ್ಲ ಇಪ್ಪತ್ನಾಲ್ಕು ತತ್ವದ ಪ್ರಭಾವವಿರುವ, ಚಲನೆಯಿಂದ ಪ್ರೇರಿತವಾದ ಭೌತಿಕ ಕ್ರಿಯೆಯೆ ಪ್ರಮುಖ. ನಮ್ಮ ರಕ್ತನಾಳಗಳೆಲ್ಲ ದೇಹದ ತುಂಬೆಲ್ಲ ಮೇಲಿಂದ ಕೆಳಗೆ, ಎಲ್ಲೆಂದರಲ್ಲಿ ಹರಡಿಕೊಂಡು ಸಾಗಾಣಿಕೆಯಾಟ ನಡೆಸುವ ಪರಿ ಭೌತಿಕ ಸಂವಹನಕ್ಕೊಂದು ಅದ್ಭುತ ಉದಾಹರಣೆ. ಅಲ್ಲಿ ದ್ರವರೂಪಿ ರಕ್ತವೆ ಸ್ವಯಂಸೇವಕನ ರೂಪದಲ್ಲಿ ಸವ್ಯಸಾಚಿಯಂತೆ ಓಡಾಡುತ್ತ ಎಲ್ಲಾ ಕೋಶಗಳಿಗು ಆಹಾರದ ತುಣುಕುಗಳನ್ನು ಸರಬರಾಜು ಮಾಡುತ್ತಲೆ, ಅಲ್ಲಿಂದ ಮಲಿನ ವಿಸರ್ಜನಾ ಅಂಶಗಳನ್ನು ಸಂಗ್ರಹಿಸಿಕೊಂಡು, ಮನೆಗೆ ಬಂದು ಮಡಿಬಟ್ಟೆ ಕೊಟ್ಟು, ಒಗೆಯುವ ಮೈಲಿಗೆ ಬಟ್ಟೆ ಹೊತ್ತೊಯ್ಯುವ ದೋಬಿಯ ಹಾಗೆ ಓಡಾಡಿಕೊಂಡಿರುತ್ತದೆ, ಮೂರು ಹೊತ್ತು. ಜತೆಗೆ ಹೃದಯದ ಮತ್ತು ಶ್ವಾಸಕೋಶಗಳ ಜತೆ ನೇರ ಸಂಬಂಧ ಬೇರೆ - ಹೃದಯ ಮತ್ತು ಶ್ವಾಸಕೋಶಗಳೆ ಅದರ ಮೈಲಿಗೆ ಬಟ್ಟೆಯನ್ನು ಒಗೆದು ಮಡಿ ಮಾಡಿ ಒಣಗಿಸಿಡುವ ವಾಷಿಂಗ್ ಮತ್ತು ಡ್ರೈಯಿಂಗ್ ಮೆಷೀನ್ ತಾನೆ ? ಗಲೀಜು ರಕ್ತವನ್ನೆಲ್ಲ ಅಲ್ಲಿಗೆ ದಬ್ಬುವುದು ಮಾತ್ರವಲ್ಲದೆ, ಶುದ್ಧಿಕರಿಸಿದ ಮೇಲೆ ಅದನ್ನು ಮತ್ತೆ ಹೊತ್ತೊಯ್ಯುವ 'ಟೂ-ಇನ್-ವನ್' ಕಾರ್ಯಕರ್ತ ಕೂಡ ಇದೆ ರಕ್ತವೆ. ಆದರೆ ರಕ್ತನಾಳಗಳ ಜತೆಯಲ್ಲೆ ಸಮಾನಂತರವಾಗಿ ದೇಹವಿಡಿ ಹರಡಿಕೊಂಡಿರುವ ಮತ್ತು ತನ್ನದೆ ಸಹಸ್ರಾರು ಶಾಖೆಗಳನ್ನು ಚಿಗುರಿಸಿ ಮೆದುಳಿನೆಡೆಗು ಮೈಚಾಚಿಕೊಂಡಿರುವ, ರಕ್ತನಾಳದ ಜತೆಯಲ್ಲೆ ದೇಹಾದ್ಯಂತ ಓಡುವ ನರವ್ಯೂಹದ ಕಡೆ ನೋಡಿದರೆ ಪೂರ್ತಿ ವಿಭಿನ್ನ ಚಿತ್ರ. ನರ-ಸಂವೇದನೆಯಲ್ಲಿ ಪ್ರಮುಖ ಪಾತ್ರಧಾರಿಯೆಂದರೆ ಸ್ಪರ್ಷ ಅಥವ ಇಂದ್ರೀಯ ಗ್ರಾಹ್ಯ ಸಂವೇದನೆ ; ಆ ಪ್ರಕ್ರಿಯೆ ಭೌತಿಕ ಮಟ್ಟದ್ದೆ ಆಗಿದ್ದು, ಗ್ರಹಣೇಂದ್ರಿಯಗಳು ಅದನ್ನು ಈ ನರವ್ಯೂಹಗಳ ಮೂಲಕ ಸಂವೇದನೆಯ 'ತರಂಗ'ಗಳ ರೂಪದಲ್ಲಿ ಮೆದುಳಿಗೆ ರವಾನಿಸಿಬಿಡುತ್ತವೆ. ಅದೇ ಪ್ರಕಾರದಲ್ಲಿ ಆ ಮೆದುಳಿನಿಂದ ಪ್ರತಿಕ್ರಿಯೆಯ ರೂಪದಲ್ಲಿ ಏನು ಮಾಡಬೇಕೆಂದು ಮಾಹಿತಿ ಪಡೆದು, ಅದನ್ನು ಮತ್ತದೆ ನರಮಂಡಲ ವ್ಯೂಹದ ಸಂವಹನ ಭಾಗಿತ್ವದಲ್ಲಿ ತಲುಪಬೇಕಾದ ಅಂಗಕ್ಕೆ ತಲುಪಿಸುತ್ತದೆ. ಅಂದರೆ ಇಲ್ಲಿಯೂ ಸಂವಹನದ ಪ್ರಕ್ರಿಯೆ ಭೌತಿಕವಾದರು, ಇಲ್ಲಿ ಸಂದೇಶವಾಹಕವಾಗಿ ರಕ್ತದಂತಹ ದ್ರವವಿರುವುದಿಲ್ಲ. ಒಂದು ಸ್ಥೂಲ ಹಂದರದಲ್ಲಿ ಹೇಳುವುದಾದರೆ ಗೋಚರ ಮಾಧ್ಯಮವಲ್ಲದ ಒಂದು ಬಗೆಯ ಅಭೌತಿಕ ಸ್ತರದ ಸಂವಹನದಲ್ಲಿ, ಅಭೌತಿಕ ರೂಪದಲ್ಲಿ ಸಂಚರಿಸಿ ಮೆದುಳು ಮುಟ್ಟುವ ಮತ್ತು ವಾಪಸ್ಸು ಸಂದೇಶ ರವಾನಿಸುವ ಕ್ರಿಯೆ. ಬಹುಶಃ ಅಲ್ಲೆಲ್ಲ ಕೆಲಸ ಮಾಡುವುದು ವಿವಿಧ ತರಂಗಾಂತರದ, ತರಂಗದಲೆಗಳ ಕಂಪನಗಳೆ ಇರಬೇಕು. ಕ್ರಿಯೆ-ಪ್ರತಿಕ್ರಿಯೆಗಳೆಲ್ಲ ಅಲ್ಲಿ ವಿವಿಧಾವರ್ತನಗಳ ಕಂಪನಗಳಾಗಿ ಸೃಷ್ಟಿಯಾಗಿ, ಅವೆ ಕಂಪನಗಳು ನರವ್ಯೂಹದ ಮುಖೇನ ಚಲಿಸುತ್ತ, ಮುಂದು-ಮುಂದಕ್ಕೆ ವರ್ಗಾಯಿಸಿಕೊಳ್ಳುತ್ತ ತಾವು ಬಯಸಿದ ತುದಿಗೆ ಸಂದೇಶಗಳಾಗಿ ಮುಟ್ಟುತ್ತಿರಬೇಕು. ಜತೆಯಲ್ಲೆ ಇರುವ ರಕ್ತನಾಳದಂತಹ ವ್ಯೂಹವು ಭೌತಿಕವಾಗಿ ಸಹಕರಿಸುತ್ತ ಸಂವಹನದಲ್ಲಿ ಕೈ ಜೋಡಿಸುತ್ತಿರಬಹುದಾದರೂ, ಈ 'ಕಂಪನ-ತರಂಗ'ರೂಪಿ ಸಂದೇಶ ತನ್ನ ಕಂಪನದ ದೆಸೆಯಿಂದಲೆ ಪಕ್ಕದಲ್ಲೆ ಇರುವ ರಕ್ತನಾಳಕ್ಕೆ (ಅಥವಾ ಜೀವಕೋಶಗಳ ಸಂದೇಶ ಗ್ರಾಹಕ - ಸಂದೇಶ ವಾಹಕರಿಗೆ) ವರ್ಗಾಯಿಸಿಕೊಳ್ಳುವ ಮೂಲಕ ಅದೃಶ್ಯರೂಪಿ ತರಂಗ, 'ದೃಶ್ಯ' ಭೌತಿಕರೂಪಕ್ಕೆ ಬದಲಾಗಿ, ಅಲ್ಲಿ ಭೌತಿಕ ರೂಪದ ರಕ್ತವಾಗಿಯೊ ಅಥವ ಮತ್ತಾವುದೊ ಕೋಶದ ಭಾಗವಾಗಿಯೊ ಭೌತಿಕವಾಗಿ ತನ್ನ ಜವಾಬ್ದಾರಿ ನಿರ್ವಹಿಸುತ್ತದೆ. ತರಂಗದ-ಕಂಪನ ಶಕ್ತಿಯನ್ನೆ ಭೌತಿಕವಾಗಿ ತನ್ನ ಕಡೆಗೆ ವರ್ಗಾಯಿಸಿಕೊಂಡ ಮೇಲೆ, ಅದರ ವಿಸ್ತೃತ ಭಾಗವಾಗಿ ಕಾರ್ಯನಿರ್ವಹಿಸುವುದು ಮಾಮೂಲಿನ ಕೆಲಸವಾಗಿಬಿಡುತ್ತದೆ . 

ಆದರೆ ರಕ್ತವ್ಯೂಹ ಮತ್ತು ನರವ್ಯೂಹವೆರಡರ ಒಡನಾಟದ ಗ್ರಾಹ್ಯ ಚಟುವಟಿಕೆಯ ನಡುವೆಯೆ ನಡೆಯುವ, ಆದರ ಮತ್ತೊಂದು ಸ್ತರದ  ಅಂತಃಕರಣಗಳ 'ಅಮೂರ್ತ ಸಂವಹನ' ಸ್ವಲ್ಪ ವಿವರಣೆಯ ನಿಲುಕಿಗೆ ಸಿಗುವುದು ಕಷ್ಟಕರ. ಏಕೆಂದರೆ ಅಲ್ಲಿ ಭೌತಿಕತೆಗಿಂತ ಅಭೌತಿಕ ಸ್ತರವೆ ಹೆಚ್ಚಿನ ಪಾತ್ರವಹಿಸಿದಂತೆ ಕಾಣುತ್ತದೆ. ಯಾವುದೊ ಸುಂದರ ರೂಪೊಂದನ್ನು ಕಂಡಾಗ, ಕಣ್ಣು ಮೆದುಳಿಗೆ ಅದರ ವರದಿಯೊಪ್ಪಿಸುವ ಭೌತಿಕ ದೂತನಾದರೂ, ಅದಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂಬ 'ಭಾವನಾಂತರಂಗ' ಸುದ್ದಿಯ ಅಲೆಗಳಾಗಿ ಬರುವುದು ಅಭೌತಿಕವೆನ್ನಬಹುದಾದ ಅಂತಃಕರಣಗಳೆಂಬ ಸ್ತರದಲ್ಲೆ (ಅಭೌತಿಕ ಕಂಪನ ರೂಪದಲ್ಲೆ) ಇರಬೇಕು. ಆಸೆಗಳೆಂಬ ಭಾವ ತೀವ್ರತೆಯಲೆಗೆ ಕಡಿವಾಣ ಹಾಕಲಾಗಲಿ, ಹತೋಟಿ ಮೀರಿದ ಪ್ರತಿಕ್ರಿಯೆಗೆಣಿಸುವಂತೆ ಮಾಡಲಾಗಲಿ ಭೌತಿಕವನ್ನು ಗುದ್ದಿ ಪ್ರೇರೇಪಿಸುವುದು ಈ ಅತಿವೇಗದ ಅಭೌತಿಕ ತರಂಗಗಳೆ ಆದ ಕಾರಣ ಕೆಲವೊಮ್ಮೆ ಏನು ಮಾಡುತ್ತಿದ್ದೇವೆಂಬ ಅರಿವಾಗುವ ಮೊದಲೆ ಭೌತಿಕ ಪ್ರಕ್ರಿಯೆ ಜರುಗಿಹೋಗಿರುತ್ತದೆ. ಮಿಲಿಯಾಂತರ ಮೈಲಿಯ ಗ್ರಹ, ಉಪಗ್ರಹಗಳತ್ತಲೆ ಸಂದೇಶ ಕಳಿಸಬಲ್ಲ ಶಕ್ತಿ ತರಂಗಗಳಿಗಿರುವಾಗ, ಬರಿಯ ದೇಹದೊಳಗಿನ ಜೀವಕೋಶದ, ಅಂಗಗಳ ಬುಡಕ್ಕೆ ಸುದ್ದಿ, ಸಂದೇಶ ರವಾನಿಸುವುದೇನು ಮಹಾನ್ ವಿಷಯವೆ ? ಅಂದರೆ ಇಲ್ಲೊಂದು ಮುಖ್ಯವಾಗಿ ಗಮನಿಸಬೇಕಾದ ಅಂಶವಿದೆ. ಈ ರೀತಿಯ ಭೌತಿಕ - ಅಭೌತಿಕದ ನಡುವಿನ ಸಂವಾದ ಸಾಧ್ಯವಿದೆಯೆಂದಾದರೆ ಅದು ಬರಿ ದೇಹದೊಳಗೆ ಮಾತ್ರವಲ್ಲ, ಎಲ್ಲೆಡೆಯೂ ಸಾಧ್ಯವಿರಬೇಕಲ್ಲವೆ ? ಉದಾಹರಣೆಗೆ ಹೊರಗಿನ ಸುತ್ತಲ ಮನೋಹರ ವಾತಾವರಣ ದೇಹದ ಅಥವಾ ಮನಸಿನ ಒಳಗುಂಟು ಮಾಡುವ ಭಾವನೆಗಳು; ಯಾವುದೋ ಸುಂದರ ಜಾಗಕ್ಕೆ ಹೋದಾಗ, ಹೂ ತೋಟದಲ್ಲಿ ಸುಂದರ ರಾಶಿರಾಶಿ ಹೂಗಳ ಸೊಬಗು ಕಂಡಾಗ ಉಂಟಾಗುವ ಭೌತಿಕಾಭೌತಿಕ ಭಾವನೆ ಒಂದು ಮಟ್ಟದ್ದಾದರೆ, ಅದೇ ಹೊತ್ತಿನಲ್ಲಿ ಉಂಟಾಗುವ ಮತ್ತಾವುದೊ ಅಲೌಕಿಕ, ದೈವೀಕ, ಅವರ್ಣನೀಯ ಅನುಭೂತಿಗಳನ್ನು ವಿವರಿಸುವುದು ಹೇಗೆ? ಅಥವಾ ತೀರಾ ಭೀತ, ಭಯಾನಕ ಸ್ಥಿತಿಯಲ್ಲುದಿಸುವ ನಡುಕ, ಹೆದರಿಕೆಯ ಜತೆಗುಂಟಾಗುವ ಮನೋಕಂಪನಗಳನ್ನು ವರ್ಣಿಸುವುದೆಂತು ? ಕೆಲವೊಂದು ಅನುಭವ, ಅನುಭೂತಿಗಳೆ ಭೌತಿಕ-ಅಭೌತಿಕಕ್ಕೂ ಮೀರಿದ ಅಲೌಕಿಕವೆನಿಸಿಬಿಡುವುದಲ್ಲ ? ಅವೆಲ್ಲವೂ ಇದೇ ರೀತಿಯ ಅಸಾಧಾರಣ ವರ್ಗದ 'ಕಂಪನ'ಗಳಿಂದ ಪ್ರೇರಿತವಾದ ಸಂವಹನಗಳೆ ಇರಬೇಕಲ್ಲ ? ಅರ್ಥಾತ್ ನಾವೂ ನಮ್ಮೊಡನೆ ಮತ್ತು ನಮ್ಮ ಸುತ್ತ ಮುತ್ತ ಪರಿಸರದ ಜತೆ ನಡೆಸುವ ಪ್ರತಿ ಒಡನಾಟವೂ ಭೌತಿಕ-ಅಭೌತಿಕ-ಅಲೌಕಿಕ ಸ್ತರದಲ್ಲಿ ನಮ್ಮೊಳಗೂ 'ದೃಶ್ಯಾದೃಶ್ಯ ತರಂಗ' ರೂಪದಲ್ಲಿ ಹೊಕ್ಕು ತಮ್ಮ ನಿರಂತರ ಪ್ರತಿಕ್ರಿಯೆ ನೀಡುತ್ತಿರುತ್ತದೆಯೆ ? ಹಾಗೆ ಪ್ರತಿಕ್ರಿಯೆ ನೀಡುವ ಪ್ರಕ್ರಿಯೆಯಲ್ಲೆ ಹೆಚ್ಚು ಬಾರಿ ಪುನರಾವರ್ತಿತವಾಗುವ ಪ್ರತಿಕ್ರಿಯೆ ಹೇಗೊ ಒಳಹೊಕ್ಕು 'ನೆನಪಿನ ತುಣುಕಾಗಿ' ಕೂತು ಅಲ್ಲಿನ ಶಕ್ತಿಯನ್ನೆ ಹೀರಿಕೊಂಡು ಶಾಶ್ವತ ಗುಣವಾಗಿ ಬದಲಾಗುವಂತೆ ಮಾಡುತ್ತಿದೆಯೆ? 

ಉದಾಹರಣೆಗೆ ಪರಿಗಣಿಸಿ ನೋಡುವುದಾದರೆ, ಮೊದಲ ಬಾರಿಗೆ ಕಳ್ಳ ಕೃತ್ಯಕ್ಕಿಳಿದವನೊಬ್ಬನ ಮನಸತ್ವ ಹೆದರಿಕೆ, ತಾಕಲಾಟ, ದ್ವಂದ್ವ, ಹಿಂಜರಿಕೆಗಳಿಂದ ತುಂಬಿಹೋಗಿರುತ್ತದೆ ; ಕಾರಣ ಅವನಲ್ಲಿ ಆ ಕಾರ್ಯದ ಕುರಿತಾಗಿ ಮೊದಮೊದಲು ಇರುವ 'ತ್ರಿಗುಣ ಪೋಷಿತ' ಹಿಂಜರಿಕೆಯ ಅಭಿಪ್ರಾಯ. ಬಹುಶಃ ಆ ಹೊತ್ತಿನಲ್ಲಿ ಕೋಶದಲ್ಲಿರುವ ಸಾತ್ವಿಕ ಶಕ್ತಿ ಎಚ್ಚರಿಕೆಯೀಯುತ್ತ ರಾಜಸವನ್ನು ಹಿಂಜರಿಸಿ ತಾಮಸವನ್ನು ಹತ್ತಿಕ್ಕಿಸಲು ಪ್ರಯತ್ನಿಸುತ್ತಿರುತ್ತದೆ. ಜ್ಞಾನಶಕ್ತಿಯ ಬಲವಿರುವ ಸಾತ್ವಿಕವನ್ನು ಅಧಿಗಮಿಸಿ, ಇಚ್ಛಾಶಕ್ತಿಯನ್ನು ಕುಕೃತ್ಯದತ್ತ ಪ್ರಲೋಭಿಸುವ ತಾಮಸೀಶಕ್ತಿಯೆ ವಿಜೃಂಭಿಸಿದರೆ, ಕ್ರಿಯಾಶಕ್ತಿಗೆ ತಾಮಸೀ-ರಾಜಸದ ಧೈರ್ಯವನ್ನು ತುಂಬಿ ಆ ಕೆಲಸಕ್ಕೆ ಪ್ರೇರೇಪಿಸಿಬಿಡುತ್ತದೆ. ಅದನ್ನೆಲ್ಲ ಆಲೋಚನಾ ಮಟ್ಟದಲ್ಲೆ ಗೆದ್ದು, ಆ ಇಚ್ಛಾಶಕ್ತಿ ದುಷ್ಕಾರ್ಯಶಕ್ತಿಯಾಗದಂತೆ ತಡೆಯೊಡ್ಡುವುದು ಸಾಧ್ಯವಾಗಿ, ಆ ಪ್ರಲೋಭನೆಯನ್ನತಿಕ್ರಮಿಸಿ ಹಿಂಜರಿಸಿದರೆ, ಆಗ ಆ ಹಿಂಜರಿತವೆ ಸ್ಮೃತಿಯಾಳದಲ್ಲಿ 'ಹೆಚ್ಚಿದ ಸಾತ್ವಿಕ ಶಕ್ತಿಯಾಗಿ' ಶೇಖರವಾಗಿ ( ಅರ್ಥಾತ್ ಅದರ ಸಂಬಂಧಿ ರಾಸಾಯನಿಕದ ಬಿಡುಗಡೆಗೆ ಕಾರಣ ಪ್ರೇರಕವಾಗುತ್ತ ) ಸಾತ್ವಿಕತೆಯನ್ನು ಬಲವಾಗಿಸುತ್ತ, ತಾಮಸವನ್ನು ಕುಗ್ಗಿಸುತ್ತದೆ. ಹೀಗಾಗಿ ಮುಂದೆ ಮತ್ತೆ ಪ್ರಲೋಭನೆಯಾದಾಗ ಅದನ್ನು ಪ್ರತಿರೋಧಿಸುವ ಸಾತ್ವಿಕತೆಯ ಶಕ್ತಿ ಹಿಂದಿನ ಬಾರಿಗಿಂತ ಹೆಚ್ಚು ಬಲವಾಗಿರುತ್ತದೆ. ಅದೆ ಒಂದು ವೇಳೆ ತಾಮಸವೆ ಗೆದ್ದು, ಪ್ರಲೋಭನೆಯ ವಶವಾಗಿ ಆ ಒಲ್ಲದ ಕೃತ್ಯ ಮಾಡಿಬಿಟ್ಟರೆ, ಆಗ ಸ್ಮೃತಿಯಾಳಕ್ಕಿಳಿದು ಬೇರೂರಿ ಶಕ್ತಿಯುತವಾಗುವುದು ಸಾತ್ವಿಕದ ಬದಲು ತಾಮಸವೆ ಆಗಿಬಿಡುತ್ತದೆ - ಅದರ ಶಕ್ತಿಯೆ ಹೆಚ್ಚಾಗಿ ಹೋಗಿ, ಅಲ್ಲಿರುವ ಅದರ ಸಮತೂಕದ ಸಾತ್ವಿಕಶಕ್ತಿಯನ್ನು ನುಂಗಿಹಾಕುತ್ತ. ಹೀಗಾಗಿಯೆ, ಮುಂದಿನ ಬಾರಿ ಮತ್ತೆ ಆ ಕಳ್ಳ ಕೆಲಸಕ್ಕಿಳಿಯ ಹೋದಾಗ ಮೊದಲ ಬಾರಿಯ ಹೆದರಿಕೆ ಇರುವುದಿಲ್ಲ. ಅದೆ ಕ್ರಿಯೆ ಮತ್ತೆ ಮತ್ತೆ ಮರುಕಳಿಸಿದರಂತು ಒಂದು ಹಂತದಲ್ಲಿ ಹೆದರಿಕೆಯೆ ಮಾಯವಾಗಿ ಹೋಗಿಬಿಡುತ್ತದೆ - ಪೂರ್ತಿ ತಾಮಸಿ ಶಕ್ತಿಯ ಆವರಿಸುವಿಕೆಯಿಂದಾಗಿ. ಅದನ್ನು ಮಾಯೆಯೆಂದಾದರು ಕರೆಯಲಿ, ಅಜ್ಞಾನವೆಂದಾದರೂ ಅನ್ನಲಿ - ಮೊದಲಿನ ಹೆದರಿಕೆ ಈಗಿಲ್ಲವೆಂದರೆ, ಮೊದಲಿದ್ದುದಕ್ಕಿಂತ ಹೆಚ್ಚಿನದೇನನ್ನೊ ಶಕ್ತಿ ತುಣುಕನ್ನು ಹಿಂದಿನ ಅನುಭವ, ಸ್ಮೃತಿ - ನೆನಪಿನ ರೂಪದಲ್ಲಿ ರವಾನಿಸಿತೆಂದು, ಶಾಶ್ವತವಾಗಿ ನೆಲೆಗೊಳ್ಳುವಂತೆ ಮಾಡಿಬಿಟ್ಟಿತೆಂದು ಅರ್ಥವಲ್ಲವೆ ? ಹಾಗೆ ರವಾನೆಯಾಗುವ ಪ್ರಕ್ರಿಯೆಯೆ ಭೌತಿಕಾ-ಅಭೌತಿಕ-ಅಲೌಕಿಕದ ಸಂವಹನಕ್ಕೆ ನಿದರ್ಶನವಾಗಿರುವಂತೆಯೆ, ಅವುಗಳ ಮರುಕಳಿಕೆಯೂ ಆ ರವಾನೆಯಲ್ಲಿ ಕೋಶಸ್ಮೃತಿಯಲ್ಲಿ ಸಂಗ್ರಹಗೊಂಡು ಉಬ್ಬುತ್ತ ಹೋಗುವ ಅನುಭವವೆ - ಸಾತ್ವಿಕವೊ, ರಾಜಸವೊ, ತಾಮಸವೊ ಪ್ರಧಾನವಾದ ಗುಣಧರ್ಮವಾಗಿ ಬದಲಾಗಿಹೋಗುವುದೆನ್ನಲೂ ಆಧಾರ ಸಿಕ್ಕಂತಾಯಿತು ಎನ್ನಬಹುದಲ್ಲವೆ ? ಇದೊಂದು ರೀತಿ ಸದಾ ಬೈಗುಳ ತಿನ್ನುತ್ತಾ ಇರುವ ಹುಡುಗನೊಬ್ಬ ಅದರಿಂದಲೆ ಮೊಂಡು ಬಿದ್ದು, ಎಷ್ಟೆ ಬೈದರೂ ಏನೂ ಪರಿಣಾಮವಾಗದವನಂತೆ ಗುಣ-ಸ್ವಭಾವ ಬದಲಾಗಿಬಿಡುವ ಹಾಗೆ. 

ಅಂದರೆ ವ್ಯಕ್ತಿಯೊಬ್ಬನ ವಿಷಯದಲ್ಲೂ ಕೂಡ ಆತ ಮಾಡಿದ ಒಳ್ಳೆಯ ಹಾಗೂ ಕೆಟ್ಟ ಕ್ರಿಯೆಗಳೆಲ್ಲ, ನೈತಿಕಾನೈತಿಕ ನಡುವಳಿಕೆಗಳೆಲ್ಲ, ಭೌತಿಕ-ಅಭೌತಿಕ-ಲೌಕಿಕ-ಅಲೌಕಿಕ ಆಲೋಚನೆ, ಚಿಂತನೆಗಳೂ ಸೇರಿದಂತೆ ಆತನ ದೇಹದ-ಜೀವಕೋಶದ  ಸ್ಮೃತಿ ಪೆಟ್ಟಿಗೆಗಳಲ್ಲಿ ರಾಜಸವೊ-ತಾಮಸವೊ-ಸಾತ್ವಿಕವೊ ಪ್ರಧಾನವಾದ ಶಕ್ತಿಯಾಗಿ ಸೇರಿಕೊಂಡು, ಅವನಿಗರಿವಿಲ್ಲದೆಯೆ ಆತನ ಗುಣ, ಸ್ವಭಾವವಾಗಿ ಆತನನ್ನೆ ನಿಯಂತ್ರಿಸುತ್ತಿರುವುದೆ ? ವ್ಯಕ್ತಿಯೊಬ್ಬನ ಕ್ರಿಯೆ-ಪ್ರತಿಕ್ರಿಯೆಯೆಲ್ಲವು ಹೀಗೆ ಮೂರ್ತಾಮೂರ್ತ, ಭೌತಿಕಾಭೌತಿಕ, ಲೌಕಿಕಾಲೌಕಿಕ ರೂಪ ಮಿಶ್ರಣದಲ್ಲಿ ಸಂವಹನಗೊಂಡು ಕೋಶ-ಕೋಶಗಳನ್ನು ತಲುಪುವ ದಾರಿಯೊಂದು ಉಂಟೆಂದಾದ ಮೇಲೆ, ಅದರಲ್ಲಿ ಅಚ್ಚರಿ ಪಡಲಾದರೂ ಏನಿದೆ ? ತಾಮಸದ ಮೊತ್ತ ಹೆಚ್ಚಿದಂತೆ ಕಳವಳಕ್ಕೊಳಗಾಗುವ ಮಿಕ್ಕುಳಿದ ಸಾತ್ವಿಕದ ಪ್ರೇರಣೆಯಿರದಿದ್ದರೆ ಬಹುಶಃ ಹೀಗಾಗುತ್ತಿದೆಯೆಂಬ ಅರಿವೂ ಕೂಡ ಇರದೆ ಹೋಗುತ್ತಿತ್ತೇನೊ ? ತನ್ನ ಸ್ವಂತ ವಿಷಯವನ್ನೆ ಉದಾಹರಣೆಯಾಗಿ ತೆಗೆದುಕೊಂಡರೆ, ಸಮತೋಲದಲ್ಲಿರುವ ಗುಣಧರ್ಮದಲ್ಲಿ ಸಾತ್ವಿಕತೆಯಿನ್ನು ಪ್ರಧಾನಾಂಶವಾಗಿ ಅಸ್ತಿತ್ವದಲ್ಲಿರುವುದರಿಂದಾಗಿ, ಆ ಹಾದಿ ತಪ್ಪುತ್ತಿರುವ ಮಾಹಿತಿಯ ಅರಿವನ್ನಾದರು ಕೊಟ್ಟು ಸನ್ಮಾರ್ಗದತ್ತ ಪ್ರೇರೇಪಿಸುತ್ತಿದೆಯೆಂದು ಕಾಣುತ್ತಿದೆ... ಇದನ್ನೆ ವೈಜ್ಞಾನಿಕ ಪ್ರಕ್ರಿಯೆಯ ದೃಷ್ಟಿಕೋನದಿಂದ ವಿಶ್ಲೇಷಿಸಿ ನೋಡಿದರೆ, ಒಳ್ಳೆಯ ಕೆಲಸ, ಒಳ್ಳೆಯ ಮಾತುಗಳು, ಸತ್ಕಾರ್ಯಗಳು ಜೀವಕೋಶದಲ್ಲಿ ಸಂತೃಪ್ತಿಯ, ಹರ್ಷೋಲ್ಲಾಸದ ತರಂಗವೆಬ್ಬಿಸಿದಾಗ ಅದರ ಸಂಬಂಧಿ ರಾಸಾಯನಿಕಗಳ ಪ್ರಚೋದನೆ-ಉತ್ಪನ್ನತೆಯಾಗಿ, ಅದು ಸಾತ್ವಿಕ ಶಕ್ತಿಯನ್ನು ಉದ್ದೀಪಿಸುತ್ತದೆ ಮತ್ತು ಬಲಪಡಿಸುತ್ತದೆ. ಅಂದರೆ ಆ ಕ್ರಿಯೆಗಳು ಎಬ್ಬಿಸುವ ತರಂಗಾಂತರ ಅಲೆಯ ಶಕ್ತಿ (ಅಲೆಯೆತ್ತರ ಮತ್ತು ಉದ್ದ) ಸಾತ್ವಿಕತೆಯನ್ನಷ್ಟೆ ಪ್ರತಿನಿಧಿಸುವ ಅದರದೆ ಆದ ಅಳತೆ, ಪರಿಮಾಣದ್ದಾಗಿರಬೇಕು. ಅದೇ ದುಷ್ಕೃತ್ಯದಲ್ಲಿ ಎದ್ದ ತರಂಗಗಳು ಕ್ರೋಧ, ಕ್ರೌರ್ಯ, ಕೋಪ, ಕೀಳರಿಮೆ, ಹಿಂಜರಿಕೆ ಮುಂತಾದ ಋಣಾತ್ಮಕ ಗುಣ ಪ್ರೇರಿತವಾದವುಗಳಾದ ಕಾರಣ ಅವು ಎಬ್ಬಿಸುವ ಅಲೆಯ ಕಂಪನಗಳು ಪರಿಶುದ್ಧವಿರುವುದಿಲ್ಲವಾಗಿ ಅದು ಅದರ ಸಂಬಂಧಿ ರಾಸಾಯನಿಕದ ಪ್ರಚೋದನೆ ಮತ್ತು ಉತ್ಪಾದನೆಯಿಂದಾಗಿ ತಾಮಸವನ್ನು ಉದ್ರೇಕಿಸುತ್ತವೆ ಮತ್ತು ಬಲಪಡಿಸುತ್ತವೆ, ಆ ತಾಮಸೀ ಕ್ರಿಯೆಗಳದೇ ಆದ ಇನ್ನೊಂದು ಅಳತೆ ಮತ್ತು ಪರಿಮಾಣದ ತರಂಗಾಂತರ ಶಕ್ತಿಯಲ್ಲಿ. ಇದೆಲ್ಲ ದೇಹದ ಜೀವಕೋಶದ ಮಟ್ಟದಲ್ಲಿ ನಡೆಯುವ ಪ್ರಕ್ರಿಯೆಯಾಗಿರಬೇಕು... ತರಂಗ ಮೂಲ ಮಾತಿನದಾದರೆ ನಾಲಿಗೆಯ ಜೀವಕೋಶದಲ್ಲಿ, ಆಲಿಸುವಿಕೆಯಾದರೆ ಕಿವಿಯ ಜೀವಕೋಶದಲ್ಲಿ, ನೋಟವಾದರೆ ಕಣ್ಣ ಜೀವಕೋಶದಲ್ಲಿ, ಸ್ಪರ್ಷವಾದರೆ ತೊಗಲಿನ ಜೀವಕೋಶದಲ್ಲಿ, ವಾಸನೆಗೆ ಸಂಬಂಧಿಸಿದ್ದಾದರೆ ಮೂಗಿನ ಮತ್ತು ಶ್ವಾಸಕೋಶದ ಜೀವಕೋಶದಲ್ಲಿ - ಹೀಗೆ ಆಯಾಯ ಸಂಬಂಧಿತ ಅಂಗಗಳಲ್ಲಿ ಅದರ ಸಂಬಂಧಿತ ಶಕ್ತಿ ಮತ್ತು ಗುಣ ಉದ್ದೇಪಿತವಾಗುತ್ತಿರಬೇಕು. ಅದೆಲ್ಲ ನರಗಳಿಂದ ಮೆದುಳಿಗೆ ರವಾನೆಯಾದರೆ ಅವೆ ಅಲ್ಲಿಂದ ಚಿತ್ತಾದಿ ಅಂತಃಕರಣಗಳ ಅಂತರಂಗಕ್ಕೆ ತರಂಗರೂಪವಾಗಿ ಪ್ರವಹಿಸಿ ತಲುಪುತ್ತ, ಅಲ್ಲಿರುವ ಚಿಂತನೆಯ ಸಂಬಂಧಿತ ಸಾತ್ವಿಕ ತಾಮಸಾದಿ ಶಕ್ತಿಗಳನ್ನು ಪ್ರೇರೇಪಿಸುತ್ತಿರಬೇಕು, ಮತ್ತೆ ಸಂದೇಶಭರಿತ ಮರು-ತರಂಗಗಗಳಾಗಿ ಮೆದುಳಿನ ನರವ್ಯೂಹಕ್ಕೆ ಹಿಂತಿರುಗುವ ಮುನ್ನ.

ಅಂದರೆ ವ್ಯಕ್ತಿಯೊಬ್ಬನ ಒಳ್ಳೆಯತನ, ಕೆಟ್ಟತನದ ಬಹುತೇಕ ಪ್ರತಿಫಲಿತ ಭಾಗ ತ್ರಿಗುಣಾವೃತ್ತ ಶಕ್ತಿರೂಪವಾಗಿ ನಮ್ಮ ಕೋಶಗಳಲ್ಲಿ ಶೇಖರವಾಗುತ್ತಿದೆಯೆ (ತಾತ್ವಿಕವಾಗಿ ಹೇಳುವುದಾದರೆ ಯಾವುದಾದರೊಂದೆರಡು ಸಂಬಂಧಿ 'ತತ್ವಗಳನುಸಾರ', ವೈಜ್ಞಾನಿಕವಾಗಿ ಹೇಳುವುದಾದರೆ ಯಾವುದೊ ಪ್ರೋಟೀನಿನಂತ ರಾಸಾಯನಿಕವಾಗಿ, ಪ್ರಾಯಶಃ ಕೆಲವು ವಂಶವಾಹಿ ಜೀನ್ಸುಗಳ ರೂಪದಲ್ಲೂ ಕೂಡ) - ಅಗತ್ಯಕ್ಕಿಂತ ಹೆಚ್ಚಾಗಿ ತಿಂದ ಆಹಾರ ಕೊಬ್ಬಿನ ರೂಪದಲ್ಲಿ ಠೇವಣಿಯಾಗುತ್ತ ಹೋಗುವ ಹಾಗೆ? ನಮ್ಮ ದೇಹದಲ್ಲಿ ಕೊಬ್ಬು ಶೇಖರವಾಗುವ ಅಥವ ಕರಗುವ ಹಾಗೆ, ಪ್ರತಿಯೊಂದು ಕ್ರಿಯೆಯೂ ತನ್ನ ನಡುವಳಿಕೆಯನುಸಾರ ಯಾವುದೊ ಒಂದು ಸ್ಮೃತಿ ಬೀಜಾಕ್ಷರ ರೂಪವಾಗಿ ಸೇರಿಸಲ್ಪಟ್ಟು ವ್ಯಕ್ತಿಯ ಗುಣಾವಗುಣ ಸ್ವಭಾವಗಳನ್ನು ನಿರ್ಣಯಿಸುತ್ತಿದೆಯೆ? ನಮ್ಮ ಸ್ನೇಹಕೂಟದ, ಬಳಗದ ಒಡನಾಟದಲ್ಲಿ ಒಳ್ಳೆಯ ಸಹವಾಸ , ಕೆಟ್ಟ ಸಹವಾಸದ ಪ್ರಭಾವ ನಮ್ಮ ಮೇಲೂ ಆಗಿ ನಾವೂ ಅವರಂತೆಯೆ ಆಗಿಬಿಡುವುದು ಈ ಕಾರಣದಿಂದಲೆ ಏನು? ತನ್ನಲ್ಲಿ ಪೇರಿಸಿಕೊಳ್ಳುತ್ತ ಹೋದ ಅಸಹನೆ, ತಳಮಳ, ಮನಶ್ಯಾಂತಿಯಿರದ ಪರಿಸ್ಥಿತಿ ಇವೆಲ್ಲ ತನ್ನ ಅನೈತಿಕ ಚಿಂತೆ, ಚಿಂತನೆ, ಆಲೋಚನೆ ಮತ್ತು ನಡುವಳಿಕೆಗಳಿಂದುತ್ಪನ್ನವಾಗಿ ತನ್ನ ತಾಮಸತ್ವದ ಏರಿಕೆಯಾಗುತ್ತಿರುವುದರ ಕುರುಹು ನೀಡುತ್ತಿದ್ದರೆ, ತನ್ನ ಯಶಸ್ವಿ ಪ್ರಾಜೆಕ್ಟಿನ ಕಾರ್ಯಗಳು, ಮತ್ತದರಿಂದ ಹೊರತಾಗಿ ಮಾಡಿರಬಹುದಾದ ಮತ್ತಲವು ಸತ್ಕಾರ್ಯಗಳ ಸಾತ್ವಿಕ ಸಗಟು, ಆ ಕಳವಳದ ನಡುವೆಯೂ ಯಶಸ್ಸಿನ ಮಿಂಚಿನ ಗೆರೆ ಹೊಳೆಯಿಸುತ್ತಿದ್ದುದ್ದು ? ಅಂದರೆ ತನ್ನೀ ಕಳವಳ, ಅಶಾಂತಿಯ ಮನಸ್ಥಿತಿ ಪರಿಹಾರವಾಗಬೇಕಾದರೆ ಹೆಚ್ಚು ಹೆಚ್ಚು ಸಾತ್ವಿಕತೆಯನ್ನು ತುಂಬುವ ಕೆಲಸ ಮಾಡುತ್ತ, ತನ್ಮೂಲಕ ತಾನಾಗಿಯೆ ತಾಮಸಿಕೆಯನ್ನು ಕಡಿಮೆಯಾಗಿಸುತ್ತ ಹೋಗಬೇಕು ಎಂದರ್ಥ, ಅಲ್ಲವೆ? ಆದರೆ ವರ್ಷಾನುಗಟ್ಟಲೆಯಿಂದ ಪೇರಿಸಿಟ್ಟುಕೊಂಡಿರುವ, ಈಗಾಗಲೆ ಹೆಪ್ಪುಗಟ್ಟಿ ಕೂತಿರುವ ತಾಮಸಿಯನ್ನು ಕರಗಿಸುವುದೆಂತು ? ಅದಕ್ಕೇನಾದರೂ ಕ್ಷಿಪ್ರ ದಾರಿಯಿದೆಯೆ ? ಇಲ್ಲಿಂದ ಮುಂದಕ್ಕೆ ಮಾಡುವೆಲ್ಲ ಸಾತ್ವಿಕ ಪ್ರಕ್ರಿಯೆಗಳು ಪರಿಸ್ಥಿತಿ ಇನ್ನೂ ಬಿಗಡಾಯಿಸಿಕೊಳ್ಳದಂತೆ ಪ್ರಭಾವ ಬೀರಬಹುದೆ ಹೊರತು, ಈಗಾಗಲೆ ವರ್ಷಾಂತಗಳಿಂದ ಸೇರಿಕೊಂಡು ಸ್ವಸ್ಥವಾಗಿ ಕೂತಿರುವುದನ್ನು ಕದಲಿಸಿ ಕರಗಿಸಲಾಗದೇನೊ ..? ಒಂದು ವೇಳೆ ಅಷ್ಟಿಷ್ಟು  ಕರಗಿಸಿದರೂ ಕರಗಿಸಿತೇನೊ ಎಂದುಕೊಂಡರೂ, ಮೊತ್ತದಲ್ಲಿ ಗಣನೀಯ ಬದಲಾವಣೆಯಾದೀತೆ ಹೇಳುವುದು ಕಷ್ಟ.. 

ಅಂದರೆ ಈ ವಿಧಾನದಿಂದ ಪರಿಹಾರ ಕಾಣಬೇಕೆಂದರೆ, ಬಹು ನಿಧಾನದಲ್ಲಿ ಕ್ರಮೇಣವಾಗಿ ಕಡಿಮೆಯಾಗುತ್ತ ಹೋಗುವ ತನಕ ಕಾಯುತ್ತಲೆ ಅಸಹನೆ, ಚಡಪಡಿಕೆ, ಅಶಾಂತಿಗಳನ್ನು ಸಹಿಸಿಕೊಂಡೆ ಹೋಗಬೇಕೆ, ಅದರ ಮಟ್ಟ ಅದಾಗಿಯೆ ನಶಿಸಿ ಕುಸಿಯುವವರೆಗೆ ? ಅಲ್ಲಿಯವರೆಗೂ ಈ ಅಶಾಂತಿಯನ್ನು 'ಕರ್ಮ' ವೆನ್ನುವ ರೀತಿ ನಿರಂತರವಾಗಿ ಅನುಭವಿಸುತ್ತಲೆ ಇರಬೇಕೆ ..? ಅದೆಂತೆ ಇರಲಿ, ಇದುವರೆವಿಗೂ ಪೇರಿಸಿಟ್ಟುಕೊಂಡದ್ದನ್ನೆಲ್ಲ ಒಂದೆ ಬಾರಿಗೆ ಇಳಿಸಿಕೊಂಡು 'ಉಸ್ಸಪ್ಪಾ' ಎಂದು ನಿರಾಳ ನಿಟ್ಟುಸಿರು ಬಿಡಲು ಸಾಧ್ಯವೆ ಎನ್ನುವುದು ಅನುಮಾನಾಸ್ಪದವಾದರು, ಅದರ ಸಾಧ್ಯಾಸಾಧ್ಯತೆಯನ್ನು ಒಮ್ಮೆ ನೋಡಿಬಿಡುವುದೊಳಿತು - 'ಅಸಾಧ್ಯ' ಎಂಬ ನಿಲುವಿಗೆ ಖಚಿತವಾಗಿ ತಲುಪುವ ಮೊದಲು.. ಒಟ್ಟಾರೆ ನಮ್ಮ ಸಂಗತಾಸಂಗತ ನಡುವಳಿಕೆಗಳ ಮೊತ್ತವೆ, ಸ್ಮೃತಿರೂಪದಲ್ಲಿ ತ್ರಿಗುಣದೊಂದು ರೂಪಿನ ಪ್ರಧಾನತೆಯಲ್ಲಿ ಶೇಖರವಾಗಿರುತ್ತದೆಂದರೆ - ಅದು ಪ್ರತಿ ಘಟನೆಯನ್ನು ಅದರ ಹಿನ್ನಲೆ ವಿವರಗಳ ಸಮೇತ ತನ್ನ ಸ್ಮೃತಿಯಲ್ಲಿ ಕೆತ್ತಿಟ್ಟುಕೊಂಡು, ಅದರ ನೆನಪಿನ ಗುರುತು ಚೀಟಿಯನ್ನು ಸ್ಥೂಲ ಕಾಲದ 'ಡೇಟ್ ಸ್ಟ್ಯಾಂಪಿ'ನ ಮೊಹರಿನ ಸಮೇತ, ಯಾವುದೊ ನೆನಪಿನ ಕಿರು ಕುರುಹಾಗಿಸಿ-ಗುರುತಾಗಿಸಿ ಅಂಟಿಸಿಕೊಂಡು ಕೂತಿರುತ್ತದೊ ಏನೊ - ಎಲ್ಲೊ ಸೃತಿ ಶೇಖರಣೆಯ ಕೋಶದ ಸಂದುಗಳಲ್ಲಿ... ಮೂಲತಃ ಕೋಶದಲ್ಲಿರುವುದು ಶಕ್ತಿಯೆ ಆದರು, ಅದು ಅದರ ಮೂರೂ ರೂಪಾಂತರಗಳಾದ ಇಚ್ಛಾ-ಜ್ಞಾನ-ಕ್ರಿಯಾ ಶಕ್ತಿಯ ರೂಪಲ್ಲಿ ಪ್ರಸ್ತುತವಿರುವುದರಿಂದ, ಈ ಸ್ಮೃತಿಗಳೆಲ್ಲ ಜ್ಞಾನಶಕ್ತಿಯ ಭಾಗವಾಗಿ (ಅರ್ಥಾತ್ ನೆನಪನ್ನು ಬಿಚ್ಚುವ ಕೀಲಿ ಕೈಯಾಗಿ) ಪ್ರತಿಯೊಂದು ಮೂಲಕ್ರಿಯೆಯ ವಿಂಗಡಿತ ರೂಪದಲ್ಲಿ ಶೇಖರವಾಗಿರಬೇಕು. ಆದರೆ ಈ ಶೇಖರಣೆ ಅಷ್ಟು ಮಾತ್ರಕ್ಕೆ ಸೀಮಿತಗೊಳ್ಳದೆ, ಈ ಜ್ಞಾನಸ್ಮೃತಿಯನ್ನು ತ್ರಿಗುಣಗಳಿಗನುಗುಣವಾಗಿ ವಿಂಗಡಿಸಿ ಮೂರು ಗುಣದ ಪೆಟ್ಟಿಗೆಯಲ್ಲಿ ಸಂಗ್ರಹಿಸಿಡುತ್ತಿರಬೇಕು (ಈ ತ್ರಿಶಕ್ತಿಗಳಿಂದಲೆ ಉದ್ಭವವಾದ ಶಕ್ತಿಯ ರೂಪಾಂತರಗಳೆ ರಾಜಸ-ತಾಮಸ-ಸಾತ್ವಿಕತೆಯ ತ್ರಿಗುಣಗಳಾದ ಕಾರಣ). ಆ ಸಂಗ್ರಹದಲ್ಲಿ ಅದರ ಹಿನ್ನಲೆಯ ಪ್ರತಿ ವಿವರವನ್ನು  ಈಗಾಗಲೆ ಇಟ್ಟುಕೊಂಡಿರುವುದರಿಂದ ಅದರನುಸಾರವಾಗಿ ಆದ ಸಾತ್ವಿಕಶಕ್ತಿಯ ನಷ್ಟ ಅಥವಾ ಲಾಭ, ತಾಮಸ- ರಾಜಸದ ಲಾಭ-ನಷ್ಟ ಎಲ್ಲವೂ ಒಂದೊಂದು ಸಾಲಿನ ಮಾಹಿತಿಗಳಾಗಿ ದಾಖಲೆಗೊಳ್ಳುತ್ತಿರಬೇಕು. ಇದೊಂದು ರೀತಿ ನಮ್ಮ ಅಕೌಂಟಿಂಗಿನಲ್ಲಿ ಮಾಡುವ 'ಬುಕ್ ಕೀಪಿಂಗ್' ಎಂಟ್ರಿಯ ಹಾಗೆ. ಬಹುಶಃ ನಮ್ಮ ಪೂರ್ವಿಕರು, ಹಿರಿಯರು ಹೇಳುತ್ತಿದ್ದ, ನಮ್ಮ ಪಾಪ-ಪುಣ್ಯಗಳನ್ನೆಲ್ಲ ಚಿತ್ರಗುಪ್ತರು ತಮ್ಮ ಕಡತದಲ್ಲಿ ಲೆಕ್ಕ ಬರೆದಿಡುತ್ತಾರೆಂದು ಹೇಳುತ್ತಿದ್ದುದರ ಅರ್ಥ ಇದೆ ಇರಬೇಕು...! ಅನೈತಿಕ 'ಪಾಪ'ದ ಲೆಕ್ಕವೆಲ್ಲ ಆ ಸ್ಮೃತಿಕೋಶದ 'ಜ್ಞಾನಶಕ್ತಿಯ-ತಾಮಸದ' ಲೆಕ್ಕಕ್ಕೆ ಬರೆದರೆ, ಪುಣ್ಯಗಳೆಲ್ಲ ಅದೆ 'ಜ್ಞಾನಶಕ್ತಿಯ-ಸಾತ್ವಿಕದ' ಲೆಕ್ಕಕ್ಕೆ ಬರೆಯುತ್ತ...

ಅಲ್ಲಿಗೆ ಸಾರಾಂಶದಲ್ಲಿ ರಾಜಸ-ಸಾತ್ವಿಕ-ತಾಮಸದ ತ್ರಿಗುಣ ಬಂಧದ ಸಮತೋಲಿತ ಶಕ್ತಿ, ಬಾಹ್ಯ ಪ್ರಲೋಭನೆಯೆಂಬ ಮಾಯೆಯಿಂದ ವಿಚಲಿತವಾದಾಗ ಉಂಟಾಗುವ ಸಮತೋಲನದ ಏರುಪೇರಲ್ಲಿ ತಾಮಸ ಪ್ರಬಲವಾದರೆ,  ಅದರಿಂದ ತಪ್ಪೆಸಗಿಸುವ ಕಾರ್ಯಕ್ಕೆ ಕುಮ್ಮುಕ್ಕು, ಪ್ರಲೋಭನೆ. ಆಸೆ , ಅತೃಪ್ತಿ ಗಳಂತಹ 'ನೆಗಟೀವ್ ಶಕ್ತಿ' ತರಂಗಗಳೆ ಈ ವಿಚಲನೆಗೆ ಕಾರಣವಾಗುತ್ತವೆ. ನಿರ್ಲಿಪ್ತ ರೂಪದ ಸಾತ್ವಿಕತೆಯೊಡ್ಡುವ ಜಡತ್ವವನ್ನು (ಇನರ್ಶಿಯಾ) ನಿವಾರಿಸಿಕೊಂಡು ತಾಮಸದತ್ತ ತಳ್ಳುತ್ತದೆ ಈ ಋಣಾತ್ಮಕ ಶಕ್ತಿಗಳು. ಅದನ್ನು ಆಗಗೊಡದಿರುವ ಒಂದೆ ದಾರಿಯೆಂದರೆ - ಅದನ್ನು ಶೂನ್ಯಗೊಳಿಸುವ ಬಲವಿರುವ ಸಾತ್ವಿಕ ಕ್ರಿಯೆಗಳ 'ಪಾಸಿಟೀವ್ ಶಕ್ತಿ' ಬಳಸಿ ತಾಮಸದಿಂದ ಸಾತ್ವಿಕದತ್ತ ದೂಡಿಸಬೇಕು.  ಒಂದು ರೀತಿ ಸಾರಾಂಶದಲ್ಲಿ ಹೇಳುವುದಾದರೆ, ಕರ್ಮಯೋಗದ 'ಕ್ರಿಯೆ'ಯಿಂದಾಗಲಿ, ಅಥವ ಜ್ಞಾನಯೋಗದ 'ಜ್ಞಾನ'ದಿಂದಾಗಲಿ 'ರಾಜಸ ಮತ್ತು ಸಾತ್ವಿಕದ' ಒಟ್ಟು ಮೊತ್ತ 'ತಾಮಸ ಮತ್ತು ಸಾತ್ವಿಕಗಳ' ಒಟ್ಟು ಮೊತ್ತವನ್ನು ಮೀರಿಸುವಂತಾದರೆ ಅದು ವಿಜಯದ ಮೊದಲ ಮೆಟ್ಟಿಲು. ಆ ಎರಡು ಮೊತ್ತಗಳ ನಡುವಿನ ಅಂತರ ಹೆಚ್ಚಾದಷ್ಟು, ಆಧ್ಯಾತ್ಮಿಕ ಉನ್ನತಿಯತ್ತ ನಡೆದಂತೆ ಲೆಕ್ಕ. ಅಂತಿಮ ಗುರಿಯಾಗಿ ತಾಮಸವೆಲ್ಲ ಪೂರ್ತಿ ಕುಗ್ಗಿ ಕನಿಷ್ಠವಾಗಿ, ಬರಿಯ ಸಾತ್ವಿಕವೆ ಎಲ್ಲೆಡೆ ಉಳಿದುಬಿಟ್ಟಿತೆಂದರೆ ಅದು ಹೆಚ್ಚುಕಡಿಮೆ ನಿಜಯೋಗಿತ್ವದ ಸ್ಥಿತಿ ಮುಟ್ಟಿದಂತೆ.  ಇಷ್ಟೆಲ್ಲ ಅಂತರಂಗಿಕ ಜಿಜ್ಞಾಸೆ ನಡೆಸಿದ ಮೇಲೆ, ಹೊರಗಿನಿಂದ ಪಡೆಯಬಹುದಾದ ಸೂಕ್ತ 'ಜ್ಞಾನಶಕ್ತಿ'ಯ ಮೂಲಕ ಸಾತ್ವಿಕಶಕ್ತಿಯ ಅಂಶ ಹೆಚ್ಚುವ 'ರಾಸಾಯನಿಕ ಪ್ರಚೋದನೆ' ಸಾಧ್ಯವೆಂದಾದ ಮೇಲೆ, ಇನ್ನು ಮುಂದೆ ಆ ಹಾದಿಯನ್ನನುಕರಿಸುತ್ತಲೆ 'ಸಾತ್ವಿಕ ಪ್ರೋಟೀನು'ಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬಹುದು.. ಆದರೂ ಈಗಾಗಲೆ ವರ್ಷಾಂತರದಿಂದ ಪೇರಿಸಿಕೊಂಡಿರುವ 'ತಾಮಸಿ ರಾಸಾಯನಿಕ'ವನ್ನು ಕರಗಿಸುವ ದಾರಿಯೂ ಗೊತ್ತಾಗಿಬಿಟ್ಟಿದ್ದರೆ ಹಳೆಯ ಭಾರವನ್ನು ಒಂದೆ ಬಾರಿಗೆ ಇಳಿಸಿಕೊಂಡು ಬಿಡಬಹುದಿತ್ತೇನೊ? ಬಾಹ್ಯದ 'ಸೂಕ್ತ ಕರ್ಮ'ಗಳಿಂದ, ಅಂತರಂಗದ ಜ್ಞಾನಶಕ್ತಿ ರೂಪವನ್ನು ಧನಾತ್ಮಕವಾಗಿ ಉದ್ದೀಪಿಸುವ ಹಾಗೆ, ಅದೇ ಶಕ್ತಿಯ ಹೆಚ್ಚುವರಿ ಪ್ರಮಾಣವನ್ನು ಬಳಸಿ ಹಳೆಯ ಕಡತವನ್ನು ಕರಗಿಸುವಂತಿದ್ದರೆ ಎಷ್ಟು ಸೊಗಸಿರುತ್ತಿತ್ತು ? ಒಂದರ್ಥದಲ್ಲಿ ಚಿತ್ರಗುಪ್ತನ ಬಳಿಯಿರುವ ನಮ್ಮ ಪಾಪದ ಚೀಲಕ್ಕೆ ನೇರವಾಗಿ ಕೈ ಹಾಕಿ, ಅದರೊಳಗೇನೊ 'ಗುಳಿಗೆ' ಬಿಟ್ಟು ಒಂದೆ ಏಟಿಗೆ ಕರಗಿಸಿ ಹಗುರ ಮಾಡಿಕೊಂಡ ಹಾಗೆ !? ಆದರದು ಸಾಧ್ಯವಿರುವಂತೆ ಕಾಣುತ್ತಿಲ್ಲವಲ್ಲ ? ಆದರೂ........ ಯಾಕೆ ಸಾಧ್ಯವಿಲ್ಲ ಅಂದುಕೊಳ್ಳಬೇಕು...? ಈ ಪಾಪವೂ ಒಂದಾನೊಂದು ಕಾಲದಲ್ಲಿ ತಾಮಸ ರೂಪದಲ್ಲಿ ಬಂದು ಸೇರಿಕೊಂಡ ಸರಕೇ ಅಲ್ಲವೆ ? ಇವೆಲ್ಲವೂ 'ಕಾಲದ ಸ್ಥೂಲ ಮೊಹರು' ಹಾಕಿಕೊಂಡು ತಮ್ಮ ಗುರುತಿನ ಚೀಟಿ ಭದ್ರವಾಗಿ ಹಿಡಿದುಕೊಂಡು ಕೂತಿರುವ ಆಸಾಮಿಗಳೆ ಅಲ್ಲವೆ ? ಆ ಗುರುತಿನ ಚೀಟಿಯನ್ನೆ ಆಧಾರವಾಗಿಟ್ಟುಕೊಂಡು ಒಂದೊಂದನ್ನೆ ಹುಡುಕಿ ಮೇಲೆತ್ತಿ, ತಾಮಸದಿಂದ ಸಾತ್ವಿಕ ಪ್ರೋಟೀನುಗಳಾಗಿ (ರಾಸಾಯನಿಕವಾಗಿ) ಬದಲಿಸಲು ಸಾಧ್ಯವಿದ್ದರೆ ಸಾಕಲ್ಲವೆ - ಕನಿಷ್ಠ ಆ ಗುರುತಿನ ಚೀಟಿ ಹಿಡಿದು ಕೂತಿರುವ ದೊಡ್ಡ ಗಾತ್ರದವಕ್ಕಾದರೂ..? ಅಂದ ಹಾಗೆ ಇದೊಂದು 'ಪೂರ್ವಾಶ್ರಮ ಸ್ಥಿತಿಗೆ ಮರಳಿಸುವ 'ರಿವರ್ಸಿಬಲ' ಪ್ರಕ್ರಿಯೆ' ಯಾಕಾಗಿರಬಾರದು?

ಚಲನೆಯಲ್ಲಿರುವ ವಸ್ತುವಿನ ಮೇಲಾಗುವ ಪ್ರತಿಯೊಂದು ಕ್ರಿಯೆಗು ಅದರ ಸಮಾನಾರ್ಥಕವಾದ ಮತ್ತು ವಿರುದ್ಧ ದಿಕ್ಕಿನ ಪ್ರತಿಕ್ರಿಯೆ ಇರುತ್ತದೆ ಎನ್ನುತ್ತದೆ ನ್ಯೂಟನ್ನನ ಚಲನೆಯ ಮೂರನೆ ನಿಯಮ. ಹಿಂದೆಲ್ಲಾ ಕೈಗೊಂಡಿರಬಹುದಾಗಿದ್ದ ತಾಮಸಿ ಚಟುವಟಿಕೆಗಳನ್ನು ಕ್ರಿಯೆಯೆಂಬ ಮಸೂರದಲ್ಲಿ ನೋಡಿದರೆ ಅದರ ಫಲಿತವಾಗುತ್ಪತ್ತಿಯಾದ ಅಂತರಿಕ ತಾಮಸಿಶಕ್ತಿಯ ಪ್ರಾಬಲ್ಯವನ್ನು ಅದರ ಪ್ರತಿಕ್ರಿಯೆಯೆಂದು ಕರೆಯಬಹುದು. ಅದೇ ತರ್ಕದಲ್ಲಿ ಅದರ ವಿಲೋಮವಾಗಿ ಚಿಂತಿಸಿದರೆ, ಒಳಗಿನ ತಾಮಸಿಶಕ್ತಿಯನ್ನು ದಮನಿಸುವ ಕ್ರಿಯೆ ನಡೆದರೆ ಅದರ ಪ್ರತಿಕ್ರಿಯೆಯಾಗಿ ಹೊರಗಿನ ತಾಮಸಿ ಚಟುವಟಿಕೆಗಳು ತಗ್ಗಿ ಹೋಗಬೇಕು. ಆದರೆ ಪ್ರತಿ ಜೀವಕೋಶಕ್ಕೂ ಹೋಗಿ ಕತ್ತಿ ಹಿಡಿದುಕೊಂಡು ತಾಮಸಿಶಕ್ತಿಯ ತುಣುಕನ್ನು ಹುಡುಕಿ ಕತ್ತರಿಸಲಂತು ಸಾಧ್ಯವಿಲ್ಲವಲ್ಲ? ಅಂದರೆ ವಿಲೋಮ ಪರಿಣಾಮವನ್ನುಂಟು ಮಾಡಬೇಕಿದ್ದರೂ ಹೊರಗಿನಿಂದಲೆ ಏನಾದರೂ ಮಾಡಬೇಕೆ ಹೊರತು ಒಳಗಿನಿಂದ ಸಾಧ್ಯವಿಲ್ಲ... ಅಂದ ಹಾಗೆ ಹಳೆಯ ತುಣುಕುಗಳೆಲ್ಲ ಸ್ಮೃತಿರೂಪದ ಸಂಕೇತದಲ್ಲಿ ಒಳಗೆ ಕೂತಿರುವುದರಿಂದ, ಪ್ರತಿ ತಾಮಸಿ ಸ್ಮೃತಿ-ತುಣುಕಿಗು, ಸಮಾನಾಂಶವುಳ್ಳ ಆದರೆ ಅದರ ವಿರುದ್ಧ ಗುಣದ ಹೊಸ ಸ್ಮೃತಿ-ತುಣುಕನ್ನು ಹೊಸದಾಗಿ ಪ್ರಚೋದಿಸಿದರೆ, ಅದು ಒಳಹೊಕ್ಕುಹೋಗಿ ಮೊದಲಿನ ಪರಿಣಾಮವನ್ನೆ ತಿರುವು ಮುರುವಾಗಿಸಬೇಕಲ್ಲವೆ - ಮತ್ತದೆ ಡಬಲ್ ಎಂಟ್ರಿ ಅಕೌಂಟಿನ ಹಾಗೆ ? ಯಾರಿಂದಲೊ ಪಡೆದಿದ್ದ ಹಣ ಹಿಂದಿರುಗಿಸದೆ ಮೋಸ ಮಾಡಿದ್ದಾಗ ಅದು ಒಳಗೆ ತಾಮಸೀ ಸ್ಮೃತಿ-ತುಣುಕಾಗಿ (ಪಾಪದ ಚೀಲದಲ್ಲಿ) ಸೇರಿಕೊಂಡಿತ್ತೆಂದಿಟ್ಟುಕೊಳ್ಳೋಣ.. ಈ ತರ್ಕದಲ್ಲಿ ಆ ಹಳೆಯ ಪಾಪ ಪರಿಹಾರವಾಗುವಂತೆ ಆ ವ್ಯಕ್ತಿಯನ್ನು ಹುಡುಕಿಕೊಂಡು ಹೋಗಿ ಅವನ ಸಾಲವನ್ನು, ಬಡ್ಡಿ ಸಮೇತ ಹಿಂತಿರುಗಿಸಿ, ಕ್ಷಮೆ ಯಾಚಿಸಿದರೆ ಅದರಿಂದುತ್ಪನ್ನವಾಗುವ ಸಾತ್ವಿಕ ಸ್ಮೃತಿ-ತುಣುಕು, ಮತ್ತೆ ಅದೆ ತಾಮಸಿ ಸ್ಮೃತಿ-ತುಣುಕಿನ ಜಾಡು ಹಿಡಿದುಕೊಂಡು ಹೋಗಿ, ಅದರ ಗುರುತಿನ ಸುಳಿವು ಹಿಡಿದು ಅದರ ಸ್ಥಾನದಲ್ಲೆ ರಿವರ್ಸ್ ಎಂಟ್ರಿಯಾಗಿ ದಾಖಲಾಗುತ್ತ, ನಿವ್ವಳ ಫಲಿತದಲ್ಲಿ ಅಲ್ಲಿದ್ದ ಅಷ್ಟೆ ಮೊತ್ತದ ತಾಮಸ ಶಕ್ತಿಯನ್ನು ಎತ್ತಿ ಹೊರಹಾಕಬೇಕಲ್ಲವೆ?  ಅಲ್ಲಿಗೆ 'ಸಾಲ ಪಡೆದ ರೂಪದಲ್ಲಿ' ಆಯ್ಕೆ ಮಾಡಿಕೊಂಡಿದ್ದ ಅದೆ ತಾಮಸ ಶಕ್ತಿಯನ್ನು, 'ಅದೇ ಸಾಲವನ್ನು ಹಿಂದಿರುಗಿಸುವ ಮೂಲಕ', ಅದರ ಪ್ರತಿರೂಪಿ ಸಾತ್ವಿಕ ಶಕ್ತಿಯಿಂದಲೆ ನಿವಾರಿಸಿಕೊಂಡಂತಾಯಿತಲ್ಲವೆ ? ಅಂದರೆ ಹಳೆಯ ಕಡತದ ಪಾಪದ ತುಂಡೊಂದನ್ನು, ಅದರ ಪ್ರತ್ಯಾಸ್ತ್ರದ ತುಂಡಿನಿಂದ ಪೂರ್ಣವಾಗಿ ಮೂಲೋತ್ಪಾಟನೆಗೈದ ಹಾಗೆ...? ಇದರರ್ಥ ಹಳೆಯದನ್ನು ಕಡಿದು ಹಾಕಲು ಕೂಡ ಕ್ಷಿಪ್ರವಾದ ದಾರಿಯಿದೆಯೆಂದಲ್ಲವೆ ? ಇದು ನಿಜವೆ ಆದರೆ, ಹಳೆಯ ನೆನಪುಗಳನ್ನೆಲ್ಲ ಹೆಕ್ಕುತ್ತ  ತಾಮಸಿ ನೆನಪುಗಳನ್ನೆಲ್ಲ ಹುಡುಕಿ, ಅವುಗಳನ್ನು ಒಂದೊಂದಾಗಿ ಪರಾಮರ್ಶಿಸಿ ಅವುಗಳ ಪ್ರತ್ಯಾಸ್ತ್ರವೇನೆಂದು ಕಂಡುಹಿಡಿದು ಅವನ್ನು ಕಾರ್ಯಗತಗೊಳಿಸಿದರೆ, ಒಂದೊಂದಾಗಿ ಹಳೆಯ ಭಾರಗಳೆಲ್ಲ ಹಗುರಾಗಿ ಹೋಗಬೇಕಲ್ಲವೆ...?! ಹೆಚ್ಚು ಭಾರದವನ್ನು ಹೆಕ್ಕಿ ಮೊದಲು ಅವನ್ನು ನಿವಾರಿಸಿಕೊಂಡರೆ, ಒಟ್ಟಾರೆ ಮೊತ್ತದಲ್ಲಿ ಹೆಚ್ಚು ಭಾರ ಬೇಗನೆ ಕರಗಿಸಲು ಸಾಧ್ಯವಾಗುತ್ತದೆ. ಕೆಲವದರ ಪ್ರತ್ಯಾಸ್ತ್ರದಿಂದ ನೂರಕ್ಕೆ ನೂರು ತಿರುವು ಮುರುವಾಗಿಸಲು ಸಾಧ್ಯವಿರದಿದ್ದರು, ಕರಗಿದಷ್ಟಾದರೂ ಲಾಭವಾಗುವುದಲ್ಲವೆ ? ಅಲ್ಲದೆ ಹಳೆಯದನ್ನೆಲ್ಲ ಒಂದೆ ಬಾರಿಗೆ, ಒಂದೆ ಏಟಿನಲ್ಲಿ ಕರಗಿಸಬೇಕೆಂದೇನೂ ಇಲ್ಲ.. ಅದು ಸಾದ್ಯವೂ ಇಲ್ಲವೇನೊ - ಹುಟ್ಟಿನಿಂದ ಮಾಡಿಟ್ಟ ಪಾಪಗಳ ಗಣಿಸುತ್ತ, ಎಣಿಸುತ್ತ, ಲೆಕ್ಕವಿಡುತ್ತ ಹೋಗುವವರಾದರೂ ಯಾರು? ದೊಡ್ಡ ದೊಡ್ಡದನ್ನು ಮೊದಲು ಹುಡುಕಿ ನಿವಾರಿಸಿಕೊಂಡರೆ ಅದರಲ್ಲಿ ಸಿಗುವ ತಕ್ಷಣದ ನಿರಾಳತೆಯನ್ನೆ ಮೂಲಧನವಾಗಿಸಿಕೊಂಡು, ಮಿಕ್ಕ ನೆನಪಿಗೆ ಬಂದವುಗಳನ್ನು ನಿಧಾನವಾಗಿ, ಕ್ರಮೇಣವಾಗಿ, ಒಂದೊಂದಾಗಿ ನಿವಾರಿಸಿಕೊಳ್ಳುತ್ತ ಹೋಗಬಹುದು - ಜೀವನ ಪೂರ್ತಿ. ಈಗ ಇನ್ನು ಸ್ಪಷ್ಟವಾಗಿ ಅರಿವಾಗುತ್ತಿದೆ ಮಾಂಕ್ ಸಾಕೇತರು ಯಾಕೆ ಹಳೆಯದನ್ನೆಲ್ಲ ನೆನಪಿಸಿಕೊಂಡು ವಿಮರ್ಶಿಸಿಕೊ ಎಂದು ಹೇಳಿದ್ದರೆಂದು...! ಅವು ಸೂಕ್ತವಾಗಿ ನೆನಪಾದರೆ ಅವುಗಳ ಪ್ರತ್ಯಾಸ್ತ್ರ ಹುಡುಕುವುದು ಸುಲಭವಾಗುತ್ತದೆಂದು ಅವರಿಗಾಗಲೆ ಗೊತ್ತಿತ್ತೆಂದು ಕಾಣುತ್ತದೆ. ನಿಜ ಹೇಳಬೇಕೆಂದರೆ ಬರಿಯ ಹಳೆಯ ತಾಮಸಿ ಘಟನೆಗಳ ನೆನಪು ಮಾಡಿಕೊಂಡರೆ ಸಾಕು.. ನಿಜಕ್ಕೂ ಸಾತ್ವಿಕ ಮತ್ತು ರಾಜಸದ ಅಗತ್ಯವಿಲ್ಲ...ಅವು ಹೇಗೂ ಇದ್ದಲ್ಲೆ ಇರುತ್ತವೆ ತಮ್ಮ ಧನಾತ್ಮಕತೆಯೊಡನೆ. ಆದರೆ ತಾನು ಹಿಂದೆ 'ರಾಜಸ ಪ್ರೇರಿತ' ಎಂದು ನೆನೆಸಿಕೊಂಡಿದ್ದ ಘಟನೆಗಳಲ್ಲೂ ಅದೆಷ್ಟೊಂದು ತಾಮಸಿ ಅಂಶಗಳಿತ್ತೆಂದು ಈಗರಿವಾಗುತ್ತಿದೆ.. ಅವಕ್ಕೆಲ್ಲಕ್ಕು ಪ್ರತ್ಯಾಸ್ತ್ರ ಸಾಧ್ಯವಿದೆಯೆ ಎಂದು ಹುಡುಕಿ ನೋಡಬೇಕು.. ಅದಕ್ಕೂ ಮೊದಲು ಸುಲಭವಾಗಿ ನೆನಪಾಗುವ, ಇತ್ತೀಚಿನ, ಗೊತ್ತಿರುವ 'ದೊಡ್ಡ'ದನ್ನೆಲ್ಲ ಮೊದಲು ನಿವಾರಿಸಿಕೊಳ್ಳಬೇಕು.. ಅದರಲ್ಲೂ ಕುನ್. ಸು ರೀತಿಯದನ್ನು ಮೊದಲು ಪರಾಮರ್ಶಿಸಬೇಕು......!

ಅಲ್ಲಿಗೆ ಈ ಚಿಂತನಾ-ಶೋಧನ ಯಜ್ಞದ ಕಟ್ಟ ಕಡೆಯ ಹಂತಕ್ಕೆ ಬಂದು ತಲುಪಿದಂತಾಯ್ತು....! ತನ್ನನ್ನು ಕಾಡುತ್ತಿದ್ದ ಆತಂಕ, ಕಳವಳ, ಅಸ್ಥಿರತೆಗಳನ್ನೆಲ್ಲ ಪರಿಹರಿಸಿಕೊಳ್ಳುವ ದಾರಿಯನ್ನು ಕಂಡುಕೊಂಡಂತಾಯಿತು....! ಇನ್ನೇನಿದ್ದರು ಅದನ್ನು ನಿಜರೂಪದಲ್ಲಿ ಅಳವಡಿಸಿಕೊಳ್ಳುವ ಪಂಥವಷ್ಟೆ ಬಾಕಿ... ಬರಿ ಹೊಸತನ್ನು ಮಾತ್ರವಲ್ಲದೆ ಹಳತಿನ ಲೆಕ್ಕವನ್ನು ಚುಕ್ತ ಮಾಡಬಹುದೆಂದಾದ ಮೇಲೆ ನಿಜರೂಪದಲ್ಲಿ ಅಳವಡಿಸಿಕೊಂಡು ಪರಿಪಾಲಿಸುವುದೇನು ಮಹಾನ್ ಕಾರ್ಯವಾಗುವುದಿಲ್ಲ. ಈಗ ಆಲೋಚಿಸಿದರೆ, ಬರಿಯ ವೈಯಕ್ತಿಕ ಮಾತ್ರವೇನು? ವ್ಯಕ್ತಿಯೊಬ್ಬ ಈ ಹಾದಿ ಹಿಡಿದು ಹೆಚ್ಚೆಚ್ಚು ಸಾತ್ವಿಕಶಕ್ತಿ ಗಳಿಸಿಕೊಂಡ ಹಾಗೆ ಅದನ್ನು ಕೇವಲ ತನ್ನ ಸ್ವಂತಕ್ಕೆ ಮಾತ್ರವಲ್ಲದೆ ಇತರರ ಉಪಯೋಗಕ್ಕೂ ಬಳಸಬಹುದೇನೊ, ಇದೇ ಸಿದ್ದಾಂತದ ವಿಸ್ತರಿಸಿದ ತರ್ಕದಲ್ಲಿ... ! ಬಹುಶಃ ನಿಜವಾದ ಸಾಧು-ಸಂತರು, ಋಷಿ-ಮುನಿಗಳು ಪಡೆಯುವ ವಿಶೇಷ ಶಕ್ತಿಗಳೆಲ್ಲ ಇದರ ಕಾರಣದಿಂದಲೆ ಹೊಮ್ಮಿದವಾಗಿರಬೇಕು. ಡೊಂಗಿ ಬಾಬಾಗಳನ್ನು, ಕಳ್ಳ ಜೋಗಿ - ಸನ್ಯಾಸಿಗಳನ್ನು ಹೊರತುಪಡಿಸಿ, ನಿಜವಾದ ಪವಾಡ ಮಾಡುವ ತಾಕತ್ತಿನವರು ಅದನ್ನು ಮಾಡಲು ಸಾಧ್ಯವಾಗುವುದು ಅವರಲ್ಲಿರುವ ಉನ್ನತಮಟ್ಟದ ಭೌತಿಕ ಸಾತ್ವಿಕಶಕ್ತಿಯನ್ನು, ಮಾನಸಿಕ ಅಮೂರ್ತ ತರಂಗಶಕ್ತಿ ರೂಪಾಗಿ ಮಾರ್ಪಡಿಸುವ ಬಲದಿಂದಲೆ ಬಂದುದಿರಬೇಕು. ನಿಜಕ್ಕೂ ಎಷ್ಟು ಜನ ಅದನ್ನು ಸಾಧಿಸಬಲ್ಲವರು ಅಥವಾ ಸಾಧಿಸಿದವರು ಎನ್ನುವುದು ಬೇರೆ ವಿಷಯ.. ಅಂತಹ ನಿಜ ಸಾಧಕರು ಜನಗಳ ಮಧ್ಯೆ ರಾಜಾರೋಷವಾಗಿ ಪ್ರಕಟಗೊಳ್ಳುವಂತೆ ಜೀವಿಸಿರಲು ಅವರ ಆ ಅತೀವ ಸಾತ್ವಿಕಶಕ್ತಿಯೆ ಬಿಡುವುದಿಲ್ಲವೆಂದು ಕಾಣುತ್ತದೆ. ಅದಿರಲಿ.. ಈಗ ಕಂಡುಕೊಂಡ ಸತ್ಯವನ್ನು ಬೇಗನೆ ಕಾರ್ಯರೂಪಕ್ಕಿಳಿಸುವ ದಾರಿಯನ್ನು ಹುಡುಕಲ್ಹೊರಡುವುದೊಳಿತು... ಇನ್ನು ಈ ರಾತ್ರಿ ಕಳೆದರೆ ನಾಳೆ ನಾಳಿದ್ದು ಶ್ರಮದಾನದ ದಿನ. ಇಂದು ರಾತ್ರಿ ಎಷ್ಟು ಸಾಧ್ಯವೊ ಅಷ್ಟು ಹೆಚ್ಚು ನಿದಿರೆ ಮಾಡಿಬಿಡಬೇಕು; ಇಲ್ಲವಾದರೆ ಭೌತಿಕ ಶ್ರಮದಲ್ಲಿ ಮಾನಸಿಕ ಆಲಸಿಕೆಯೂ ಸೇರಿ ಕೆಲಸ ಕೆಟ್ಟುಹೋಗುತ್ತದೆ... ಸದ್ಯಕ್ಕೆ ಪರಿಹಾರದ ದಾರಿ ಗೊತ್ತಾಗಿರುವುದರಿಂದ ಮಿಕ್ಕುಳಿದ ಕಾರ್ಯವೆಂದರೆ ಯಾವ ಯಾವ ತಾಮಸೀ ಕೃತ್ಯಗಳು ದೊಡ್ಡ ಪ್ರಭಾವ ಬೀರಿರಬಹುದೊ ಅವುಗಳನ್ನು ಹೆಕ್ಕಿ ಪಟ್ಟಿ ಮಾಡಿಕೊಂಡು ಹೋಗುವುದು.. ಇಲ್ಲಿಂದ ವಾಪಸ್ಸಾಗುವ ಮೊದಲು ಅವಕ್ಕೆ ಪರಿಹಾರದ ಪ್ರತ್ಯಾಸ್ತ್ರಗಳನ್ನು ಹುಡುಕಬೇಕಾದರೂ, ಈ ರಾತ್ರಿಗೆ ಕೇವಲ ಅವುಗಳನ್ನು ಗುರುತು ಹಾಕಿಕೊಂಡರೆ ಸಾಕು. ಮಿಕ್ಕೆರಡು ದಿನಗಳಲ್ಲಿ ಸಮಯ ಸಿಕ್ಕಾಗ ಅವುಗಳ ಪರಿಹಾರದ ಕುರಿತು ಆಲೋಚಿಸಲೂ ಸಾಧ್ಯವಾದರೂ ಆದೀತು. ಆ ಪಟ್ಟಿಯಲ್ಲಿ ಮೊದಲಿಗೆ ಬರುವುದು ನಿಸ್ಸಂದೇಹವಾಗಿ - ಕುನ್. ಸು ಸಂಬಂಧಿತ ಘಟನೆಗಳು. ತನ್ನಿಂದಾಗಿ ಅವಳು ಕೆಲಸ ಕಳೆದುಕೊಂಡಿದ್ದು ಒಂದು ದೊಡ್ಡ ಘಟನೆಯಾದರೆ, ಅವಳು ಪ್ರಲೋಭನೆಗೊಳಗಾಗುವಂತೆ ಮಾಡಿ ನಂಟು ಬೆಳೆಸಲು ತಾನೆ ಕಾರಣವಾದದ್ದು ಮತ್ತೊಂದು... ಅದು ಸಾಲದೆಂಬಂತೆ ಆ ದಿನದ ಮಿಲನದ ಸಂಘಟನೆಯೆ ಮತ್ತೊಂದು ದೊಡ್ಡ ತಾಮಸೀ ಕೃತ್ಯ... ಅವಸರದ ಪ್ರಚೋದನೆಯ ಫಲ ಬೇಡದಿದ್ದರೂ ಹೂವಾಗಿ ಚಿಗುರಿ ಅವಳುದರದ ಫಲವಾಗಲಿಕ್ಕೆ ಹಾತೊರೆದಾಗ, ಅದನ್ನು ಅದನ್ನು ನಿವಾರಿಸಿಕೊಳ್ಳುವ ಸಲುವಾಗಿ ಅವಳನ್ನು, ಗರ್ಭಪಾತ ಮಾಡಿಸಿಕೊಳ್ಳುವ ಮಟ್ಟಕ್ಕೆ ದೂಡಿದ್ದೇನು ಕಡಿಮೆ ಕೃತ್ಯವೆ? ಭ್ರೂಣ ಹತ್ಯೆ ಬ್ರಹ್ಮಹತ್ಯಾ ದೋಷಕ್ಕೆ ಸಮನೆನ್ನುತ್ತಾರೆ.. ಅದರ ಪಾಪದ ಫಲವಾಗಿಯೆ ಪಾಪುವಿನ ಆಸ್ಪತ್ರೆಯ ಪ್ರಕರಣ ಉಂಟಾಯಿತೊ ಏನೊ? ಶಿಶುವಿನಾಕ್ರೋಶದ ರೋಷ ಶಿಶುವಿನ ದುರ್ಗತಿಯ ಮೂಲಕವೆ ಪ್ರಕಟವಾದಂತೆ... ಕೆಲಸದಿಂದ ಹೋಗುವ ಕಡೆಯ ತಿಂಗಳು ಕುನ್. ಸು ತಿಂಗಳ ಕಾಫಿಯ ದುಡ್ಡನ್ನು ತೆಗೆದುಕೊಂಡಿರಲಿಲ್ಲ ಇನ್ನು... ಅದನ್ನು ಋಣಬಾಧೆಯಾಗಿ ಕಾಡಲು ಅವಕಾಶ ಕೊಡಬಾರದು... ಅಯ್ಯಯ್ಯೊ..! ಕುನ್. ಸು ಸಂಬಂಧಿಸಿದ ಪಟ್ಟಿಯೆ ಇಷ್ಟುದ್ದ ಬೆಳೆಯುತ್ತಿದೆಯಲ್ಲ ? ಇನ್ನು ಜೀವನವಿಡಿ ಹುಡುಕಿದರೆ ಇನ್ನದೆಷ್ಟು ಸಿಗುತ್ತವೆಯೊ ? ಹೆಜ್ಜೆಜ್ಜೆಗು ಬರಿ ಪಾಪಗಳೆ ತುಂಬಿಕೊಂಡಿರುವಂತಿದೆಯಲ್ಲಾ - ನಮಗರಿವಾಗದ ರೀತಿಯಲ್ಲಿ ? ಇನ್ನು ಸರ್ವೀಸ್ ಅಪಾಟ್ಮೆಂಟಿಗೆ ಕರೆಸಿಕೊಂಡು ಏಮಾರಿದ ಆ ಎಸ್ಕಾರ್ಟ್ ಹುಡುಗಿಯ ಪ್ರಸಂಗ, ಸಲಿಂಗ ಕಾಮಿಯ ಕಥಾನಕ, ಎಂಬಿಕೆ ಮಾಲಿನಲ್ಲಿ ಏಮಾರಿ ಪೇಚಿಗೆ ಸಿಕ್ಕಿದ ಪ್ರಸಂಗ.. ಶಿವ..ಶಿವಾ..! ಛೆ..ಛೆ...!! ಇದೆಲ್ಲದರ ಮಧ್ಯೆ ಮುಖ್ಯವಾದ ಮತ್ತೊಂದು ವಿಷಯ ಮರೆತುಬಿಡಬಾರದು. ಇವೆಲ್ಲವೂ ನಡೆಯುತ್ತಿದ್ದಾಗಲೆ ಅವೆಲ್ಲದರ ಮೊತ್ತವಾಗಿ, ಅವೆಲ್ಲ ಪರೋಕ್ಷವಾಗಿ ಲತಳಿಗಾಗುತ್ತಿದ್ದ ಅನ್ಯಾಯವೆಂದು ಒಮ್ಮೆಯೂ ಅನಿಸಿರಲಿಲ್ಲವಲ್ಲಾ? ಆ ಮೂಲದ ಪಾಪವೇನು ಕಡಿಮೆಯದೆ ? ಅವಳ ಜತೆ ಗಂಟು ಬಿದ್ದ ವಿಲಕ್ಷಣ ಮತ್ತು ಅನಿರೀಕ್ಷಿತ ಹಿನ್ನಲೆ ಅವಳ ಕುರಿತಾದ ಒಂದು ರೀತಿಯ ಅಸಡ್ಡೆ, ಅಲಕ್ಷ್ಯಕ್ಕೆ ಕಾರಣವಾಗಿದ್ದರು, ಕಟ್ಟಿಕೊಂಡಾದ ಮೇಲೆ ಅದಕ್ಕೆಲ್ಲ ತಿಲಾಂಜಲಿಯಿತ್ತು ಮುಂದಿನ ಹಾದಿ ನೋಡಬೇಕಿತ್ತಲ್ಲವೆ..?

ನೆನೆಯುತ್ತ ಹೋದಂತೆ ಹಳೆಯ ಕಡತವೆಲ್ಲ ತೆರೆದುಕೊಳ್ಳುತ್ತ ಎಲ್ಲಾ ಘಟನೆಗಳೂ ಒಂದೊಂದಾಗಿ ಮನಃಪಟಲದಲ್ಲಿ ಮೂಡಿ ಬರತೊಡಗಿದ್ದವು ಶ್ರೀನಾಥನಿಗೆ. ಕೆಲವು ದೊಡ್ಡ ಪರಿಮಾಣದ ತೀವ್ರತರದ್ದವಾದರೆ ಮಿಕ್ಕಿದವು ಸಣ್ಣ ಪುಟ್ಟವು. ಕ್ಲಾಸಿಗೆ ಚಕ್ಕರು ಹಾಕಿದ್ದರಿಂದ ಹಿಡಿದು, ದೇವರಿಗೆ ಕಟ್ಟಿಕೊಂಡಿದ್ದ ಹರಕೆಯನ್ನು ತೀರಿಸದೆ ಉಢಾಫೆ ಮಾಡಿದ್ದು , ಅಪ್ರಬುದ್ಧ ವಯಸಿನ ಮನಸ್ಥಿತಿಯಲ್ಲಿ, ಗೆಳೆತನದಲ್ಲಿ ಮಾಡಿದ್ದ ಮೋಸ, ವಂಚನೆಗಳು, ಫೀಸಿಗೆಂದು ಸುಳ್ಳು ಹೇಳಿ ಮನೆಯಿಂದ ಹಣ ಪಡೆದು ಲಪಾಟಾಯಿಸಿದ್ದು - ಹೀಗೆ ಎಲ್ಲ ತರದ ಕ್ಷುಲ್ಲಕಾಕ್ಷುಲ್ಲಕ ಸಂಗತಿಗಳೆಲ್ಲವೂ ದಟ್ಟ ವಿವರಗಳ ರೂಪದಲ್ಲಿ ಸುಳಿಯತೊಡಗಿದಾಗ, ಶ್ರೀನಾಥನಿಗೆ ಅವೆಲ್ಲವೂ ಒಂದೆ ಬಾರಿಗೆ ಒಂದೆ ಅವಸರದಲ್ಲಿ ಪರಾಮರ್ಶಿಸಿ ಗಮನಿಸಲಾಗುವ ಅಂಶಗಳಲ್ಲವೆಂದು ಹೊಳೆದು, ಸದ್ಯಕ್ಕೆ ಸಣ್ಣಪುಟ್ಟವನ್ನೆಲ್ಲ ಬದಿಗಿಟ್ಟು ಆ ಹೊತ್ತಿನಲ್ಲಿ ಪ್ರಮುಖವಾಗಿ ಕಂಡುಬಂದಿದ್ದವನ್ನು ಮಾತ್ರ ಪರಿಗಣಿಸಿ ಅವಕ್ಕೆ ಮಾತ್ರ ಪರಿಹಾರ-ಪ್ರತ್ಯಸ್ತ್ರ ಹುಡುಕುವುದೆಂದು ನಿರ್ಧರಿಸುತ್ತ, ಮಿಕ್ಕೆಲ್ಲವನ್ನು ಮುಂದಿನ ಸರದಿಗೆ ಮೀಸಲಿಡುವಂತೆ ಪಕ್ಕಕ್ಕೆ ಸರಿಸಿದ ಮಾನಸಿಕವಾಗಿಯೆ. ಆ ನಿರ್ಧಾರಕ್ಕೆ ಬರುವ ಹೊತ್ತಿಗೆ ಸರಿಯಾಗಿ ಇದ್ದಕ್ಕಿದ್ದಂತೆ ಒಳಗೆಲ್ಲ ಏನೋ ಸಂಚಲನವಾದವನಂತೆ, ಯಾರೊ ಬಡಿದೆಬ್ಬಿಸಿದಂತೆ ತಾನಿದ್ದ ಅರೆಸಮಾಧಿ ಸ್ಥಿತಿಯಿಂದ ಧಿಗ್ಗನೆ ಮೇಲೆದ್ದು ಕಣ್ತೆರೆದ ಶ್ರೀನಾಥ... ಆಗಾಗಲೇ ಸಂಜೆಯ ಮುಸುಕು ಸರಿಯುತ್ತ ಇರುಳಿನ ಪರದೆ ನಿಧಾನವಾಗಿ ಜಾರಿಕೊಂಡು ಸುತ್ತಲು ಮಬ್ಬು ಆವರಿಸುತ್ತಿದ್ದ ಗಳಿಗೆ. ಇನ್ನೇನು ಪೂರ್ತಿ ಕತ್ತಲು ಕವಿದು ಬೆಳಕೆಲ್ಲ ಆ ಇರುಳಿನೊಡಲಲ್ಲಿ ಕರಗಿ ಹೋಯ್ತೆನ್ನುವ ಹೊತ್ತಿಗೆ ಸರಿಯಾಗಿ, ಕುಟಿಯ ಮತ್ತು ಹತ್ತಿರದ ಹಾದಿಯ ದೀಪಗಳು ಹೊತ್ತಿಕೊಂಡಾಗ, ತನ್ನೊಳಗು ಏನೊ ಪ್ರಕಾಶ ಬೆಳಗಿ ಒಳಗಿಳಿಯುತ್ತಿರುವಂತೆ, ಒಳಗಿನ ಕತ್ತಲನ್ನೆಲ್ಲ ನುಂಗಿ ಬೆಳಕಾಗಿಸುತ್ತಿರುವಂತೆ ಭಾಸವಾಗಿತ್ತು ಶ್ರೀನಾಥನಿಗೆ... ಆ ಅಂತರ್ಪ್ರಕಾಶದ ಪ್ರಸರಣದಲ್ಲಿ ಮೂಡಿದ ಏನೋ ಸಮಾಧಾನದ ನಿರಾಳ ಭಾವದಲ್ಲಿ, ಮಡಿಚಿದ್ದ ಕಾಲು ತೆರೆದು ಉದ್ದಕ್ಕೆ ಚಾಚಿಕೊಂಡು ಸಡಿಲ ಬಿಟ್ಟುಕೊಂಡು ಕುಳಿತುಕೊಂಡ ಶ್ರೀನಾಥ.. ಆ ಗಳಿಗೆಯಲ್ಲೂ ಪ್ರಕಟಾಲೋಚನೆಯಲ್ಲಿ ತೊಡಗಿದ್ದ ಬಾಹ್ಯಪ್ರಜ್ಞೆ ತಾನು ತಲುಪಿದ ಸ್ಥಿತಿಗೆ ಅಚ್ಚರಿಗೊಳ್ಳುವುದನ್ನಿನ್ನು ನಿಲ್ಲಿಸಿರಲಿಲ್ಲ. ಆರಂಭದಲ್ಲಿ, ನಿಜಕ್ಕೂ ತಾನು ಈ ಪರಿಹಾರ ಕಾಣುವ ಹಂತಕ್ಕೆ ತಲುಪುವೆನೆ ? ಎಂಬ ಗಾಢ ಅನುಮಾನದಲ್ಲಿ ತನ್ನ ಮನಮಥನ ಯಾನ ಆರಂಭಿಸಿದ್ದವನಿಗೇ ಅಚ್ಚರಿಯಾಗುವಂತೆ, ಏನೆಲ್ಲಾ ಸಂಕೀರ್ಣ ಲೆಕ್ಕಾಚಾರವನ್ನೆಲ್ಲ ದಾಟಿಸಿ ಈ ಹಂತಕ್ಕೆ ತಂದು ಕೂರಿಸಿಬಿಟ್ಟಿತ್ತು ಆ ಮಾನಸಿಕ ಚಿಂತನಾಪೂರ್ಣ ಜಿಜ್ಞಾಸೆ. ಅದರ ಫಲಿತವೇನೊ ಎಂಬಂತೆ ಮೈ ಮನಗಳೆಲ್ಲ ಪ್ರಪುಲ್ಲಿತವಾಗಿ, ಹತ್ತಿಯಂತೆ ಹಗುರಾದ ನವಿರು ಹೂವಿನ ಅನುಭೂತಿಯನ್ನನುಭವಿಸುತ್ತಿದ್ದರೂ, ಸತತ ಚಿಂತನೆಯಲ್ಲಿ ತೊಡಗಿಕೊಂಡಿದ್ದ ಅಂತಃಕರಣಗಳ ಸಮಷ್ಟಿ, ಆಯಾಸ ಆಲಸಿಕೆಯಿಂದಲ್ಲದಿದ್ದರೂ ತಾವು ಕಾಯುವ ಭೌತಿಕ ದೇಹದ ಸಮನ್ವಯದ ದೃಷ್ಟಿಯಿಂದ ಆಲೋಚಿಸಿ, ಜತೆಗೆ ಮುಂದಿನೆರಡು ದಿನದಲ್ಲಿ ಕಾದಿರುವ ದೈಹಿಕ ಶ್ರಮದಾನವನ್ನು ಪರಿಗಣಿಸುತ್ತ, ಬಲವಂತವಾಗಿಯಾದರು ವಿಶ್ರಾಂತಿ ಪಡೆಯಲು ಬಯಸಿದವೊ ಎಂಬಂತೆ, ಗೋಡೆಗೊರಗಿಕೊಂಡು ಕಾಲು ಚಾಚಿ ಕೂತಿದ್ದವನನ್ನೆ ಹಾಗೆ ಮೆಲುವಾಗಿ ಜಾರಿಸುತ್ತ, ಮಗ್ಗುಲಾಗುವ ಭಂಗಿಗೆ ದೂಕಿಬಿಟ್ಟಿದ್ದವು, ಅವನಿಗೇ ಅರಿವಾಗದ ಮಂಪರಿನ ಲಾಘವದಲ್ಲಿ. ಹಾಗೆ ಮಗ್ಗುಲಾದ ಶ್ರೀನಾಥ ಕಣ್ಣೆವೆಯಿಕ್ಕುವುದರಲ್ಲಿ ಯಾವುದೊ ವರ್ಣನಾತೀತ, ಅಲೌಕಿಕ, ಪ್ರಜ್ಞಾತೀತ ಆನಂದದ ಭಾವದಲ್ಲಿ ತನ್ನರಿವಿನ ಪರಿಧಿಯಿಂದಲೆ ಸರಿದು ಹೋಗುತ್ತ ಆಳವಾದ, ಗಾಢನಿದ್ರೆಯಲ್ಲಿ ಸಿಲುಕಿಕೊಂಡು ಬಿಟ್ಟಿದ್ದ -  ಯಾರೊ ಯಾವುದೊ ಮಾಯೆಯಿಂದ ಅವನನ್ನು ಸೆಳೆದೊಯ್ದ ಹಾಗೆ... ಆ ಜೊಂಪಿನಲ್ಲೂ ಅವನೆಂದು ಅನುಭವಿಸದಿದ್ದ ಅಭೂತಪೂರ್ವ ನಿರಾಳತೆ, ಇಹದೆಲ್ಲಾ ಕೃತಿಮಗಳನ್ನು ಅವನ ಮನಃಪಟಲದಿಂದ ಸಂಪೂರ್ಣವಾಗಿ ಕಿತ್ತುಹಾಕಿ, ಯಾವುದೆ ಚಿಂತೆಯಿಲ್ಲದ ಪ್ರಶಾಂತ ಭಾವದಲ್ಲಿ ದಿವ್ಯಾನಂದವನ್ನನುಭವಿಸುತ್ತಿರುವಂತಾಗಿಸಿ ಅವನನ್ನು ಅಲೌಕಿಕ ಸ್ವಪ್ನಲೋಕಕ್ಕೆ ದೂಡಿಬಿಟ್ಟಿತ್ತು. ಎಂದೂ ಕಾಣದ ವಿಹಂಗಮ ಸ್ವಪ್ನಲೋಕದಲ್ಲಿ ವಿಹರಿಸುತ್ತಲೆ ಗಾಢವಾದ ಸುಷುಪ್ತಿಯಲ್ಲಿ ಕರಗಿ ಹೋಗಿತ್ತು ಶ್ರೀನಾಥನ ಅಂತಃಕರಣಗಳ ಜತೆಗೂಡಿದ ಇಂದ್ರೀಯಗಳ ಸುಪ್ತ ಪ್ರಜ್ಞೆ. ಅಷ್ಟೊಂದು ಗಾಢವಾಗಿ, ಆಳವಾದ ರೀತಿಯಲ್ಲಿ ಹಿಂದೆಂದೂ ನಿದ್ರಿಸಿದ ಅನುಭವವಿರದಿದ್ದ ಶ್ರೀನಾಥ, ಎಲ್ಲಿ ಕಣ್ಣು ತೆರೆದರೆ ಆ ದಿವ್ಯಾನುಭೂತಿಯಿಂದ ವಂಚಿತನಾಗಿ ಐಹಿಕದ ಕೃತಕ ಮಾಯೆಯ ಬಲೆಗೆ ಮತ್ತೆ ಬೀಳಬೇಕಾದಿತೊ ಎಂದು ಭೀತಿಗೊಂಡಂತೆ, ಆ ವಿಶಿಷ್ಠ ಅನುಭೂತಿಯಲ್ಲಿ ಸಂಪೂರ್ಣ ತಲ್ಲೀನನಾಗಿ ತೇಲಿಕೊಂಡು ಹೋಗಿಬಿಟ್ಟಿದ್ದ, ಯಾವುದೊ ಕಾಣದ ಲೋಕಕ್ಕೆ...

ಹಾಗೆ ಅಭೂತಪೂರ್ವ ಅನುಭಾವದ ನಿದಿರೆಗಿಳಿದ ಶ್ರೀನಾಥನಿಗೆ ಮತ್ತೆ ಎಚ್ಚರವಾದದ್ದು ಬೆಳಗಿನ ಎಚ್ಚರಗೊಳಿಸುವ ಗಂಟೆಯ ಸದ್ದು ಕಿವಿಯ ಮೇಲೆ ಬಿದ್ದಾಗಲೆ..!

(ಇನ್ನೂ ಇದೆ) 
__________